Tag: ಸಾರಿಗೆ ಇಲಾಖೆ

  • ಬಸ್ ಸಂಚಾರ ಆರಂಭ- ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಗದಗ ಸಾರಿಗೆ ಅಧಿಕಾರಿಗಳು

    ಬಸ್ ಸಂಚಾರ ಆರಂಭ- ಸರ್ಕಾರದ ಮಾರ್ಗಸೂಚಿಗಾಗಿ ಕಾಯುತ್ತಿರುವ ಗದಗ ಸಾರಿಗೆ ಅಧಿಕಾರಿಗಳು

    ಗದಗ: ಜಿಲ್ಲೆನಲ್ಲಿ ಬಸ್ ಸಂಚಾರಕ್ಕೆ ಎಲ್ಲ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸರ್ಕಾರದ ಮಾರ್ಗಸೂಚಿಗಾಗಿ ಸಾರಿಗೆ ಅಧಿಕಾರಿಗಳು ಕಾಯುತ್ತಿದ್ದಾರೆ.

    ಜಿಲ್ಲೆಯ ಒಟ್ಟು 7 ಘಟಕಗಳಿಂದ 136 ಬಸ್ ಬಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಕ್ಕಾಗಿ ವಿಭಾಗಿಯ ಘಟಕದಲ್ಲಿ ಸಿಬ್ಬಂದಿಗಳ ಸ್ಕ್ರೀನಿಂಗ್, ಬಸ್ ಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಇಲಾಖೆಯಲ್ಲಿ ಕೆಲಸ ಮಾಡುವ ಮೆಕ್ಯಾನಿಕ್, ಚಾಲಕ, ನಿರ್ವಾಹಕ ಹಾಗೂ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.

    ಬಸ್ ಆಸನಗಳಲ್ಲೂ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ಅದಕ್ಕಾಗಿ ಬಸ್‍ನ ಆಸನಗಳಿಗೆ ಕೆಂಪು ಬಣ್ಣದಿಂದ ಮಾರ್ಕ್ ಮಾಡಲಾಗುತ್ತಿದೆ. ಮಾರ್ಕ್ ಮಾಡಿದ ಸ್ಥಳದಲ್ಲಿ ಕೂರದೆ ಅಂತರ ಕಾಯ್ದುಕೊಳ್ಳಲು ಒಂದು ಬಸ್‍ನಲ್ಲಿ 28 ಜನರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಬಸ್ ನಿಲ್ದಾಣದಲ್ಲೂ ಒಂದೇ ಗೇಟ್ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. 3 ಗೇಟ್ ಗಳ ಪೈಕಿ, 2 ಗೇಟ್ ಗೆ ಮುಳ್ಳಿನ ಬೇಲಿ ಹಾಕಿ ಮುಚ್ಚಲಾಗಿದೆ. ಒಂದೇ ಗೇಟ್ ತೆರೆಯಲಾಗಿದೆ. ಇದರಿಂದಾಗಿ ಪ್ರಯಾಣಿಕರ ಆರೋಗ್ಯ ತಪಾಸಣೆ ಅನುಕೂಲವಾಗತ್ತದೆ. ಸರ್ಕಾರದ ಮಾರ್ಗಸೂಚಿ ನೋಡಿಕೊಂಡು ಬಸ್ ಬಿಡುವುದಾಗಿ ಗದಗ ಸಾರಿಗೆ ಅಧಿಕಾರಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

  • ಕೊರೊನಾ ಭೀತಿ – ಸಾರಿಗೆ ಇಲಾಖೆಗೆ 28ಲಕ್ಷ ರೂ. ಅಧಿಕ ನಷ್ಟ

    ಕೊರೊನಾ ಭೀತಿ – ಸಾರಿಗೆ ಇಲಾಖೆಗೆ 28ಲಕ್ಷ ರೂ. ಅಧಿಕ ನಷ್ಟ

    – ಕಲಬುರಗಿ ಮಾರ್ಗದ ಬಸ್‍ಗಳು ಖಾಲಿ

    ರಾಯಚೂರು: ಕೊರೊನಾ ಎಲ್ಲೆಡೆ ಭೀತಿ ಹುಟ್ಟಿಸಿರುವ ಜೊತೆಗೆ ಆರ್ಥಿಕತೆಯ ಹೊಡೆತವನ್ನು ಕೊಟ್ಟಿದೆ. ಸಾರಿಗೆ ಇಲಾಖೆಯಂತೂ ಎಂದು ಕಂಡರಿಯದ ನಷ್ಟವನ್ನು ಈಗ ಅನುಭವಿಸುತ್ತಿದೆ.

    ರಾಯಚೂರಿನಲ್ಲಿ ಜನರಿಲ್ಲದೆ ಬಸ್‍ಗಳ ಸಂಚಾರವೇ ವಿರಳವಾಗಿದೆ. ಕಳೆದ ಆರು ದಿನಗಳಲ್ಲಿ ರಾಯಚೂರು ವಿಭಾಗಕ್ಕೆ 28 ಲಕ್ಷ ರೂ. ಅಧಿಕ ನಷ್ಟವಾಗಿದೆ ಎಂದು ರಾಯಚೂರು ವಿಭಾಗೀಯ ನಿಯಂತ್ರಕ ಅಧಿಕಾರಿ ಎಂ ವೆಂಕಟೇಶ ಹೇಳಿದ್ದಾರೆ.

    ಕಲಬುರಗಿಯಲ್ಲಿ ಒಂದು ಸಾವು ಹಾಗೂ ಇಬ್ಬರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜನ ಇನ್ನಷ್ಟು ಭಯಭೀತರಾಗಿದ್ದಾರೆ. ವಿಭಾಗದಿಂದ ದಿನವೊಂದಕ್ಕೆ ಸರಾಸರಿ 30 ಬಸ್‍ಗಳ ಸಂಚಾರ ರದ್ದಾಗಿದ್ದು, ದಿನಕ್ಕೆ 100 ಟ್ರಿಪ್ ಬಸ್ ಸಂಚಾರ ಕಡಿತವಾಗಿದೆ. ಶ್ರೀಶೈಲ ಜಾತ್ರೆ ಹಿನ್ನೆಲೆಯಲ್ಲಿ 55 ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೇವಲ 15 ಬಸ್‍ಗಳಲ್ಲಿ ಮಾತ್ರ ಜನ ಸಂಚಾರ ಮಾಡುತ್ತಿದ್ದಾರೆ.

    ರಾಯಚೂರು ಜಿಲ್ಲೆಯ 8 ಡಿಪೋಗಳಲ್ಲಿ ಒಟ್ಟು 660 ಬಸ್‍ಗಳು ಓಡಾಡುತ್ತಿವೆ. ಕಲಬುರಗಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ನಂತರ ಜನರು ಬಸ್ ಸಂಚಾರ ಮಾಡುತ್ತಿಲ್ಲ ಎಂದು ಸಾರಿಗೆ ಇಲಾಖೆ ವಿಭಾಗೀಯ ನಿಯಂತ್ರಕ ಎಂ. ವೆಂಕಟೇಶ್ ತಿಳಿಸಿದ್ದಾರೆ.

  • ಈ ವರ್ಷವೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ಇಲ್ಲ

    ಈ ವರ್ಷವೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ಇಲ್ಲ

    ಬೆಂಗಳೂರು: ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಾರಿಗೆ ತಂದಿದ್ದ ರಿಯಾಯ್ತಿ ದರದಲ್ಲಿ ಬಸ್ ಪಾಸ್ ನೀಡುವ ಯೋಜನೆಯನ್ನು ಈ ವರ್ಷವೂ ಕೈ ಬಿಡಲು ಸಾರಿಗೆ ಇಲಾಖೆ ನಿರ್ಧರಿಸಿದೆ.

    ರಿಯಾಯ್ತಿ ದರದಲ್ಲಿ ಬಸ್‍ ಪಾಸ್ ನೀಡುವ ಯೋಜನೆ ಜಾರಿಗೆ ತರುವುದು ಕಷ್ಟ ಅಂತ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಸಚಿವರ ಮಾತಿನಿಂದ ಈ ಬಾರಿಯೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ಸಿರುವುದು ಡೌಟ್ ಆಗಿದೆ.

    ವಿಧಾನ ಪರಿಷತ್‍ನಲ್ಲಿಂದು ಜೆಡಿಎಸ್‍ನ ಸದಸ್ಯ ಮರಿತಿಬ್ಬೇಗೌಡ ವಿಷಯ ಪ್ರಸ್ತಾಪ ಮಾಡಿದರು. ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಕ್ಕಳಿಗೆ ಮಾತ್ರ ರಿಯಾಯಿತಿ ದರದಲ್ಲಿ ಪಾಸ್ ವಿತರಣೆ ಆಗುತ್ತಿದೆ. ಆದರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಯೋಜನೆ ಸಿಗುತ್ತಿಲ್ಲ. ಸರ್ಕಾರ ಮತ್ತೆ ರಿಯಾಯ್ತಿ ದರದಲ್ಲಿ ಬಸ್ ಪಾಸ್ ನೀಡಬೇಕು ಅಂತ ಮನವಿ ಮಾಡಿದರು. ಮರಿತಿಬ್ಬೇಗೌಡ ಮಾತಿಗೆ ಧ್ವನಿಗೂಡಿಸಿದ ಬಸವರಾಜ್ ಹೊರಟ್ಟಿ ಮಕ್ಕಳಲ್ಲಿ ಭೇದ-ಭಾವ ಮಾಡಬೇಡಿ. ಎಲ್ಲಾ ವರ್ಗದ ವಿದ್ಯಾರ್ಥಿಗಳಗೆ ಪಾಸ್ ಕೊಡಬೇಕು ಅಂತ ಮನವಿ ಮಾಡಿದರು.

    ಸದಸ್ಯರ ಪ್ರಶ್ನೆಗೆ ಉತ್ತರ ನೀಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಮಸ್ಯೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು. 2014ರಿಂದ ಇಲ್ಲಿಯವರೆಗೆ ಸರ್ಕಾರದಿಂದ ಬಾಕಿ ಬರಬೇಕಿದ್ದ 3 ಸಾವಿರ ಕೋಟಿ ರೂ. ಪಾಸ್ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಬೇರೆ ಮಕ್ಕಳಿಗೆ ಪಾಸ್ ಕೊಡಲು ಆಗುತ್ತಿಲ್ಲ. ಸರ್ಕಾರ ಹಣ ಕೊಡದ ಹಿನ್ನೆಲೆಯಲ್ಲಿ ನಿಗಮಗಳು ನಷ್ಟದಲ್ಲಿ ಇದೆ. ನಿಗಮ ಆರ್ಥಿಕವಾಗಿ ಸದೃಢವಾದ ನಂತರ ಪಾಸ್ ವಿತರಣೆ ಬಗ್ಗೆ ಚಿಂತನೆ ಮಾಡುತ್ತೇವೆ ಅಂತ ಸ್ಪಷ್ಟಪಡಿಸಿದರು.

  • ನಕಲಿ ಅಧಿಕಾರಿಯಿಂದ ಸರ್ಕಾರಿ ಬಸ್ ತಪಾಸಣೆ – ಕಂಡಕ್ಟರ್‌ಗೆ ಸಿಕ್ಕಿಬಿದ್ದ ಭೂಪ

    ನಕಲಿ ಅಧಿಕಾರಿಯಿಂದ ಸರ್ಕಾರಿ ಬಸ್ ತಪಾಸಣೆ – ಕಂಡಕ್ಟರ್‌ಗೆ ಸಿಕ್ಕಿಬಿದ್ದ ಭೂಪ

    ಕೊಪ್ಪಳ: ಸರ್ಕಾರಿ ಬಸ್ ತಪಾಸಣೆ ಮಾಡುತ್ತಿದ್ದ ನಕಲಿ ಸಾರಿಗೆ ಅಧಿಕಾರಿಯನ್ನು ಕಂಡಕ್ಟರ್ ಪತ್ತೆ ಹಚ್ಚಿ ಮೇಲಾಧಿಕಾರಿಗಳಿಗೆ ಒಪ್ಪಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ತಾಲೂಕಿನ ಹುಲಗಿಯಿಂದ ಗಂಗಾವತಿ ಕಡೆ ಹೊರಟಿದ್ದ ಬಸ್‍ನ್ನು ತಪಾಸಣೆ ಮಾಡುವ ನೆಪದಲ್ಲಿ ಬಂದ ಆತ, ಟಿಕೆಟ್ ಮತ್ತು ಕ್ಯಾಶ್ ತಪಾಸಣೆ ಮಾಡಿದ್ದಾನೆ. ಈ ವೇಳೆ ಬಸ್ ಕಂಡೆಕ್ಟರ್ ಗೆ ಸಂಶಯ ಬಂದು ವಿಚಾರಣೆ ಮಾಡಿದಾಗ ನಕಲಿ ಅಧಿಕಾರಿ ಎಂದು ತಿಳಿದು ಬಂದಿದೆ.

    ಬಸ್ ಪ್ರಯಾಣಿಕನ ಸೋಗಿನಲ್ಲಿ ಬಸ್ ಹತ್ತಿದ ಅಸಾಮಿ ನಂತರ ಕಂಡಕ್ಟರ್ ಬಳಿ ಬಂದು ನಾನು ತನಿಖಾಧಿಕಾರಿ ಎಂದು ಹೇಳಿ ಟಿಕೆಟ್ ಮಷಿನ್ ಪಡೆದುಕೊಂಡಿದ್ದಾನೆ. ಟೆಕೆಟ್ ಮತ್ತು ಹಣ ಎಲ್ಲವನ್ನು ಪರಿಶೀಲನೆ ಮಾಡಿದ್ದಾನೆ. ನಂತರ ನೀನು ಟಿಕೆಟ್ ಸರಿಯಾಗಿ ನೀಡಿಲ್ಲ. ನಿನ್ನ ಮೇಲೆ ಕೇಸ್ ಹಾಕುತ್ತೇನೆ ಎಂದು ಕಂಡಕ್ಟರ್ ಗೆ ಅವಾಜ್ ಹಾಕಿದ್ದಾನೆ. ಜೊತೆಗೆ 500 ರೂ. ದುಡ್ಡನ್ನು ಪಡೆದುಕೊಂಡಿದ್ದಾನೆ.

    ಈ ವೇಳೆ ಅಸಾಮಿಯ ನಡುವಳಿಕೆ ನೋಡಿ ಅನುಮಾನಗೊಂಡ ಕಂಡಕ್ಟರ್, ಆತನನ್ನು ಪಶ್ನೆ ಮಾಡಲು ಶುರು ಮಾಡಿದ್ದಾರೆ. ನೀನು ನಮ್ಮ ಸಾರಿಗೆ ಇಲಾಖೆ ಅಧಿಕಾರಿನಾ? ನಿನ್ನ ಗುರುತಿನ ಚೀಟಿ ತೋರಿಸು ಎಂದು ಕೇಳಿದ್ದಾರೆ. ಈ ವೇಳೆ ಬೇರೆ ಏನೋ ಸಬೂಬು ಹೇಳಿ ಹೊರಹೋಗಲು ನೋಡಿದ ಆತನನ್ನು ಹಿಡಿದ ಕಂಡಕ್ಟರ್, ಆತನನ್ನು ಸಾರಿಗೆ ಇಲಾಖೆ ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ.

    ಸಿಕ್ಕಿಬಿದ್ದ ವ್ಯಕ್ತಿ ಆಂಧ್ರ ಮೂಲದವನು ಎಂದು ತಿಳಿದುಬಂದಿದ್ದು, ವಿಚಾರಣೆ ಮಾಡುವ ವೇಳೆ ನಾನು ನಕಲಿ ಅಧಿಕಾರಿ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೆ ನಕಲಿ ಅಧಿಕಾರಿಯನ್ನು ಕಂಡೆಕ್ಟರ್ ಹನುಮೇಶ್ ಮೇಲಾಧಿಕಾರಿ ವಶಕ್ಕೆ ಒಪ್ಪಿಸಿದ್ದಾರೆ.

  • ಸಾರಿಗೆ ಸಚಿವರ ಜಿಲ್ಲೆಯಲ್ಲೇ ನಕಲಿ ಪಾಸ್ ಹಾವಳಿ- ಇಲಾಖೆಗೆ 4.38 ಲಕ್ಷ ರೂ. ನಷ್ಟ

    ಸಾರಿಗೆ ಸಚಿವರ ಜಿಲ್ಲೆಯಲ್ಲೇ ನಕಲಿ ಪಾಸ್ ಹಾವಳಿ- ಇಲಾಖೆಗೆ 4.38 ಲಕ್ಷ ರೂ. ನಷ್ಟ

    ಬೆಳಗಾವಿ: ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರ ತವರು ಜಿಲ್ಲೆಯಲ್ಲೇ ನಕಲಿ ಪಾಸ್ ಹಾವಳಿ ಹೆಚ್ಚಾಗಿದೆ. ಪರಿಣಾದ ಇಲಾಖೆಯೂ 4.38 ಲಕ್ಷ ರೂ. ನಷ್ಟ ಅನುಭವಿಸಿದೆ.

    ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗಲು ಸರ್ಕಾರ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುತ್ತಿದೆ. ಆದರೆ ಕಾರ್ಮಿಕರು ವಿದ್ಯಾರ್ಥಿಗಳ ಬಸ್ ಪಾಸ್ ಪಡೆದಿರುವ ಬಗ್ಗೆ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ನಗರದ ಉದ್ಯಮಬಾಗದ 21 ಕಾರ್ಮಿಕರು ವಿದ್ಯಾರ್ಥಿಗಳೆಂದು ಸುಳ್ಳು ದಾಖಲೆಗಳನ್ನು ನೀಡಿ ಒಂದು ಶೈಕ್ಷಣಿಕ ವರ್ಷದ ಅವಧಿಗೆ ಸಾರಿಗೆ ಸಂಸ್ಥೆಯಿಂದ ರಿಯಾಯಿತಿ ದರದಲ್ಲಿ ಬಸ್ ಪಾಸ್ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತವರ ವಿರುದ್ಧ ಸಾರಿಗೆ ಸಂಸ್ಥೆಯ ಸಿಬ್ಬಂದಿ ದೂರು ದಾಖಲಿಸಿದ್ದಾರೆ.

    2019ರ ಜೂನ್ 27ರಿಂದ 2020ರ ಏಪ್ರೀಲ್ ಅಂತ್ಯದ ವರೆಗೆ ಚಾಲ್ತಿಯಲ್ಲಿರುವಂತೆ ಪಾಸ್ ಉಪಯೋಗಿಸುತ್ತಿದ್ದರು. ಈ ಅವಧಿಯಲ್ಲಿ ಸಾರಿಗೆ ಸಂಸ್ಥೆಗೆ 4.38 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ದೂರು ದಾಖಲಿಸಿದ್ದಾರೆ.

  • ಶೀಘ್ರದಲ್ಲೇ ರೆಡಿಯಾಗಲಿದೆ ಬಸ್ ಮ್ಯೂಸಿಯಂ

    ಶೀಘ್ರದಲ್ಲೇ ರೆಡಿಯಾಗಲಿದೆ ಬಸ್ ಮ್ಯೂಸಿಯಂ

    ಬೆಂಗಳೂರು: ಸಾರಿಗೆ ಜನರ ಸಂಪರ್ಕ ಕೊಂಡಿ. ಅದರಲ್ಲೂ ಜನ ಸಾಮಾನ್ಯರ ಪ್ರಮುಖ ಸಾರಿಗೆ ಎಂದರೆ ಸರ್ಕಾರಿ ಬಸ್ಸುಗಳು. ಹೀಗಾಗಿ ರಾಜ್ಯದ ಬಸ್ ಇತಿಹಾಸದ ಕುರಿತು ವಸ್ತು ಸಂಗ್ರಹಾಲಯ ನಿರ್ಮಿಸಲು ಸಾರಿಗೆ ಇಲಾಖೆ ಮುಂದಾಗಿದೆ.

    ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಯ ಇತಿಹಾಸ ಸಾರುವ ಅತ್ಯಾಕರ್ಷಕ ವಸ್ತು ಸಂಗ್ರಹಾಲಯವನ್ನು ಸಾರಿಗೆ ಇಲಾಖೆಯಿಂದ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಶೀಘ್ರದಲ್ಲೇ ನಿರ್ಮಾಣ ಮಾಡಲು ಮುಂದಾಗಿದೆ.

    ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ಅರ್ಧ ಶತಮಾನ ಪೂರೈಸಿದ ಸವಿ ನೆನಪಿಗಾಗಿ ಈ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿತ್ತಿದ್ದು, ಕೆಸ್‍ಆರ್‍ಟಿಸಿ ಬಸ್ಸುಗಳು ಯಾವಾಗ ರಸ್ತೆಗಳಿದವು, ವಾಯುವ್ಯ, ಈಶಾನ್ಯ, ನೈಋತ್ಯ ಸೇರಿದಂತೆ ಇತರೆ ವಿಭಾಗಗಳು ಹೇಗೆ ರೂಪುಗೊಂಡವು? ಈ ಸಂಸ್ಥೆಗಳ ಉಗಮಕ್ಕೂ ಮುನ್ನ, ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಹೇಗಿತ್ತು ಎಂಬುದರ ಕುರಿತು ಬಹುತೇಕರಿಗೆ ತಿಳಿದಿಲ್ಲ. ತಿಳಿದುಕೊಳ್ಳೋಣ ಅಂದುಕೊಂಡರೂ, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವ ಯಾವುದೇ ಕೋಶ ಇಲ್ಲ. ಹೀಗಾಗಿ ವಸ್ತು ಸಂಗ್ರಹಾಲಯ ನಿರ್ಮಿಸಲು ಸಾರಿಗೆ ಇಲಾಖೆ ಚಿಂತಿಸಿದೆ.

    ದೇಶದಲ್ಲಿ ರೈಲ್ವೆ ಮ್ಯೂಸಿಯಂ ಇದೆ. ಆದರೆ ಬಸ್ ಸಾರಿಗೆ ವ್ಯವಸ್ಥೆಯ ಇತಿಹಾಸ ಹೇಳುವ ಮ್ಯೂಸಿಯಂ ಎಲ್ಲೂ ಇಲ್ಲ. ಈ ಕೊರತೆಯನ್ನು ನೀಗಿಸಲು ಮೊದಲ ಬಾರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈ ಪ್ರಯತ್ನಕ್ಕೆ ಕೈ ಹಾಕಿದೆ.

    ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) ಅರ್ಧ ಶತಮಾನ ಪೂರೈಸಿದ ಸವಿ ನೆನಪಿಗಾಗಿ, ಸುಮಾರು 3 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ವಸ್ತು ಸಂಗ್ರಹಾಲಯ ಜನ್ಮ ತಾಳಲಿದೆ. ಮ್ಯೂಸಿಯಂ ನಿರ್ಮಿಸಲು ಅನಾವಶ್ಯಕವಾಗಿ ದುಡ್ಡು ವೆಚ್ಚ ಮಾಡುತ್ತಿಲ್ಲ. ಬದಲಾಗಿ ಹಳೆಯ ಹಾಗೂ ಗುಜರಿ ಬಸ್‍ಗಳೇ, ಮ್ಯೂಸಿಯಂ ಆಗಿ ಪರಿವರ್ತನೆಗೊಂಡು, ಸಾರಿಗೆ ಇತಿಹಾಸ ಸಾರಲಿವೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿಕೊಂಡು, ವಿಶೇಷ ವಿನ್ಯಾಸದ ವಸ್ತು ಸಂಗ್ರಹಾಲಯ ನಿರ್ಮಿಸಲು ನಿರ್ಧರಿಸಲಾಗಿದೆ. ಹಳೇ ಬಸ್ ಗಳಿಗೆ ಆಕರ್ಷಕ ರೂಪ ಕೊಟ್ಟು ಮ್ಯೂಸಿಯಂ ನಿರ್ಮಿಸಲು, ಅನೇಕ ವಿನ್ಯಾಸಕರು ಮುಂದೆ ಬಂದಿದ್ದಾರೆ. ಮೆಜೆಸ್ಟಿಕ್‍ನಲ್ಲಿನ ಒಟ್ಟು 5 ಹಳೆಯ ಬಸ್ಸುಗಳು ಮ್ಯೂಸಿಯಂ ರೂಪ ತಾಳಲಿವೆ.

  • ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಾಲಕ, ನಿರ್ವಾಹಕರಿಗೆ ಹಬ್ಬಕ್ಕೂ ಸಿಗ್ಲಿಲ್ಲ ಸಂಬಳ- ನೌಕರರ ಕ್ಷಮೆಯಾಚಿಸಿದ ಡಿಸಿಎಂ ಲಕ್ಷ್ಮಣ ಸವದಿ

    ಚಿತ್ರದುರ್ಗ: ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮಾತಿಗೆ ಈಗ ಡಿಸಿಎಂ ಸವದಿ ದನಿಗೂಡಿಸಿದ್ದಾರೆ. ಬಿಎಂಟಿಸಿ, ಕೆಎಸ್‍ಆರ್ ಟಿಸಿಯ ಚಾಲಕ-ನಿರ್ವಾಹಕರಿಗೆ ಇನ್ನೂ ಸಂಬಳ ಆಗಿಲ್ಲ. ಕೇವಲ ಅಧಿಕಾರಿಗಳಿಗೆ ಮಾತ್ರ ಆಗಿದ್ದು, ಹಬ್ಬದಲ್ಲಿ ಬೋನಸ್, ಸ್ವೀಟ್ಸ್ ನಿರೀಕ್ಷೆಯಲ್ಲಿದ್ದ ಶ್ರಮಿಕ ವರ್ಗಕ್ಕೆ ಶಾಕ್ ಆಗಿದೆ.

    ಈ ಬಗ್ಗೆ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ್ ಸವದಿ ಅವರು, ಸಾರಿಗೆ ನೌಕರರ ಕ್ಷಮೆಯಾಚಿಸಿದರು. ಹಬ್ಬಕ್ಕೆ ಮುಂಚಿತವಾಗಿ ಸಂಬಳ ನೀಡಬೇಕಿತ್ತು. ಆದರೆ ಸಾರಿಗೆ ನಿಗಮದಲ್ಲಿ ಹಣದ ಕೊರತೆ ಇದ್ದು, ಅ.9ಕ್ಕೆ ಸಂಬಳ ಸಂದಾಯ ಮಾಡುತ್ತೇವೆ. ಹುಬ್ಬಳ್ಳಿ, ಕಲಬುರಗಿ ವಿಭಾಗದಲ್ಲಿ ಸಂಬಳ ತಡವಾಗಿದೆ. ಚಾಲಕ, ನಿರ್ವಾಹಕರು ಸಹಕಾರ ನೀಡಲು ಮನವಿ ಮಾಡುತ್ತೇನೆ ಎಂದರು.

    ಇದೇ ವೇಳೆ ಬಿಜೆಪಿ ನಾಯಕರ ಸಭೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಎಸ್‍ವೈ ಪ್ರಶ್ನಾತೀತ ನಾಯಕರಾಗಿದ್ದು, ಈಗಲೂ ಯಡಿಯೂರಪ್ಪ ನಮ್ಮ ನಾಯಕರು, ಮುಂದೆಯೂ ನಾಯಕರು. ಅವರ ಕೈ ಬಲಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಕೇಂದ್ರದಿಂದ ಹೆಚ್ಚಿನ ನೆರೆ ಪರಿಹಾರದ ಸಿಗುವ ವಿಶ್ವಾಸವಿದೆ ಎಂದರು.

  • ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಬಸ್ ಡ್ರೈವರ್ ಹೆಲ್ಮೆಟ್ ಧರಿಸಿಲ್ಲವೆಂದು 500 ರೂ. ದಂಡ

    ಲಕ್ನೋ: ಉತ್ತರ ಪ್ರದೇಶದ ನೊಯ್ದಾದ ಖಾಸಗಿ ಬಸ್ ಮಾಲೀಕರೊಬ್ಬರು ತಮ್ಮ ಬಸ್ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂದು ಸಾರಿಗೆ ಇಲಾಖೆ 500 ರೂ. ದಂಡದ ಚಲನ್ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.

    ಸೆಪ್ಟೆಂಬರ್ 11ರಂದು ಆನ್‍ಲೈನ್ ಮೂಲಕ ಚಲನ್ ಕಳುಹಿಸಲಾಗಿದ್ದು, ನಮ್ಮ ಸಹೋದ್ಯೋಗಿಯೊಬ್ಬರು ಶುಕ್ರವಾರ ಇದನ್ನು ಪರಿಶೀಲಿಸಿದ್ದಾರೆ ಎಂದು ಬಸ್ ಮಾಲೀಕ ನಿರಂಕರ್ ಸಿಂಗ್ ಹೇಳಿದ್ದಾರೆ. ಅಗತ್ಯವಿದ್ದರೆ ನ್ಯಾಯಾಲಯದಲ್ಲಿ ದಂಡ ಪಾವತಿಸುವುದಾಗಿಯೂ ಸಿಂಗ್ ತಿಳಿಸಿದ್ದಾರೆ.

    ನಮ್ಮ ಬಸ್‍ಗಳು ನಗರ ಸಾರಿಗೆಯಾಗಿದ್ದು, ಬಸ್ ವ್ಯವಹಾರವನ್ನು ನಮ್ಮ ಮಗ ನೋಡಿಕೊಳ್ಳುತ್ತಾನೆ. ನಮ್ಮ ಬಳಿ 40-50 ಬಸ್‍ಗಳಿವೆ, ಶಾಲೆಗಳಿಗೆ ಹಾಗೂ ವಿವಿಧ ಕಂಪನಿಗಳಿಗೆ ಬಸ್‍ಗಳನ್ನು ಬಾಡಿಗೆಗೆ ನೀಡಲಾಗಿದೆ. ಇವು ನೊಯ್ಡಾ ಹಾಗೂ ಗ್ರೇಟರ್ ನೊಯ್ಡಾದಲ್ಲಿ ಸಂಚರಿಸುತ್ತವೆ ಎಂದು ತಿಳಿಸಿದ್ದಾರೆ.

    ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಜವಾಬ್ದಾರಿಯುತ ಇಲಾಖೆ ಇಂತಹ ಸಣ್ಣ ತಪ್ಪುಗಳನ್ನು ಮಾಡಿದರೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅಲ್ಲದೆ ನಿತ್ಯ ಸಾರಿಗೆ ಇಲಾಖೆ ಇಂತಹ ಅನಗತ್ಯ ಚಲನ್‍ಗಳನ್ನು ನೀಡುವ ಮೂಲಕ ಸಾರ್ವಜನಿಕರಲ್ಲಿ ಆಶ್ಚರ್ಯ ಹಾಗೂ ಆತಂಕವನ್ನುಂಟು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಕುರಿತು ನಾನು ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸುತ್ತೇನೆ. ಅಗತ್ಯವಿದ್ದರೆ ಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಸಾರಿಗೆ ಅಧಿಕಾರಿಗಳು ಈ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲಿಸಲಾಗುತ್ತಿದೆ, ದೋಷವಾಗಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಅಲ್ಲದೆ ಹೊಸ ಮೋಟಾರ್ ವಾಹನ ಕಾಯ್ದೆಯ ನಿಯಮದಂತೆ ಚಲನ್ ನೀಡಲಾಗಿದೆ.

    ಈ ಚಲನ್‍ನ್ನು ನೋಯ್ಡಾ ಟ್ರಾಫಿಕ್ ಪೊಲೀಸರು ನೀಡಿಲ್ಲ. ಬದಲಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಹೊರಡಿಸಿದ್ದಾರೆ. ಸೀಟ್ ಬೆಲ್ಟ್ ಧರಿಸಿಲ್ಲ ಎಂದು ಈ ಹಿಂದೇ ಅದೇ ಬಸ್‍ಗೆ ನಾಲ್ಕು ಬಾರಿ ದಂಡ ವಿಧಿಸಲಾಗಿತ್ತು. ಈ ಬಾರಿಯೂ ಸೀಟ್ ಬೆಲ್ಟ್ ಅಪರಾಧವಾಗಿದ್ದರೆ ಚಲನ್‍ನಲ್ಲಿ ಸೀಟ್ ಬೆಲ್ಟ್ ನಿಯಮ ಉಲ್ಲಂಘಿಸಿದ್ದಕ್ಕೆ ಎಂದು ಉಲ್ಲೇಖಿಸಬೇಕು, ಹೆಲ್ಮೆಟ್ ಧರಿಸದ್ದಕ್ಕೆ ಎಂದಲ್ಲ ಎಂದು ನಿರಂಕರ್ ಸಿಂಗ್ ವಾದಿಸಿದ್ದಾರೆ. ನಮ್ಮ ಕಡೆಯಿಂದ ಏನಾದರೂ ದೋಷವಿದ್ದರೆ, ನಾವು ದಂಡವನ್ನು ಪಾವತಿಸುತ್ತೇವೆ. ಆದರೆ ಅದು ನಿಜವಾಗಿರಬೇಕು ಎಂದು ಸಿಂಗ್ ಸ್ಪಷ್ಟಪಡಿಸಿದ್ದಾರೆ.

  • ಲೋಕಸಮರದ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್!

    ಲೋಕಸಮರದ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್!

    ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣಿಕರಿಗೆ ಶಾಕ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಲೋಕಸಭೆ ಚುನಾವಣೆ ಬಳಿಕ ಬಸ್ ಟಿಕೆಟ್ ದರ ಹೆಚ್ಚಳ ಕುರಿತು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ದಿನೇ ದಿನೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಆದರೆ ಚುನಾವಣೆ ಮುಗಿಯುವವರೆಗೂ ಪ್ರಯಾಣ ದರ ಏರಿಕೆ ಬೇಡ ಎಂದು ಸಿಎಂ ಹೇಳಿದ್ದಾರೆ ಎಂದರು. ಈ ಮೂಲಕ ಲೋಕಸಭೆ ಚುನಾವಣೆ ಬಳಿಕ ಬಸ್ ಪ್ರಯಾಣ ದರ ಹೆಚ್ಚಳ ಖಚಿತ ಎಂಬ ಸುಳಿವನ್ನು ನೀಡಿದರು.

    ಇದೇ ವೇಳೆ ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿ ಪ್ರಸ್ತಾಪ ಕೈ ಬಿಟ್ಟಿರುವುದಾಗಿ ಸ್ಪಷ್ಟನೆ ನೀಡಿದರು. ಎಲೆಕ್ಟ್ರಿಕ್ ಬಸ್ ಖರೀದಿಗೆ ಸರ್ಕಾರ ಅನುಮತಿಯೇ ಕೊಟ್ಟಿರಲಿಲ್ಲ. ಹಿಂದಿನ ಸರ್ಕಾರದ ಅಧಿಕಾರಿಗಳು ಎಲೆಕ್ಟ್ರಿಕ್ ಬಸ್ ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಬಾಡಿಗೆಯಲ್ಲಿ ಎಲೆಕ್ಟ್ರಿಕ್ ಬಸ್ ಖರೀದಿಗೆ ನನ್ನ ವಿರೋಧ ಇತ್ತು. ನಾನು ಸ್ವತಃ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ನಾವೇ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಿದರೆ ನಮಗೆ ಹೆಚ್ಚು ಅನುಕೂಲ ಆಗುತ್ತೆ ಈ ಪ್ರಸ್ತಾಪ ಕೈ ಬಿಟ್ಟಿದ್ದೇವೆ. ನಾವೇ 80 ಬಸ್ ಖರೀದಿ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    ಇಲಾಖೆಯಲ್ಲಿ ಇರುವ ಹಳೆ ಬಸ್ ಬದಲಾವಣೆ ಮಾಡಲು ಹೊಸ ಬಸ್ ಖರೀದಿಗೆ ನಿರ್ಧಾರ ಮಾಡಿದ್ದೇವೆ. 3 ಸಾವಿರ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಖರೀದಿ ಮಾಡುತ್ತಿದ್ದೇವೆ. 7 ಲಕ್ಷ ಕಿಲೋಮೀಟರ್ ಓಡಿರುವ ಬಸ್ ಗಳನ್ನ ಬದಲಾವಣೆ ಮಾಡಲಾಗುತ್ತೆ. ಹಳೆ ಬಸ್ ಗಳ ಬದಲಾವಣೆ ಮಾಡಿ ಮತ್ತಷ್ಟು ಸುಸ್ಥಿತಿಯಲ್ಲಿ ಬಸ್ ಸೇವೆ ಸಾರ್ವಜನಿಕರಿಗೆ ಒದಗಿಸುತ್ತೇವೆ ಎಂದರು. ಅಲ್ಲದೇ ಆರ್ ಟಿಓ ಹುದ್ದೆಗಳು ಖಾಲಿ ಇದ್ದು, ಹೊಸ ನೇಮಕಾತಿಗೆ ಕೇಂದ್ರ ಸರ್ಕಾರದ ಕಾಯ್ದೆ ಅಡ್ಡಿ ಇದೆ. ಚುನಾವಣೆ ಆದ ಬಳಿಕ ಕಾಯ್ದೆಗೆ ಒಂದಿಷ್ಟು ಬದಲಾವಣೆ ತಂದು ನಮ್ಮ ಇಲಾಖೆಯೆ ಆರ್ ಟಿಓ ನೇಮಕಾತಿ ಮಾಡಿಕೊಳ್ಳುತ್ತೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಧನ ದರ ಏರಿಕೆ ಇಳಿಕೆ ಆಗುವಂತೆ 3 ತಿಂಗ್ಳಿಗೊಮ್ಮೆ ಬಸ್ ಪ್ರಯಾಣ ದರ ನಿಗದಿ: ಡಿಸಿ ತಮ್ಮಣ್ಣ

    ಇಂಧನ ದರ ಏರಿಕೆ ಇಳಿಕೆ ಆಗುವಂತೆ 3 ತಿಂಗ್ಳಿಗೊಮ್ಮೆ ಬಸ್ ಪ್ರಯಾಣ ದರ ನಿಗದಿ: ಡಿಸಿ ತಮ್ಮಣ್ಣ

    ಬೆಂಗಳೂರು: ದೇಶದಲ್ಲಿ ಇಂಧನ ದರ ಏರಿಕೆ ಇಳಿಕೆ ಆಗುವಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಬಸ್ ಪ್ರಯಾಣ ದರ ನಿಗದಿ ಮಾಡುವ ಹೊಸ ಯೋಚನೆಯನ್ನು ಸಾರಿಗೆ ಇಲಾಖೆ ಮಾಡಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ರಾಜ್ಯದಲ್ಲಿ ಸದ್ಯ 5 ವರ್ಷಗಳಿಗೊಮ್ಮೆ ಪ್ರಯಾಣ ದರ ಏರಿಕೆ ಮಾಡುವ ಪದ್ಧತಿ ಇದ್ದು, ಇದರ ಬದಲು ಇಂಧನ ದರಕ್ಕೆ ಅನುಗುಣವಾಗಿ ಬಸ್ ಪ್ರಯಾಣ ದರ ನಿಗದಿ ಮಾಡುವಂತೆ ಸಿಎಂ ಕುಮಾರಸ್ವಾಮಿ ಅವರೇ ಸಲಹೆ ಕೊಟ್ಟಿದ್ದಾರೆ. ಸಿಎಂ ಕೊಟ್ಟ ದರ ಪರಿಷ್ಕರಣೆ ಸಲಹೆಯನ್ನೇ ಈಗ ಅವರಿಗೆ ಮನವಿ ರೂಪದಲ್ಲಿ ನೀಡಲಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ.

    ಹಳ್ಳಿಗಳಿಗೂ ಐಷಾರಾಮಿ ಬಸ್:
    ಹಳೆ ಬಸ್‍ಗಳನ್ನು ಕೊಟ್ಟು ಹೊಸ ಬಸ್‍ಗಳ ಖರೀದಿಗೆ ಸಾರಿಗೆ ಇಲಾಖೆ ಮುಂದಾಗಿದ್ದು, ಸ್ಲೀಪರ್ ಕೋಚ್, ಲಕ್ಷುರಿ ಬಸ್ ಸೇರಿ ಒಟ್ಟು 3 ಸಾವಿರ ಬಸ್ ಖರೀದಿಗೆ ನಿರ್ಧರಿಸಲಾಗಿದೆ. ಕೆಲ ಹಳ್ಳಿಗಳಲ್ಲಿನ ಜನ ನಮಗೆ ಹಳೆಯ ಬಸ್ ನೀಡುತ್ತೀರಾ ಎಂದು ಪ್ರಶ್ನೆ ಮಾಡಿದ್ದು, ಹಾಗಾಗಿ ಈಗ ಖರೀದಿ ಮಾಡುವ ಹೊಸ ಬಸ್‍ಗಳಲ್ಲಿ ಕೆಲವುಗಳನ್ನು ಹಳ್ಳಿಗಳಿಗೆ ಕಳುಹಿಸುವ ಯೋಚನೆ ಇದೆ ಎಂದು ಸಚಿವರು ತಿಳಿಸಿದರು.

    ರಾಜ್ಯ ಸಾರಿಗೆ ಇಲಾಖೆ ನಷ್ಟದಲ್ಲಿರೋವುದು ಅಧಿಕಾರಿಗಳ ಅವ್ಯವಹಾರದಿಂದ ಹೊರತು ಕಡಿಮೆ ಆದಾಯದಿಂದಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದೇವೆ. ನಾಲ್ಕೂ ನಿಗಮಗಳಲ್ಲೂ ಅಕ್ರಮ ನಡೆಯುತ್ತಿದೆ. ಸಾರಿಗೆ ಇಲಾಖೆ ನಷ್ಟ ಅನುಭವಿಸಲು ಅಕ್ರಮಗಳೇ ಕಾರಣವಾಗಿದೆ ಎಂದು ದೂರಿದ್ದಾರೆ. ಅಲ್ಲದೇ ಯಾರೇ ಅಕ್ರಮ ಮಾಡಿದರು ಸುಮ್ಮನೇ ಬಿಡಲ್ಲ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

    ಜೆಡಿಎಸ್ ಪಕ್ಷದ ನಾಯಕರುಗಳಿಗೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಸಮಾಧಾನ ತಂದಿಲ್ಲ. ಬದಲಾಗಿ ಅಡ್ಜಸ್ಟ್ ಮೆಂಟ್ ಮಾಡಿಕೊಂಡು ಹೋಗುತ್ತಿದ್ದೇವೆ ಎಂಬ ರೀತಿಯಲ್ಲಿ ಸಚಿವರು ಹೇಳಿದ್ದು. ಅಡ್ಜಸ್ಟ್ ಮೆಂಟ್ ರಾಜಕೀಯ ಇದ್ದರೆ ಮಾತ್ರಾ ಎಲ್ಲಾ ಸುಗಮವಾಗಿ ನಡೆಯುತ್ತೆ, ಸರ್ಕಾರ ನಡೆಯಬೇಕಾದರೆ ಹೊಂದಿಕೊಂಡು ಹೋಗುವುದು ಅನಿವಾರ್ಯ, ವಾಜಪೇಯಿ ಇಪ್ಪತ್ತಮೂರು ಪಕ್ಷಗಳ ಜೊತೆ ಹೊಂದಿಕೊಂಡು ಸರ್ಕಾರ ನಡೆಸಿರಲಿಲ್ವಾ. ಅಂತೆಯೇ ಸಿಎಂ ಎಚ್‍ಡಿಕೆ ಅವರು, ಹೊಂದಿಕೊಂಡು ಹೋಗಬೇಕಿದೆ ಅಷ್ಟೇ ಎಂದು ಹೇಳಿದರು. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಏನಾದರು ಸಮಸ್ಯೆ ಆಗುತ್ತಿದ್ದೇಯಾ ಎಂಬ ಪ್ರಶ್ನೆಗೆ, ಅದನ್ನೆಲ್ಲಾ ಹೇಳೋಕೆ ಆಗಲ್ಲ ಎಂದು ಪರೋಕ್ಷವಾಗಿ ಸಮಸ್ಯೆ ಆಗುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv