Tag: ಸಾರಿಗೆ ಇಲಾಖೆ

  • 2019ರ ಜುಲೈ ತಿಂಗಳಿನಿಂದ ಕಾರುಗಳಲ್ಲಿ ಚೈಲ್ಡ್ ಲಾಕ್ ಇರಲ್ಲ!

    2019ರ ಜುಲೈ ತಿಂಗಳಿನಿಂದ ಕಾರುಗಳಲ್ಲಿ ಚೈಲ್ಡ್ ಲಾಕ್ ಇರಲ್ಲ!

    ನವದೆಹಲಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ 2019ರ ಜುಲೈ ತಿಂಗಳಿಂದ ಎಲ್ಲಾ ವಾಣಿಜ್ಯ ಬಳಕೆಯ ಪ್ರಯಾಣಿಕರ ವಾಹನಗಳಲ್ಲಿರುವ ಚೈಲ್ಡ್ ಲಾಕ್ ತೆಗೆಯುವಂತೆ ವಾಹನ ಉತ್ಪಾದಕಾ ಸಂಸ್ಥೆಗಳಿಗೆ ಸೂಚನೆ ನೀಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಗಳು, 2019ರ ಜುಲೈ ತಿಂಗಳಿಂದ ಎಂ 1 ವಿಭಾಗದಲ್ಲಿ ಬರುವ ವಾಣಿಜ್ಯ ಬಳಕೆಯ ಎಂಟು ಆಸನಗಳನ್ನು ಒಳಗೊಂಡಿರುವ ಎಲ್ಲಾ ಪ್ರಯಾಣಿಕ ವಾಹನಗಳಲ್ಲಿರುವ ‘ಚೈಲ್ಡ್ ಲಾಕಿಂಗ್’ ವ್ಯವಸ್ಥೆಯನ್ನು ಕಡ್ಡಾಯವಾಗಿ ತೆಗೆದು ಹಾಕಬೇಕು. ಈ ವ್ಯವಸ್ಥೆ ಉತ್ತಮವಾಗಿದ್ದರೂ, ಕಾರಿನಲ್ಲಿ ಇವುಗಳನ್ನು ಲಾಕ್ ಮಾಡಿ, ಅಪರಾಧ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಅಲ್ಲದೇ ವಿಶೇಷವಾಗಿ ಮಹಿಳಾ ಪ್ರಯಾಣಿಕರು ಪ್ರಯಾಣಿಸುವಾಗ ಸಾಕಷ್ಟು ಅಪರಾಧ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದ್ದಾರೆ.

    ಮಾಹಿತಿಗಳ ಪ್ರಕಾರ ವಾಣಿಜ್ಯ ಬಳಕೆಯ ಕಾರುಗಳಲ್ಲಿ ಚೈಲ್ಡ್ ಲಾಕ್ ಸೇಫ್ಟಿ ವ್ಯವಸ್ಥೆಯನ್ನು ತೆಗೆದು ಹಾಕುವ ಬಗ್ಗೆ ರಸ್ತೆ ಸಾರಿಗೆ ಇಲಾಖೆ ಕಳೆದ ಒಂದು ವರ್ಷದಿಂದ ಚರ್ಚೆ ನಡೆಸುತ್ತಾ ಬಂದಿತ್ತು. ಅಲ್ಲದೇ ಈ ಲಾಕಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ಕಾರುಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು. ಈ ಲಾಕಿಂಗ್ ವ್ಯವಸ್ಥೆ ಉಪಯೋಗಕ್ಕಿಂತ ಇದರ ದುರುಪಯೋಗವೇ ಹೆಚ್ಚಾಗಿತ್ತು. ಅಲ್ಲದೇ 2017ರಲ್ಲಿ ಕರ್ನಾಟಕದ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕನೊಬ್ಬ ಚೈಲ್ಡ್ ಲಾಕ್ ಮಾಡಿ, ಮಹಿಳಾ ಪ್ರಯಾಣಿಕರನ್ನು ಕ್ಯಾಬ್ ನಲ್ಲೇ ಕೂಡಿ ಹಾಕಿ, ದೌರ್ಜನ್ಯ ಎಸಗಿದ್ದ. ದುರುಪಯೋಗ ಆಗುತ್ತಿದ್ದಂತೆ ಎಲ್ಲಾ ವಾಣಿಜ್ಯ ಬಳಕೆಯ ಕಾರುಗಳನ್ನು ಉತ್ಪಾದಿಸುವ ಸಂಸ್ಥೆಗಳಿಗೆ ತಮ್ಮ ತಮ್ಮ ಕಾರುಗಳಲ್ಲಿರುವ ಚೈಲ್ಡ್ ಲಾಕಿಂಗ್ ವ್ಯವಸ್ಥೆಯನ್ನು ತೆಗೆದುಹಾಕಲು ಆದೇಶಿಸಿದೆ.

    ಯಾವುದೇ ಕಾರುಗಳಲ್ಲಿ ಚಾಲಕನ ಆಸನವನ್ನು ಬಿಟ್ಟು ಒಂದರಿಂದ ಎಂಟು ಆಸನಗಳನ್ನು ಹೊಂದಿರುವ ಎಲ್ಲಾ ಮಾದರಿ ಪ್ರಯಾಣಿಕರ ವಾಣಿಜ್ಯ ಬಳಕೆಯ ವಾಹನಗಳು ಎಂ 1 ವಿಭಾಗದಲ್ಲಿ ಬರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಮಾರಣ್ಣನಿಂದ ಮಾತ್ರ ನನ್ನ ಸಮಸ್ಯೆ ಬಗೆಹರಿಸಲು ಸಾಧ್ಯ – ನಡುರಸ್ತೆಯಲ್ಲಿ ಹೈಡ್ರಾಮ ಸೃಷ್ಟಿಸಿದ ಮಹಿಳೆ

    ಕುಮಾರಣ್ಣನಿಂದ ಮಾತ್ರ ನನ್ನ ಸಮಸ್ಯೆ ಬಗೆಹರಿಸಲು ಸಾಧ್ಯ – ನಡುರಸ್ತೆಯಲ್ಲಿ ಹೈಡ್ರಾಮ ಸೃಷ್ಟಿಸಿದ ಮಹಿಳೆ

    ಹಾಸನ: ತನ್ನ ಸಮಸ್ಯೆಗೆ ಕುಮಾರಣ್ಣನಿಂದ ಮಾತ್ರ ಪರಿಹಾರ ನೀಡಲು ಸಾಧ್ಯ ಎಂದು ಪತ್ರ ಬರೆದಕೊಂಡಿರುವ ಮಹಿಳೆಯೊಬ್ಬರು ಮಾನಸಿಕ ಅಸ್ವಸ್ಥೆಯಂತೆ ವರ್ತಿಸಿ ನಡುರಸ್ತೆಯಲ್ಲಿ ಹೈಡ್ರಾಮ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.

    ನೂರಾರು ಮಂದಿಯ ಮುಂದೆಯೇ ಬಟ್ಟೆ ಕಳಚುವತ್ತ ಮುಂದಾದ ಮಹಿಳೆ ಸಾರ್ವಜನಿಕರ ಮುಜುಗರಕ್ಕೂ ಕಾರಣವಾಗಿದ್ದು, ನಗರದ ಜಿಲ್ಲಾಧಿಕಾರಿ ಕಛೇರಿಯ ಮುಂದೆಯೇ ಘಟನೆ ನಡೆದಿದೆ. ರಸ್ತೆ ಮಧ್ಯೆ ಮನಬಂದಂತೆ ವರ್ತಿಸಿದ ಮಹಿಳೆಯ ವರ್ತನೆಗೆ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಹಿಳೆಯ ವಿಚಿತ್ರ ವರ್ತನೆ ನಿಯಂತ್ರಿಸಲು ಪೊಲೀಸರು ಕೂಡ ಹರಸಾಹಸ ಪಟ್ಟರು.

    ತನಗೆ ಅನ್ಯಾಯವಾಗಿದೆ, ತನ್ನನ್ನ ಹುಚ್ಚಿಯಂತೆ ನಡೆಸಿಕೊಂಡಿದ್ದಾರೆಂದು ಪತ್ರದಲ್ಲಿ ಅಳಲು ತೋಡಿಕೊಂಡಿರುವ ಮಹಿಳೆಯ ಆಟಕ್ಕೆ ಸಾರ್ವಜನಿಕರೂ ಕೂಡ ಏನೂ ಮಾಡದೆ ನಿಂತಿದ್ದರು. ಸುಮಾರು ಅರ್ಧ ಗಂಟೆ ಮಹಿಳೆಯ ಹುಚ್ಚಾಟ ಮುಂದುವರೆದು ಬಿಎಂ ರಸ್ತೆಯಲ್ಲಿ ಓಡಾಡುತಿದ್ದ ಬಸ್ಸುಗಳ ಗಾಜುಗಳೂ ಕೂಡ ಪುಡಿಪುಡಿಯಾದವು. ಬೇಕೆ ಬೇಕು ನ್ಯಾಯಾ ಬೇಕೆಂದು ಕೂಗುತ್ತಾ ಮಾನಸಿಕ ಅಸ್ವಸ್ಥೆಯಂತೆ ವರ್ತಿಸಿದ ಮಹಿಳೆ ಕನ್ನಡ ಪರ ಘೋಷಣೆಗಳನ್ನ ಕೂಗುತ್ತಿದದ್ದು ವಿಶೇಷವಾಗಿತ್ತು.

    ರಸ್ತೆಯಲ್ಲಿ ಮಲಗಿ ಸಂಚಾರಕ್ಕೆ ಅಡ್ಡಿಪಡಿಸಿದ ಮಹಿಳೆಯನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಈ ವೇಳೆ ರಸ್ತೆಯಲ್ಲೇ ಬಟ್ಟೆ ಬಿಚ್ಚಲು ಮುಂದಾದ ಮಹಿಳೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸಿಕ್ಕಸಿಕ್ಕವರ ಹಲ್ಲೆ ನಡೆಸಲು ಮುಂದಾದ ಮಹಿಳೆ ಸರ್ಕಾರಿ ಬಸ್ಸಿನ ವೈಪರ್ ಕಿತ್ತು ಮುಂಭಾಗದ ಗಾಜಿಗೆ ಕಲ್ಲು ತೂರಿದ್ದಳು. ಮಹಿಳೆ ಮಾನಸಿಕ ಅಸ್ಚಸ್ಥೆಯೋ, ಸಮಸ್ಯೆಗೆ ಸ್ಪಂದಿಸದ ವ್ಯವಸ್ಥೆ ವಿರುದ್ದ ಬೇಸತ್ತ ಮಹಿಳೆ ತಾಳ್ಮೆ ಕಳೆದುಕೊಂಡು ವರ್ತಿಸಿದ ರೀತಿಯೊ ಎಂಬ ಬಗ್ಗೆ ಅನುಮಾನಕ್ಕೆ ಕಾರಣವಾಗಿದೆ.

    ಮಹಿಳೆಯ ಬರೆದಿರುವ ದೂರು ಪತ್ರದಲ್ಲಿ ಎರಡು ಬಾರಿ ಕುಮಾರಣ್ಣನ ಭೇಟಿ ಮಾಡಿದ್ದೆ ಎಂದು ಉಲ್ಲೇಖ ಮಾಡಿದ್ದಾಳೆ. ನನ್ನ ಸಮಸ್ಯೆಯನ್ನು ಪೊಲೀಸರು ಬಗೆಹರಿಸುತ್ತಿಲ್ಲ ಎಂದು ಕೂಡ ತನ್ನ ಅಳಲು ತೋಡಿಕೊಂಡಿದ್ದಾಳೆ. ಸದ್ಯ ಈಕೆಯನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ನಡನಹಳ್ಲಿಯ ಪ್ರಮೀಳಾ ಎಂದು ಗುರ್ತಿಸಲಾಗಿದೆ. ಮಹಿಳೆಯನ್ನ ವಶಕ್ಕೆ ಪಡೆದ ಮಹಿಳಾ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಕೂಡ ಪೊಲೀಸರಿಗೆ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಮತ್ತೊಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

     

  • ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರೋ ಖಾಸಗಿ ಟ್ರಾವೆಲ್ಸ್‌ಗಳಿಗೆ ಬಿಗ್ ಶಾಕ್

    ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರೋ ಖಾಸಗಿ ಟ್ರಾವೆಲ್ಸ್‌ಗಳಿಗೆ ಬಿಗ್ ಶಾಕ್

    ಬೆಂಗಳೂರು: ಹಬ್ಬಕ್ಕೆ ದುಪ್ಪಟ್ಟು ದರ ಪಡೆಯುತ್ತಿರುವ ಖಾಸಗಿ ಟ್ರಾವೆಲ್ಸ್‌ಗಳಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ಕೊಟ್ಟಿದೆ. ಹೌದು, ನಿಯಮ ಮೀರಿ ಪ್ರಯಾಣದ ದರ ಪಡೆಯುತ್ತಿರುವ ಖಾಸಗಿ ಬಸ್‍ಗಳ ಮೇಲೆ ಅಧಿಕಾರಿಗಳು ರೈಡ್ ಮಾಡುತ್ತಿದ್ದಾರೆ.

    ಹಬ್ಬದ ದಿನಗಳಲ್ಲಿ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಊರಿಗೆ ಮರಳುತ್ತಾರೆ. ಹೀಗಾಗಿ ಖಾಸಗಿ ಟ್ರಾವೆಲ್ಸ್ ಗಳು ಲಾಭಕ್ಕಾಗಿ ಪ್ರಯಾಣಿಕರಿಂದ ಹೆಚ್ಚು ಹಣ ಪಡೆಯುತ್ತವೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

    ಜಂಟಿ ಸಾರಿಗೆ ಆಯುಕ್ತ ಜ್ಞಾನೇಂದ್ರ ಕುಮಾರ್ ಮತ್ತು ಅಪರ ಸಾರಿಗೆ ಆಯುಕ್ತ ನಾರಾಯಣ್ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗುತ್ತಿದೆ. ಒಟ್ಟು 12 ತಂಡಗಳನ್ನು ರಚಿಸಲಾಗಿದ್ದು, ಅದರಲ್ಲಿ 35 ಜನ ಆರ್‌ಟಿಓ ಇನ್‍ಸ್ಪೆಕ್ಟರ್ ಗಳು ಹಾಗೂ 20 ಜನ ಅಧಿಕಾರಿಗಳಿದ್ದಾರೆ. ಈ ತಂಡಗಳು ಬೆಂಗಳೂರಿನಿಂದ ಹೊರ ಹೊಗುವ ಪ್ರತಿ ಬಸ್ ಅನ್ನು ತಪಾಸಣೆ ಮಾಡುತ್ತಿವೆ.

    ಬಸ್‍ನಲ್ಲಿ ಪ್ರಯಾಣಿಕರು ಮತ್ತು ಅವರ ಲಗೇಜ್ ಹೊರತು ಪಡಿಸಿ ಯಾವುದೇ ರೀತಿಯ ವಸ್ತುಗಳನ್ನು ಹಾಕುವಂತಿಲ್ಲ. ನಿಯಮ ಮೀರಿ ಹಣ ಪಡೆದಿರುವ ಬಗ್ಗೆ ಮಾಹಿತಿ ಪಡೆಯಲು ಪ್ರಯಾಣಿಕರಿಂದ ಟಿಕೆಟ್ ತಗೆದುಕೊಂಡು ಪರಿಶೀಲನೆ ನಡೆಸಿದ್ದಾರೆ. ಒಂದು ವೇಳೆ ಹೆಚ್ಚಿನ ಹಣ ಪಡೆದಿದ್ದರೆ ಅಂತಹ ಟ್ರಾವೆಸ್ಸ್ ವಿರುದ್ಧ ಪ್ರಕರಣ ದಾಖಲಿಸಲು ಆರ್‍ಟಿಓ ಅಧಿಕಾರಿಗಳು ಮುಂದಾಗಿದ್ದಾರೆ.

    ಎಲ್ಲೆಲ್ಲಿ ಪರಿಶೀಲನೆ?: ಮೆಜೆಸ್ಟಿಕ್, ಕಲಾಸಿಪಾಳ್ಯ, ಗೊರಗುಂಟೆಪಾಳ್ಯ, ನೆಲಮಂಗಲ, ದೇವನಹಳ್ಳಿ ಟೋಲ್ ಸೇರಿದಂತೆ ಬೆಂಗಳೂರಿನಿಂದ ಹೊರ ಭಾಗಗಳ ಪ್ರತಿ ಟೋಲ್‍ಗಳಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಈ ಮೂಲಕ ಖಾಸಗಿ ಟ್ರಾವೆಲ್ಸ್ ಗಳ ದರ್ಬಾರ್ ಗೆ ಬ್ರೇಕ್ ಹಾಕಲು ಹಾಗೂ ಪ್ರಯಾಣಿಕರ ಮೇಲೆ ಆಗುತ್ತಿರುವ ಹೊರೆಯನ್ನು ತಡೆಯಲು ಸಾರಿಗೆ ಇಲಾಖೆ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • Exclusive: ಸಾರಿಗೆ ಇಲಾಖೆಯ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಗ್ ಫೈಟ್

    Exclusive: ಸಾರಿಗೆ ಇಲಾಖೆಯ ಎಲೆಕ್ಟ್ರಿಕ್ ಬಸ್ ಖರೀದಿಗೆ ಬಿಗ್ ಫೈಟ್

    ಬೆಂಗಳೂರು: ಕರ್ನಾಟಕ ಸಾರಿಗೆ ಸಂಸ್ಥೆಗೆ ಖರೀದಿ ಮಾಡಲು ಇಚ್ಛಿಸಿರುವ ಎಲೆಕ್ಟ್ರಿಟ್ ಬಸ್ ಸಂಸ್ಥೆಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂಬ ವರದಿಯ ಬಳಿಕವೂ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರು ಬಸ್ಸುಗಳ ಖರೀದಿಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಹಾಗೂ ಎಂಡಿ ನಡುವೆ ಬಿಗ್ ಫೈಟ್‍ಗೆ ಕಾರಣವಾಗಿದೆ.

    ಸಾರಿಗೆ ಇಲಾಖೆ ಎಂಡಿ ಪೊನ್ನುರಾಜ್ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟದ ಕುರಿತು ಸಂಪೂರ್ಣ ವರದಿ ನೀಡಿದ್ದಾರೆ. ಇದರ ನಡುವೆಯೂ ಸದ್ಯ ಸಚಿವರು ಒಟ್ಟು 80 ಎಲೆಕ್ಟ್ರಿಕ್ ಬಸ್ ಖರೀದಿಗೆ ಮುಂದಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಸಂಪುಟ ಸಚಿವರ ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಬಸ್ ಖರೀದಿ ಹಿಂದೆ ಸಚಿವರ ಸ್ವ-ಹಿತಾಸಕ್ತಿ ಇದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ಸದ್ಯ 126 ಕೋಟಿ ರೂ. ವೆಚ್ಚದಲ್ಲಿ 80 ಬಸ್‍ಗಳನ್ನ ಖರೀದಿಸಲು ಮುಂದಾಗಿದೆ ಎನ್ನಲಾಗಿದ್ದು, ಇದರಲ್ಲಿ 60 ಎಸಿ ಎಲೆಕ್ಟ್ರಿಕ್ ಬಸ್ ಹಾಗೂ ಉಳಿದಂತೆ 20 ನಾನ್ ಎಸಿ ಎಲೆಕ್ಟ್ರಿಕ್ ಬಸ್ ಖರೀದಿ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಸಾರಿಗೆ ಇಲಾಖೆ ನೇರ ಬಸ್ ಖರೀದಿ ಮಾಡುವುರಿಂದ ಸಂಸ್ಥೆಗೆ ಉಂಟಾಗಬಹುದಾದ ನಷ್ಟ ಕಾರಣಗಳನ್ನು ಎಂಡಿ ಪೊನ್ನುರಾಜ್ ಅವರು ವರದಿ ನೀಡಿದ್ದಾರೆ. ಸಾರಿಗೆ ಸಂಸ್ಥೆಗೆ ಎಲೆಕ್ಟ್ರಿಕ್ ಬಸ್ ಖರೀದಿ ಮಾಡುವುದಕ್ಕಿಂತ ಅವುಗಳನ್ನು ಲೀಸ್‍ಗೆ ಪಡೆದು ಮೊದಲು ಪ್ರಯೋಗ ನಡೆಸಲು ಎಂಡಿ ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಫೇಮ್ ಇಂಡಿಯಾ ಸ್ಕೀಮ್ ಅಡಿ ಮೆ|| ಗೋಲ್ಡ್ ಸ್ಟೋನ್ ಇನ್‍ಫ್ರಾಟೆಂಕ್ ಕಂಪೆನಿಯಿಂದ ಬಸ್ ಖರೀದಿಗೆ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದೆ.

    ಎಲೆಕ್ಟ್ರಿಕ್ ಬಸ್ ಯಾಕೆ ಬೇಡ?
    ಒಂದು ಎಲೆಕ್ಟ್ರಿಕ್ ಬಸ್‍ನ ಒಟ್ಟಾರೆ ವೆಚ್ಚದ ಶೇ. 60 ರಷ್ಟು ಮೌಲ್ಯ ಬ್ಯಾಟರಿ ಒಂದೇ ಹೊಂದಿರುತ್ತದೆ. ಈ ಬಸ್ಸುಗಳಲ್ಲಿ ಆಳವಡಿಸಿರುವ ಬ್ಯಾಟರಿಗಳನ್ನು ಐದು ವರ್ಷಕ್ಕೆ ಒಮ್ಮೆ ಬದಲಾವಣೆ ಮಾಡಬೇಕು. ಇದರಿಂದ ಬಸ್ಸುಗಳ ನಿರ್ವಹಣೆ ಅಧಿಕ ಆಗಲಿದೆ. ಅಲ್ಲದೇ ಒಂದೊಮ್ಮೆ ಎಲೆಕ್ಟ್ರಿಕ್ ಬಸ್‍ನ ಬ್ಯಾಟರಿ ಹಾಳಾದರೆ ಇಡೀ ಬಸ್ ಹಾಳಾಗುತ್ತದೆ. ಇದರಿಂದ ಒಂದು ಬಸ್ ಮೇಲೆ ಹೂಡಿಕೆ ಮಾಡಿರುವ ಮೊತ್ತ ಸಂಪೂರ್ಣ ನಷ್ಟವಾಗಲಿದೆ. ಬಸ್ಸಿನಲ್ಲಿ ಬಳಸುವ ಬ್ಯಾಟರಿಯನ್ನು ಲೀಥಿಯಂ ಎಂಬ ಮೆಟಲ್ ನಿಂದ ತಯಾರು ಮಾಡುತ್ತಾರೆ. ಈ ಲೀಥಿಯಂ ನಿಕ್ಷೇಪ ಭಾರತದಲ್ಲಿ ಕಡಿಮೆ ಇರುವುದರಿಂದ ಅದರ ಬೆಲೆಯೂ ಅಧಿಕವಾಗಿದೆ. ಆದರೆ ಚೀನಾದಲ್ಲಿ ಈ ಎಲೆಕ್ಟ್ರಿಕ್ ಬಸ್ ಸೇವೆ ಯಶಸ್ವಿಯಾಗಿದ್ದು, ಆದರೆ ಅಲ್ಲಿ ಲೀಥಿಯಂ ನಿಕ್ಷೇಪ ಹೆಚ್ಚಾಗಿರುವುದರಿಂದ ಅವರಿಗೆ ಅನುಕೂಲ ಆಗಿದೆ ಎಂಬ ಅಂಶ ಮುಂದಿಟ್ಟಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆಯಷ್ಟೇ ಡೀಸೆಲ್ ಬೆಲೆ ಹೆಚ್ಚಾಗಿದೆ ಎಂಬ ಅಂಶದ ಮೇಲೆ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಮುಂದಾಗಿತ್ತು. ಸದ್ಯ ಸುಮಾರು 126 ಕೋಟಿ ರೂಪಾಯಿ ಖರ್ಚು ಮಾಡಿ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಿ ಚಿಂತನೆ ನಡೆಸಿದೆ. ಆದರೆ ಈ ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಅವರು ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲು ನಿರಾಕರಿಸಿದ್ದರು. ಅಲ್ಲದೇ ಬಸ್ಸುಗಳ ನಿರ್ವಹಣೆ ಅಧಿಕ ವೆಚ್ಚವಾಗುತ್ತದೆ ಎಂಬ ಕಾರಣ ಮುಂದಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=amPQtHkZIq0

  • ಸಾರಿಗೆ ಇಲಾಖೆ ನಿರ್ಲಕ್ಷ್ಯ – ಪ್ರತಿದಿನ ಲಕ್ಷಗಟ್ಟಲೇ ಆದಾಯ ನಷ್ಟ

    ಸಾರಿಗೆ ಇಲಾಖೆ ನಿರ್ಲಕ್ಷ್ಯ – ಪ್ರತಿದಿನ ಲಕ್ಷಗಟ್ಟಲೇ ಆದಾಯ ನಷ್ಟ

    ಕಾರವಾರ: ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳು ತೆರಳಬೇಕಿದ್ದರೆ ಆಯಾ ರಾಜ್ಯದ ರಸ್ತೆ ತೆರಿಗೆಯನ್ನು ಗಡಿ ಭಾಗದಲ್ಲಿ ಕಡ್ಡಾಯವಾಗಿ ಕಟ್ಟಲೇಬೇಕು. ಆದರೆ ಕಾರವಾರ ಗಡಿಭಾಗದಲ್ಲಿ ಇದು ಫಾಲೋ ಆಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಬರಬೇಕಾದ ಲಕ್ಷಗಟ್ಟಲೇ ರಸ್ತೆ ತೆರಿಗೆ ವಂಚನೆಯಾಗುತ್ತಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ಕರ್ನಾಟಕ ಸರ್ಕಾರವು ತೆರಿಗೆ ವಸೂಲಿ, ಅನಧಿಕೃತ ಸಾಗಾಟಗಳ ತಡೆಗಾಗಿ ಅರಣ್ಯ ಇಲಾಖೆ, ಭೂ ಮತ್ತು ಗಣಿವಿಜ್ಞಾನ ಇಲಾಖೆ, ಪೊಲೀಸ್ ಹೀಗೆ ಹಲವು ಚೆಕ್‍ಪೋಸ್ಟ್ ಗಳನ್ನು ನಿರ್ಮಿಸಿದೆ. ಆದರೆ ರಸ್ತೆ ತೆರಿಗೆ ವಸೂಲಿಗಾಗಿ ಆರ್.ಟಿ.ಓ ಕಚೇರಿ ಮಾತ್ರ ಯಾವುದೇ ಕೇಂದ್ರವನ್ನು ತೆರೆದಿಲ್ಲ. ಇದರಿಂದ ಗೋವಾ ರಾಜ್ಯದಿಂದ ಬರುವ ವಾಣಿಜ್ಯ ಪ್ರವಾಸಿ ವಾಹನಗಳು ಪರ್ಮಿಟ್ ತೆಗೆದುಕೊಳ್ಳದೇ ತೆರಿಗೆ ವಂಚಿಸಿ ಕರ್ನಾಟಕ್ಕೆ ಪ್ರವೇಶ ಪಡೆಯುತ್ತಿದೆ. ಇಲ್ಲಿನ ಇಲಾಖೆ ಅಧಿಕಾರಿಗಳ ವರ್ತನೆಯಿಂದ ಕರ್ನಾಟಕ ಸರ್ಕಾರಕ್ಕೆ ಬರಬೇಕಾದ ಆದಾಯ ಕೈತಪ್ಪಿ ಹೋಗುತ್ತಿದೆ.

    ಕರ್ನಾಟಕದಿಂದ ಗೋವಾ ಗಡಿಗೆ ಯಾವುದೇ ವಾಣಿಜ್ಯ ವಾಹನಗಳು ತೆರಳಿದರೆ ತಪ್ಪದೇ ಪರ್ಮಿಟ್ ತೆಗೆದುಕೊಂಡು ಹಣ ಕಟ್ಟಬೇಕು. ಇಲ್ಲದಿದ್ದರೆ ಅಲ್ಲಿನ ಸರ್ಕಾರ ಪರ್ಮಿಟ್ ಇಲ್ಲದ ವಾಹನಗಳಿಗೆ ಐದರಿಂದ ನಲವತ್ತು ಸಾವಿರದವರೆಗೆ ದಂಡ ವಿಧಿಸುತ್ತದೆ. ಕರ್ನಾಟಕದಲ್ಲಿಯೂ ಇದೇ ನಿಯಮಗಳು ಜಾರಿಯಲ್ಲಿದೆ. ಹೊರ ರಾಜ್ಯದಿಂದ ಆಗಮಿಸುವ ಬಸ್‍ಗಳಿಗೆ ಸೀಟಿನ ಲೆಕ್ಕದಲ್ಲಿ ಪರ್ಮಿಟ್ ಪಡೆದು ಹಣ ಕಟ್ಟಬೇಕು, ಗೋವಾದ ಗಡಿಯಲ್ಲಿಯೇ ಆರ್.ಟಿ.ಓ ಕಚೇರಿ ಇದ್ದು, ದಿನದ 24 ಗಂಟೆ ತೆರೆದಿರುತ್ತದೆ. ಹೀಗಾಗಿ ಯಾರೂ ಕೂಡ ವಂಚಿಸಿ ಹೋಗಲು ಸಾಧ್ಯವಿಲ್ಲ. ಕರ್ನಾಟಕದ ಗಡಿಯಲ್ಲಿ ಆರ್.ಟಿ.ಓ ಕಚೇರಿಯಾಗಲಿ, ಸಿಬ್ಬಂದಿಯಾಗಲಿ ಇರದೇ ಇರುವುದರಿಂದ ತೆರಿಗೆ ಹಣ ವಂಚಿಸಿ ಹಲವರು ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ.

    ಉತ್ತರ ಕನ್ನಡ ಪ್ರವಾಸಿ ತಾಣವಾಗಿರುವುದರಿಂದ ಪ್ರತಿ ದಿನ ಗೋವಾ, ಮಹಾರಾಷ್ಟ ಸೇರಿ ಹಲವು ರಾಜ್ಯಗಳಿಂದ ನೂರಾರು ಬಾಡಿಗೆ ವಾಹನಗಳು ಆಗಮಿಸುತ್ತವೆ. ಬಹುತೇಕ ವಾಹನಗಳು ಪರ್ಮಿಟ್ ಪಡೆಯದೇ ರಾಜ್ಯ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿವೆ. ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಎಚ್ಚೆತ್ತು ಹೊರರಾಜ್ಯದ ವಾಹನ ಸವಾರರಿಂದ ಆಗುತ್ತಿರುವ ತೆರಿಗೆ ವಂಚನೆಯನ್ನು ತಪ್ಪಿಸಿಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆದಾಯದಲ್ಲಿ ದಾಖಲೆ ಬರೆದ ಸಾರಿಗೆ ಇಲಾಖೆ: ಯಾವ ವರ್ಷ ಎಷ್ಟೆಷ್ಟು ಆದಾಯ ಸಂಗ್ರಹ?

    ಆದಾಯದಲ್ಲಿ ದಾಖಲೆ ಬರೆದ ಸಾರಿಗೆ ಇಲಾಖೆ: ಯಾವ ವರ್ಷ ಎಷ್ಟೆಷ್ಟು ಆದಾಯ ಸಂಗ್ರಹ?

    ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು 2017-18ರ ಸಾಲಿನಲ್ಲಿ ದಾಖಲೆ ಪ್ರಮಾಣದ ಆದಾಯ ಸಂಗ್ರಹಿಸಿ ಇತಿಹಾಸ ಸೃಷ್ಟಿಸಿದೆ.

    ಹೌದು, 2017-18 ರ ಸಾಲಿನಲ್ಲಿ ಸಾರಿಗೆ ಇಲಾಖೆಯು ಒಟ್ಟಾರೆ 5,954 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸುವ ಮೂಲಕ ವಾರ್ಷಿಕ ಗುರಿಗಿಂತ ಶೇ.7ರಷ್ಟು ಹೆಚ್ಚಿನ ಆದಾಯವನ್ನು ಸಂಗ್ರಹಿಸಿ ದಾಖಲೆ ನಿರ್ಮಿಸಿದೆ.

    ಸಾರಿಗೆ ಇಲಾಖೆಯು ವರ್ಷದಿಂದ ವರ್ಷಕ್ಕೆ ನಿಗದಿತ ಆದಾಯದ ಗುರಿಯನ್ನು ಹಾಕಿಕೊಳ್ಳುತ್ತದೆ. 2017-18ನೇ ಸಾಲಿನಲ್ಲಿ ಒಟ್ಟಾರೆ 5,516.6 ಕೋಟಿ ರೂಪಾಯಿಯನ್ನು ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಈ ಗುರಿಯನ್ನು ದಾಟಿ ಬರೋಬ್ಬರಿ 5,954 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಮೊದಲು 2016-17 ನೇ ಸಾಲಿನಲ್ಲಿ 5,262.4 ಕೋಟಿ ರೂಪಾಯಿಯನ್ನು ಸಂಗ್ರಹಿಸಿತ್ತು, ಆ ವರ್ಷ 5,026 ಕೋಟಿ ರೂಪಾಯಿ ಗುರಿಯನ್ನು ಹಾಕಿಕೊಂಡಿತ್ತು.

    ಯಾವ ವರ್ಷ ಎಷ್ಟು ಆದಾಯ?
    2009-10 ನೇ ಸಾಲಿನಲ್ಲಿ 1,892 ಕೋಟಿ ರೂಪಾಯಿ, 2010-11 ರಲ್ಲಿ 2,511 ಕೋಟಿ ರೂಪಾಯಿ, 2011-12ರಲ್ಲಿ 2,985 ಕೋಟಿ, 2012-13ರಲ್ಲಿ 3,566 ಕೋಟಿ, 2013-14 ರಲ್ಲಿ 3,671 ಕೋಟಿ, 2014-15ರಲ್ಲಿ 4,145 ಕೋಟಿ, 2015-16ರಲ್ಲಿ 4,608 ಕೋಟಿ, 2016-17ರಲ್ಲಿ 5,262 ಕೋಟಿ, 2017-18ರಲ್ಲಿ 5,954 ಕೋಟಿ ರೂಪಾಯಿ ಆದಾಯ ಗಳಿಸಿದೆ.

    ಸಾರಿಗೆ ಇಲಾಖೆಯು ರಸ್ತೆ ತೆರಿಗೆ, ಹೊಸ ವಾಹನಗಳ ನೋಂದಣಿ ಶುಲ್ಕ, ಪರವಾನಿಗೆ ಶುಲ್ಕ, ಬಾಕಿ ಇರುವ ತೆರಿಗೆ ವಸೂಲಿ, ಚಾಲನಾ ಪರವಾನಿಗೆ ಶುಲ್ಕ, ವಾಹನಗಳ ಪರಿಶೀಲನೆ ಹಾಗೂ ರಾಜ್ಯಗಡಿಗಳಲ್ಲಿ ಚೆಕ್‍ಪೋಸ್ಟ್ ಮೂಲಕ ಒಟ್ಟಾರೆ ಆದಾಯವನ್ನು ಗಳಿಸುತ್ತಿದೆ. ಈ ಬಾರಿಯ ವಿಶೇಷವೇನೆಂದರೆ ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ಬೆಂಗಳೂರು ನಗರ ಈ ಬಾರಿ ಅತಿಹೆಚ್ಚು ಆದಾಯವನ್ನು ತಂದುಕೊಟ್ಟಿದೆ. ಮಾಹಿತಿಗಳ ಪ್ರಕಾರ ರಾಜಧಾನಿಯಲ್ಲಿ ಒಟ್ಟು 76 ಲಕ್ಷ ವಾಹನಗಳು ನೋಂದಣಿಯಾಗುವ ಮೂಲಕ ಆದಾಯ ಹೆಚ್ಚಿದೆ.

    ಕರ್ನಾಟಕ ಸರ್ಕಾರಕ್ಕೆ ಸಾರಿಗೆ ಇಲಾಖೆಯು ನಾಲ್ಕನೇ ಅತಿದೊಡ್ಡ ಆದಾಯ ನೀಡುವ ಸಂಸ್ಥೆಯಾಗಿದೆ. ಇದಲ್ಲದೇ ವಾಣಿಜ್ಯ ತೆರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಅಬಕಾರಿ ಇಲಾಖೆಗಳು ಸರ್ಕಾರದ ಆದಾಯದ ಪ್ರಮುಖ ಮೂಲಗಳಾಗಿವೆ. ಕಳೆದ 9 ವರ್ಷಗಳಿಂದಲೂ ಸಾರಿಗೆ ಇಲಾಖೆ ವರ್ಷದಿಂದ ವರ್ಷಕ್ಕೆ ತನ್ನ ಆದಾಯವನ್ನು ಹೆಚ್ಚಿಸಿಕೊಂಡೇ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್!

    ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್!

    ಬೆಂಗಳೂರು: ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರ ಪ್ರತಿ ಲೀಟರ್ ಡೀಸೆಲ್ ಮೇಲೆ 2.50 ರೂಪಾಯಿ ಇಳಿಸಿದ ಪರಿಣಾಮ ಸದ್ಯಕ್ಕೆ ಕೆಎಸ್‍ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಅನುಮಾನವಾಗಿದೆ.

    ಈಗಾಗಲೇ ಕುಮಾರಸ್ವಾಮಿ ಸರ್ಕಾರ ತೈಲ ಬೆಲೆ ಇಳಿಸದೆ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಈಗ ಪ್ರಯಾಣ ದರ ಹೆಚ್ಚಿಸಿದರೆ ಮತ್ತೆ ಜನರ ಆಕ್ರೋಶಕ್ಕೆ ಗುರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದೇ ಇರಲು ಸರ್ಕಾರದ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.

    ಸಾರಿಗೆ ಇಲಾಖೆಗೆ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಶೇ.14ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ ನಡೆಸಿತ್ತು. ಈ ಹಿಂದೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾದಾಗ ತೈಲ ಬೆಲೆ ಹೆಚ್ಚಳದಿಂದ ಬಸ್ ಪ್ರಯಾಣ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯ ಎಂದಿದ್ದರು. ಈಗ ಕೇಂದ್ರ ಸರ್ಕಾರ 2.5 ರೂ. ತೈಲ ಬೆಲೆಯನ್ನು ಇಳಿಕೆ ಮಾಡಿದೆ. ಇದರಿಂದ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಬೇಕೇ? ಬೇಡವೇ ಎನ್ನುವ ಗೊಂದಲದಲ್ಲಿ ಸಾರಿಗೆ ಇಲಾಖೆ ಇದೆ.

    ದೆಹಲಿಯಿಂದ ಸಿಎಂ ಕುಮಾರಸ್ವಾಮಿ ವಾಪಸ್ ಬಂದ ಮೇಲೆ ಅವರ ಜೊತೆ ಸಾರಿಗೆ ಸಚಿವರ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಟಿಕೆಟ್ ಹೆಚ್ಚಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದ್ದರಿಂದ ಸದ್ಯಕ್ಕೆ ಟಿಕೆಟ್ ದರ ಹೆಚ್ಚಳ ಸಾಧ್ಯತೆ ಕಡಿಮೆ ಇದೆ ಎಂದು ಸಾರಿಗೆ ಇಲಾಖೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಿದ್ದು, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ. ಹೀಗಾಗಿ ಒಟ್ಟು 2.50 ರೂ ಕಡಿತವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಸಲಹೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮುಂದಿನ ವಾರದಿಂದ ಬಸ್ ಪ್ರಯಾಣದ ದರ ಏರಿಕೆ- ಡಿ.ಸಿ.ತಮ್ಮಣ್ಣ

    ಮುಂದಿನ ವಾರದಿಂದ ಬಸ್ ಪ್ರಯಾಣದ ದರ ಏರಿಕೆ- ಡಿ.ಸಿ.ತಮ್ಮಣ್ಣ

    ಮಂಡ್ಯ: ಬಸ್ ಪ್ರಯಾಣದ ದರ ಹೆಚ್ಚಿಸುವ ಕುರಿತು ಈ ಹಿಂದೆ ಸುಳಿವು ನೀಡಿದ್ದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ಮುಂದಿನ ವಾರದಲ್ಲಿಯೇ ದರ ಏರಿಕೆಯಾಗಲಿದೆ ಸ್ಪಷ್ಟನೆ ನೀಡಿದ್ದಾರೆ.

    ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡುತ್ತಿದೆ. ಇದರಿಂದಾಗಿಯೇ ಬಸ್ ಪ್ರಯಾಣದ ದರ ಏರಿಕೆ ಮಾಡಲಾಗುತ್ತಿದೆ ಎಂದ ಅವರು, ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ವೆಚ್ಚವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸದ್ಯದಲ್ಲಿಯೇ ಬಸ್ ಪ್ರಯಾಣ ದರ ಏರಿಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

    ನಾನು ಅಧಿಕಾರಕ್ಕೆ ಬಂದ ತಕ್ಷಣವೇ ಬಸ್ ಪ್ರಯಾಣದ ದರ ಏರಿಕೆಗೆ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಆದರೆ ನಾನು ಅದನ್ನು ತಡೆಹಿಡಿದಿದ್ದೆ. ಈಗ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದೆ. ಹೀಗಾಗಿ ಈ ಹಿಂದೆ ಅಧಿಕಾರಿಗಳು ಸಲ್ಲಿಸಿರುವ ಬಸ್ ಪ್ರಯಾಣದ ದರದ ಆಧಾರದ ಮೇಲೆ ದರವನ್ನು ಹೆಚ್ಚಿಸಲಾಗುತ್ತದೆ ಎಂದು ತಿಳಿಸಿದರು.

    ಪ್ರಯಾಣದ ದರ ಹೆಚ್ಚಾದರೆ ಪ್ರಯಾಣಿಕರಿಗೆ ಹೊರೆಯಾಗುವುದಿಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್‍ಗೆ ಹೆಚ್ಚು ಹಣ ಪಾವತಿಸಿ ಖರೀದಿಸುತ್ತಿದ್ದಾರೆ. ಇದು ಅವರಿಗೆ ಹೊರೆ ಆಗುತ್ತಿಲ್ಲವೇ? ಹಾಗೇ ಬಸ್ ಪ್ರಯಾಣದ ದರ ಏರಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದರು.

    ಇನ್ನು ಭಾರತ್ ಬಂದ್ ಬೆಂಬಲ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಬಂದ್‍ಗೆ ಜೆಡಿಎಸ್ ಪಕ್ಷದಿಂದ ಬೆಂಬಲ ನೀಡಿದ್ದೇವೆ. ಪಕ್ಷದ ಕಾರ್ಯಕರ್ತರು ಕೂಡ ಬಂದ್ ಅನ್ನು ಬೆಂಬಲಿಸುತ್ತಾರೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗುಂಡಿ ಮುಚ್ಚಲು ವಿಫಲವಾಗಿರೋ ಸರ್ಕಾರದಿಂದ ಬೆಂಗ್ಳೂರಿಗರ ಮೇಲೆ ಭೂಸಾರಿಗೆ ಕರ: ಹೇಗೆ ವಿಧಿಸಲಾಗುತ್ತೆ?

    ಗುಂಡಿ ಮುಚ್ಚಲು ವಿಫಲವಾಗಿರೋ ಸರ್ಕಾರದಿಂದ ಬೆಂಗ್ಳೂರಿಗರ ಮೇಲೆ ಭೂಸಾರಿಗೆ ಕರ: ಹೇಗೆ ವಿಧಿಸಲಾಗುತ್ತೆ?

    ಬೆಂಗಳೂರು: ಗುಂಡಿ ಮುಕ್ತ ರಸ್ತೆ ಮಾಡಲು ವಿಫಲವಾಗಿರುವ ಸಮ್ಮಿಶ್ರ ಸರ್ಕಾರ, ಈಗ ಬೆಂಗಳೂರು ನಾಗರಿಕರಿಗೆ ಆಘಾತವಾಗುವ ನಿರ್ಧಾರಕ್ಕೆ ಒಪ್ಪಿಗೆ ನೀಡಿದೆ. ಹದಗೆಟ್ಟ ರಸ್ತೆಗಳಿಂದ ಭಾರೀ ನಷ್ಟವಾಗಿದ್ದು, ಕರ ಸಂಗ್ರಹಕ್ಕೆ ಬೆಂಗಳೂರು ಮಹಾನಗರದ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೀಡಿದ್ದ ಸಲಹೆಗೆ ಸಮ್ಮತಿ ಸೂಚಿಸಿದೆ.

    ನಗರದಲ್ಲಿನ ರಸ್ತೆಗಳು ಗುಂಡಿಗಳಿಂದ ಹದಗೆಟ್ಟಿವೆ. ಇದರಿಂದ ರಸ್ತೆಗಳಲ್ಲಿ ಓಡಾಡುವ ಬಿಎಂಟಿಸಿ ಬಸ್‍ಗಳು ಆಗಾಗ ಹದಗೆಡುತ್ತಿವೆ. ಇದರಿಂದಾಗಿ ಬಿಎಂಟಿಸಿಗೆ ಹೆಚ್ಚಿನ ನಿರ್ವಹಣೆ ಹೊರೆ ಬೀಳುತ್ತಿದೆ. ಬಿಬಿಎಂಪಿಯೇ ಬಿಎಂಟಿಸಿ ಇಲಾಖೆಗೆ ಹಣ ನೀಡಬೇಕೆಂದು ಕೆಲದಿನಗಳ ಹಿಂದೆ ಸಾರಿಗೆ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

    ಸಾರಿಗೆ ಸಚಿವ ಡಿಸಿ ತಮ್ಮಣ್ಣ ಪ್ರಸ್ತಾವನೆ ಪುರಸ್ಕರಿಸಿರುವ ರಾಜ್ಯ ಸರ್ಕಾರ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ಸಾರ್ವಜನಿಕರಿಗೆ 2% ರಷ್ಟು ಭೂ ಸಾರಿಗೆ ಉಪಕರ ವಿಧಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಉಸ್ತುವಾರಿ ಸಚಿವ ಡಾ. ಪರಮೇಶ್ವರ್, ಬಿಬಿಎಂಪಿಗೆ ತನ್ನ ಸಂಪನ್ಮೂಲ ಕ್ರೋಡಿಕರಿಸುವ ಹಕ್ಕಿದೆ. ಕಾನೂನು ಬಾಹಿರವಾಗಿದ್ದರೆ ಮಾತ್ರ ಸರ್ಕಾರ ಮಧ್ಯಪ್ರವೇಶಿಸುತ್ತದೆ ಎಂದು ತಿಳಿಸಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

    ಕರ ವಿಧಿಸುವ ಬಗ್ಗೆ ಸಾರ್ವಜನಿಕರು ಹಾಗೂ ಬಿಬಿಎಂಪಿ ವಿರೋಧ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಆಸ್ತಿ ಮಾಲೀಕರು ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದು, ಮತ್ತೆ ಹೆಚ್ಚುವರಿ ತೆರಿಗೆ ಹೊರೆ ಹಾಕುವುದು ಸರಿಯಲ್ಲ. ಅಲ್ಲದೆ ಎರಡು ವರ್ಷಗಳ ಹಿಂದೆ ಆಸ್ತಿ ತೆರಿಗೆ 20% ರಿಂದ 25% ಹೆಚ್ಚಿಸಿ ಆಸ್ತಿ ಮಾಲೀಕರಿಗೆ ಹೆಚ್ಚಿನ ಹೊರೆ ಹೊರಿಸಿತ್ತು. ಹಾಗಾಗಿ ಮತ್ತೆ ತೆರಿಗೆದಾರರಿಗೆ ಕರದ ಹೊರೆ ಹೊರಿಸಲು ಬಿಡುವುದಿಲ್ಲ ಎಂದು ಬಿಬಿಎಂಪಿ ವಿರೋಧ ಪಕ್ಷ ನಾಯಕ ಪದ್ಮನಾಭ ರೆಡ್ಡಿ ಆಡಳಿತ ಪಕ್ಷದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೆಚ್ಚುವರಿ ತೆರಿಗೆ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಉಪಕರ ವಿಧಿಸುವ ಜವಾಬ್ದಾರಿ ಬಿಬಿಎಂಪಿ ಹೊತ್ತಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಕ್ರಮ ಕೈಗೊಳ್ಳಬೇಕಿದೆ. ನರ್ಮ್ ಯೋಜನೆಯಡಿಯಲ್ಲಿ ತೆರಿಗೆ ಸೆಸ್ ವಿಧಿಸಬೇಕಂಬ ನಿಯಮವಿದೆ. ಅದರ ಪ್ರಕಾರ ಸೆಸ್ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು.

    ಒಟ್ಟಾರೆ ಉಪಕರ ವಿಧಿಸಿ ಮತ್ತೆ ತೆರಿಗೆದಾರರಿಗೆ ಹೊರೆ ಹೆಚ್ಚಿಸಲು ಪಾಲಿಕೆ ಮುಂದಾಗಿದ್ದು, ಈ ವಿಷಯವನ್ನು ಮಂಗಳವಾರ ನಡೆಯಲಿರುವ ಕೌನ್ಸಿಲ್ ಸಭೆಯಲ್ಲಿ ಮುಂದಿಡಲಾಗುತ್ತದೆ. ಒಂದೊಮ್ಮೆ ಸಭೆಯಲ್ಲಿ ವಿಷಯ ಅನುಮೋದನೆಗೊಂಡರೆ ತೆರಿಗೆದಾರರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.

    ಕಳಪೆ ರಸ್ತೆ ಮಾಡುವ ಗುತ್ತಿಗೆದಾರರ ಬೇಜವಾಬ್ದಾರಿ ಹಾಗೂ ಬಿಎಂಟಿಸಿ ವೆಚ್ಚಕ್ಕೂ ನೇರವಾಗಿ ಜನರೇ ತೆರಿಗೆ ವಾಪತಿಸುವುದು ಎಷ್ಟು ಸರಿ? ರಸ್ತೆಗಳಿಂದ ಬಿಎಂಟಿಸಿಗೆ ಆಗಿರುವ ನಷ್ಟ ತುಂಬಲು ಬಿಬಿಎಂಪಿಯೇನೋ ಜನರಿಗೆ ಹೊರೆ ಹೊರೆಸುತ್ತಿದೆ. ಆದೆ ಇದೇ ಗುಂಡಿಗಳಿಂದ ಸಾರ್ವಜನಿಕರ ವಾಹನಗಳಿಗೆ ಆಗಿರುವ ಹಾನಿಯನ್ನು ಭರಿಸುವವರ್ಯಾರು? ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕಿ ಭಾರೀ ಟೀಕೆಗೆ ಗುರಿಯಾಗಿರುವ ಸರ್ಕಾರ ಈಗ ವಿಶೇಷವಾಗಿ ಬೆಂಗಳೂರಿಗರ ಮೇಲೆ ವಿಶೇಷ ಸೆಸ್ ಹಾಕಲು ಮುಂದಾಗಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದ್ದಿದೆ.

    ಭೂಸಾರಿಗೆ ಕರ ಹೇಗೆ ಜಾರಿ?
    ನೇರವಾಗಿ ಭೂ ಸಾರಿಗೆ ಕರ ವಿಧಿಸಲು ಸಾಧ್ಯವಿಲ್ಲ. ಹೀಗಾಗಿ ಈಗಿರುವ ಆಸ್ತಿ ತೆರಿಗೆಯನ್ನು ಜಾಸ್ತಿ ಮಾಡಲಾಗುತ್ತದೆ. ಒಂದೊಂದು ಪ್ರದೇಶಕ್ಕೆ ಒಂದೊಂದು ಆಸ್ತಿ ತೆರಿಗೆ ಇದೆ. ಎಂಜಿ ರಸ್ತೆಯಲ್ಲಿನ ಆಸ್ತಿ ತೆರಿಗೆಯೇ ಬೇರೆ, ಬಗಲಗುಂಟೆಯಲ್ಲಿನ ತೆರಿಗೆಯೇ ಬೇರೆ ಇದೆ. ಸದ್ಯ ಆಸ್ತಿ ತೆರಿಗೆಯಿಂದ ಸುಮಾರು ವರ್ಷಕ್ಕೆ 2 ಸಾವಿರ ಕೋಟಿ ರೂ. ಸಂಗ್ರಹವಾಗುತ್ತಿದೆ. ಈಗ 2% ರಷ್ಟು ಕರ ವಿಧಿಸಿದರೆ ಅಂದಾಜು 40 ಕೋಟಿ ರೂ. ತೆರಿಗೆ ಸಂಗ್ರಹವಾಗಬಹುದು. ಈ ಹಣವನ್ನು ಸಾರಿಗೆ ಸಂಸ್ಥೆ ನೀಡಲಾಗುತ್ತದೆ.

    2011-2012 ರಿಂದ 2016-17ರವರೆಗಿನ ಅವಧಿಯಲ್ಲಿ ಬಿಎಂಟಿಸಿಗೆ 608 ಕೋಟಿ ರೂ. ನಷ್ಟವಾಗಿದೆ. ಒಟ್ಟು ಆದಾಯದಲ್ಲಿ 27.27% ಹಣ ಡೀಸೆಲ್ ಖರೀದಿಗೆ ಖರ್ಚಾದರೆ 53% ಹಣ ಸಿಬ್ಬಂದಿ ಸಂಬಳಕ್ಕೆ ಹೋಗುತ್ತದೆ. ಬಿಎಂಟಿಸಿಗೆ ವಿಶೇಷವಾಗಿ ಮೆಟ್ರೋ ಸಂಚರಿಸುವ ಮಾರ್ಗಗಳಲ್ಲಿ ಕಡಿಮೆ ಆದಾಯ ಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv  

  • ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ

    ಡಿಜಿ ಲಾಕರ್ ಮೂಲಕವೇ ವಾಹನದ ದಾಖಲೆಗಳನ್ನು ತೋರಿಸಿ: ಫೈಲ್ ಸೇವ್ ಮಾಡೋದು ಹೇಗೆ? 59 ಸೆಕೆಂಡಿನ ವಿಡಿಯೋ ನೋಡಿ

    ನವದೆಹಲಿ: ವಾಹನಗಳ ದಾಖಲೆಗಳನ್ನು ಸವಾರರು ತಮ್ಮ ಡಿಜಿ ಲಾಕರ್ ಆ್ಯಪ್ ಮೂಲಕವೇ ಪೊಲೀಸರಿಗೆ ತೋರಿಸಬಹುದೆಂದು ಕೇಂದ್ರ ಸರ್ಕಾರ ಡಿಜಿ ಲಾಕರ್ ಸೇವೆಗೆ ಅಧಿಕೃತ ಆದೇಶ ನೀಡಿದೆ.

    ಕೇಂದ್ರ ಸಾರಿಗೆ ಇಲಾಖೆಯು ದಾಖಲೆಗಳನ್ನು ಡಿಜಿ ಲಾಕರ್ ನಲ್ಲಿಯೇ ಪರಿಶೀಲಿಸಬಹುದೆಂದು ಮಾನ್ಯತೆ ನೀಡಿ, ಮಹತ್ವದ ಆದೇಶವನ್ನು ಹೊರಡಿಸಿದೆ. ಇದರಿಂದಾಗಿ ವಾಹನಸವಾರರು ಇನ್ನು ಮುಂದೆ ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳನ್ನು ಅಡ್ಡಹಾಕಿ ದಾಖಲೆ ಕೇಳಿದರೆ, ಸವಾರರು ತಮ್ಮ ಮೊಬೈಲ್ ನಲ್ಲಿರುವ ದಾಖಲೆ ತೋರಿಸಿ ದಂಡ ಹಾಗೂ ಕಾನೂನಿನ ಕ್ರಮದಿಂದ ಪಾರಾಗಬಹುದಾಗಿದೆ.

    ಈ ಸಂಬಂಧ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಸ್ಮಾರ್ಟ್​ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆಗಳನ್ನು ಸಲ್ಲಿಸಬಹುದೆಂದು ಉಲ್ಲೇಖಿಸಲಾಗಿದೆ. ಸದ್ಯ ಇಲಾಖೆ ಡಿಜಿಲಾಕರ್ ​ಆ್ಯಪ್​ನಲ್ಲಿ ಚಾಲನಾ ಪರವಾನಗಿ, ನೋಂದಣಿ ಪತ್ರ ಮತ್ತು ವಾಯುಮಾಲಿನ್ಯ ಪ್ರಮಾಣಪತ್ರದ ಡಿಜಿಟಲ್ ಪ್ರತಿಗಳನ್ನು ಸಂಗ್ರಹಿಸಬಹುದಾಗಿದೆ.

    ಇದಲ್ಲದೇ ಕುಡಿದು, ಅಜಾಗರೂಕ ಚಾಲನೆ ಹಾಗೂ ಇನ್ನು ಮುಂತಾದ ಸಂದರ್ಭಗಳಲ್ಲಿ ಸಂಚಾರಿ ಪೊಲೀಸರು ಸವಾರರ ಮೂಲ ಚಾಲನಾ ಪತ್ರವನ್ನು ಮುಟ್ಟುಗೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ. ಅಧಿಕಾರಿಗಳು ಕಾನೂನು ರೀತಿ ಡಿಎಲ್ ಮತ್ತು ಆರ್ ಸಿ ಜಪ್ತಿಮಾಡಬೇಕಾದ ಪ್ರಕರಣಗಳಲ್ಲಿ ದಾಖಲೆಯ ಮೂಲ ಪ್ರತಿ ಅಗತ್ಯವಾಗಿರಲಿದೆ.

    ಏನಿದು ಡಿಜಿ ಲಾಕರ್?
    ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಡಿಜಿಟಲ್ ರೂಪದಲ್ಲಿ ದಾಖಲೆಗಳನ್ನು ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 1 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ವಿಮೆ ಹಾಗೂ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.

    ಡಿಜಿ ಲಾಕರ್ ಪಡೆಯುವುದು ಹೇಗೆ?
    ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್‍ಗಳಲ್ಲಿ ಪ್ಲೇ ಸ್ಟೋರ್ ಹಾಗೂ ಆಪಲ್ ಐಓಎಸ್ ಮುಖಾಂತರ ಡಿಜಿಲಾಕರ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿ, ಸೈನ್ ಅಪ್ ಆಯ್ಕೆ ಒತ್ತಬೇಕು, ನಂತರ ಹೊಸ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಹಾಕಿ, ಆಧಾರ್ ಸಂಖ್ಯೆ ನಮೂದಿಸಿ ನೋಂದಣಿ ಮಾಡಿಕೊಂಡು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ.

    ದಿನ ನಿತ್ಯ ಜೀವನದಲ್ಲಿ ಡಿಜಿ ಲಾಕರ್ ಉಪಯೋಗವೇನು?

    ಆಧಾರ್ ಮೂಲಕ ಡಿಜಿ ಲಾಕರ್ ಬಳಸುವುದು ಹೇಗೆ?

    https://youtu.be/27U4XUl-nyg

    ಡಿಜಿ ಲಾಕರ್ ನಲ್ಲಿ ದಾಖಲೆಗಳನ್ನು ಸಂಗ್ರಹಿಸುವುದು ಹೇಗೆ?

    https://youtu.be/7P17ZJdKmts

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews