Tag: ಸಾರಿಗೆ ಸಚಿವ

  • ನಾವೆಲ್ಲ ಒಂದೇ ತಾಯಿ ಮಕ್ಕಳಿದ್ದಂತೆ, ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧ- ಡಿಸಿ ತಮ್ಮಣ್ಣ

    ನಾವೆಲ್ಲ ಒಂದೇ ತಾಯಿ ಮಕ್ಕಳಿದ್ದಂತೆ, ಸರ್ಕಾರ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧ- ಡಿಸಿ ತಮ್ಮಣ್ಣ

    ಗದಗ: ನಾವೆಲ್ಲ ಒಂದೇ ತಾಯಿ ಮಕ್ಕಳಿದ್ದಂತೆ. ನಮ್ಮ ಸರ್ಕಾರವೂ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ನಗರದ ನೂತನ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಹಾಗೂ ಶುದ್ಧನೀರಿನ ಘಟಕವನ್ನು ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವೂ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಬದ್ಧವಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಆಡಿದ ಆವೇಶದ ಮಾತುಗಳನ್ನು ಪ್ರತಿಪಕ್ಷಗಳು ರಾಜಕೀಯಕ್ಕೆ ಬಳಸಬಾರದು. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿರುವುದನ್ನು ಶೀಘ್ರದಲ್ಲೇ ಸರಿ ಪಡಿಸಲಾಗುವುದು ಎಂದರು.

    ಅಖಂಡ ಕರ್ನಾಟಕ ಏಕೀಕರಣಕ್ಕೆ ಆಲೂರು ವೆಂಕಟರಾಯರು ಅಡಿಪಾಯ ಹಾಕಿದ್ದು, ಅವರ ಆಶಯದಂತೆ ರಾಜ್ಯದ ಅಭಿವೃದ್ಧಿ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಹೋರಾಟದ ಕೂಗು ಸರಿಯಲ್ಲ ಎಂದು ಹೇಳಿದರು.

    ಉತ್ತರ ಕರ್ನಾಟಕ ಗಂಡುಮೆಟ್ಟಿದ ನಾಡು. ಗೋಕಾಕ್ ಚಳುವಳಿಯ ಮೂಲಕ ಅಖಂಡ ಕರ್ನಾಟಕದ ಹೋರಾಟ ಆರಂಭವಾಯ್ತು. ರಾಜ್ಯದ ನಾಲ್ಕು ಸಾರಿಗೆ ವಿಭಾಗಗಳಲ್ಲಿ ಯಾವುದೇ ತಾರತಮ್ಯ ಇಲ್ಲ. ಆಡಳಿತದ ದೃಷ್ಟಿಯಿಂದ ಈ ಹಿಂದೆ ವಿಭಾಗಗಳನ್ನು ಮಾಡಿರುವುದು ಸರಿಯಾಗಿದೆ ಎಂದು ಸಚಿವರು ತಿಳಿಸಿದ್ರು.

  • ಶೌಚಾಲಯ ಪರಿಶೀಲನೆ ನಡೆಸಿದ ಸಚಿವ ತಿಮ್ಮಣ್ಣ: ಮುಜುಗರಕ್ಕೀಡಾದ ಮಹಿಳೆಯರು

    ಶೌಚಾಲಯ ಪರಿಶೀಲನೆ ನಡೆಸಿದ ಸಚಿವ ತಿಮ್ಮಣ್ಣ: ಮುಜುಗರಕ್ಕೀಡಾದ ಮಹಿಳೆಯರು

    ಚಿಕ್ಕಮಗಳೂರು: ಬಸ್ ನಿಲ್ದಾಣದ ಶೌಚಾಲಯ ವ್ಯವಸ್ಥೆ ತಿಳಿಯಲು ಸಾರಿಗೆ ಸಚಿವ ಡಿಸಿ ತಿಮ್ಮಣ್ಣ ಅವರೇ ನೇರವಾಗಿ ಮಹಿಳಾ ಶೌಚಾಲಯಕ್ಕೆ ಹೋದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಸಾರಿಗೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಲು ಸಚಿವರು ಮುಂದಾಗಿದ್ದು, ಇಂದು ಚಿಕ್ಕಮಗಳೂರು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ್ದರು. ಹೀಗಾಗಿ ಶೌಚಾಲಯದ ವ್ಯವಸ್ಥೆ ತಿಳಿಯಲು ಪುರುಷರು ಹಾಗೂ ಮಹಿಳಾ ಶೌಚಾಲಯಗಳಿಗೆ ಸ್ವತಃ ತಾವೇ ಭೇಟಿ ನೀಡಿ ಪರಿಶೀಲನೆಗೆ ಮುಂದಾದರು. ಮಹಿಳಾ ಶೌಚಾಲಯಕ್ಕೆ ಸಚಿವರ ಭೇಟಿಯಿಂದಾಗಿ ನಿಲ್ದಾಣದಲ್ಲಿದ್ದ ಮಹಿಳೆಯರು ಮುಜುಗರಕ್ಕೆ ಒಳಗಾದರು.

    ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದಿರುವುದಕ್ಕೆ ಸಚಿವ ತಿಮ್ಮಣ್ಣ ಅವರು ಅಸಮಾಧಾನ ಹೊರಹಾಕಿ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಅಲ್ಲದೇ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

  • ಬಲು ಮಾತಾಡ್ತಿಯಾ, ಮುಚ್ಚೋ ಬಾಯಿ- ಮಂಡ್ಯದಲ್ಲಿ ಗರಂ ಆದ ಸಾರಿಗೆ ಸಚಿವ

    ಬಲು ಮಾತಾಡ್ತಿಯಾ, ಮುಚ್ಚೋ ಬಾಯಿ- ಮಂಡ್ಯದಲ್ಲಿ ಗರಂ ಆದ ಸಾರಿಗೆ ಸಚಿವ

    ಮಂಡ್ಯ: ತಡಿಲಾ ಗೌಡ, ಬಲು ಮಾತಾಡ್ತಿಯಾ ಕಣ್ಲ ನೀನು. ನಿನ್ನಂತವರು ನನ್ನತ್ರಾನೂ ಇದ್ದಾರೆ. ಸ್ವಲ್ಪ ಸುಮ್ನಿರ್ಲಾ. ಹೀಗಂತ ವ್ಯಕ್ತಿಯೊಬ್ಬರ ವಿರುದ್ಧ ಸಾರಿಗೆ ಸಚಿವ ಹೆಚ್‍ಎಂ ರೇವಣ್ಣ ಗರಂ ಆಗಿದ್ದಾರೆ.

    ಮಂಡ್ಯದ ಮದ್ದೂರಿನ ಕೊಪ್ಪ ಸಾರಿಗೆ ಬಸ್ಸ್ ನಿಲ್ದಾಣ ಉದ್ಘಾಟನೆಗೆ ಆಗಮಿಸಿದ್ದ ಸಚಿವರು ಭಾಷಣ ಪ್ರಾರಂಭಿಸಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಗಲಾಟೆ ಮಾಡಲು ಶುರು ಮಾಡಿದ್ದ. ಕೋಪಗೊಂಡ ಸಚಿವರು ಮೊದಲೆರಡು ಬಾರಿ ಸಮಾಧಾನವಾಗಿಯೇ ತಡಿಲಾ ಗೌಡ, ಬಲು ಮಾತಾಡ್ತಿಯ ಕಣ್ಲಾ ನೀನು ಅಂತ ಹೇಳಿದ್ರು.

    ಆದ್ರೂ ಆತ ಸುಮ್ಮನಿರದಿದ್ದಾಗ ಗರಂ ಆದ ಸಚಿವರು, ಅಯ್ಯೋ ನಿನ್ನ ಅವಾಗ್ಲಿಂದ ನೀನ್ ಒಬ್ಬನೆ ಮಾತಾಡ್ತಿದ್ದೀಯಾ. ಮುಚ್ಚೋ ಬಾಯಿ, ಸಭೆಯನ್ನ ಹಾಳು ಮಾಡಬಾರದು ಅಂತ ಸ್ಟ್ರಾಂಗ್ ಆಗಿ ಗದರಿದ್ರು.

  • ಎಲ್ಲಾ ವಾಹನಗಳಿಗೂ ಹೊಸ ನಂಬರ್ ಪ್ಲೇಟ್- ದೇಶದಲ್ಲಿಯೇ ಮೊದಲ ಬಾರಿಗೆ ಕರುನಾಡಲ್ಲಿ ಜಾರಿ!

    ಎಲ್ಲಾ ವಾಹನಗಳಿಗೂ ಹೊಸ ನಂಬರ್ ಪ್ಲೇಟ್- ದೇಶದಲ್ಲಿಯೇ ಮೊದಲ ಬಾರಿಗೆ ಕರುನಾಡಲ್ಲಿ ಜಾರಿ!

    ಬೆಂಗಳೂರು: ಇಷ್ಟು ದಿನ ಡಿಸೈನ್ ಡಿಸೈನ್ ಆಗಿ ನಂಬರ್ ಪ್ಲೇಟ್ ಹಾಕಿಸುತ್ತಿದ್ದ ಸ್ಟೈಲ್‍ಗೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೊಸ ಪ್ರಯೋಗ ಮಾಡಲು ರಾಜ್ಯದ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

    ಸಾರಿಗೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಕೆಲವೇ ದಿನಗಳಲ್ಲಿ ಹೊಸ ಯೋಜನೆಗೆ ಸಾರಿಗೆ ಸಚಿವ ರೇವಣ್ಣ ಸಿದ್ಧರಾಗಿದ್ದಾರೆ. ರಾಜ್ಯದಲ್ಲಿರೋ ಸರಿ ಸುಮಾರು 66 ಲಕ್ಷ ವಾಹನಗಳಿಗೆ ಹೊಸ ನಂಬರ್ ಪ್ಲೇಟ್‍ಗಳನ್ನು ಹಾಕಿಸಲು ಪ್ಲಾನ್ ಮಾಡಿದ್ದು, ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದೆ. ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ 1 ಸಾವಿರ ಇದೆ. ಆದರೆ ಹೊಸ ನಂಬರ್ ಪ್ಲೇಟ್‍ಗಳ ಅಳವಡಿಕೆ ಸರ್ಕಾರ ಮುಂದಾದರೆ ಮಾಲೀಕರ ಜೇಬಿಗೆ 2200 ರೂಪಾಯಿ ಕತ್ತರಿ ಬೀಳಲಿದೆ ಎಂದು ಹೇಳಲಾಗಿದೆ.

     

    ಇನ್ನು ಈ ರೀತಿಯ ನಂಬರ್ ಪ್ಲೇಟ್ ಜಾರಿಗೆ ತರುತ್ತಿರೋ ಮೊದಲ ರಾಜ್ಯ ಕರ್ನಾಟಕವಾಗಿದೆ. ಹಾಗಿದ್ದರೆ ಈ ನಂಬರ್ ಪ್ಲೇಟ್‍ನಿಂದ ಎನೇನು ಅನುಕೂಲವಾಗಲಿದೆ ಎಂಬುವುದನ್ನು ನೋಡುವುದಾದರೆ;

    1.  ನಂಬರ್, ಗಾತ್ರದಲ್ಲಿ ದೊಡ್ಡದಾಗಿ ಕಾಣಲಿದೆ
    2.  ಕತ್ತಲಲ್ಲಿಯೂ ಸುಲಭವಾಗಿ ಓಡಾಡುವಂತೆ ರೇಡಿಯಂ ಬಣ್ಣ
    3.  ಸ್ವಂತ ವಾಹನಗಳಿಗೆ, ಬಾಡಿಗೆ ವಾಹನಗಳಿಗೆ ಹಾಗೂ ಬಸ್‍ಗಳಿಗೆ ಪ್ರತ್ಯೇಕ ಇಂಗ್ಲೀಷ್ ಅಕ್ಷರ
    4.  45 ಡಿಗ್ರಿ ಕೋನದಲ್ಲಿಯೂ ಓದುವಂತೆ ಅಕ್ಷರ ವಿನ್ಯಾಸ
    5.  ಕ್ರೋಮಿಯಂ ಹಾಲೋಗ್ರಾಮ್ ಲೇಸರ್ ನಂಬರ್ ಪ್ಲೇಟ್

    ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಇದಾಗಲಿದ್ದು, ಇನ್ನು ಮುಂದೆ ವಾಹನ ಕಳ್ಳರಿಗೆ ಮತ್ತು ಬೇರೆ ರೀತಿಯ ವ್ಯವಹಾರ ಮಾಡುವವರು ಸುಲಭವಾಗಿ ಸಿಕ್ಕಿಹಾಕಿಕೊಳ್ಳೋದಂತು ಗ್ಯಾರಂಟಿ. ಹಳೆಯ ಐಎನ್‍ಡಿ ಪ್ಲೇಟ್ ಬದಲಾಗಿ ಇದು ಹೊಸ ವಿನ್ಯಾಸವುಳ್ಳ ಪ್ಲೇಟ್ ಇದಾಗಲಿದ್ದು, ಇದು ದೇಶದಲ್ಲಿಯೇ ಮೊದಲು ಎಂದು ಸಾರಿಗೆ ಸಚಿವರು ಹೇಳುತ್ತಾರೆ.

    ಪತ್ರಕರ್ತೆ ಗೌರಿ ಹಂತಕರು ಬೈಕ್‍ನಲ್ಲಿ ಓಡಾಡಿರುವ ದೃಶ್ಯ ಸಿಕ್ಕಿದ ಮೇಲೂ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಕಾರಣದಿಂದಲೇ ಹೊಸ ನಂಬರ್ ಪ್ಲೇಟ್ ಜಾರಿ ಮಾಡಲು ಸರ್ಕಾರ ಮುಂದಾಗಿರುವಂತೆ ಕಾಣುತ್ತಿದೆ. ಆದರೆ ದುಬಾರಿ ವೆಚ್ಚವಾದರೆ ಮಾಲೀಕರು ತಿರುಗಿ ಬೀಳುವ ಸಾಧ್ಯತೆ ಇದೆ ಎಂಬುವುದಾಗಿ ತಿಳಿದುಬಂದಿದೆ.

    https://www.youtube.com/watch?v=YIM6qHz8M_0