Tag: ಸಾಮೂಹಿಕ ಶ್ರದ್ಧಾಂಜಲಿ

  • ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಸುಳ್ವಾಡಿ ವಿಷ ಪ್ರಸಾದ ದುರಂತ – ಸಾಮೂಹಿಕ ಶ್ರದ್ಧಾಂಜಲಿ ಸಭೆ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದಲ್ಲಿ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರುವ ಸಲುವಾಗಿ ಸಾಮೂಹಿಕ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

    ಏನಿದು ಪ್ರಕರಣ?
    ಸುಳ್ವಾಡಿ ಮಾರಮ್ಮನ ವಿಷ ದುರಂತ ಪ್ರಕರಣ ನಡೆದು ಶನಿವಾರಕ್ಕೆ ಒಂದು ವರ್ಷವಾಗಿದೆ. ದೇವಾಲಯದ ಆಡಳಿತ ಚುಕ್ಕಾಣಿಗೋಸ್ಕರ ಕಿಚ್ ಗುತ್ ಮಾರಮ್ಮನ ದೇವಾಲಯದ ಪ್ರಸಾದಕ್ಕೆ ವಿಷ ಬೆರೆಸಿದ ಪರಿಣಾಮ 17 ಜನ ಸಾವನ್ನಪ್ಪಿದ್ದು, 120 ಮಂದಿ ಅಸ್ವಸ್ಥರಾಗಿದ್ದರು. ಈ ಪ್ರಕರಣ ಸಂಬಂಧ ಇಮ್ಮಡಿ ಮಹದೇವಸ್ವಾಮಿ, ದೊಡ್ಡಯ್ಯ, ಅಂಬಿಕಾ, ಮಾದೇಶ್ ಎಂಬ ಆರೋಪಿಗಳ ಬಂಧನವಾಗಿತ್ತು.

    ಕಳೆದ ಬಾರಿಯೂ ಸಹ ಮೃತಪಟ್ಟ ಎಲ್ಲಾ ಕುಟುಂಬಸ್ಥರು ಸೇರಿ ಸುಳ್ವಾಡಿ ಗ್ರಾಮದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದರು. ಸಾವನ್ನಪ್ಪಿದ ಎಲ್ಲರ ಆತ್ಮಕ್ಕೆ ಶಾಂತಿ ಕೋರಿದರು. ಅದೇ ರೀತಿ ಈ ಬಾರಿಯೂ ಸಹ ಸುಳ್ವಾಡಿ ದೇವಾಲಯದ ಮುಂಭಾಗ ವಿಷ ಪ್ರಸಾದ ತಿಂದು ಮಡಿದವರ ಆತ್ಮಕ್ಕೆ ಶಾಂತಿ ಕೋರಲು ಸಾಮೂಹಿಕ ಶ್ರದ್ಧಾಂಜಲಿ ನಡೆಸಲಾಯಿತು. ಈ ಸಭೆ ನಡೆಯುವಾಗ ಕೆಲವರು ತಮ್ಮ ಮನೆಯವರನ್ನು ನೆನೆದು ಕಣ್ಣೀರು ಹಾಕಿದರು.

    ಈ ಸಭೆಯಲ್ಲಿ ಸ್ಥಳೀಯ ಶಾಸಕ ನರೇಂದ್ರ, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಸೇರಿದಂತೆ ಇತರರು ಸೇರಿದ್ದು, ಮೃತಪಟ್ಟ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.