Tag: ಸಾಗುವಳಿ ಪತ್ರ

  • ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ದೋಸ್ತಿ- ಕುಣಿಗಲ್‍ನಲ್ಲಿ ಕುಸ್ತಿ

    ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್ ದೋಸ್ತಿ- ಕುಣಿಗಲ್‍ನಲ್ಲಿ ಕುಸ್ತಿ

    ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ದೋಸ್ತಿ ಸರ್ಕಾರ ರಚನೆ ಮಾಡಿಕೊಂಡಿದೆ. ಆದರೆ ಜಿಲ್ಲೆಯ ಕುಣಿಗಲ್‍ನಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧವೇ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ಸಾಗುವಳಿ ಚೀಟಿ ವಿತರಣೆಯಲ್ಲಿ ಶಾಸಕ ಡಾ.ರಂಗನಾಥ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಕುಣಿಗಲ್‍ನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಹಶೀಲ್ದಾರ್ ಕಚೇರಿಗೆ ಜಾನುವಾರುಗಳನ್ನು ನುಗ್ಗಿಸಿ ಧರಣಿ ಕುಳಿತು, ಶಾಸಕರ ವಿರುದ್ಧ ಘೋಷಣೆ ಕೂಗಿದರು.

    ಜೆಡಿಎಸ್‍ಗೆ ಹೆಚ್ಚು ಮತದಾನ ಮಾಡಿದ ಗ್ರಾಮಗಳ ರೈತರಿಗೆ ಸಾಗುವಳಿ ಚೀಟಿ ನೀಡದೇ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ವಂಚಿಸುತ್ತಿದ್ದಾರೆ. ತಮಗೆ ಹೆಚ್ಚು ಮತದಾನ ಮಾಡಿದ ಭೂತ್ ಮಟ್ಟದ ರೈತರಿಗೆ ಮಾತ್ರ ಸಾಗುವಳಿ ಚೀಟಿ ವಿತರಿಸುತ್ತಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

    ನಮ್ಮ ನಾಯಕ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಒಂದು ವೇಳೆ ನಾವು ಪ್ರತಿಭಟನೆ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ ಅಂತ ಸುಮ್ಮನಿದ್ವಿ. ಆದರೆ ಶಾಸಕರು ನೀವು ಯಾವ ಪಕ್ಷಕ್ಕೆ ಮತ ಹಾಕಿದ್ದೀರಾ? ಯಾರಿಗೆ ಬೆಂಬಲ ನೀಡಿದ್ದೀರಾ ಅಂತ ರೈತರನ್ನು ಪ್ರಶ್ನಿಸುತ್ತಿದ್ದಾರೆ. ಕೇವಲ ಕಾಂಗ್ರೆಸ್ಸಿನ ಕಾರ್ಯಕರ್ತರನ್ನು ಕರೆಸಿಕೊಂಡು ಸರ್ಕಾರದ ಯೋಜನೆಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಟ್ಟ ರಾಜಕೀಯ ವ್ಯವಸ್ಥೆ ವಿರುದ್ಧ ನಾವು ಹೋರಾಡುತ್ತಿದ್ದೇವೆ ಎಂದು ಜೆಡಿಎಸ್ ಸ್ಥಳೀಯ ಮುಖಂಡ ಜಗದೀಶ್ ದೂರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv