Tag: ಸಾರಿಗೆ ಸಚಿವ

  • ಇಂಧನ ಬೆಲೆ ಏರಿಕೆ ನಡುವೆಯೇ ಹಸಿರು ಹೈಡ್ರೋಜನ್‌ ಕಾರಿನಲ್ಲಿ ಪಾರ್ಲಿಮೆಂಟ್‌ಗೆ ಬಂದ ನಿತಿನ್‌ ಗಡ್ಕರಿ

    ಇಂಧನ ಬೆಲೆ ಏರಿಕೆ ನಡುವೆಯೇ ಹಸಿರು ಹೈಡ್ರೋಜನ್‌ ಕಾರಿನಲ್ಲಿ ಪಾರ್ಲಿಮೆಂಟ್‌ಗೆ ಬಂದ ನಿತಿನ್‌ ಗಡ್ಕರಿ

    ನವದೆಹಲಿ: ದಿನೇ ದಿನೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಇಂತಹ ಸನ್ನಿವೇಶದಲ್ಲೇ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ತಮ್ಮ ನಿವಾಸದಿಂದ ಸಂಸತ್‌ಗೆ ಹಸಿರು ಹೈಡ್ರೋಜನ್‌ ಚಾಲಿತ ಕಾರಿನಲ್ಲಿ ಆಗಮಿಸಿ ಗಮನ ಸೆಳೆದಿದ್ದಾರೆ.

    ಕಾರು ಪೂರ್ಣ ಟ್ಯಾಂಕ್‌ನಲ್ಲಿ 600 ಕಿ.ಮೀ. ಕ್ರಮಿಸಬಹುದೆಂದು ವರದಿಯಾಗಿದೆ. ಇದು ಪ್ರತಿ ಕಿ.ಮೀ.ಗೆ ಕೇವಲ 2 ರೂ. ಪ್ರಯಾಣದ ವೆಚ್ಚವನ್ನು ತರುತ್ತದೆ. ವಾಹನದ ಇಂಧನ ಟ್ಯಾಂಕ್ ತುಂಬಲು ಇದು ಕೇವಲ ಐದು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನೂ ಓದಿ: 8ನೇ ಬಾರಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    ಸಚಿವರು ಕಾರಿನ ಮುಂಭಾಗದ ಸೀಟಿನಲ್ಲಿ ಚಾಲಕನ ಪಕ್ಕದಲ್ಲಿ ಕುಳಿತು ಪಾರ್ಲಿಮೆಂಟ್‌ಗೆ ಆಗಮಿಸಿದರು. ಬಿಳಿ ಬಣ್ಣದ ಕಾರು ಹಸಿರು ನಂಬರ್ ಪ್ಲೇಟ್ ಅನ್ನು ಹೊಂದಿದ್ದು, ಇದನ್ನು ಇಲೆಕ್ಟ್ರಿಕ್‌ ವಾಹನಗಳಲ್ಲಿಯೂ ಬಳಸಲಾಗುತ್ತದೆ.

    ನಿತಿನ್ ಗಡ್ಕರಿ ಅವರು ಈಚೆಗಷ್ಟೇ ಭಾರತದ ಮೊದಲ ಹಸಿರು ಹೈಡ್ರೋಜನ್ ಆಧಾರಿತ ಸುಧಾರಿತ ಇಂಧನ ಕೋಶದ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ‘ಟೊಯೊಟಾ ಮಿರೈ’ ಅನ್ನು ಬಿಡುಗಡೆ ಮಾಡಿದ್ದರು. ಇದು ಭಾರತದಲ್ಲಿನ ಮೊದಲ ಯೋಜನೆಯಾಗಿದೆ ಎಂದು ಅವರು ಹೇಳಿದ್ದರು. ಇದನ್ನೂ ಓದಿ: ಒಂದೇ ವಾರದಲ್ಲಿ 6 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ..!

    ತಾವೇ ಹೈಡ್ರೋಜನ್ ಚಾಲಿತ ಕಾರನ್ನು ಬಳಸುವುದಾಗಿ ಸಚಿವರು ಜನವರಿಯಲ್ಲಿ ಘೋಷಿಸಿದ್ದರು. ಜಪಾನ್‌ನ ಟೊಯೊಟಾ ಕಂಪನಿಯು ಹಸಿರು ಹೈಡ್ರೋಜನ್‌ನಿಂದ ಚಲಿಸುವ ವಾಹನವನ್ನು ನನಗೆ ನೀಡಿದೆ. ನಾನು ಅದನ್ನು ಪೈಲಟ್ ಯೋಜನೆಯಾಗಿ (ಪರ್ಯಾಯ ಇಂಧನದಲ್ಲಿ) ಬಳಸುತ್ತೇನೆ ಎಂದು ಅವರು ಹೇಳಿದ್ದರು.

    ಕಳೆದ ಒಂಬತ್ತು ದಿನಗಳಲ್ಲಿ ಎಂಟನೇ ಬಾರಿಗೆ ಬುಧವಾರವು ಸಹ ಇಂಧನ ಬೆಲೆಯನ್ನು ಮತ್ತೆ ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಕ್ರಮವಾಗಿ ಲೀಟರ್‌ಗೆ 80 ಪೈಸೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಸತತ 7ನೇ ದಿನವೂ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ

    ರಾಷ್ಟ್ರ ರಾಜಧಾನಿಯಲ್ಲಿ ಒಂದು ಲೀಟರ್ ಪೆಟ್ರೋಲ್ 100.21 ರೂ. ಇದ್ದದ್ದು ಈಗ 101.01 ರೂ. ಆಗಿದೆ. ಡೀಸೆಲ್ ಬೆಲೆ ಲೀಟರ್‌ಗೆ 91.47 ಇದ್ದದ್ದು ಈಗ 92.27 ಕ್ಕೆ ಏರಿಕೆಯಾಗಿದೆ.

  • ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಿತ್ರದುರ್ಗ: ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾತಿಗೆ ಈಗ ಡಿಸಿಎಂ ಸವದಿ ದನಿಗೂಡಿಸಿದ್ದಾರೆ. ಬಿಎಂಟಿಸಿ, ಕೆಎಸ್‍ಆರ್ ಟಿಸಿಯ ಚಾಲಕ-ನಿರ್ವಾಹಕರಿಗೆ ಇನ್ನೂ ಸಂಬಳ ಆಗಿಲ್ಲ. ಕೇವಲ ಅಧಿಕಾರಿಗಳಿಗೆ ಮಾತ್ರ ಆಗಿದ್ದು, ಹಬ್ಬದಲ್ಲಿ ಬೋನಸ್, ಸ್ವೀಟ್ಸ್ ನಿರೀಕ್ಷೆಯಲ್ಲಿದ್ದ ಶ್ರಮಿಕ ವರ್ಗಕ್ಕೆ ಶಾಕ್ ಆಗಿದೆ.

    ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ ಅವರು, ಸಾರಿಗೆ ನೌಕರರ ಕ್ಷಮೆಯಾಚಿಸಿದರು. ಹಬ್ಬಕ್ಕೆ ಮುಂಚಿತವಾಗಿ ಸಂಬಳ ನೀಡಬೇಕಿತ್ತು. ಆದರೆ ಸಾರಿಗೆ ನಿಗಮದಲ್ಲಿ ಹಣದ ಕೊರತೆ ಇದ್ದು, ಅ.9ಕ್ಕೆ ಸಂಬಳ ಸಂದಾಯ ಮಾಡುತ್ತೇವೆ. ಹುಬ್ಬಳ್ಳಿ, ಕಲಬುರಗಿ ವಿಭಾಗದಲ್ಲಿ ಸಂಬಳ ತಡವಾಗಿದೆ. ಚಾಲಕ, ನಿರ್ವಾಹಕರು ಸಹಕಾರ ನೀಡಲು ಮನವಿ ಮಾಡುತ್ತೇನೆ ಎಂದರು.

    ಇದೇ ವೇಳೆ ಬಿಜೆಪಿ ನಾಯಕರ ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಎಸ್‍ವೈ ಪ್ರಶ್ನಾತೀತ ನಾಯಕರಾಗಿದ್ದು, ಈಗಲೂ ಯಡಿಯೂರಪ್ಪ ನಮ್ಮ ನಾಯಕರು, ಮುಂದೆಯೂ ನಾಯಕರು. ಅವರ ಕೈ ಬಲಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರದ ಸಿಗುವ ವಿಶ್ವಾಸವಿದೆ ಎಂದರು.

  • ಮನೆ ಬಾಗಿಲಿಗೆ ಬಿಎಂಟಿಸಿ ಬಸ್ ಕರೆಸಿಕೊಂಡು 1 ಗಂಟೆ ಕಾಯಿಸಿದ ಸಾರಿಗೆ ಸಚಿವ

    ಮನೆ ಬಾಗಿಲಿಗೆ ಬಿಎಂಟಿಸಿ ಬಸ್ ಕರೆಸಿಕೊಂಡು 1 ಗಂಟೆ ಕಾಯಿಸಿದ ಸಾರಿಗೆ ಸಚಿವ

    – ವೋಲ್ವೋ ಬಸ್ಸಿನಲ್ಲಿ ಸಾರಿಗೆ ಸಚಿವ ಸುತ್ತಾಟ
    – ಶೀಘ್ರವೇ ನೆರೆಪರಿಹಾರ ಬಿಡುಗಡೆ

    ಬೆಂಗಳೂರು: ಬಿಎಂಟಿಸಿ ಬಸ್ಸನ್ನು ತನ್ನ ಮನೆ ಬಾಗಿಲಿಗೇ ಕರೆಸಿಕೊಂಡು ಸರಿ ಸುಮಾರು 1 ಗಂಟೆಗಳ ಕಾಲ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಕಾಯಿಸಿದ ಪ್ರಸಂಗ ಇಂದು ನಡೆಯಿತು.

    ಬಸ್ ಪ್ರಿಯಾರಿಟಿ ಲೇನ್ ಯೋಜನೆ ಜಾರಿ ಕುರಿತಾದ ಪರಿಶೀಲನೆಗೆ ಸಾರಿಗೆ ಸಚಿವರು ನಗರ ಪ್ರದಕ್ಷಿಣೆ ಹಾಕುವ ಹಿನ್ನೆಲೆಯಲ್ಲಿ ಬಸ್ಸನ್ನು ತಮ್ಮ ಮನಗೆ ಕರೆಸಿಕೊಂಡಿದ್ದಾರೆ. ಹೀಗಾಗಿ ಡಿಸಿಎಂ ಅವರ ಒಂದೇ ಒಂದು ಮಾತಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಮನೆ ಮುಂದೆ ಬಂದು ನಿಂತಿತ್ತು.

    ಬೆಳಗ್ಗೆ 8 ಗಂಟೆಗೆ ಜಹಮಹಾಲ್ ನ ತಮ್ಮ ಮನೆಯಿಂದ ಡಿಸಿಎಂ ಹೊರಟಿದ್ದಾರೆ. ತಾವು ಮನೆಯಿಂದ ಹೊರ ಬರುತ್ತಿದ್ದಂತೆಯೇ ಬಸ್ ರೆಡಿ ಇರಬೇಕು ಎಂದು ಡಿಸಿಎಂ ಸೂಚಿಸಿದ್ದರು. ಹೀಗಾಗಿ ವೋಲ್ವೋ ಬಸ್ 7 ಗಂಟೆಗೆನೇ ಮನೆ ಮುಂದೆ ಬಂದು ನಿಂತಿತ್ತು. ಬಸ್ ಬಂದ 1 ಗಂಟೆ ಬಳಿಕ ತಮ್ಮ ನಿವಾಸಕ್ಕೆ ಬಂದು ಸಚಿವರು ಬಸ್ ಹತ್ತಿದ್ದಾರೆ. ಬಸ್ ನಿಂತಿದ್ದ ರೋಡಲ್ಲಿ ವಾಕ್ ಮಾಡುವವರಿಗೂ ಸ್ವಲ್ಪ ಓಡಾಡೋಕೆ ಅಡಚಣೆ ಉಂಟಾಯಿತು.

    ಸಾರಿಗೆ ಸಚಿವರಾದ ಬಳಿಕ ಲಕ್ಷ್ಮಣ್ ಸವದಿ ಮೊದಲ ಬಾರಿಗೆ ಬಿಎಂಟಿಸಿ ವೋಲ್ವೋ ಬಸ್‍ನಲ್ಲಿ ನಗರ ಸಂಚಾರ ಮಾಡಿದರು. ಪ್ರಯಾಣಿಕರಿಗೆ ಅಗತ್ಯವಾದ ರಸ್ತೆ ಸುಧಾರಿತ ಪ್ರಯಾಣ, ಕಡಿಮೆ ಅವಧಿಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸುವುದು, ಹೆಚ್ಚಿನ ಜನರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಆಕರ್ಷಿಸುವ ನಿಟ್ಟಿನಲ್ಲಿ, ಬಸ್ ಕಾರಿಡಾರ್ ಗಳನ್ನು ರಚಿಸಲು ಯೋಜನೆ ಹಾಗೂ ಮೊದಲನೇ ಹಂತವಾಗಿ ಟಿನ್ ಫ್ಯಾಕ್ಟರಿಯಿಂದ ಸೆಂಟ್ರಲ್‍ನ ಸಿಲ್ಕ್ ಬೋರ್ಡ್ ರಸ್ತೆ ಮಾರ್ಗ ಬಳಕೆ ಮಾಡುವುದರ ಕುರಿತು ಪರಿಶೀಲನೆ ನಡೆಸಿದ್ದಾರೆ.

    ಸಿಬ್ಬಂದಿಗೆ 5,000 ನೀಡಿದ ಸಚಿವ:
    ಇಂದು ಗಾಂಧಿ ಜಯಂತಿಯ ದಿನವಾಗಿದ್ದರಿಂದ ಸ್ವೀಟ್ ತಿನ್ನಿ ಎಂದು ಡಿಪೋ ತಾಂತ್ರಿಕ ಸಿಬ್ಬಂದಿಗೆ ಸಚಿವರು 5 ಸಾವಿರವನ್ನು ನೀಡಿದರು. ಹೆಚ್ ಎಸ್ ಆರ್ ಲೇಔಟ್ ನ ವೋಲ್ವೋ ಡಿಪೋ 25 ಕ್ಕೆ ಭೇಟಿ ನೀಡಿದ್ದ ಲಕ್ಷ್ಮಣ ಸವದಿ, ಡಿಪೋಗೆ ಭೇಟಿ ನೀಡಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

    ಭೇಟಿ ಮುಗಿದ ಹೋಗುವ ಸಮಯದಲ್ಲಿ ತಾಂತ್ರಿಕ ನೌಕರರಿಗೆ ಐದು ಸಾವಿರ ಹಣ ನೀಡಿದರು. ಅಲ್ಲದೆ ಯಾವುದೇ ತಪ್ಪು ಮಾಡದಂತೆ, ಚೆನ್ನಾಗಿ ಕೆಲಸ ಮಾಡಿ ಎಂದು ಸಲಹೆ ಕೂಡ ನೀಡಿದರು. ಸಾರಿಗೆ ಸಚಿವರ ಭೇಟಿಯಿಂದ ಡಿಪೋ ನೌಕರರು ಖುಷಿಯಾದರು.

    ಏಕಕಾಲದಲ್ಲಿ 5 ರಾಜ್ಯಗಳಿಗೆ ಪರಿಹಾರ:
    ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಕುರಿತು ಮಾತನಾಡಿದ ಸಚಿವರು, ಪ್ರವಾಹ ವಿಚಾರ ಕೇಂದ್ರ ಸರ್ಕಾರದ ಗಮನದಲ್ಲಿದೆ. 5 ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾಗಿದೆ. ಎಲ್ಲಾ 5 ರಾಜ್ಯಗಳಿಗೆ ಏಕಕಾಲಕ್ಕೆ ಬಿಡುಗಡೆ ಮಾಡುತ್ತಾರೆ. ಕೇಂದ್ರ ಗೃಹಸಚಿವರು ಈ ಭರವಸೆ ನೀಡಿದ್ದಾರೆ. ಕೇಂದ್ರದ ನೆರವಿಗೆ ಕಾಯದೆ 2 ಸಾವಿರ ಕೋಟಿ ಈಗಾಗಲೇ ವಿತರಣೆ ಆರಂಭಿಸಿದ್ದೇವೆ. ನಾಳೆ ಸಚಿವ ಸಂಪುಟ ಸಭೆ ಬಳಿಕ ಮನೆ ಕಳೆದುಕೊಂಡವರಿಗೆ 5 ಲಕ್ಷದಲ್ಲಿ ಆರಂಭಿಕವಾಗಿ ನಾಳೆ 1 ಲಕ್ಷ ವಿತರಣೆ ಮಾಡುತ್ತೇವೆ. ಸಾಂತ್ವನ ಹೇಳೋದರಲ್ಲಿ ತಪ್ಪಿಲ್ಲ. ನಮಗೆ ಕೇಂದ್ರದ ಮೇಲೆ ವಿಶ್ವಾಸ ಇದೆ. ನೆರೆ ಪರಿಹಾರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.

  • ಸರ್ಕಾರ ಸೂಚನೆ ಕೊಟ್ಟರೂ ಹೊಸ ಟ್ರಾಫಿಕ್ ದಂಡವೇ ಪ್ರಯೋಗ!

    ಸರ್ಕಾರ ಸೂಚನೆ ಕೊಟ್ಟರೂ ಹೊಸ ಟ್ರಾಫಿಕ್ ದಂಡವೇ ಪ್ರಯೋಗ!

    – ಪೊಲೀಸರಿಗೆ ಇನ್ನೂ ಕೂಡ ಆದೇಶವೇ ತಲುಪಿಲ್ಲವಂತೆ

    ಬೆಂಗಳೂರು: ಸರ್ಕಾರ ಸೂಚನೆ ಕೊಟ್ಟರೂ ಟ್ರಾಫಿಕ್ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರಿಗೆ ಹೊಸ ದಂಡವನ್ನೇ ಪ್ರಯೋಗಿಸುತ್ತಿದ್ದಾರೆ.

    ದುಬಾರಿ ದಂಡದ ವಿಚಾರವಾಗಿ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಜ್ಯ ಸರ್ಕಾರವು ಹೊಸ ಟ್ರಾಫಿಕ್ ದಂಡದ ಮೊತ್ತವನ್ನು ಕಡಿಮೆ ಮಾಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಹಳೆಯ ದಂಡವನ್ನು ತೆಗೆದುಕೊಳ್ಳಬೇಕು ಎಂದು ಟ್ರಾಫಿಕ್ ಪೊಲೀಸರಿಗೆ ಮೌಖಿಕ ಆದೇಶ ನೀಡಿದೆ. ಆದರೆ ಈ ಆದೇಶವು ಪೊಲೀಸರಿಗೆ ಇನ್ನೂ ಕೂಡ ತಲುಪಿಲ್ಲವಂತೆ. ಅಷ್ಟೇ ಅಲ್ಲದೆ ದಂಡದ ವಿಚಾರದಲ್ಲಿ ಗೊಂದಲ ಏರ್ಪಟ್ಟಿದ್ದು, ಪೊಲೀಸರು ಹೊಸ ದಂಡವನ್ನೇ ಪಡೆಯುತ್ತಿದ್ದಾರೆ.

    ಸರ್ಕಾರ ಹಳೆಯ ದಂಡ ತೆಗೆದುಕೊಳ್ಳುವುದಕ್ಕೆ ಮೌಖಿಕ ಆದೇಶ ಕೊಡುತ್ತದೆ. ಆದರೆ ದಂಡ ಹಾಕುವ ಮಷೀನ್‍ಗಳಲ್ಲಿ ದಂಡದ ಮೊತ್ತ ಎಲ್ಲಾ ಅಪಡೆಟ್ ಆಗಿದೆ. ಹೆಲ್ಮೆಟ್ ಫೈನ್ ಅಂತ ಹಾಕಿದರೆ 1,000 ರೂ. ಅಂತ ಬರುತ್ತದೆ. ಹಳೆಯ ದಂಡ ಕೇವಲ 100 ರೂ. ಮಾತ್ರ. ಪೇಪರ್ ನಲ್ಲಿ ಬರೆದು ದಂಡ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಅಧಿಸೂಚನೆ ಸಿಗದೆ ಮಷೀನ್‍ಗಳನ್ನು ಅಪ್‍ಡೇಟ್ ಮಾಡುವುದಕ್ಕೆ ಸಾಧ್ಯವಿಲ್ಲ. ಹಳೆಯ ದಂಡಕ್ಕೆ ಮಷೀನ್‍ಗಳನ್ನು ಅಪ್‍ಡೇಟ್ ಮಾಡುವುದಕ್ಕೆ ಮೂರು ದಿನಗಳಾದರೂ ಬೇಕು ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು, ಸಂಚಾರ ನಿಯಮ ಉಲ್ಲಂಘಿಸಿದ ಚಾಲಕರು ಹಾಗೂ ಸವಾರರಿಂದ ಹೊಸ ದಂಡವನ್ನು ಪಡೆಯಬೇಡಿ ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇವೆ. ಅಷ್ಟೇ ಅಲ್ಲದೆ ಈ ಹಿಂದೆ ಇದ್ದ ದಂಡದ ಮೊತ್ತವನ್ನು ಪಡೆಯಬೇಕು ತಿಳಿಸಲಾಗಿದೆ. ಕಾನೂನು ಇಲಾಖೆ ಜೊತೆಗೆ ಚರ್ಚೆ ನಡೆಸಿ ದಂಡ ಪರಿಷ್ಕರಣೆ ಮಾಡಲಾಗುತ್ತದೆ. ಈ ಸಂಬಂಧ ಬೇರೆ ಬೇರೆ ರಾಜ್ಯಗಳಿಂದ ವರದಿ ತರಿಸಿಕೊಳ್ಳುತ್ತಿದ್ದೇವೆ. ಗುಜರಾತ್‍ನಲ್ಲಿ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ಅದನ್ನು ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

    ಬೆಂಗಳೂರಿನಲ್ಲಿ ಟ್ರಾಫಿಕ್ ದಂಡವನ್ನ ಕಡಿಮೆ ಮಾಡುವ ಪ್ರಸ್ತಾವನೆ ಬಂದಿಲ್ಲ. ಸರ್ಕಾರದ ಆದೇಶ ಬಂದ ಮೇಲೆ ಆದೇಶದಲ್ಲಿ ಏನಿರುತ್ತೆ ನೋಡಿಕೊಂಡು ಟ್ರಾಫಿಕ್ ಪೈನ್‍ನಲ್ಲಿ ಬದಲಾವಣೆ ಮಾಡುತ್ತೇವೆ. ಆದೇಶ ಬರುವವರೆಗೂ ದಂಡದಲ್ಲಿ ಯಾವುದೇ ಬದಲಾವಣೆ ಸದ್ಯಕ್ಕಿಲ್ಲ. ಸಾರಿಗೆ ಸಚಿವರು ಹೇಳಿಕೆ ಕೊಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪ್ರಮಾಣದಲ್ಲಿ ಆಗುವ ಸಣ್ಣ ಪುಟ್ಟ ನಿಯಮ ಉಲ್ಲಂಘಟನೆಗೆ ನೋಡಿ ದಂಡ ಪ್ರಯೋಗ ಮಾಡುವಂತೆ ಹೇಳಿದ್ದಾರೆ. ಅದನ್ನು ಮಾಡಲು ಟ್ರಾಫಿಕ್ ಪೊಲೀಸರಿಗೆ ಸೂಚಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.

    ಶಿಸ್ತು ಕಾಪಾಡಲು ದಂಡ ಇರುತ್ತದೆಯೇ ಹೊರತು ನಾವು ಮುಂದೆ ತಪ್ಪು ಮಾಡುತ್ತೇವೆ. ನಮಗೆ ದಂಡ ಕಡಿಮೆ ಮಾಡಿ ಅಂತ ಹೇಳುವುದಕ್ಕಲ್ಲ. ಈಗ ಇರುವ ದಂಡವು ಸರಿಯಾಗಿದೆ. ರಸ್ತೆ ಅಪಘಾತದಿಂದಾಗಿ ಪ್ರತಿ ವರ್ಷ ದೇಶದಲ್ಲಿ 1.5 ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರತಿ ದಿನ ಸುಮಾರು 35 ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.

    ಹಳೆಯ ದಂಡ:
    ಹಳೆಯ ದಂಡದಲ್ಲಿ ರಸ್ತೆ ನಿಯಮ ಉಲ್ಲಂಘನೆಗೆ 100 ರೂ., ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಗೆ 100 ರೂ, ಪರವಾನಿಗೆ ಇಲ್ಲದೆ ವಾಹನ ಚಾಲನೆಗೆ 1,000 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ 500 ರೂ. ಹಾಗೂ ಅತಿವೇಗಕ್ಕೆ 400 ರೂ. ವಿಧಿಸಲಾಗುತ್ತಿತ್ತು. ಜೊತೆಗೆ ಮದ್ಯ ಸೇವಿಸಿ ವಾಹನ ಚಾಲನೆಗೆ 2,500 ರೂ., ವೇಗ ಮತ್ತು ರೇಸಿಂಗ್‍ಗೆ 500 ರೂ., ಸೀಟ್ ಬೆಲ್ಟ್ 100 ರೂ. ಹಾಗೂ ಇನ್ಸೂರೆನ್ಸ್ ಇಲ್ಲದಿದ್ದರೆ 1000 ರೂ. ದಂಡದ ಮೊತ್ತವಿತ್ತು.

  • ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ವಾರ್

    ಸಾರಿಗೆ ಸಚಿವರ ವಿರುದ್ಧ ಸಾರಿಗೆ ನೌಕರರ ವಾರ್

    ಬೆಂಗಳೂರು: ಇಂದು ನಗರದಲ್ಲಿ ಬಿಎಂಟಿಸಿ ಬಸ್ ಇರುತ್ತಾ ಇಲ್ವಾ, ಸಾರಿಗೆ ನೌಕರರ ಬೆಂಗಳೂರು ಚಲೋ ರ‍್ಯಾಲಿಯಿಂದಾಗಿ ಹೀಗೊಂದು ಪ್ರಶ್ನೆ ಮೂಡಿದೆ. ಸಾರಿಗೆ ಸಚಿವರ ವಿರುದ್ಧ ಸಮರ ಸಾರಿರರುವ ನೌಕರರು ಇಂದು ಬೀದಿಗಿಳಿಯಲಿದ್ದಾರೆ.

    ಇಂದು ಬಿಎಂಟಿಸಿ, ಕೆಎಸ್‍ಆರ್ ಟಿಸಿ ಸೇರಿದಂತೆ ಸರ್ಕಾರಿ ಸಾರಿಗೆ ವ್ಯವಸ್ಥೆಯ ಸೇವೆಯಲ್ಲಿ ಕೊಂಚ ವ್ಯತ್ಯಯವಾಗುವ ಸಾಧ್ಯತೆ ಇದೆ. ಏಕೆಂದರೆ ಇಂದು ನಾಲ್ಕು ಸಾರಿಗೆ ನಿಗಮದ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಬೆಂಗಳೂರು ಚಲೋ ನಡೆಸಲಿದ್ದು ಬೀದಿಗಿಳಿಯಲಿದ್ದಾರೆ. ಸಾರಿಗೆ ಕಾರ್ಮಿಕ ಸಂಘಟನೆ ಸಿಐಟಿಯು ಉಪಾಧ್ಯಕ್ಷ ಅನಂತ ಸುಬ್ಬರಾವ್ ಈ ಬೆಂಗಳೂರು ಚಲೋಗೆ ಕರೆಕೊಟ್ಟಿದ್ದು, ಸಾರಿಗೆ ಸಚಿವರ ವಿರುದ್ಧ ಈ ವಾರ್ ಎಂದಿದ್ದಾರೆ. ಹಾಗಿದ್ರೆ ಈ ರ‍್ಯಾಲಿಗೆ ಏನ್ ಕಾರಣ, ಎಷ್ಟು ಜನ ನೌಕರರು ಭಾಗಿಯಾಗಲಿದ್ದಾರೆ ಜನ್ರಿಗೇನು ಸಮಸ್ಯೆಯಾಗಲಿದೆ ಎನ್ನವುದು ನೋಡೋದಾದರೆ.

    ಸಾರಿಗೆ ಸಚಿವರ ವಿರುದ್ಧ ನೌಕರರ ಕೋಪ ಯಾಕೆ;
    1. ಸಾರಿಗೆ ನಿಗಮ ನಷ್ಟದ ಹಾದಿಯಲ್ಲಿದೆ. ಇದು ಉದ್ದೇಶಪೂರ್ವಕ, ಸಾರಿಗೆ ನಿಗಮವನ್ನು ನಷ್ಟದ ನೆಪವೊಡ್ಡಿ ಖಾಸಗೀಕರಣ ಮಾಡಲಿದ್ದಾರೆ.
    2. ಸಾರಿಗೆ ನೌಕರರಿಗೆ ಡಿಸಿ ತಮ್ಮಣ್ಣ ಬಂದ ಬಳಿಕ ಸರಿಯಾದ ವೇತನ ಸಿಗುತ್ತಿಲ್ಲ, ಪಿಎಫ್ ದುಡ್ಡು, ಇನ್ಸೂರೆನ್ಸ್ ಹಣ ಪಾವತಿ ಮಾಡುತ್ತಿಲ್ಲ. ನೌಕರರಿಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಿಗದಿತ ಸಂದರ್ಭದಲ್ಲಿ ವೇತನ ಪಾವತಿಸಬೇಕು ಎನ್ನುವುದು ಬೇಡಿಕೆ.
    3. ಡಿಸಿ ತಮ್ಮಣ್ಣ ಎಂದ್ರೆ ‘ಡೈರೆಕ್ಟ್ ಕಲೆಕ್ಷನ್’ ಅಂತಾ. ಸಿಎಂ ಸಂಬಂಧಿಯಾಗಿರೋದ್ರಿಂದ ಅವರು ಇದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ನಿಗಮದ ಕಾರ್ಮಿಕ ಸಂಘಟನೆಗಳ ಆರೋಪ
    4. ಸಾರಿಗೆ ನಿಗಮ ಕೋಟಿ ಕೋಟಿ ಲೆಕ್ಕದಲ್ಲಿ ನಷ್ಟದಲ್ಲಿದೆ. ಬೇಕಾಬಿಟ್ಟಿ ಸಾಲವನ್ನು ಕೂಡ ಮಾಡಲಾಗಿದೆ.
    5. ವಿದ್ಯಾರ್ಥಿಗಳ ಪಾಸ್ ದುಡ್ಡನ್ನು ಸರ್ಕಾರ ನಿಗಮಕ್ಕೆ ನೀಡಿಲ್ಲ ಬಾಕಿ ಇಟ್ಟುಕೊಂಡಿದೆ.

    ರ‍್ಯಾಲಿ ಹೇಗಿರಲಿದೆ?
    * ಶುಕ್ರವಾರ 11 ಗಂಟೆಗೆ, ಲಾಲ್‍ಬಾಗ್‍ನಿಂದ ಶಾಂತಿನಗರದ ಕೆಎಸ್‍ಆರ್ ಟಿಸಿ ಮುಖ್ಯ ಕಚೇರಿಯವರೆಗೆ ರ‍್ಯಾಲಿ ನಡೆಯಲಿದೆ.
    * ರಾಜ್ಯಾದ್ಯಾಂತ ಸಾರಿಗೆ ನೌಕರರು ಹಾಗೂ ಬಿಎಂಟಿಸಿ ಚಾಲಕ ನಿರ್ವಾಹಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
    * ಕರ್ತವ್ಯಕ್ಕೆ ಹಾಜರಾಗದೇ ರ‍್ಯಾಲಿಯಲ್ಲಿ ಪಾಲ್ಗೊಳ್ಳೋದ್ರಿಂದ ಬಸ್ ಸೇವೆಯಲ್ಲಿ ವ್ಯತ್ಯಯವಾಗಬಹುದು.
    * ಆದರೆ ನಾಳೆಯ ರ‍್ಯಾಲಿಗೆ ಕಡ್ಡಾಯವಾಗಿ ಸಿಬ್ಬಂದಿಗಳಿಗೆ ಭಾಗವಹಿಸುವಂತೆ ಸೂಚಿಸಿಲ್ಲ. ಆದರೆ ತಮ್ಮ ಬೇಡಿಕೆ ಈಡೇರಿಕೆಗಾಗಿ ನೌಕರರು ಸ್ವಯಂಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಭಾಗಿಯಾದರೆ ಜನರಿಗೆ ತೊಂದರೆಯಾಗಲಿದೆ.
    * ಮೂರು ಸಾವಿರ ಜನ ಸೇರೋದ್ರಿಂದ ಶಾಂತಿನಗರ, ಲಾಲ್ ಬಾಗ್ ರಸ್ತೆ, ಜಯನಗರ ಅಸುಪಾಸು ಟ್ರಾಫಿಕ್ ಬಿಸಿ ತಟ್ಟಬಹುದು.

  • ಪಕ್ಷ ಬಯಸಿದರೆ ರಾಜೀನಾಮೆಗೆ ಸಿದ್ಧ – ಸಚಿವ ಡಿಸಿ ತಮ್ಮಣ್ಣ

    ಪಕ್ಷ ಬಯಸಿದರೆ ರಾಜೀನಾಮೆಗೆ ಸಿದ್ಧ – ಸಚಿವ ಡಿಸಿ ತಮ್ಮಣ್ಣ

    ಮಂಡ್ಯ: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇನೆ. ಅಲ್ಲದೇ ಪಕ್ಷ ಬಯಸಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೂಡ ನಾನು ಸಿದ್ಧ ಎಂದು ಸಾರಿಗೆ ಸಚಿವ ರೇವಣ್ಣ ಅವರು ಹೇಳಿದ್ದಾರೆ.

    ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿಖಿಲ್ ಕುಮಾರಸ್ವಾಮಿ ಸೋಲಿನ ಹೊಣೆ ಹೊತ್ತ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಸೋಲಿನ ಹೊಣೆ ಹೊತ್ತುಕೊಂಡದ್ದು ಅವರ ದೊಡ್ಡ ಗುಣ, ಅದಕ್ಕೆ ಸೋಲಿನ ಹೊಣೆ ಅವರೇ ಹೊತ್ತಿದ್ದಾರೆ. ಆದರೆ ಲೋಕಸಭಾ ಚುನಾವಣೆಯ ಸೋಲಿನ ಪರಾಮರ್ಶೆ, ಆತ್ಮಾವಲೋಕನ ಮಾಡಲು ಹೋಗಲ್ಲ. ಏಕೆಂದರೆ ರಮ್ಯಾ ಅವರು ಉಪಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಲ್ಲಿ ಇಪ್ಪತ್ತು ಸಾವಿರ ಲೀಡ್ ಪಡೆದಿದ್ದರು. ಆ ಸಂದರ್ಭದ ಅಂಶಗಳು ಚುನಾವಣೆ ಮೇಲೆ ಪ್ರಭಾವ ಬೀರುತ್ತವೆ ಅಷ್ಟೇ ಎಂದರು.

    ಇದೇ ವೇಳೆ ಮದ್ದೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವುದಾಗಿ ತಿಳಿಸಿದ ಅವರು, ಒಳಚರಂಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ 196 ಕೋಟಿ ರೂ. ಹಾಗೂ ರಸ್ತೆ ಅಭಿವೃದ್ಧಿ ಹೊರತುಪಡಿಸಿ 111 ಕೋಟಿ ರೂ. ಬಿಡುಗಡೆಯಾಗಿದೆ ಎಂದರು. ಅಲ್ಲದೇ ರಾಜ್ಯ ಸರ್ಕಾರದ ಮುಂದೇ ಬಸ್ ಪ್ರಯಾಣ ದರ ಏರಿಕೆ ವಿಚಾರ ಇದ್ದು, ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು. ಇದನ್ನು ಓದಿ: ಫಲಿತಾಂಶದ ಹೊಣೆಯನ್ನು ನಾನೇ ಹೊರುತ್ತೇನೆ: ನಿಖಿಲ್ ಮೊದಲ ಪ್ರತಿಕ್ರಿಯೆ

  • ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್-1,016 ಹೋರಾಟಗಾರರು ಪ್ರಕರಣದಿಂದ ಖುಲಾಸೆ

    ಕಾವೇರಿ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್-1,016 ಹೋರಾಟಗಾರರು ಪ್ರಕರಣದಿಂದ ಖುಲಾಸೆ

    ಬೆಂಗಳೂರು: ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟಗಾರರಿಗೆ ಸಂತಸದ ಸುದ್ದಿ ನೀಡಿದ್ದು, ಕಾವೇರಿ ನದಿ ನೀರಿನ ವಿಷಯವಾಗಿ ನಡೆದ ಪ್ರತಿಭಟನೆಗಳಲ್ಲಿ ದಾಖಲಾಗಿದ್ದ 51 ಪಕ್ರರಣಗಳನ್ನ ಹಿಂಪಡೆದಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಮಾಹಿತಿ ನೀಡಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಸರ್ಕಾರದ ನಿರ್ಧಾರದಿಂದ ಒಟ್ಟು 1,016 ಹೋರಾಟಗಾರರಿಗೆ ಪ್ರಕರಣಗಳಿಂದ ಮುಕ್ತಿ ಸಿಗಲಿದೆ. ಆದರೆ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದವರ ವಿರುದ್ಧದ ಪ್ರಕರಣಗಳನ್ನ ಸರ್ಕಾರ ವಾಪಸ್ ಪಡೆಯದೇ ಇರಲು ನಿರ್ಧಾರ ಮಾಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಮಂಡ್ಯದಲ್ಲಿ 14 ಪ್ರಕರಣಗಳಲ್ಲಿ 180 ಆರೋಪಿಗಳು, ಮದ್ದೂರಿನಲ್ಲಿ 6 ಪ್ರಕರಣಗಳಲ್ಲಿ 94 ಆರೋಪಿಗಳು, ಮಳವಳ್ಳಿಯಲ್ಲಿ 3 ಪ್ರಕರಣಗಳಲ್ಲಿ 36 ಆರೋಪಿಗಳು, ಶ್ರೀರಂಗಪಟ್ಟಣದಲ್ಲಿ 11 ಪ್ರಕರಣಗಳಲ್ಲಿ 74 ಆರೋಪಿಗಳು, ಕೆಆರ್ ಪೇಟೆಯಲ್ಲಿ 1 ಪ್ರಕರಣದಲ್ಲಿ ಒಬ್ಬ ಆರೋಪಿ, ಇನ್ನು ಪಾಂಡವಪುರದಲ್ಲಿ ದಾಖಲಾಗಿದ್ದ 16 ಪ್ರಕರಣಗಳಲ್ಲಿ 631 ಆರೋಪಿಗಳು ಖುಲಾಸೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

    ಮಂಡ್ಯ ಕಾವೇರಿ ಹೋರಾಟಗಾರರ ವಿರುದ್ಧ ಪ್ರಕರಣಗಳ ಬಗ್ಗೆ ಇಂದು ಮಾತನಾಡಿದ್ದ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರು, ಕಾವೇರಿ ಹೋರಾಟಗಾರರ ಮೇಲಿನ ಕೇಸನ್ನು ಸರ್ಕಾರ ವಾಪಸ್ ಪಡೆದ ಹಿನ್ನೆಲೆ ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ. ಕಾವೇರಿ ನೀರಿಗಾಗಿ ಹೋರಾಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ರೈತರು. ಅವರಿಗೆ ರೈತರ ಕಷ್ಟ ಗೊತ್ತು. ರೈತರು ಸ್ವಂತಕ್ಕೇನು ಹೋರಾಟ ಮಾಡಲಿಲ್ಲ. ಕಾವೇರಿ ನೀರಿಗಾಗಿ ಹೋರಾಡಿದ್ದರು. ರೈತರ ಕಷ್ಟ ಅರ್ಥ ಮಾಡಿಕೊಂಡು ಕೇಸುಗಳನ್ನು ಸಿಎಂ ವಾಪಸ್ ಪಡೆದಿದ್ದಾರೆ. ಆದರಿಂದ ಸಿಎಂ ಕುಮಾರಸ್ವಾಮಿ ಅವರಿಗೆ ಕೇಸು ವಾಪಸ್ ಪಡೆದಿದ್ದಕ್ಕೆ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮ ಯೋಧನ ಪುಣ್ಯತಿಥಿ ವೆಚ್ಚವನ್ನು ನಾನೇ ಭರಿಸುತ್ತೇನೆ: ಸಚಿವ ಡಿಸಿ ತಮ್ಮಣ್ಣ

    ಹುತಾತ್ಮ ಯೋಧನ ಪುಣ್ಯತಿಥಿ ವೆಚ್ಚವನ್ನು ನಾನೇ ಭರಿಸುತ್ತೇನೆ: ಸಚಿವ ಡಿಸಿ ತಮ್ಮಣ್ಣ

    ಮಂಡ್ಯ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮದ ಖರ್ಚು ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಜಿಲ್ಲೆಯ ಕೆಎಂ ದೊಡ್ಡಿಯಲ್ಲಿ ಮಾತನಾಡಿದ ಸಚಿವರು, ಗುರು ನಮ್ಮ ಊರಿನ ಯೋಧ ಆಗಿರುವುದರಿಂದ ನಾನೇ ಖರ್ಚು ಭರಿಸುತ್ತೇನೆ. ನಮ್ಮ ಬೆಂಬಲಿಗರು ಕೂಡ ಎಲ್ಲ ಕಾರ್ಯದಲ್ಲೂ ಸಹಾಯ ಮಾಡುತ್ತಾರೆ ಎಂದರು.

    ಗುರು ಸ್ಮಾರಕ:
    ಪುಣ್ಯಕಾರ್ಯದಂದು ಸುಮಾರು 4 ರಿಂದ 5 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಸಂಪ್ರದಾಯದಂತೆ ಏನೆಲ್ಲಾ ಊಟ ಮಾಡಬೇಕೆಂದು ನಿಗದಿ ಆಗಿಂದೆಯೋ ಎಲ್ಲವನ್ನೂ ಮಾಡುತ್ತೇವೆ. ಸದ್ಯದಲ್ಲೇ ಹುತಾತ್ಮ ಯೋಧ ಗುರು ಸ್ಮಾರಕ ಕೂಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

    ಜೆಡಿಎಸ್‍ಗೆ ನಷ್ಟವಿಲ್ಲ: ಇದೇ ವೇಳೆ ಸುಮಲತಾ ಅಂಬರೀಶ್ ಅವರ ಲೋಕಸಭಾ ಸ್ಪರ್ಧೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸುಮಲತಾ ಅವರು ನಮ್ಮ ಸಂಬಂಧಿಕರೇ ಆಗಿದ್ದಾರೆ. ಆದರೆ ಸಂಬಂಧ ಅಥವಾ ಪಕ್ಷ ಎಂದು ಬಂದಾಗ ನನಗೇ ಪಕ್ಷವೇ ಮುಖ್ಯವಾಗುತ್ತದೆ ಎಂದರು.

    ದೊಡ್ಡರಸಿನಕೆರೆ ಗ್ರಾಮದಲ್ಲಿರುವ ಸುಮಲತಾ ಅವರ ಸಂಬಂಧಿಕರ ಮೂಲಕ ಸಿಎಂ ಜೊತೆ ಮಾತನಾಡಿ ನಿರ್ಧಾರ ಮಾಡುವ ಬಗ್ಗೆ ಅವರಿಗೆ ತಿಳಿಸಲು ಹೇಳಿದ್ದೆ. ಆದರೆ ಅವರು ಬರಲಿಲ್ಲ. ಯಾರಿಗೆ ಅವಶ್ಯಕವಾಗಿದೆಯೋ ಅವರು ಮಾತುಕತೆಗೆ ಮುಂದಾಗಬೇಕು. ಆದರೆ ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಮಂಡ್ಯ ಲೋಕಸಭೆಗೆ ದೇವೇಗೌಡರೇ ಬಂದರೆ ಯಾವುದೇ ವಿವಾದ ಇಲ್ಲದಂತಾಗುತ್ತದೆ. ನಿಖಿಲ್ ಸ್ಪರ್ಧೆ ಮಾಡಿದರು ಕೂಡ ಸಂತೋಷ. ನನ್ನ ಮಗನಿಗೆ ಟಿಕೆಟ್ ಸಿಗದಿದ್ದಾಗಲೂ ನಾನು ಪಕ್ಷ ನಿಷ್ಠೆ ಮೆರೆದಿದ್ದೇನೆ. ಒಂದು ವೇಳೆ ಸುಮಲತಾ ಅವರು ಪಕ್ಷೇತರವಾಗಿ ಸ್ಪರ್ಧಿಸಿದರೂ ಜೆಡಿಎಸ್ ಗೆ ಏನೂ ಆಗುವುದಿಲ್ಲ ಎಂದು ಡಿಸಿ ತಮ್ಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.

    ಅಂಬರೀಶ್ ಹಾಗೂ ಡಿಸಿ ತಮ್ಮಣ್ಣ ಅವರು ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡ ದೊಡ್ಡರಸಿನಕೆರೆ ಗ್ರಾಮದವರಾಗಿದ್ದ ಪರಿಣಾಮ ಹೆಚ್ಚು ಆತ್ಮೀಯರಾಗಿದ್ದರು. ದೊಡ್ಡರಸಿನಕೆರೆ ಗ್ರಾಮಕ್ಕೆ ಬರುವ ಸಮಯದಲ್ಲಿ ಹೆಚ್ಚು ಸಲ ಸಚಿವ ಡಿಸಿ ತಮ್ಮಣ್ಣ ಅವರ ಕಾರಿನಲ್ಲೇ ಅಂಬರೀಶ್ ಆಗಮಿಸುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶಾವಳಿ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ: ನಿತಿನ್ ಗಡ್ಕರಿ

    ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶಾವಳಿ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ: ನಿತಿನ್ ಗಡ್ಕರಿ

    ಹೈದರಾಬಾದ್: ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟುತ್ತಿದ್ದ ವಂಶವಾಹಿ ರಾಜಕಾರಣಾ ಪದ್ಧತಿಯನ್ನು ನಾವು ಕಿತ್ತುಹಾಕಿದ್ದೇವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ತೆಲಂಗಾಣ ರಾಜಧಾನಿಯ ಬಿಜೆಪಿ ಯುವ ಮೋರ್ಚಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಿದ್ದಾಗಿನಿಂದ ಪ್ರಧಾನಿ ಹೊಟ್ಟೆಯಿಂದ ಪ್ರಧಾನಿಯ ಹುಟ್ಟು, ಮುಖ್ಯಮಂತ್ರಿಯ ಹೊಟ್ಟೆಯಿಂದ ಮುಖ್ಯಮಂತ್ರಿ ಹಾಗೂ ಸಂಸದನ ಹೊಟ್ಟೆಯಿಂದ ಸಂಸದ ಹುಟ್ಟುತ್ತಿದ್ದ ವಂಶವಾಹಿ ಪರಂಪರೆಯಿಂದ ಭಾರತದ ಪ್ರಜಾಪ್ರಭುತ್ವ ಇಲ್ಲವಾಗುವ ಹಂತಕ್ಕೆ ತಲುಪಿತ್ತು. ಆದರೆ ನಾವೀಗ ಅದನ್ನು ಕಿತ್ತುಹಾಕುವ ಮೂಲಕ ವಂಶ ರಾಜಕಾರಣಕ್ಕೆ ಅಂತ್ಯ ಹಾಡಿದ್ದೇವೆ ಎನ್ನುವ ಮೂಲಕ ವಂಶವಾಹಿ ರಾಜಕಾರಣವನ್ನು ಮುಂದುವರಿಸಿಕೊಂಡು ಬಂದಿದ್ದ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

    ಬಿಜೆಪಿ ಪಕ್ಷವು ಯಾವುದೇ ಒಂದು ಪರಿವಾರಕ್ಕೆ ಸೇರಿಲ್ಲ. ಜಾತಿ, ಧರ್ಮ ಹಾಗೂ ಭಾಷೆಯ ಆಧಾರದ ಮೇಲೆ ರಾಜಕಾರಣ ನಡೆಸುವ ಪಕ್ಷ ನಮ್ಮದಲ್ಲ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಎಂದೆಂದಿಗೂ ನಮ್ಮ ವರಿಷ್ಠ ನಾಯಕರು. ಅಲ್ಲದೇ ಎಲ್.ಕೆ.ಅಡ್ವಾಣಿಯವರು ಸಹ ನಮ್ಮ ವರಿಷ್ಠರೇ ಆದರೆ ಕೇವಲ ಅವರ ಹೆಸರಿನಿಂದ ನಮ್ಮ ಪಕ್ಷವನ್ನು ಯಾರು ಗುರುತಿಸಿಲ್ಲ. ಪ್ರಸ್ತುತ ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಮಿತ್ ಶಾ ರವರು ನೇಮಕಗೊಂಡಿದ್ದಾರೆ. ಆದರೆ ಇವುಗಳ ನೇತೃತ್ವ ಎಂದಿಗೂ ಬದಲಾಗುತ್ತಲೇ ಇರುತ್ತದೆ. ನಮ್ಮ ಪಕ್ಷ ಯಾವುದೇ ವ್ಯಕ್ತಿಯ ಹೆಸರಲ್ಲಿ ನಡೆಯುವುದಿಲ್ಲ. ನಮ್ಮ ಪಕ್ಷ ಕೇವಲ ಸಿದ್ಧಾಂತ ಮತ್ತು ಉದ್ದೇಶದ ಆಧಾರದ ಮೇಲೆ ನಡೆಯುತ್ತದೆ ಎಂದು ತಿಳಿಸಿದರು.

    ಈ ಹಿಂದೆ ಸುಮಾರು 60 ವರ್ಷಗಳ ದೇಶವನ್ನಾಳಿದ ಕೆಲವರು ಕೇವಲ ತಮ್ಮ ಕುಟುಂಬವನ್ನು ಮಾತ್ರ ಉದ್ಧಾರ ಮಾಡಿಕೊಂಡರು ಎನ್ನುವ ಮೂಲಕ ಪರೋಕ್ಷವಾಗಿ ನೆಹರು ಹಾಗೂ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ಪರ್ಮಿಟ್ ಇಲ್ಲ: ನಿತಿನ್ ಗಡ್ಕರಿ

    ಎಲೆಕ್ಟ್ರಿಕ್ ವಾಹನಗಳಿಗೆ ಯಾವುದೇ ಪರ್ಮಿಟ್ ಇಲ್ಲ: ನಿತಿನ್ ಗಡ್ಕರಿ

    ನವದೆಹಲಿ: ಎಲೆಕ್ಟ್ರಿಕ್ ಮತ್ತು ಪರ್ಯಾಯ ಇಂಧನಗಳನ್ನು ಬಳಸಿ ಚಾಲನೆಯಾಗುವ ವಾಹನಗಳು ಯಾವುದೇ ಪರ್ಮಿಟ್ ಇಲ್ಲದೇ ರಸ್ತೆಗಿಳಿಯಬಹುದೆಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ(ಎಸ್‍ಐಎಎಂ) ವಾರ್ಷಿಕ ಅಧಿವೇಶನದಲ್ಲಿ ಮಾತನಾಡಿದ ಅವರು ಎಲೆಕ್ಟ್ರಿಕ್ ಮತ್ತು ಪರ್ಯಾಯ ಇಂಧನ ಬಳಸಿ ಚಲಿಸುವ ವಾಹನಗಳಿಗೆ ಪ್ರೋತ್ಸಾಹ ನೀಡಲು ಎಲೆಕ್ಟ್ರಿಕಲ್ ವಾಹನ ಸೇರಿದಂತೆ, ಎಥೆನಾಲ್, ಬಯೋ ಡೀಸೆಲ್, ಸಿಎನ್‍ಜಿ ಹಾಗೂ ಬಯೋ ಇಂಧನಗಳ ಮೂಲಕ ಸಾಗುವ ವಾಹನಗಳಿಗೆ ರಸ್ತೆ ರಹದಾರಿಯನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದೇವೆ. ಇಂತಹ ವಾಹನಗಳಿಗೆ ಉಚಿತ ಪರ್ಮಿಟ್ ನೀಡುವ ಮೂಲಕ, ಸುಲಭವಾಗಿ ರಸ್ತೆಗಿಳಿಯುವಂತೆ ಮಾಡಲಾಗಿದೆ ಎಂದರು.

    ಆ್ಯಪ್ ಆಧಾರಿತಾ ಟ್ಯಾಕ್ಸಿ ಸೇವೆಗಳಾದ ಊಬರ್ ಹಾಗೂ ಓಲಾಗಳು ತಮ್ಮ ವಾಹನಗಳನ್ನು ಎಲೆಕ್ಟ್ರಿಕ್ ಮಾದರಿಗಳನ್ನು ಬಳಸುವ ಮೂಲಕ ರಸ್ತೆ ತೆರಿಗೆಗಳ ವಿನಾಯಿತಿ ಹೊಂದಬಹುದಾಗಿದೆ ಎಂದು ಈ ವೇಳೆ ಸಲಹೆ ನೀಡಿದರು. ಇದನ್ನೂ ಓದಿ:  2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ವಾಹನ ತಯಾರಿಕಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಮುಂದೆ ಬರುವುದಕ್ಕಾಗಿ ಈ ನಿರ್ಧಾರನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳಿಗೆ ಮೇಲೆ 12% ಜಿಎಸ್‍ಟಿ ಇದೆ. ಹೀಗಾಗಿ ಮತ್ತೆ ಯಾವುದೇ ಸಬ್ಸಿಡಿ ಅವಶ್ಯಕತೆ ಇರುವುದಿಲ್ಲ ಎಂದು ಯೋಚಿಸಿದ್ದೇನೆ. ಉತ್ತಮ ವಾತಾವರಣವನ್ನು ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ನಮ್ಮ ಇಲಾಖೆಯು ಈ ಬಗ್ಗೆ ವರದಿ ಸಿದ್ದಪಡಿಸಿದ್ದು, ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟ ಜಾಸ್ತಿಯಾಗುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಕೇಂದ್ರ ಸರ್ಕಾರವು 2015ರಲ್ಲಿ ಜಾರಿಗೆ ತಂದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಯೋಜನೆಗೆ ಈ ನಿರ್ಧಾರವು ಸಹಾಯಕವಾಗುತ್ತದೆ. ವಾಹನಗಳ ಮೇಲಿನ ಪರ್ಮಿಟ್ ತೆಗೆದು ಹಾಕಿರುವುದರಿಂದ ವಾಹನ ತಯಾರಿಕಾ ಸಂಸ್ಥೆಗಳ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಒತ್ತು ನೀಡಬೇಕು ಎಂದು ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv