Tag: ಸಾರಿಗೆ ಸಚಿವಾಲಯ

  • ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ದೂರು ಪರಿಹರಿಸಿ, ಇಲ್ಲವೇ ದಂಡ ಪಾವತಿಸಿ – ಒಲಾ, ಉಬರ್‌ಗಳಿಗೆ ಸರ್ಕಾರ ವಾರ್ನಿಂಗ್

    ನವದೆಹಲಿ: ಕ್ಯಾಬ್ ಕಂಪನಿಗಳಾದ ಓಲಾ, ಉಬರ್‌ಗಳಿಗೆ ಬೇಡಿಕೆ ಹೆಚ್ಚಿದಂತೆ ದೂರುಗಳು ಬರಲು ಪ್ರಾರಂಭಿಸಿವೆ. ಆದ್ದರಿಂದ ದೂರುಗಳನ್ನು ಪರಿಹರಿಸಿ, ಇಲ್ಲವೇ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿರುವ ಕೇಂದ್ರ ಸರ್ಕಾರ, ನ್ಯಾಯಯುತ ಬೆಲೆ ನಿಗದಿ ಮಾಡಲು ಮುಂದಾಗಿದೆ. ಅದಕ್ಕಾಗಿ ಕ್ಯಾಬ್ ಕಂಪನಿಗಳಿಗೆ ಮಾರ್ಗಸೂಚಿ ನೀಡಲಾಗುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.

    Uber-1-768x576

    ಈಗಾಗಲೇ ಕೇಂದ್ರ ಮತ್ತು ರಾಜ್ಯ ಸಾರಿಗೆ ಇಲಾಖೆಗಳ ಮಾರ್ಗ ಸೂಚಿಗಳು ಭಿನ್ನವಾಗಿರುತ್ತವೆ. ಮಾಹಿತಿಯ ಪ್ರಕಾರ, ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿಗದಿತ ಗಡುವುಗಳೊಂದಿಗೆ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಮಾರ್ಗಸೂಚಿಗಳನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಗ್ರಾಹಕರ ದೂರುಗಳನ್ನು ಕಟ್ಟುನಿಟ್ಟಾಗಿ ಪರಿಹರಿಸಲು ನಾವು ಕ್ಯಾಬ್ ಕಂಪನಿಗಳನ್ನು ಕೇಳಿದ್ದೇವೆ. ಗ್ರಾಹಕರ ಕುಂದುಕೊರತೆಗಳ ಪರಿಹಾರಕ್ಕೆ ತಕ್ಷಣವೇ ಸಂಭಾವ್ಯ ಪರಿಹಾರಗಳೊಂದಿಗೆ ಬರಲು ನಾವು ಅವರಿಗೆ ಎಚ್ಚರಿಕೆ ನೀಡಿದ್ದೇವೆ ಇಲ್ಲದಿದ್ದರೆ ಸಕ್ಷಮ ಪ್ರಾಧಿಕಾರವು ಅವರ ವಿರುದ್ಧ ಶಿಕ್ಷಾರ್ಹ ಕ್ರಮವನ್ನು ತೆಗೆದುಕೊಳ್ಳುತ್ತದೆ. ಮುಖ್ಯವಾಗಿ ಡೆಸ್ಟಿನೇಶನ್ ಜೊತೆ ರದ್ದತಿ ಶುಲ್ಕದ ಪ್ರಕಾರ ದರವು ಎಷ್ಟು ನ್ಯಾಯಯುತ ಮತ್ತು ಸಮಂಜಸವಾಗಿದೆ ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    uber cab

    ಏರುತ್ತಿರುವ ಇಂಧನ ಬೆಲೆ ಪ್ರತಿ ವಿರುದ್ಧ ಪ್ರತಿಭಟಿಸಿ ಹಲವಾರು ಆಟೋ ಮತ್ತು ಕ್ಯಾಬ್ ಚಾಲಕರು ಮುಷ್ಕರಕ್ಕೆ ಕರೆ ನೀಡಿದ್ದರಿಂದ ದೆಹಲಿಯಲ್ಲಿ ಕಳೆದ ತಿಂಗಳು ಪ್ರಯಾಣಿಕರು ತೊಂದರೆಗಳನ್ನು ಎದುರಿಸಿದರು. ಇಂಧನ ಬೆಲೆ ಏರಿಕೆ ಮತ್ತು ಕಡಿಮೆ ಕಮಿಷನ್‌ಗಳ ಸಮಸ್ಯೆಯಿಂದ ಕ್ಯಾಬ್ ಚಾಲಕರು `ನೋ ಎಸಿ’ ನೀತಿಯನ್ನು ಅಳವಡಿಸಿಕೊಂಡಿದ್ದರಿಂದ ಕ್ಯಾಬ್ ಕಂಪನಿಗಳು ಓಲಾ ಮತ್ತು ಉಬರ್ ಕೂಡ ಟೀಕೆಗೆ ಗುರಿಯಾಗಿದ್ದಾರೆ. ಪಶ್ಚಿಮ ಬಂಗಾಳ, ನವದೆಹಲಿ, ನೋಯ್ಡಾ ಮತ್ತು ತೆಲಂಗಾಣ ನಂತರ, ಬೆಂಗಳೂರಿನ ಕ್ಯಾಬ್ ಚಾಲಕರೂ ಈ ಭೀತಿಯನ್ನು ಎದುರಿಸುತ್ತಿದ್ದು ಏಪ್ರಿಲ್ ಆರಂಭದಿಂದ `ನೋ ಎಸಿ’ (ಹವಾನಿಯಂತ್ರಕ) ನೀತಿಯನ್ನು ಪ್ರಾರಂಭಿಸಿದರು. ಇದನ್ನೂ ಓದಿ: ಯುವಮೋರ್ಚಾ ಸಭೆಯಲ್ಲಿ ದ್ರಾವಿಡ್ ಭಾಗಿಯಾಗಲಿದ್ದಾರೆ: ಬಿಜೆಪಿ ಶಾಸಕ

    ಪೆಟ್ರೋಲ್ ಬೆಲೆ 100 ಗಡಿ ದಾಟಿದ ನಂತರ ಓಲಾ, ಉಬರ್ ಬಳಕೆದಾರರು ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕ ಕೇಳಲು ಮುಂದಾಗಿದ್ದಾರೆ. ಇದಕ್ಕಾಗಿ ಕೋವಿಡ್ ನಿಯಮಗಳನ್ನೂ ಉಲ್ಲಂಘಿಸಿದ್ದಾರೆ ಎಂದು ವರದಿಯಾಗಿದೆ.

    ಲಾಕ್‌ಡೌನ್‌ನಿಂದ ತಮ್ಮ ಊರುಗಳಿಗೆ ಹೋದ ಎಷ್ಟೋ ರೈಡರ್‌ಗಳು, ಕ್ಯಾಬ್ ಬಳಕೆದಾರರು ಮರಳಿಲ್ಲ. ಶೇ.30 ರಷ್ಟು ಮಂದಿ ಬಾಡಿಗೆ, ಇಂಧನ ಹಾಗೂ ಮಾಸಿಕ ಇಎಂಐ ಪಾವತಿಸುವುದಕ್ಕೂ ಕಷ್ಟವಾಗಿದೆ. ಅದಕ್ಕಾಗಿಯೇ ತಮ್ಮ ಕುಲ ಕಸುಬನ್ನು ಅವಲಂಬಿಸುತ್ತಿದ್ದಾರೆ. ಇನ್ನೂ ಕೆಲ ಕ್ಯಾಬ್ ಚಾಲಕರು ಇಎಂಐ ಗಳನ್ನು ಪಾವತಿಸಲು ಸಾಧ್ಯವಾಗದ ಕಾರಣ ತಮ್ಮ ಕಾರುಗಳನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

    ಓಲಾ, ಉಬರ್ ಬುಕ್ಕಿಂಗ್ ಮಾಡಿದ 20 ನಿಮಿಷಗಳ ವರೆಗೆ ಬರುವುದೇ ಇಲ್ಲ. ಮತ್ತು ಅದನ್ನು ರದ್ದು ಮಾಡಿದಾಗ ಮುಂದಿನ ಬುಕ್ಕಿಂಗ್ ವೇಳೆ 50 ರೂ. ದಂಡ ನೀಡಬೇಕಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

  • ಗಮನಿಸಿ, ಡಿಎಲ್ ಮಾನ್ಯತೆ ಅವಧಿ 2021ರ ಮಾರ್ಚ್‍ವರೆಗೂ ವಿಸ್ತರಣೆ

    ಗಮನಿಸಿ, ಡಿಎಲ್ ಮಾನ್ಯತೆ ಅವಧಿ 2021ರ ಮಾರ್ಚ್‍ವರೆಗೂ ವಿಸ್ತರಣೆ

    ನವದೆಹಲಿ: ಚಾಲನಾ ಪರವಾನಿಗೆ(ಡಿಎಲ್) ಮಾನ್ಯತೆ ಅವಧಿ ಮುಕ್ತಾಯಗೊಂಡಿದ್ದರೂ ಅದರ ಸಿಂಧುತ್ವ ಅವಧಿಯನ್ನು ಮಾರ್ಚ್ 2021ರವರೆಗೂ ವಿಸ್ತರಿಸಲು ಸಾರಿಗೆ ಸಚಿವಾಲಯ ಮುಂದಾಗಿದೆ.

    ಕೊರೊನಾ ಮಹಾಮಾರಿ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ತೆಗದುಕೊಂಡಿರುವುದಾಗಿ ವರದಿಯಾಗಿದೆ. ಈಗಾಗಲೇ ಕೇಂದ್ರ ಸಾರಿಗೆ ಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ಹೊರಡಿಸಿದೆ.

    2020ರ ಮಾರ್ಚ್‍ನಿಂದ ಸತತವಾಗಿ 4ನೇ ಬಾರಿ ವಾಹನಗಳ ದಾಖಲೆಗಳ ಸಿಂಧುತ್ವ ಅವಧಿ ವಿಸ್ತರಿಸುತ್ತಿರುವ ಕೇಂದ್ರ ಸಾರಿಗೆ ಸಚಿವಾಲಯ, ಇದೀಗ ಮತ್ತೆ 2021ರ ಮಾರ್ಚ್ ವರೆಗೆ ಕಾಲಾವಕಾಶ ಕೊಟ್ಟಿರುವುದರಿಂದ ಜನಸಾಮಾನ್ಯರಿಗೆ ವರದಾನವಾಗಿದೆ.

    ಚಾಲನಾ ಪರವಾನಿಗೆ(ಡಿಎಲ್), ನೋಂದಣಿ ಪ್ರಮಾಣ ಪತ್ರ(ಆರ್‍ಸಿ), ಪರ್ಮಿಟ್‍ಗಳು, ಫಿಟ್ನೆಸ್ ಸರ್ಟಿಫಿಕೆಟ್‍ಗಳೊಂದಿಗೆ ವಾಹನ ಕಾಯ್ದೆ ಮತ್ತು ಕೇಂದ್ರ ವಾಹನ ನಿಯಮಕ್ಕೆ ಸಂಬಂಧಿಸಿದ ದಾಖಲೆಗಳ ಅವಧಿಯನ್ನು ವಿಸ್ತರಿಸುವುದಾಗಿ ಕೇಂದ್ರ ಸಾರಿಗೆ ಸಚಿವಾಲಯ ಭಾನುವಾರ ಪ್ರಕಟಣೆ ಹೊರಡಿಸಿದೆ. ಇದರೊಂದಿಗೆ 2020ರ ಫೆಬ್ರುವರಿ 1 ರಿಂದ ಮುಕ್ತಾಯಗೊಂಡಿರುವ ಸರ್ಟಿಫಿಕೆಟ್‍ಗಳಿಗೆ 2021ರ ಮಾರ್ಚ್‍ವರೆಗೂ ಅವಕಾಶ ಕಲ್ಪಿಸಿರುವುದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಿಲೀಫ್ ಸಿಕ್ಕಂತಾಗಿದೆ.

  • ಅ.1 ರಿಂದ ದೇಶಾದ್ಯಂತ ಒಂದೇ ಡಿಎಲ್, ಆರ್‌ಸಿ- ವಿಶೇಷತೆ ಏನು? ಏನೆಲ್ಲ ಮಾಹಿತಿ ಇರುತ್ತೆ?

    ಅ.1 ರಿಂದ ದೇಶಾದ್ಯಂತ ಒಂದೇ ಡಿಎಲ್, ಆರ್‌ಸಿ- ವಿಶೇಷತೆ ಏನು? ಏನೆಲ್ಲ ಮಾಹಿತಿ ಇರುತ್ತೆ?

    ಬೆಂಗಳೂರು: ಅಕ್ಟೋಬರ್ 1 ರಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ವಿತರಿಸಲು ಸಾರಿಗೆ ಸಚಿವಾಲಯ ನಿರ್ಧರಿಸಿದೆ.

    ದೇಶಾದ್ಯಂತ ಒಂದೇ ಮಾದರಿಯ ಡಿಎಲ್ ಹಾಗೂ ಆರ್‌ಸಿ ಕಾರ್ಡ್‍ಗಳನ್ನು ವಿತರಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಮುಂದಾಗಿದೆ. ನೂತನ ಡಿಎಲ್ ಹಾಗೂ ಆರ್‍ಸಿ ಕಾರ್ಡ್‍ಗಳು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿದ್ದು, ಇವುಗಳ ಎಟಿಎಂ ಕಾರ್ಡ್‍ಗಳು ಕೆಲಸ ನಿರ್ವಹಿಸುವ ರೀತಿಯಲ್ಲೇ ಕಾರ್ಯನಿರ್ವಹಿಸಲಿವೆ.

    ಈ ಸಂಬಂಧ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಪ್ರತಿಕ್ರಿಯಿಸಿ, ಅಕ್ಟೋಬರ್ 1 ರಿಂದ ನೋಂದಣಿಯಾಗುವ ಎಲ್ಲಾ ವಾಹನ ಸವಾರರಿಗೆ ಅನ್ವಯವಾಗಲಿದೆ. ಹಳೆಯ ವಾಹನಗಳ ಮಾಲೀಕರು ನವೀಕರಣ ಸಮಯದಲ್ಲಿ ಹೊಸ ಕಾರ್ಡ್ ಪಡೆದುಕೊಳ್ಳಬಹುದು. ಈ ಹೊಸ ಮಾದರಿ ಸ್ಮಾರ್ಟ್ ಕಾರ್ಡ್ ಕ್ಯೂಆರ್ ಕೋಡ್ ಹಾಗೂ ಮೈಕ್ರೋಚಿಪ್ ಹೊಂದಿರಲಿದೆ. ಇದರಿಂದ ಟ್ರಾಫಿಕ್ ಪೊಲೀಸರು ಸಂಬಂಧಿಸಿದ ವಿವರಗಳನ್ನು, ಸುಲಭವಾಗಿ ಮತ್ತು ತ್ವರಿತವಾಗಿ ಪಡೆಯಬಹುದಾಗಿದೆ. ಈ ಹೊಸ ನಿಯಮದಿಂದ ನಕಲಿ ದಾಖಲೆಗಳನ್ನು ತಡೆಯಬಹುದಾಗಿದೆ. ಈ ಹೊಸ ನಿಯಮ ಕರ್ನಾಟಕದಲ್ಲಿಯೂ ಅಕ್ಟೋಬರ್ ಒಂದರಿಂದಲೇ ಅನ್ವಯವಾಗಲಿದ್ದು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಪ್ರಸ್ತುತ ಒಂದೊಂದು ರಾಜ್ಯವು ಒಂದೊಂದು ವಿನ್ಯಾಸದ ಆರ್‍ಡಿ ಮತ್ತು ಡಿಎಲ್‍ಗಳನ್ನು ಈಗ ವಿತರಿಸುತ್ತಿವೆ. ಈಗ ಅಕ್ಟೋಬರ್ ನಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಡಿಎಲ್ ಮತ್ತು ಆರ್‍ಸಿಗಳ ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.

    ನೂತನ ಸ್ಮಾರ್ಟ್ ಡಿಎಲ್ ಹಾಗೂ ಆರ್‍ಸಿಗಳ ಬಣ್ಣ, ವಿನ್ಯಾಸಗಳು ಎಲ್ಲಾ ರಾಜ್ಯಗಳಲ್ಲಿಯೂ ಒಂದೇ ಆಗಿರಲಿದೆ. ವಿಶೇಷವಾಗಿ ಈ ಕಾರ್ಡ್‍ಗಳಲ್ಲಿ ಮೈಕ್ರೋ ಚಿಪ್ ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆಯೂ ಇರಲಿದೆ. ಇದು ನಿಯರ್ ಫೀಲ್ಡ್ ಕಮ್ಯೂನಿಕೇಶನ್(ಎನ್‍ಎಫ್‍ಸಿ) ತಂತ್ರಜ್ಞಾನವನ್ನು ಹೊಂದಿದೆ. ಹೀಗಾಗಿ ಈ ಕಾರ್ಡ್‍ಗಳನ್ನು ಮೆಟ್ರೋ ಹಾಗೂ ಎಟಿಎಮ್ ಕಾರ್ಡ್‍ಗಳ ರೀತಿಯಲ್ಲೂ ಬಳಸಬಹುದಾಗಿದೆ. ಈ ಮೂಲಕ ಸಂಚಾರಿ ಪೊಲೀಸರು ಸ್ಕ್ಯಾನ್ ಮಾಡಿ ಸುಲಭವಾಗಿ ವಾಹನ ಸವಾರರ ಮಾಹಿತಿಗಳನ್ನು ಕಲೆಹಾಕಬಹುದು.

    ಇದಲ್ಲದೇ ವಿಶೇಷವಾಗಿ ವಾಹನ ಚಾಲಕರು ತಮ್ಮ ಅಂಗಾಂಗ ದಾನದ ಮಾಹಿತಿಯನ್ನೂ ಸಹ ಈ ಡಿಲ್‍ನಲ್ಲಿ ನಮೂದಿಸಬಹುದು. ಅಂಗವಿಕಲರಿಗಾಗಿ ಸಿದ್ಧಪಡಿಸಿರುವ ವಿಶೇಷ ವಾಹನಗಳ ಬಗ್ಗೆಯೂ ಸಹ ಈ ಕಾರ್ಡ್‍ಗಳಲ್ಲಿ ವಿವರ ನೀಡಲಾಗಿರುತ್ತದೆ. ನೂತನ ಆರ್‌ಸಿ ಕಾರ್ಡ್ ಮೂಲಕ ವಾಹನವು ಎಷ್ಟು ಪ್ರಮಾಣದಲ್ಲಿ ಹೊಗೆ ಹೊರಹಾಕುತ್ತದೆ ಎಂಬುದನ್ನು ಸಹ ತಿಳಿಯಬಹುದಾಗಿದೆ. ಇದರಿಂದಾಗಿ ವಾಯುಮಾಲಿನ್ಯವೂ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿದೆ.

    ನೂತನ ಡಿಎಲ್‍ನಲ್ಲಿ ಏನೇನು ಇರುತ್ತದೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಡಿಎಲ್ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವ್ಯಕ್ತಿಯ ಹೆಸರು, ರಕ್ತದ ಗುಂಪು ಹಾಗೂ ಅಂಗಾಂಗಳನ್ನು ದಾನ ಮಾಡುವ ಮಾಹಿತಿ, ವಾಹನಗಳ ವಿಧ ಹಾಗೂ ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು ಮುದ್ರಿತವಾಗಿರುತ್ತದೆ.

    ಆರ್‌ಸಿ ಕಾರ್ಡ್‍ನಲ್ಲಿ ಏನೇನು ಇರುತ್ತೆ?
    ದೇಶ ಹಾಗೂ ರಾಜ್ಯ ಸರ್ಕಾರಗಳ ಅಧಿಕೃತ ಚಿಹ್ನೆಗಳು, ಆರ್‍ಸಿ ವಿತರಿಸುವ ಸಂಸ್ಥೆಯ ಹೆಸರು, ವಿತರಿಸುವ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವಾಹನದ ವಿಧ, ವಾಣಿಜ್ಯೇತರ ಹಾಗೂ ವಾಣಿಜ್ಯ ಬಳಕೆಯ ವಿವರ, ವಾಹನಗಳ ಚಾಸಿ ಹಾಗೂ ಇಂಜಿನ್ ಸಂಖ್ಯೆ, ಭಾರತ್ ಸ್ಟೇಜ್ 4 ಅಥವಾ 6 ಎಂಬುದರ ವಿವರ ಮುದ್ರಿತವಾಗಿರುತ್ತದೆ.

    ಡಿಎಲ್ ಹಾಗೂ ಆರ್‌ಸಿಗಳಲ್ಲಿರುವ ಭದ್ರತಾ ಕ್ರಮಗಳು:
    ನೂತನ ಸ್ಮಾಟ್ ಡಿಎಲ್ ಹಾಗೂ ಆರ್‍ಸಿಗಳಲ್ಲಿ ಅಳಿಸಲಾರದಂತೆ ಗಿಲ್ಲೋಚ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದಲ್ಲದೆ ಇದಕ್ಕೆ ಬಳಸಲಾದ ಬಣ್ಣಗಳು ನೇರಾಳಾತಿತಾ ಬಣ್ಣಗಳಿಂದ ಕೂಡಿದ್ದರಿಂದ ಯಾವುದೇ ರೀತಿಯಲ್ಲಿ ಬಣ್ಣ ಬದಲಾಗುವುದಿಲ್ಲ. ಸೂಕ್ಷ್ಮ ರೀತಿಯಲ್ಲಿ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ನಿರ್ದಿಷ್ಟ ಗುರುತಿನ ಪುರಾವೆ(ಹೊಲೊಗ್ರಾಮ್) ಬಳಕೆ ಮಾಡಿರಲಾಗುತ್ತದೆ. ಹಿಂಬದಿ ಹಾಗೂ ಮುಂಭಾಗದಲ್ಲಿ ವಾಟರ್ ಮಾರ್ಕ್ ಮೂಲಕ ರಾಜ್ಯ ಅಥವಾ ಕೇಂದ್ರ ಸರ್ಕಾರಗಳ ಅಧಿಕೃತ ಚಿಹ್ನೆಗಳನ್ನು ಮುದ್ರಿಸಲಾಗಿರುತ್ತದೆ.

    ಯಾಕೆ ವಿತರಣೆ? ದರ ಎಷ್ಟು?
    ಮಾಹಿತಿಗಳ ಪ್ರಕಾರ ಪ್ರತಿನಿತ್ಯ ಹೊಸ ಹಾಗೂ ಪರಿಷ್ಕೃತ 32,000 ಡಿಎಲ್‍ಗಳನ್ನು ವಿತರಿಸಲಾಗುತ್ತಿದೆ. ಇದಲ್ಲದೇ ಹೊಸ ನೋಂದಣಿ ಹಾಗೂ ಮರು ನೋಂದಣಿಯ ಸುಮಾರು 43 ಸಾವಿರ ಕಾರ್ಡುಗಳನ್ನು ದೇಶದಲ್ಲಿ ವಿತರಿಸಲಾಗುತ್ತಿದೆ. ಹೀಗಾಗಿ ಹೊಸ ಮಾದರಿಯ ವಿಶೇಷ ತಂತ್ರಜ್ಞಾನ ಹೊಂದಿರುವ ಕಾರ್ಡ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸಮಯದ ಉಳಿತಾಯ ಹಾಗೂ ಎಲ್ಲಾ ಮಾಹಿತಿಗಳನ್ನು ಒಂದೆಡೆ ಸಿಗುವಂತೆ ಮಾಡಲು ರಸ್ತೆ ಸಾರಿಗೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾದಂತೆ ಇಂದು ಮುದ್ರಿತವಾಗುತ್ತಿರುವ ಪ್ರತಿ ಕಾರ್ಡ್ ದರಕ್ಕಿಂತ 15 ರೂಪಾಯಿ ಮಾತ್ರ ಹೆಚ್ಚಳವಾಗುತ್ತದೆ ಎಂದು ತಿಳಿದುಬಂದಿದೆ.

  • ಆಟೋಮೊಬೈಲ್ ಕ್ಷೇತ್ರ ಕುಸಿತ – ಹಳೆ ವಾಹನಗಳ ನೋಂದಣಿ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಕೆ?

    ಆಟೋಮೊಬೈಲ್ ಕ್ಷೇತ್ರ ಕುಸಿತ – ಹಳೆ ವಾಹನಗಳ ನೋಂದಣಿ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಕೆ?

    ನವದೆಹಲಿ: ಕಳೆದ ಎರಡು ದಶಕಗಳ ಬಳಿಕ ಭಾರೀ ಪ್ರಮಾಣದಲ್ಲಿ ಆಟೋಮೊಬೈಲ್ ಕ್ಷೇತ್ರ ಕುಸಿತ ಕಂಡಿದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಳೆಯ ವಾಹನ ಹೊಂದಿರುವ ಮಾಲೀಕರಿಗೆ ಶಾಕ್ ನೀಡಲು ಮುಂದಾಗುತ್ತಿದೆ.

    ಕಳೆದ ಸೆಪ್ಟಂಬರ್ ನಲ್ಲಿ ಹೊಸ ಮೋಟಾರು ಕಾಯ್ದೆ ಜಾರಿಗೆ ತಂದು ಜನರಿಗೆ ಶಾಕ್ ನೀಡಿದ್ದ ಸರ್ಕಾರ ಈಗ ಆಟೋಮೊಬೈಲ್ ಕ್ಷೇತ್ರದಲ್ಲಿ ಸುಧಾರಣೆ ತರಲು ಮತ್ತು ಹಳೆಯ ವಾಹನಗಳ ಬಳಕೆಗೆ ಪರೋಕ್ಷವಾಗಿ ಬ್ರೇಕ್ ಹಾಕಲು ಮರು ನೋಂದಣಿ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಸಾರಿಗೆ ಸಚಿವಾಲಯ ಈ ಸಂಬಂಧ ಹೊಸ ನೀತಿಯನ್ನು ತಯಾರಿಸುತ್ತಿದ್ದು ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ. ಈ ಸಂಬಂಧ ಶೀಘ್ರವೇ ಕ್ಯಾಬಿನೆಟ್ ಸಭೆಯಲ್ಲಿ ಹೊಸ ನೀತಿಗೆ ಒಪ್ಪಿಗೆ ಪಡೆಯಲು ಸಾರಿಗೆ ಸಚಿವಾಲಯ ಮುಂದಾಗುತ್ತಿದೆ.

    ಯಾಕೆ ಹೊಸ ನೀತಿ?
    ಹಳೇ ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಈ ಹೊಸ ನೀತಿಯನ್ನು ಜಾರಿಗೆ ತಂದರೆ ಹಳೇ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂಬ ಕಾರಣಕ್ಕೆ 15 ವರ್ಷದ ಹಿಂದಿನ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ವಾರ್ಷಿಕ ಮರು ನೋಂದಣಿ ಶುಲ್ಕವನ್ನು ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ.

    ಎಷ್ಟು ಶುಲ್ಕ ಹೆಚ್ಚಳ?
    ಈ ಹಿಂದೆ ಖಾಸಗಿ 4 ಚಕ್ರದ ವಾಹನಗಳ ನೋಂದಣಿ ಮಾಡಲು 600 ರೂ. ವಾರ್ಷಿಕ ಶುಲ್ಕವಿತ್ತು. ಆದರೆ ಹೊಸ ನಿಯಮದ ಪ್ರಕಾರ ಈ ಶುಲ್ಕ 15,000 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿ ವಾಣಿಜ್ಯ ವ್ಯವಹಾರಕ್ಕೆ ಬಳಸುವ ನಾಲ್ಕು ಚಕ್ರದ ವಾಹನಗಳಿಗೆ ಈ ಹಿಂದೆ ವಾರ್ಷಿಕ ಶುಲ್ಕ 1,000 ರೂ. ಇತ್ತು ಈಗ ಅದು 20,000 ರೂ. ಏರಿಕೆ ಆಗಲಿದೆ. ಭಾರೀ ಗಾತ್ರದ ವಾಣಿಜ್ಯ ವಾಹನಗಳಿಗೆ ನೋಂದಣಿ ಶುಲ್ಕ 1,500 ರೂ. ಇತ್ತು ಈಗ ಅದು 40,000 ರೂ. ಆಗುವ ಸಾಧ್ಯತೆಯಿದೆ.

  • ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಹೋಗ್ತಿರೋ ಅಷ್ಟೇ ದೂರಕ್ಕೆ ಮಾತ್ರ ಟೋಲ್!

    ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಹೋಗ್ತಿರೋ ಅಷ್ಟೇ ದೂರಕ್ಕೆ ಮಾತ್ರ ಟೋಲ್!

    ನವದೆಹಲಿ: ಇನ್ನು ಮುಂದೆ ನೀವು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಷ್ಟು ಕಿ.ಮೀ ಪ್ರಯಾಣ ಮಾಡುತ್ತಿರೋ ಅಷ್ಟು ದೂರಕ್ಕೆ ಮಾತ್ರ ಟೋಲ್ ಪಾವತಿಸುವ ನೀತಿ ಜಾರಿಗೆಯಾಗುವ ಸಾಧ್ಯತೆ ಇದೆ.

    ಹೌದು. ಪ್ರಸ್ತುತ ಈಗ ವಾಹನವೊಂದು ಟೋಲ್ ರಸ್ತೆಯನ್ನು ಪ್ರವೇಶಿಸಿದರೆ ಆ ಟೋಲ್ ರಸ್ತೆಗೆ ನಿಗದಿಯಾಗಿರುವ ಸಂಪೂರ್ಣ ಶುಲ್ಕವನ್ನು ಪಾವತಿಸಬೇಕು. ಆದರೆ ಎನ್‍ಡಿಎ ಸರ್ಕಾರ ಈಗ ಸಂಪೂರ್ಣ ಶುಲ್ಕವನ್ನು ಪಾವತಿ ಮಾಡುವ ಬದಲಾಗಿ ಎಷ್ಟು ಕಿ.ಮೀ.ವಾಹನ ಸಂಚರಿಸುತ್ತದೋ ಅಷ್ಟೇ ದೂರಕ್ಕೆ ಟೋಲ್ ಕಟ್ಟುವ ನೀತಿಯನ್ನು ಅನುಷ್ಠಾನಗೊಳಿಸಲು ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಾಹನವೊಂದು 60 ಕಿ.ಮೀ ಉದ್ದದ ಟೋಲ್ ರಸ್ತೆಯನ್ನು ಸಂಪೂರ್ಣವಾಗಿ ಬಳಸದೇ ಇದ್ದರೂ ಈಗ ಸಂಪೂರ್ಣವಾಗಿ ಟೋಲ್ ಕಟ್ಟಬೇಕು. ಅಷ್ಟೇ ಅಲ್ಲದೇ ಪ್ರತಿವರ್ಷ ಟೋಲ್ ದರ ಪರಿಷ್ಕರಣೆಯಾಗುತ್ತಿರುವುದರಿಂದ ರಸ್ತೆ ಪ್ರಯಾಣ ಈಗ ದುಬಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜನಸ್ನೇಹಿಯಾಗಲು ಸರ್ಕಾರ ಈ ಕ್ರಮವನ್ನು ಕೈಗೊಳ್ಳಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

    ದೆಹಲಿ ಮೂಲಕ ಹಾದು ಹೋಗುವ ಹರ್ಯಾಣ ಮತ್ತು ಉತರ ಪ್ರದೇಶ ಸಂಪರ್ಕ ಕಲ್ಪಿಸುವ 135 ಕಿ.ಮೀ ಉದ್ದದ ಈಸ್ಟರ್ನ್ ಫೆರಿಫೆರಲ್ ರಸ್ತೆಯಲ್ಲಿ ಆರಭಿಕ ಹಂತವಾಗಿ ಪ್ರತಿ ಕಿ.ಮೀ. ಟೋಲ್ ಶುಲ್ಕ ಜಾರಿಗೆ ಬರಲು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದೆ ಎನ್ನಲಾಗಿದೆ.

    ಕಳೆದ ವಾರ ನಡೆದ ಇಂಡಿಯಾ ಇಂಟಿಗ್ರೇಟೆಡ್ ಟ್ರಾನ್ಸ್ ಪೋರ್ಟ್ ಆಂಡ್ ಲಾಜಿಸ್ಟಿಕ್ ಸಮ್ಮೇಳನದಲ್ಲಿ ಪ್ರತಿ ಕಿ.ಮೀಗೆ ಟೋಲ್ ಶುಲ್ಕ ವಿಧಿಸುವ ಬಗ್ಗೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಸುಳಿವು ನೀಡಿದ್ದರು.

    2015-16ರ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು 362 ಟೋಲ್ ಕೇಂದ್ರಗಳು ಸ್ಥಾಪನೆಯಾಗಿತ್ತು. ಈ ಎಲ್ಲ ಟೋಲ್‍ಗಳಿಂದ ವಾರ್ಷಿಕ ಒಟ್ಟು 17,250 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಕೇಂದ್ರ ಸರ್ಕಾರ ಪ್ರಸ್ತುತ 96 ಸಾವಿರ ಕಿ.ಮೀ ಉದ್ದವಿರುವ ರಾಷ್ಟ್ರೀಯ ಹೆದ್ದಾರಿಯನ್ನು 2019ರ ವೇಳೆ 2 ಲಕ್ಷ ಕಿ.ಮೀಗೆ ಏರಿಸುವ ಗುರಿಯನ್ನು ಹಾಕಿಕೊಂಡಿದೆ.

    ಕಿ.ಮೀಗೆ ಟೋಲ್ ಸಂಗ್ರಹಿಸುವುದು ಕಷ್ಟದ ಕೆಲಸವಾಗಿದ್ದು, ಸರ್ಕಾರದ ಈ ನೀತಿಯನ್ನು ಕಂಪೆನಿಗಳು ಹೇಗೆ ಸ್ವೀಕರಿಸುತ್ತದೆ ಎನ್ನುವುದು ಗೊತ್ತಿಲ್ಲ. ಒಂದೊಂದು ಟೋಲ್‍ನಿಂದ ಪ್ರವೇಶಿಸಿದ ವಾಹನ ರಸ್ತೆಯಲ್ಲಿ ಇಷ್ಟೇ ದೂರವನ್ನು ಕ್ರಮಿಸಿದೆ ಎಂದು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಆದರೆ ಸ್ಮಾರ್ಟ್ ಐಟಿ, ಡಿಜಿಟಲ್ ಪಾವತಿ ವ್ಯವಸ್ಥೆ ತಂದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.