Tag: ಸಾರ್ವಜನಿಕರು

  • ಮುತ್ತಿನ ಆಸೆಗೆ ಬುರ್ಕಾ ಧರಿಸಿ ನಡುಬೀದಿಯಲ್ಲೇ ಒದೆತಿಂದ!

    ಮುತ್ತಿನ ಆಸೆಗೆ ಬುರ್ಕಾ ಧರಿಸಿ ನಡುಬೀದಿಯಲ್ಲೇ ಒದೆತಿಂದ!

    ಚೆನ್ನೈ: ಪ್ರೇಯಸಿಯಿಂದ ಮುತ್ತು ಪಡೆಯಲು ರಸ್ತೆಗೆ ಬುರ್ಕಾ ಧರಿಸಿ ಬಂದಿದ್ದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಮಿಳುನಾಡಿನ ರಾಯ್ಪೆಟ್ಟಾದಲ್ಲಿ ನಡೆದಿದೆ.

    ಪಟ್ಟಬ್ರಾಮ್ ಪ್ರದೇಶದ ನಿವಾಸಿ ಶಕ್ತಿವೇಲ್ ಮುತ್ತಿನ ಆಸೆಗೆ ಒದೆ ತಿಂದಿದ್ದಾನೆ. ಹೌದು, ಶಕ್ತಿವೇಲ್ ಕಳೆದ ಆರು ತಿಂಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರಿಂದ ಪ್ರೇಮಿಗಳ ದಿನದಂದು ಪ್ರೇಯಸಿ ಬಳಿ ಯುವಕ ಕಿಸ್ ಕೊಡುವಂತೆ ಕೇಳಿದ್ದಾನೆ.

    ಈ ವೇಳೆ ಮುತ್ತು ಪಡೆಯಲು ಗೆಳತಿ ಬುರ್ಕಾ ಧರಿಸಿ ರಾಯ್ಪೆಟ್ಟಾದ ರಸ್ತೆಯಲ್ಲಿ ನಡೆದುಕೊಂಡು ಮರೀನಾ ಬೀಚ್ ಬಳಿ ಬಂದರೆ ಮಾತ್ರ ಮುತ್ತು ಕೊಡುತ್ತೇನೆ ಎಂದು ವಿಚಿತ್ರ ಷರತ್ತನ್ನು ವಿಧಿಸಿದ್ದಾಳೆ. ಮುತ್ತಿಗೋಸ್ಕರ ಯುವತಿಯ ಮಾತು ಒಪ್ಪಿದ ಯುವಕ ಮಂಗಳವಾರ ರಾತ್ರಿ ಬುರ್ಕಾ ಧರಿಸಿ ರಸ್ತೆಗಿಳಿದಿದ್ದಾನೆ.

    ಇನ್ನೇನು ಆತ ಯುವತಿ ಬಳಿ ತಲುಪಬೇಕು ಎನ್ನುವಷ್ಟರಲ್ಲಿ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಮರೀನಾ ಬೀಚ್ ಸಮೀಪದಲ್ಲಿರುವ ಐಸ್ ಹೌಸ್ ಬಳಿ ಯುವಕ ಬುರ್ಕಾ ಧರಿಸಿ ಬರುತ್ತಿದ್ದಾಗ ವ್ಯಕ್ತಿಯೊಬ್ಬ ಆತನನ್ನು ಗಮನಿಸಿದ್ದಾನೆ.

    ಯುವಕ ನಡೆಯುವ ಶೈಲಿ ನೋಡಿ ಅನುಮಾನ ಬಂದು ಆತನನ್ನೇ ಹಿಂಬಾಲಿಸಿದ್ದಾನೆ. ಬಳಿಕ ಯುವಕ ಹಾಕಿದ್ದ ಚಪ್ಪಲಿಯನ್ನು ಗಮನಿಸಿ ಬುರ್ಕಾ ಧರಿಸಿರುವುದು ಮಹಿಳೆ ಅಲ್ಲ ಎನ್ನುವುದು ಖಚಿತವಾಗಿದೆ.

    ನಂತರ ಸ್ಥಳದಲ್ಲಿದ್ದವರಿಗೆ ವಿಷಯ ತಿಳಿಸಿದ ಎಲ್ಲರು ಸೇರಿಕೊಂಡು ಯುವಕನನ್ನು ಕಳ್ಳನೆಂದು ಭಾವಿಸಿ ಹೊಡೆದಿದ್ದಾರೆ. ಯಾಕೆ ಬುರ್ಕಾ ಧರಿಸಿ ಹೀಗೆ ಓಡಾಡುತ್ತಿದ್ದೀಯಾ ಅಂತ ಪ್ರಶ್ನಿಸಿದ್ದಾರೆ. ಆದರೆ ಯಾವುದಕ್ಕೂ ಯುವಕ ಉತ್ತರ ನೀಡದೇ ಇದ್ದಾಗ ಸಿಕ್ಕಾಪಟ್ಟೆ ಹೊಡೆದು ಕೊನೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಬಳಿಕ ಪೊಲೀಸರು ಯುವಕನನ್ನು ವಿಚಾರಣೆ ನಡೆಸಿದಾಗ ಸತ್ಯಾಂಶವನ್ನು ಯುವಕ ಬಾಯ್ಬಿಟ್ಟಿದ್ದಾನೆ. ಸದ್ಯ ವಿಚಾರಣೆ ಬಳಿಕ ಪೊಲೀಸರು ಯುವಕನಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಪ್ಪಳದಲ್ಲಿ ಸಾರ್ವಜನಿಕರಿಂದಲೇ ಕೆರೆ ಹೊಳೆತ್ತುವ ಕಾಮಗಾರಿ!

    ಕೊಪ್ಪಳದಲ್ಲಿ ಸಾರ್ವಜನಿಕರಿಂದಲೇ ಕೆರೆ ಹೊಳೆತ್ತುವ ಕಾಮಗಾರಿ!

    – ಸಾಮಾಜಿಕ ಜಾಲತಾಣದಲ್ಲಿ ಸಾಕ್ಷ್ಯಚಿತ್ರ ವೈರಲ್

    ಕೊಪ್ಪಳ: ಸಾರ್ವಜನಿಕರಿಂದಲೇ ಕೆರೆಯ ಹೂಳೆತ್ತುವ ಕಾಮಗಾರಿಗೆ ಇಂದು ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಷಿಯಲ್ಲಿ ಚಾಲನೆ ನೀಡಲಿದ್ದಾರೆ.

    ಕುಷ್ಟಗಿ ತಾಲೂಕಿನ ನಿಡಶೇಷಿಯಲ್ಲಿರುವ ಕೆರೆಯನ್ನು ಸಾರ್ವಜನಿಕರು ಹಣ ಸಂಗ್ರಹಿಸಿ ಹೂಳು ತೆಗೆಯೋ ಕಾರ್ಯಕ್ಕೆ ಮುಂದಾಗಿದ್ದಾರೆ. ನಮ್ಮ ಕೆರೆ ನಮ್ಮ ಕುಷ್ಟಗಿ, `ಕೆರೆ ಉಳಿಸಿ ಜೀವ ಸಂಕುಲ ಉಳಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾನಮನಸ್ಕರು ಕೂಡಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅಷ್ಟೇ ಅಲ್ಲದೆ ಈ ಕುರಿತು ವನ್ಯಜೀವಿ ಛಾಯಾಗ್ರಾಹಕರಾಗಿರುವ ಸುಜಿತ್ ಶೆಟ್ಟರ್ ಅವರು ಡ್ರೋನ್ ಕ್ಯಾಮೆರಾ ಮೂಲಕ ಕೆರೆಯ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಈ ದೃಶ್ಯಗಳನ್ನು ಬಳಸಿಕೊಂಡು ಸಾಕ್ಷ್ಯ ಚಿತ್ರ ಕೂಡ ತಯಾರು ಮಾಡಲಾಗಿದೆ.

    ಸುಮಾರು 1.59 ನಿಮಿಷದ ಸಾಕ್ಷ್ಯಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಸಾಕ್ಷ್ಯಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ 45 ದಿನಗಳ ಕಾಲ ಕೊಪ್ಪಳದ ಗವಿ ಸಿದ್ದೇಶ್ವರ ಮಠ ಹೂಳೆತ್ತುವ ಜನರಿಗೆ ನಿರಂತರವಾಗಿ ದಾಸೋಹ ಕಲ್ಪಿಸಿದೆ. ಮಠದಿಂದ ನಿಡಶೇಷಿಯಲ್ಲಿ ದಾಸೋಹ ಕಲ್ಪಿಸಲಾಗಿದ್ದು, ಈ ಮೂಲಕ ಗವಿ ಮಠವೂ ಕೆರೆ ಹೂಳೆತ್ತುವ ಜನರೊಂದಿಗೆ ಕೈ ಜೋಡಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೈಕಲ್‍ನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿ- ರೊಚ್ಚಿಗೆದ್ದ ಸಾರ್ವಜನಿಕರಿಂದ ರಸ್ತೆ ತಡೆ

    ಸೈಕಲ್‍ನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿ- ರೊಚ್ಚಿಗೆದ್ದ ಸಾರ್ವಜನಿಕರಿಂದ ರಸ್ತೆ ತಡೆ

    ಮೈಸೂರು: ಸೈಕಲ್‍ನಲ್ಲಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಹೊರವಲಯದ ನಂಜನಗೂಡು ರಸ್ತೆಯ ಬಂಡೀಪಾಳ್ಯ ಬಳಿ ನಡೆದಿದೆ.

    ಪಿ. ಶ್ರೀರಾಮ್(16) ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿ. ಶ್ರೀರಾಮ್ ಮೈಸೂರಿನ ಲಕ್ಷ್ಮಿಪುರಂನ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇಂದ ಬೆಳಗ್ಗೆ ಶಾಲೆಗೆ ಸೈಕಲ್‍ನಲ್ಲಿ ಹೋಗುವಾಗ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತವಾದ ಪರಿಣಾಮ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಅಪಘಾತದಿಂದ ರೊಚ್ಚಿಗೆದ್ದ ಸಾರ್ವಜನಿಕರು ರಸ್ತೆ ತಡೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ಕೆಲ ಸಮಯದ ಕಾಲ ನಂಜನಗೂಡು ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ರಸ್ತೆ ತಡೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರ ಜೊತೆ ಕೂಡ ಸಾರ್ವಜನಿಕರು ವಾಗ್ವಾದ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುತ್ತೂರು ಜಾತ್ರೆಯಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಅವಾಂತರ- ಛೀಮಾರಿ ಹಾಕಿದ್ರು ಭಕ್ತರು

    ಸುತ್ತೂರು ಜಾತ್ರೆಯಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಪೇದೆ ಅವಾಂತರ- ಛೀಮಾರಿ ಹಾಕಿದ್ರು ಭಕ್ತರು

    ಮೈಸೂರು: ಜಾತ್ರೆ ನಡೆಯುತ್ತಿದ್ದ ವೇಳೆ ಪೊಲೀಸ್ ಪೇದೆಯೋರ್ವ ಕುಡಿದ ಮತ್ತಿನಲ್ಲಿ ದೌಲತ್ತು ತೋರಿಸಿ ಸಾರ್ವಜನಿಕರಿಂದ ಛೀಮಾರಿ ಹಾಕಿಸಿಕೊಂಡ ಘಟನೆ ಜಿಲ್ಲೆಯ ಸುತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಕೌವಲಂದೆ ಪೊಲೀಸ್ ಠಾಣೆಯ ಪೇದೆ ಮಹದೇವಸ್ವಾಮಿ ಇಂತಹ ದುರ್ವತನೆ ತೋರಿದ್ದಾರೆ. ಜಾತ್ರೆಯಲ್ಲಿ ಕುಡಿದು ಕರ್ತವ್ಯಕ್ಕೆ ಬಂದ ಪೇದೆ ಮಹದೇವಸ್ವಾಮಿ ಕ್ಯಾಂಟೀನ್‍ನಲ್ಲಿ ಊಟ ಕೇಳಿದ್ದಾರೆ. ಈ ವೇಳೆ ಊಟ ಖಾಲಿಯಾಗಿದೆ ಟೀ ಇದೆ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ಉತ್ತರಕ್ಕೆ ಕೋಪಗೊಂಡ ಪೇದೆ ಹೋಟೆಲ್‍ನಲ್ಲಿದ್ದ ಟೀ ಫ್ಲಾಸ್ಕ್ ಒಡೆದು ರೋಷಾವೇಷ ಪ್ರದರ್ಶಿಸಿದ್ದಾರೆ. ದೇವರ ಜಾತ್ರೆಗೆ ಬಂದ ಪೊಲೀಸರೇ ಈ ರೀತಿ ಬೇಜವಾಬ್ದಾರಿ ವರ್ತನೆ ಮೆರೆದರೆ ಹೇಗೆ ಎಂದು ಸ್ಥಳೀಯರು ಪೇದೆ ವಿರುದ್ಧ ಗರಂ ಆಗಿದ್ದಾರೆ.

    ನಂತರ ಕಾರಿನಲ್ಲಿ ಕುಳಿತ ಮಹದೇವಸ್ವಾಮಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡಿದ್ದಾರೆ. ಪೇದೆಯ ಕಾರು ಅಡ್ಡಗಟ್ಟಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೊನೆಗು ಕೈಮುಗಿದು ಕ್ಷಮೆಯಾಚಿಸಿದ ಬಳಿಕ ಪೇದೆ ಮಹದೇವಸ್ವಾಮಿಯನ್ನು ಜನರು ಅಲ್ಲಿಂದ ಹೋಗಲು ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ರಾಜಕಾರಣಿಗಳ ಮಕ್ಕಳ ಮದ್ವೆಗೆ ವೇದಿಕೆಯಾಗ್ತಿದೆ ಕೃಷಿ ವಿವಿ- ಸಾರ್ವಜನಿಕರು ಆಕ್ರೋಶ

    ರಾಜಕಾರಣಿಗಳ ಮಕ್ಕಳ ಮದ್ವೆಗೆ ವೇದಿಕೆಯಾಗ್ತಿದೆ ಕೃಷಿ ವಿವಿ- ಸಾರ್ವಜನಿಕರು ಆಕ್ರೋಶ

    ರಾಯಚೂರು: ಕೃಷಿ ಸಂಬಂಧಿ ಕಾರ್ಯಕ್ರಮಗಳು ನಡೆಯಬೇಕಾದ ವಿವಿ ಸ್ಥಳವನ್ನ ಖಾಸಗಿ ಸಮಾರಂಭಗಳಿಗೆ ಬಾಡಿಗೆ ನೀಡಿದ್ದು, ಎಂಎಲ್‍ಸಿ ಹಾಗೂ ಎಂಎಲ್‍ಎ ಮಕ್ಕಳ ಕಾರ್ಯಕ್ರಮಕ್ಕೆ ಕೃಷಿ ವಿವಿಯನ್ನ ಬಳಸಿಕೊಳ್ಳಲಾಗುತ್ತಿದೆ.

    ಜಿಲ್ಲೆಯಲ್ಲಿ ಈ ಬಾರಿ ಭೀಕರ ಬರಗಾಲ ಇರುವುದರಿಂದ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಈ ವರ್ಷ ಕೃಷಿ ಮೇಳದ ಆಯೋಜನೆಯನ್ನ ಕೈಬಿಟ್ಟಿದೆ. ಆದ್ದರಿಂದ ವಿವಿ ಆವರಣ ಸದ್ಯ ಮದುವೆ ಕಾರ್ಯಕ್ರಮ ಮಾಡುವ ವೇದಿಕೆಯಾಗಿದೆ. ವಿವಿ ಆವರಣದಲ್ಲಿ ದೊಡ್ಡದಾದ ಪೆಂಡಾಲ್, ವೇದಿಕೆ ಸಿದ್ಧಮಾಡಿ ಫೆಬ್ರವರಿ 1 ರಂದು ನಡೆಯಲಿರುವ ರಾಯಚೂರು ವಿಧಾನ ಪರಿಷತ್ ಸದಸ್ಯ ಬಸವರಾಜ್ ಪಾಟೀಲ್ ಇಟಗಿ ಪುತ್ರ ಸುಮನ್ ಹಾಗೂ ಶಹಾಪುರ ಶಾಸಕ ಶರಣಬಸಪ್ಪಾ ದರ್ಶನಾಪೂರ ಪುತ್ರಿ ಸೌಜನ್ಯ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ತಯಾರಿ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ, ಗೃಹ ಸಚಿವರು, ಮಾಜಿ ಸಿಎಂಗಳು ಸೇರಿ ನೂರಾರು ಜನ ಗಣ್ಯರು ಹಾಗೂ 20 ಸಾವಿರಕ್ಕೂ ಅಧಿಕ ಅತಿಥಿಗಳು ಬರುವ ನಿರೀಕ್ಷೆಯಿದೆ. ಆದ್ರೆ ವಿವಿ ದುರ್ಬಳಕೆಗೆ ಸಾರ್ವಜನಿಕರು ಹಾಗೂ ಕೃಷಿಕರಿಂದ ತೀವ್ರ ಆಕ್ರೋಶವ್ಯಕ್ತವಾಗಿದೆ.

    ಕೃಷಿ ಕಾರ್ಯಕ್ರಮಗಳು, ಕೃಷಿ ಚಟುವಟಿಕೆಗಳಿಗೆ ಮೀಸಲಾದ ರಾಯಚೂರು ವಿವಿ ಕ್ಯಾಂಪಸ್‍ನಲ್ಲಿ ಎಂಎಲ್‍ಸಿ ಹಾಗೂ ಎಂಎಲ್‍ಎ ಮಕ್ಕಳ ಮದುವೆ ನಡೆಯುತ್ತಿದೆ. ಈ ಕುರಿತು ಹೊಸದಾಗಿ ಬಂದಿರುವ ವಿವಿ ಕುಲಪತಿಗಳಿಗೆ ಕೇಳಿದರೇ ಈ ವಿಚಾರದ ಬಗ್ಗೆ ಮೊದಲೇ ಆಡಳಿತ ಮಂಡಳಿ ನಿರ್ಧಾರ ಮಾಡಿತ್ತು, ನನಗೇನು ಗೊತ್ತಿಲ್ಲ ಅಂತಿದ್ದಾರೆ. ಆದ್ರೆ ಸಾರ್ವಜನಿಕರು ಮಾತ್ರ ಕೃಷಿ ವಿವಿ ದುರ್ಬಳಕೆಯಾಗುತ್ತಿದೆ ಅಂತ ಕಿಡಿಕಾರಿದ್ದಾರೆ.

    ಈ ಕುರಿತು ಬಸವರಾಜ್ ಪಾಟೀಲ್ ಇಟಗಿ ಅವರನ್ನ ಪ್ರಶ್ನಿಸಿದರೆ, ವಿವಿ ಆವರಣದಲ್ಲಿ ಇದೇ ಮೊದಲ ಮದುವೆ ಸಮಾರಂಭವಲ್ಲ ಈ ಹಿಂದೆಯೂ ಅನೇಕ ಕಾರ್ಯಕ್ರಮ ನಡೆದಿವೆ. ನಾನು ಇದೇ ಕೃಷಿ ವಿವಿಯಲ್ಲಿ ಓದಿದ್ದೇನೆ, ಮೂರು ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ ಅಲ್ಲದೆ 1 ಲಕ್ಷ ರೂಪಾಯಿ ಬಾಡಿಗೆ ನೀಡಿ ಮದುವೆ ಕಾರ್ಯಕ್ರಮ ಮಾಡುತ್ತಿದ್ದೇನೆ ಅಂತ ಬಸವರಾಜ್ ಪಾಟೀಲ್ ಇಟಗಿ ಹೇಳಿದ್ದಾರೆ.

    ಈ ಹಿಂದೆ ಭದ್ರತಾ ದೃಷಿಯಿಂದ ರಾಹುಲ್ ಗಾಂಧಿ, ನರೇಂದ್ರ ಮೋದಿ ಕಾರ್ಯಕ್ರಮಗಳನ್ನೂ ಇದೇ ಸ್ಥಳದಲ್ಲಿ ಮಾಡಲಾಗಿತ್ತು. ಆದ್ರೆ ಈಗ ಸಂಪೂರ್ಣ ಖಾಸಗಿ ಕಾರ್ಯಕ್ರಮಕ್ಕೆ ಕೃಷಿ ವಿ.ವಿ. ಬಳಕೆಯಾಗುತ್ತಿರುವುದಕ್ಕೆ ಸ್ಥಳೀಯರು ಹಾಗೂ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

  • ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ ರಾಯಚೂರಿನ ಜನತೆ

    ಗಾಳಿಪಟ ಹಾರಿಸಿ ಸಂಕ್ರಾಂತಿ ಆಚರಿಸಿದ ರಾಯಚೂರಿನ ಜನತೆ

    ರಾಯಚೂರು: ಸಂಕ್ರಾಂತಿ ಹಬ್ಬವನ್ನ ರಾಯಚೂರಿನಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗಾಳಿಪಟ ಹಾರಿಸಿ ಜನ ಸಂಭ್ರಮಿಸಿದ್ದಾರೆ.

    ಸಂಕ್ರಾಂತಿ ಹಬ್ಬದ ವಿಶೇಷ ಖಾದ್ಯಗಳಾದ ಎಳ್ಳುಹಚ್ಚಿದ ಸಜ್ಜೆ ರೊಟ್ಟಿ, ಭರ್ತಾ, ಎಳ್ಳು ಹೋಳಿಗೆ ಶೇಂಗಾ ಹೋಳಿಗೆಯ ಊಟವನ್ನ ಉಣಬಡಿಸಲಾಯಿತು. ನಗರದ ರೋಟರಿ ಕ್ಲಬ್ ಹಾಗೂ ಜೆಸಿಐ ವತಿಯಿಂದ ಸಂಕ್ರಾಂತಿ ಹಿನ್ನೆಲೆಯಲ್ಲಿ ಗಾಳಿಪಟ ಸಂಭ್ರಮ ಹಾಗೂ ಊಟದ ವ್ಯವಸ್ಥೆ ಆಯೋಜಿಸಲಾಯಿತು. ಅಲ್ಲದೆ ಈ ಸಡಗರದಲ್ಲಿ ಭಾಗಿಯಾಗಿರುವ ಜನರು ಎಳ್ಳು ಬೆಲ್ಲವನ್ನ ಪರಸ್ಪರ ವಿನಿಮಯ ಮಾಡಿಕೊಂಡು ಸಂಕ್ರಾಂತಿ ಹಬ್ಬವನ್ನು ಸವಿದಿದ್ದಾರೆ.

    ಕ್ರೀಡಾಂಗಣದಲ್ಲಿ ಚಿಣ್ಣರು ಗಾಳಿಪಟವನ್ನು ಹಾರಿಸುತ್ತ ಖುಷಿ ಪಡುತ್ತಿದ್ದಾರೆ. ವಯಸ್ಸಿನ ಬೇಧವಿಲ್ಲದೆ ಚಿಕ್ಕಮಕ್ಕಳಿಂದ ಹಿಡಿದು ಎಲ್ಲರೂ ಬಣ್ಣಬಣ್ಣದ ಪತಂಗಗಳನ್ನ ಹಾರಿಸಿ ಹಬ್ಬ ಆಚರಿಸಿದರು.

    ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅನೇಕ ಜನರು ನದಿ ದಡಗಳಿಗೆ ತೆರಳಿ ಪುಣ್ಯ ಸ್ನಾನವನ್ನು ಮಾಡುತ್ತಿದ್ದಾರೆ. ಕೃಷ್ಣಾ ಹಾಗೂ ತುಂಗಾಭದ್ರ ನದಿಯಲ್ಲಿ ನೀರಿನ ಕೊರತೆಯ ಮಧ್ಯೆಯೂ ಜನರು ಪುಣ್ಯ ಸ್ನಾನ ಮಾಡಿ ಸಂಕ್ರಾಂತಿಯನ್ನ ಆಚರಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇವಸ್ಥಾನದಲ್ಲಿ ಮದ್ಯ ಹಂಚಿದ ಬಿಜೆಪಿ ನಾಯಕ!

    ದೇವಸ್ಥಾನದಲ್ಲಿ ಮದ್ಯ ಹಂಚಿದ ಬಿಜೆಪಿ ನಾಯಕ!

    ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರ ದೇವಸ್ಥಾನದಲ್ಲಿ ಜನರಿಗೆ ಊಟದ ಜೊತೆ ಮದ್ಯ ಹಂಚಿ ವಿವಾಧದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ.

    ಭಾನುವಾರದಂದು ಬಿಜೆಪಿ ನಾಯಕ ನರೇಶ್ ಅವರ ಪುತ್ರ ನಿತೀನ್, ಪಾಸಿ ಸಮುದಾಯದವರಿಗೆ ಸಮ್ಮೇಳನವನ್ನು ಹಾರ್ಡೊಯ್‍ನ ಶ್ರವಣ ದೇವಿ ದೇವಸ್ಥಾನದಲ್ಲಿ ಆಯೋಜಿಸಿದ್ದರು. ಈ ವೇಳೆ ಸಮ್ಮೇಳನಕ್ಕೆ ಬಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಊಟದ ಜೊತೆ 200 ಎಂಎಲ್ ಮದ್ಯದ ಬಾಟಲಿಯನ್ನು ಪ್ಯಾಕ್ ಮಾಡಿ ವಿತರಿಸಲಾಗಿತ್ತು. ಸಮ್ಮೇಳನಕ್ಕೆ ಬಂದಿದ್ದ ಮಕ್ಕಳಿಗೂ ಕೂಡ ಅದೇ ಊಟದ ಪ್ಯಾಕ್‍ಗಳನ್ನು ನೀಡಲಾಗಿತ್ತು. ಈ ವೇಳೆ ಸ್ಥಳಿಯರೊಬ್ಬರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಹಾಗೂ ಜನರು ನರೇಶ್ ಅಗರ್ವಾಲ್ ಹಾಗೂ ಅವರ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಹಾರ್ಡೊಯ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನರೇಶ್ ಅಗರ್ವಾಲ್ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು, ಜನರ ಬೆಂಬಲ ಪಡೆಯಲು ಬಿಜೆಪಿ ನಾಯಕ ಈ ರೀತಿ ಮದ್ಯವನ್ನು ಹಂಚಿದ್ದಕ್ಕೆ ಭಾರೀ ಆಕ್ರೋಶ ಕೇಳಿ ಬಂದಿದೆ.

    ಈ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ಕೂಡ ನರೇಶ್ ಅಗರ್ವಾಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾರ್ಡೊಯ್ ಕ್ರೇತ್ರದಿಂದ ಗೆದ್ದ ಬಿಜೆಪಿ ಎಂಪಿ ಅಂಶುಲ್ ವರ್ಮಾ ಪ್ರತಿಕ್ರಿಯಿಸಿ, ಉನ್ನತ ಸ್ಥಾನದಲ್ಲಿರುವ ನಾಯಕನಾಗಿ ನರೇಶ್ ಅವರು ಈ ರೀತಿ ತಪ್ಪು ಕೆಲಸ ಮಾಡಿದ್ದಾರೆ. ಈ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡುತ್ತೇವೆ. ಇತ್ತಿಚಿಗಷ್ಟೆ ನರೇಶ್ ಅವರು ಬಿಜೆಪಿಗೆ ಸೇರಿದ್ದರು. ಈಗ ಈ ರೀತಿ ಕೆಲಸ ಮಾಡಿ ಪಕ್ಷದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಓದುವ ಮಕ್ಕಳ ಕೈಗೆ ಪುಸ್ತಕ-ಪೆನ್ನು ನೀಡುವ ಬದಲು ಮದ್ಯವನ್ನು ನೀಡಿದ್ದಾರೆ. ಇದನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ತಂದೆ ಮಗ ಇಬ್ಬರ ವಿರುದ್ಧವು ಪ್ರತಿಭಟನೆ ಮಾಡುತ್ತೇವೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಂ.ಬಿ ಪಾಟೀಲ್ ಸರಳತೆಗೆ ಸಾರ್ವಜನಿಕರಿಂದ ಬಹುಪರಾಕ್!

    ಎಂ.ಬಿ ಪಾಟೀಲ್ ಸರಳತೆಗೆ ಸಾರ್ವಜನಿಕರಿಂದ ಬಹುಪರಾಕ್!

    ವಿಜಯಪುರ: ತಾವು ಓಡಾಡೋ ಮಾರ್ಗದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ, ನಾನು ಸಾರ್ವಜನಿಕರಂತೆ ಟ್ರಾಫಿಕ್ ನಿಯಮ ಪಾಲಿಸುತ್ತೇನೆ ಎನ್ನುವ ಮೂಲಕ ನೂತನ ಗೃಹ ಸಚಿವ ಎಂ.ಬಿ.ಪಾಟೀಲ್ ಸರಳತೆಗೆ ಸಾಕ್ಷಿಯಾಗಿದ್ದಾರೆ.

    ದಿನ ನಿತ್ಯ ನಾನು ಸಂಚರಿಸುವ ಮಾರ್ಗದಲ್ಲಿ ಝೀರೊ ಟ್ರಾಫಿಕ್ ವ್ಯವಸ್ಥೆ ಬೇಡ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಇದು ನನಗೆ ಇಷ್ಟವಿಲ್ಲ. ಸಾರ್ವಜನಿಕರಂತೆ ನಾನು ಕೂಡ ಟ್ರಾಫಿಕ್ ನಿಯಮ ಪಾಲಿಸುತ್ತೇನೆ ಎಂದಿದ್ದಾರೆ. ಹಾಗೆಯೇ ತಮ್ಮ ವಾಸ್ತವ್ಯದ ಸ್ಥಳದಲ್ಲಿ ಮತ್ತು ಕಾರ್ಯಕ್ರಮಗಳ ಸ್ಥಳಗಳಲ್ಲಿ ರಕ್ಷಣೆಗಾಗಿ ಅನವಶ್ಯಕ ಸಿಬ್ಬಂದಿಯನ್ನು ನಿಯೋಜನೆ ಮಾಡುವುದು ಬೇಡ ಎಂದು ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಟ್ರಾಫಿಕ್ ಜಾಮ್ – ಸಿದ್ದರಾಮಯ್ಯ ನಡೆಗೆ ಜನರ ಮೆಚ್ಚುಗೆ

    ಸಚಿವರ ಸೂಚನೆ ಮೆರೆಗೆ ಗೃಹ ಇಲಾಖೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಕಮಲ್ ಪಂತ್ ಎಲ್ಲಾ ಜಿಲ್ಲೆಯ ಎಸ್ಪಿಗಳಿಗೆ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಯೋಚಿಸಿ ಈ ನಿಲುವನ್ನು ತೆಗೆದುಕೊಂಡ ಎಂ.ಬಿ ಪಾಟೀಲ್ ಅವರ ಸರಳತೆಗೆ ಜನರು ಬಹುಪರಾಕ್ ಅಂತಿದ್ದಾರೆ. ಇದನ್ನೂ ಓದಿ: ಇರುವ ಅವಕಾಶ ಬಳಸಿಕೊಳ್ತಿದ್ದೇನೆ, ನಿಮಗೆ ಹೊಟ್ಟೆ ಉರಿ: ಝಿರೋ ಟ್ರಾಫಿಕ್‍ಗೆ ಡಿಸಿಎಂ ಸಮರ್ಥನೆ

    ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಚಿವರು ತೆರಳುವಾಗ ಪೊಲೀಸರು ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು. ಇದನ್ನು ಗಮನಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಎಂಬಿಪಿ, ಯಾಕೆ ರಸ್ತೆ ಖಾಲಿ ಬಿಡಲಾಗಿದೆ? ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತದೆ. ಇಷ್ಟು ಸೂಕ್ಷ್ಮ ಪ್ರಜ್ಞೆಯೂ ಇಲ್ಲದಿದ್ದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೋಗಿಗಳ ಸಂಬಂಧಿಗಳೇ ತಳ್ಳಬೇಕು – ಅಥಣಿ ಆಸ್ಪತ್ರೆಯಲ್ಲಿದೆ ಡಕೋಟಾ ಅಂಬುಲೆನ್ಸ್!

    ರೋಗಿಗಳ ಸಂಬಂಧಿಗಳೇ ತಳ್ಳಬೇಕು – ಅಥಣಿ ಆಸ್ಪತ್ರೆಯಲ್ಲಿದೆ ಡಕೋಟಾ ಅಂಬುಲೆನ್ಸ್!

    ಬೆಳಗಾವಿ(ಚಿಕ್ಕೋಡಿ): ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ಡಕೋಟಾ ಅಂಬುಲೆನ್ಸ್ ಇದ್ದು, ಪ್ರತಿದಿನವೂ ತಳ್ಳಿ ಚಾಲನೆ ಮಾಡಬೇಕಾದ ದುಸ್ಥಿತಿಗೆ ತಲುಪಿದೆ.

    ಹೌದು, ಅಥಣಿ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರತಿ ನಿತ್ಯ 108 ಅಂಬುಲೆನ್ಸ್ ಗಳನ್ನು ತಳ್ಳುವ ಮೂಲಕವೇ ಚಾಲನೆ ಮಾಡುತ್ತಿದ್ದಾರೆ. ಅಂಬುಲೆನ್ಸ್ ಗಳ ವ್ಯವಸ್ಥೆ ಸರಿಯಾಗಿಲ್ಲ. ಆದರೂ ಕೂಡ ಆಸ್ಪತ್ರೆಯವರು ಈ ಕುರಿತು ಕ್ರಮ ತೆಗೆದುಕೊಳ್ಳದೇ, ಅಂಬುಲೆನ್ಸ್ ಗಳನ್ನು ರಿಪೇರಿಯೂ ಮಾಡಿಸದೇ ಹಾಗೆಯೇ ಬಳಕೆ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಈ ಆಸ್ಪತ್ರೆಗೆ ಬರುವವರು ಅವ್ಯವಸ್ಥೆಯಲ್ಲಿರುವ ಅಂಬುಲೆನ್ಸ್ ನೋಡಿ ದಂಗಾಗಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಅಂಬುಲೆನ್ಸ್ ಸ್ಟಾರ್ಟ್ ಆಗದೇ ಇದ್ದಾಗ ರೋಗಿಗಳು ಹೈರಾಣಾಗುತ್ತಿದ್ದಾರೆ. ಅಷ್ಟೇ ಅಲ್ಲದೇ ರೋಗಿಯನ್ನು ರವಾನಿಸುವ ವೇಳೆ ಅವರ ಸಂಬಂಧಿಗಳೇ ಅಂಬುಲೆನ್ಸ್ ತಳ್ಳಬೇಕಾದ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.

    ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಂತ ಹಣದಿಂದ ಜನರಿಗಾಗಿ ಕೊಳವೆಬಾವಿ ಕೊರೆಸಿದ ನಗರಸಭಾ ಸದಸ್ಯೆ

    ಸ್ವಂತ ಹಣದಿಂದ ಜನರಿಗಾಗಿ ಕೊಳವೆಬಾವಿ ಕೊರೆಸಿದ ನಗರಸಭಾ ಸದಸ್ಯೆ

    ಚಿಕ್ಕಬಳ್ಳಾಪುರ: ಬರದ ನಾಡು ಅಂತಲೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಗರಸಭಾ ಸದಸ್ಯೆ ಭಾರತಿ ಅನಂದ್ ಅವರು ಸಾರ್ವಜನಿಕರಿಗೋಸ್ಕರ ತಮ್ಮ ಸ್ವಂತ ಹಣದಿಂದ ಕೊಳವೆ ಬಾವಿಯನ್ನು ಕೊರೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಬಯಲುಸೀಮೆ ಆಗುರುವುದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಆದರಿಂದ ಸರ್ಕಾರ ಹಲವು ಕೊಳವೆಬಾವಿಯನ್ನು ತೋಡಿಸಿದರು ಸ್ಪಲ್ಪ ಮಟ್ಟಿನಲ್ಲಿ ಮಾತ್ರ ನೀರು ಸಿಗುತ್ತಿತ್ತು. ಕೆಲವೆಡೆ ಸ್ವಲ್ಪ ನೀರು ಕೂಡ ಸಿಗದೇ ಇರೋದು ಇದೆ. ಸರ್ಕಾರದಿಂದ 1000-1200 ಅಡಿ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅಪರೂಪ. ಆದ್ರೆ ಸಾರ್ವಜನಿಕರಿಗಾಗಿ ಭಾರತಿ ಅನಂದ್ ಹಾಗೂ ಅವರ ಕುಟುಂಬಸ್ಥರು ಕೊರಸಿರುವ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ ನೀರು ಸಿಕ್ಕಿದೆ.

    ಜಿಲ್ಲೆಯ 12 ನೇ ವಾರ್ಡಿನ ನಗರಸಭಾ ಸದಸ್ಯೆ ಭಾರತಿ ಅನಂದ್ ಹಾಗೂ ಕುಟುಂಬಸ್ಥರು ತಮ್ಮ ಸ್ವಂತ ಹಣದಿಂದ ಕೊರೆಸಿದ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ 4 ಇಂಚು ನೀರು ಸಿಕ್ಕಿದೆ. ಚಿಕ್ಕಬಳ್ಳಾಪುರ ನಗರದ ಪ್ರಮುಖ ರುದ್ರಭೂಮಿಯಾಗಿರುವ ನಕ್ಕಲಕುಂಟೆ ಸ್ಮಶಾನದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ವಿಪರ್ಯಾಸ ಅಂದ್ರೆ ನಗರದ ಹಲವೆಡೆ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅನುಮಾನ. ಆದ್ರೆ ಸ್ಮಶಾನದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಅಂತ ಕೊರೆಸಿದ ಕೊಳವೆಬಾವಿಯಲ್ಲಿ ನೀರು ಸಿಕ್ಕಿರೋದು ಒಂದು ಕಡೆ ಆಶ್ಚರ್ಯವಾದರು ಎಲ್ಲರಿಗೂ ಸಂತಸ ತಂದಿದೆ.

    ಅಂತ್ಯ ಸಂಸ್ಕಾರಕ್ಕೆ ಅಂತ ಸ್ಮಶಾನಕ್ಕೆ ಬರುವವರು ನೀರಿಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು. ಇದನ್ನ ಮನಗಂಡ ನಗರಸಭಾ ಸದಸ್ಯೆ ಹಾಗೂ ಕುಟುಂಬಸ್ಥರು ಕೊಳವೆಬಾವಿ ಕೊರೆಸಿ ಸಾರ್ವಜನಿಕರಿಗೆ ಸಹಾಯ ಮಾಡಿದ್ದಾರೆ. ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಜನರಿಗೆ ಸಹಾಯ ಮಾಡಿರುವ ಭಾರತಿ ಆನಂದ್ ಹಾಗೂ ಅವರ ಕುಟುಂಬಸ್ಥರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv