Tag: ಸಾಮಾನ್ಯ ಸಭೆ

  • ಕಾಫಿನಾಡ ಬಿಜೆಪಿಯಲ್ಲಿ ಭಿನ್ನಮತ – ಜಿಪಂ ಅಧ್ಯಕ್ಷರ ವಿರುದ್ಧ ಸದಸ್ಯರು ರೆಬೆಲ್

    ಕಾಫಿನಾಡ ಬಿಜೆಪಿಯಲ್ಲಿ ಭಿನ್ನಮತ – ಜಿಪಂ ಅಧ್ಯಕ್ಷರ ವಿರುದ್ಧ ಸದಸ್ಯರು ರೆಬೆಲ್

    – ಅಂದು ಚೈತ್ರಶ್ರೀ, ಇಂದು ಸುಜಾತ ಒಂದೇ ಹಾದಿಯಲ್ಲಿ ಇಬ್ಬರು

    ಚಿಕ್ಕಮಗಳೂರು: ನಮ್ದು ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಚಿಕ್ಕಮಗಳೂರಿನ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡ್ತಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪಕ್ಷದ ಸದಸ್ಯರೇ ರೆಬೆಲ್ ಆಗಿದ್ದು ಸಾಮಾನ್ಯ ಸಭೆಗೆ ಸಾರಾಸಗಟಾಗಿ ಗೈರಾಗಿದ್ದಾರೆ. ಇದನ್ನ ಗಮನಿಸಿದ ಜಿಲ್ಲೆಯ ಜನ ಅಂದು ಚೈತ್ರಶ್ರೀಯದ್ದು ಇದೇ ಕಥೆಯಾಗಿತ್ತು, ಇಂದು ಸುಜಾತ ಕೃಷ್ಣಪ್ಪರದ್ದು ಅದೇನಾ ಅಂತಿದ್ದಾರೆ.

    ಮಂಗಳವಾರದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಕರೆದಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಪಕ್ಷದ ಸದಸ್ಯರು ಸಾಮೂಹಿಕವಾಗಿ ಗೈರಾಗುವ ಮೂಲಕ ಪಕ್ಷದೊಳಗಿನ ಭಿನ್ನಮತ ಸಾಮಾನ್ಯ ಸಭೆಯಲ್ಲಿ ಸ್ಫೋಟಗೊಂಡಿದ್ದು, ವಿಪಕ್ಷದವರ ಎದುರು ಶಿಸ್ತಿನ ಪಕ್ಷ ನಗೆಪಾಟಲಿಗೀಡಾಗಿದೆ.

    ಸಾಮಾನ್ಯ ಸಭೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಆಗಮಿಸಿದ್ದರು. ಆದರೆ, ಬಿಜೆಪಿ ಸದಸ್ಯರು ಜಿಪಂ ಸದಸ್ಯರ ವಿರುದ್ಧ ಅಸಮಾಧಾನ ಹೊರಹಾಕಿ ಗೈರಾಗಿದ್ದರು. ಕೊರೋನಾ ಕಾರಣದಿಂದ ಕಳೆದ ನಾಲ್ಕೈದು ತಿಂಗಳಿನಿಂದ ಯಾವುದೇ ಸಭೆ ನಡೆದಿರಲಿಲ್ಲ. ಜಿಲ್ಲೆಯ ಸಮಸ್ಯೆ ಹಾಗೂ ಅಭಿವೃದ್ಧಿ ಕುರಿತು ಸಭೆಯಲ್ಲಿ ಚರ್ಚೆ ನಡೆಯಬೇಕಿತ್ತು. ಆದರೆ, ಬಿಜೆಪಿಗರ ಒಳ ಕಿತ್ತಾಟದಿಂದ ಯಾವುದೇ ಚರ್ಚೆಗಳು ನಡೆದಿಲ್ಲ.

    ಭಿನ್ನಮತ ಯಾಕೆ?
    2016ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ 34 ಕ್ಷೇತ್ರಗಳಲ್ಲಿ 25 ಕ್ಷೇತ್ರಗಳಲ್ಲಿ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರದ ಗದ್ದುಗೆ ಏರಿತ್ತು. ಅಧ್ಯಕ್ಷರ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಮೀಸಲಾಗಿತ್ತು. ಆಗ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಸದಸ್ಯರು ಬಿಜೆಪಿಯಲ್ಲಿದ್ದರು. ಒಬ್ಬರು ತರೀಕೆರೆ ತಾಲೂಕಿನ ರಂಗೇನಹಳ್ಳಿ ಕ್ಷೇತ್ರದ ಚೈತ್ರಶ್ರೀ ಮಾಲತೇಶ್, ಮತ್ತೊಬ್ಬರು ಕೊಪ್ಪ ತಾಲೂಕಿನ ಮೇಗುಂದ ಕ್ಷೇತ್ರದ ಸುಜಾತ ಕೃಷ್ಣಪ್ಪ.

    ಮೊದಲ ಅವಧಿಗೆ ಅಧ್ಯಕ್ಷರಾಗುವರು 20 ತಿಂಗಳು, ಎರಡನೇ ಅವಧಿಗೆ ಅಧ್ಯಕ್ಷರಾಗುವವರು 40 ತಿಂಗಳು ಎಂದು ಪಕ್ಷ ನಿರ್ಧರಿಸಿ ಮೊದಲ ಅವಧಿಗೆ ಚೈತ್ರಶ್ರೀ ಮಾಲತೇಶ್ ಅಧ್ಯಕ್ಷರಾಗಿದ್ದರು. ಎರಡನೇ ಅವಧಿಗೆ ಅಧ್ಯಕ್ಷರಾದ ಸುಜಾತ ಕೃಷ್ಣಪ್ಪ ಈಗ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವುದರಿಂದ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

    ರಾಜೀನಾಮೆ ನೀಡುತ್ತಿಲ್ಲ ಯಾಕೆ?
    ಮಾತುಕತೆಯಾದಂತೆ ಸುಜಾತ ಕೃಷ್ಣಪ್ಪ ಇನ್ನೂ 40 ತಿಂಗಳು ಆಡಲಿತ ನಡೆಸಿಲ್ಲ. 28 ತಿಂಗಳು ಆಡಳಿತ ನಡೆಸಿದ್ದಾರೆ. ಈಗಲೇ ರಾಜೀನಾಮೆ ಕೇಳುತ್ತಿರೋದು ಅಧ್ಯಕ್ಷರ ಕಣ್ಣನ್ನ ಕೆಂಪಾಗಿಸಿದೆ. ಆದರೆ, ಅಧ್ಯಕ್ಷರು ನಾನು ಕಾರ್ಯಕರ್ತೆಯಾಗಿರಲು ಬಯಸುತ್ತೇನೆ. ಪಕ್ಷದ ಮೇಲೆ ಗೌರವವಿದೆ. ರಾಜೀನಾಮೆಗೆ ಸಿದ್ಧವಿದ್ದೇನೆ. ಆದರೆ, ಇದೊಂದು ಸಾಮಾನ್ಯ ಸಭೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರೂ ಸ್ಪಂದಿಸಿಲ್ಲ ಎಂದು ಪಕ್ಷದ ಜಿಲ್ಲಾಧ್ಯಕ್ಷರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷರ ನಡೆ-ನುಡಿ ಸರಿ ಇಲ್ಲ ಎಂದು ಅಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.

    ಚೈತ್ರಶ್ರೀ ಉಚ್ಛಾಟನೆ:
    ಮದುವೆಯಾದ ಮೂರೇ ತಿಂಗಳು, 24ನೇ ವಯಸ್ಸಿಗೆ ಚೈತ್ರಶ್ರೀ ಮಾಲತೇಶ್ ಮೊದಲ ಅವಧಿಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಗೆ ಅಧ್ಯಕ್ಷರಾಗಿದ್ದರು. ಮೊದಲು ಅಧ್ಯಕ್ಷರಾಗುವವರು 20 ತಿಂಗಳು, ನಂತರ ಆಗುವವರು 40 ತಿಂಗಳು ಎಂದು ಒಪ್ಪಂದವಾಗಿತ್ತು. ಆದರೆ, ಅಧ್ಯಕ್ಷರಾಗುವಾಗ ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದ ಕೂಡಲೇ ರಿಸೈನ್ ಮಾಡ್ತೀನಿ ಅಂತಿದ್ದ ಚೈತ್ರಶ್ರೀ, 20 ತಿಂಗಳ ಅಧಿಕಾರದ ಬಳಿಕ ರಾಜೀನಾಮೆ ಕೊಡೋದಕ್ಕೆ ಸಿಕ್ಕಾಪಟ್ಟೆ ಸೈಕಲ್ ಹೊಡೆಸಿ ಪಕ್ಷ ಮುಜುಗರಕ್ಕೀಡಾಗುವಂತೆ ಮಾಡಿದ್ರು.

    ಕೊನೆಗೆ ಪಕ್ಷದಿಂದ ಉಚ್ಛಾಟನೆ ಮಾಡಿ ಕೆಳಗಿಳಿಸಬೇಕಾಯ್ತು. ಈಗಲೂ ಪಕ್ಷದ ಸದಸ್ಯರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿರುದ್ಧ ರೆಬಲ್ ಆಗಿದ್ದಾರೆ. ಅಷ್ಟೆ ಅಲ್ಲದೆ, ಜಿಪಂ ಅಧ್ಯಕ್ಷರು ಬಿಜೆಪಿ ಜಿಲ್ಲಾಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ. ಒಂದು ವೇಳೆ, ಇವರೂ ಕೂಡ ರಾಜೀನಾಮೆ ನೀಡಲು ಮೀನಾಮೇಶ ಎಣಿಸಿದ್ರೆ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತೋ ಕಾದುನೋಡಬೇಕು.

     

    ಜಿಲ್ಲಾಧ್ಯಕ್ಷ ಕಿಡಿ :
    ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕರೆದಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯರು ಗೈರಾಗಿದ್ದು, ಇಲ್ಲಿ ಜಾತಿ ರಾಜಕಾರಣವೂ ಕೆಲಸ ಮಾಡುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಆರೋಪಿಸಿದ್ದಾರೆ. ಆದರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಈ ಆರೋಪವನ್ನ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ತಿರಸ್ಕರಿಸಿದ್ದಾರೆ.

    ಪಕ್ಷದ ರೀತಿ-ನೀತಿ ಚೌಕಟ್ಟಿನೊಳಗೆ ಪಕ್ಷ ಅವರಿಗೆ ಷರತ್ತುಗಳನ್ನ ಹಾಕಿದೆ. ಆದರೆ, ಅವರು ಕಳೆದ ಆರು ತಿಂಗಳಿಂದ ಬಿಜೆಪಿ ಪಕ್ಷಕ್ಕೆ ಚಾಲೆಂಜ್ ಮಾಡುವ ರೀತಿಯಲ್ಲಿದ್ದಾರೆ. ಅಧ್ಯಕ್ಷರಾದ ಮೇಲೆ ನಾನೇ ಎಲ್ಲಾ ಎಂಬಂತೆ ವರ್ತಿಸಿದ್ದಾರೆ. ಅಂತಹಾ ಭಾವನೆಗಳಿಗೆ ಬಿಜೆಪಿಯಲ್ಲಿ ಯಾವುದೇ ಬೆಲೆ ಇಲ್ಲ. ಹಾಗಾಗಿ, ಜಿಲ್ಲಾ ಪಂಚಾಯಿತಿ ಸದಸ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಕುರ್ಚಿಗೆ ಅಂಟಿಕೊಂಡಿರೋ ಪರಿಣಾಮ ಈ ರೀತಿ ಆರೋಪಗಳನ್ನ ಮಾಡುತ್ತಿದ್ದಾರೆ. ಆ ರೀತಿಯ ಆಲೋಚನೆಗಳು ಬಿಜೆಪಿಗೆ ಇಲ್ಲ. ಕುರ್ಚಿ ಹಾಗೂ ಅಧಿಕಾರ ವ್ಯಕ್ತಿಗೆ ಯಾವ ರೀತಿ ತಲೆ ಕೆಡಿಸುತ್ತೆ ಅನ್ನೋದಕ್ಕೆ ಇದೇ ಉದಾಹರಣೆ ಎಂದು ಜಿಪಂ ಅಧ್ಯಕ್ಷರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • ನಿವೇಶನ ಹಂಚಲು ಪಂಚಾಯತಿಯಿಂದ ಮೀನಮೇಷ ಫಲಾನುಭವಿಗಳ ಆಕ್ರೋಶ

    ನಿವೇಶನ ಹಂಚಲು ಪಂಚಾಯತಿಯಿಂದ ಮೀನಮೇಷ ಫಲಾನುಭವಿಗಳ ಆಕ್ರೋಶ

    ಬೆಂಗಳೂರು: ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನವಿಲ್ಲದ ಕುಟುಂಬಗಳಿಗೆ, ಗೋಮಾಳದಲ್ಲಿ ನಿವೇಶನ ಹಂಚಲು ಮೀನಮೇಷ ಎಣಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ ನಡೆದಿದೆ.

    ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮ ಪಂಚಾಯತಿಯಲ್ಲಿ ಸರ್ವೇ ನಂಬರ್ 256 ಹಾಗೂ 257 ರಲ್ಲಿನ ಒಟ್ಟು 6.10 ಎಕರೆ ಜಮೀನಿಗೆ 656 ಫಲಾನುಭವಿಗಳು ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಪಂಚಾಯತಿ, ಅರ್ಜಿಗಳನ್ನು ಪಡೆದು ಕಸದ ಬುಟ್ಟಿಗೆ ಹಾಕಿದ್ದಾರೆ ಹಾಗೂ ಮಾಜಿ ಸೈನಿಕರಿಗೆ ಜಮೀನು ಎಂದು ಹೇಳಿ ಅನವಶ್ಯಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಾಮಾನ್ಯ ಸಭೆಯಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಸಿದರು.

    ಕೆಲ ಸಮಯ ಸಭೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಎದುರಾಗಿತ್ತು. ನಿವೇಶನ ಹಂಚಿಕೆ ಬಗ್ಗೆ ಇಲಾಖೆಗೆ ಕಡತಗಳನ್ನು ಬೇಜವಬ್ದಾರಿತನದಿಂದ ವರ್ಗಾಯಿಸಲಾಗಿದೆ ಎಂದು ಸಭೆಯಲ್ಲಿ ಗ್ರಾಮಸ್ಥ ತಿಮ್ಮರಾಯಪ್ಪ ಆರೋಪಿಸಿದರು. ಆಗ ಸಭೆಯಲ್ಲಿ ವಾಗ್ವಾದ ನಡೆಯಿತು. ಬೇಗೂರು ಗ್ರಾಮ ಪಂಚಾಯತಿಯ 12 ಗ್ರಾಮಗಳಿಗೆ ಈ ನಿವೇಶನ ಹಂಚಿಕೆಯಾಗಬೇಕಿತ್ತು. ಆದರೆ ಬಲಾಢ್ಯರ ಪರ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಎಲ್ಲ ವಿಷಯವನ್ನು ಆಧರಿಸಿ ಮತ್ತೊಂದು ಸಭೆ ನಡೆಸಿ ನಂತರ ನಿವೇಶನ ಹಂಚಿಕೆ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು. ಆಗ ಸಭೆ ಶಾಂತಯುತವಾಗಿ ನಡೆಯಿತು.

  • ಯುದ್ಧದ ಬದಲು ಬುದ್ಧನನ್ನು ವಿಶ್ವಕ್ಕೆ ನೀಡಿದ್ದೇವೆ: ಮೋದಿ

    ಯುದ್ಧದ ಬದಲು ಬುದ್ಧನನ್ನು ವಿಶ್ವಕ್ಕೆ ನೀಡಿದ್ದೇವೆ: ಮೋದಿ

    – ವಿಶ್ವಸಂಸ್ಥೆಯಲ್ಲೂ ಸಬ್ ಕಾ ಸಾಥ್, ಸಬ್ ಕಾ ವಿಕಾಶ್, ಸಬ್ ಕಾ ವಿಶ್ವಾಸ್ ಮಂತ್ರ

    ನ್ಯೂಯಾರ್ಕ್: ಭಾರತವು ವಿಶ್ವಕ್ಕೆ ಯುದ್ಧದ ಬದಲು ಬುದ್ಧನನ್ನು ಕೊಡುಗೆ ನೀಡಿ, ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 130 ಕೋಟಿ ಭಾರತೀಯರ ಪ್ರತಿನಿಧಿಯಾಗಿ ಮಾತನಾಡುತ್ತಿರುವೆ. ಭಾರತವು ಅತ್ಯಂತ ಪುರಾತನ ಶ್ರೀಮಂತಿಕೆಯ ನೆಲವಾಗಿದೆ. ನಾವು ಸದಾ ಶಾಂತಿ-ಸೌಹಾರ್ದತೆಗೆ ಒತ್ತು ಕೊಡುತ್ತೇವೆ. ಜಾಗತಿಕ ರಾಷ್ಟ್ರಗಳ ಜೊತೆ ಸೌಹಾರ್ದ ಸಂಬಂಧ ಬಯಸುತ್ತಿದ್ದೇವೆ. ನಾವು ಬುದ್ಧರನ್ನು ಪ್ರತಿಪಾದಿಸುತ್ತೇವೆಯೇ ಹೊರತು ಯುದ್ಧವನ್ನಲ್ಲ ಎಂದು ಹೇಳಿದರು.

    ಭಯೋತ್ಪಾದನೆ ಮಟ್ಟ ಹಾಕಲು ಪ್ರತಿಯೊಂದು ದೇಶವೂ ಕೈ ಜೋಡಿಸಬೇಕು. ಸದಾ ಶಾಂತಿಮಂತ್ರವನ್ನೇ ಜಪಿಸುವ ಭಾರತವು ಈಗಲೂ ಅದನ್ನೇ ಮುಂದುವರಿಸಿದೆ. ಆದರೆ ಭಯೋತ್ಪಾದನೆ ಹುಟ್ಟಡಗಿಸಲು ಮುಂದಾಗಿದೆ. ಇದು ಕೇವಲ ಒಂದು ರಾಷ್ಟ್ರಕ್ಕೆ ಸೀಮಿತವಾಗಿಲ್ಲ. ಅದು ಮನುಕುಲಕ್ಕೆ ಸವಾಲಾಗಿದೆ. ಆದ್ದರಿಂದ ಮಾನವೀಯ ಕಾರಣಗಳಿಗಾದರೂ ಭಯೋತ್ಪಾದನೆ ಮಟ್ಟಹಾಕಲು ವಿಶ್ವವೇ ಒಗ್ಗಟ್ಟಾಗಬೇಕು ಎಂದರು.

    ಮಹಾತ್ಮ ಗಾಂಧೀಜಿ ಅವರ ಅಹಿಂಸಾ ವಾದ, ಸತ್ಯ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ. ದೇಶ ಅಭಿವೃದ್ಧಿ ಹಾಗೂ ಪ್ರಗತಿಗೆ ಶಾಂತಿಯು ಪೂರಕವಾಗಿದೆ. ಭಾರತವು ಶರವೇಗದಲ್ಲಿ ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆ. ಇಡೀ ವಿಶ್ವವೇ ಭಾರತದ ಸಾಧನೆಯನ್ನು ನೋಡುತ್ತಿದೆ. ಇಡೀ ಜಾಗತಿಕ ಸಮುದಾಯವನ್ನು ಉತ್ತೇಜಿಸುವುದಕ್ಕೆ ಭಾರತ ಮಹತ್ವಾಕಾಂಕ್ಷಿ ಯೋಜನೆಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮೋದಿ ಹೇಳಿದರು.

    ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಂತ್ರದ ಮೂಲಕ ಭಾರತವು ಅಭಿವೃದ್ಧಿ ಹೊಂದುವುದು ಸಾಧ್ಯವಾಗಿದೆ. ಕಳೆದ ಐದು ವರ್ಷದಲ್ಲಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಪರಿಸರ ಸಂರಕ್ಷಣೆಗೆ ಭಾರತ ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಜನಭಾಗಿಧಾರಿಯೊಂದಿಗೆ ಜನಕಲ್ಯಾಣ ನಮ್ಮ ಧೋರಣೆ, ಸಿದ್ಧಾಂತ ಎಂದು ಮೋದಿ ತಿಳಿಸಿದರು.

  • ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮರಾಠಿ ಸದಸ್ಯರ ಪುಂಡಾಟ

    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮರಾಠಿ ಸದಸ್ಯರ ಪುಂಡಾಟ

    ಬೆಳಗಾವಿ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಮರಾಠಿ ಭಾಷೆಯ ಸದಸ್ಯರು ಪುಂಡಾಟ ನಡೆಸಿದ್ದು, ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಒತ್ತಾಯ ಮಾಡಿದ್ದಾರೆ.

    ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಜಿ.ಪಂ ಸದಸ್ಯ ಜಯರಾಮ್ ದೇಸಾಯಿ ಸರ್ಕಾರಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡುವಂತೆ ಪಟ್ಟು ಹಿಡಿದರು. ಅಲ್ಲದೇ ಅಧಿಕಾರಿಗಳು ನಮ್ಮ ಮಾತು ಕೇಳದೇ ಭಾಷಾವಾದ ಮಾಡುತ್ತಿದ್ದಾರೆ. ನಮಗೆ ಕನ್ನಡದಲ್ಲಿ ಕೊಟ್ಟ ದಾಖಲೆಗಳು ತಿಳಿಯುತ್ತಿಲ್ಲ. ಅದ್ದರಿಂದ ಕೂಡಲೇ ಮರಾಠಿ ಭಾಷೆಯಲ್ಲಿ ದಾಖಲೆ ನೀಡುವಂತೆ ಅಧಿಕಾರಿಗಳಿಗೆ ಆದೇಶ ನೀಡಲು ಒತ್ತಾಯ ಮಾಡಿದರು. ಆದರೆ ಅವರ ಇದನ್ನು ನಿರಾಕರಿಸಿದ ಅಧ್ಯಕ್ಷರು ಮರಾಠಿಯಲ್ಲಿ ದಾಖಲೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಏಕವಚನ ಪ್ರಯೋಗ:
    ಈ ವೇಳೆ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷರಿಗೆ ಏಕವಚನದಲ್ಲಿ ಮಾತನಾಡಿ ಬಾಯಿಮುಚ್ಚಿ ಎಂದು ಮರಾಠಿ ಸದಸ್ಯೆ ಸರಸ್ವತಿ ಪಾಟೀಲ್ ಉದ್ಧಟತನ ಮೆರೆದರು. ತಮ್ಮ ವ್ಯಾಪ್ತಿಯಲ್ಲಿ ಒಂದು ವಾರದ ಹಿಂದೆ ಗ್ರಾಮಕ್ಕೆ ಚಿರತೆ ಬಂದಾಗ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪ ಮಾಡಿದ ಸರಸ್ವತಿ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಉಪಾಧ್ಯಕ್ಷ ಅರುಣ ಕಟಾಂಬ್ಳೆ ಅವರಿಗೆ ಏಕವಚನದಲ್ಲಿ ಮಾತನಾಡಿ ಸರಸ್ವತಿ ಉದ್ಧಟನ ಮೆರೆದರು.

    ಈ ಮಾತಿಗೆ ಆಕ್ರೋಶಗೊಂಡ ಕನ್ನಡ ಸದಸ್ಯರು ಸಭೆ ನಡುವೆಯೇ ಸರಸ್ವತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಉಪಾಧ್ಯಕ್ಷರನ್ನು ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಈ ಕುರಿತು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ಸಮಯದಲ್ಲಿ ಮಧ್ಯಪ್ರವೇಶ ಮಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಕ್ಕಳಿಸಿ ಅತ್ತ ಮಹಿಳಾ ಸದಸ್ಯೆ!

    ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಕ್ಕಳಿಸಿ ಅತ್ತ ಮಹಿಳಾ ಸದಸ್ಯೆ!

    ಮಂಡ್ಯ: ಜನಸಾಮಾನ್ಯರ ಕಷ್ಟ ಬಗೆಹರಿಸಬೇಕಾದ ಚುನಾಯಿತ ಸದಸ್ಯರೇ ತಮಗಾಗುತ್ತಿರುವ ಕಷ್ಟ ಹೇಳಿಕೊಂಡು ಬಿಕ್ಕಳಿಸಿ ಅತ್ತ ಘಟನೆ ಮಂಡ್ಯ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.

    ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಂದಮ್ಮ ಎಂಬವರು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಎದುರು ಕಣ್ಣೀರು ಹಾಕಿ ತಮ್ಮ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

    ಏನಿದು ಘಟನೆ: ನಾಗಮಂಗಲ ತಾಲ್ಲೂಕಿನ, ಶಿಕಾರಿಪುರ ಗ್ರಾಮದ ಹಾಸ್ಟೆಲ್ ವಾರ್ಡನ್‍ಗಳಾದ ಲೋಕೇಶ್ ಮತ್ತು ಪಾರ್ವತಿ ಎಂಬವರು ರೌಡಿಗಳ ಮೂಲಕ ನನಗೆ ಧಮ್ಕಿ ಹಾಕಿಸಿದ್ದಾರೆ ಎಂದು ಸುನಂದಮ್ಮ ಆರೋಪಿಸಿದ್ದಾರೆ. ಅನಗತ್ಯವಾಗಿ ತಮ್ಮಗೆ ಕಿರುಕುಳ ನೀಡುತ್ತಿರುವ ಕುರಿತು ಎರಡು ವರ್ಷದಿಂದ ದೂರು ಸಲ್ಲಿಸುತ್ತಿದ್ದರು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುನಂದಮ್ಮ ಆರೋಪಿಸಿದ್ದಾರೆ.

    ಸಭೆಯಲ್ಲಿ ಈ ಕುರಿತು ಎಲ್ಲರ ಎದುರು ವಿಷಯ ಪ್ರಸ್ತಾಪಿಸಿದ ಸುನಂದಮ್ಮ ಅವರು ದುಃಖ ತಡೆಯಲಾಗದೇ ಕಣ್ಣೀರು ಹಾಕಿದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಕೆಲ ಸದಸ್ಯರು ಸುನಂದಮ್ಮ ಪರ ಧ್ವನಿಗೂಡಿಸಿದ್ದು, ಕೊನೆಗೆ ಎಲ್ಲ ಸದಸ್ಯರು ಸೇರಿ ಅವರನ್ನು ಸಮಾಧಾನ ಪಡಿಸಿದ್ದಾರೆ. ಅಲ್ಲದ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿದ ಮಹಿಳಾ ಕಾರ್ಪೊರೇಟರ್

    ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿದ ಮಹಿಳಾ ಕಾರ್ಪೊರೇಟರ್

    ವಿಜಯಪುರ: ಮಹಾನಗರ ಪಾಲಿಕೆ ಸದಸ್ಯೆಯೊಬ್ಬರು ರಾಷ್ಟ್ರಗೀತೆ ಹಾಡುವಾಗ ನಿದ್ರೆಗೆ ಜಾರಿ ಅಗೌರವ ತೋರಿದ ಘಟನೆ ವಿಜಯಪುರಲ್ಲಿ ನಡೆದಿದೆ.

    ಆರು ತಿಂಗಳ ನಂತರ ಇಂದು ವಿಜಯಪುರ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಿತು. ಸಭೆಯ ಪ್ರಾರಂಭದ ಮೊದಲು ರಾಷ್ಟ್ರಗೀತೆ ಹಾಡಲಾಯಿತು. ಆಗ ವಾರ್ಡ್ ಸಂಖ್ಯೆ 25 ರ ಮಹಿಳಾ ಕಾರ್ಪೊರೇಟರ್ ಹೈರೋನಿಸಾ ಅವರು ಎದ್ದು ನಿಂತಿದ್ದರೂ, ನಿದ್ರೆಗೆ ಜಾರಿದ್ದರು.

    ಕಾರ್ಪೊರೇಟರ್ ಹೈರೋನಿಸಾ ಅವರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರಾಷ್ಟ್ರಗೀತೆಗೆ ಅಗೌರವ ತೋರಿದ ಪಾಲಿಕೆ ಮಹಿಳಾ ಕಾರ್ಪೊರೇಟರ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

  • ಅಧಿಕಾರಿ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ – ಏರು ಧ್ವನಿಯಲ್ಲೇ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿಇಓ

    ಅಧಿಕಾರಿ ವಿರುದ್ಧ ರೇಣುಕಾಚಾರ್ಯ ಕೆಂಡಾಮಂಡಲ – ಏರು ಧ್ವನಿಯಲ್ಲೇ ಉತ್ತರಿಸಿದ ಜಿಲ್ಲಾ ಪಂಚಾಯತ್ ಸಿಇಓ

    ದಾವಣಗೆರೆ: ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ರೇಣುಕಾಚಾರ್ಯ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡರಾಗಿದ್ದು, ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಏರು ಧ್ವನಿಯಲ್ಲೇ ಉತ್ತರ ನೀಡಿದ್ದಾರೆ.

    ಇಂದು ನಗರದಲ್ಲಿ ನಡೆಸಿದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಶಾಸಕ ರೇಣುಕಾಚಾರ್ಯ, ಜಿಲ್ಲಾ ಸಿಇಓ ಸಿ.ಅಶ್ವತಿ ಅವರು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿಲ್ಲ. ಯಾವ ಜನಪ್ರತಿನಿಧಿಗಳ ಫೋನ್ ಕರೆ ಸ್ವೀಕರಿಸುತ್ತಿಲ್ಲ. ಜಿಲ್ಲಾ ಪಂಚಾಯತ್ ನ ಯಾವುದೇ ಕೆಲಸ ಆಗಲಿ ಸಿಇಓ ಅನುಮತಿ ಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಫೈಲನ್ನು ನಿಗಧಿತ ಸಮಯದಲ್ಲಿ ಕಳುಹಿಸುವುದಿಲ್ಲ. ನಿಮ್ಮ ದರ್ಬಾರ್ ಏನು ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಶಾಸಕರ ಮಾತಿಗೆ ಸಭೆಯಲ್ಲೇ ತಿರುಗೇಟು ಕೊಟ್ಟ ಸಿಇಓ ಅಧಿಕಾರಿ ಅಶ್ವತಿ ಅವರು, ನಾನು ಜನಪ್ರತಿನಿಧಿಗಳಿಗೆ ಗೌರವ ಕೊಡುತ್ತಿದ್ದೇನೆ. ಯಾರಿಗೂ ಅಗೌರವ ತೋರುತ್ತಿಲ್ಲ. ನಾನು ಆ ರೀತಿ ನಡೆದುಕೊಂಡಿಲ್ಲ. ನನ್ನ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ ಎಂದು ಏರುಧ್ವನಿಯಲ್ಲೇ ಪ್ರತ್ಯುತ್ತರ ನೀಡಿದ್ದಾರೆ.

    ಮಾಧ್ಯಮಗಳಿಗೆ ಪತ್ರಿಕ್ರಿಯೆ ನೀಡಿದ ರೇಣುಕಾಚಾರ್ಯ ಅವರು, ಅಧಿಕಾರಿಗಳ ವಿರುದ್ಧ ನಾನು ವಾಗ್ದಾಳಿ ನಡೆಸಿಲ್ಲ. ಆದರೆ ಅಧಿಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ತಿಳಿಸಿದ್ದು ಎಲ್ಲಾ ಚುನಾಯಿತ ಸದಸ್ಯರು ಈ ಕುರಿತು ದೂರು ನೀಡಿದ್ದಾರೆ. ಅದ್ದರಿಂದ ಅವರಿಗೆ ಈ ಕುರಿತು ಹೇಳಿದ್ದೇನೆ ಅಷ್ಟೇ ಎಂದು ಸ್ಪಷ್ಟನೆ ನೀಡಿದರು. ಸಾಮಾನ್ಯ ಸಭೆಯಲ್ಲಿ ಜಿಲ್ಲೆಯ ಶಾಸಕರು ಸೇರಿದಂತೆ, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.