Tag: ಸಾರಿಗೆ ಇಲಾಖೆ

  • ಟ್ರಾಫಿಕ್‌ ಫೈನ್‌ 50% ಡಿಸ್ಕೌಂಟ್‌ಗೆ ವಾಹನ ಸವಾರರಿಂದ ಭರ್ಜರಿ ರೆಸ್ಪಾನ್ಸ್‌; ಬರೋಬ್ಬರಿ 106 ಕೋಟಿ ದಂಡ ಸಂಗ್ರಹ

    ಟ್ರಾಫಿಕ್‌ ಫೈನ್‌ 50% ಡಿಸ್ಕೌಂಟ್‌ಗೆ ವಾಹನ ಸವಾರರಿಂದ ಭರ್ಜರಿ ರೆಸ್ಪಾನ್ಸ್‌; ಬರೋಬ್ಬರಿ 106 ಕೋಟಿ ದಂಡ ಸಂಗ್ರಹ

    ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಇತ್ಯರ್ಥಕ್ಕೆ 50% ರಿಯಾಯಿತಿಯಡಿ ದಂಡ ಪಾವತಿಸಲು ಸಾರಿಗೆ ಇಲಾಖೆ ನೀಡಿದ್ದ ಅವಕಾಶಕ್ಕೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

    ಇದುವರೆಗೆ ಬರೊಬ್ಬರಿ 106 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. 37,86,173 ಬಾಕಿ ಸಂಚಾರ ನಿಯಮ ಉಲ್ಲಂಘನೆ ಕೇಸ್‌ಗಳು ಇತ್ಯರ್ಥಗೊಂಡಿವೆ. ಇದನ್ನೂ ಓದಿ: ಟ್ರಾಫಿಕ್ ಫೈನ್ ಪಾವತಿಗೆ 50% ಡಿಸ್ಕೌಂಟ್ – 15 ದಿನಕ್ಕೆ 45 ಕೋಟಿ ದಾಟಿದ ದಂಡ ಪಾವತಿಯ ಮೊತ್ತ

    ಆ.23 ರಿಂದ ಸೆ.12 ರ ವರೆಗೆ ಬಾಕಿ ದಂಡ ಕಟ್ಟಲು 50% ಆಫರ್ ನೀಡಲಾಗಿತ್ತು. ಆನ್‌ಲೈನ್ ಹಾಗೂ ಅಫ್ಲೈನ್‌ನಲ್ಲಿ ವಾಹನ ಸವಾರರು ಬಾಕಿ ದಂಡ ಪಾವತಿ ಮಾಡಿದ್ದಾರೆ. ಒಟ್ಟು 21 ದಿನಗಳಲ್ಲಿ 106 ಕೋಟಿ ರೂ. ದಂಡ ಸಂಗ್ರಹವಾಗಿದೆ.

    ಸೆಪ್ಟೆಂಬರ್ 12 ರ ಕೊನೆಯ ಒಂದೇ ದಿನದಲ್ಲಿ 25 ಕೋಟಿ ದಂಡ ಸಂಗ್ರಹಣೆಯಾಗಿದೆ. 50% ರಿಯಾಯಿತಿಯಲ್ಲಿ ದಂಡ ಪಾವತಿಸಲು ನೀಡಿದ್ದ ಕಾಲಾವಕಾಶ ಶುಕ್ರವಾರಕ್ಕೆ ಮುಗಿದಿದೆ.

  • ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌

    ಹೈಕೋರ್ಟ್‌ ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌

    ಬೆಂಗಳೂರು: ಕರ್ನಾಟಕ ಹೈಕೋರ್ಟ್‌ (Karnataka High Court) ಛೀಮಾರಿ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ವಾಪಸ್‌ ಪಡೆಯಲು ಕೆಎಸ್‌ಆರ್‌ಟಿಸಿ (KSRTC) ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಈ ಬಗ್ಗೆ ಸಮಿತಿ ಪರ ವಕೀಲರು ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದಾರೆ.

    ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ಇಂದು ಹೈಕೋರ್ಟ್‌ನ ಸಿಜೆ ವಿಭು ಬಕ್ರು, ನ್ಯಾ.ಸಿ.ಎಂ ಜೋಷಿ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆಯಿತು. ಸರ್ಕಾರಿ ಪರ ವಕೀಲರಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು. ಇದನ್ನೂ ಓದಿ: ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು; ಆ.10ಕ್ಕೆ ಪ್ರಧಾನಿ ಹಸಿರು ನಿಶಾನೆ – ಸಚಿವ ಪ್ರಹ್ಲಾದ್ ಜೋಶಿ

    ನಿನ್ನೆ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಂಘಟನೆಯೊಂದಿಗೆ ಸಭೆ ಮಾಡಲಾಗಿದೆ. ನಿನ್ನೆ ರಾತ್ರಿಯಷ್ಟೇ ನೋಟಿಸ್ ಸಿಕ್ಕಿದೆ. ರಾಜಿ ಸಂಧಾನಕ್ಕೆ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದ್ರು, ಇದಕ್ಕೆ ಮಾತುಕತೆ ಏನಾಗಿದೆ? ಎಂದು ಹೈಕೋರ್ಟ್ ಪ್ರಶ್ನಿಸಿತು. ಅದಕ್ಕೆ ಎಜಿ, ಈವೆರೆಗೆ ಸರ್ಕಾರ ನಡೆಸಿದ ಮಾತುಕತೆಗಳ ವಿವರ ನೀಡಿದರು. ಮುಂದುವರಿದು… ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಕಾಯ್ದೆಯಂತೆ ಸಂಧಾನ ಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ರು.

    ಬಳಿಕ ಸಾರಿಗೆ ಸಂಘಟನೆಗಳ ಪರ ವಕೀಲರನ್ನ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ಸಿಜೆ ವಿಭು ಬಕ್ರು, ನ್ಯಾ.ಸಿ.ಎಂ.ಜೋಷಿ ನೇತೃತ್ವದ ಪೀಠ ನ್ಯಾಯಾಂಗ ನಿಂದನೆಯ ಎಚ್ಚರಿಕೆಯನ್ನೂ ನೀಡಿತು. ಇದನ್ನೂ ಓದಿ: ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಇಲ್ಲದಿದ್ರೆ ಕರ್ನಾಟಕ ಬಂದ್‌ಗೆ ಕರೆ ನೀಡ್ತೆವೆ – ವಾಟಾಳ್

    ಎಸ್ಮಾ (ಅಗತ್ಯ ಸೇವೆ ನಿರ್ವಹಣೆ ಕಾಯಿದೆ, 1968) ಜಾರಿಯಾಗಿದೆ. ಮುಷ್ಕರ ನಿಂತಿರುವ ಬಗ್ಗೆ ನಾಳೆ ಮಾಹಿತಿ ನೀಡಬೇಕು. ಇಲ್ಲವಾದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು. ಸಾರಿಗೆ ಸಂಘಟನೆಗಳ ಕ್ರಿಯಾ ಸಮಿತಿ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು. ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ, ಜನಸಾಮಾನ್ಯರನ್ನ ಒತ್ತೆಯಾಗಿರಿಸುವುದನ್ನ ಕೋರ್ಟ್‌ ಸಹಿಸಲ್ಲ ಎಂದು ಎಚ್ಚರಿಸಿತು.

    ಮುಷ್ಕರ ನಿರ್ಧಾರ ಕಾನೂನು ಬಾಹಿರವಾಗಿದೆ. ಹೈಕೋರ್ಟ್ ಆದೇಶವಿದ್ದರೂ ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು. ನಾಳೆ ಮುಷ್ಕರ ನಿಂತಿದೆ ಎಂಬುದನ್ನ ಕೋರ್ಟ್‌ಗೆ ಹೇಳಬೇಕು ಎಂದು ತಾಕೀತು ಮಾಡಿದರು. ಇದಕ್ಕೆ ಉತ್ತರಿಸಿದ ನೌಕರರ ಸಂಘಟನೆ ಪರ ವಕೀಲರು, ನಾಳೆ ಮುಷ್ಕರ ನಡೆಸುವುದಿಲ್ಲ ಎಂದು ಹೇಳಿದರು. ಬಳಿಕ ಕೋರ್ಟ್‌ ವಿಚಾರಣೆಯನ್ನ ಆಗಸ್ಟ್‌ 7ಕ್ಕೆ ಮುಂದೂಡಿತು. ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆ ನಡ್ವೆ ಅಮೆರಿಕಕ್ಕೆ ತಿವಿದ ಇಂಡಿಯನ್ ಆರ್ಮಿ – ಪಾಕ್‌ಗೆ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ 1971ರ ಪೇಪರ್ ಕಟಿಂಗ್‌ ಪೋಸ್ಟ್

    ಬೇಡಿಕೆಗೆ ಬಗ್ಗದ ಸರ್ಕಾರ
    ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇಂದಿನಿಂದ ಮುಷ್ಕರಕ್ಕೆ ಕರೆ ನೀಡಲಾಗಿತ್ತು. 1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿರಲಿಲ್ಲ. ಹೀಗಾಗಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಈ ಬೆನ್ನಲ್ಲೇ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಆದ್ರೆ ಕೋರ್ಟ್‌ ಆದೇಶ ಪ್ರತಿ ಕೈಸೇರಿಲ್ಲ ಅಂತ ಹೇಳಿ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಧುಮುಕಿತ್ತು.

  • ಸಾರಿಗೆ ಮುಷ್ಕರ | ಇದು ಪಾಪರ್‌ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್‌ ವಾಗ್ದಾಳಿ

    ಸಾರಿಗೆ ಮುಷ್ಕರ | ಇದು ಪಾಪರ್‌ ಸರ್ಕಾರ, ಪರಿಹಾರ ಕೊಡದಿದ್ರೆ ಅಧಿಕಾರ ಬಿಟ್ಟು ತೊಲಗಿ – ಅಶೋಕ್‌ ವಾಗ್ದಾಳಿ

    – ಕೋವಿಡ್‌ ವೇಳೆ ಬೇರೆ ರಾಜ್ಯಗಳಲ್ಲಿ ಸಂಬಳವೇ ಕೊಟ್ಟಿರಲಿಲ್ಲ, ನಾವು ಕೊಟ್ಟಿದ್ವಿ; ತಿರುಗೇಟು

    ಬೆಂಗಳೂರು: ಈ ಸರ್ಕಾರ ಪಾಪರ್ ಆಗಿದೆ, ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯದೇ ನೌಕರರ ಬೇಡಿಕೆ ಈಡೇರಿಸಬೇಕು ಅಂತ ಸರ್ಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ (R Ashoka) ಆಗ್ರಹ ಮಾಡಿದ್ದಾರೆ.

    ಸಾರಿಗೆ ನೌಕರರ ಮುಷ್ಕರದ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಾರಿಗೆ ನೌಕರರ ಹೋರಾಟ ನಡೆಯುತ್ತಿದೆ. ಈ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್ ಅಂತ ಹೇಳಿದ್ರು. ಇವತ್ತು ಫ್ರೀ ಬಸ್ (Free Bus) ಕಟ್ ಆಗಿದೆ. ಇವರು ಹೇಳ್ತಿದ್ದರು ಸರ್ಕಾರ ನಾವು ಪಾಪರ್ ಆಗಿಲ್ಲ. ಹಣ ನಮ್ಮ ಬಳಿ ಕೊಳೆಯುತ್ತಿದೆ. ಖಜಾನೆ ತುಂಬಿ ಆಚೆ ಹೋಗ್ತಿದೆ ಅಂತ ಸಿದ್ದರಾಮಯ್ಯ ಹೇಳಿದ್ರು. ಮಿಸ್ಟರ್ ಸಿದ್ದರಾಮಯ್ಯ (Siddaramaiah) ಅವರೇ.. ಯಡಿಯೂರಪ್ಪ ಸಿಎಂ ಆಗಿದ್ದಾಗ, ನಾನು ಸಾರಿಗೆ ಮಂತ್ರಿ ಆಗಿದ್ದಾಗ 15% ಸಂಬಳ ಜಾಸ್ತಿ ಮಾಡಿದ್ವಿ. ಅಂದೇ ಸುಮಾರು 480 ಕೋಟಿ ಹಣ ಕೊಟ್ಟಿದ್ವಿ. ಸಾರಿಗೆ ನೌಕರರ ಅವರ ಎಲ್ಲಾ ಬೇಡಿಕೆ ನಾವು ತೀರಿಸಿದ್ದೇವೆ ಅಂತ ಸರ್ಕಾರಕ್ಕೆ ತಿರುಗೇಟು ಕೊಟ್ಟರು.

    ಕೋವಿಡ್‌ ವೇಳೆ ಬಿಜೆಪಿ ಅವರು ಹೈಕ್ ಮಾಡಿಲ್ಲ ಅಂತ ಹೇಳ್ತಾರೆ. ಸಿದ್ದರಾಮಯ್ಯ ಅವರೇ ಬೇರೆ ರಾಜ್ಯಗಳಲ್ಲಿ ಸಂಬಳವೇ ಕೊಟ್ಟಿರಲಿಲ್ಲ. ನಾವು ಸಂಬಳ ಕೊಟ್ಟಿದ್ವಿ. ಕೋವಿಡ್ ಕಾರಣ ಹೈಕ್ ಮಾತ್ರ ಕೊಟ್ಟಿರಲಿಲ್ಲ. ಇಡೀ ವಿಶ್ವದಲ್ಲಿ ಯಾರು ಹೈಕ್ ಕೊಟ್ಟಿರಲಿಲ್ಲ. ಅದನ್ನ ಇಟ್ಟುಕೊಂಡು ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ | ಬಿಜೆಪಿ ಸರ್ಕಾರ 2023ರಲ್ಲೇ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ: ರಾಮಲಿಂಗ ರೆಡ್ಡಿ

    ನಾವು ಆಗ ಹೈಕ್ ಕೊಟ್ಟಿರಲಿಲ್ಲ. ಈಗ ನೀವು ಕೊಡಿ, ಸಾರಿಗೆ ನೌಕರರ ಹೊಟ್ಟೆ ಮೇಲೆ ಹೊಡೆಯಬೇಡಿ. ನೌಕರರ ನ್ಯಾಯಯುತ ಬೇಡಿಕೆಗಳಿಗೆ ನಮ್ಮ ಬೆಂಬಲ ಇದೆ. ಸಿಎಂ ಸಿದ್ದರಾಮಯ್ಯ ನಿದ್ರೆ ಮಾಡೋದು ಬಿಟ್ಟು ನೌಕರರ ಸಭೆ ಮಾಡಿ ಸಮಸ್ಯೆ ಪರಿಹಾರ ಮಾಡಿ. ನಿಮ್ಮಿಂದ ಸಮಸ್ಯೆ ಪರಿಹಾರ ಮಾಡಲು ಆಗದೇ ಹೋದ್ರೆ ಅಧಿಕಾರ ಬಿಟ್ಟು ಹೋಗಿ ಅಂತ ಆಗ್ರಹ ಮಾಡಿದ್ರು. ಇದನ್ನೂ ಓದಿ: ಸರ್ಕಾರಿ ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ – ನಿಮ್ಮ ಜಿಲ್ಲೆಯ ಪರಿಸ್ಥಿತಿ ಹೇಗಿದೆ?

    ಜನರಿಗೆ ಈ ಸರ್ಕಾರ ಸಮಸ್ಯೆ ಕೊಡ್ತಿದೆ. ಈ ಶಾಪ ನಿಮಗೆ ತಟ್ಟುತ್ತದೆ. ಇದು ಪಾಪರ್‌ ಸರ್ಕಾರ. ನೌಕರರ ಬೇಡಿಕೆ ಸರ್ಕಾರ ಈಡೇರಿಸಬೇಕು ಅಂತ ಒತ್ತಾಯ ಮಾಡಿದರು. ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರದ ಎಫೆಕ್ಟ್ – ನಮ್ಮ ಮೆಟ್ರೋಗೆ ಜನವೋ ಜನ

  • ಸಾರಿಗೆ ಮುಷ್ಕರ | ಬಿಜೆಪಿ ಸರ್ಕಾರ 2023ರಲ್ಲೇ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ: ರಾಮಲಿಂಗ ರೆಡ್ಡಿ

    ಸಾರಿಗೆ ಮುಷ್ಕರ | ಬಿಜೆಪಿ ಸರ್ಕಾರ 2023ರಲ್ಲೇ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ: ರಾಮಲಿಂಗ ರೆಡ್ಡಿ

    – 50% ಬಸ್‌ ಸಂಚಾರ ಆಗ್ತಿದೆ, ಜನಕ್ಕೆ ಸಮಸ್ಯೆ ಆಗಿಲ್ಲ ಎಂದ ಸಚಿವ

    ಬೆಂಗಳೂರು: ವೇತನ ಪರಿಷ್ಕರಣೆ 4 ವರ್ಷಗಳಿಗೊಮ್ಮೆ ಆಗಬೇಕು ಅಂತಿದೆ. 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ. ಆದ್ರೆ ನೌಕರರು‌ 4 ವರ್ಷಗಳ ಹಿಂಬಾಕಿ ಕೇಳುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ (Ramalinga Reddy) ತಿಳಿಸಿದ್ದಾರೆ.

    ಸಾರಿಗೆ ಮುಷ್ಕರಕ್ಕೆ ಸಂಬಂಧಿಸಿದಂತೆ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿದ ಅವರು, ವೇತನ ಪರಿಷ್ಕರಣೆ 4 ವರ್ಷಕ್ಕೊಮ್ಮೆ ಆಗಬೇಕು ಅಂತಿದೆ. 2016 ರಲ್ಲಿ ನಮ್ಮ ಸರ್ಕಾರವೇ ಪರಿಷ್ಕರಣೆ ಮಾಡಿತ್ತು, 2020ರಲ್ಲಿ ಮಾಡಲಿಲ್ಲ. 2023ರಲ್ಲಿ ಅಂದಿನ ಬಿಜೆಪಿ ಸರ್ಕಾರ (BJP Government) ಪರಿಷ್ಕರಣೆ ಮಾಡಿ ಆದೇಶ ಮಾಡಿದೆ. ಆದರೆ ನೌಕರರು ನಾಲ್ಕು ವರ್ಷದ ಬಾಕಿ ಕೇಳುತ್ತಿದ್ದಾರೆ. ಶ್ರೀನಿವಾಸ ಮೂರ್ತಿ ಕಮಿಟಿ 38 ತಿಂಗಳಿನ ಪರಿಷ್ಕರಣೆ ಪರಿಶೀಲಿಸಬಹುದು ಎಂದಿದ್ದು, 2023ರ ಪರಿಷ್ಕರಣೆ ಆದೇಶದಂತೆ ನೀಡಬೇಕು ಅಂದಿದೆ. ಹಾಗಾಗಿ ಆದೇಶದಲ್ಲೇ ಗೊಂದಲ ಇದೆ ಎಂದು ತಿಳಿಸಿದ್ದಾರೆ.

    ಇನ್ನೂ ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಸಂಚಾರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಉಳಿದ ಮೂರು ನಿಗಮಗಳಲ್ಲಿ 50% ಬಸ್‌ಗಳ ಸಂಚಾರ ಆಗುತ್ತಿದೆ. ಕೆಎಸ್‌ಆರ್‌ಟಿಸಿ ಸಂಚಾರವೂ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಅಲ್ಲೂ 50% ಬಸ್ಸುಗಳು ಸಂಚರಿಸುತ್ತಿವೆ. ವಿಚಾರ ಕೋರ್ಟ್‌ನಲ್ಲಿ ಇದೆ ನಾವು ಕೋರ್ಟ್ ತೀರ್ಪು ಕಾಯುತ್ತಿದ್ದೇವೆ. ನಿನ್ನೆ ನ್ಯಾಯಾಲಯ ಒಂದು ದಿನ ಮುಷ್ಕರ ಮುಂದೂಡಿಕೆ ಮಾಡಲು ಹೇಳಿತ್ತು. ಆದರೂ ಇಂದು ಮುಷ್ಕರ ಮಾಡಿದ್ದಾರೆ ಅದನ್ನ ಕೋರ್ಟ್ ಗಮನಿಸುತ್ತದೆ ಎಂದಿದ್ದಾರೆ.

    ಎಸ್ಮಾ ಹೊಸ ಕಾನೂನು ಏನಲ್ಲ ಮೊದಲಿನಿಂದಲು ಇದೆ. ಎಸ್ಮಾ ಜಾರಿ ಹೊಸತೇನು ಅಲ್ಲ. ನಮ್ಮ ಸಿಬ್ಬಂದಿ ಜನರಿಗೆ ಸಮಸ್ಯೆ ಆಗದಂತೆ ಕಾರ್ಯ ನಿರ್ವಹಿಸಬೇಕು. ಕೋರ್ಟ್ ತೀರ್ಪು ಇರುವುದರಿಂದ ನಾನೇನು ಜಾಸ್ತಿ ಮಾತನಾಡಲ್ಲ ಎಂದರಲ್ಲದೇ ನಮ್ಮ ಸಾರಿಗೆ ಬಸ್‌ಗಳಲ್ಲಿ ಪ್ರತಿದಿನ 1 ಕೋಟಿ ಜನ ಓಡಾಡುತ್ತಾರೆ. ಅವರಿಗೆ ಸಮಸ್ಯೆ ಆಗದಂತೆ ನಮ್ಮ ಸಿಬ್ಬಂದಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದ್ದೆವು. ಕೆಲವು ಕಡೆ ಸ್ವಲ್ಪ ಮುಷ್ಕರ ನಡೆಯುತ್ತಿದೆ. ಕೋರ್ಟ್ ತೀರ್ಪಿನ ನಂತರ ನೋಡೋಣ, ಮಧ್ಯಾಹ್ನದ ನಂತರ ಎಲ್ಲವೂ ಸರಿಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಸರ್ಕಾರಿ ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ – ನಿಮ್ಮ ಜಿಲ್ಲೆಯ ಪರಿಸ್ಥಿತಿ ಹೇಗಿದೆ?

    ಸರ್ಕಾರಿ ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ – ನಿಮ್ಮ ಜಿಲ್ಲೆಯ ಪರಿಸ್ಥಿತಿ ಹೇಗಿದೆ?

    ಬೆಂಗಳೂರು: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾರಿಗೆ ನೌಕರರು (Transport Employees Strike) ಮುಷ್ಕರಕ್ಕಿಳಿದಿದ್ದಾರೆ. ಈ ಹಿನ್ನೆಲೆ ರಾಜ್ಯಾದ್ಯಂತ ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾವ ಜಿಲ್ಲೆಯ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನೋಡೋಣ…

    ಮೈಸೂರು
    ಮೈಸೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ಈಗ ಖಾಸಗಿ ಬಸ್ ಗಳು ಎಂಟ್ರಿಯಾಗಿವೆ. ಮೈಸೂರಿನ ವಿವಿಧ ತಾಲೂಕು, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರಿಗೆ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಖಾಸಗಿ ಬಸ್‌ಗಳು ಅಧಿಕೃತ ವಾಗಿ ಸಬ್‌ ಅರ್ಬನ್‌ ನಿಲ್ದಾಣದ ಒಳ ಭಾಗದಿಂದಲೇ ಸಂಚಾರ ಆರಂಭಿಸಿವೆ.

    ಹಾಸನ
    ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಸ್‌ಗಳು ರಸ್ತೆಗಿಳಿಯದೇ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲಸಕ್ಕೆ ತೆರಳುವವರು ಬಸ್‌ ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಕೆಎಸ್‌ಆರ್‌ಟಿಸಿ ಘಟಕ-1 ಹಾಗೂ ಘಟಕ-2 ರಲ್ಲಿ 230 ಬಸ್‌ಗಳು ನಿಂತಿವೆ. ಅತ್ತ ಪ್ರಯಾಣಿಕರಿಗೆ ಹೊರೆ ತಪ್ಪಿಸಲು ಮುಂದಾಗಿರುವ ಖಾಸಗಿ ಬಸ್‌ಗಳು ನಿಲ್ದಾಣದ ಮುಂಭಾಗದಲೇ ನಿಂತಿವೆ. ತುರ್ತು ಅಗತ್ಯಗಳಿಗೆ ಜನ ಖಾಸಗಿ ಬಸ್‌ಗಳ ಮೊರೆ ಹೋಗುತ್ತಿದ್ದಾರೆ.

    ಧಾರವಾಡ:
    ಸಾರಿಗೆ ಸಂಸ್ಥೆ ನೌಕರರು ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದು, ಧಾರವಾಡದಲ್ಲೂ ಈ ಮುಷ್ಕರದ ಬಿಸಿ ತಟ್ಟಿದೆ. ಸಾರಿಗೆ ಸಂಸ್ಥೆ ಬಸ್‌ಗಳು ಸೇರಿದಂತೆ ಬಿಆರ್‌ಟಿಎಸ್ ಸಂಸ್ಥೆಯ ಬಸ್‌ಗಳೂ ರಸ್ತೆಗಿಳಿದಿಲ್ಲ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡುವಂತಾಗಿದೆ. ಬೇಂದ್ರೆ ನಗರ ಸಾರಿಗೆ ಮತ್ತು ಇತರ ಖಾಸಗಿ ವಾಹನಗಳು ಓಡಾಟ ನಡೆಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಧಾರವಾಡದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

    ಬೀದರ್‌
    ಇನ್ನೂ ಬೀದರ್‌ ಜಿಲ್ಲೆಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿದೆ. ಕಲಬುರಗಿ, ಹುಮ್ನಾಬಾದ್, ಭಾಲ್ಕಿ, ಹೈದ್ರಾಬಾದ್, ಸೇರಿದಂತೆ ಹಲವು ಕಡೆ ಹೋಗಲು ಬಸ್‌ಗಾಗಿ ಪ್ರಯಾಣಿಕರು ನಿಲ್ದಾಣದಲ್ಲೇ ಕಾದು ಕುಳಿತಿದ್ದಾರೆ. ಅತ್ತ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

    ಬಾಗಲಕೋಟೆ:
    ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿದೆ. ಇತ್ತ ಖಾಸಗಿ ಬಸ್‌ಗಳ ನಿಯೋಜನೆ ಸಹ ಮಾಡಿಕೊಳ್ಳದಿರುವ ಕಾರಣ, ಜನ ಕಂಗಾಲಾಗಿದ್ದಾರೆ. ಈ ನಡುವೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗದಿರಲು ಬಸ್‌ ನಿಲ್ದಾಣ ವ್ಯಾಪ್ತಿಯ 1 ಕಿಮೀ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ವಿಜಯಪುರ
    ಜಿಲ್ಲೆಯಲ್ಲಿ ಬಸ್‌ ಬಂದ್‌ ಹಿನ್ನೆಲೆ ಜನ ಖಾಸಗಿ ವಾಹನಗಳ ಮೊರೆ ಹೋದ್ರೆ, ಕೆಲವರು ಸ್ವಂತ ವಾಹನಗಳ ಬಳಕೆಗೆ ಮುಂದಾಗಿದ್ದಾರೆ. ಪ್ರತಿನಿತ್ಯ ಜಿಲ್ಲೆಯಿಂದ ಸುಮಾರು 773 ಬಸ್‌ಗಳು ಸಂಚಾರ ಮಾಡುತ್ತವೆ. ಬೆಳಗ್ಗೆ ಟ್ರಿಪ್‌ಗೆ 131 ಬಸ್‌ ತೆರಳಬೇಕಿತ್ತು. ಆದ್ರೆ ಈವರೆಗೆ 43 ಬಸ್‌ಗಳಷ್ಟೇ ಸಂಚಾರಕ್ಕೆ ತೆರಳಿವೆ. ಅಲ್ಲದೇ 260 ಸಿಬ್ಬಂದಿ ಪೈಕಿ, 86 ಜನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜಿಲ್ಲಾಡಳಿತದಿಂದ ಖಾಸಗಿ ಬಸ್‌ ವ್ಯವಸ್ಥೆ ಸಹ ಮಾಡದಿರುವ ಕಾರಣ ಜನ ನಿಲ್ದಾಣದಲ್ಲೇ ನಿಂತು ಕಂಗಾಲಾಗಿದ್ದಾರೆ.

    ಬೆಳಗಾವಿ
    ಸಾರಿಗೆ ನೌಕರರ ಮುಷ್ಕರದ ಬಿಸಿ ಗಡಿ ಜಿಲ್ಲೆ ಬೆಳಗಾವಿಗೂ ತಟ್ಟಿದೆ. ಬೆಳಗಾವಿ, ಚಿಕ್ಕೋಡಿ ಎರಡೂ ವಿಭಾಗದಲ್ಲಿ ಬಹುತೇಕ ಸಿಬ್ಬಂದಿ ಗೈರಾಗಿದ್ದಾರೆ. ಪ್ರತಿನಿತ್ಯ ಜಿಲ್ಲೆಯಲ್ಲಿ 700ಕ್ಕೂ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿತ್ತು. ಚಿಕ್ಕೋಡಿ ವಿಭಾಗದಲ್ಲಿ 668 ಬಸ್‌ಗಳ ಓಡಾಟ ಇರುತ್ತಿತ್ತು. ಎರಡೂ ವಿಭಾಗಗಳಲ್ಲಿ 4,300ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇಂದು ಬಂದ್‌ ಹಿನ್ನೆಲೆ ಸಿಬ್ಬಂದಿ ಗೈರಾಗಿದ್ದಾರೆ. ರಾತ್ರಿ ಹಾಗೂ ದೂರದ ಊರುಗಳಿಗೆ ತೆರಳಿದ್ದ ಬಸ್‌ಗಳಷ್ಟೇ ಡಿಪೋಗಳಿಗೆ ವಾಪಸ್‌ ಆಗುತ್ತಿದ್ದು, ನಿಲ್ದಾಣದಿಂದ ಯಾವುದೇ ಬಸ್‌ ಹೊರಡುತ್ತಿಲ್ಲ. ಅಲ್ಲದೇ ಬಂದ್‌ ಹಿನ್ನೆಲೆ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

    ಬಳ್ಳಾರಿ
    ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಬಳ್ಳಾರಿ ವಿಭಾಗದ 6 ಘಟಕಗಳಲ್ಲೂ ಎಫೆಕ್ಟ್ ತಟ್ಟಿದೆ. ಬಳ್ಳಾರಿ ವ್ಯಾಪ್ತಿಯ 2,500 ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಇರುವ 450 ಬಸ್‌ಗಳ ಸಂಚಾರ ಸ್ತಬ್ಧಗೊಂಡಿವೆ. ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದಾರೆ. ಅಲ್ಲದೇ ಇಂದು ಪಿಯುಸಿ ಅಡ್ಮೀಶನ್‌ಗೆ ಹೊರಟಿದ್ದ ವಿದ್ಯಾರ್ಥಿನಿ ಪರದಾಡಿದ್ದಾರೆ. ಬೆಳಗ್ಗೆ 5 ಗಂಟೆಯಿಂದಲೇ ಕಾಯುತ್ತಿದ್ದರೂ ಬಸ್‌ ಸಿಗದೇ ವಿದ್ಯಾರ್ಥಿನಿ ಪರದಾಡಿದ ದೃಶ್ಯವೂ ಕಂಡುಬಂದಿದೆ. ಈ ನಡುವೆ ಸುಮಾರು 100 ಖಾಸಗಿ ಬಸ್‌ಗಳು ಸಂಚಾರಕ್ಕೆ ಇಳಿದಿದ್ದು, ಪ್ರಯಾಣಿಕರು ಇದರ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.

    ಚಿಕ್ಕಬಳ್ಳಾಪುರ
    ಇಲ್ಲಿಯೂ ಬಂದ್‌ ಬಿಸಿ ತಟ್ಟಿದ್ದು, ಜನ ಪರದಾಟ ನಡೆಸಿದ್ದಾರೆ. ಸಾಮಾನ್ಯ ದಿನಗಳಲ್ಲಿ 7 ಗಂಟೆ ವೇಳೆಗೆ 120 ಬಸ್‌ ಆಪರೇಟ್‌ ಆಗುತ್ತಿತ್ತು, ಇಂದು 60 ಬಸ್‌ಗಳು ಆಪರೇಟ್‌ ಆಗಿವೆ. ಶೇ.50 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರೂ ಡಿಪೋದಿಂದ ಬಸ್‌ ತೆಗೆಯಲು ಹಿಂದೇಟು ಹಾಕಿದ್ದಾರೆ. ಇನ್ನೂ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯ ಬಸವರಾಜು ಮಾತನಾಡಿ, ಕೆಲ ಸಿಬ್ಬಂದಿಗಳು ಕೆಲಸಕ್ಕೆ ಬರಲು ಆಸಕ್ತಿ ತೋರಿದ್ದರು ಆದ್ರೆ, ಭಯದಿಂದ ಮುಷ್ಕರಕ್ಕಿಳಿದಿದ್ದಾರೆ ಎಂದು ತಿಳಿಸಿದ್ದಾರೆ.

    ಚಿಕ್ಕಮಗಳೂರು
    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕತೆ ನೀಡಿರೋ ಮುಷ್ಕರಕ್ಕೆ ಕಾಫಿನಾಡಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಚಿಕ್ಕಮಗಳೂರು ವಿಭಾಗದ 6 ಡಿಪೋಗಳ 560 ಬಸ್‌ಗಳು ಸ್ಥಗಿತಗೊಂಡಿವೆ. ಚಾಲಕರು-ನಿರ್ವಾಹಕರು ಬಸ್ ಗಳನ್ನ ಡಿಪೋಗೆ ಹಾಕಿ ಬಸ್ ನಿಲ್ದಾಣ ಹಾಗೂ ಡಿಪೋ ಬಳಿ ಜಮಾಯಿಸಿದ್ದಾರೆ. ಬಸ್ ಬಂದ್ ಹಿನ್ನೆಲೆ ಪ್ರಯಾಣಿಕರ ಸಂಖ್ಯೆ ಕೂಡ ಸಂಪೂರ್ಣ ವಿರಳವಾಗಿದೆ. ಆದರೆ, ಹೈ ಕೋರ್ಟ್ ಕೂಡ ಒಂದು ದಿನ ಮುಂದೂಡುವಂತೆ ಸೂಚನೆ ನೀಡಿದ್ರು ಮುಷ್ಕರ ನಡೆಯುತ್ತಿರೋದ್ರಿಂದ ಚಾಲಕರು-ನಿರ್ವಾಹಕರು ಯಾವ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದ್ರು ಆಗಬಹುದು ಎಂದು ಯಾರೂ ಕೂಡ ಅಕ್ಕಪಕ್ಕದ ಹಳ್ಳಿಯ ಮನೆಗಳಿಗೂ ಹೋಗಿಲ್ಲ. ಆದರೆ, ಬಸ್ ಬಂದ್ ಹಿನ್ನೆಲೆ ಕಾಫಿನಾಡ ಬಸ್ ನಿಲ್ದಾಣ ಸಂಪೂರ್ಣ ಸ್ಥಬ್ಧವಾಗಿದೆ.

    ಚಾಮರಾಜನಗರ
    ಬೆಳಗ್ಗೆ ಏಳು ಗಂಟೆಯಾದರೂ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಒಂದು ಬಸ್ ಸಂಚಾರ ಕೂಡ ರಸ್ತೆಗಿಳಿದಿಲ್ಲ. ಸಾರಿಗೆ ನೌಕರರ ಮುಷ್ಕರದ ಬಂದ್ ಬಿಸಿ ತಟ್ಟಿದೆ. ಕಾಲೇಜಿಗೆ ಹೋಗುವ ವಿಧ್ಯಾರ್ಥಿಗಳು, ನೌಕರರು ಬಸ್ಸಿಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಖಾಸಗಿ ಬಸ್‌ಗಳ ದರ್ಬಾರ್ ಆರಂಭವಾಗಿದ್ದು, ಪ್ರಯಾಣಿಕರು ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ.

    ಚಿತ್ರದುರ್ಗ
    ಬಂದ್ ಬಿಸಿ ಚಿತ್ರದುರ್ಗಕ್ಕೂ ತಟ್ಟಿದೆ. ಪ್ರತಿದಿನ ಜನಜಂಗುಳಿಯಿಂದ ಪ್ರಯಾಣಿಕರೇ ಗಿಜುಗುಡ್ತಿದ್ದ ಚಿತ್ರದುರ್ಗದ ಸಾರಿಗೆ ಬಸ್ ನಿಲ್ದಾಣ ಇಂದು ಸಂಪೂರ್ಣ ಖಾಲಿ ಖಾಲಿಯಾಗಿದೆ. ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆ ಖಾಸಗಿ ಬಸ್ ಹಾಗೂ ಗೂಡ್ಸ್ ವಾಹಗಳ ಮೊರೆ ಹೋಗುತ್ತಿದ್ದಾರೆ ಜನ.

    ದಾವಣಗೆರೆ
    ಸಾರಿಗೆ ನೌಕರರ ಮಷ್ಕರದಿಂದ ದಾವಣಗೆರೆ ಜಿಲ್ಲೆಯಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಆದ್ರೆ ಮುಷ್ಕರದ ಎಫೆಕ್ಟ್ ಪ್ರಯಾಣಿಕರಿಗೆ ತಟ್ಟಿಲ್ಲ. ಪ್ರಯಾಣಿಕರೇ ಹಿಂದೇಟು ಹಾಕಿರುವುದರಿಂದ ಜನದಟ್ಟಣೆ ಕಡಿಮೆಯಿದೆ. ಕೆಲವರು ಖಾಸಗಿ ಬಸ್‌ಗಳ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ.

    ಗದಗ
    ಇನ್ನೂ ಗದಗ ಜಿಲ್ಲೆಯಲ್ಲೂ ಸಾರಿಗೆ ಮುಷ್ಕರದಿಂದ ಜನ ಪರದಾಡುವಂತಾಗಿದೆ. ಜಿಲ್ಲೆಯಲ್ಲಿ 8 ಡಿಪೋಗಳಿಂದ ನಿತ್ಯ 561 ಬಸ್‌ಗಳು ಸಂಚರಿಸುತ್ತಿದ್ದವು. 70 ರಿಂದ 80 ಲಕ್ಷ ಆದಾಯ ಬರುತ್ತಿತ್ತು. ಆದ್ರೆ ಇಂದು ಒಂದೇ ಒಂದು ಬಸ್‌ ರಸ್ತೆಗಿಳಿದಿಲ್ಲ. ರಾತ್ರಿ ತೆರಳಿದ್ದ ಬಸ್‌ಗಳಷ್ಟೇ ಡಿಪೋಗಳಿಗೆ ವಾಪಸ್‌ ಆಗುತ್ತಿವೆ. ಇತ್ತ ಕೆಲಸಕ್ಕೆ ತೆರಳಬೇಕಿದ್ದ ಜನ ನಿಲ್ದಾಣದಲ್ಲೇ ಕಾದುಕುಳಿತಿದ್ದಾರೆ.

    ಕಲಬುರಗಿ
    ಸಾರಿಗೆ ನೌಕರರ ಮುಷ್ಕರ ಹಿನ್ನಲೆ ಕಲಬುರಗಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಬಳಸಿಕೊಂಡ ಸಾರಿಗೆ ಇಲಾಖೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮೊದಲ ಹಂತದಲ್ಲಿ ವಿಜಯಪುರ, ಬೀದರ್ ಜಿಲ್ಲೆಗಳಿಗೆ ಖಾಸಗಿ ಬಸ್ ಗಳನ್ನು ಬಿಡಲಾಗಿದೆ. ಸಾರಿಗೆ ಬಸ್‌ನ ದರದಲ್ಲಿಯೇ ಖಾಸಗಿ ಬಸ್‌ಗಳು ಸಹ ಟಿಕೆಟ್ ನೀಡಲಾಗುತ್ತಿದೆ. ಖುದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಹಾಗು ಪೊಲೀಸರು ಎದುರು ನಿಂತು ಪ್ರಯಾಣಿಕರಿಗೆ ಟಿಕೆಟ್ ಕೊಡಿಸುವ ಕೆಲಸ ಮಾಡಿದ್ದಾರೆ.

    ಹುಬ್ಬಳ್ಳಿ
    ಹುಬ್ಬಳ್ಳಿಯಲ್ಲೂ ಬಂದ್‌ ಬಿಸಿ ತಟ್ಟಿದ್ದು, ಜನ ಬಸ್ಸಿಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಈ ನಡುವೆ ಸಾರ್ವಜನಿಕರೇ ಫ್ರೀ ಯೋಜನೆಗಳನ್ನ ಕಡಿತಗೊಳಿಸುವಂತೆ ಒತ್ತಡ ಹೇರಿದ್ದಾರೆ. ಈ ನಡುವೆ ಎನ್‌ಡಬ್ಯುಕೆಎಸ್‌ಆರ್‌ಟಿಸಿ ಎಂಡಿ ಪ್ರಿಯಾಂಗ್ ಸಾರ್ವಜನಿಕರಂತೆ ಖಾಸಗಿ ಬಸ್‌ನಲ್ಲೇ ಪ್ರಯಾಣ ಮಾಡಿದ್ದಾರೆ.

    ಹಾವೇರಿ
    ಹಾವೇರಿಯಲ್ಲೂ ಸಹ ಬಂದ್ ಬಿಸಿ ತಟ್ಟಿದ್ದು, ರಾತ್ರಿ ಹೋಗಿರುವ ಬಸ್‌ಗಳು ನಿಲ್ದಾಣಕ್ಕೆ ಬರುತ್ತಿವೆ. ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ದಾವಣಗೆರೆ ಕಡೆ ಹೋಗುವ ಜನರು ಪರದಾಡುವ ಪರಸ್ಥಿತಿ ನಿರ್ಮಾಣವಾಗಿದೆ. 9 ಗಂಟೆಯ ನಂತರ ಬಸ್ ಬಂದ್ ಪರಸ್ಥಿತಿ ತಿಳಿಯಲಿದೆ. ಕೆಲವು ನೌಕರರು ಡ್ಯೂಟಿ ಬರೋದು ಬೇಡ್ವಾ ಅನ್ನೊ ಗೊಂದಲ ಇದ್ದಾರೆ.

    ಕೋಲಾರ
    ಸಾರಿಗೆ ಮುಷ್ಕರ ಹಿನ್ನೆಲೆ ಗಣಿ ನಾಡು ಕೋಲಾರದಲ್ಲೂ ಜನರು ಪರದಾಡುವಂತಾಗಿದೆ, ಕೆಲವರು ಕೆಎಸ್‌ಆರ್‌ಟಿಸಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಕೋಲಾರ ಗಲ್ ಪೇಟೆ ಪೊಲೀಸರು ನಿಲ್ದಾಣದಲ್ಲಿ ಬಂದೋಬಸ್ತ್ ಕಲ್ಪಿಸಿದ್ದಾರೆ.

    ಕೊಪ್ಪಳ
    ಜಿಲ್ಲೆಯಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ ಅಂತ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಂದ್ರ ಜಾಧವ್ ತಿಳಿಸಿದ್ದಾರೆ. 7 ಗಂಟೆಗೆ 41 ಬಸ್‌ ಸಂಚಾರ ಮಾಡಬೇಕಿತ್ತು. ಆದ್ರೆ ಒಂದೇ ಒಂದು ಬಸ್‌ ಕೂಡ ರಸ್ತೆಗಿಳಿದಿಲ್ಲ. ಕೊಪ್ಪಳದಲ್ಲಿ ಪ್ರತಿದಿನ 474 ಬಸ್‌ಗಳು ಸಂಚರಿಸಲಿದ್ದು, 2,600 ಟ್ರಿಪ್‌ ಆಪರೇಟ್‌ ಆಗುತ್ತವೆ. 700 ಟ್ರಿಪ್‌ ಜಿಲ್ಲೆಯ ಹೊರಗೆ ಆಪರೇಟ್‌ ಮಾಡುತ್ತೇವೆ. ಇಂದು ಜಿಲ್ಲೆಯ 5 ಘಟಕಗಳಲ್ಲಿರುವ 1,900 ಸಿಬ್ಬಂದಿಗೂ ಕರ್ತವ್ಯಕ್ಕೆ ಗೈರಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಆದ್ರೆ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಕಾರ್ಖಾನೆ, ಶಾಲೆ, ಮ್ಯಾಕ್ಸಿಕ್ಯಾಬ್ ಸೇರಿ 640 ಖಾಸಗಿ ವಾಹನಗಳಿವೆ. ಅವುಗಳನ್ನ ಬಳಕೆ ಮಾಡಲು ವ್ಯವಸ್ಥೆ ಮಾಡಿರುವುದಾಗಿ ರಾಜೇಂದ್ರ ಜಾಧವ್‌ ತಿಳಿಸಿದ್ದಾರೆ.

    ಕಾರವಾರ
    ರಾಜ್ಯಾದ್ಯಂತ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಿಶ್ರ ಬೆಂಬಲ ವ್ಯಕ್ತವಾಗಿದೆ. ನೌಕರರ ಗೊಂದಲದಲ್ಲಿ ಬೆರಳೆಣಿಕೆಯ ಬಸ್ ಗಳು ಮಾತ್ರ ಸಂಚಾರ ಮಾಡಿದ್ದು, ಬಸ್ ಗಾಗಿ ಕಾದು ನಿಂತ ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡುತಿದ್ದಾರೆ.

    ಮಂಡ್ಯ
    ಮುಷ್ಕರದ ಹಿನ್ನೆಲೆ ಮಂಡ್ಯ ಜಿಲ್ಲೆಯ ಕೆಎಸ್‌ಆರ್‌ಟಿಸಿ ಘಟಕದ 103 ಬಸ್‌ ಸೇರಿ 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಜನ ಪರದಾಡುವಂತಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ರಾಯಚೂರು
    ರಾಯಚೂರಿನಲ್ಲಿ ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ ತಟ್ಟಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ನೌಕರರ ಮುಷ್ಕರ ಆರಂಭವಾಗಿದೆ. ಬಸ್ ನಿಲ್ದಾಣದಲ್ಲಿ ಹಾಲ್ಟಿಂಗ್ ಇರುವ ಬಸ್‌ಗಳು ಮಾತ್ರ ಓಡಾಟ ನಡೆಸಿದ್ದು ಬೆಳ್ಳಿಗ್ಗೆಯಿಂದ 15 ಬಸ್‌ಗಳು ಮಾತ್ರ ಹೋಗಿದ್ದು, ಬರುವ ಬಸ್‌ಗಳನ್ನ ಡಿಪೋಕ್ಕೆ ಕಳುಹಿಸಲಾಗುತ್ತಿದೆ. ಡಿಪೋದಿಂದ ಯಾವುದೇ ಬಸ್‌ಗಳು ಹೊರಬರುತ್ತಿಲ್ಲ. ಹೀಗಾಗಿ ದೂರದ ಊರುಗಳಿಂದ ಬಂದ ಪ್ರಯಾಣಿಕರು ಗ್ರಾಮೀಣ ಭಾಗಗಳಿಗೆ ಬಸ್ ಇಲ್ಲದೆ ಪರದಾಡುತ್ತಿದ್ದಾರೆ. ರಾಯಚೂರು ವಿಭಾಗದ 600 ಬಸ್‌ಗಳ ಓಡಾಟ ಬಂದ್ ಆಗಿದೆ. ರಾಯಚೂರಿನಿಂದ ವಿವಿಧೆಡೆ ಹೊರಡುವ 250 ಬಸ್ ಗಳ ಓಡಾಟ ಸ್ಥಗಿತವಾಗಿದೆ. 10 ಗಂಟೆಯ ಬಳಿಕ ಎಲ್ಲಾ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಲಿದ್ದು ಸಾರಿಗೆ ನೌಕರರ ಮುಷ್ಕರ ಜೋರಾಗಲಿದೆ.

    ರಾಮನಗರ
    ರಾಮನಗರದಲ್ಲೂ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದ್ದು, ಸಾರ್ವಜನಿಕರು ಹಾಗೂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೂ ತೊಂದರೆ ಉಂಟಾಗಿದೆ. ಬಂದ್‌ ಹಿನ್ನೆಲೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಅಧಿಕೃತವಾಗಿಯೇ ಓಡಾಟ ನಡೆಸುತ್ತಿವೆ. ಬೆಂಗಳೂರು, ಮಾಗಡಿ, ಕನಕಪುರ ಭಾಗಕ್ಕೆ ಖಾಸಗಿ ಬಸ್ ಗಳ ಸಂಚಾರ ನಡೆಸುತ್ತಿವೆ. ಹೀಗಾಗಿ ಇಲ್ಲಿನ ಜನಕ್ಕೆ ಹೆಚ್ಚಿನ ಬಂದ್‌ ಬಿಸಿ ತಟ್ಟಿಲ್ಲ.

    ಶಿವಮೊಗ್ಗ
    ಜಿಲ್ಲೆಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಘಟಕದಿಂದ ಬೇರೆ ಜಿಲ್ಲೆಗಳಿಗೆ ಕೆಲ ಬಸ್‌ಗಳು ಸಂಚಾರ ನಡೆಸುತ್ತಿದ್ದರೆ, ಇನ್ನೂ ಕೆಲ ನೌಕರರು ಮುಷ್ಕರಕ್ಕೆ ಧುಮುಕಿದ್ದಾರೆ. ಶಿವಮೊಗ್ಗ ಘಟಕದಲ್ಲಿ 375 ಬಸ್‌ಗಳಿವೆ. ಈ ಪೈಕಿ ಶಿವಮೊಗ್ಗ ಡಿಪೋ ದಿಂದ ಬೆಂಗಳೂರಿಗೆ 45 ಬಸ್‌ಗಳು ತೆರಳುತ್ತವೆ. ಪ್ರತಿದಿನ 1,190 ಬಸ್‌ಗಳು ಶಿವಮೊಗ್ಗ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತವೆ. ಪ್ರತಿದಿನ 35,000 ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ಆದರಿಂದು ಸಂಚಾರ ಸ್ಥಬ್ಧಗೊಂಡಿದೆ.

    ಯಾದಗಿರಿ
    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಕತೆ ನೀಡಿರೋ ಮುಷ್ಕರಕ್ಕೆ ಯಾದಗಿರಿಯಲ್ಲೂ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಉತ್ತರಪ್ರದೇಶ, ತೆಲಂಗಾಣ ಹಾಗೂ ವಿವಿಧ ಭಾಗದಿಂದ ಆಗಮಿಸಿದ ಪ್ರಯಾಣಿಕರು ಊರಿಗೆ ತೆರಳಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅತ್ತ ಸಾರಿಗೆ ನೌಕರರ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

  • ಸರ್ಕಾರದ ವಿರುದ್ಧ ಸಿಡಿದ ಸಾರಿಗೆ ನೌಕರರು – ಇಂದಿನಿಂದ ಬಸ್‌ ಬಂದ್‌

    ಸರ್ಕಾರದ ವಿರುದ್ಧ ಸಿಡಿದ ಸಾರಿಗೆ ನೌಕರರು – ಇಂದಿನಿಂದ ಬಸ್‌ ಬಂದ್‌

    – ಬೇಡಿಕೆಗೆ ಬಗ್ಗದ ಸರ್ಕಾರ – ಕೆಲಸಕ್ಕೆ ಹಾಜರಾಗದಿರಲು ನೌಕರರ ನಿರ್ಧಾರ

    ಬೆಂಗಳೂರು: ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಗಸ್ಟ್ 5 ರಿಂದ (ಇಂದಿನಿಂದ) ಅನಿರ್ದಿಷ್ಠಾವಧಿ ಮುಷ್ಕರಕ್ಕೆ (Transport Employees Strike) ಇಳಿದಿದ್ದಾರೆ. 1800 ಕೋಟಿ ಹಿಂಬಾಕಿ, ಕೋಟ್ಯಾಂತರ ರುಪಾಯಿ ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ (Karnataka Government) ಒಪ್ಪದಿದ್ದ ಕಾರಣ, ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ.

    ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರದ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಇಂದಿನಿಂದ (ಆ.5) ಬೆಳಗ್ಗೆಯಿಂದಲೇ ಮುಷ್ಕರಕ್ಕಿಳಿದಿದ್ದಾರೆ. ಇದರಿಂದ ರಾಜ್ಯಾದ್ಯಂತ ಬಸ್‌ಗಳ ಸೇವೆಯಲ್ಲಿ ವ್ಯತ್ಯುಯವಾಗಿ 1 ಕೋಟಿಗೂ ಹೆಚ್ಚು ಪ್ರಯಾಣಿಕರು ಪರದಾಡುವ ಆತಂಕ ಎದುರಾಗಿದೆ. ಇದನ್ನೂ ಓದಿ: ಮೈಸೂರು ಮಹಾರಾಜರ ಕೊಡುಗೆಗೆ ಕಾಂಗ್ರೆಸ್ ಅಪಸ್ವರ – ಮಹದೇವಪ್ಪ ಮೊದ್ಲು ಇತಿಹಾಸ ಅರಿಯಲಿ: ಜೋಶಿ ಕಿಡಿ

    ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ನಾಲ್ಕು ನಿಗಮಗಳ ಬಸ್‌ಗಳ ಸಂಚಾರ ಸ್ತಬ್ಧಗೊಂಡಿವೆ. ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ಹಾಸನ, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ ಸೇರಿದಂಗೆ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ನೌಕರರು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಗೆ ಧುಮುಕಿದ್ದಾರೆ. ಆದ್ರೆ ಕೆಲವೆಡೆ ಪ್ರಯಾಣಿಕರಿಗೆ ಬಂದ್‌ ಬಿಸಿ ತಟ್ಟಿಲ್ಲ, ಏಕೆಂದರೆ ತುರ್ತು ಕಾರ್ಯಗಳಿಗೆ ಪ್ರಯಾಣಿಕರು ಖಾಸಗಿ ಬಸ್, ಟ್ರಾವೆಲ್ಸ್, ಆಟೋ, ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ. ಇದನ್ನೂ ಓದಿ: ಸಾರಿಗೆ ಮುಷ್ಕರ ನಿಲ್ಲಿಸಲು KSRTC, BMTC ಕೊನೆಯ ಕಸರತ್ತು

    ಈ ನಡುವೆ ಹೈಕೋರ್ಟ್ ಆದೇಶದ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಸಮಿತಿ ಪದಾಧಿಕಾರಿಗಳ ಸಭೆ ನಡೆಸಿ ಮುಷ್ಕರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ಕ್ರಿಯಾ ಸಮಿತಿ ಪೂರ್ವ ನಿರ್ಧಾರದಂತೆ ಮುಷ್ಕರಕ್ಕೆ ಇಳಿದರೇ, ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಲಿದ್ದು ಪ್ರಯಾಣಿಕರಿಗೆ ಬಿಸಿ ತಟ್ಟಲಿದೆ. ಇದನ್ನೂ ಓದಿ: ಪಹಲ್ಗಾಮ್‌ ಪಾತಕಿಗಳ ಪತ್ತೆಗೆ ನೆರವಾಯ್ತು ಬುಲೆಟ್‌ ಶೆಲ್‌ ಟೆಸ್ಟಿಂಗ್‌ – ಬ್ಯಾಲಿಸ್ಟಿಕ್ಸ್‌ ಮ್ಯಾಚಿಂಗ್‌ ಹೇಗೆ ನಡೆಯುತ್ತೆ?

    ಸಂಧಾನ ವಿಫಲ
    ಇನ್ನೂ ನಿನ್ನೆ ಮೂರನೇ ಸಂಧಾನ ಸಭೆ ಖುದ್ದು ಸಿಎಂ ನೇತೃತ್ವದಲ್ಲಿ ನಡೆದರೂ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ. 38 ತಿಂಗಳ ಹಿಂಬಾಕಿ 1,800 ಕೋಟಿ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ 800 ಕೋಟಿ ರೂ. ಆದರೂ ಈಗ ಪಾವತಿಸಿ, ನಂತರ ಕಂತಿನ ರೂಪದಲ್ಲಿ 1,000 ಕೋಟಿ ರೂ ಕೊಡುವಂತೆ ಮನವಿ ಮಾಡಿದಾಗ ಸಿಎಂ ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಹೀಗಾಗಿ ಸಭೆಯು ವಿಫಲವಾಗಿದ್ದು, ಕಾರ್ಮಿಕ ಮುಖಂಡ ಮುಷ್ಕರದ ಘೋಷಣೆ ಮಾಡಿದರು.

    ಇನ್ನೂ ಸಿಎಂ ಸಭೆಗೂ ಮುನ್ನವೇ ಸಾರಿಗೆ ಇಲಾಖೆ ಆಗಸ್ಟ್‌ ನಾಲ್ಕರಿಂದಲೇ ಸಾರಿಗೆ ನೌಕರರ ರಜೆಗಳನ್ನ ರದ್ದುಗೊಳಿಸಿದೆ. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದೆಲ್ಲ ರಜೆಗಳನ್ನ ರದ್ದುಗೊಳಿಸಲಾಗಿದೆ. ಅನಿವಾರ್ಯವಿದ್ದರೆ ವಾರದ ರಜೆಗಳನ್ನು ಕಡಿತಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಿ, ಒಂದು ವೇಳೆ ಕೆಲಸಕ್ಕೆ ಬಾರದಿದ್ದರೇ ಅವರ ವೇತನ ಕಟ್‌ ಮಾಡುವಂತೆ ನಾಲ್ಕು ನಿಗಮಗಳ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ನೀವು ರಷ್ಯಾದಿಂದ ಆಮದು ಮಾಡಬಹುದು, ನಾವು ಮಾಡಿದ್ರೆ ಯುದ್ಧಕ್ಕೆ ಫಂಡಿಂಗ್‌ ಹೇಗೆ: ಟ್ರಂಪ್‌ಗೆ ಭಾರತದ ಗುದ್ದು

  • ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಶಾಕ್‌ – ಎಸ್ಮಾ ಜಾರಿ, 6 ತಿಂಗಳು ಪ್ರತಿಭಟನೆಗೆ ನಿಷೇಧ

    ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಶಾಕ್‌ – ಎಸ್ಮಾ ಜಾರಿ, 6 ತಿಂಗಳು ಪ್ರತಿಭಟನೆಗೆ ನಿಷೇಧ

    ಬೆಂಗಳೂರು: ಬಂದ್‌ಗೆ ಮುಂದಾಗಿದ್ದ ಸಾರಿಗೆ ಸಂಘಟನೆಗಳಿಗೆ ಶಾಕ್‌ ಎದುರಾಗಿದೆ. ಪ್ರತಿಭಟನೆ ನಿಷೇಧಿಸಿ ಕಾರ್ಮಿಕ ಇಲಾಖೆ ಎಸ್ಮಾ (ESMA) ಜಾರಿ ಮಾಡಿದೆ.

    ಮುಷ್ಕರ ನಡೆಸದಂತೆ ನೌಕರರಿಗೆ ತಾಕೀತು ಮಾಡಲಾಗಿದೆ. ಆ.5 ರಂದು ಬಸ್ ನಿಲ್ಲಿಸಿ ಪ್ರತಿಭಟಿಸಲು ಸಾರಿಗೆ ಸಂಘಟನೆಗಳು ಮುಂದಾಗಿದ್ದವು. ಜನಸಾಮಾನ್ಯರಿಗೆ ಸಾರಿಗೆ ಸೇವೆ ಓದಗಿಸೋದು ಅಗತ್ಯ ಸೇವೆ. ಈ ಹಿನ್ನೆಲೆ ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013 ರಡಿ ಎಸ್ಮಾ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಬಂದು ದೇವಿ ದರ್ಶನ ಪಡೆದ ಸಿಎಂ ಪತ್ನಿ, ಸೊಸೆ

    ಇಂದಿನಿಂದ 6 ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗದಂತೆ ಎಸ್ಮಾ ಜಾರಿಗೊಳಿಸಲಾಗಿದೆ. ಜು.1 ರಿಂದ ಡಿ.31 ರ ವರೆಗೆ ನಿಗಮದಲ್ಲಿ‌ ಮುಷ್ಕರ ನಿರ್ಬಂಧಿಸಿ ಕೆಎಸ್‌ಆರ್‌ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಲಾಗಿದೆ.

    ಸರ್ಕಾರದ ಅಧಿಸೂಚನೆಯ ಪ್ರತಿಯನ್ನು ಎಲ್ಲಾ ಘಟಕ, ಕಾರ್ಯಾಗಾರ, ಕಚೇರಿ ಮತ್ತು ಬಸ್‌ ನಿಲ್ದಾಣಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ಆ ಮೂಲಕ ಈ ವಿಚಾರವನ್ನು ಎಲ್ಲಾ ನೌಕರರ ಗಮನಕ್ಕೆ ತರಲಾಗುವುದು ಎಂದು ಇಲಾಖೆ ತಿಳಿಸಿದೆ. ಇದನ್ನೂ ಓದಿ: ಮಗ ಯಾವುದೇ ತಪ್ಪು ಮಾಡಿಲ್ಲ, ನನ್ನನ್ನು ರಾಜಕೀಯವಾಗಿ ಮುಗಿಸಲು ನಮ್ಮ ಮೇಲೆ ಆರೋಪ: ಪ್ರಭು ಚೌಹಾಣ್‌

  • ಶಕ್ತಿ ಯೋಜನೆಯಿಂದ ಮೈಲಿಗಲ್ಲು – 500 ಕೋಟಿ ತಲುಪಲಿರುವ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ

    ಶಕ್ತಿ ಯೋಜನೆಯಿಂದ ಮೈಲಿಗಲ್ಲು – 500 ಕೋಟಿ ತಲುಪಲಿರುವ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ

    -ರಾಜ್ಯ ಸಾರಿಗೆ ಇಲಾಖೆಯ ಇತಿಹಾಸದಲ್ಲೇ ಹೊಸ ರೆಕಾರ್ಡ್‌
    – 500ನೇ ಟಿಕೆಟ್ ಪಡೆದ ಮಹಿಳೆಗೆ ಲಕ್ಕಿ ಬಹುಮಾನ

    ಬೆಂಗಳೂರು: ಕಾಂಗ್ರೆಸ್‌ನ (Congress) ಶಕ್ತಿ ಯೋಜನೆಯ ಪರಿಣಾಮದಿಂದಾಗಿ ಎರಡೇ ವರ್ಷದಲ್ಲಿ ಉಚಿತ ಬಸ್‌ಗಳಲ್ಲಿ ಪ್ರಯಾಣಿಸಿದ ಮಹಿಳೆಯರ ಸಂಖ್ಯೆ ಒಟ್ಟು 500 ಕೋಟಿಗೆ ತಲುಪಲಿದ್ದು, ಆ 500ನೇ ಟಿಕೆಟ್ ಪಡೆಯಲಿರುವ ಮಹಿಳೆಗೆ ಲಕ್ಕಿ ಬಹುಮಾನ ಸಿಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.

    2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯಂತೆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಈ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ದೊರೆತಿದ್ದು, ಇದೀಗ ಶಕ್ತಿ ಯೋಜನೆ ಹೊಸ ಮೈಲುಗಲ್ಲು ಬರೆಯಲು ಮುಂದಾಗಿದೆ.ಇದನ್ನೂ ಓದಿ: KRS ಡ್ಯಾಂ ಮೇಲೆ ‘ಕೈ’ ಶಾಸಕ ಬೆಂಬಲಿಗನ ಹುಚ್ಚಾಟ- ನಿರ್ಬಂಧವಿದ್ದರೂ ಲೆಕ್ಕಿಸದೇ ಜಲಾಶಯದ ಮೇಲೆ ರೀಲ್ಸ್‌

    ಶಕ್ತಿ ಯೋಜನೆ ಜಾರಿಯಾದ ಎರಡೇ ವರ್ಷದಲ್ಲಿ 500 ಕೋಟಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿ ದಾಖಲೆ ಬರೆಯಲಿದ್ದಾರೆ. 2023ರ ಜೂನ್ 11ರಂದು ಆರಂಭವಾಗಿದ್ದ ಈ ಯೋಜನೆಗೆ ಮಹಿಳೆಯರು ಬಹುಪರಾಕ್ ಎಂದಿದ್ದು, ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಸೋಮವಾರಕ್ಕೆ ಬರೋಬ್ಬರಿ 493 ಕೋಟಿ ಮಹಿಳಾ ಪ್ರಯಾಣಿಕರು ಒಂದು ರೂಪಾಯಿ ಹಣ ನೀಡದೆ ಉಚಿತವಾಗಿ ಪ್ರಯಾಣಿಸಿದ್ದಾರೆ.

    ಪ್ರತಿದಿನ ನಾಲ್ಕು ಸಾರಿಗೆ ನಿಗಮದ ಬಸ್‌ಗಳಲ್ಲಿ 70 ರಿಂದ 75 ಲಕ್ಷ ಮಹಿಳೆಯರು ಫ್ರೀಯಾಗಿ ಸಂಚರಿಸುತ್ತಿದ್ದಾರೆ. ಭಾನುವಾರದವರೆಗಿನ ಅಂಕಿ ಅಂಶಗಳನ್ನು ನೋಡುವುದಾದರೆ ಸುಮಾರು 494 ಕೋಟಿಯಷ್ಟು ಮಹಿಳೆಯರು ಸಂಚರಿಸಿದ್ದು, 12,511 ಕೋಟಿ ರೂ. ಟಿಕೆಟ್ ಮೌಲ್ಯವಾಗಿದೆ. ಬರುವ ಸೋಮವಾರಕ್ಕೆ ಶಕ್ತಿ ಯೋಜನೆ 500 ಕೋಟಿ ಮಹಿಳೆಯರ ಉಚಿತ ಪ್ರಯಾಣದ ಗುರಿ ತಲುಪಿ, ರಾಜ್ಯ ಸಾರಿಗೆ ಇಲಾಖೆಯ ಇತಿಹಾಸದಲ್ಲೇ ಹೊಸ ರೆರ್ಕಾಡ್ ನಿರ್ಮಿಸಲಿದೆ.

    ಇನ್ನೂ ಈ 500 ಕೋಟಿಯ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಪ್ರಮುಖವಾಗಿ 500ನೇ ಟಿಕೆಟ್ ಪಡೆದ ಮಹಿಳೆಗೆ ಲಕ್ಕಿ ಪ್ರೈಸ್ ಸಿಗಲಿದೆ. ಈ ಶಕ್ತಿಯೋತ್ಸವವನ್ನು ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಹಾಗೂ ಸಾರಿಗೆ ಇಲಾಖೆಯು ಆಚರಿಸಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಇನ್ನೂ ಈ ಶಕ್ತಿ ಯೋಜನೆಯಿಂದ ಧಾರ್ಮಿಕ ಕ್ಷೇತ್ರಗಳತ್ತ ಭಕ್ತಾದಿಗಳು ಹರಿದು ಬರುತ್ತಿದ್ದು, ಮುಜರಾಯಿ ಇಲಾಖೆಯ ಖಜಾನೆ ತುಂಬಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ಶಕ್ತಿ ಯೋಜನೆ ಇರಲಿದೆ ಎಂದು ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಬಿಸಿನೀರು ಕುಡಿಯುವಾಗಲೇ ಹೃದಯಾಘಾತ – ಕುಸಿದು ಬಿದ್ದು ವ್ಯಕ್ತಿ ಸಾವು

  • BMTC, KSRTC ಸೇರಿ 4 ನಿಗಮಗಳಿಗೂ ಎಚ್ಚರಿಕೆ – ಬೇಕಾಬಿಟ್ಟಿ ಬಸ್ ಚಲಾಯಿಸಿದ್ರೆ ಕೆಲಸ ಹೋಗೋದು ಪಕ್ಕಾ!

    BMTC, KSRTC ಸೇರಿ 4 ನಿಗಮಗಳಿಗೂ ಎಚ್ಚರಿಕೆ – ಬೇಕಾಬಿಟ್ಟಿ ಬಸ್ ಚಲಾಯಿಸಿದ್ರೆ ಕೆಲಸ ಹೋಗೋದು ಪಕ್ಕಾ!

    ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಬಸ್‌ಗಳ ಚಾಲಕರಿಂದ ಅಪಘಾತಗಳ ಸಂಖ್ಯೆ ಹೆಚ್ಚಾದ ಬೆನ್ನಲ್ಲೇ ಸಾರಿಗೆ ಸಚಿವರು ನಾಲ್ಕು ನಿಗಮಗಳಿಗೂ ಖಡಕ್ ವಾರ್ನಿಂಗ್ ನೀಡಿ, ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮಹತ್ವದ ಸೂಚನೆಯನ್ನು ನೀಡಿದ್ದಾರೆ.

    ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಬಸ್ ಚಾಲಕರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೆಲವೊಂದು ಪ್ರಕರಣಗಳಲ್ಲಿ ವಾಹನಗಳ ಸಮಸ್ಯೆಯಿಂದಾಗಿ ಅಪಘಾತವಾದರೆ, ಬಹುತೇಕ ಘಟನೆಗಳಲ್ಲಿ ಚಾಲಕರ ನಿರ್ಲಕ್ಷ್ಯದಿಂದ ಅಪಘಾತವಾಗಿ ಸಾರ್ವಜನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಚಿವರೇ ಖುದ್ದು ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಈಶಾನ್ಯ ಸಾರಿಗೆ, ವಾಯುವ್ಯ ಸಾರಿಗೆ ನಾಲ್ಕು ನಿಗಮಗಳಿಗೆ ಅನ್ವಯವಾಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಭ್ರಷ್ಟಾಚಾರವನ್ನ ಜನತೆ ಮುಂದೆ ಬಿಚ್ಚಿಟ್ಟ ಬಿ.ಆರ್‌ ಪಾಟೀಲ್‌ಗೆ ʻಕೈʼ ನಾಯಕರಿಂದಲೇ ಬೆದರಿಕೆ: ವಿಜಯೇಂದ್ರ

    ಸೂಚನೆ ಏನು?
    * ಯಾವುದೇ ಸರ್ಕಾರಿ ಬಸ್ ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡಿ, ತೊಂದರೆ ಉಂಟು ಮಾಡುತ್ತಾರೋ ಅಂತಹ ಚಾಲಕರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

    * ಈ ಹಿಂದೆ ಯಾವ್ಯಾವ ಚಾಲಕರು ಅಜಾಗರೂಕತೆಯಿಂದ ಚಾಲನೆ ಮಾಡಿ, ಸಮಸ್ಯೆ ಉಂಟು ಮಾಡಿದ್ದಾರೋ ಅಂತಹ ಚಾಲಕರ ಲೀಸ್ಟ್ ರೆಡಿ ಮಾಡಿ, ಮತ್ತೊಮ್ಮೆ ಅದೇ ಚಾಲಕರು ತಪ್ಪು ಮಾಡಿದ್ದಲ್ಲಿ ಮುಲಾಜಿಲ್ಲದೇ ಡಿಸ್ಮಿಸ್ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ.

    ಈ ಸಂಬಂಧ ಈಗಾಗಲೇ ನಾಲ್ಕು ಸಾರಿಗೆ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಶೀಘ್ರದಲ್ಲೇ ವಿಚಾರ ಸಂಬಂಧ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ. ಜೊತೆಗೆ ಖಾಯಂ ನೌಕರರನ್ನು ಹೊರತುಪಡಿಸಿ, ಅನೇಕ ಗುತ್ತಿಗೆ ನೌಕರರು ಕೂಡ ಸಾರಿಗೆ ಬಸ್‌ಗಳಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಚಾಲಕರು ಮಾಡುವ ತಪ್ಪಿನಿಂದ ನಿಗಮಗಳಿಗೆ ಕೆಟ್ಟ ಹೆಸರು ಬರುತ್ತಿರುವ ಬಗ್ಗೆ ಕೂಡ ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ.

    ಸದ್ಯ ಬಿಎಂಟಿಸಿ (BMTC) ಚಾಲಕರಿಗಾಗಿ ಮೂರು ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಈಗಾಗಲೇ ಮೂರು ಗುತ್ತಿಗೆ ಕಂಪನಿಗಳಿಗೂ ಸೂಚನೆ ನೀಡಲಾಗಿದ್ದು, ಈ ಹಿಂದೆ ಎರಡಕ್ಕಿಂತ ಹೆಚ್ಚು ಬಾರಿ ಅಜಾಗರೂಕ ಚಾಲನೆ ಮಾಡಿರುವ ಚಾಲಕರನ್ನು ಗುತ್ತಿಗೆಯಿಂದ ಕೈ ಬಿಡಲು ಸೂಚಿಸಲಾಗಿದೆ. ಮುಂದೆಯೂ ಇಂತಹ ಚಾಲಕರ ವಿರುದ್ಧ ಎಚ್ಚರವಹಿಸಿ ತಪ್ಪು ಮಾಡಿದ್ದಲ್ಲಿ, ಕಠಿಣ ಕ್ರಮಕ್ಕೂ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ರಶ್ಮಿಕಾ ಡಿಮ್ಯಾಂಡ್ ಕಮ್ಮಿಯಾಯ್ತಾ? ಸಂಭಾವನೆನೂ ಕಮ್ಮಿಯಾಯ್ತಾ?

  • ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿಗೆ ಬ್ರೇಕ್ – ರಸ್ತೆಗಿಳಿದ್ರೆ ಬೈಕ್ ಸೀಜ್

    ಬೆಂಗಳೂರು: ರಾಜ್ಯದಲ್ಲಿ ಅನೇಕ ದಿನದಿಂದ ಆಟೋ ಚಾಲಕರು ವರ್ಸಸ್ ಬೈಕ್ ಟ್ಯಾಕ್ಸಿಯವರ (Bike Taxi) ನಡುವಿನ ಗುದ್ದಾಟ ನಡೆಯುತ್ತಿತ್ತು. ಸದ್ಯ ಈಗ ಇದಕ್ಕೆಲ್ಲಾ ಇಂದಿನಿಂದ ಬ್ರೇಕ್ ಬೀಳಲಿದೆ. ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ಸ್ಥಗಿತಗೊಳ್ಳಲಿದೆ.

    ಟ್ರಾಫಿಕ್ ಕಡಿಮೆ, ಟ್ರಾವೆಲ್ ದರವೂ ಕಡಿಮೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ವಿಕ್ ಡ್ರಾಪ್ ಪಾಯಿಂಟ್. ಶರವೇಗದಲ್ಲಿ ಜನರಿಗೆ ಬೇಕಾದ ಜಾಗ ತಲುಪಿಸುವ ಕೆಲಸ ಮಾಡುತ್ತಿದ್ದದ್ದು, ಅಂದರೆ ಅದು ಬೈಕ್ ಟ್ಯಾಕ್ಸಿ. ವೈಟ್ ಬೋರ್ಡ್‌ನಲ್ಲಿ ಬೈಕ್ ಟ್ಯಾಕ್ಸಿ ಓಡಿಸೋದು ಸೇರಿ ಸುರಕ್ಷತೆ ವಿಚಾರದಲ್ಲಿ ಬೈಕ್ ಟ್ಯಾಕ್ಸಿ ಒಂದು ಹೆಜ್ಜೆ ಹಿಂದೆಯೇ ಉಳಿದುಕೊಂಡಿದೆ. ಇದೇ ಕಾರಣಕ್ಕೆ ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗೆ ಇಳಿಯುವ ಹಾಗಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ. ಆರ್‌ಟಿಓ ಕೂಡ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಅಂಥವರ ವಿರುದ್ಧ ಕ್ರಮಕ್ಕೆ ಮುಂದಾಗಲಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ದುರಂತ – 2ನೇ ಬ್ಲ್ಯಾಕ್ ಬಾಕ್ಸ್ ಪತ್ತೆ

    ಅನಧಿಕೃತ ಬೈಕ್ ಟ್ಯಾಕ್ಸಿ ಓಡಾಟಕ್ಕೆ ನಿಷೇಧ ಹೇರಬೇಕೆಂದು ಖಾಸಗಿ ಸಾರಿಗೆ ಒಕ್ಕೂಟ ಸೇರಿ ಅನೇಕ ಆಟೋ ಚಾಲಕರ ಹಲವು ವರ್ಷಗಳ ಬೇಡಿಕೆಯಾಗಿತ್ತು. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಓಡಾಟಕ್ಕೆ ಕೋರ್ಟ್ ನೀಡಿದ್ದ ಗಡುವು ಇಂದಿಗೆ ಮುಕ್ತಾಯ ಆಗಿದೆ. ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ಹೇರಿ ಏಪ್ರಿಲ್ 2ರಂದು ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ತಡೆ ಕೋರಿ ಓಲಾ, ಊಬರ್‌ನಂತಹ ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಮಧ್ಯಂತರ ತಡೆ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

    ಇನ್ನೂ ನ್ಯಾಯಾಲಯದ ಆದೇಶ ಬೆನ್ನಲ್ಲೇ ಅಲರ್ಟ್ ಆದ ಸಾರಿಗೆ ಇಲಾಖೆ ತಂಡ ರೆಡಿ ಮಾಡಿದ್ದು, ಇಂದಿನಿಂದ ಅನಧಿಕೃತ ಬೈಕ್ ಟ್ಯಾಕ್ಸಿ ರಸ್ತೆಗಿಳಿಸಿದರೆ ಸೀಜ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾರ್ಯಚರಣೆಗೆ ಸಾರಿಗೆ ಇಲಾಖೆ 10 ರಿಂದ 15 ತಂಡಗಳ ರಚನೆ ಮಾಡಿದ್ದು, ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಲು ಸಿದ್ಧತೆ ನಡೆಸಿದೆ.  ಇದನ್ನೂ ಓದಿ: ಸ್ಮಾರ್ಟ್‌ಸಿಟಿ ಹೆಸರಲ್ಲಿ 70 ಸಾವಿರ ಜನರಿಗೆ 2,676 ಕೋಟಿ ನಾಮ – ಕಳ್ಳ ಸಹೋದರರು ಅರೆಸ್ಟ್‌!