Tag: ಸಾಕ್ಷ್ಯಚಿತ್ರ

  • ಕಾಳಿಗೆ ಅವಮಾನ – ಸಾಕ್ಷ್ಯಚಿತ್ರ ಪ್ರದರ್ಶನ ಮಾಡದಂತೆ ಸೂಚನೆ

    ಕಾಳಿಗೆ ಅವಮಾನ – ಸಾಕ್ಷ್ಯಚಿತ್ರ ಪ್ರದರ್ಶನ ಮಾಡದಂತೆ ಸೂಚನೆ

    ಒಟ್ಟಾವಾ: ಭಾರತೀಯ ಸಿನಿಮಾ ರಂಗದ ಖ್ಯಾತ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರು ಕಾಳಿ ಕುರಿತಾಗಿ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆ ಪೋಸ್ಟರ್ ಭಾರೀ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಸಾಕ್ಷ್ಯಚಿತ್ರ ಬಿಡುಗಡೆ ಮಾಡದಂತೆ ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

    ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಪೋಸ್ಟರ್ ಮೂಲಕ ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ನಂತರ ಈ ಬಗ್ಗೆ ಕೆನಡದಲ್ಲಿರುವ ಹಿಂದೂಗಳು ಭಾರತೀಯ ರಾಯಭಾರ ಕಚೇರಿ ಮಧ್ಯಪ್ರವೇಶಿಸಬೇಕು. ಸಾಕ್ಷ್ಯಚಿತ್ರ ಬಿಡುಗಡೆ ಮಾಡಲು ಅವಕಾಶ ನೀಡಬಾರದೆಂದು ದನಿ ಎತ್ತಿದ್ದರು. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು, ಮತ್ತೊಂದು ಕೈಯಲ್ಲಿ ಎಲ್ಜಿಬಿಟಿಕ್ಯೂ ಧ್ವಜ : ಭುಗಿಲೆದ್ದ ಆಕ್ರೋಶ

    ಈ ಬಗ್ಗೆ ಪತ್ರದ ಮೂಲಕ ಸ್ಪಷ್ಟಪಡಿಸಿರುವ ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿ, ಕಾಳಿ ಚಿತ್ರದಲ್ಲಿ ಹಿಂದೂಗಳ ದೇವತೆಗೆ ಅವಮಾನ ಮಾಡಲಾಗಿದೆ ಎಂದು ಇಲ್ಲಿರುವ ಹಿಂದೂ ಸಮುದಾಯದವರಿಂದ ದೂರು ಬಂದಿದೆ. ಹಾಗಾಗಿ ಸಾಕ್ಷ್ಯಚಿತ್ರ ಬಿಡುಗಡೆ ಮಾಡದಿರಲು ಕಾರ್ಯಕ್ರಮದ ಸಂಯೋಜಕರಿಗೆ ರಾಯಭಾರ ಕಚೇರಿ ಸೂಚಿಸಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ಮೇಲೆ ಹಲವು ದೂರು ದಾಖಲು

    ಲೀನಾ ಅವರು ಕಾಳಿ ಕುರಿತಾಗಿ ಸಾಕ್ಷ್ಯ ಚಿತ್ರ ಮಾಡಿದ್ದು, ಕಾಳಿಯ ಒಂದು ಕೈಲಿ ಸಿಗರೇಟು ಮತ್ತೊಂದು ಕೈಲಿ ಎಲ್ಜಿಬಿಟಿಕ್ಯೂ ಧ್ವಜವನ್ನು ನೀಡಲಾಗಿದೆ. ಈ ಪೋಸ್ಟರ್ ಅನ್ನು ಶೇರ್ ಮಾಡಿರುವ ಲೀನಾ, ಈ ಸಾಕ್ಷ್ಯ ಚಿತ್ರವು ಕೆನಡಾ ಫಿಲ್ಮ್ ಫೇಸ್ಟಿವಲ್‍ನಲ್ಲಿ ಬಿಡುಗಡೆ ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ಈ ಪೋಸ್ಟರ್ ಕುರಿತಾಗಿ ಆಕ್ರೋಶ ಕೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ಭಾರತ ದೇಶ ತೊರೆದು, ತನ್ನದೇ ಆದ ದೇಶ ಕಟ್ಟಿಕೊಂಡು ವಾಸಿಸುತ್ತಿರುವ ಬಿಡದಿಯ ನಿತ್ಯಾನಂದ ಕುರಿತಾಗಿ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಾಣ ಮಾಡಿದೆ ಡಿಸ್ಕವರಿ ಪ್ಲಸ್ ಓಟಿಟಿ. ನಿನ್ನೆಯಷ್ಟೇ  ಈ ಡಾಕ್ಯುಮೆಂಟರಿಯನ್ನು ಅದು ಬಿಡುಗಡೆ ಮಾಡಿದೆ. ಈ ಸಾಕ್ಷ್ಯ ಚಿತ್ರದಲ್ಲಿ ನಿತ್ಯಾನಂದ ನಿಜವಾಗಿಯೂ ದೇವಮಾನವನೋ ಅಥವಾ ವಂಚಕನೋ ಎನ್ನುವುದನ್ನು ಸಾದರಪಡಿಸಲಿದೆಯಂತೆ.

    ನಿತ್ಯಾನಂದ ಕುರಿತಾಗಿ ಹಲವಾರು ಕಥೆಗಳಿವೆ. ಅವನ ಮೇಲೆ ಅತ್ಯಾಚಾರ ಆರೋಪ ಕೂಡ ಹೊರಿಸಲಾಗಿತ್ತು. ಆಶ್ರಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎನ್ನುವ ಆರೋಪ ಕೂಡ ಇತ್ತು. ಅಲ್ಲದೇ, ನಟಿಯೊಬ್ಬರ ಅಶ್ಲೀಲ ವಿಡಿಯೋ ಕೂಡ ರಿಲೀಸ್ ಆಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇದೆಲ್ಲವನ್ನೂ ಸಾಕ್ಷ್ಯ ಚಿತ್ರದಲ್ಲಿ ಸೆರೆ ಹಿಡಿಲಾಗಿದೆಯಂತೆ. ಇದನ್ನೂ ಓದಿ :  ಪಠ್ಯಪುಸ್ತಕದಲ್ಲಿ ನಮ್ಮ ರಾಜರ ಬಗ್ಗೆ 2 ಸಾಲು, ಮೊಘಲರ ಬಗ್ಗೆ ಜಾಸ್ತಿ ಉಲ್ಲೇಖ: ಅಕ್ಷಯ್ ಕುಮಾರ್

    ನಿನ್ನಯಿಂದ ಡಿಸ್ಕವರಿ ಪ್ಲಸ್ ಓಟಿಟಿಯಲ್ಲಿ ರಿಲೀಸ್ ಆಗಿರುವ ಸಾಕ್ಷ್ಯ ಚಿತ್ರಕ್ಕೆ ‘ಮೈ ಡಾಟರ್ ಜಾಯಿನ್ಡ್ ಎ ಕಲ್ಟ್’ ಎಂದು ಹೆಸರಿಡಲಾಗಿದೆ. ಮಗಳನ್ನು ಹುಡುಕಿಕೊಂಡು ಬರುವ ತಂದೆಯೊಬ್ಬ, ಮಗಳಿಗೆ ಹೇಗೆಲ್ಲ ಅನ್ಯಾಯವಾಗಿದೆ ಎನ್ನುವುದನ್ನು ಹೇಳುತ್ತಾ ಹೋಗುವ ಸಾಕ್ಷ್ಯ ಚಿತ್ರ ಇದಾಗಿದೆ ಅಂತೆ. ಒಟ್ಟು ಮೂರು ಕಂತುಗಳಲ್ಲಿ ಈ ಸಾಕ್ಷ್ಯ ಚಿತ್ರ ಪ್ರಸಾರವಾಗಲಿದೆ ಎಂದು ವಾಹಿನಿ ಹೇಳಿಕೊಂಡಿದೆ.

    ವೈಸ್ ಮೀಡಿಯಾ ಗ್ರೂಪ್ ನ ಜಾಗತಿಕ ಉತ್ಪಾದನಾ ವಿಭಾಗವಾದ ವೈಸ್ ಸ್ಟುಡಿಯೋಸ್ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದು, ಇದಕ್ಕೆ ವಕೀಲರು, ಭಕ್ತರು, ಪತ್ರಕರ್ತರು ಹೀಗೆ ಸಾಕಷ್ಟು ಜನರು ಸಹಾಯ ಮಾಡಿದ್ದಾರಂತೆ. ಅವರೆಲ್ಲ ನೀಡಿದ ಮಾಹಿತಿಯನ್ನು ಬಳಸಿಕೊಂಡು ಈ ಸಾಕ್ಷ್ಯ ಚಿತ್ರವನ್ನು ತಯಾರು ಮಾಡಲಾಗಿದೆ ಎಂದಿದ್ದಾರೆ ಕಂಟೆಂಟ್ ವಿಭಾಗದ ಮುಖ್ಯಸ್ಥ ಸಾಯಿ ಅಭಿಷೇಕ್. ಇದನ್ನೂ ಓದಿ : ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

    ಈ ಕುರಿತು ಮಾತನಾಡಿರುವ ವೈಸ್ ಸ್ಟುಡಿಯೋಸ್ ನ ಸಮೀರಾ ಕನ್ವರ್, ‘ನಿತ್ಯಾನಂದ ಸ್ವಾಮಿಯ ಬಗ್ಗೆ ಯಾವುದೇ ರೀತಿಯಲ್ಲಿ ಕಾಂಪ್ರಮೈಸ್ ಆಗದೇ, ಅಲ್ಲಿ ನಡೆದ ಘಟನೆಯನ್ನು ಹಾಗೆಯೇ ಹಸಿಹಸಿಯಾಗಿ ಕಟ್ಟಿಕೊಟ್ಟಿದ್ದೇವೆ. ದಾಖಲೆಗಳ ಸಮೇತ ವಿವರಿಸಿದ್ದೇವೆ’ ಎಂದು ಹೇಳಿದ್ದಾರೆ.

  • ಬಂಡೀಪುರದಲ್ಲಿ ರಜನಿ, ಅಕ್ಷಯ್

    ಬಂಡೀಪುರದಲ್ಲಿ ರಜನಿ, ಅಕ್ಷಯ್

    – ಮೂರು ದಿನ ಶೂಟಿಂಗ್, 17 ಕಂಡೀಷನ್

    ಚಾಮರಾಜನಗರ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್‍ನ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಹರಿಸಲಿದ್ದಾರೆ.

    ರಜನಿಕಾಂತ್ ಒಂದು ದಿನ ಹಾಗೂ ಅಕ್ಷಯ್ ಕುಮಾರ್ ಮೂರು ದಿನಗಳ ಕಾಲ ರಾಜ್ಯದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಹರಿಸಲಿದ್ದಾರೆ. ಇತ್ತೀಚಿಗೆ ಮಾನವ ಅಭಿವೃದ್ದಿಯಿಂದಾಗಿ ಕಾಡು ಪ್ರಾಣಿಗಳ ಸಂತತಿ ಅಪಾಯದ ನಷ್ಟದಲ್ಲಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮಾನವ-ವನ್ಯಜೀವಿ ಸಂಘರ್ಷ ಸಾಕ್ಷ್ಯಚಿತ್ರದಲ್ಲಿ ಅಭಿನಯಿಸಲು ಈ ಸ್ಟಾರ್‌ಗಳು ಆಗಮಿಸಿದ್ದಾರೆ.


    ಈಗಾಗಲೇ ತಲೈವಾ ರಜನಿಕಾಂತ್ ಆಗಮಿಸಿದ್ದಾರೆ. ಇಂದು ಆಕ್ಷಯ್ ಕುಮಾರ್ ಆಗಮಿಸಬೇಕಾಗಿದೆ. ಅವರು ಬಂದ ನಂತರ ಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಮೂಲದ ಪ್ರಕಾರ ಬಿಲ್‍ಗ್ರೇಸ್ ಸಹ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

    ಮುಂಬೈನ ಬೆನಿಜಾಯ್ ಏಶಿಯಾ ಗ್ರೂಪ್ ಸೆವೆನ್‍ಸ್ಟಾರ್ ಟಾರಸ್ ಈ ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಬಂಡೀಪುರದಲ್ಲಿ ಚಿತ್ರೀಕರಣದ ಸಿದ್ಧತೆ ಪೂರ್ಣಗೊಂಡಿದೆ. ಗುಂಡ್ಲುಪೇಟೆ ಹೊರಭಾಗದಲ್ಲಿ ಹೆಲಿಪ್ಯಾಡ್ ಸಹ ನಿರ್ಮಿಸಲಾಗಿದೆ.

    ಮೂರು ದಿನ ಶೂಟಿಂಗ್, 17 ಕಂಡೀಷನ್:
    ನಿರ್ದೇಶಕ ಬೇಲ್‍ಗ್ರೆಸ್ ನೇತೃತ್ವದಲ್ಲಿ ನಡೆಯಲಿರುವ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನೇತೃತ್ವದಲ್ಲಿ ನಡೆಯಲಿರುವ ಶೂಟಿಂಗ್ ಬಂಡೀಪುರದಲ್ಲಿ ನಡೆಯುತ್ತಿದೆ. ಮೂರು ದಿನಗಳ ಕಾಲ ನಡೆಯಲಿರುವ ಶೂಟಿಂಗ್‍ಗೆ ಅನುಮತಿ ನೀಡಲು 17 ಕಂಡೀಷನ್ ವಿಧಿಸಲಾಗಿದೆ. ಶಬ್ದಮಾಲಿನ್ಯ, ವಾಯುಮಾಲಿನ್ಯ, ಬೆಂಕಿ ಅನಾಹುತ ನಡೆಯದಂತೆ ನೋಡಿಕೊಳ್ಳುವ 17 ಕಂಡೀಷನ್ ವಿಧಿಸಿ ಅನುಮತಿ ನೀಡಲಾಗಿದೆ. ಜನವರಿ 27 ರಿಂದ ಜನವರಿ 29 ರವರೆಗೆ ಅರಣ್ಯ ಇಲಾಖಾಧಿಕಾರಿಗಳ ಸಮಕ್ಷಮದಲ್ಲಿ ಬಂಡೀಪುರದ ಹುಲಿ ಸಂರಕ್ಷಿತಾರಣ್ಯದಲ್ಲಿ ಶೂಟಿಂಗ್ ನಡೆಯಲಿದೆ.

  • ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯವನ್ನು ಅರ್ಧದಲ್ಲೇ ಕೈಬಿಟ್ಟ ಸ್ಪೀಕರ್!

    ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯವನ್ನು ಅರ್ಧದಲ್ಲೇ ಕೈಬಿಟ್ಟ ಸ್ಪೀಕರ್!

    ಹಾವೇರಿ: ಸ್ಪೀಕರ್ ಕೆ.ಬಿ ಕೋಳಿವಾಡ ಒಂದಲ್ಲಾ ಒಂದು ವಿವಾದದಲ್ಲಿ ಸುದ್ದಿಯಾಗುತ್ತಾರೆ. ಮೊನ್ನೆ-ಮೊನ್ನೆಯಷ್ಟೇ ವಿಧಾನಸೌಧದ ವಜ್ರಮಹೋತ್ಸವದ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಆತುರದ ನಿರ್ಧಾರ ತೆಗೆದುಕೊಂಡಿದ್ದರು. ಈಗ ರಾಣೇಬೆನ್ನೂರು ಕ್ಷೇತ್ರದಲ್ಲೂ ಒಂದು ಎಡವಟ್ಟು ಮಾಡಿದ್ದಾರೆ.

    ಸ್ಪೀಕರ್ ಕೆ.ಬಿ ಕೋಳಿವಾಡ ಅವರು ಮುಖ್ಯಮಂತ್ರಿಗಳಿಂದ ಶಹಾಬ್ಬಾಸ್ ಗಿರಿ ಪಡೆಯೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ನವಂಬರ್ 5 ರಂದು ಕೋಳಿವಾಡ ಅವರ ಜನ್ಮದಿನ ಇತ್ತು. ಅಲ್ಲದೇ ಅವತ್ತು ಹಾವೇರಿಯ ಅವರ ಕ್ಷೇತ್ರ ರಾಣೇಬೆನ್ನೂರಿನಲ್ಲಿ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಡೋಕೆ ಸಿಎಂ ಸಾಹೇಬ್ರು ಬಂದಿದ್ದರು.

    ಈ ವೇಳೆ ಮುಖ್ಯಮಂತ್ರಿಗಳಿಂದ ಭೇಶ್ ಅನ್ನಿಸಿಕೊಳ್ಳೋಕೆ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯ ಹಮ್ಮಿಕೊಂಡಿದ್ದರು. ಇದಕ್ಕಾಗಿ 125 ಟ್ರೈಸಿಕಲ್ ಗಳನ್ನು ನಗರದ ಮೈದಾನಕ್ಕೆ ತಂದು ನಿಲ್ಲಿಸಿದ್ದರು. ಸಾಂಕೇತಿಕವಾಗಿ ಸಿಎಂ ಕಡೆಯಿಂದ ಒಂದಿಬ್ಬರಿಗೆ ಟ್ರೈಸಿಕಲ್ ಕಿ ಕೊಡಿಸಿದ್ದರು. ಅದು ಬಿಟ್ಟರೆ ಇಲ್ಲಿವರೆಗೂ ಯಾರಿಗೂ ಟ್ರೈಸಿಕಲ್ ವಿತರಿಸಿಲ್ಲ. 123 ಟ್ರೈಸಿಕಲ್ ಗಳು ಬಿಸಿಲಲ್ಲೇ ನಿಂತಿವೆ.

    ವಿಧಾನಸೌಧ ವಜ್ರಮಹೋತ್ಸವ ವೇಳೆ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ಆತುರಾತುರ ನಿರ್ಧಾರ ಕೈಗೊಂಡಿದ್ದ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾಳಜಿ ತೋರಿಸುತ್ತಿಲ್ಲ. ಇಲ್ಲಿವರೆಗೂ ಟ್ರೈಸಿಕಲ್ ವಿತರಣೆ ಆಗಿವೆಯೋ ಇಲ್ವೋ ಎಂದು ವಿಚಾರಿಸುವ ಸೌಜನ್ಯವೂ ತೋರಿಸಿಲ್ಲ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

     

     

  • ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ವಿಧಾನಸೌಧ ವಜ್ರಮಹೋತ್ಸವ: ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಬೇಕಂತೆ 8 ತಿಂಗಳ ಟೈಂ

    ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವಕ್ಕೆ ಭರ್ಜರಿಯಾಗಿಯೇ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಜ್ರಮಹೋತ್ಸವಕ್ಕೆ ಸಾಕ್ಷ್ಯಚಿತ್ರಗಳ ಸಿದ್ಧತೆಯನ್ನು ಕೂಡ ಪ್ರಾರಂಭಿಸಲಾಗಿದೆ.

    ಇದೇ ತಿಂಗಳು 25 ಮತ್ತು 26 ನೇ ದಿನಾಂಕದಂದು ವಿಧಾನಸೌಧದ ವಜ್ರಮಹೋತ್ಸವ ನಡೆಯಲಿದೆ. ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಆದರೆ ಈ ವಜ್ರಮಹೋತ್ಸಕ್ಕೆ ಸಾಕ್ಷ್ಯಚಿತ್ರಗಳು ಸಿದ್ಧವಾಗುತ್ತಿದ್ದು, ಅದಕ್ಕೆ ಇನ್ನು 8 ತಿಂಗಳು ಸಮಯ ಬೇಕಾಗಿದೆ.

    ಇದು ಕೇವಲ ಸಾಕ್ಷ್ಯಚಿತ್ರವಲ್ಲ, ನಮ್ಮ ಇತಿಹಾಸದ ಮರುಸೃಷ್ಟಿ ಎಂದು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಹೇಳಿದ್ದಾರೆ. ಅದಕ್ಕಾಗಿ 1950 ರಿಂದ ಇಲ್ಲಿಯ ತನಕ ವಿಧಾನಸಭೆ ನಡೆದು ಬಂದಿರುವ ಹಾದಿಯನ್ನು ಮರುಸೃಷ್ಟಿ ಮಾಡಲಾಗುತ್ತದೆ. ಇದಕ್ಕಾಗಿ ಇಡೀ ವಿಧಾನಸಭೆಯ ಮಾದರಿ ಸೆಟ್ ಹಾಕಿ, ಮರುಸೃಷ್ಟಿ ಮಾಡಲಾಗುತ್ತದೆ. ಕರ್ನಾಟಕದ ಔನ್ಯತೆಗಾಗಿ ತೆಗೆದುಕೊಂಡಿರುವ ಇತಿಹಾಸ ಪ್ರಸಿದ್ಧ ತೀರ್ಮಾನಗಳು ಕೂಡ ಇದರಲ್ಲಿ ಅಡಕವಾಗಿರುತ್ತವೆ. ಪ್ರಮುಖವಾಗಿ ನಾಲ್ಕು ಗಂಟೆಗಳ ಕಾಲದ ಈ ಸಾಕ್ಷ್ಯಚಿತ್ರಕ್ಕೆ ಸಂಗೀತ ಬ್ರಹ್ಮ ಹಂಸಲೇಖ ಅವರು ಸಂಗೀತ ಸಂಯೋಜನೆ ಮಾಡುತ್ತಾರೆ ಎನ್ನಲಾಗಿದೆ.

    ಈಗ ನಡೆಯುವ ಅರ್ಧ ಗಂಟೆಯ ಕಾರ್ಯಕ್ರಮ ಬರೀ ಸ್ಯಾಂಪಲ್ ಎಂದು ಹೇಳಲಾಗಿದೆ.

  • ಬಿಬಿಸಿ ಮೇಲೆ 5 ವರ್ಷ ನಿಷೇಧ ಹೇರಿದ ಭಾರತ ಸರ್ಕಾರ

    ಬಿಬಿಸಿ ಮೇಲೆ 5 ವರ್ಷ ನಿಷೇಧ ಹೇರಿದ ಭಾರತ ಸರ್ಕಾರ

    – 5 ವರ್ಷಗಳವರೆಗೆ ದೇಶದ ಯಾವುದೇ ಹುಲಿ ಸಂರಕ್ಷಿತ ಅರಣ್ಯದಲ್ಲಿ ಶೂಟಿಂಗ್ ನಡೆಸುವಂತಿಲ್ಲ

    ನವದೆಹಲಿ: ಮುಂದಿನ 5 ವರ್ಷಗಳವರೆಗೆ ದೇಶದ ಯಾವುದೇ ಹುಲಿ ಸಂರಕ್ಷಿತ ಅರಣ್ಯದಲ್ಲಿ ಚಿತ್ರೀಕರಣ ಮಾಡದಂತೆ ಜಾಗತಿಕ ಸುದ್ದಿ ಸಂಸ್ಥೆ ಬಿಬಿಸಿ ಹಾಗೂ ಪತ್ರಕರ್ತ ಜಸ್ಟಿನ್ ರೋಲಟ್ ಮೇಲೆ ಭಾರತ ಸರ್ಕಾರ ನಿಷೇಧ ಹೇರಿದೆ.

    ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‍ಟಿಸಿಎ) ಸೋಮವಾರದಂದು ಈ ಆದೇಶ ನೀಡಿದ್ದು, ದೇಶದಲ್ಲಿರುವ 50 ಹುಲಿ ಸಂರಕ್ಷಿತಾರಣ್ಯದಲ್ಲಿ ಮುಂದಿನ 5 ವರ್ಷಗಳ ಕಾಲ ಬಿಬಿಸಿ ಚಿತ್ರೀಕರಣ ಮಾಡುವಂತಿಲ್ಲ ಎಂದು ಹೇಳಿದೆ. ಪರಿಸರ ಮತ್ತು ಅರಣ್ಯ ಸಚಿವಾಲಯವೂ ಕೂಡ ರಾಷ್ಟ್ರೀಯ ಉದ್ಯಾನವನ ಹಾಗೂ ಅಭಯಾರಣ್ಯಗಳಿಂದ ಬಿಬಿಸಿಗೆ ನಿಷೇಧ ಹೇರಲು ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕಾರಿಗಳು ಈ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ ಎಂದು ವರದಿಯಾಗಿದೆ.

    ನಿಷೇಧಕ್ಕೆ ಕಾರಣವೇನು: ಬಿಬಿಸಿ ತಯಾರಿಸಿದ್ದ ಒಂದು ಸಾಕ್ಷ್ಯಚಿತ್ರದಲ್ಲಿ ಕಾಝೀರಂಗಾ ಹುಲಿ ಸಂರಕ್ಷಿತ ಅರಣ್ಯವನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿತ್ತು. ಕಾಝೀರಂಗಾ: ದಿ ಪಾರ್ಕ್ ದಟ್ ಶೂಟ್ಸ್ ಪೀಪಲ್ ಟು ಪ್ರೊಟೆಕ್ಟ್ ರಿನೋಸ್ (ಘೇಂಡಾಮೃಗಗಳನ್ನು ಉಳಿಸಲು ಮನುಷ್ಯರನ್ನು ಶೂಟ್ ಮಾಡೋ ಕಾಝೀರಂಗಾ ಸಂರಕ್ಷಿತಾರಣ್ಯ) ಎಂದು ಬಿಬಿಸಿ ಹೇಳಿತ್ತು. ಸಂರಕ್ಷಿತಾರಣ್ಯದ ಈ ನೀತಿಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆರೋಪ ಕೇಳಿಬಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.

    ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್‍ನ 197ನೇ ಸೆಕ್ಷನ್ ಅಡಿಯಲ್ಲಿ ಶಸ್ತ್ರಾಸ್ತ್ರ ಹೊಂದಿದ ಬೇಟೆಗಾರರನ್ನು ಹತ್ತಿಕ್ಕಲು ಕಾಝೀರಂಗಾ ಅರಣ್ಯದ ಗಾರ್ಡ್‍ಗಳಿಗೆ ಅಸ್ಸಾಂ ಸರ್ಕಾರ ನೀಡಿರುವ ವಿನಾಯಿತಿಯನ್ನು ಸಾಕ್ಷ್ಯ ಚಿತ್ರದಲ್ಲಿ ಕೊಲೆ ಮಾಡಲು ಗುಂಡು ಹಾರಿಸುತ್ತಾರೆ ಎಂಬಂತೆ ತೋರಿಸಲಾಗಿದೆ ಎಂದು ಆರೋಪಿಸಿ ಎನ್‍ಟಿಸಿಎ ಬಿಬಿಸಿಗೆ ನೋಟಿಸ್ ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಪತ್ರಕರ್ತ ರೋಲಟ್, ನಾವು ಚಿತ್ರೀಕರಣ ಮಾಡುವ ವೇಳೆ ಯಾರಿಗೂ ಮೋಸ ಮಾಡುವ ಪ್ರಯತ್ನ ಮಾಡಿಲ್ಲ. ಸಂರಕ್ಷಿತಾರಣ್ಯದ ಪ್ರಾಣಿ ರಕ್ಷಣಾ ತಂತ್ರವನ್ನು ಕೊಲ್ಲವುದಕ್ಕೆ ಶೂಟ್ ಮಾಡುವುದು ಎಂಬ ಅರ್ಥದಲ್ಲಿ ತೋರಿಸಿಲ್ಲ. ಆದರೆ ನಾವು ಚಿತ್ರೀಕರಣ ಮಾಡುವ ವೇಳೆ ಅನುಮಾನಾಸ್ಪದ ಬೇಟೆಗಾರರನ್ನು ಕೊಲ್ಲುವಂತಹ ಸಂಗತಿ ತಿಳಿಯಿತು ಎಂದು ಹೇಳಿದ್ದಾರೆ. ನೋಟಿಸ್‍ಗೆ ಬಿಬಿಸಿ ಸಮಾಧಾನಕರವಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಎನ್‍ಟಿಸಿಎ ನಿಷೇಧ ಹೇರಿದೆ.

    ಬಿಬಿಸಿಯ ಸಾಕ್ಷ್ಯಚಿತ್ರವನ್ನು ನೋಡಿದ ನಂತರ ಅಸ್ಸಾಂ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆವು. ಮುಂದೆ ದೇಶದ ಹುಲಿ ಸಂರಕ್ಷಿತಾರಣ್ಯದಲ್ಲಿ ಬಿಬಿಸಿ ಚಿತ್ರೀಕರಣ ಮಾಡದಂತೆ ನಿಷೇಧ ಹೇರಬೇಕೆಂದು ಶಿಫಾರಸ್ಸು ಮಾಡಿದ್ದೆವು. ಚಿತ್ರೀಕರಣ ಮಾಡಲು ಅನುಮತಿ ಪಡೆಯುವ ವೇಳೆ ಅವರು ಯಾವ ವಿಷಯದ ಮೇಲೆ ಚಿತ್ರೀಕರಣ ಮಾಡುತ್ತೇವೆ ಎಂದು ಹೇಳಿದ್ದರೋ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಬಿಬಿಸಿಯ ಅಂತಿಮ ಸಾಕ್ಷ್ಯ ಚಿತ್ರ ಸಂಪೂರ್ಣ ಭಿನ್ನವಾಗಿತ್ತು ಎಂದು ಕಾಝೀರಂಗಾ ಸಂರಕ್ಷಿತಾರಣ್ಯದ ಅಧಿಕಾರಿ ಸಂತ್ಯೇಂದ್ರ ಸಿಂಗ್ ಹೇಳಿದ್ದಾರೆ. ಬಿಬಿಸಿ ಯವರು ಅನುಮತಿ ಪಡೆಯುವ ವೇಳೆ ಪ್ರಾಣಿ ಸಂರಕ್ಷಣೆಯಲ್ಲಿ ಭಾರತದ ಪರಿಣಿತಿ ಮತ್ತು ಎದುರಿಸುತ್ತಿರುವ ಸವಾಲಗಳು ಎಂಬ ವಿಷಯದ ಬಗ್ಗೆ ಸಾಕ್ಷ್ಯಚಿತ್ರ ಮಾಡಲಿರುವುದಾಗಿ ಹೇಳಲಾಗಿತ್ತು ಎಂದು ವರದಿಯಾಗಿದೆ.

    ಅಸ್ಸಾಂನ ಕಾಝೀರಂಗಾ ಹುಲಿ ಸಂರಕ್ಷಿತಾರಣ್ಯ 800 ಚದರ ಅಡಿಗಳಷ್ಟು ವಿಸ್ತೀರ್ಣವಿದ್ದು. ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಒಂದು ಕೊಂಬಿನ ಘೇಂಡಾ ಮೃಗಗಳಿರುವ ಪ್ರದೇಶವಾಗಿದೆ. ಎನ್‍ಟಿಸಿಎ ನ ಇತ್ತೀಚಿನ ಸಮೀಕ್ಷೆಯ ಪ್ರಕಾರ ಇಲ್ಲಿ 103 ಹುಲಿಗಳಿವೆ.