ಬೆಂಗಳೂರು: ಪ್ರೇಕ್ಷಕರಲ್ಲೊಂದು ತುಂಬು ಭರವಸೆ ತುಂಬುತ್ತಲೇ ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ಚಿತ್ರ ಸಾರ್ವಜನಿಕರಲ್ಲಿ ವಿನಂತಿ. ಈ ಚಿತ್ರವೀಗ ಬಿಡುಗಡೆಯಾಗಿ ವಾರಗಳು ಕಳೆಯುತ್ತಾ ಬಂದಿವೆ. ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿರೋ ಸಾರ್ವಜನಿಕರಲ್ಲಿ ವಿನಂತಿ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದೆ. ಇದೀಗ ಈ ಚಿತ್ರವನ್ನು ವೀಕ್ಷಿಸಲು ಲೂಸ್ ಮಾದ ಯೋಗಿ ಉತ್ಸಾಹದಿಂದಲೇ ತಯಾರಾಗಿದ್ದಾರೆ.
ಲೂಸ್ ಮಾದ ಯೋಗಿ ಒಂಬತ್ತನೇ ತಾರೀಕು ಅಂದರೆ ನಾಳೆ ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ಬೆಂಗಳೂರಿನ ಮಲ್ಲೇಶ್ವರ ಸವಿತ ಚಿತ್ರಮಂದಿರದಲ್ಲಿ ವೀಕ್ಷಿಸಲಿದ್ದಾರೆ. ಇಂದೇ ನೀವು ಟಿಕೆಟ್ ಬುಕ್ ಮಾಡಿದರೆ ನಾಳೆ ಯೋಗಿಯೊಂದಿಗೇ ಕೂತು ಚಿತ್ರ ನೋಡುವ ಯೋಗವೊಂದು ನಿಮ್ಮದಾಗುತ್ತೆ. ಯೋಗಿ ಹೊಸಾ ಪ್ರಯತ್ನಗಳತ್ತ ಸದಾ ಕಣ್ಣು ನೆಟ್ಟಿರುವವರು. ಒಂದು ಸಿನಿಮಾ ಟಾಕ್ ಕ್ರಿಯೇಟ್ ಮಾಡಿದರೆ ಅದೆಷ್ಟೇ ಬ್ಯುಸಿಯಾಗಿದ್ದರೂ ವೀಕ್ಷಿಸಿ ಉತ್ತೇಜನ ನೀಡುತ್ತಾರೆ. ಅದೇ ಕಾರಣದಿಂದಲೇ ಅವರು ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ವೀಕ್ಷಿಸಲು ತಯಾರಾಗಿದ್ದಾರೆ.
ಬಿಡುಗಡೆಯಾದಂದಿನಿಂದಲೇ ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಇದರಲ್ಲಿರೋ ಮಹತ್ವದ ಸಂದೇಶ ಮತ್ತು ಕಥೆ ಹೇಳಿರೋ ನವೀನ ಶೈಲಿಗೆ ಪ್ರೇಕ್ಷಕರು ಮಾರು ಹೋಗಿದ್ದಾರೆ. ಇಂಥಾ ಸದಾಭಿಪ್ರಾಯಗಳೇ ವ್ಯಾಪಕವಾಗಿ ಹರಡಿಕೊಂಡು ಸಾರ್ವಜನಿಕರಲ್ಲಿ ವಿನಂತಿ ಗೆಲುವಿನತ್ತ ಮುನ್ನಡೆಯುತ್ತಿದೆ. ಇದು ಖಂಡಿತಾ ಅಪರೂಪದ ಅನುಭವವೊಂದನ್ನು ನಿಮಗೆ ನೀಡುತ್ತೆ. ಈ ಸಿನಿಮಾವನ್ನು ಯೋಗಿಯೊಂದಿಗೆ ಕೂತು ನೋಡೋ ಯೋಗವನ್ನು ನಿಮ್ಮದಾಗಿಸಿಕೊಳ್ಳಿ.
ಬೆಂಗಳೂರು: ವಿಭಿನ್ನವಾದ ಕ್ರೈಂ ಥ್ರಿಲ್ಲರ್ ಕಥೆಯ ಸುಳಿವು ಕೊಡುತ್ತಲೇ ಪ್ರೇಕ್ಷಕರನ್ನು ಕಾಯುವಂತೆ ಮಾಡಿದ್ದ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ತೆರೆ ಕಂಡಿದೆ. ಒಂದು ಕೊಲೆ ಮತ್ತು ಅದರ ಸುತ್ತ ಬಿಚ್ಚಿಕೊಳ್ಳೋ ರಂಗು ರಂಗಾದ ಕಥನಗಳು ಮತ್ತು ಅದೆಲ್ಲದರ ತಾರ್ಕಿಕ ಅಂತ್ಯವಾಗುವಲ್ಲಿ ಅಮೂಲ್ಯವಾದೊಂದು ಸಂದೇಶ. ಇವಿಷ್ಟು ಎಲಿಮೆಂಟುಗಳೊಂದಿಗೆ ಮಾಮೂಲಿ ಚಿತ್ರಗಳಿಗಿಂತಲೂ ಒಂಚೂರು ವಿಭಿನ್ನವಾಗಿಯೇ ಪ್ರೇಕ್ಷಕರನ್ನು ತಾಕುವಲ್ಲಿ ಸಾರ್ವಜನಿಕರಲ್ಲಿ ವಿನಂತಿ ಯಶ ಕಂಡಿದೆ.
ಇದು ಕೃಪಾ ಸಾಗರ್ ನಿರ್ದೇಶನ ಮಾಡಿರುವ ಚೊಚ್ಚಲ ಚಿತ್ರ. ಈ ಮೊದಲ ಹೆಜ್ಜೆಯಲ್ಲಿಯೇ ಅವರು ಸಂಕೀರ್ಣವಾದ ಕಥೆಯೊಂದನ್ನು ಆರಿಸಿಕೊಂಡಿದ್ದಾರೆ. ಇಲ್ಲಿ ಹಲವಾರು ಘಟನಾವಳಿಗಳ ಗುಚ್ಛವಿದೆ. ಹಳ್ಳಿ ಘಮಲಿನ ಸನ್ನಿವೇಶಗಳಿವೆ. ಚೂರೇ ಚೂರು ಎಡವಟ್ಟಾದರೂ ಸೂತ್ರ ಸಂಬಂಧ ಕಡಿದು ಹೋಗುವಂಥಾ, ಎಚ್ಚರ ತಪ್ಪಿದರೂ ಸಿಕ್ಕಾಗಿ ಬಿಡುವಂಥಾ ಕಥೆಯನ್ನು ಕೃಪಾ ಸಾಗರ್ ಇಲ್ಲಿ ಲೀಲಾಜಾಲವಾಗಿಯೇ ನಿರೂಪಣೆ ಮಾಡಿದ್ದಾರೆ. ಈ ಕಾರಣದಿಂದಲೇ ಸಾರ್ವಜನಿಕರಲ್ಲಿ ವಿನಂತಿ ಹೊಸ ಅಲೆಯ ಚಿತ್ರವಾಗಿ ತಾನೇ ತಾನಾಗಿ ದಾಖಲಾಗುವಷ್ಟು ಪರಿಣಾಮಕಾರಿಯಾಗಿಯೂ ಮೂಡಿ ಬಂದಿದೆ.
ಒಂದು ಹಳ್ಳಿ. ಅದರಲ್ಲಿ ಪ್ರತೀ ಹಳ್ಳಿಗಳಲ್ಲಿರುವಂಥಾದ್ದೇ ಒಂದು ಹುಡುಗರ ಗುಂಪು. ಅದರಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸವಿದೆಯೋ ಇಲ್ಲವೋ. ಆದರೆ ಅವರೆಲ್ಲರಿಗೂ ಒಂದೊಂದು ಲವ್ವಿರುತ್ತೆ. ಅಂಥಾ ಲವ್ವಿನ ಹಿನ್ನೆಲೆಯೊಂದಿಗೇ ತೆರೆದುಕೊಳ್ಳುವ ಕಥೆಯನ್ನು ನಿರ್ದೇಶಕರು ಜಾಣ್ಮೆಯಿಂದಲೇ ಕ್ರೈಂ ಥ್ರಿಲ್ಲರ್ ಟ್ರ್ಯಾಕಿನತ್ತ ಹೊರಳಿಸಿದ್ದಾರೆ. ಈ ಹುಡುಗರ ಗುಂಪಿನ ಪರಮ ಸೋಮಾರಿ ಆಸಾಮಿಗೆ ಹೇಗೋ ಹುಡುಗಿಯೊಬ್ಬಳು ಸಿಕ್ಕು ಮದುವೆಯೂ ಆಗುತ್ತೆ. ಆದರೆ ಈತನ ವರ್ತನೆಯಿಂದ ರೇಜಿಗೆ ಹುಟ್ಟಿಸಿಕೊಳ್ಳೋ ಆಕೆ ಅಸಮಾಧಾನವನ್ನು ಧರಿಸಿಕೊಂಡೇ ಬದುಕುತ್ತಿರುತ್ತಾಳೆ. ಈ ನಡುವೆ ಅದೇ ಊರ ತೋಟದಲ್ಲೊಂದು ಕೊಲೆ ನಡೆಯುತ್ತದೆ. ಆ ಕೊಲೆ ಕೇಸಲ್ಲಿ ಈ ಸೋಮಾರಿ ಆಸಾಮಿಯನ್ನು ಪೊಲೀಸರು ಎತ್ತಾಕಿಕೊಂಡು ಹೋಗಿ ಟ್ರೀಟ್‍ಮೆಂಟು ಕೊಡುತ್ತಾರೆ.
ಅಸಲಿಗೆ ಆ ಕೊಲೆಗೂ ಈ ಸೋಮಾರಿಗೂ ಸಂಬಂಧವಿರೋದಿಲ್ಲ. ಅಲ್ಲಿಂದಾಚೆಗೆ ಆ ಕೊಲೆಗೆ ಕಾರಣವೇನೆಂಬುದನ್ನು ಪೊಲೀಸರು ಬೆಂಬೀಳುತ್ತಾರೆ. ಆ ಪೊಲೀಸರ ಹುಡುಕಾಟದೊಂದಿಗೇ ಒಟ್ಟಾರೆ ಕಥೆ ಪ್ರತೀ ಕ್ಷಣವೂ ಕಾತರದಿಂದ ಕಾಯುವಂತೆ ಚಲಿಸುತ್ತದೆ. ಹಾಗಾದರೆ ಆ ಕೊಲೆಗೆ ಕಾರಣವೇನು? ಅದಕ್ಕೂ ಅಂಡಲೆಯೋ ಊರ ಹುಡುಗರಿಗೂ ಸಂಬಂಧವಿರುತ್ತಾ ಎಂಬ ಕುತೂಹಲಕ್ಕೆ ಮಜವಾದ ಉತ್ತರವೇ ಕಾದಿದೆ. ಈ ಮೂಲಕವೇ ನಿರ್ದೇಶಕರಾಗಿ ಕೃಪಾ ಸಾಗರ್ ಕೂಡಾ ಭರವಸೆ ಮೂಡಿಸುವಂಥಾ ಚಿತ್ರವನ್ನೇ ಕಟ್ಟಿ ಕೊಟ್ಟಿದ್ದಾರೆ.
ನಾಯಕನಾಗಿ ಮದನ್ ರಾಜ್ ರಂಗಭೂಮಿಯ ಕಸುವನ್ನೆಲ್ಲ ಒಗ್ಗೂಡಿಸಿಕೊಂಡು ನಟಿಸಿದ್ದಾರೆ. ನಾಯಕಿ ಅಮೃತಾ ಕೂಡಾ ಅಷ್ಟೇ ಚೆನ್ನಾಗಿ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ. ರಮೇಶ್ ಪಂಡಿತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಎಂದಿನಂತೆ ಚೆಂದಗೆ ನಟಿಸಿದ್ದಾರೆ. ಯಾವ ಪಾತ್ರವೂ ಇಲ್ಲಿ ಸುಮ್ಮನೆ ತುರುಕಿದಂತಿಲ್ಲ. ಪ್ರತಿಯೊಂದು ಪಾತ್ರಗಳೂ ಚಿತ್ರದ ಕಥೆಗೆ ಟ್ವಿಸ್ಟು ನೀಡುತ್ತಾ ವೇಗ ಹೆಚ್ಚಿಸುವಂತಿವೆ. ಅನಿಲ್ ಪಿಜೆ ಹಿನ್ನೆಲೆ ಸಂಗೀತ ಮತ್ತು ಅನಿಲ್ ಕುಮಾರ್ ಕೆ ಅವರ ಛಾಯಾಗ್ರಹಣ ಇಡೀ ಚಿತ್ರವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಿವೆ.
ಕೃಪಾ ಸಾಗರ್ ನಿರ್ದೇಶನದ ‘ಸಾರ್ವಜನಿಕರಲ್ಲಿ ವಿನಂತಿ’ ಚಿತ್ರ ಟೀಸರ್ ಮೂಲಕವೇ ಸಂಚಲನ ಸೃಷ್ಟಿಸಿತ್ತು. ಈ ಕಾರಣದಿಂದಲೇ ಎಲ್ಲ ವರ್ಗದ ಪ್ರೇಕ್ಷಕರೂ ಈ ಸಿನಿಮಾದ ಮೇಲೆ ಕುತೂಹಲದ ಕಣ್ಣಿಟ್ಟಿರುವ ಈ ಹೊತ್ತಿನಲ್ಲಿ, ಥೇಟರಿಗೆ ಆಗಮಿಸಲು ದಿನಗಳಷ್ಟೇ ಬಾಕಿ ಇರುವಾಗ ಟ್ರೈಲರ್ ಲಾಂಚ್ ಮಾಡಲಾಗಿದೆ.
ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿ ನಟಿಸಿರೋ ಈ ಚಿತ್ರ ಕ್ರೈಂ ಥ್ರಿಲ್ಲರ್ ಜಾನರಿನ ಪ್ರಯೋಗಾತ್ಮಕ ಚಿತ್ರ ಎಂಬುದು ಈ ಹಿಂದೆಯೇ ಬಯಲಾಗಿತ್ತು. ಆದರೆ ಅದರ ನಿಜವಾದ ರೂಪುರೇಷೆ ಏನಿರಬಹುದೆಂಬುದರ ಅಂದಾಜು ಈ ಟ್ರೈಲರ್ ಮೂಲಕ ಅನಾವರಣಗೊಂಡಿದೆ. ಚಿತ್ರ ವಿಚಿತ್ರ ಅಪರಾಧ ಪ್ರಕರಣಗಳು, ವಿಕ್ಷಿಪ್ತ ಆಸಾಮಿಗಳು, ಒಂದು ಕೊಲೆ ಮತ್ತು ಪ್ರೀತಿ… ಇಷ್ಟನ್ನಿಟ್ಟುಕೊಂಡು ನಿರ್ದೇಶಕರು ಕಮಾಲ್ ಸೃಷ್ಟಿಸಲು ಹೊರಟಿರೋ ಸ್ಪಷ್ಟ ಸೂಚನೆಯನ್ನು ಈ ಟ್ರೈಲರ್ ರವಾನಿಸಿದೆ.
ಸಾಮಾನ್ಯವಾಗಿ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಪ್ರಕಟಣೆಗಳನ್ನು ಹೊರಡಿಸುವಾಗ ಪೊಲೀಸ್ ಇಲಾಖೆ ಹೆಚ್ಚಿನದಾಗಿ ಸಾರ್ವಜನಿಕರಲ್ಲಿ ವಿನಂತಿ ಎಂಬ ಸ್ಲೋಗನ್ ಬಳಸುತ್ತಾ ಬಂದಿದೆ. ಈ ಚಿತ್ರವನ್ನು ಪೊಲೀಸರಿಗೇ ಅರ್ಪಿಸಿ ಚಿತ್ರತಂಡ ಗಮನ ಸೆಳೆದಿತ್ತು. ಇದೀಗ ಹೊರ ಬಂದಿರೋ ಟ್ರೈಲರ್ ಒಟ್ಟಾರೆ ಚಿತ್ರದಲ್ಲಿ ಪೊಲೀಸರದ್ದೆಷ್ಟು ಮಹತ್ವದ ಪಾತ್ರವಿದೆ ಎಂಬುದರ ಸೂಚನೆಯನ್ನೂ ನೀಡಿದೆ.
ಒಟ್ಟಾರೆಯಾಗಿ ಈ ಹಿಂದೆ ಬಿಡುಗಡೆಯಾದ ಟೀಸರ್ ಮೂಲಕ ಸಾರ್ವಜನಿಕರಲ್ಲಿ ವಿನಂತಿಯತ್ತ ಕುತೂಹಲ ಕಾವೇರಿತ್ತು. ಈಗ ಲಾಂಚ್ ಆಗಿರುವ ಟ್ರೈಲರ್ ಅದನ್ನು ಮತ್ತಷ್ಟು ಕಾವೇರುವಂತೆ ಮಾಡಿ ಬಿಟ್ಟಿದೆ. ಪ್ರಯೋಗಾತ್ಮಕವಾದ ಪಕ್ಕಾ ಕಮರ್ಶಿಯಲ್ ಜಾಡಿನ ಈ ಚಿತ್ರ ಇದೇ 21ನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ.
ಬೆಂಗಳೂರು: ಟೀಸರ್ ಮೂಲಕವೇ ವ್ಯಾಪಕ ಚರ್ಚೆ, ಕುತೂಹಲ ಹುಟ್ಟು ಹಾಕಿರೋ ಚಿತ್ರ `ಸಾರ್ವಜನಿಕರಲ್ಲಿ ವಿನಂತಿ’. ಯಾವ ಸದ್ದುಗದ್ದಲವೂ ಇಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಆ ನಂತರ ಕೆಲಸ ಕಾರ್ಯಗಳ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತವಲ್ಲಾ? ಅಂಥಾ ಚಿತ್ರಗಳನ್ನು ಪ್ರೇಕ್ಷಕರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ವೆರೈಟಿಯ ಚಿತ್ರಗಳಿಗೆ ಗೆಲುವು ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಇದೆ. ಇಂಥಾ ನಂಬಿಕೆ ಹುಟ್ಟು ಹಾಕಿರೋ ಸಾರ್ವಜನಿಕರಲ್ಲಿ ವಿನಂತಿ ಸೆನ್ಸಾರ್ ಮುಗಿಸಿಕೊಂಡು ಥೇಟರಿನತ್ತ ಮುಖ ಮಾಡಿದೆ.
ಕೃಪಾ ಸಾಗರ್ ನಿರ್ದೇಶನದ ಈ ಚಿತ್ರಕ್ಕೆ ಸೆನ್ಸಾರ್ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಇದೇ ತಿಂಗಳ 21ರಂದು ತೆರೆಗಾಣಲಿದೆ.
ಈಗಾಗಲೇ ಒಂದಷ್ಟು ವರ್ಷಗಳಿಂದ ಯೋಗರಾಜ ಭಟ್ ಸೇರಿದಂತೆ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ಕೃಪಾ ಸಾಗರ್. ಈ ಅವಧಿಯ ತುಂಬಾ ಪ್ರೇಕ್ಷಕರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರೋ ಅವರು ಸಾಮಾಜಿಕ ಕಾಳಜಿ ಇರೋ ಕಥಾ ಹಂದರವನ್ನು ಈ ಮೂಲಕ ಪಕ್ಕಾ ಕಮರ್ಶಿಯಲ್ ವೇನಲ್ಲಿ ಹೇಳಿದ್ದಾರಂತೆ.
ಈ ಚಿತ್ರದಲ್ಲಿ ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಮುಂತಾದವರ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈ ಸಮಾಜದಲ್ಲಿ ಮೇಲು ನೋಟಕ್ಕೆ ಗೊತ್ತಾಗುವಂಥಾ ಅದೆಷ್ಟೋ ಬಗೆಯ ಅಪರಾಧ ಪ್ರಕರಣಗಳಿವೆ. ಆದರೆ ನಮ್ಮೆಲ್ಲರ ಬೆನ್ನ ಹಿಂದೆ ನಡೆಯೋ ನಿಗೂಢ ಕ್ರೈಮುಗಳದ್ದೊಂದು ಜಗತ್ತಿದೆ. ಅಂಥಾ ವಿರಳ ಸನ್ನಿವೇಶಗಳನ್ನು ಸೇರಿಸಿಕೊಂಡು ಸಾರ್ವಜನಿಕರೆಲ್ಲ ಗಮನಹರಿಸಲೇ ಬೇಕಾದ ಕಥೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಹೇಳಲಾಗಿದೆಯಂತೆ.
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಯುವ ಮನಸುಗಳ ಆಗಮನವಾಗಿ ಹೊಸ ಆಲೋಚನೆಗಳ ಹರಿವು ಶುರುವಾಗಿದೆ. ಈ ಕಾರಣದಿಂದಲೇ ಭಿನ್ನವಾದ ಒಂದಷ್ಟು ಚಿತ್ರಗಳು ಪ್ರೇಕ್ಷಕರ ಮುಂದೆ ಅನಾವರಣಗೊಳ್ಳುತ್ತಿವೆ. ಈ ಸಾಲಿನಲ್ಲಿ ದಾಖಲಾಗುತ್ತಲೇ ಗೆಲುವಿನ ಛಾಪು ಮೂಡಿಸಬಲ್ಲ ಚಿತ್ರವೊಂದರ ಟೀಸರ್ ಈಗ ಪ್ರೇಕ್ಷಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಂಥಾದ್ದೊಂದು ಟೀಸರ್ ಹವಾ ಸೃಷ್ಟಿಸಿರೋ ಸಿನಿಮಾ ‘ಸಾರ್ವಜನಿಕರಲ್ಲಿ ವಿನಂತಿ’!
ಇದು ಹೊಸಬರೇ ಸೇರಿಕೊಂಡು ಮಾಡಿರೋ ಚಿತ್ರ. ಕೃಪಾ ಸಾಗರ್ ಕಮರ್ಶಿಯಲ್ ವೇನಲ್ಲಿಯೇ ಸಾಮಾಜಿಕ ಸಂದೇಶ ಇರುವ ಕಥೆಯೊಂದನ್ನು ಈ ಸಿನಿಮಾ ಮೂಲಕ ಹೇಳಲು ಮುಂದಾಗಿದ್ದಾರಂತೆ. ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರದ ಟೀಸರ್ ಮಾತ್ರ ತುಂಬು ಭರವಸೆ ಹುಟ್ಟಿಸುವಂತಿದೆ. ಸೂಕ್ಷ್ಮವಂತಿಕೆಯ ಮನಸುಗಳಿಗೆಲ್ಲ ಗತ ಕಾಲದ ಪರಿಮಳವನ್ನು ಪರಿಚಯಿಸುತ್ತಲೇ ಆರಂಭವಾಗೋ ಈ ಸಿನಿಮಾ ಕ್ರೈಂ ಥ್ರಿಲ್ಲರ್ ಜಾನರಿನದ್ದೆಂಬ ಹೊಳಹೂ ಸಿಕ್ಕಿದೆ. ಇದಲ್ಲದೆ ಇಡೀ ಚಿತ್ರ ಹೊಸತೇನನ್ನೋ ಒಡಲಲ್ಲಿಟ್ಟುಕೊಂಡಿದೆ ಎಂಬ ಸುಳಿವೂ ಪ್ರೇಕ್ಷಕರಿಗೆ ಸಿಕ್ಕಿ ಬಿಟ್ಟಿದೆ.
ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನು ಕೃಪಾ ಸಾಗರ್ ನಮ್ಮ ನಡುವೆಯೇ ನಡೆಯೋ ಘಾತುಕ ಘಟನಾವಳಿಗಳ ಸ್ಫೂರ್ತಿಯಿಂದ ಕಥೆ ಹೊಸೆದು ನಿರ್ದೇಶನ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು ಸದಾ ಸಾರ್ವಜನಿಕರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರೋ ಪೊಲೀಸರಿಗೆ ಅರ್ಪಿಸಲಾಗಿದೆ. ಕಥೆಯ ವಿಚಾರಕ್ಕೆ ಬಂದರೆ ಪೊಲೀಸರ ಪಾತ್ರ ಪ್ರಧಾನವಾಗಿದೆಯಂತೆ. ಪೊಲೀಸರಿಗೆಂದೇ ವಿಶೇಷ ಹಾಡೊಂದನ್ನು ಚಿತ್ರತಂಡ ರೆಡಿ ಮಾಡಿದೆ. ಅದನ್ನು ವಿಜಯ್ ಪ್ರಕಾಶ್ ಹಾಡಿದ್ದಾರಂತೆ.
ಮದನ್ ರಾಜ್ ಮತ್ತು ಅಮೃತಾ ಈ ಮೂಲಕ ನಾಯಕ ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಸೇರಿದಂತೆ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈಗಾಗಲೇ ಟೀಸರ್‍ಗೆ ಸಿಗುತ್ತಿರೋ ಭಾರೀ ಮೆಚ್ಚುಗೆ ಚಿತ್ರತಂಡಕ್ಕೆ ಹೊಸ ಹುರುಪು ತುಂಬಿದೆ. ಅದೇ ಜೋಶ್ ನಲ್ಲಿ ಆದಷ್ಟು ಬೇಗನೆ ತೆರೆಗೆ ಬರಲು ಸಿದ್ಧತೆ ನಡೆಯುತ್ತಿದೆ.