Tag: ಸಾರಿಗೆ ಸಂಸ್ಥೆ

  • ಪ್ರಿಯಕರನನ್ನ ಹುಡುಕಿ ಬಂದ ಅಪ್ರಾಪ್ತೆ ಮೇಲೆ ಸಾರಿಗೆ ಬಸ್ ಕಂಡಕ್ಟರ್, ಚಾಲಕರಿಂದ ಗ್ಯಾಂಗ್‍ರೇಪ್!

    ಪ್ರಿಯಕರನನ್ನ ಹುಡುಕಿ ಬಂದ ಅಪ್ರಾಪ್ತೆ ಮೇಲೆ ಸಾರಿಗೆ ಬಸ್ ಕಂಡಕ್ಟರ್, ಚಾಲಕರಿಂದ ಗ್ಯಾಂಗ್‍ರೇಪ್!

    ಹಾವೇರಿ: ಸಹಾಯ ಅರಸಿ ಬಂದಾಕೆಯ ಮೇಲೆಯೇ ಕಾಮುಕರು ಎರಗಿ ಅತ್ಯಾಚಾರವೆಸಗಿರೋ ಘನಘೋರ ಕೃತ್ಯ ಪ್ರತಿಷ್ಠಿತ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಸಹಾಯ ಕೇಳಿಬಂದ ಅಪ್ರಾಪ್ತೆಗೆ ಸಹಾಯ ಮಾಡುವುದಾಗಿ ಕರೆದುಕೊಂಡು ಹೋದ ಕೀಚಕರು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಉಡುಪಿ ಮೂಲದ ಅಪ್ರಾಪ್ತೆ ತನ್ನ ಪ್ರಿಯಕರ ಹಾವೇರಿಯ ಹಿರೇಕೆರೂರು ಮೂಲದ ಯುವಕನನ್ನು ಹುಡುಕಿಕೊಂಡು ಬಂದಿದ್ದಳು. ಆದ್ರೆ ಪ್ರಿಯಕರ ಸಿಗದ ಕಾರಣ ತಡರಾತ್ರಿ ಮರಳಿ ಉಡುಪಿಗೆ ತೆರಳಲು ರಾಣೇಬೆನ್ನೂರಿಗೆ ಬಂದಿದ್ದಳು. ಈ ವೇಳೆ ತಾನು ಬಂದಿದ್ದ ಬಸ್‍ನ ಕಂಡಕ್ಟರ್, ಡ್ರೈವರ್ ಬಳಿ ಸಹಾಯ ಕೇಳಿದ್ದಳು.

    ಸಹಾಯ ಮಾಡೋ ಸೋಗಿನಲ್ಲಿ ಹಿರೇಕೆರೂರು ಡಿಪೋದ ಕಂಡಕ್ಟರ್ ವೈ.ಸಿ ಕಟ್ಟೆಕಾರ, ಡ್ರೈವರ್ ವಿ.ಆರ್ ಹಿರೇಮಠ ಹಾಗೂ ರಾಣೆಬೆನ್ನೂರು ಡಿಪೋದ ಡ್ರೈವರ್ ಕಂ ಕಂಡಕ್ಟರ್ ರಾಘವೇಂದ್ರ ಬಡಿಗೇರ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

    ಜೂನ್ 5ರಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್‍ನಲ್ಲಿ ಕೃತ್ಯ ನಡೆದಿದೆ. ಮಾರನೇ ದಿನ ಸುಧಾರಿಸಿಕೊಂಡು ಉಡುಪಿಗೆ ತೆರಳಿದ ಅಪ್ರಾಪ್ತೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಈ ದೂರನ್ನು ಆಧರಿಸಿ ಮೂವರು ಕಾಮುಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ್ದ ಕೆಎ47-ಎಫ್449 ಸಂಖ್ಯೆಯ ಬಸ್ ವಶಕ್ಕೆ ಪಡೆದಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಮೂವರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಮೂವರು ಕಾಮಾಂಧರಿಗೆ 15 ದಿನಗಳ ಕಾಲ ನ್ಯಾಯಂಗ ಬಂಧನ ವಿಧಿಸಲಾಗಿದೆ.