Tag: ಸಾರಿಗೆ ಇಲಾಖೆ

  • ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಬೆಂಗಳೂರು: ರಾಜ್ಯದ ಸಾರಿಗೆ ನೌಕರರಿಗೆ ಕೋವಿಡ್ ಸೋಂಕು ತಗುಲಿರುವುದು ಹಾಗೂ ಅವರು ಮೃತಪಟ್ಟಿರುವುದರ ಬಗ್ಗೆ ಸಾರಿಗೆ ಇಲಾಖೆಯ ಬಳಿ ಮಾಹಿತಿಯೇ ಇಲ್ಲದಿರುವುದು ಸರ್ಕಾರದ ಬೇಜಾವಾಬ್ದಾರಿತನವನ್ನು ತೋರಿಸುತ್ತದೆ ಎಂದು ಎಎಪಿಯ ರಾಜ್ಯ ಯುವಘಟಕದ ಅಧ್ಯಕ್ಷರಾದ ಮುಕುಂದ್ ಗೌಡರವರು ಕಿಡಿಕಾರಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಕುಂದ್ ಗೌಡರವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸರ್ಕಾರವು ಪ್ರಮುಖ ಬೇಡಿಕೆಯನ್ನೇ ಈಡೇರಿಸದಿದ್ದರೂ, ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಮರಳಿದ್ದರು. ಮೊದಲಿನಿಂದಲೂ ನೌಕರರನ್ನು ತಾತ್ಸಾರದಿಂದ ನೋಡುತ್ತಿದ ಸಾರಿಗೆ ಇಲಾಖೆಯು ಮುಷ್ಕರದ ನಂತರ ಅವರನ್ನು ಶತ್ರುಗಳಂತೆ ಕಾಣುತ್ತಿದೆ. ಕೋವಿಡ್‍ಗೆ ಬಲಿಯಾದ ನೌಕರರಿಗೆ ಪರಿಹಾರ ನೀಡುವುದು ಹಾಗಿರಲಿ, ಎಷ್ಟು ನೌಕರರಿಗೆ ಸೋಂಕು ತಗುಲಿದೆ ಎಂಬ ಅಂಕಿಅಂಶ ಕೂಡ ಸರ್ಕಾರದ ಬಳಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ 

    ಸಾರಿಕೆ ನೌಕರರು ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವುದು, ಮೃತಪಟ್ಟಿರುವುದು ಹಾಗೂ ಪರಿಹಾರ ವಿತರಣೆ ಮಾಹಿತಿ ತಿಳಿಯಲು ನಾವು ಆರ್‍ಟಿಐ ಅರ್ಜಿ ಸಲ್ಲಿಸಿದ್ದೆವು. ನಾವು ಕೇಳಿದ ಮೂರು ಪ್ರಶ್ನೆಗಳಿಗೂ ಇಲಾಖೆಯು ತಮ್ಮ ಬಳಿ ಮಾಹಿತಿ ಇಲ್ಲವೆಂದು ಉತ್ತರ ನೀಡಿದೆ. ಅಧಿಕಾರಿಗಳ ಮಾಹಿತಿ ಹೊಂದಿರುವ ಸರ್ಕಾರವು ನೌಕರರನ್ನು ಮಾತ್ರ ಇಷ್ಟು ಕೇವಲವಾಗಿ ನೋಡುತ್ತಿರುವುದು ದುರಂತ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಇದು ಎತ್ತಿ ತೋರಿಸುತ್ತದೆ. ಕಷ್ಟಪಟ್ಟು ದುಡಿಯುವ ಕಾರ್ಮಿಕರನ್ನು ಹೀನಾಯವಾಗಿ ಕಾಣುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಕಾರ್ಮಿಕರು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ ಎಂಬುದನ್ನು ಸಾರಿಗೆ ಸಚಿವರಾದ ಲಕ್ಷಣ್ ಸವದಿ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ಸಿಬ್ಬಂದಿ ನನ್ನ ಕುಟುಂಬದ ಸದಸ್ಯರಿದ್ದಂತೆ ಎಂದು ಭಾಷಣ ಬಿಗಿಯುವ ಸಾರಿಗೆ ಸಚಿವರು ನೌಕರರ ಹಿತಕಾಪಾಡಲು ಏನು ಮಾಡಿದ್ದಾರೆ? ನೌಕರರಿಗೆ ಉಚಿತ ಸ್ಯಾನಿಟೈಸರ್ ನೀಡಲೂ ಅವರಿಗೆ ಸಾಧ್ಯವಾಗಿಲ್ಲ. ಮಹಾಮಾರಿ ಕೋವಿಡ್‍ನಿಂದ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸಲು ಯಾವ ಕ್ರಮವನ್ನೂ ಅವರು ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮೃತಪಟ್ಟ ಪ್ರತಿಯೊಬ್ಬ ನೌಕರರ ಕುಟುಂಬಕ್ಕೆ ಪರಿಹಾರ ವಿತರಿಸಬೇಕು. ಎಷ್ಟು ಸಿಬ್ಬಂದಿಗೆ ಸೋಂಕು ತಗುಲಿತ್ತು, ಎಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ, ಎಷ್ಟು ಮಂದಿಗೆ ಪರಿಹಾರ ದೊರೆತಿದೆ ಎಂಬ ಅಂಶವನ್ನು ಶೀಘ್ರವೇ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

  • ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲನೆ

    ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಗೆ ಚಾಲನೆ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕರ್ನಾಟಕ ವಿದ್ಯುತ್ ಬೈಕ್, ಟ್ಯಾಕ್ಸಿ ಯೋಜನೆ-2021 ಅನಾವರಣಗೊಳಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ಜಾರಿಯಿಂದ ರಾಜ್ಯದಲ್ಲಿ ಸ್ವಯಂ ಉದ್ಯೋಗ ಸೃಷ್ಟಿ, ಪರಿಸರ ಸ್ನೇಹಿ ವಾತಾವರಣ ನಿರ್ಮಾಣ, ಇಂಧನ ಉಳಿತಾಯದ ಪ್ರೋತ್ಸಾಹ, ನಗರ ಸಾರಿಗೆ ಬಲಪಡಿಸುವುದು, ಉದ್ದಿಮೆ ಸ್ಥಾಪನೆಗೆ ಪ್ರೋತ್ಸಾಹಿಸುವುದು, ಪ್ರಯಾಣಿಕರು ಮತ್ತು ಸಾರ್ವಜನಿಕ ಸಾರಿಗೆ ನಡುವೆ ಸಂಪರ್ಕ ಕಲ್ಪಿಸುವುದರ ಬಗ್ಗೆ ಈ ಯೋಜನೆಯು ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

    ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಲ್ಲಿ ಸಾರ್ವಜನಿಕರು ಬಸ್ ಮತ್ತು ರೈಲ್ವೆ, ಮೆಟ್ರೋ ನಿಲ್ದಾಣಗಳಿಂದ ಮನೆಗೆ ಮತ್ತು ಮನೆಯಿಂದ ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಸರಿಯಾದ ಸಮಯದಲ್ಲಿ ಪ್ರಯಾಣಿಸಲು ವ್ಯಯಿಸಬೇಕಾದ ಸಮಯ ಮತ್ತು ಶ್ರಮವನ್ನು ಕಡಿಮೆ ಮಾಡುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಅವರು ನುಡಿದರು.

    ವಾಹನಗಳ ಚಾಲನೆಗೆ ಸಾಂಪ್ರದಾಯಿಕ ಇಂಧನಗಳ ಬಳಕೆಯಿಂದಾಗಿ ಪರಿಸರದ ಮೇಲೆ ಆಗುತ್ತಿರುವ ಪರಿಣಾಮಗಳ ಕುರಿತು ಆಗಿರುವ ಅಧ್ಯಯನಗಳ ಹಿನ್ನೆಲೆಯಲ್ಲಿ ಪರ್ಯಾಯ ಇಂಧನಗಳನ್ನು ಬಳಸುವ ಮೂಲಕ ಸ್ವಚ್ಛ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಸದುದ್ದೇಶದಿಂದ ವಿವಿಧ ಪರ್ಯಾಯ ಇಂಧನಗಳ ಬಳಕೆಗೆ ಸರ್ಕಾರವು ಉತ್ತೇಜನ ನೀಡುತ್ತಾ ಬಂದಿದೆ. ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನಗಳ ನೀತಿಯನ್ನು ರೂಪಿಸಿದ ರಾಜ್ಯ ಕರ್ನಾಟಕ. ಇದೀಗ ಮತ್ತೊಂದು ಹೆಜ್ಜೆ ಮುಂದುವರಿದು, ರಾಜ್ಯದ ಪ್ರಮುಖ ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021ನ್ನು ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಅವರು ವಿವರಿಸಿದರು. ಇದನ್ನೂ ಓದಿ: ನಾಳೆಯಿಂದ ಪಿಯುಸಿ ಕಾಲೇಜುಗಳು ಪ್ರಾರಂಭ- ಆನ್‍ಲೈನ್ ಮೂಲಕ ಪಠ್ಯ ಬೋಧನೆ

    ಈ ಯೋಜನೆಯಲ್ಲಿ ಕಂಪನಿಗಳು, ಪಾಲುದಾರಿಕೆ ಕಂಪನಿಗಳು ಮತ್ತು ವೈಯಕ್ತಿಕ ಪ್ರಜೆಗಳೂ ಸಹ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಮತ್ತು ಉದ್ದಿಮೆದಾರರು ಮುಕ್ತವಾಗಿ ಈ ಯೋಜನೆ ಸದುಪಯೋಗ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರವು ಹಲವಾರು ರಿಯಾಯಿತಿಗಳನ್ನು ನೀಡಿರುತ್ತದೆ. ಸಾರಿಗೆ ವಾಹನಗಳಾಗಿ ನೋಂದಣಿಯಾಗುವ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗಳಿಗೆ ಪರವಾನಿಗೆಯಿಂದ ವಿನಾಯಿತಿ ನೀಡುವುದು, ತೆರಿಗೆ ವಿನಾಯಿತಿ ನೀಡುವುದು, ಈ ವಾಹನಗಳ ಉತ್ಪಾದಕರಿಗೆ ಸಹಾಯಧನವನ್ನು ನೀಡುವುದು ಸೇರಿದಂತೆ ಇನ್ನೂ ಹಲವಾರು ರಿಯಾಯಿತಿಗಳನ್ನು ನೀಡಲಾಗಿರುತ್ತದೆ. ವಾಹನ ಉತ್ಪಾದಕರು, ಉದ್ದಿಮೆದಾರರು ಮತ್ತು ಸಾರ್ವಜನಿಕರು ಈ ಯೋಜನೆಗಳ ಪ್ರಯೋಜನವನ್ನು ಪಡೆದು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವಂತೆ ಹಾಗೂ ಮಹಿಳಾ ಉದ್ದಿಮೆದಾರರು ಈ ಯೋಜನೆಯ ಅನುಕೂಲವನ್ನು ಪಡೆದುಕೊಳ್ಳುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.

    ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆಯ ಅನುಕೂಲಗಳ ಕುರಿತು ಮಾಹಿತಿ ನೀಡಿದರು. ಸಮಾರಂಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

  • ನೌಕರರ ಮುಷ್ಕರ – ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟ

    ನೌಕರರ ಮುಷ್ಕರ – ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟ

    ಬೆಂಗಳೂರು: ಸಾರಿಗೆ ನೌಕರರ ಮುಷ್ಕರದಿಂದ ಒಂದು ದಿನದಲ್ಲಿ 4 ನಿಗಮಗಳಿಗೆ ಕೋಟ್ಯಂತರ ರೂ. ನಷ್ಟವಾಗಲಿದೆ. ಒಂದು ದಿನ ಬಸ್ ಕಾರ್ಯಾಚರಣೆ ಸ್ಥಗಿತವಾದದರೆ ನಾಲ್ಕು ನಿಗಮಗಳಿಗೆ ಸುಮಾರು 14 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

    ಬಿಎಂಟಿಸಿ ಪ್ರಸ್ತುತ ದಿನದ ಆದಾಯ ಸುಮಾರು 2.5 ರಿಂದ 3 ಕೋಟಿ ರೂ. ಇದೆ. ಕೆಎಸ್‌ಆರ್‌ಟಿಸಿ ನಿತ್ಯದ ಆದಾಯ 7 ಕೋಟಿ ರೂ., ವಾಯುವ್ಯ ಸಾರಿಗೆಯ ಆದಾಯ 2 ಕೋಟಿ ರೂ., ಈಶಾನ್ಯ ಸಾರಿಗೆ ನಿಗಮದ ಪ್ರಸ್ತುತ ನಿತ್ಯದ ಆದಾಯ 2 ಕೋಟಿ ರೂ. ಇದೆ.

    ಕೊರೊನಾದಿಂದ ಈಗಾಗಲೇ ಸಾರಿಗೆ ಇಲಾಖೆ ಮೊದಲೇ ನಷ್ಟದಲ್ಲಿದೆ. ಈಗ ಮುಷ್ಕರಿಂದ ಮತ್ತಷ್ಟು ನಷ್ಟಕ್ಕೆ ತುತ್ತಾಗಲಿದೆ. ಸಾರಿಗೆ ಇಲಾಖೆ ಮಂಗಳವಾರವೇ ಸಿಬ್ಬಂದಿ ಕೆಲಸಕ್ಕೆ ಹಾಜರಾಗದೇ ಇದ್ದರೆ ಯಾವುದೇ ಕಾರಣಕ್ಕೂ ಸಂಬಳ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

  • ಕೊರೊನಾದಿಂದ ಸಾರಿಗೆ ಇಲಾಖೆಗೆ ಭಾರೀ ನಷ್ಟ

    ಕೊರೊನಾದಿಂದ ಸಾರಿಗೆ ಇಲಾಖೆಗೆ ಭಾರೀ ನಷ್ಟ

    ಬೆಂಗಳೂರು: ಕೋವಿಡ್‌ 19ನಿಂದಾಗಿ ಸಾರಿಗೆ ಇಲಾಖೆಗೆ ಭಾರೀ ನಷ್ಟವಾಗಿದೆ.

    2020-21ರ ಹಣಕಾಸು ವರ್ಷದಲ್ಲಿ ಸಾರಿಗೆ ಇಲಾಖೆ 7,115 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿತ್ತು. ಆದರೆ ಜನವರಿ ಅಂತ್ಯಕ್ಕೆ 4,294  ಕೋಟಿ ರೂ. ಮಾತ್ರ ಆದಾಯ ಸಂಗ್ರಹವಾಗಿದೆ.

    2021-22ರ ಸಾಲಿನಲ್ಲಿ 7,515 ಕೋಟಿ ರೂ. ಸಂಗ್ರಹಣೆಯ ಗುರಿಯನ್ನು ಹಾಕಲಾಗಿದೆ. ಈ ವರ್ಷ ರಾಜ್ಯದಲ್ಲಿ 52 ಬಸ್‌ ನಿಲ್ದಾಣ, 16 ಬಸ್‌ ಘಟಕಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ.

  • ಸಾರಿಗೆ ಇಲಾಖೆಗೆ 634 ಕೋಟಿ ರೂ. ಅನುದಾನ ಕೊಡಲು ಸಿಎಂ ಒಪ್ಪಿದ್ದಾರೆ: ಲಕ್ಷ್ಮಣ್ ಸವದಿ

    ಸಾರಿಗೆ ಇಲಾಖೆಗೆ 634 ಕೋಟಿ ರೂ. ಅನುದಾನ ಕೊಡಲು ಸಿಎಂ ಒಪ್ಪಿದ್ದಾರೆ: ಲಕ್ಷ್ಮಣ್ ಸವದಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸಾರಿಗೆ ಇಲಾಖೆಗೆ 634 ಕೋಟಿ ರೂ. ಅನುದಾನ ಕೊಡಲು ಒಪ್ಪಿದ್ದಾರೆ. ತಕ್ಷಣ ಎರಡು ತಿಂಗಳ ವೇತನ ಕೊಡಲು ಸಿಎಂ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ ಎಂದು ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸವದಿ, ಸಾರಿಗೆ ಇಲಾಖೆ ಸಿಬ್ಬಂದಿಯ ಮೂರು ತಿಂಗಳ ವೇತನ ಸಮಸ್ಯೆ ಇದೆ. ಅಕ್ಟೋಬರ್, ನವೆಂಬರ್, ಡಿಸೆಂಬರ್ ವೇತನ ಕೊಡಲು ಸಂಕಷ್ಟ ಎದುರಾಗಿದೆ. ಕೊರೊನಾದಿಂದ ಆರ್ಥಿಕ ಸಮಸ್ಯೆ ಇದೆ. ಇಂದು ಈ ಸಮಸ್ಯೆಯನ್ನು ಸಿಎಂಗೆ ಮನವರಿಕೆ ಮಾಡಿದೆವು ಎಂದ ಅವರು ಬಸ್ ಟಿಕೆಟ್ ದರ ಹೆಚ್ಚಳ ಸದ್ಯ ಏನೂ ಚರ್ಚೆ ಆಗಿಲ್ಲ. ಹೆಚ್ಚಳದ ಪ್ರಸ್ತಾಪ ಸದ್ಯ ನಮ್ಮ ಮುಂದೆ ಇಲ್ಲ ಅಂತ ತಿಳಿಸಿದರು.

    ಅಕ್ಟೋಬರ್, ನವೆಂಬರ್, ಡಿಸೆಂಬರ್ ಸಂಬಳಕ್ಕೆ ಹಣದ ಕೊರತೆ ಇದೆ. 75:25 ಪ್ರಮಾಣದಂತೆ ಹಣಕಾಸು ನೆರವು ಕೇಳಿದ್ದೇವೆ. 634 ಕೋಟಿ ನೀಡಲು ಸಿಎಂ ಒಪ್ಪಿಗೆ ಕೊಟ್ಟಿದ್ದಾರೆ. ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಆರ್ಥಿಕ ನೆರವು ನೀಡಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕೋವಿಡ್ ಕಾರಣ ನಿಗಮಗಳು ನಷ್ಟದಲ್ಲಿವೆ. ಹೀಗಾಗಿ ಸಂಬಳ ನೀಡಲು ಆಗಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ಇದೇ ವೇಳೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆಗೂ ಒತ್ತಾಯ ಹಾಕಿದ್ದೇವೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ಸಮುದಾಯ ಆಧಾರಿತವಾಗಿ ಮಾಡಲಾಗಿದೆ. ಅದನ್ನು ನಾವು ಸ್ವಾಗತಿಸುತ್ತೇವೆ. ನಾವು ನಮ್ಮ ಸಮುದಾಯದ ವಿಚಾರದಲ್ಲಿ ಸಿಎಂಗೆ ಒತ್ತಡ ಹಾಕಿದ್ದೇವೆ. ನಾನು, ಸೋಮಣ್ಣ ಹಾಗೂ ಬಿ.ಸಿ ಪಾಟೀಲ್ ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ. ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಭರವಸೆ ಕೊಟ್ಟಿದ್ದಾರೆ ಎಂದರು.

    ಮರಾಠ ಸಮುದಾಯ ಹಿಂದುಳಿದಿದೆ. ಹಾಗಾಗಿ ನಿಗಮ ರಚಿಸಲಾಗಿದೆ. ಇದಕ್ಕೆ ನಮ್ಮ ಆಕ್ಷೇಪ ಇಲ್ಲ. ವೀರಶೈವ ಲಿಂಗಾಯತ ಸಮುದಾಯ ಶಿಕ್ಷಣ, ಉದ್ಯೋಗದಲ್ಲಿ ಹಿಂದುಳಿದಿದೆ. ಹಾಗಾಗಿ ನಾವು ನಿಗಮ ಕೇಳಿದ್ದೇವೆ. ಕನ್ನಡ ಹೋರಾಟಗಾರರಿಗೆ ಮನವಿ ಮಾಡ್ತೇನೆ. ಮರಾಠಾ ನಿಗಮ ಭಾಷೆ ಆಧಾರದಲ್ಲಿ ಮಾಡಿಲ್ಲ. ಸಮುದಾಯ ಆಧಾರದಲ್ಲಿ ಮಾಡಿದ್ದಾರೆ. ಮರಾಠ ಸಮುದಾಯ ಬಹಳ ವರ್ಷಗಳಿಂದ ರಾಜ್ಯದಲ್ಲಿದ್ದಾರೆ, ಹಿಂದುಳಿದಿದ್ದಾರೆ ಎಂದು ಅವರು ಹೇಳಿದರು.

  • ರ‍್ಯಾಶ್ ಡ್ರೈವಿಂಗ್ ಮಾಡಿದ್ರೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ

    ರ‍್ಯಾಶ್ ಡ್ರೈವಿಂಗ್ ಮಾಡಿದ್ರೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ

    ಬೆಂಗಳೂರು: 4 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಇಲ್ಲದಿದ್ರೆ ದಂಡದ ಜೊತೆ ಡಿಎಲ್ ಸಸ್ಪೆಂಡ್ ಮಾಡುವ ಆದೇಶ ಹೊರಡಿಸಿದ್ದ ಸಾರಿಗೆ ಇಲಾಖೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ರ‍್ಯಾಶ್ ಡ್ರೈವಿಂಗ್ ಮಾಡುವವರಿಗೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ಆದೇಶ ಹೊರಡಿಸಿದೆ.

    ವೀಲಿಂಗ್, ಸೈಲೆನ್ಸರ್ ಅಲ್ಟ್ರೇಷನ್, ಅಡ್ಡಾದಿಡ್ಡಿ ಚಾಲನೆ, ಅಪಾಯಕಾರಿ ಚಾಲನೆ ಮಾಡಿದರೆ ಅಪರಾಧ ದಂಡ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 107ರ ಆಡಿ ಕೇಸ್ ದಾಖಲಿಸಲಾಗುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘನೆ ಮಾಡಿದರೆ 50 ಸಾವಿರದಿಂದ 2 ಲಕ್ಷ ಮೊತ್ತದ ಬಾಂಡ್ ಬರೆದು ಕೊಡಬೇಕಾಗುತ್ತದೆ. ಆರು ತಿಂಗಳ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದರೆ ಈ ಮೊತ್ತ ಭರಿಸಬೇಕು. ಜೊತೆಗೆ ಜೈಲು ಸೇರಬೇಕಾಗುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ದಂಡ ದಂಡ – ಪೊಲೀಸ್ , ಮಾರ್ಷಲ್ ಆಯ್ತು ಈಗ ಆರ್‌ಟಿಒ ಸರದಿ

    ಸಿಆರ್‌ಪಿಸಿ 107ರ ಆಡಿ ಕೇಸ್ ದಾಖಲು ಮಾಡಿದರೆ ಪಾಸ್ ಪೋರ್ಟ್ ಕ್ಲಿಯರ್ ಆಗುವುದಿಲ್ಲ. ವಿದ್ಯಾಭ್ಯಾಸ, ವಿದೇಶಿ ಪ್ರಯಾಣಕ್ಕೆ ಕುತ್ತು ಬರಲಿದೆ. ಕಳೆದು ಒಂದು ವಾರದಲ್ಲಿ 14 ಮಂದಿ ವಾಹನ ಸವಾರರ ಮೇಲೆ ಸಿಆರ್‌ಪಿಸಿ 107ರ ಅಡಿ ಕೇಸ್ ದಾಖಲಾಗಿದೆ.

  • ಬೆಂಗಳೂರಲ್ಲಿ ದಂಡ ದಂಡ – ಪೊಲೀಸ್ , ಮಾರ್ಷಲ್ ಆಯ್ತು ಈಗ ಆರ್‌ಟಿಒ ಸರದಿ

    ಬೆಂಗಳೂರಲ್ಲಿ ದಂಡ ದಂಡ – ಪೊಲೀಸ್ , ಮಾರ್ಷಲ್ ಆಯ್ತು ಈಗ ಆರ್‌ಟಿಒ ಸರದಿ

    ಬೆಂಗಳೂರು: ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ಟ್ರಾಫಿಕ್‌ ಪೊಲೀಸರು ದಂಡ ಹಾಕುತ್ತಿದ್ದರು. ಇದಾದ ಬಳಿಕ ಕೊರೊನಾ ಅವಧಿಯಲ್ಲಿ ಮಾಸ್ಕ್‌ ಹಾಕದಿದ್ದರೆ ನಗರದಲ್ಲಿ ಮಾರ್ಷಲ್‌ಗಳು 250 ರೂ. ದಂಡ ಹಾಕುತ್ತಿದ್ದಾರೆ. ಈಗ ರಸ್ತೆ ಮತ್ತು ಸಾರಿಗೆ ಇಲಾಖೆ(ಆರ್‌ಟಿಒ) ಅಧಿಕಾರಿಗಳು ವಾಹನಗಳನ್ನು ಅಡ್ಡಗಟ್ಟಿ ದಂಡ ಹಾಕುತ್ತಿದ್ದಾರೆ.

    ನಂಬರ್ ಪ್ಲೇಟ್ ,  ಅಂತರ್‌ ರಾಜ್ಯ ತೆರಿಗೆ,  ಲಗೇಜ್ ಸರಿಯಾಗಿಲ್ಲ, ಫಿಟ್ ನೆಸ್ ಸರ್ಟಿಫಿಕೇಟ್ ಇಲ್ಲದವರಿಗೆ ದಂಡ ಹಾಕಲಾಗುತ್ತಿದೆ.  ಅಷ್ಟೇ ಅಲ್ಲದೇ  ಪದೇ ರೂಲ್ಸ್ ಬ್ರೇಕ್ ಮಾಡಿದ್ದರೆ ಅವರ ಡಿಎಲ್ ಸಹ‌ ರದ್ದಾಗಲಿದೆ.

    ಹೆಲ್ಮೆಟ್ ಧರಿಸದ ಸವಾರರ ಚಾಲನಾ ಪರವಾನಗಿಯನ್ನು (ಡಿಎಲ್‌) ಮೂರು ತಿಂಗಳು ಅಮಾನತು ಮಾಡುವ ಸರ್ಕಾರದ ಅದೇಶ ಹೊರಬಿದ್ದ ಬೆನ್ನಲ್ಲೇ ವಿಶೇಷ ಕಾರ್ಯಾಚರಣೆಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಆರಂಭಿಸಿದ್ದಾರೆ.

    ಟಿನ್ ಫ್ಯಾಕ್ಟರಿ ಸಮೀಪ, ಗೊರಗುಂಟೆಪಾಳ್ಯ, ಫೋರಂ ಮಾಲ್‌, ಸುಮನಹಳ್ಳಿ ಜಂಕ್ಷನ್, ಕನಕಪುರ ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಡೈರಿ ವೃತ್ತ, ಭಟ್ಟರಹಳ್ಳಿ, ಚಂದಾಪುರ ಸರ್ಕಲ್, ದೇವನಹಳ್ಳಿ ಸೇರಿ 21 ‍ಪ್ರಮುಖ ಜಂಕ್ಷನ್‌ಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ.

    ಸಾರಿಗೆ ಇಲಾಖೆಯ ನಗರ ವಿಭಾಗದ ಜಂಟಿ ಆಯುಕ್ತ ಕೆ.ಟಿ. ಹಾಲಸ್ವಾಮಿ ಪ್ರತಿಕ್ರಿಯಿಸಿ, ವಾಹನಗಳನ್ನು ತಡೆದು ತಪಾಸಣೆ  ಮಾಡಲು ಸಾರಿಗೆ ಇಲಾಖೆಗೆ ಮೊದಲೇ ಅಧಿಕಾರ ಇತ್ತು. ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಆದೇಶದಂತೆ ಸದ್ಯ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

  • ನೆರೆಯ ರಾಜ್ಯಗಳಿಗೆ KSRTC ಬಸ್ ಸಂಚಾರ ಆರಂಭಿಸಲು ಸಕಲ ಸಿದ್ಧತೆ- ಡಿಸಿಎಂ ಸವದಿ

    ನೆರೆಯ ರಾಜ್ಯಗಳಿಗೆ KSRTC ಬಸ್ ಸಂಚಾರ ಆರಂಭಿಸಲು ಸಕಲ ಸಿದ್ಧತೆ- ಡಿಸಿಎಂ ಸವದಿ

    – ನೆರೆಯ ರಾಜ್ಯಗಳು ಒಪ್ಪಿದರೆ ರಾಜ್ಯದಿಂದ ಬಸ್ ಸಂಚಾರ

    ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಸಡಿಲಗೊಳಿಸಿರುವುದರಿಂದ ರಾಜ್ಯದಿಂದ ಇತರ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ಕೆಎಸ್‍ಆರ್‍ಟಿಸಿ ಸಿದ್ಧವಾಗಿದ್ದು, ನೆರೆಯ ರಾಜ್ಯಗಳು ಒಪ್ಪಿಗೆ ಸೂಚಿಸಿದರೆ ಇತರೆ ರಾಜ್ಯಗಳಿಗೆ ಬಸ್ ಸಂಚಾರ ಆರಂಭವಾಗಲಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

    ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಡಿಸಿಎಂ, ನೆರೆಯ ರಾಜ್ಯಗಳಿಗೆ ಬಸ್ ಸಂಚಾರ ಆರಂಭಿಸಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯಗಳು ಒಪ್ಪಿಗೆ ಸೂಚಿಸಿದರೆ ಬಸ್ ಸಂಚಾರ ಆರಂಭಿಸಲಾಗುವುದು. ಮುಖ್ಯವಾಗಿ ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಮತ್ತೆ ಬಸ್ ಸಂಚಾರ ಪ್ರಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಜ್ಜಾಗಿವೆ. ಆದರೆ ಪಕ್ಕದ ಎಲ್ಲ ರಾಜ್ಯಗಳಿಂದ ಇದಕ್ಕೆ ಹಸಿರು ನಿಶಾನೆ ದೊರೆಯಬೇಕಿದೆ ಎಂದಿದ್ದಾರೆ.

    ಪರಿಸ್ಥಿತಿ ಸುಧಾರಣೆಗೊಂಡ ನಂತರ ಈಗಾಗಲೇ ಆಂಧ್ರ ಪ್ರದೇಶಕ್ಕೆ ಕರ್ನಾಟಕದಿಂದ ಸರ್ಕಾರಿ ಸಾರಿಗೆ ಬಸ್‍ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ. ಸಾರ್ವಜನಿಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಗೋವಾ, ಕೇರಳ, ತಮಿಳುನಾಡು, ಪಾಂಡಿಚೇರಿ, ತೆಲಂಗಾಣ ರಾಜ್ಯಗಳಿಗೆ ಬಸ್ ಸಂಚಾರ ಪ್ರಾರಂಭಿಸುವ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುವಂತೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಅಲ್ಲದೆ ಆಯಾ ಸಾರಿಗೆ ಸಂಸ್ಥೆಗಳಲ್ಲಿ ಅಗತ್ಯ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಈ ಎಲ್ಲ ರಾಜ್ಯಗಳಿಂದ ಶೀಘ್ರವೇ ಸಕಾರಾತ್ಮಕ ಸ್ಪಂದನೆ ದೊರೆಯಬಹುದು ಎಂಬ ನಿರೀಕ್ಷೆ ಇದೆ. ಆಯಾ ರಾಜ್ಯಗಳಿಂದ ವ್ಯಕ್ತವಾಗುವ ಪ್ರತಿಕ್ರಿಯೆಗಳನ್ನು ಆಧರಿಸಿ ಬಸ್ ಸಂಚಾರ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ. ಲಾಕ್‍ಡೌನ್‍ಗಿಂತ ಮುಂಚೆ ರಾಜ್ಯದಿಂದ ಒಟ್ಟು 2,500 ಸರ್ಕಾರಿ ಬಸ್‍ಗಳು ನೆರೆಯ ರಾಜ್ಯಗಳಿಗೆ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಈಗ ಮುಂಚಿನಂತೆ ಮತ್ತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸವದಿ ತಿಳಿಸಿದ್ದಾರೆ.

  • ಮುಗ್ಧರು, ಅಮಾಯಕರು ಮಧ್ಯರಾತ್ರಿ ದೊಂಬಿ ಮಾಡುವುದಿಲ್ಲ: ಡಿಸಿಎಂ ತಿರುಗೇಟು

    ಮುಗ್ಧರು, ಅಮಾಯಕರು ಮಧ್ಯರಾತ್ರಿ ದೊಂಬಿ ಮಾಡುವುದಿಲ್ಲ: ಡಿಸಿಎಂ ತಿರುಗೇಟು

    – ಸಾರಿಗೆ ಇಲಾಖೆಯಿಂದ ಕೋರಿಯರ್ ಸೇವೆ ಆರಂಭ
    – ಪಟ್ಟಣ ಪ್ರದೇಶದಲ್ಲಿ ಬಸ್‍ನಲ್ಲಿ ಸೈಕಲ್ ಇಡಲು ವ್ಯವಸ್ಥೆ

    ರಾಯಚೂರು: ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದವರು ಮುಗ್ಧ ಹಾಗೂ ಅಮಾಯಕರು ಎಂಬ ಶಾಸಕ ಜಮೀರ್ ಹೇಳಿಕೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಲಕ್ಷ್ಮಣ ಸವದಿ, ಒಳ್ಳೆಯವರು ಮಧ್ಯರಾತ್ರಿ ಬಂದು ದೊಂಬಿ ಮಾಡುವುದಿಲ್ಲ. ನವೀನ್ ಎಂಬಾತ ಡಿಕೆಶಿ ನಮ್ಮ ಬಾಸ್, ರಾಹುಲ್, ಪ್ರಿಯಾಂಕ ನಮ್ಮ ನಾಯಕರು ಎಂದು ಪೋಸ್ಟ್ ಹಾಕುತ್ತಿದ್ದ. ಕಾಂಗ್ರೆಸ್ ತಮ್ಮ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿಯವನು ಎಂದು ಬಿಂಬಿಸುತ್ತಿದೆ. ಚುನಾವಣೆ ವೇಳೆ ನವೀನ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾನೆ. ಈ ಎಲ್ಲಾ ಮಾಹಿತಿ ನಮ್ಮ ಗೃಹ ಇಲಾಖೆ ಬಳಿ ಇವೆ. ಸಮಾಜಕ್ಕೆ ತಪ್ಪು ಸಂದೇಶ ಕಾಂಗ್ರೆಸ್ ಪಕ್ಷ ನೀಡುತ್ತಿದೆ ಅಂತ ತಿಳಿಸಿದ್ದಾರೆ.

    ಗುರುವಾರ ಸಚಿವ ಸಂಪುಟ ಸಭೆ ಬಳಿಕ ಗಣೇಶ ಉತ್ಸವದ ಬಗ್ಗೆ ಚಿಂತನೆ ಮಾಡಲಾಗುವುದು. ನಾನು ಮೊನ್ನೆ ದೆಹಲಿಗೆ ಹೋಗಿದ್ದು, ನನ್ನ ಇಲಾಖೆ ಕಾರ್ಯಗಳಿಗೆ. ಒಂದು ವರ್ಷದ ಬಿಜೆಪಿ ಅಧಿಕಾರ ಪೂರೈಸಿದ ಹಿನ್ನೆಲೆ ನಾನು ದೆಹಲಿಗೆ ಹೋಗಿದ್ದೆ. ಆಸೆ ಸನ್ಯಾಸಿಗಳನ್ನೂ ಬಿಟ್ಟಿಲ್ಲ. ನಾನು ರಾಜಕೀಯ ಸನ್ಯಾಸಿಯಲ್ಲ. ಆದರೆ ಸದ್ಯಕ್ಕೆ ನಾನು ಸಿಎಂ ಆಗುವ ಯಾವ ಪ್ರಸ್ತಾವವೂ ಇಲ್ಲ. ಯಡಿಯೂರಪ್ಪನವರು ಮುಂದಿನ ಮೂರು ವರ್ಷಕಾಲ ಮುಖ್ಯಮಂತ್ರಿಗಳಾಗಿರುತ್ತಾರೆ ಎಂದು ಸವದಿ ಹೇಳಿದ್ದಾರೆ.

    ಸದ್ಯ ಸಾರಿಗೆ ಇಲಾಖೆ ಭಾರೀ ನಷ್ಟದಲ್ಲಿದೆ. ಅಗತ್ಯಕ್ಕೆ ಅನುಗುಣವಾಗಿ ಮಾತ್ರ ಸಾರಿಗೆ ಬಸ್ ಓಡಾಡಿಸುತ್ತಿದ್ದೇವೆ. ಸಾರಿಗೆ ಇಲಾಖೆಯ ಒಟ್ಟು ಸಿಬ್ಬಂದಿ 1 ಲಕ್ಷ 30 ಸಾವಿರ ಜನರಿಗೆ ತಿಂಗಳಿಗೆ 326 ಕೋಟಿ ಸಂಬಳವಾಗುತ್ತದೆ. ಸರ್ಕಾರದ ಖಜಾನೆಯಿಂದ ಸಂಬಳ ಕೊಡಲು ಸಿಎಂಗೆ ಮನವಿ ಮಾಡಿದ್ದೇವೆ. ಹಣಕಾಸಿನ ತೊಂದರೆಯಿರುವುದರಿಂದ ಎರಡು ತಿಂಗಳ ಸಂಬಳವನ್ನು 75:25 ಅನುಪಾತದಲ್ಲಿ ಕೊಡಲು ಮನವಿ ಮಾಡಲಾಗಿದೆ. 25 ಪ್ರತಿಶತ ಸಂಬಳ ಮಾತ್ರ ನಿಗಮ ಕೊಡಲು ಸಾಧ್ಯವಾಗುತ್ತದೆ. ಸಿಬ್ಬಂದಿ ಸಂಬಳವನ್ನು ಕಷ್ಟಕಾಲದಲ್ಲೂ ಕೊಡುತ್ತೇವೆ ಎಂದರು.

    ಸಾರಿಗೆ ಇಲಾಖೆ ನಷ್ಟ ಕಡಿಮೆ ಮಾಡಲು ನಾವು ಹೊಸ ವ್ಯವಸ್ಥೆ ಪ್ರಾರಂಭಿಸಿದ್ದೇವೆ. ಪಟ್ಟಣ, ಪ್ರವಾಸಿ ಪ್ರದೇಶಗಳಲ್ಲಿ ಬಸ್ ನಲ್ಲಿ ಸೈಕಲ್ ವ್ಯವಸ್ಥೆ ಮಾಡುತ್ತಿದ್ದೇವೆ. ಸದ್ಯ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದು, ಬಳಿಕ ಎಲ್ಲೆಡೆ ವಿಸ್ತರಣೆ ಮಾಡುವ ಯೋಚನೆಯಿದೆ. ಇಲಾಖೆಯಿಂದ ಕೋರಿಯರ್ ಸೇವೆ ಪ್ರಾರಂಭಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಖಾಸಗಿಯವರಿಗಿಂತಲೂ ಪರಿಣಾಮಕಾರಿಯಾಗಿ ಕೋರಿಯರ್ ಸರ್ವಿಸ್ ಕೊಡುತ್ತೇವೆ. ಇದರ ಬಗ್ಗೆ ಎಲ್ಲ ರೂಪುರೇಷೆ ಸಿದ್ಧವಾಗುತ್ತಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು.

  • ಡ್ರೈವರ್ ಕಮ್ ಕಂಡಕ್ಟರ್‌ಗೆ ಸೋಂಕು- ಕೋಲಾರಕ್ಕೆ ಕೊರೊನಾ ಸ್ಪ್ರೆಡರ್ ಆಗ್ತಾರಾ ಡ್ರೈವರ್?

    ಡ್ರೈವರ್ ಕಮ್ ಕಂಡಕ್ಟರ್‌ಗೆ ಸೋಂಕು- ಕೋಲಾರಕ್ಕೆ ಕೊರೊನಾ ಸ್ಪ್ರೆಡರ್ ಆಗ್ತಾರಾ ಡ್ರೈವರ್?

    ಕೋಲಾರ: ಸಾರಿಗೆ ಬಸ್ ಡ್ರೈವರ್ ಕಮ್ ಕಂಡಕ್ಟರ್ ಒಬ್ಬನಲ್ಲಿ ಕೊರೊನಾ ಸೊಂಕು ಪತ್ತೆಯಾಗಿದೆ. ಜಿಲ್ಲೆಯ ಮಾಲೂರು ಸೇರಿದಂತೆ ಹಲವೆಡೆ ಬಸ್‍ನಲ್ಲಿ ಸಂಚಾರಿಸಿದ್ದ ಪ್ರಯಾಣಿಕರನ್ನು ಪತ್ತೆ ಮಾಡುವುದು ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ.

    ಕೋಲಾರ ವಿಭಾಗದ ಡಿಪೋನಲ್ಲಿ ಕಂಡಕ್ಟರ್ ಕಮ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ 36 ವರ್ಷದ ವ್ಯಕ್ತಿ ಪ್ರತಿನಿತ್ಯ ಮಾಲೂರು ಕೋಲಾರ ಮಾರ್ಗವಾಗಿ ಓಡಾಡುತ್ತಿದ್ದ ಬಸ್‍ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈತನಲ್ಲಿ ಕೆಲವೊಂದು ರೋಗ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

    ಪ್ರತಿನಿತ್ಯ ಚಾಲಕ ಪ್ರಯಾಣಿಕರನ್ನು ಕರೆದುಕೊಂಡು ಕೋಲಾರದಿಂದ ಮಾಲೂರಿಗೆ ಹತ್ತಕ್ಕೂ ಹೆಚ್ಚು ಬಾರಿ ಪ್ರಯಾಣಿಸಿದ್ದ. ಸದ್ಯ ಸಾರಿಗೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿರೋದು ಆತಂಕಕ್ಕೆ ಕಾರಣವಾಗಿದ್ದು, ಸೋಂಕಿತ ಸಿಬ್ಬಂದಿ ಇದ್ದಂತ ಬಸ್‍ನಲ್ಲಿ ಪ್ರಯಾಣ ಮಾಡಿದ ಜನರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇದೆ.

    ಚಾಲಕನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸುಮಾರು 19 ಜನರನ್ನು ಈಗಾಗಲೇ ಗುರುತು ಮಾಡಲಾಗಿದೆ. ಆದರೆ ದ್ವಿತೀಯ ಸಂಪರ್ಕಿತರಾದ ಬಸ್‍ನಲ್ಲಿ ಪ್ರಯಾಣ ಮಾಡಿದ ಜನರನ್ನು ಪತ್ತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

    ಬಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕಿರುವುದು ದೃಢವಾಗುತ್ತಿದ್ದಂತೆ ಬಸ್ ಡಿಪೋ ದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಸೋಂಕಿತ ಚಾಲಕ ಕೋಲಾರ ಜಿಲ್ಲೆಗೆ ಕೊರೊನಾ ಸ್ಪ್ರೆಡರ್ ಆಗುತ್ತಾರಾ ಎಂಬ ಆತಂಕ ಶುರುವಾಗಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ. ಈ ಮಧ್ಯೆ ಇಂತಹ ಪ್ರಕರಣಗಳಿಂದ ಕೊರೊನಾ ಸೋಂಕು ಎಲ್ಲಿ ಹಳ್ಳಿ ಹಳ್ಳಿಗೂ ಹರಡುತ್ತದೋ ಎಂಬ ಭಯ ಜನಸಾಮಾನ್ಯರನ್ನು ಕಾಡುತ್ತಿದೆ.