Tag: ಸಾರ್ವಕರ್

  • ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ

    ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ? – ರಾಹುಲ್‌ಗೆ ಸುಪ್ರೀಂ ತರಾಟೆ

    – ಸಾವರ್ಕರ್‌ ಬ್ರಿಟಿಷರ ಸೇವಕ ಎಂದಿದ್ದ ರಾಗಾ

    ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ ಎಂದು ಪ್ರಶ್ನಿಸುವ ಮೂಲಕ ಸುಪ್ರೀಂ ಕೋರ್ಟ್ (Supreme Court) ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ತರಾಟೆಗೆ ತೆಗೆದುಕೊಂಡಿದೆ.

    ಭವಿಷ್ಯದಲ್ಲಿ ಸಾರ್ವಕರ್‌ (VD Savarkar) ಅವರಿಗೆ ಅವಮಾನ ಮಾಡುವ ಯಾವುದೇ ಹೇಳಿಕೆಗಳನ್ನು ನೀಡಿದರೆ ರಾಹುಲ್‌ ವಿರುದ್ಧ ಸ್ವಯಂ ಪ್ರೇರಿತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮೌಖಿಕವಾಗಿ ಎಚ್ಚರಿಸಿದೆ.

    ಇಂದು ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾ ಮನಮೋಹನ್ ಅವರನ್ನೊಳಗೊಂಡ ಪೀಠ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆ ನಡೆಸಿದ ಪೀಠ ಸಾವರ್ಕರ್ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಲಕ್ನೋ ನ್ಯಾಯಾಲಯದಲ್ಲಿ ರಾಹುಲ್ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ವಿಚಾರಣೆಗೆ ತಡೆ ನೀಡಿತು. ಇದನ್ನೂ ಓದಿ: ರನ್ಯಾರಾವ್ ವಿರುದ್ಧ ಕಾಫಿಪೋಸಾ ಜಾರಿ – ಒಂದು ವರ್ಷ ಜೈಲೇ ಗತಿ

    ಆರಂಭದಲ್ಲೇ ಸಾವರ್ಕರ್ ಬ್ರಿಟಿಷರ ಸೇವಕ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ನ್ಯಾ. ದತ್ತ ಆಕ್ಷೇಪ ವ್ಯಕ್ತಪಡಿಸಿದರು. ಗಾಂಧೀಜಿ ವೈಸ್‌ರಾಯ್‌ಗೆ ಬರೆದ ಪತ್ರಗಳಲ್ಲಿ ʼನಿಮ್ಮ ನಿಷ್ಠಾವಂತ ಸೇವಕʼ ಎಂಬ ಪದವನ್ನು ಬಳಸಿದ್ದರಿಂದ ಮಹಾತ್ಮಾ ಗಾಂಧೀಜಿ ಅವರನ್ನು ಬ್ರಿಟಿಷರ ಸೇವಕ ಎಂದು ಕರೆಯಬಹುದೇ ಎಂದು ನ್ಯಾ. ದತ್ತ ಅವರು ರಾಹುಲ್‌ ಪರ ವಕೀಲ ಸಿಂಘ್ವಿ ಅವರಿಗೆ ಪ್ರಶ್ನಿಸಿದರು.

    ನಿಮ್ಮ ಕಕ್ಷಿದಾರರ ಅಜ್ಜಿ (ಇಂದಿರಾ ಗಾಂಧಿ) ಪ್ರಧಾನಿಯಾಗಿದ್ದಾಗ ಸ್ವಾತಂತ್ರ್ಯ ಹೋರಾಟಗಾರರಾದ ಸಾವರ್ಕರ್ ಅವರನ್ನು ಹೊಗಳಿ ಪತ್ರವನ್ನು ಕಳುಹಿಸಿದ್ದಾರೆ ಎನ್ನುವುದು ನಿಮ್ಮ ಕಕ್ಷಿದಾರರಿಗೆ ತಿಳಿದಿದೆಯೇ ಎಂದು ಕೇಳಿದರು.

    ಭಾರತದ ಇತಿಹಾಸ ಅಥವಾ ಭೌಗೋಳಿಕತೆಯ ಬಗ್ಗೆ ನಿಮಗೆ ಏನೂ ತಿಳಿಯದೇ ಇರುವಾಗ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬಾರದು ಎಂದು ಖಾರವಾದ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್‌ ವಿಚಾರಣೆಗೆ ತಡೆ ನೀಡಿತು.

    2022ರಲ್ಲಿ ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಸಾವರ್ಕರ್‌ ಅವರನ್ನು ಬ್ರಿಟಿಷರ ಸೇವಕ ಎಂಬುದಾಗಿ ಕರೆದಿದ್ದರು. ಈ ಹೇಳಿಕೆಯನ್ನು ಖಂಡಿಸಿ ನೃಪೇಂದ್ರ ಪಾಂಡೆ ದೂರು ದಾಖಲಿಸಿದ್ದರು. ಈ ಹಿಂದೆ ಪ್ರಕರಣದ ವಿಚಾರಣೆಗೆ ರಾಹುಲ್‌ ಗೈರಾಗಿದ್ದಕ್ಕೆ ಕೋರ್ಟ್‌ 200 ರೂ. ದಂಡ ವಿಧಿಸಿತ್ತು.

  • ಯಲಹಂಕ ಮೇಲ್ಸೇತುವೆಗೆ ‘ಸಾವರ್ಕರ್’ ಹೆಸರು- ಉದ್ಘಾಟನಾ ಕಾರ್ಯಕ್ರಮ ಮುಂದೂಡಿದ ಸರ್ಕಾರ

    ಯಲಹಂಕ ಮೇಲ್ಸೇತುವೆಗೆ ‘ಸಾವರ್ಕರ್’ ಹೆಸರು- ಉದ್ಘಾಟನಾ ಕಾರ್ಯಕ್ರಮ ಮುಂದೂಡಿದ ಸರ್ಕಾರ

    – ವಿಪಕ್ಷಗಳ ಟೀಕೆಗೆ ಮಣಿಯಿತಾ ಸಿಎಂ ಬಿಎಸ್‍ವೈ ಸರ್ಕಾರ?

    ಬೆಂಗಳೂರು: ಗುರುವಾರ ಸಾವರ್ಕರ್ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಟ್ಟು ನಾಳೆ ಉದ್ಘಾಟನೆ ಮಾಡಲು ಬಿಬಿಎಂಪಿ ಕೌನ್ಸಿಲ್‍ನಲ್ಲಿ ನಿರ್ಧಾರ ಮಾಡಲಾಗಿತ್ತು. ಆದರೆ ವಿವಾದ ಆಗುವುದು ಬೇಡ ಅಂತ ಕೊರೊನಾ ನೆಪದಲ್ಲಿ ಉದ್ಘಾಟನೆ ಕಾರ್ಯಕ್ರಮವನ್ನೇ ತಾತ್ಕಾಲಿಕವಾಗಿ ಮುಂದೂಡಲಾಗಿದೆ.

    ಇದಕ್ಕೂ ಮುನ್ನ ನಾಳಿನ ಸೇತುವೆ ಉದ್ಘಾಟನೆಗೆ ಮುದ್ರಿಸಲಾಗಿದ್ದ ಆಮಂತ್ರಣ ಪತ್ರಿಕೆಯಲ್ಲಿ ಸಾವರ್ಕರ್ ಅವರ ಹೆಸರನ್ನು ಸರ್ಕಾರ ಕೈ ಬಿಟ್ಟಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಬರಿ ಮೇಲ್ಸೇತುವೆ ಉದ್ಘಾಟನೆ ಎಂದು ಮುದ್ರಿಸಲಾಗಿತ್ತು. ಇತ್ತ ಮೇಲ್ಸೇತುವೆಗೆ ಸಾರ್ವಕರ್ ಅವರ ಹೆಸರಿಡಲು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

    ಅಂದಹಾಗೇ ಸರ್ಕಾರ ಆಮಂತ್ರಣ ಪತ್ರಿಕೆಯಲ್ಲಿ ಸಾವರ್ಕರ್ ಅವರ ಹೆಸರು ಕೈ ಬಿಡಲು ರಾಜ್ಯ ಸರ್ಕಾರ ಅಧಿಕೃತವಾಗಿ ಗೆಜೆಟ್‍ನಲ್ಲಿ ಸಾವರ್ಕರ್ ಹೆಸರು ಹೊರಡಿಸದಿರುವುದೇ ಕಾರಣ ಎನ್ನಲಾಗಿತ್ತು. ಅಲ್ಲದೇ ಉದ್ಘಾಟನೆ ವೇಳೆ ಸಾವರ್ಕರ್ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸಿಎಂ ಘೋಷಣೆ ಮಾಡುತ್ತಾರೆ ಎನ್ನಲಾಗಿತ್ತು.

    ಮೇಲ್ಸೇತುವೆಗೆ ಸಾವರ್ಕರ್ ಹೆಸರು ಬೇಡ ಎಂದು ಕುಮಾರಸ್ವಾಮಿ ಅವರು ವಿರೋಧ ಮಾಡಿದ್ದರು. ಕಾಂಗ್ರೆಸ್ ಪಕ್ಷ ನಾಯಕರು ಕೂಡ ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಇತ್ತ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಸಮರ್ಥನೆ ಮಾಡಿಕೊಂಡಿದ್ದು, ಸ್ವಾತಂತ್ರ್ಯ ಸೇನಾನಿಗಳಾಗಿದ್ದ ಶ್ರೀ ವೀರ ಸಾವರ್ಕರ್ ಅವರ ಹೆಸರನ್ನು ಬೆಂಗಳೂರಿನ ಮೇಲ್ಸೇತುವೆಯೊಂದಕ್ಕೆ ನಾಮಕರಣ ಮಾಡುವ ಸಂಬಂಧ ನಮ್ಮ ಸರ್ಕಾರ ಸೂಕ್ತವಾದ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರವನ್ನು ವಾಸ್ತವವಾಗಿ ಎಲ್ಲಾ ಪಕ್ಷಗಳೂ ಸ್ವಾಗತಿಸ ಬೇಕಾಗಿತ್ತು. ಆದರೆ ದುರದೃಷ್ಟವಶಾತ್ ವಿರೋಧ ಪಕ್ಷಗಳು ಇದರಲ್ಲಿಯೂ ರಾಜಕೀಯದ ಅಪಸ್ವರ ಎತ್ತುತ್ತಾ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ನಡೆಸುತ್ತಿರುವುದು ಖಂಡನೀಯ.

    ವೀರ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದ ರಾಷ್ಟ್ರ ಭಕ್ತರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿದ್ದರೆ ಸಾವರ್ಕರ್ ಅವರು ಎಷ್ಟೊಂದು ಧೀರ, ಅಪ್ರತಿಮ ಹೋರಾಟಗಾರ ಎಂಬುದು ಇವರಿಗೆ ಅರ್ಥವಾಗುತ್ತಿತ್ತು ಇಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡದೆ ಮತ್ತೆ ಶ್ರೀಮತಿ ಸೋನಿಯಾ ಗಾಂಧಿಯವರ ಹೆಸರನ್ನಿಡಬೇಕಿತ್ತೇ? ವಿರೋಧ ಪಕ್ಷದವರಿಗೆ ರಾಜಕೀಯ ಮಾಡಲು ಬೇಕಾದಷ್ಟು ಇತರ ವಿಷಯಗಳಿವೆ. ಆದರೆ ಸ್ವಾತಂತ್ರ ಹೋರಾಟಗಾರರ ವಿಷಯದಲ್ಲೂ ರಾಜಕೀಯ ಬೆರೆಸುತ್ತಿರುವುದು ಯಾರ ಓಲೈಕೆಗೆ? ಇನ್ನಾದರೂ ರಾಷ್ಟ್ರಭಕ್ತರ ವಿಚಾರದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ವಿರೋಧಪಕ್ಷಗಳ ಮುಖಂಡರು ರಾಜಕೀಯ ಮಾಡದೇ ಗೌರವಪೂರ್ವಕವಾಗಿ ನಡೆದುಕೊಳ್ಳುವುದನ್ನು ಕಲಿಯುತ್ತಾರೆ ಎಂದು ನಿರೀಕ್ಷಿಸಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ.

  • ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಹತ್ತನೇ ತರಗತಿ ಪುಸ್ತಕದಲ್ಲಿ ನೆಹರು ಬದಲು ಸಾರ್ವಕರ್ ಫೋಟೋ: ಎನ್‍ಎಸ್‍ಯುಐ ವಿರೋಧ

    ಪಣಜಿ: ಗೋವಾದ 10ನೇ ತರಗತಿ ಪುಸ್ತಕದಲ್ಲಿದ್ದ ಮಾಜಿ ಪ್ರಧಾನಿ ಜವಹಾರ್ ಲಾಲ್ ಭಾವಚಿತ್ರದ ತಗೆದು ಆರ್‌ಎಸ್‌ಎಸ್ ಸಹ ಸಂಸ್ಥಾಪಕ, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾರ್ವಕರ್ ಫೋಟೋ ಬಳಕೆ ಮಾಡಲಾಗಿದ್ದು, ಇದಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‍ಎಸ್‍ಯುಐ) ಭಾರೀ ವಿರೋಧ ವ್ಯಕ್ತಪಡಿಸಿದೆ.

    10ನೇ ತರಗತಿಯ ಸಮಾಜವಿಜ್ಞಾನ ವಿಷಯ ಪುಸ್ತಕದಲ್ಲಿ ನೆಹರು ಫೋಟೋ ಇತ್ತು. ಅದು 1935ರಲ್ಲಿ ಮಹಾರಾಷ್ಟ್ರದ ವಾರ್ದಾದಲ್ಲಿ ಜವಹಾರ್ ಲಾಲ್ ನೆಹರು ಅವರು ಮಹಾತ್ಮಾ ಗಾಂಧೀಜಿ ಹಾಗೂ ಮೌಲಾನ್ ಅಬ್ದುಲ್ ಕಲಾಂ ಆಜಾದ್ ಜೊತೆಗೆ ಇದ್ದ ಭಾವಚಿತ್ರ. ಆದರೆ ನೆಹರು ಫೋಟೋ ತಗೆದು ಅಲ್ಲಿ ವಿ.ಡಿ.ಸಾರ್ವಕರ್ ಫೋಟೋ ಹಾಕಲಾಗಿದೆ ಎಂದು ದೂರಿದೆ.

    ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಲಪಂತಿಯ ವಿಚಾರಗಳನ್ನು ಎತ್ತಿ ಹಿಡಿಯುತ್ತಿದೆ. ಅಷ್ಟೇ ಅಲ್ಲದೇ ಬಿಜೆಪಿಯವರು ಇತಿಹಾಸವನ್ನು ತಿರುಚಲು ಹಾಗೂ ಸ್ವಾತಂತ್ರ್ಯದಲ್ಲಿ ಕಾಂಗ್ರೆಸ್ ಕೊಡುಗೆಯನ್ನು ಮರೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‍ಎಸ್‍ಯುಐ ಗೋವಾ ರಾಜ್ಯ ಅಧ್ಯಕ್ಷ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮುಂದಿನ ದಿನಗಳಲ್ಲಿ ಮಹಾತ್ಮಾ ಗಾಂಧಿ ಕಾಂಗ್ರೆಸ್ಸಿಗೆ ಸೇರಿದವರು ಎನ್ನುವ ಕಾರಣಕ್ಕೆ ಅವರ ಫೋಟೋವನ್ನು ತಗೆದು ಹಾಕಬಹುದು. 60 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎನ್ನುವುದದು ಬಿಜೆಪಿ ವಾದವಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಹಿರಿಯ ನಾಯಕರು ನೀಡಿದ ಕೊಡುಗೆಯನ್ನು ಇತಿಹಾಸದಿಂದ ಅಳಿಸಿ ಹಾಕಲು ಬಿಜೆಪಿಯವರಿಗೆ ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದರು.

    ಫೋಟೋ ಬದಲಾಯಿಸಿದ್ದಕ್ಕೆ ಕಾರಣ ನೀಡುವಂತೆ ಉನ್ನತ ಹಾಗೂ ಮಾಧ್ಯಮಿಕ ಪರೀಕ್ಷಾ ಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ನಿರ್ದೇಶಕ ಗಜಾನನ ಪಿ ಭಟ್ ತಿಳಿಸಿದ್ದು, ಇತ್ತ ಶಿಕ್ಷಣ ಮಂಡಳಿಯ ಅಧ್ಯಕ್ಷ ರಾಮಕೃಷ್ಣ ಸಮಂತ್ ತನಿಖೆಗೆ ಆದೇಶ ನೀಡಿದ್ದಾರೆ.

    ವೃತ್ತಿ ಅನುಭವ ಹಾಗೂ ಹಿನ್ನಲೆ ಆಧಾರದ ಮೇಲೆ ಶಿಕ್ಷಕರನ್ನು ಪುಸ್ತಕದ ವಿಷಯ ಬದಲಾವಣೆಗೆ ಆಯ್ಕೆ ಮಾಡಲಾಗುತ್ತದೆ. ಎಲ್ಲ ಕಡೆಗೂ ಬದಲಾವಣೆ ಮಾಡುವ ಅಧಿಕಾರ ಅವರಿಗೆ ಇರುವುದಿಲ್ಲ. ಅವಶ್ಯಕತೆ ಇರುವಲ್ಲಿ ವಿಷಯ ಬದಲಾವಣೆಗೆ ಸಲಹೆ ನೀಡಬಹುದು. ಆದರೆ ಅವರು ಏಕೆ ಫೋಟೋ ಬದಲಾವಣೆ ಮಾಡಿದರು ಎನ್ನುವುದು ತಿಳಿದಿಲ್ಲ. ಹೀಗಾಗಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ರಾಮಕೃಷ್ಣ ಸಮಂತ್ ತಿಳಿಸಿದ್ದಾರೆಂದು ವರದಿಯಾಗಿದೆ.

    ಮೇ ತಿಂಗಳಿನಲ್ಲಿ ಹೊಸ ಪಠ್ಯ ಬಿಡುಗಡೆಯಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.