ಮೈಸೂರು: ಇಬ್ಬರೂ ತಪ್ಪು ಮಾಡಿದ್ದೇವೆ, ವೈಯುಕ್ತಿಕ ಟೀಕೆಗಳನ್ನು ನಿಲ್ಲಿಸೋಣ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಇಷ್ಟು ದಿನ ಸಾರಾ ಮಹೇಶ್ ಹೇಳಿಕೆಗಳಿಗೆ ಮಾತಿನ ಚಾಟಿ ಬೀಸಿ ತಿರುಗೇಟು ನೀಡುತ್ತಿದ್ದ ವಿಶ್ವನಾಥ್ ಈಗ ಅವರ ಜೊತೆಗೆ ರಾಜಿಗೆ ಮುಂದಾಗಿದ್ದಾರೆ.
ಹೌದು. ಇಷ್ಟು ದಿನ ಹಾವು ಮುಂಗುಸಿಯಂತೆ ವಿಶ್ವನಾಥ್ ಹಾಗೂ ಸಾರಾ ಮಹೇಶ್ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಂಡು ಬಂದಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ವಿಶ್ವನಾಥ್ ಅವರು ಸಾರಾ ಮಹೇಶ್ ಜೊತೆ ರಾಜಿಗೆ ನಿಂತಿದ್ದಾರೆ. ಇಬ್ಬರು ಗಾಜಿನ ಮನೆಯಲ್ಲಿ ಇದ್ದೇವೆ. ಜನರು ನಮ್ಮನ್ನು ನೋಡುತ್ತಿದ್ದಿದ್ದಾರೆ. ಅವರ ಮುಂದೆ ನಾವು ಜಾರಿ ಬೀಳುವುದು ಬೇಡ. ಇಬ್ಬರೂ ತಪ್ಪು ಮಾಡುತ್ತಿದ್ದೇವೆ ಅಂತ ನನಗೆ ಅನಿಸುತ್ತಿದೆ. ನಾವಿಬ್ಬರು ಒಂದೇ ಊರಿನವರು, ಪರಸ್ಪರ ಈ ರೀತಿ ಮಾತನಾಡುವುದು ಬೇಡ. ನೀವೇನೋ ಮಾಡುತ್ತೀರಾ ಅಂತ ಹೆದರಿ ಈ ಮಾತುಗಳನ್ನ ಹೇಳುತ್ತಿಲ್ಲ. ನೀವು ಬೆಳೆಯಬೇಕಿರುವ ರಾಜಕಾರಣಿ. ನನ್ನದು ನಿವೃತ್ತಿಯ ರಾಜಕಾರಣ. ಆದ್ದರಿಂದ ಇಂತಹ ಪರಸ್ಪರ ವೈಯುಕ್ತಿಕ ಮಾತುಗಳು ನಮಗೆ ಒಳ್ಳೆಯದಲ್ಲ. ಅಭಿವೃದ್ಧಿ ಹಾಗೂ ವಿಷಯಾಧಾರಿತವಾಗಿ ಮಾತನಾಡೋಣ. ಇಬ್ಬರೂ ಕೂಡ ಮಂತ್ರಿಗಳಾಗಿದ್ದವರು. ಈ ರೀತಿ ಮಾತನಾಡಿದರೆ ಜನ ನೋಡುತ್ತಾರೆ. ಇಲ್ಲಿಗೆ ಎಲ್ಲವನ್ನು ನಿಲ್ಲಿಸೋಣ. ವೈಯುಕ್ತಿಕ ಟೀಕೆಗಳನ್ನ ನಿಲ್ಲಿಸೋಣ ಎಂದು ಸಾ.ರಾ.ಮಹೇಶ್ ಅವರಲ್ಲಿ ಮನವಿ ಮಾಡಿದರು. ಇದನ್ನೂ ಓದಿ:ಕುಮಾರಸ್ವಾಮಿ ಪ್ರಜ್ಞೆ ಇಟ್ಕೊಂಡು ಮಾತನಾಡಲಿ – ಹೆಚ್‍ಡಿಕೆ ವಿರುದ್ಧ ಟಗರು ಗುಟುರು

ಯಡಿಯೂರಪ್ಪ ಸಿಎಂ ಆಗಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ. ಇದನ್ನ ಸ್ವತಃ ಅವರಿಬ್ಬರೇ ಒಪ್ಪಿಕೊಂಡಿದ್ದಾರೆ. ಇದಕ್ಕೆ 17 ಜನ ಅನರ್ಹ ಶಾಸಕರು ಕಾರಣರಲ್ಲ. ನಮ್ಮ ಮೇಲೆ ಸರ್ಕಾರ ಬೀಳಿಸಿದ ಗೂಬೆ ಕೂರಿಸಿದ್ದಿರಿ ಇಷ್ಟು ದಿನ. ಈಗ ನಿಮ್ಮ ಮಾತಿನ ಮೂಲಕ ಸರ್ಕಾರ ಪತನಕ್ಕೆ ನೀವೇ ಕಾರಣ ಎನ್ನುವುದು ಸ್ಪಷ್ಟವಾಗಿದೆ. ಪರಸ್ಪರ ಅಸಮಾಧಾನ ಅಪನಂಬಿಕೆಯಲ್ಲಿ ಸರ್ಕಾರ ನಡೆಸಿದವರು ನೀವು. ಅದರ ಪರಿಣಾಮ ಸರ್ಕಾರ ಪತನವಾಯಿತು. ಈಗ ನೀವು ಹದ್ದು ಗಿಣಿ ಎಂಬ ಟೀಕೆ ಮಾಡಿಕೊಳ್ಳುತ್ತಿದ್ದೀರಿ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣ ಸಿದ್ದರಾಮಯ್ಯ, ಕುಮಾರಸ್ವಾಮಿ. ಕುಮಾರಸ್ವಾಮಿಯೇ ತಮ್ಮದು ಕೆಟ್ಟ ಸರ್ಕಾರ ಎಂದು ಹೇಳಿದ್ದಾರೆ. ನಾವು ಅದನ್ನ ಹೇಳಿಯೇ ಸರ್ಕಾರದಿಂದ ಹೊರ ಬಂದಿದ್ದು. ಈಗ ಅದನ್ನು ನೀವೇ ಖಚಿತ ಪಡಿಸುತ್ತಿದ್ದೀರಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ:ತೇಜಸ್ವಿ ಸೂರ್ಯ ರಾಕ್ಷಸ, ರಾಜ್ಯದ ಜನರ ದಿಕ್ಕು ತಪ್ಪಿಸ್ತಿದ್ದಾನೆ: ಈಶ್ವರ್ ಖಂಡ್ರೆ

ಮಾಜಿ ಸಚಿವ ರೇವಣ್ಣರನ್ನ ಹೊಗಳುವುದರ ಜೊತೆಗೆ ವಿಶ್ವನಾಥ್ ಅವರು ಟಾಂಗ್ ಕೊಟ್ಟಿದ್ದಾರೆ. ಅವರು ಕೆಲಸ ಮಾಡುವುದರಲ್ಲಿ ದೈತ್ಯರು. ಅವರ ಕೆಲಸದ ಬಗ್ಗೆ ಯಾವುದೇ ಅನುಮಾನ ಬೇಡ. ಯಾವುದೇ ಖಾತೆ ಇದ್ದರು ಅದನ್ನ ಮಾಡುತ್ತಾರೆ. ಜೊತೆಗೆ ಎಲ್ಲಾ ಖಾತೆಗೂ ಕೈಯಾಡಿಸುತ್ತಾರೆ ಎಂದು ಕಾಲೆಳೆದಿದ್ದರು.
15 ಕ್ಷೇತ್ರಗಳಿಗೆ ಉಪಚುನಾವಣೆ ವಿಚಾರವಾಗಿ ಮಾತನಾಡಿ, ಉಪಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಅವಕಾಶ ನೀಡಿರುವ ಆಯೋಗದ ನಿರ್ಧಾರ ಸ್ವಾಗತಾರ್ಹ. ಆದರೆ ಚುನಾವಣೆ ಮುಂದೂಡಿಕೆ ಮಾಡಿ ಎನ್ನುವುದೇ ನಮ್ಮ ಮನವಿ ಎಂದು ಹೇಳಿದರು. ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಈಗ ನಡೆಯುತ್ತಿರುವ ಚುನಾವಣೆ ತರಾತುರಿಯಲ್ಲಿ ನಡೆಯುತ್ತಿದೆ. ಹಾಗಾಗಿ ಉಪಚುನಾವಣೆ ಈಗ ಬೇಡ ಎನ್ನುವುದು ನಮ್ಮ ಅಭಿಪ್ರಾಯ. ಅದೇನೆ ಇದ್ದರೂ ಬುಧವಾರ ಹಾಗೂ ಶುಕ್ರವಾರದವರೆಗೆ ಕಾಯಬೇಕು. ಸುಪ್ರೀಂಕೋರ್ಟ್ ತೀರ್ಮಾನದ ನಂತರ ಎಲ್ಲವು ನಿರ್ಧಾರ ಆಗಲಿದೆ. ಉಪಚುನಾವಣೆಗೆ ನಾನು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಹುಣಸೂರಿನ ಹಿರಿಯರು, ಮುಖಂಡರ ಜೊತೆ ಚರ್ಚೆ ಮಾಡುತ್ತೆನೆ. ಅವರ ಅಭಿಪ್ರಾಯ ಪಡೆದು ಮುಂದುವರಿಯುತ್ತೇನೆ. ಉಪಚುನಾವಣೆಗೆ ಸಮಯ ಕಡಿಮೆ ಇದೆ. ಹೀಗಾಗಿ ತಯಾರಿ ಮಾಡಿಕೊಳ್ಳಲೇಬೇಕು ಅಲ್ಲವೇ ಎಂದು ಹೇಳಿದರು.

























