Tag: ಸಾರಿಗೆ ಮುಷ್ಕರ

  • ಖಾಸಗಿ ವಾಹನ ಮಾಲೀಕರ ಷರತ್ತಿಗೆ ಒಪ್ಪಿಗೆ – ಸರ್ಕಾರದ ಪರ್ಯಾಯ ವ್ಯವಸ್ಥೆ ಏನು?

    ಖಾಸಗಿ ವಾಹನ ಮಾಲೀಕರ ಷರತ್ತಿಗೆ ಒಪ್ಪಿಗೆ – ಸರ್ಕಾರದ ಪರ್ಯಾಯ ವ್ಯವಸ್ಥೆ ಏನು?

    ಬೆಂಗಳೂರು: ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ರಾಜ್ಯ ಸರ್ಕಾರ ಖಾಸಗಿ ವಾಹನಗಳಿಗೆ ಮಣೆ ಹಾಕಲು ನಿರ್ಧರಿಸಿದೆ.

    ಸಾವಿರ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್, ಮಿನಿ ಬಸ್, ಶಾಲಾ ಬಸ್, ಟಿಟಿ ಸೇರಿ ಒಟ್ಟು 32 ಸಾವಿರ ವಾಹನಗಳನ್ನು ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಸರ್ಕಾರ ನಿಗದಿ ಪಡಿಸಿದ ದರವನ್ನು ಪ್ರಯಾಣಿಕರಿಂದ ಖಾಸಗಿ ವಾಹನಗಳು ಪಡೆಯಬೇಕು ಎಂಬ ನಿರ್ದೇಶನ ನೀಡಿದೆ.

    ಈ ಬೆನ್ನಲ್ಲೇ, ಖಾಸಗಿ ವಾಹನಗಳಿಗೆ ಏಪ್ರಿಲ್ ತಿಂಗಳ ತೆರಿಗೆ ವಿನಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ವಾಹನಗಳ ಓಡಾಟಕ್ಕೆ ಪೊಲೀಸ್ ಇಲಾಖೆ ಫ್ರೀ ಪರ್ಮಿಟ್ ನೀಡಿದೆ. ಖಾಸಗಿ ವಾಹನಗಳಿಗೆ ಸೂಕ್ತ ಭದ್ರತೆ ನೀಡಲು ಸಹ ಪೊಲೀಸ್ ಇಲಾಖೆ ನಿರ್ಧರಿಸಿದೆ.

    ಬೆಂಗಳೂರಿನಲ್ಲಿ ಮೆಟ್ರೋ ಸೇವೆಯ ಅವಧಿಯನ್ನು ಮಧ್ಯರಾತ್ರಿವರೆಗೂ ವಿಸ್ತರಿಸಲಾಗಿದೆ. ಐದು ನಿಮಿಷಕ್ಕೊಂದು ಮೆಟ್ರೋ ಓಡಾಡಲಿದೆ. ರಜೆಗಳು ಬರುತ್ತಿರುವ ಕಾರಣ ಹೆಚ್ಚು ರೈಲು ಓಡಿಸುವಂತೆ ರೈಲ್ವೇ ಇಲಾಖೆಗೂ ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

    ಇದಕ್ಕೂ ಮುನ್ನ ಖಾಸಗಿ ಬಸ್‍ಗಳನ್ನು ರಸ್ತೆಗೆ ಇಳಿಸಲು ಒಕ್ಕೂಟ ಷರತ್ತು ವಿಧಿಸಿತ್ತು. ಒಂದು ತಿಂಗಳು ರಸ್ತೆ ತೆರಿಗೆ ವಿಧಿಸಬಾರದು, 3 ತಿಂಗಳ ಮುಂಗಡ ತೆರಿಗೆಯನ್ನು ಒಂದು ತಿಂಗಳಿಗೆ ಇಳಿಸಬೇಕು. ಪ್ರತಿ ಬಸ್‍ಗೂ ಸೂಕ್ತ ಭದ್ರತೆ ನೀಡಿದಲ್ಲಿ ಬಸ್ ಓಡಿಸಲು ರೆಡಿ ಎಂದು ಖಾಸಗಿ ಬಸ್‍ಗಳ ಮಾಲೀಕರ ಸಂಘ ಹೇಳಿತ್ತು.

    ಡ್ಯೂಟಿಗೆ ಬರೋದು ಬಿಡೋದು ಅವರ ಇಲಾಖೆಗೆ ಸಂಬಂಧಿಸಿದ್ದು. ಆದರೆ ಯಾರಾದ್ರೂ ರಸ್ತೆಗಿಳಿದು ಪ್ರತಿಭಟನೆ ನಡೆಸಿ ಕಲ್ಲು ತೂರಾಟ ಮಾಡಿದರೆ ತಕ್ಕ ಶಾಸ್ತಿ ಮಾಡುತ್ತೇವೆ. ಮುಲಾಜಿಲ್ಲದೇ ಅರೆಸ್ಟ್ ಮಾಡುತ್ತೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಎಚ್ಚರಿಕೆ ನೀಡಿದ್ದಾರೆ.

  • ಪ್ರಯಾಣಿಕರೇ ಗಮನಿಸಿ – ಸಾರಿಗೆ ಮುಷ್ಕರದಲ್ಲಿ ಹೈಡ್ರಾಮಾ, ರಸ್ತೆಗೆ ಇಳಿಯಲ್ಲ ಬಸ್‌

    ಪ್ರಯಾಣಿಕರೇ ಗಮನಿಸಿ – ಸಾರಿಗೆ ಮುಷ್ಕರದಲ್ಲಿ ಹೈಡ್ರಾಮಾ, ರಸ್ತೆಗೆ ಇಳಿಯಲ್ಲ ಬಸ್‌

    ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆಯಲ್ಲಿ ಈಗ ಹೈಡ್ರಾಮಾ ನಡೆಯುತ್ತಿದ್ದು ಮುಷ್ಕರವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.

    ಸರ್ಕಾರದ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬಸ್ಸುಗಳನ್ನು ಓಡಿಸದೇ ಇರಲು ನೌಕರರು ತೀರ್ಮಾನ ತೆಗೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆಯ ಬಳಿಕ ನೌಕರರ ಸಂಘದವರು ಮುಷ್ಕರವನ್ನು ಕೈ ಬಿಡುವುದಾಗಿ ತಿಳಿಸಿದ್ದರು. ಫ್ರೀಡಂ ಪಾರ್ಕ್‌ಗೆ ತೆರಳಿದ ಬಳಿಕ ವರಸೆ ಬದಲಾಗಿದ್ದು ಮುಷ್ಕರ ಮುಂದುವರಿಸುವ ತೀರ್ಮಾನವನ್ನು ತೆಗದುಕೊಳ್ಳಲಾಗಿದೆ. ಇದನ್ನೂ ಓದಿ: ಸಾರಿಗೆ ನೌಕರರ ಸಂಧಾನ ವಿಫಲ – ಮುಷ್ಕರ ಮುಂದುವರಿಕೆ

    ನೌಕರರು ಸಂಘದ ನಾಯಕರು ಮುಷ್ಕರವನ್ನು ಅಂತ್ಯಗೊಳಿಸುವ ತೀರ್ಮಾನವನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಬಸ್‌ ಸೇವೆ ಆರಂಭಿಸಲು ಸಿದ್ಧತೆ ನಡೆಸಿದ್ದರು. ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳತ್ತ ಕೆಲ ಬಸ್‌ಗಳ ಸಂಚಾರ ಆರಂಭವಾಗಿತ್ತು.

    ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಈಗ ಬಸ್‌ ನಿಲ್ದಾಣದತ್ತ ಪ್ರಯಾಣಿಕರು ಬರುತ್ತಿದ್ದಾರೆ. ದಿಢೀರ್‌ ತಮ್ಮ ನಿರ್ಧಾರವನ್ನು ಸಾರಿಗೆ ನೌಕರರ ಸಂಘ ಬದಲಿಸಿದ ಕಾರಣ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಈಗ ಅತಂತ್ರರಾಗಿದ್ದಾರೆ.

  • 3 ದಿನದ ಬಳಿಕ ರಸ್ತೆಗೆ ಇಳಿದ ಬಸ್ಸುಗಳು – ಜಿಲ್ಲಾ ಕೇಂದ್ರಗಳಿಗೆ ಸಂಚಾರ  ಆರಂಭ

    3 ದಿನದ ಬಳಿಕ ರಸ್ತೆಗೆ ಇಳಿದ ಬಸ್ಸುಗಳು – ಜಿಲ್ಲಾ ಕೇಂದ್ರಗಳಿಗೆ ಸಂಚಾರ ಆರಂಭ

    – ಪ್ರಯಾಣಿಕರ ಸಂಖ್ಯೆಯನ್ನು ಆಧಾರಿಸಿ ಬಸ್‌ ಓಡಾಟ

    ಬೆಂಗಳೂರು: ಸಾರಿಗೆ ನೌಕರರ ಜೊತೆಗೆ ಸರ್ಕಾರ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಮೂರು ದಿನಗಳ ಬಳಿಕ ಬಸ್ಸುಗಳು ರಸ್ತೆಗೆ ಇಳಿದಿದೆ. ಬೆಂಗಳೂರಿನಿಂದ ಜಿಲ್ಲಾ ಕೇಂದ್ರಗಳಿಗೆ ಬಸ್‌ ಸಂಚಾರ ಆರಂಭವಾಗಿದೆ.

    ವಿಧಾನಸೌಧದಲ್ಲಿ ನಡೆದ ಸಂಧಾನ ಸಭೆಯಲ್ಲಿ ಭಾಗವಹಿಸಿದ್ದ ನೌಕರ ಸಂಘದ ನಾಯಕರು ಸರ್ಕಾರ ನೀಡಿದ ಭರವಸೆಯನ್ನು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ನಾಯಕರು ಮಾಧ್ಯಮಗಳ ಮೂಲಕ ಸಿಬ್ಬಂದಿಗೆ ನಿರ್ಧಾರವನ್ನು ತಿಳಿಸುತ್ತಿದ್ದಂತೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಚಾಲಕರು ಒಂದೊಂದು ಬಸ್ಸುಗಳನ್ನು ತೆಗೆಯುತ್ತಿದ್ದಾರೆ.  ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ – ಸಾರಿಗೆ ಮುಷ್ಕರದಲ್ಲಿ ಹೈಡ್ರಾಮಾ, ರಸ್ತೆಗೆ ಇಳಿಯಲ್ಲ ಬಸ್‌

    ಮಾಧ್ಯಮಗಳ ಜೊತೆ ಮಾತನಾಡಿದ ಸಂಘದ ಮುಖಂಡರು, ಕೋವಿಡ್‌ 19 ಹಿನ್ನೆಲೆಯಲ್ಲಿ ಸದ್ಯಕ್ಕೆ ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮುಂದೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.

    ಸಾರಿಗೆ ನೌಕರರು ನಮ್ಮ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಪ್ರಮುಖ ಬೇಡಿಕೆಯನ್ನು ಇಟ್ಟಿದ್ದರು. ಈ ಬೇಡಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರನ್ನಾಗಿ ಮಾಡುತ್ತೇವೆ ಎಂದು ನಾವು ಭರವಸೆ ನೀಡಿಲ್ಲ ಮತ್ತು ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದೇವೆ. ನಮ್ಮಲ್ಲಿ 40 ನಿಗಮಗಳಿವೆ. ಎಲ್ಲ ನಿಗಮದಲ್ಲಿ ಇರುವ ಕೆಲಸ ಮಾಡುವವರು ಮುಂದೆ ಈ ಬೇಡಿಕೆಯನ್ನು ಇಟ್ಟರೆ ನಮಗೆ ಕಷ್ಟವಾಗಬಹುದು. ಉಳಿದಂತೆ ಅವರ ಇತರ ಬೇಡಿಕೆಯನ್ನು ಈಡೇರಿಸಿದ್ದೇವೆ ಎಂದು ತಿಳಿಸಿದರು.

    ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿಶ್ರಾಂತಿ ಗೃಹದಲ್ಲಿದ್ದ ಸಾರಿಗೆ ಸಿಬ್ಬಂದಿ ಈಗ ಪಾರ್ಕಿಂಗ್‌ ಮಾಡಲಾಗಿದ್ದ ಬಸ್ಸುಗಳನ್ನು ತೆಗೆದು ನಿಲ್ದಾಣಕ್ಕೆ ತರುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆಯನ್ನು ನೋಡಿಕೊಂಡು ಬಸ್‌ ಓಡಿಸಲು ಸಿದ್ಧತೆ ಮಾಡಲಾಗಿದೆ. ಇಂದು ರಾತ್ರಿ ಬಹುತೇಕ ಎಲ್ಲ ಕಡೆಗೆ ಬಸ್‌ ಸಂಚರಿಸುವ ಸಾಧ್ಯತೆಯಿದೆ.

    ಸರ್ಕಾರ ಒಪ್ಪಿರುವ ಬೇಡಿಕೆಗಳು
    1. ನಿಗಮದ ನೌಕರರಿಗೆ ಆರೋಗ್ಯ ಸಂಜೀವಿನಿ ವಿಮಾ ಯೋಜನೆ ಅಳವಡಿಸಲು ತೀರ್ಮಾನ.
    2. ಕೋವಿಡ್-19 ಸೋಂಕಿನಿಂದ ಮೃತ ಸಿಬ್ಬಂದಿಯ ಕುಟುಂಬಕ್ಕೆ 30 ಲಕ್ಷ ರೂಪಾಯಿ ಪರಿಹಾರ.
    3. ಅಂತರ್ ನಿಗಮ ವರ್ಗಾವಣೆ ಕುರಿತು ಸೂಕ್ತ ನೀತಿ ರಚಿಸಲು ತೀರ್ಮಾನ.
    4. ನೌಕರರ ತರಬೇತಿ ಅವಧಿ 2 ರಿಂದ ಒಂದು ವರ್ಷಕ್ಕೆ ಇಳಿಕೆ.
    5. ನಿಗಮದಲ್ಲಿ ಹೆಚ್ಆರ್‌ಎಂಎಸ್‌ತಂತ್ರಾಂಶ ವ್ಯವಸ್ಥೆ ಅಡಿ ಸಂಬಳ ಪಾವತಿ ಜಾರಿ.
    6. ಸಿಬ್ಬಂದಿಯು ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ಭತ್ಯೆಯನ್ನು(ಬಾಟಾ) ನೀಡಲು ನಿರ್ಧಾರ.
    7. ಘಟಕದ ವ್ಯಾಪ್ತಿಯಲ್ಲಿ ನೌಕರರಿಗೆ ಕಿರುಕುಳ ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ.
    8. ವೇತನ ಪರಿಷ್ಕರಣೆ, ಆರನೇ ವೇತನ ಆಯೋಗದ ಜಾರಿ ನಡೆಸುವ ಸಂಬಂಧ ಆರ್ಥಿಕ ಇಲಾಖೆ ಜೊತೆ ಚರ್ಚೆ ನಡೆಸಿ ತೀರ್ಮಾನ.

  • ಸರ್ಕಾರಿ ನೌಕರರೆಂದು ಪರಿಗಣಿಸಲ್ಲ – ಸರ್ಕಾರದ ಮುಂದಿರುವ ಆಯ್ಕೆಗಳು ಏನು?

    ಸರ್ಕಾರಿ ನೌಕರರೆಂದು ಪರಿಗಣಿಸಲ್ಲ – ಸರ್ಕಾರದ ಮುಂದಿರುವ ಆಯ್ಕೆಗಳು ಏನು?

    – ಖಾಸಗಿ ಬಸ್‌, ವ್ಯಾನ್‌ಗಳನ್ನು ಓಡಿಸಲು ಚಿಂತನೆ
    – ತಾರಕಕ್ಕೆ ಏರಿದ ಸಂಘರ್ಷ
    – ಉಪವಾಸ ಸತ್ಯಗ್ರಹ ಆರಂಭಿಸಲು ಮುಂದಾದ ನೌಕರರು

    ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಶುರು ಮಾಡಿ ಮೂರು ದಿನ ಕಳೆದಿದೆ. ಆದರೆ ಸಮಸ್ಯೆ ಬಗೆಹರಿಯುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಬದಲಾಗಿ ಇನ್ನಷ್ಟು ಕಗ್ಗಂಟಾಗಿದ್ದು, ಸಂಘರ್ಷ ತಾರಕಕ್ಕೇರಿದೆ. ಬಸ್ ಬಂದ್‍ಗೆ ಜಗ್ಗದ ಸರ್ಕಾರ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸೆಡ್ಡು ಹೊಡೆದಿದೆ.

    ಸೋಮವಾರದಿಂದ ಖಾಸಗಿ ಬಸ್‍ಗಳನ್ನು, ಜೀಪ್‌ ಸರ್ಕಾರಿ ದರದಲ್ಲಿ ಓಡಿಸಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಘೋಷಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗ್ತಿದೆ. ಈಗಲೂ ಕಾಲ ಮಿಂಚಿಲ್ಲ. ಪ್ರತಿಭಟನೆ ಕೈಬಿಟ್ಟು, ಮಾತುಕತೆ ಬನ್ನಿ ನಾವು ಸಿದ್ಧ ಇದ್ದೇವೆ ಎಂದು ಮುಷ್ಕರ ನಿರತ ನೌಕರರಿಗೆ ಸವದಿ ಆಹ್ವಾನ ನೀಡಿದ್ದಾರೆ. ಆದರೆ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಮಾತುಕತೆಗೆ ಕರೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೋಡಿಹಳ್ಳಿಗೂ ಸಾರಿಗೆ ಸಂಸ್ಥೆಗೂ ಏನು ಸಂಬಂಧ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಸರ್ಕಾರ ಘೋಷಿಸುತ್ತಿಲ್ಲ ಯಾಕೆ? 

     

    ಈ ಬೆನ್ನಲ್ಲೇ ನಾಳೆಯಿಂದ ಪ್ರತಿಭಟನೆ ಜೊತೆಗೆ ಉಪವಾಸ ಸತ್ಯಾಗ್ರಹ ನಡೆಸೋದಾಗಿ ಕೋಡಿಹಳ್ಳಿ ಘೋಷಿಸಿದ್ದಾರೆ. ಅನಿರ್ದಿಷ್ಟಾವಧಿ ಬಂದ್ ಮುಂದುವರೆಯುತ್ತೆ ಎಂದು ಪ್ರಕಟಿಸಿದ್ದಾರೆ. ಸಭೆಗೆ ನಾನು ಬರಬಾರದು ಎಂಬ ಷರತ್ತು ಯಾಕೆ ? ನಾನೇನು ಉಗ್ರಗಾಮಿನಾ? ನನ್ನ ಕಂಡರೆ ಭಯ ಯಾಕೆ ಎಂದು ಸರ್ಕಾರವನ್ನು ಕೋಡಿಹಳ್ಳಿ ಪ್ರಶ್ನಿಸಿದ್ದಾರೆ.

    ಕೆಎಸ್‍ಆರ್‌ಟಿಸಿ ಕ್ರಿಯಾ ಸಮಿತಿ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ಸರ್ಕಾರ ಅಸಹಕಾರ ತೋರುತ್ತಿದೆ ಎಂದು ಆಪಾದಿಸಿದ್ದಾರೆ. ಕೋಡಿಹಳ್ಳಿ ಮೂಲಕವೇ ನಮ್ಮ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಖಾಸಗಿ ಬಸ್ ಒಕ್ಕೂಟ ಸರ್ಕಾರದ ಪರವಾಗಿ ನಿಲ್ಲದಿರಲು ತೀರ್ಮಾನಿಸಿದೆ. ನಾವು ಖಾಸಗಿ ಬಸ್ ಓಡಿಸಲ್ಲ ಎಂದಿರುವ ಖಾಸಗಿ ಬಸ್ ಒಕ್ಕೂಟದ ನಟರಾಜ್ ಮುಷ್ಕರನಿರತದ ಜೊತೆ ಯಾಕೆ ಮಾತಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಕೆಎಸ್‍ಬಿಓಎಫ್ ಉಪಾಧ್ಯಕ್ಷ ಬಾಲಕೃಷ್ಣ, ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ಸರ್ಕಾರದ ಜೊತೆ ನಿಲ್ಲಲು ಸಿದ್ಧ ಎಂದು ಘೋಷಿಸಿದ್ದಾರೆ. ಖಾಸಗಿಯವರಿಗೆ ಮೂರು ತಿಂಗಳ ವೇತನ ನೀಡುವ ಆಫರ್ ನೀಡಲು ಸರ್ಕಾರ ಚಿಂತನೆ ನಡೆಸಿದೆ. ನಾಳೆ ಬೆಳಗ್ಗೆ ಸಂಘಗಳ ಮುಖಂಡರ ಜೊತೆ ಸಭೆ ನಡೆಸಲು ಸವದಿ ತೀರ್ಮಾನಿಸಿದ್ದಾರೆ.

    ಈ ಮಧ್ಯೆ ಗೃಹವ ಸಚಿವ ಬಸವರಾಜ ಬೊಮ್ಮಾಯಿ ಜೊತೆ ಸಿಎಂ ತುರ್ತು ಸಭೆ ನಡೆಸಿದರು. ನಂತರ ಮಾತನಾಡಿದ ಬೊಮ್ಮಾಯಿ ಅವರು, ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಸಾರಿಗೆ ಸಿಬ್ಬಂದಿಯ ಬೇಡಿಕೆಯನ್ನು ಈ ಸಂದರ್ಭದಲ್ಲಿ ಈಡೇರಿಸುವುದು ಕಷ್ಟ ಎಂದು ಸ್ಪಷ್ಟಪಡಿಸಿದ್ದಾರೆ. ಮೊದಲು ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ ಅಂತಾ ಕರೆ ನೀಡಿದ್ದಾರೆ. ಜೊತೆಗೆ ಎಸ್ಮಾ ಜಾರಿಯ ಪರಿಸ್ಥಿತಿ ಇನ್ನೂ ಬಂದಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಬಿಎಂಟಿಸಿ ಎಂಡಿ ಶಿಖಾ ಮಾತ್ರ, ಪ್ರತಿಭಟನೆ ಮುಂದುವರೆದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಎಸ್ಮಾ ಜಾರಿ ಮಾಡಿದವರು ಭಸ್ಮ ಆಗ್ತಾರೆ ಅಂತಾ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.

    ಸರ್ಕಾರದ ಮುಂದಿರುವ ಆಯ್ಕೆಗಳು ಏನು?
    ಆಯ್ಕೆ 01- ಸಂಧಾನ ಪ್ರಯತ್ನ ಮಾಡಿ ಒಂದು ದಿನ ಡೆಡ್‍ಲೈನ್
    ಆಯ್ಕೆ 02- ಸಂಧಾನ ಸಫಲ ಆಗದಿದ್ದರೆ ಕಾನೂನು ಕ್ರಮ
    ಆಯ್ಕೆ 03- ಮುಷ್ಕರ ನಿರತರ ಮೇಲೆ ದಂಡ ಪ್ರಯೋಗ
    ಆಯ್ಕೆ 04- ಹಂತ ಹಂತವಾಗಿ ಎಸ್ಮಾ ಜಾರಿ
    ಆಯ್ಕೆ 05- ಪರ್ಯಾಯ ಸಾರಿಗೆಯಾಗಿ ಖಾಸಗಿ ಬಸ್

  • ಗಮನಿಸಿ, ಆಗಸ್ಟ್ 7 ರಂದು ಸಾರಿಗೆ ಮುಷ್ಕರ – ಬಿಎಂಟಿಸಿ, ಕೆಎಸ್ಆರ್‌ಟಿಸಿ ರಸ್ತೆಗೆ ಇಳಿಯಲ್ಲ

    ಗಮನಿಸಿ, ಆಗಸ್ಟ್ 7 ರಂದು ಸಾರಿಗೆ ಮುಷ್ಕರ – ಬಿಎಂಟಿಸಿ, ಕೆಎಸ್ಆರ್‌ಟಿಸಿ ರಸ್ತೆಗೆ ಇಳಿಯಲ್ಲ

    ಬೆಂಗಳೂರು: 2017ರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಿ ರಸ್ತೆ ಸಾರಿಗೆ ಕಾರ್ಮಿಕ ಮತ್ತು ಮಾಲೀಕರ ಸಂಘಟನೆ ದೇಶಾದ್ಯಂತ ಆಗಸ್ಟ್ 7 ರಂದು ಮುಷ್ಕರಕ್ಕೆ ಕರೆ ನೀಡಿದೆ.

    ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವೇದಿಕೆ ಮುಖಂಡರು, ಕೇಂದ್ರ ಸರ್ಕಾರದ ಜಾರಿಗೆ ತಂದಿರುವ 2017 ರ ಮೋಟಾರು ತಿದ್ದುಪಡಿ ಕಾಯ್ದೆಯ ವಿರುದ್ಧ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಈ ಹೋರಾಟದಲ್ಲಿ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳು ಸೇರಿದಂತೆ ಬಿಎಂಟಿಸಿ ಸಾರಿಗೆ ಸೇವೆ ಸ್ಥಗಿತಗೊಳ್ಳಲಿದೆ. ಬೆಳಗ್ಗೆ 6 ರಿಂದ ಸಂಜೆ 6ವರೆಗೂ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ.

    ಸದ್ಯ ಆಗಸ್ಟ್ 07 ರಂದು ನಡೆಯುವ ಮುಷ್ಕರಕ್ಕೆ ಆಟೋ ಚಾಲಕರ ಸಂಘ, ಏರ್ ಪೋರ್ಟ್ ಟ್ಯಾಕ್ಸಿ ಚಾಲಕರ ಸಂಘ ಹಾಗೂ ಬಿಎಂಟಿಸಿ ಯೂನಿಯನ್ ಸಾಥ್ ನೀಡಿದೆ. ಬಂದ್ ಕುರಿತು ಹೀಗಾಗಲೇ ನೌಕರರಿಗೆ ಮಾಹಿತಿ ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಫೆಡರೇಷನ್ ಅಧ್ಯಕ್ಷ ಹೆಚ್ ಡಿ ರೇವಪ್ಪ ಪಬ್ಲಿಕ್ ಟಿವಿಗೆ ಹೇಳಿಕೆದ್ದಾರೆ.

    ಮಸೂದೆಗೆ ವಿರೋಧ ಯಾಕೆ?
    ಕೇಂದ್ರ ಜಾರಿಗೆ ತಂದಿರುವ ಹೊಸ ನೀತಿ ಇಂದ ರಾಜ್ಯ ವಾಹನಗಳಿಗೆ ಪರ್ಮೀಟ್ ನೀಡುದಕ್ಕೆ ಹಾಗೂ ಸಾರಿಗೆ ನೀತಿರೂಪಣೆಯಲ್ಲಿ ರಾಜ್ಯ ಸರ್ಕಾರದ ಅಧಿಕಾರ ಮೊಟಕಾಗಲಿದೆ. ಕೇಂದ್ರ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಲಿದೆ. ರಾಷ್ಟ್ರೀಯ ಸಾರಿಗೆ ನೀತಿ ಅಡಿ ರಾಜ್ಯಗಳ ಒಪ್ಪಿಗೆ ಇಲ್ಲದೇ ಕೇವಲ ಅಭಿಪ್ರಾಯವಷ್ಟೇ ಪಡೆದು ಹೊಸ ನೀತಿಯನ್ನು ಕೇಂದ್ರ ಜಾರಿಗೆ ತರಬಹುದು. ಇದರಿಂದ ಸಾರಿಗೆ ಇಲಾಖೆ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಅಗ್ರಿಗೇಟರ್ ಲೈಸೆನ್ಸ್ ಅನ್ನು ರಾಜ್ಯಸರ್ಕಾರ ನೀಡಬಹುದಾದರೂ ನೀಡುವ ಮಾನದಂಡವನ್ನ ಕೇಂದ್ರ ತೀರ್ಮಾನಿಸಲಿದೆ.

    ಹೊಸ ಕಾಯ್ದೆಯಿಂದ ಊಬರ್, ಓಲಾ ದಂತಹ ಖಾಸಗಿ ದೊಡ್ಡ ಸಂಸ್ಥೆಗಳ ಆರ್ಭಟ ಹೆಚ್ಚಾಗಲಿದೆ. ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಮುಂತಾದವುಗಳನ್ನು ಕಾರ್ಪೋರೇಟ್, ಆಟೋ ಮೊಬೈಲ್ ಕಂಪನಿಗಳ ಹಿಡಿತಕ್ಕೆ ಒಪ್ಪಿಸಲಾಗುತ್ತದೆ. ಎಲ್ಲವೂ ದುಬಾರಿ ಶುಲ್ಕ ಗಳ ಸುಲಿಗೆ ಕೇಂದ್ರಗಳಾಗುತ್ತೆ. ದಂಡಗಳ ಪ್ರಮಾಣ ಭಾರೀ ಹೆಚ್ಚಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

  • ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿ

    ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿ

    ಬೆಂಗಳೂರು: ಮಹದಾಯಿ ವಿವಾದ ಬಗೆ ಹರಿಸಲು ಜನವರಿ 25ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸಲು ಕರೆ ನೀಡಿದರೆ ಜ.30 ರಂದು ಸಾರಿಗೆ ಬಂದ್ ಆಗುವ ಸಾಧ್ಯತೆಯಿದೆ.

    ಈ ಹಿಂದೆ ನಡೆಸಿದ ಸಾರಿಗೆ ಮುಷ್ಕರದ ವೇಳೆ ನೀಡಿದ್ದ ನಮ್ಮ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಇದೇ 30ನೇ ತಾರೀಖಿನಂದು ಸೇವೆಯನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದೇವೆ ಎಂದು ಎಐಟಿಯುಸಿ  ಕಾರ್ಯದರ್ಶಿ ನಾಗರಾಜ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    30 ರಂದು ಉಪವಾಸ ಸತ್ಯಗ್ರಹ ಆರಂಭಿಸಲು ಸಾರಿಗೆ ಇಲಾಖೆಯ ಸಿಬ್ಬಂದಿ ನಿರ್ಧರಿಸಿದ್ದಾರೆ. ಅಂದು ಬಸ್ ಸೇವೆ ಸ್ಥಗಿತಗೊಂಡು ಸಾರ್ವಜನಿಕರಿಗೆ ತೊಂದರೆ ಆದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ