Tag: ಸಾಧ್ವಿ ಪ್ರಜ್ಞಾ

  • ದಾವೂದ್ ಇಬ್ರಾಹಿಂ ಸಹೋದರನ ಕಡೆಯಿಂದ ಸಾಧ್ವಿ ಪ್ರಜ್ಞಾ ಠಾಕೂರ್‌ಗೆ ಕೊಲೆ ಬೆದರಿಕೆ

    ದಾವೂದ್ ಇಬ್ರಾಹಿಂ ಸಹೋದರನ ಕಡೆಯಿಂದ ಸಾಧ್ವಿ ಪ್ರಜ್ಞಾ ಠಾಕೂರ್‌ಗೆ ಕೊಲೆ ಬೆದರಿಕೆ

    ಭೋಪಾಲ್: ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಶುಕ್ರವಾರ ತಡ ರಾತ್ರಿ ಜೀವ ಬೆದರಿಕೆ ಕರೆ ಬಂದಿದೆ. ವ್ಯಾಟ್ಸಪ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಬೆದರಿಕೆ ಕರೆ ಹಿನ್ನೆಲೆ ಸಾಧ್ವಿ ಪ್ರಜ್ಞಾ ಠಾಕೂರ್ ನಗರದ ಟಿಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‍ನ ಕಡೆಯ ವ್ಯಕ್ತಿ ಎಂದು ಹೇಳಿಕೊಂಡಿರುವ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಂಭಾಷಣೆಯಲ್ಲಿ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆ ಹತ್ಯೆ ಮಾಡುವುದಾಗಿ ಅಪರಿಚಿತ ವ್ಯಕ್ತಿ ಹೇಳಿದ್ದಾನೆ. ಇದನ್ನೂ ಓದಿ: WWE ಸಿಇಒ ಸ್ಥಾನದಿಂದ ಹೊರನಡೆದ ವಿನ್ಸ್ ಮೆಕ್ ಮಹೊನ್

    ಇತ್ತೀಚೆಗೆ ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಹೇಳಿಕೆಯನ್ನು ಸಾಧ್ವಿ ಬೆಂಬಲಿಸಿದ್ದರು. ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಭಾರತ ಹಿಂದೂಗಳದ್ದು, ಸಿನಿಮಾ ಮಾಡುವ ಮೂಲಕ ಹಿಂದೂ ದೇವತೆಗಳ ಮೇಲೆ ಕೆಲವು ಧರ್ಮದ್ರೋಹಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಭಾರತದಲ್ಲಿ ಕೇವಲ ಸನಾತನ ಸಂಸ್ಕೃತಿ ಇರಬೇಕು ಎಂದು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲ್ಲ: ಬಿಸಿ ನಾಗೇಶ್

    Live Tv

  • ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    ಗೋಡ್ಸೆ ದೇಶಭಕ್ತ ಎಂದಿದ್ದಕ್ಕೆ ಕ್ಷಮೆ ಕೇಳಿದ ಸಾಧ್ವಿ ಪ್ರಜ್ಞಾ

    – ರಾಹುಲ್ ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟು

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶ ಭಕ್ತ ಎಂದು ಹೇಳಿ ವಿವಾದ ಸೃಷ್ಟಿ ಮಾಡಿದ್ದ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರು ಕ್ಷಮೆಯಾಚಿಸಿದ್ದಾರೆ.

    ಬುಧವಾರ ಲೋಕಸಭೆಯಲ್ಲಿ ಮಾತನಾಡಿದ್ದ ಸಾಧ್ವಿ ಪ್ರಜ್ಞಾ ನಾಥುರಾಮ್ ಗೋಡ್ಸೆ ಓರ್ವ ದೇಶಭಕ್ತ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಧ್ವಿ ಪ್ರಜ್ಞಾ ಟೆರರಿಸ್ಟ್ ಪ್ರಜ್ಞಾ ಅವರು ಟೆರರಿಸ್ಟ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದರು.

    ಈ ಹೇಳಿಕೆ ವಿಚಾರವಾಗಿ ಸ್ವಪಕ್ಷ ಬಿಜೆಪಿ ಕೂಡ ಸಾಧ್ವಿ ಪ್ರಜ್ಞಾಗೆ ತಪರಾಕಿ ಹಾಕಿ ಕ್ಷಮೆ ಕೋರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಸತ್ತಿನಲ್ಲಿ ಮಾತನಾಡಿದ ಸಾಧ್ವಿ ಪ್ರಜ್ಞಾ, ನನ್ನ ಹೇಳಿಕೆಯಿಂದ ಯಾರಿಗಾದರು ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ನಾನು ಸಂಸತ್ತಿನಲ್ಲಿ ಹೇಳಿದ ಹೇಳಿಕೆಯನ್ನು ತಿರುಚಿ ಅದಕ್ಕೆ ಬೇರೆ ರೂಪ ನೀಡಿದ್ದಾರೆ. ನಾನು ಗಾಂಧೀಜಿ ಅವರು ದೇಶಕ್ಕಾಗಿ ಮಾಡಿರುವ ತ್ಯಾಗವನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಸಂಸತ್ತಿನ ಒಬ್ಬ ಸದಸ್ಯರು ನನ್ನನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾರೆ. ಅದು ನನ್ನ ಘನತೆಗೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತಂದಿದೆ. ನನ್ನ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಆರೋಪಗಳು ಸಾಬೀತಾಗದೆ ಇದ್ದರೂ ಅವರು ಹೀಗೆ ಹೇಳಿರುವುದು ಒಬ್ಬ ಮಹಿಳಾ ಸಂಸದೆ ಮತ್ತು ಸನ್ಯಾಸಿಗೆ ಮಾಡಿರುವ ಅವಮಾನ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ಮಾಡಿದರು.

    ಇದರ ಜೊತೆಗೆ ಸಾಧ್ವಿ ಪ್ರಜ್ಞಾ ಅವರು ಈ ರಾಷ್ಟ್ರಕ್ಕಾಗಿ ಗಾಂಧೀಜಿ ಅವರ ಕೊಡುಗೆಯನ್ನು ನಾನು ಶ್ಲಾಘಿಸುತ್ತೇನೆ. ಒಂದು ಪಕ್ಷ ನನ್ನನ್ನು ಗುರಿಯಾಗಿಸಿಕೊಂಡು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದರು.

    ಈ ಆರೋಪದ ನಂತರ ಲೋಕಸಭೆಯಲ್ಲಿ ಕೆಲಕಾಲ ಕಾಂಗ್ರೆಸ್ ಸಂಸದರು ಸಾಧ್ವಿ ಪ್ರಜ್ಞಾ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಬಿಜೆಪಿ ಸಂಸದ ನಿಷ್ಕಾಂತ್ ದುಬೆ, ಈಗ ಸಾಧ್ವಿ ಪ್ರಜ್ಞಾ ಅವರು ಕ್ಷಮೆ ಕೇಳಿದ್ದಾರೆ. ಆದರೆ ಒಬ್ಬ ಸಂಸದೆಯನ್ನು ಟೆರರಿಸ್ಟ್ ಎಂದು ಹೇಳಿದ ರಾಹುಲ್ ಗಾಂಧಿ ಅವರು ಕ್ಷಮೆ ಕೇಳಬೇಕು. ಇಲ್ಲವಾದರೆ ಸ್ಪೀಕರ್ ಅವರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಅಗ್ರಹಿಸಿದರು.

    ಏನಿದು ವಿವಾದ?
    ಬುಧವಾರ ಸಂಸತಿನಲ್ಲಿ ಡಿಎಂಕೆ ಸಂಸದ ಎ.ರಾಜಾ ಅವರು ವಿಶೇಷ ಭದ್ರತಾ ಪಡೆ (ಎಸ್‍ಪಿಜಿ) ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಏಕೆ ಕೊಲೆ ಮಾಡಿದರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯೆ ಪ್ರವೇಶಿಸಿ, ದೇಶಭಕ್ತನ ಉದಾಹರಣೆಯನ್ನು ನೀವು ಈ ಸಂದರ್ಭದಲ್ಲಿ ಕೊಡಬೇಡಿ ಎಂದು ಕಿಡಿಕಾರಿದ್ದರು.

    ಇದನ್ನು ಸ್ವತಃ ಗೋಡ್ಸೆ ಒಪ್ಪಿಕೊಂಡಿದ್ದಾರೆ. 32 ವರ್ಷಗಳಿಂದ ಗಾಂಧಿ ಮೇಲೆ ದ್ವೇಷ ಇತ್ತು ಹೀಗಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧಿಯವರ ವಿಚಾರಧಾರೆಗಳು ಪ್ರತ್ಯೇಕವಾಗಿದ್ದರಿಂದ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ರಾಜಾ ಅವರು ಲೋಕಸಭೆಯ ಕಲಾಪದಲ್ಲಿ ತಿಳಿಸಿದ್ದರು. ರಾಜಾ ಅವರು ಮಾತನಾಡುತ್ತಿದ್ದ ವೇಳೆ ಸಾಧ್ವಿ ಪ್ರಜ್ಞಾ ಸಿಂಗ್ ಮಧ್ಯ ಪ್ರವೇಶಿಸಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಪ್ರತಿಭಟನೆ ನಡೆಸಲು ಪ್ರಾರಂಭಿಸಿದರು. ಆಗ ಬಿಜೆಪಿ ಸಂಸದರು ಸಾಧ್ವಿಯವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದ್ದರು.

  • ಗಾಂಧಿ ದೇಶದ ಮಗ – ವಿವಾದಕ್ಕೀಡಾದ ಸಾಧ್ವಿ ಪ್ರಜ್ಞಾ ಸಿಂಗ್

    ಗಾಂಧಿ ದೇಶದ ಮಗ – ವಿವಾದಕ್ಕೀಡಾದ ಸಾಧ್ವಿ ಪ್ರಜ್ಞಾ ಸಿಂಗ್

    ಭೋಪಾಲ್: ತಮ್ಮ ವಿವಾದಾತ್ಮಕ ಹೇಳಿಕೆಯಿಂದಲೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಹಾತ್ಮ ಗಾಂಧೀಜಿಯವರು ದೇಶದ ಮಗ ಎಂದು ಹೇಳಿಕೆ ನೀಡುವ ಮೂಲಕ ಸಾಧ್ವಿ ಅವರು ವಿವಾದಕ್ಕೀಡಾಗಿದ್ದಾರೆ.

    ಇಂದು ಭೋಪಾಲ್‍ನ ರೈಲ್ವೆ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರನ್ನು ದೇಶದ ಮಗ. ಅವರು ಮಾಡಿರುವ ಒಳ್ಳೆಯ ಕೆಲಸವನ್ನು ನಾನು ಮೆಚ್ಚುತ್ತೇನೆ. ಅವರು ರಾಷ್ಟ್ರಕ್ಕಾಗಿ ಮಾಡಿರುವ ಒಳ್ಳೆಯ ಕೆಲಸವನ್ನು ನಾನು ಪ್ರಶಂಸಿಸುತ್ತೇನೆ. ನಾನು ಕೂಡ ಗಾಂಧೀಜಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತೇನೆ. ಅವರ ಒಳ್ಳೆಯ ಕೆಲಸವನ್ನು ನಾವು ಕೂಡ ಹೊಗಳುತ್ತೇವೆ. ಅವರು ಮಾಡಿದ ಕೆಲಸವನ್ನು ನಾವೂ ಅನುಸರಿಸುತ್ತೇವೆ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ. ಇದನ್ನು ಓದಿ: ಗೋಡ್ಸೆಯಿಂದ ಗಾಂಧೀಜಿ ದೇಹ ಹತ್ಯೆ, ಪ್ರಜ್ಞಾಸಿಂಗ್‍ರಿಂದ ಆತ್ಮದ ಕೊಲೆ: ಕೈಲಾಶ್ ಸತ್ಯಾರ್ಥಿ

    ಮಹಾತ್ಮ ಗಾಂಧೀಜಿ ಅವರು 150ನೇ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿಯಿಂದ ರಾಷ್ಟ್ರವ್ಯಾಪಿ ಗಾಂಧಿ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆಯಲ್ಲಿ ಬಿಜೆಪಿಯ ಹಲವಾರು ನಾಯಕರು ಭಾಗವಹಿಸಿದ್ದಾರೆ. ಸ್ವತಃ ಪ್ರಧಾನಿ ಮೋದಿ ಅವರೇ ಗಾಂಧೀಜಿ ಅವರ ಆದರ್ಶಗಳನ್ನು ಜನಪ್ರಿಯಗೊಳಿಸುವ ಸಲುವಾಗಿ ಬಾಲಿವುಡ್ ಸ್ಟಾರ್ ಗಳ ಜೊತೆ ಸಂವಾದ ನಡೆಸಿದ್ದಾರೆ. ಆದರೆ ಸಾಧ್ವಿ ಪ್ರಜ್ಞಾ ಮಾತ್ರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.

    ಇದೇ ವೇಳೆ ಸಾಧ್ವಿ ಪ್ರಜ್ಞಾ ಅವರನ್ನು ನೀವು ಯಾಕೆ ಮಹಾತ್ಮ ಗಾಂಧೀಜಿ ಅವರ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿಲ್ಲ ಎಂದು ಕೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಾಧ್ವಿ ಪ್ರಜ್ಞಾ ನಾನು ಗಾಂಧಿಯನ್ನು ಮೆಚ್ಚುತ್ತೇನೆ ಅವರ ಒಳ್ಳೆಯ ಕೆಲಸವನ್ನು ಪ್ರಶಂಸೆ ಮಾಡುತ್ತೇನೆ. ಆದರೆ ನೀವು ಕೇಳಿದ ಎಲ್ಲ ಪ್ರಶ್ನೆಗಳಿಗೂ ವಿವರಣೆ ನೀಡುವ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ. ಇದನ್ನು ಓದಿ: ಗೋಡ್ಸೆ ಒಬ್ಬರನ್ನು ಕೊಂದ್ರೆ ರಾಜೀವ್ ಕೊಂದಿದ್ದು 17 ಸಾವಿರ – ಕ್ಷಮೆ ಕೇಳಿದ ಕಟೀಲ್

    2019 ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ ಸಾಧ್ವಿ ಪ್ರಜ್ಞಾ ಇದಕ್ಕೂ ಮುನ್ನ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ವಿಚಾರವಾಗಿ ಬಿಜೆಪಿ ಸಾಧ್ವಿ ಪ್ರಜ್ಞಾಗೆ ಶೋಕಾಸ್ ನೋಟಿಸ್ ಕೂಡ ನೀಡಿತ್ತು.

  • ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ: ಅಮಿತ್ ಶಾ

    ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ: ಅಮಿತ್ ಶಾ

    ಭೋಪಾಲ್: ಒಬ್ಬ ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎನ್ನುತ್ತ ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಅವರನ್ನು ಭೋಪಾಲ್‍ನಿಂದ ಕಣಕ್ಕಿಳಿಸಿರುವುದನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ.

    ಮಧ್ಯಪ್ರದೇಶದ ಛತ್ರಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಹಿಂದೂ ಎಂದಿಗೂ ಭಯೋತ್ಪಾದಕನಾಗಲು ಸಾಧ್ಯವಿಲ್ಲ. ಸನಾತನ ಸಂಸ್ಕೃತಿ ಎಂದಿಗೂ, ಯಾರಿಗೂ ಹಾನಿ ಮಾಡಿಲ್ಲ. ಆದ್ರೆ ಕಾಂಗ್ರೆಸ್ ನಾಯಕರು ಹಿಂದೂಗಳಿಗೆ ಉಗ್ರವಾದದ ಹಣೆಪಟ್ಟಿ ಕಟ್ಟಿದ್ದಾರೆ. ಸಾಧ್ವಿ ಪ್ರಜ್ಞಾ ಅವರು ಭೋಪಾಲ್‍ನಿಂದ ಕಣಕ್ಕಿಳಿಯುತ್ತಿರುವುದು ಈ ಆರೋಪಗಳ ವಿರುದ್ಧ ನಾವು ಮಾಡುತ್ತಿರುವ ಸತ್ಯಾಗ್ರಹ ಎಂದು ಕಿಡಿಕಾರಿದರು.

    ಮಧ್ಯಪ್ರದೇಶದ ಜನರು ದಿಗ್ಗಿ ರಾಜನಿಗಾಗಿ ಕಾಯುತ್ತಿದ್ದು, ಹಿಂದೂ ವಿರುದ್ಧ ಉಗ್ರ ಹೇಳಿಕೆ ನೀಡಿರುವುದಕ್ಕೆ ಅವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ. ಆದರೆ ತಾಯಿ ಭಾರತಿಯ ಭದ್ರತೆಯೇ ಬಿಜೆಪಿಯ ಮೊದಲ ಆದ್ಯತೆ ಎಂದು ಹೇಳಿ ಕಾಂಗ್ರೆಸ್ ಹಿರಿಯ ನಾಯಕ, ಭೋಪಾಲ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ವಿರುದ್ಧ ಹರಿಹಾಯ್ದರು.

    55 ವರ್ಷದಲ್ಲಿ ಕಾಂಗ್ರೆಸ್ ಮಾಡದ ಕೆಲಸವನ್ನು ಬಿಜೆಪಿ 5 ವರ್ಷದಲ್ಲಿ ಮಾಡಿದೆ. ಹಲವು ಅಭಿವೃದ್ಧಿ ಕೆಲಸವನ್ನು ನಮ್ಮ ಸರ್ಕಾರ ದೇಶದಲ್ಲಿ ಮಾಡಿದೆ ಎಂದರು. ಹಾಗೆಯೇ ಮಧ್ಯ ಪ್ರದೇಶ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರೈತರು ಸಲ್ಲಿರುವ ಅರ್ಜಿ ಪಟ್ಟಿಯನ್ನು ಕೇಂದ್ರಕ್ಕೆ ನೀಡಿಲ್ಲ. ಈ ಮೂಲಕ ರೈತರಿಗೆ ಈ ಯೊಜನೆಯಡಿಯಲ್ಲಿ ಬರುವ ಹಣದಿಂದ ದೂರವಿಡಲಾಗುತ್ತಿದೆ. ಯೋಜನೆಯ ಲಾಭ ಈ ಭಾಗದ ರೈತರು ಪಡೆದರೆ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹೆಚ್ಚಾಗುತ್ತೆ ಎಂದು ಹೀಗೆ ಮಾಡುತ್ತಿದ್ದಾರೆ ಎಂದು ಮಧ್ಯ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    2008ರ ಮಾಲೆಗಾಂವ್ ಸ್ಫೋಟದಲ್ಲಿ ಆರೋಪಿಯಾಗಿ ಬಂಧಿತರಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರನ್ನು ಬಿಜೆಪಿ ಭೋಪಾಲ್ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಭೋಪಾಲ್‍ನಲ್ಲಿ ಮೇ 12ಕ್ಕೆ ಚುನಾವಣೆ ನಡೆಯಲಿದೆ.