ಚಿಕ್ಕಮಗಳೂರು: ರಾಜಕೀಯ ಜಂಜಾಟದಿಂದ ಬೇಸತ್ತು, ವಿಶ್ರಾಂತಿಗಾಗಿ ಜೆಡಿಎಸ್ ನಾಯಕರೊಂದಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಚಿಕ್ಕಮಗಳೂರಿನ ಕಾಡಿನ ಮಧ್ಯದಲ್ಲಿ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಉದ್ಯಮಿ ವಿ.ಜಿ ಸಿದ್ದಾರ್ಥ್ ಅವರ ಅಂತ್ಯಕ್ರಿಯೆಗೆ ಚಿಕ್ಕಮಗಳೂರಿಗೆ ಹೆಚ್‍ಡಿಕೆ ಆಗಮಿಸಿದ್ದರು. ಅಂದಿನಿಂದ ಚಿಕ್ಕಮಗಳೂರಿನಲ್ಲೇ ಮಾಜಿ ಸಿಎಂ ಇದ್ದಾರೆ. ಆತ್ಮೀಯ ಸ್ನೇಹಿತ ರಂಗನಾಥ್ ಅವರ ಮನೆಯಲ್ಲಿ ಹೆಚ್‍ಡಿಕೆ ವಾಸ್ತವ್ಯ ಹೂಡಿದ್ದಾರೆ.
ಕೊಪ್ಪದ ಗುಡ್ಡೆತೋಟದಲ್ಲಿ ರಂಗನಾಥ್ ಅವರ ಮನೆಯಿದ್ದು ಅಲ್ಲಿಯೇ ಹೆಚ್‍ಡಿಕೆ ಅವರು ತಂಗಿದ್ದಾರೆ. ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕೂಡ ಸಾಥ್ ನೀಡಿದ್ದಾರೆ.
ಕೆಲ ದಿನಗಳಿಂದ ರಾಜ್ಯದಲ್ಲಿ ನಡೆದ ರಾಜಕೀಯ ಜಂಜಾಟದಿಂದ ಜೆಡಿಎಸ್ ನಾಯಕರು ರೋಸಿಹೋಗಿದ್ದರು. ಹೀಗಾಗಿ ಕಾಡಿನ ಮಧ್ಯೆ ಇರುವ ಕಾಫಿ ಎಸ್ಟೇಟ್‍ನಲ್ಲಿ ವಾಸ್ತವ್ಯ ಹೂಡಿ, ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಶಾಸಕ ಶ್ರೀನಿವಾಸ್ ಗೌಡ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಯಡಿಯೂರಪ್ಪನವರು, ಯಾವ ವಿಚಾರವಾಗಿ ಮಾತನಾಡುತ್ತಿದ್ದೇನೆ ಅಂತ ಸ್ಪೀಕರ್ ಅವರಿಗೆ ತಿಳಿಸದೆ ಶ್ರೀನಿವಾಸ್ ಗೌಡ ಅವರು ಬಾಯಿಗೆ ಬಂದಂತೆ ಹೇಳಿಕೆ ನೀಡಿದ್ದಾರೆ. ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್, ಶಾಸಕರಾದ ಅಶ್ವಥ್ ನಾರಾಯಣ, ವಿಶ್ವನಾಥ್ ಅವರು ಅವರು 5 ಕೋಟಿ ರೂ. ಹಣವನ್ನು ತಂದು ನಮ್ಮ ಮನೆಯಲ್ಲಿ ಇಟ್ಟು ಹೋದರು ಎಂದು ಆರೋಪ ಮಾಡಿದ್ದಾರೆ. ಈ ಹಿಂದೆಯೂ ಇಂತಹ ಹೇಳಿಕೆ ನೀಡಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: 5 ಕೋಟಿ ನೀಡಿ ನನ್ನನ್ನು ಖರೀದಿಸಲು ಬಿಜೆಪಿ ಯತ್ನ: ಶ್ರೀನಿವಾಸ ಗೌಡ
ವಿಶ್ವಾನ ಮತಯಾಚನೆ ವೇಳೆ ಶಾಸಕರು ದುರುದ್ದೇಶದಿಂದ ಆರೋಪ ಮಾಡಿದ್ದಾರೆ. ಸಚಿವ ಸಾರಾ ಮಹೇಶ್ ಅವರು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರಿಗೆ ಬಿಜೆಪಿಯವರು 28 ಕೋಟಿ ರೂ. ಆಫರ್ ಕೊಟ್ಟಿದ್ದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ. ಪ್ರಮಾಣಿಕ ವ್ಯಕ್ತಿಯ ಬಗ್ಗೆ ಅಪಮಾನ ಮಾಡುವುದು ಅಕ್ಷಮ್ಯ ಅಪರಾಧ ಎಂದು ಗುಡುಗಿದರು. ಇದನ್ನೂ ಓದಿ: ಅವನ್ಯಾರು ನನಗೆ ಮಂತ್ರಿಗಿರಿ ಕೊಡೋಕೆ, ನಾನು ಸೇಲ್ ಆಗಿಲ್ಲ: ವಿಶ್ವನಾಥ್ ತಿರುಗೇಟು
ಸಚಿವ ಸಾ.ರಾ.ಮಹೇಶ್ ಅವರು ತಕ್ಷಣವೇ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕ್ಷೇತ್ರದ ಜನತೆ ಪಾಠ ಕಲಿಸುತ್ತಾರೆ. ಎಚ್.ವಿಶ್ವನಾಥ್ ಅವರು ಬಂದ ಮೇಲೆ ಸಚಿವರಿಂದ ದಾಖಲೆಗಳನ್ನು ಕೇಳಲಾಗುತ್ತದೆ ಹಾಗೂ ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಅಸಮಾಧಾನ ಹೊರಹಾಕಿದರು.
ಬೆಂಗಳೂರು: ಅವನ್ಯಾರು ನನಗೆ ಮಂತ್ರಿ ಸ್ಥಾನ ಕೊಡೋಕೆ? ನಾನು ಸೇಲ್ ಆಗಿಲ್ಲ ಎಂದು ವಿಶ್ವನಾಥ್ ಅವರು ಸಚಿವ ಸಾರಾ ಮಹೇಶ್ ಆರೋಪಕ್ಕೆ ಕೆಂಡಾಮಂಡಲರಾಗಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮತನಾಡಿದ ಅವರು, ನಾನು ಸಾರಾ ಮಹೇಶ್ ಆರೋಪ ಮಾಡಿರುವುದನ್ನ ನೋಡಿದೆ. ಅವರು ತೋಟದ ಮನೆ ವಿಚಾರ ನಿಜ. ಅಲ್ಲಿಗೆ ನಾನು ಸ್ನೇಹಿತನಾಗಿ ಹೋಗಿದ್ದೆ. ನಾವು ಚುನಾವಣೆಯಲ್ಲಿ ಮಾಡಿಕೊಂಡಿದ್ದಂತಹ ಸಾಲದ ಬಗ್ಗೆ ಕೂಡ ನಾವು ಮಾತನಾಡಿದ್ದೇವು. ಆದರೆ 28 ಕೋಟಿಗೆ ನಾವು ಸೇಲ್ ಆಗಿದ್ದೇವೆ ಎಂದು ಸಾರಾ ಮಹೇಶ್ ಹೇಳಿದ್ದು ನಿಜಕ್ಕೂ ಮನಸಿಗೆ ನೋವಾಯ್ತು ಎಂದರು.
ಸುಮಾರು 40 ವರ್ಷದಿಂದ ಪ್ರಮಾಣಿಕತೆಯನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ. ಈಗ ನಾನು ಸದನದಲ್ಲಿ ಇಲ್ಲವಲ್ಲ, ನಾನು ವಾಪಾಸ್ ಬಂದಮೇಲೆ ಅವರಿಗೆ ಉತ್ತರ ಕೊಡುತ್ತೇನೆ. ಸದನದಲ್ಲಿ ಓರ್ವ ಶಾಸಕ ಗೈರು ಹಾಜರಿ ಹಾಕಿರುವಾಗ ಅವರ ಬಗ್ಗೆ ಬೇರೆ ನಾಯಕರು ಈ ರೀತಿ ಮಾತನಾಡಲು ಸ್ಪೀಕರ್ ಅವಕಾಶ ಕೊಟ್ಟಿರುವುದು ಸರಿಯಲ್ಲ. ಮಾತನಾಡಲು ಬೇಕಾದಷ್ಟಿದೆ, ಸಿಎಂ ನಮ್ಮನ್ನು ಯಾವ ರೀತಿ ನಡೆಸಿಕೊಂಡರು ಎನ್ನುವ ಬಗ್ಗೆ ಆಮೇಲೆ ಹೇಳುತ್ತೇನೆ. ಸಾರಾ ಮಹೇಶ್ ಆರೋಪವನ್ನು ನಾನು ತಿರಸ್ಕಾರ ಮಾಡುತ್ತಿದ್ದೇನೆ. ಮುಂದೆ ಈ ಬಗ್ಗೆ ನಾನು ಕಾನೂನು ಹೋರಾಟವನ್ನು ಕೂಡ ಮಾಡುತ್ತೇನೆ. ಶಾಸನ ಸಭೆಯಲ್ಲೂ ಕೂಡ ಈ ಬಗ್ಗೆ ನಾನು ಪ್ರಸ್ತಾಪ ಮಾಡುತ್ತೇನೆ ಎಂದರು.
ಸಾರಾ ಮಹೇಶ್ ಅವರು ಎಲ್ಲರನ್ನೂ ಜಾತಿ ಆಧಾರದ ಮೇಲೆ ಮಾತನಾಡಿಸುತ್ತಾರೆ. ಅದಕ್ಕೆ ನಾನು ಹಲವು ಸಾರಿ ಸಿಎಂ ಬಳಿ ಈ ಬಗ್ಗೆ ಹೇಳಿದ್ದೆ, ನಿಮ್ಮ ಸಚಿವ ಸಾರಾಸಗಟಾಗಿ ಎಲ್ಲರ ಬಗ್ಗೆ ಜಾತಿ ಹಿಡಿದು ಮಾತನಾಡುತ್ತಾರೆ ಎಂದು ಗಮನಕ್ಕೆ ತಂದಿದ್ದೆ. ಸಾರಾ ಮಹೇಶ್ ಅವರು ಬರೀ ಚಾಡಿ ಹೇಳುತ್ತಾರೆ. ಸರ್ಕಾರದ ಈ ಸ್ಥಿತಿಗೆ ಅವರು ಕೂಡ ಒಂದು ರೀತಿ ನೇರ ಕಾರಣ. ಅವರ ದುರಹಂಕಾರ, ತಿಂಗಳು ತಿಂಗಳಿಗೆ ಕೊಡುತ್ತೇನೆ ತೆಗೆದುಕೊಂಡು ಹೋಗು ಅನ್ನೋಕೆ ನಮ್ಮನ್ನೆಲ್ಲಾ ಏನು ಅಂದುಕೊಂಡಿದ್ದಾನೆ ಎಂದು ಪ್ರಶ್ನಿಸಿ ಗರಂ ಆದರು.
ನಾನು ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ್ದು ಬೇರೆಯ ವಿಚಾರ. ಆ ಸಂದರ್ಭ ಬಂದಾಗ ನಾನು ಅದರ ಬಗ್ಗೆ ಮಾತನಾಡುತ್ತೆನೆ. ವಿಮಾನದಲ್ಲಿ ಹೋಗುವವರೆಲ್ಲ ಯಾರ ಹತ್ತಿರವಾದರೂ ದುಡ್ಡು ತೆಗೆದುಕೊಂಡೆ ಹೋಗುತ್ತಾರಾ? ಹಾಗೆ ಹೋಗಿ ಬರುತ್ತಾರೆ. ಅದು ಬೇರೆಯ ವಿಚಾರವಾಗುತ್ತದೆ ಎಂದು ಕಿಡಿಕಾರಿದರು. ನಾನು 28 ಕೋಟಿ ತೆಗೆದುಕೊಂಡಿರುವುದನ್ನ ಇವರು ಸಾಬೀತು ಮಾಡಲಿ. ಈ ದುಡ್ಡು ಯಾರು ಕೊಟ್ಟರು? ಇವನೆಲ್ಲಿ ಅದನ್ನು ನೋಡಿದ? ಎನ್ನುವುದನ್ನ ಸಾಬೀತು ಮಾಡಲಿ. ನಾನು ಸಾಲ ಮಾಡಿದ್ದು ನಿಜ, ಇವತ್ತಿಗೂ ಸಾಲ ಇದೆ. ಚುನಾವಣೆ ಸಾಲ ಮಾಡದಿದ್ದರೆ ಹೇಗೆ ಆಗುತ್ತೆ. ಪಾಪ ಸಾರಾ ಮಹೇಶ್ ಕರಿಯುತ್ತಿದ್ದಾರೆ ಅಂತ ತೋಟಕ್ಕೆ ಹೋದೆ. ಆಗ ನಿಮ್ಮ ಸಾಲ ಇದ್ದರೆ ತೀರಿಸು ಎಂದು ಸಿಎಂ ನನಗೆ ಹೇಳಿದ್ದಾರೆ ಎಂದರು. ಇವೆಲ್ಲಾ ವಿಚಾರ ಸಿಎಂ ಅವರಿಗೂ ಗೊತ್ತಿದೆ ಎಂದು ಏಕವಚನದಲ್ಲೆ ವಾಗ್ದಾಳಿ ನಡೆಸಿದರು.
ಆದ್ರೆ ನಮ್ಮ ಅಸಹಾಯಕತೆಯನ್ನ ಇವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮಂತ್ರಿ ಸ್ಥಾನ ಬೇಕು ಅಂತ ನನಗೆ ಕೇಳೋಕೆ ಇವನ್ಯಾರು? ಮುಖ್ಯಮಂತ್ರಿನಾ? ನಾನು ಮೊದಲೆ ಹೇಳಿದ್ದೆ ನನಗೆ ಮಂತ್ರಿಗಿರಿ ಬೇಡ ಎಂದು ಸಿಎಂಗೆ ಹೇಳಿದ್ದೆ. ಸರ್ಕಾರದಲ್ಲಿ ನಿಮ್ಮ ಜೊತೆ ನಿಂತು ಕೆಲಸ ಮಾಡಲು ಇಷ್ಟ ಪಡುತ್ತೇನೆ ಆದ್ರೆ ಸಚಿವ ಸ್ಥಾನ ಬೇಡ ಅಂದಿದ್ದೆ.
ಏನು ನಡಿತೋ, ಏನು ಗೊತ್ತಾಯ್ತೋ. ಇವರು ಮಾತ್ರ ಸುಳ್ಳಿನ ಕಂತೆ ಹೇಳಿಕೊಂಡು ಇದ್ದಾರೆ. ಇವತ್ತಿನ ಸದನದಲ್ಲಿ ಯಾರು ಯಾರ ಮೇಲೆ ಆರೋಪ ಮಾಡಬೇಕು ಅನ್ನೊದನ್ನ ನಿರ್ಧರಿಸಿಕೊಂಡು ಬಂದ ಹಾಗೆ ಇದೆ. ಸಿಎಂ ಗೆ ಎಲ್ಲಾ ಮಾಹಿತಿ ಗೊತ್ತಿದ್ದರೆ ಇಟ್ಟುಕೊಟ್ಟಲಿ. ಇಲ್ಲವಾದರೆ ಜನರಿಗೆ ಹೇಳಲಿ ಅದಕ್ಕೇನು? ನಾನು ಸ್ವತಂತ್ರ ವ್ಯಕ್ತಿ. ನಾನು ಎಲ್ಲಿಗೆ ಹೋಗಿದ್ದೆ ಎಂದು ಕೇಳಲು ಇವರ್ಯಾರು? ನಾನು ಸ್ವಚ್ಛವಾಗಿದ್ದೆನೆ, ನನಗೆ ಬೆರಳು ಮಾಡಿ ಹೇಳುವಂತ ಕೆಲಸವನ್ನ ನಾನು ಮಾಡಿಲ್ಲ. ಇಲ್ಲಿ ಶಕ್ತಿವಂತನಲ್ಲದಿದ್ದರೂ ಪ್ರಾಮಾಣಿಕತೆಯಿಂದ ಬದುಕುವವರ ಪಟ್ಟಿಯಲ್ಲಿ ನಾನಿದ್ದೇನೆ. ನನ್ನ ಮೇಲೆ ಆರೋಪ ಮಾಡಿದಕ್ಕೆ ಸಿಎಂ ಹಾಗೂ ಮಹೇಶ್ ಮೇಲೆ ನನಗೆ ಬೇಸರವಾಯ್ತು. ಸಾರಾ ಮಹೇಶ್ ಅವರಿಂದ ನನ್ನ ವಿರುದ್ಧ ಆರೋಪ ಮಾಡುವಂತೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.
ಇವತ್ತು ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ನಾನು ಕಾನೂನಾತ್ಮಕವಾಗಿ ಹೋರಾಡುತ್ತೇನೆ. ಮಹೇಶ್ ಸವಾಲು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದರು.
ಸಾರಾ ಮಹೇಶ್ ಹೇಳಿದ್ದೇನು?
ವಿಶ್ವನಾಥ್‍ಗೆ ಬಿಜೆಪಿ ಅವರು 28 ಕೋಟಿ ರೂ. ಆಫರ್ ಕೊಟ್ಟಿದ್ದಾರೆ ಎಂದು ಸಾರಾ ಮಹೇಶ್ ಗಂಭೀರವಾಗಿ ಆರೋಪ ಮಾಡಿದ್ದಾರೆ. ಲೋಕಸಭಾ ಚುನಾವಣೆಗೆ ಮೊದಲು ಅಂದರೆ ನಾಲ್ಕು ತಿಂಗಳ ಹಿಂದೆ ಅವರೇ, “ಪ್ರತಿಪಕ್ಷಗಳಿಗೆ ಅಧಿಕಾರ ಹಿಡಿಯುವ ಹಂಬಲ, ಕಾತುರ ಇರುವುದು ಸಹಜವಾಗಿದೆ. ಆದರೆ ಅದಕ್ಕಾಗಿ ವಾಮ ಮಾರ್ಗ ಹಿಡಿಯುವುದು ಸರಿಯಿಲ್ಲ. ರಾಜ್ಯದಲ್ಲಿ ಸಂವಿಧಾನಾತ್ಮಕವಾಗಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಅದನ್ನು ಉರುಳಿಸುತ್ತಿರುವ ಪ್ರಯತ್ನಕ್ಕೆ ಕೈ ಹಾಕುತ್ತಿರುವುದು ಬಿಜೆಪಿಗೆ ಶೋಭೆ ತರುವುದಲ್ಲ. ಅದೇ ರೀತಿ ಕಪ್ಪು ಹಣ ಉಪಯೋಗಿಸಬಾರದು” ಎಂದು ಹೇಳಿಕೆ ಕೊಟ್ಟಿದ್ದರು.
ಆದರೆ ನಾನು ಅಮೆರಿಕಕ್ಕೆ ಹೋಗುವ ಮೊದಲು ಸಾ.ರಾ ಮಹೇಶ್ ಸರಿಯಿಲ್ಲ. ಅವರ ಧೋರಣೆಗೆ ಬೇಸತ್ತು ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಆಗ ನಾನು ಅವರನ್ನು ತೋಟಕ್ಕೆ ಕರೆಸಿ, ಏನ್ ಸರ್ ಮಂತ್ರಿ ಆಗಬೇಕೆಂಬ ಆಸೆ ಇದೆಯೇ ಹೇಳಿ ಸರ್ ಎಂದು ಕೇಳಿದೆ. ಅದಕ್ಕೆ ಅವರು ಇಲ್ಲ, ಇಲ್ಲ ನನಗೆ ಅದೇನು ಬೇಡ ಎಂದರು. ಅದಕ್ಕೆ ನಾನು ಮತ್ತೆ ಬೇರೆ ಏನ್ ಬೇಕು ಹೇಳಿ ಸರ್ ಎಂದು ಕೇಳಿದೆ. ಅದಕ್ಕೆ ಅವರು ಚುನಾವಣೆಗೆ ನಾನು ಸಾಲ ಮಾಡಿಕೊಂಡಿದ್ದೇನೆ. ಅದರಿಂದ ಸಮಸ್ಯೆಯಾಗಿದೆ ಎಂದಿದ್ದರು.
ಇದೇ ವೇಳೆ ಅವರು, ನನ್ನನ್ನು ಬಿಜೆಪಿಯವರು ಕರೆದಿದ್ದರು. ಜೊತೆಗೆ 28 ಕೋಟಿ ರೂ. ಕೊಡುತ್ತೇನೆ ಎಂದಿದ್ದಾರೆ. ಆದರೆ ದೇವೇಗೌಡರು ಈ ಕಾಲದಲ್ಲಿ ನನ್ನನ್ನು ನಂಬಿ ಮೂಲೆಯಲ್ಲಿ ಇದ್ದವನ ಕರೆದುಕೊಂಡು ಬಂದು ಶಾಸಕನ ಸ್ಥಾನ ಕೊಟ್ಟರು. ಅವರಿಗೆ ಮೋಸ ಮಾಡಲ್ಲ ಎಂದಿದ್ದೇನೆ. ನೀವು ಸಾಲ ತೀರಿಸಲು ಒಂದು ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು. ಬೇಕಿದ್ದರೆ ಅವರನ್ನು ಕರೆಸಿ ಇಲ್ಲೆ ಕೇಳಿ ನಾನು ಹೇಳುತ್ತಿರುವುದು ಸತ್ಯ. ಇಲ್ಲವಾದಲ್ಲಿ ಇನ್ಮುಂದೆ ಯಾವತ್ತು ಬಿಳಿ ಬಟ್ಟೆ ಹಾಕಲ್ಲ. ಕೈ ಮುಗಿದು ಸಾರ್ವಜನಿಕರ ಮುಂದೆ ವೋಟು ಕೇಳಲ್ಲ ಎಂದು ಮಹೇಶ್ ಶಪಥ ಮಾಡಿದರು.
ಯಾದಗಿರಿ: ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯವನ್ನು ಕೊಂಡಾಡಿದ್ದ ಕಮಲ ನಾಯಕರು ಈಗ ಟೀಕೆ ಮಾಡುತ್ತಿದ್ದಾರೆ ಎಂದು ಸಚಿವ ಸಾರಾ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಾಗ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡಿದ್ದರು. ಆಗ ಬಿಜೆಪಿಯವರು ಸಿಎಂ ಅವರನ್ನು ಕೊಂಡಾಡಿದ್ದರು. ಆದರೆ ಈಗ ಟೀಕೆ ಮಾಡುತ್ತಿದ್ದಾರೆ, ಇದಕ್ಕೇನು ಹೇಳಬೇಕು? ಎಂದು ಸಚಿವ ಸಾ.ರಾ ಮಹೇಶ್ ಸಿಎಂ ಗ್ರಾಮವಾಸ್ತವ್ಯದ ಬಗ್ಗೆ ಬಿಜೆಪಿ ಮಾಡುತ್ತಿರುವ ಟೀಕೆಗೆ ತಿರುಗೇಟು ನೀಡಿದರು. ಇದನ್ನೂ ಓದಿ:ಗ್ರಾಮವಾಸ್ತವ್ಯಕ್ಕೆ ವರುಣನ ಅಡ್ಡಿ – ಸಿಎಂರ ಹಳ್ಳಿವಾಸ ಮುಂದೂಡಿಕೆ
ಮುಖ್ಯಮಂತ್ರಿಗಳ ಎರಡನೇ ದಿನದ ಗ್ರಾಮ ವಾಸ್ತವ್ಯಕ್ಕೆ ವರುಣನ ಅಡ್ಡಿಯಾಗಿದೆ. ಹೀಗಾಗಿ ಕಲಬುರಗಿಯ ಅಫಜಲಪುರ ತಾಲೂಕಿನ ಹೆರೂರು(ಬಿ) ಗ್ರಾಮ ಇಂದಿನ ವಾಸ್ತವ್ಯ ಭಾರೀ ಮಳೆಯಿಂದ ರದ್ದಾಗಿದೆ. ಸುಮಾರು 13 ವರ್ಷಗಳ ಬಳಿಕ ಸಿಎಂ ಕೈಗೊಂಡ ಮೊದಲ ದಿನದ ಗ್ರಾಮವಾಸ್ತವ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಿಎಂ ಗ್ರಾಮವಾಸ್ತವ್ಯದ ಕಾರಣ ಇಡೀ ಚಂಡರಕಿ ಗ್ರಾಮ ಮದುವಣಗಿತ್ತಿಯಂತೆ ಸಿಂಗರಿಸಲಾಗಿತ್ತು. ಚಂಡರಕಿಯಲ್ಲಿ ಜನತಾದರ್ಶನ 3 ಗಂಟೆ ತಡವಾಗಿ ಆರಂಭವಾಗಿದ್ದು, ರಾತ್ರಿ 8 ಗಂಟೆ ತನಕವೂ ಸಿಎಂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಇದನ್ನೂ ಓದಿ:ಚಂಡರಕಿಯಲ್ಲಿ ಸಿಎಂ ಗ್ರಾಮವಾಸ್ತವ್ಯ ಅಂತ್ಯ – ಯಾದಗಿರಿಗೆ ಬಂಪರ್ ಕೊಡುಗೆ
ಬಳಿಕ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು. ನಂತರ ಮಕ್ಕಳೊಂದಿಗೆ ರಾತ್ರಿಯ ಭೋಜನ ಸವಿದರು. ರಾತ್ರಿಯ ಭೋಜನದ ಬಳಿಕ ಗ್ರಾಮಸ್ಥರು, ಶಾಲಾ ಮಕ್ಕಳ ಜೊತೆಗೆ ಫೋಟೋ ಸೆಷನ್ ಕೂಡ ನಡೆಯಿತು. ಸಿಎಂಗೆ ಶಾಲೆಯ ಕೊಠಡಿಯಲ್ಲಿ ಯಾವುದೇ ಹಾಸಿಗೆ ಇಲ್ಲದೆ ಚಾಪೆ, ದಿಂಬು, ಹೊದಿಕೆಗಳ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮುಖ್ಯಮಂತ್ರಿಗಳ 2ನೇ ದಿನದ ಗ್ರಾಮವಾಸ್ತವ್ಯ ಕಲಬುರಗಿ ಜಿಲ್ಲೆ ಅಫ್ಜಲಪುರದ ಬಿ.ಹೇರೂರು ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. ಆದರೆ ರಾತ್ರಿಯಿಡೀ ಹೆರೂರಿನಲ್ಲಿ ಭಾರೀ ಮಳೆಯಾಗಿದ್ದು, ಸಿಎಂ ಜನತಾದರ್ಶನಕ್ಕಾಗಿ ಹಾಕಿದ್ದ ಪೆಂಡಾಲ್ ಹಾಳಾಗಿದೆ. ಇಂದು ಕೂಡ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಜಿಲ್ಲಾಡಳಿತ ಸಿಎಂ ಅವರ ಹಳ್ಳಿ ವಾಸವನ್ನು ಮುಂದೂಡಿದೆ.
ಮೈಸೂರು: ಕೊಡಗು ಆಸ್ಪತ್ರೆ ಅಭಿವೃದ್ಧಿ ಆಗುತ್ತಿದೆ. ಹೀಗಿರುವಾಗ ಅಭಿಯಾನ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಸಚಿವ ಸಾ.ರಾ. ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರಿಗೆ ಪ್ರಚಾರದ ಹುಚ್ಚು ಇದೆ. ಹೀಗಾಗಿ ಅವರಿಗೆ ಇಷ್ಟ ಬಂದ ಹಾಗೇ ಮಾತನಾಡುತ್ತಿದ್ದಾರೆ. ಸಿಎಂ ಈಗಾಗಲೇ ಕೊಡಗು ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೀಗಿರುವಾಗ ಅಭಿಯಾನ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗು ಆಸ್ಪತ್ರೆ ಅಭಿಯಾನಕ್ಕೆ ಕೈಜೋಡಿಸಿದ ಕಿಚ್ಚ ಸುದೀಪ್
ಸದ್ಯ ಕೊಡಗು ಆಸ್ಪತ್ರೆ ಅಭಿವೃದ್ಧಿ ಆಗುತ್ತಿದೆ. ಈ ಹಂತದಲ್ಲಿ ಅಭಿಯಾನ ಮಾಡುತ್ತಿದ್ದಾರೆ. ಮುಂದೆ ಆಸ್ಪತ್ರೆ ಚೆನ್ನಾಗಿ ಆದರೆ ನಮ್ಮ ಒತ್ತಡದಿಂದಲೇ ಕೆಲಸ ಆಯಿತು ಎಂದು ಹೇಳಿಕೊಳ್ಳುತ್ತಾರೆ ಎಂದರು. ಇದನ್ನು ಓದಿ:ಸಿಎಂ ಬಳಿ ನಟಿ ರಶ್ಮಿಕಾ, ಹರ್ಷಿಕಾ ಮನವಿ
ಇದೇ ವೇಳೆ ಉನ್ನತ ಶಿಕ್ಷಣ ಸಚಿವ ಜಿ.ಡಿ ದೇವೇಗೌಡ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಮಾತನಾಡಿ, ವಿಶ್ವನಾಥ್ ಅವರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಅಂಗೀಕಾರ ಆದ ಮೇಲೆ ಬದಲಾವಣೆ ಬಗ್ಗೆ ಮಾತನಾಡುತ್ತೇವೆ. ಅವರ ರಾಜೀನಾಮೆ ಅಂಗೀಕಾರ ಆಗುವವರೆಗೂ ಬೇರೆ ಹೆಸರುಗಳ ಬಗ್ಗೆ ಚರ್ಚೆ ಮಾಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೊಡಗು ಸಂತ್ರಸ್ತರಿಗೆ ನಿರ್ಮಿಸುತ್ತಿರೋ ಮನೆಗಳು ಚೆನ್ನಾಗಿಲ್ಲ: ಹರ್ಷಿಕಾ ಪೂಣಚ್ಚ
ನಿಖಿಲ್ ಜೆಡಿಎಸ್ ರಾಜ್ಯಾಧ್ಯಕ್ಷರ ರೇಸ್ ನಲ್ಲಿ ಇಲ್ಲ. ಯಾರ್ಯಾರೋ ಏನೇನೋ ಮಾತನಾಡುತ್ತಿದ್ದಾರೆ. ನಿಖಿಲ್ ಅವರನ್ನು ಜೆಡಿಎಸ್ ಯುವ ಘಟಕ ಸ್ಥಾನಕ್ಕೆ ಕೆಲವರು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಬೇಕು ಎಂದು ಹೇಳಿದ್ದಾರೆ.
ಮೈಸೂರು: ಕೊಡಗು ಸಂತ್ರಸ್ತರ ಮನೆಗಳ ಗುಣಮಟ್ಟದ ಬಗ್ಗೆ ನಟಿ ಹರ್ಷಿಕಾ ಪೂಣಚ್ಚ ಆಕ್ಷೇಪ ವ್ಯಕ್ತಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ ಮಹೇಶ್, ಯಾರವರು? ಹರ್ಷಿಕಾ ಪೂಣಚ್ಚ ಏನಾಗಿದ್ದಾರೆ?. ಅವರೇನು ಸಿನಿಮಾ ನಟಿನಾ? ಸಿನಿಮಾ ನಟಿ ಆದರೆ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಅದನ್ನು ಬಿಟ್ಟು ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಹರ್ಷಿಕಾ ಪೂಣಚ್ಚ ಅವರಿಗೆ ಏನು ಗೊತ್ತು? ಅವರ ವಿದ್ಯಾಭ್ಯಾಸ ಹಿನ್ನೆಲೆ ಏನು?. ವಾಸ್ತವ ಅರ್ಥ ಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಪೂಣಚ್ಚ ವಿರುದ್ಧ ಸಚಿವರು ಕಿಡಿಕಾರಿದ್ದಾರೆ.
ಹರ್ಷಿಕಾ ಹೇಳಿದ್ದೇನು?:
ಶನಿವಾರ ಮೈಸೂರಿನಲ್ಲಿ ಮಾತನಾಡಿದ್ದ ಸ್ಯಾಂಡಲ್‍ವುಡ್ ನಟಿ, ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ, ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ನಾನು ಇತ್ತೀಚೆಗೆ ಕೊಡಗು ನೆರೆ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಯ ಮಾದರಿಯನ್ನು ನೋಡಿದೆ. ಅದು ಚೆನ್ನಾಗಿಲ್ಲ. ಅವರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಅಲ್ಲದೆ ಪ್ರವಾಹ ನೈಸರ್ಗಿಕವಾಗಿ ಸಂಭವಿಸಿದೆ. ಯಾರೋ ತಾವಾಗಿಯೇ ಮಾಡಿಕೊಂಡಿದ್ದಲ್ಲ. ಹೀಗಾಗಿ ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಘಟನೆಯ ಬಳಿಕ ರಾಜ್ಯ ಸರ್ಕಾರ ಶೀಘ್ರವೇ ಮನೆ ವಿತರಣೆ ಮಾಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ಮನೆ ಹಂಚಿಕೆಯಾಗಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದರು.
ಮಡಿಕೇರಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಸಲಹೆ, ಸೂಚನೆಯಲ್ಲಿ ಸತ್ಯಾಂಶವಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಕೆ.ಆರ್.ನಗರ ಪುರಸಭೆ ಚುನಾವಣೆ ಸೋಲಿಗೆ ಸಾ.ರಾ.ಮಹೇಶ್ ಅವರ ನಡೆಯೇ ಕಾರಣ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರು 40 ವರ್ಷಗಳಿಂದ ರಾಜಕಾರಣದಲ್ಲಿದ್ದವರು, ಅನುಭವದ ಮೇಲೆ ಹೇಳಿದ್ದಾರೆ. ನನಗೆ ಈಗ 20 ವರ್ಷದ ಅನುಭವ ಇದೆ ಅಷ್ಟೇ. ನಮ್ಮಂತವರಿಗೆ ಸಲಹೆ ಕೊಡುವ ಸಂಪೂರ್ಣ ಹಕ್ಕು ಅವರಿಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್‍ನಲ್ಲಿ ಹಣವೇ ಮುಖ್ಯ, ದುರಹಂಕಾರದಿಂದ್ಲೇ ಸೋಲು: ದಳ ನಾಯಕರಿಗೆ ವಿಶ್ವನಾಥ್ ಪರೋಕ್ಷ ಗುದ್ದು
ಜೆಡಿಎಸ್ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ಪಕ್ಷ. ನಾನು ಯಾವುದೇ ದ್ವೇಷ ರಾಜಕಾರಣ ಮಾಡಿಲ್ಲ. ವಿಶ್ವನಾಥ್ ಅವರೇ ನಮ್ಮ ರಾಜ್ಯಾಧ್ಯಕ್ಷರು ಎಂದು ಒಪ್ಪಿಕೊಂಡ ಮೇಲೆ, ಅವರ ಸಲಹೆ ಒಪ್ಪಿಕೊಳ್ಳುವುದರಲ್ಲಿ ಏನಿದೆ? ಪಕ್ಷ ಸಂಘಟನೆ ಉದ್ದೇಶದಿಂದ ಸಲಹೆ ನೀಡಿದ್ದಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ಮತದಾರರು 1,840 ಮತಗಳಿಂದ ನನ್ನನ್ನು ಈ ಬಾರಿ ಗೆಲ್ಲಿಸಿದ್ದಾರೆ. ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ನಾನು ಯಾವುದನ್ನೂ ಮರೆತಿಲ್ಲ. ಹೀಗಾಗಿ ಸೀಗೋಡಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಇಂದು ಮಡಿಕೇರಿಗೆ ಭೇಟಿ ನೀಡಿ ಮನೆ ನಿರ್ಮಾಣ ಕಾರ್ಯ ವೀಕ್ಷಣೆ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ವಿಶ್ವನಾಥ್ ಅವರಿಗೆ ಟಾಂಗ್ ಕೊಟ್ಟರು.
ಈ ಬಾರಿಯ ಕೆ.ಆರ್ ನಗರ ಪುರಸಭೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. 2018ರ ಚುನಾವಣೆಯಲ್ಲಿ ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ಟೌನ್‍ನಲ್ಲಿ 2,000 ಮತಗಳ ವ್ಯತ್ಯಾಸ ಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ 516 ಮತಗಳು ಮಾತ್ರ ವ್ಯತ್ಯಾಸವಾಗಿದೆ. ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಎಚ್.ವಿಶ್ವನಾಥ್ ಅವರ ಸಲಹೆ ಸ್ವೀಕರಿಸಿ, ಸರಿ ಮಾಡಿಕೊಳ್ಳುತ್ತೇನೆ ಎಂದರು.
ಬೆಂಗಳೂರು: ಮಂಡ್ಯ ಹಾಗೂ ತುಮಕೂರಿನಲ್ಲಿ ಸೋಲು ಕಂಡಿದ್ದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಭಾರೀ ತಲೆ ಕಡೆಸಿಕೊಂಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ದೇವೇಗೌಡರ ಮನೆಗೆ ಭೇಟಿ ನೀಡಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಸಚಿವ ಸಾ.ರಾ ಮಹೇಶ್ ವಿರುದ್ಧ ಕುಮಾರಸ್ವಾಮಿ ಗರಂ ಆಗಿದ್ದಾರೆ.
ಮಂಡ್ಯ ಮತ್ತು ತುಮಕೂರಿನಲ್ಲಿ ಹಿನ್ನಡೆಯಾದ ಹಿನ್ನಲೆಯಲ್ಲಿ ಕುಮಾರಸ್ವಾಮಿ ಸುಮಾರು ಎರಡು ಗಂಟೆಯಿಂದ ತಾಜ್ ಹೋಟೆಲ್‍ನಲ್ಲಿಯೇ ಇದ್ದರು. ಬಳಿಕ ಮುಂದೇನು ಎಂದು ಚರ್ಚೆ ಮಾಡಲು ಸಿಎಂ ಪದ್ಮನಾಭನಗದಲ್ಲಿರುವ ದೇವೆಗೌಡರ ಮನೆಗೆ ಭೇಟಿ ನೀಡಿದ್ದರು.
ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದ್ದ ವೇಳೆ ವೈಎಸ್‍ವಿ ದತ್ತ ಹಾಗೂ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಫಾರೂಕ್, ಸಾ.ರಾ ಮಹೇಶ್ ಅವರು ಕೂಡ ಆಗಮಿಸಿದ್ದರು. ಈ ವೇಳೆ ಚುನಾವಣೆಯಲ್ಲಿ ಮಗ ನಿಖಿಲ್ ಸೋತಿದ್ದಕ್ಕೆ ಸಿಎಂ ಕುಮಾರಸ್ವಾಮಿ ಸಚಿವ ಸಾರಾ ಮಹೇಶ್ ವಿರುದ್ಧ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.
ಮೈಸೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರತ್ಯೇಕ ಸ್ಪರ್ಧೆ ಮಾಡುತ್ತೇವೆ. ಆ ಮೂಲಕ ಫ್ರೆಂಡ್ಲಿ ಫೈಟ್ ನಡೆಸುತ್ತೇವೆ. ಒಂದು ವೇಳೆ ವರಿಷ್ಠರು ತೀರ್ಮಾನ ಮಾಡಿದರೆ ಒಂದಾಗುತ್ತೇವೆ ಎಂದು ಸಚಿವ ಸಾರಾ ಮಹೇಶ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹೊಂದಾಣಿಕೆ ಇಲ್ಲ. ಮೈತ್ರಿ ಸರ್ಕಾರ ಇದ್ದರು ಕೂಡ ಪ್ರತ್ಯೇಕ ಪ್ರತ್ಯೇಕ ಸ್ಪರ್ಧೆ ಮಾಡಿ, ಫ್ರೆಂಡ್ಲಿ ಫೈಟ್‍ಗೆ ನಿರ್ಧಾರ ಮಾಡಲಾಗಿದೆ. ಸ್ಥಳೀಯ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಎರಡು ಪಕ್ಷಗಳಿಗೆ ಕಷ್ಟ ಆಗುವುದರಿಂದಲೇ ಚಿಂತನೆ ನಡೆಸಲಾಗಿದೆ. ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.
ಒಂದೊಮ್ಮೆ ನಾಯಕರ ಹಂತದಲ್ಲಿ ಹೊಂದಾಣಿಕೆ ಮುಂದಾದರು ಅದು ಯಶಸ್ವಿ ಆಗುವುದಿಲ್ಲ. ಏಕೆಂದರೆ ಹಲವು ವರ್ಷಗಳಿಂದ ತಳಮಟ್ಟದಲ್ಲಿ ಪಕ್ಷಕ್ಕಾಗಿ ಕಾರ್ಯಕರ್ತರು ಕೆಲಸ ಮಾಡಿರುತ್ತಾರೆ. ಈಗ ಹೊಂದಾಣಿಕೆ ಎಂದರೆ ಅವರು ಬೇರೆ ಪಕ್ಷಕ್ಕೆ ಹೋಗುತ್ತಾರೆ. ಇಲ್ಲವಾದರೆ ಬಂಡಾಯವಾಗಿ ಸ್ಪರ್ಧೆ ಮಾಡುತ್ತಾರೆ ಎಂದರು.
ಇದೇ ವೇಳೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಮತಹಾಕಿದ್ದಾರೆ ಎಂಬ ಸಚಿವ ಜಿಟಿಡಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಜಿಟಿ ದೇವೆಗೌಡರು ಅವರಿಗಿರುವ ಮಾಹಿತಿ ಮೇರೆಗೆ ಹೇಳಿಕೆ ನೀಡಿದ್ದಾರೆ. ಇಲ್ಲಿ ನಮ್ಮ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಒಂದು ಬೂತ್ ವಿಚಾರವಾಗಿ ಮಾತ್ರ ಜಿಟಿಡಿ ಅವರು ಹೇಳಿಕೆ ನೀಡಿದ್ದು ನಿಜ. ಇಡೀ ಲೋಕಸಭಾ ವ್ಯಾಪ್ತಿಯಲ್ಲಿ ನಾಯಕರು ತೀರ್ಮಾನಿಸಿದಂತೆ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದೇವೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಲಕ್ಷ ಮತಗಳ ಅಂತರದಿಂದ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಮೈಸೂರಿನಲ್ಲೂ ಕಡಿಮೆ ಅಂತರದಿಂದ ಗೆಲುವು ಪಡೆಯುತ್ತೇವೆ ಎಂದರು.
ಉಡುಪಿ: ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ಮೂಳೂರು ಬೀಚ್‍ನಲ್ಲಿ ಸುಡು ಬಿಸಿಲಿನಲ್ಲಿ ಮರಳಿನಲ್ಲಿ ಶಾಸಕ ಬೋಜೇಗೌಡರನ್ನು ಸ್ಯಾಂಡ್ ಥೆರಪಿಗಾಗಿ ಹೂತುಹಾಕಿದ್ದಾರೆ.
ಚುನಾವಣಾ ಪ್ರಚಾರದ ಬಳಿಕ ಸಿಎಂ, ಮಾಜಿ ಪಿಎಂ ಜೊತೆ ಸಚಿವರು ಜೆಡಿಎಸ್ ಶಾಸಕರು ಉಡುಪಿಯ ಸಾಯಿರಾಧ ಹೆಲ್ತ್ ರೆಸಾರ್ಟ್ ನಲ್ಲಿ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಉಡುಪಿಯ ಕಾಪುವಿನ ಮೂಳೂರು ರೆಸಾರ್ಟಿ ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ವರಿಷ್ಠರಿಗೆ ಜೆಡಿಎಸ್ ನಾಯಕರು, ಸಚಿವರು ಸಾಥ್ ಕೊಟ್ಟಿದ್ದಾರೆ.
ಈ ಸಂದರ್ಭ ಸ್ಯಾಂಡ್ ಥೆರಪಿ ಪಡೆಯುತ್ತಿದ್ದ ಬೋಜೇಗೌಡರನ್ನು ಸಾರಾ ಮಹೇಶ್ ಅವರು ಮರಳಿನಲ್ಲಿ ಹೂತು ಹಾಕಿದ್ದರು. ಸ್ಯಾಂಡ್ ತೆರೆಪಿ ಬಳಿಕ ಸುಡುವ ಮರಳಿನಿಂದ ಪಾರಾಗಲು ಬೋಜೇಗೌಡರು ಸಮುದ್ರಕ್ಕೆ ಹಾರಿದರು.
ಈ ವೇಳೆ ಸಾರಾ ಮಹೇಶ್ ಹಾರೆಯಿಂದ ಬೊಜೇಗೌಡರಿಗೆ ತಲೆಯವರೆಗೆ ಮರಳು ಹಾಕುತ್ತ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸುಡು ಬಿಸಿಲಿಗೆ ಮರಳು ಬಿಸಿಯಾಗಿದ್ದು, ಮರಳಿನಲ್ಲಿದ್ದ ಬೋಜೇಗೌಡರು ಎದ್ದು ಬಿದ್ದು ಸಮುದ್ರದ ಕಡೆ ಓಡಿ ಸಮುದ್ರಸ್ನಾನ ಮಾಡಿದರು. ಈ ದೃಶ್ಯವು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.