Tag: ಸಾಕ್ಷ್ಯ

  • ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

    ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

    ನವದೆಹಲಿ: ವೈವಾಹಿಕ ಪ್ರಕರಣಗಳಲ್ಲಿ ಪತಿ ಮತ್ತು ಪತ್ನಿಯ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣವನ್ನು (Recorded Calls) ನ್ಯಾಯಾಲಯದಲ್ಲಿ ಸಾಕ್ಷಿಯಾಗಿ (Evidence) ಸ್ವೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ (Supreme Court)  ಮಹತ್ವದ ತೀರ್ಪು ನೀಡಿದೆ.

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್  ತನ್ನ ತೀರ್ಪಿನಲ್ಲಿ ಪತಿ (Husband) ಮತ್ತು ಪತ್ನಿಯ (Wife) ನಡುವಿನ ರಹಸ್ಯ ಸಂಭಾಷಣೆಗಳನ್ನು ಸಾಕ್ಷ್ಯ ಕಾಯ್ದೆಯ ಸೆಕ್ಷನ್ 122 ರ ಅಡಿಯಲ್ಲಿ ರಕ್ಷಿಸಲಾಗಿದೆ ಮತ್ತು ನ್ಯಾಯಾಂಗ ವಿಚಾರಣೆಯಲ್ಲಿ ಬಳಸಲಾಗುವುದಿಲ್ಲ ಎಂದು ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಸತೀಶ್ ಚಂದ್ರ ಶರ್ಮಾ ಅವರ ಪೀಠ ಹೈಕೋರ್ಟ್‌ ಆದೇಶವನ್ನು ವಜಾಗೊಳಿಸಿದೆ.

    ಪತಿ ಮತ್ತು ಪತ್ನಿ ಪರಸ್ಪರರ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುವುದೇ ಅವರ ದಾಂಪತ್ಯ ಚೆನ್ನಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಮತ್ತು ಆದ್ದರಿಂದ ಅದನ್ನು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಇದನ್ನೂ ಓದಿ: ಕೇರಳದ ನರ್ಸ್‌ಗೆ ಜು.16ರಂದು ಯೆಮೆನ್‌ನಲ್ಲಿ ನೇಣು; ಮರಣದಂಡನೆ ತಡೆಯಲು ಸಾಧ್ಯವಿಲ್ಲ ಸುಪ್ರೀಂಗೆ ಕೇಂದ್ರ ಮಾಹಿತಿ

    court order law

    ವಿವಾಹವು ಪತಿ ಮತ್ತು ಪತ್ನಿ ಪರಸ್ಪರ ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವ ಹಂತವನ್ನು ತಲುಪಿದ್ದರೆ ಅದು ಅವರ ನಡುವಿನ ನಂಬಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಉಲ್ಲೇಖಿಸಿದ್ದಾರೆ.

    ದಾಂಪತ್ಯ ವಿಚಾರಣೆಯ ಸಮಯದಲ್ಲಿ ದಾಖಲಾದ ಸಂಭಾಷಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ದಾಖಲಾದ ಸಂಭಾಷಣೆಗಳನ್ನು ನ್ಯಾಯಾಂಗದ ಗಮನಕ್ಕೆ ತೆಗೆದುಕೊಂಡ ನಂತರ ಪ್ರಕರಣವನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ಹೇಳಿದೆ.

    ಏನಿದು ಪ್ರಕರಣ?
    ಭಟಿಂಡಾ ಕುಟುಂಬ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 ರ ಅಡಿಯಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪತ್ನಿ ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾಳೆ ಎಂಬ ಆರೋಪಕ್ಕೆ ಸಾಕ್ಷಿಯಾಗಿ ಪತಿ ಆಡಿಯೋ ಸಿಡಿಯನ್ನು ನೀಡಿದ್ದರು. ಕುಟುಂಬ ನ್ಯಾಯಾಲಯ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿತ್ತು.

    ಕುಟುಂಬ ನ್ಯಾಯಾಲಯ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿದ್ದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು. ನನ್ನ ಒಪ್ಪಿಗೆ ಇಲ್ಲದೇ ರೆಕಾರ್ಡ್‌ ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದ್ದರು. ಪತ್ನಿಯ ವಾದವನ್ನು ಪುರಸ್ಕರಿಸಿದ ಹೈಕೋರ್ಟ್‌ ವೈವಾಹಿಕ ಪ್ರಕರಣಗಳಲ್ಲಿ ಪತಿ ಮತ್ತು ಪತ್ನಿಯ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣವನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.

  •  Exclusive: ಎಲ್ಲಾ ತನಿಖೆಗಳಿಂದ ಡಿಕೆಶಿಗೆ ಸಿಗುತ್ತಾ ರಿಲೀಫ್?

     Exclusive: ಎಲ್ಲಾ ತನಿಖೆಗಳಿಂದ ಡಿಕೆಶಿಗೆ ಸಿಗುತ್ತಾ ರಿಲೀಫ್?

    -ಡಿಕೆಶಿ ಸಿಬಿ’ಐ’ನಿಂದ ಬಚಾವ್?
    -ರಿಲೀಫ್ ಖಾತ್ರಿಯಾದ್ರೆ ಡಿಕೆ ಹೊಸ ಆಟ

    ಬೆಂಗಳೂರು: ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸುಳಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ತನಿಖೆಗಳಿಂದ ರಿಲೀಫ್ ಸಿಗುತ್ತಾ ಎಂಬ ಪ್ರಶ್ನೆಗೆ ಕೆಲವೊಂದು ಉತ್ತರಗಳು ರಾಜ್ಯ ರಾಜಕೀಯ ಅಂಗಳದಲ್ಲಿ ಹರಿದಾಡುತ್ತಿವೆ.

    ಜಾಮೀನು ಪಡೆದು ಹೊರಬಂದ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ನಡುವೆ 50 ಕೋಟಿ ರೂ.ಯ ವ್ಯವಹಾರ ನಡೆದಿದೆ ಎಂದು ಹೇಳಲಾಗಿತ್ತು. ಈ ಸಂಬಂಧ ಬೆಂಗಳೂರು ಮತ್ತು ದೆಹಲಿ ಸಿಬಿಐ ತಂಡ ಸಾಕ್ಷ್ಯ ಸಂಗ್ರಹಣೆಗೆ ಮುಂದಾಗಿತ್ತು. ಈ ವ್ಯವಹಾರ ಸಂಬಂಧ ಸಣ್ಣ ಸಾಕ್ಷ್ಯ ಸಿಕ್ಕಿದ್ದರೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ಸಿಬಿಐ ಪ್ಲಾನ್ ಮಾಡಿಕೊಂಡಿತ್ತು. ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಹಿಂದೆ ಸರಿದಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ 50 ಕೋಟಿ ರೂ. ನಗದು ಪಡೆದಿದ್ದಾರೆ ಎಂಬುವುದು ಕೇವಲ ಹೇಳಿಕೆಯಾಗಿದ್ದು ಹಣ ಹೇಗೆ ಯಾರಿಂದ? ಯಾರಿಗೆ? ಯಾವ ಮಾರ್ಗದಲ್ಲಿ ವರ್ಗಾವಣೆ ಆಗಿದೆ ಎಂಬುದರ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಿಲ್ಲ. ಇತ್ತ ಸೋಲಾರ್ ಪ್ಲಾಂಟ್‌ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಮಾತಿಗೆ ಸೂಕ್ತ ಸಾಕ್ಷ್ಯ ಲಭ್ಯವಾಗಿಲ್ಲ. 1,500 ಎಕ್ರೆ ಪವರ್ ಪ್ಲಾಂಟ್ ನಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ ಮತ್ತು ಮೇಲ್ನೋಟಕ್ಕೆ ಯಾವುದೇ ಅವ್ಯವಹಾರ ನಡೆದಂತೆ ಕಂಡು ಬಂದಿಲ್ಲ. ಓಪನ್ ಟೆಂಡರ್ ಮಾಡಿದರ ಬಗ್ಗೆ ಸರ್ಕಾರದಲ್ಲಿ ದಾಖಲೆಗಳಿವೆ. ಕಲ್ಲಿದ್ದಲು ಖರೀದಿಯಲ್ಲಿಯೂ ಯಾವುದೇ ಅವ್ಯವಹಾರದ ಬಗ್ಗೆ ಸಾಕ್ಷ್ಯವಿಲ್ಲ ಎಂದು ತಿಳಿದು ಬಂದಿದೆ.

    ರಿಲೀಫ್ ಸಿಕ್ಕರೆ ಡಿಕೆಶಿ ಮುಂದಿನ ನಡೆ ಏನು?
    ಜಾಮೀನು ಪಡೆದು ಹೊರಬಂದ ಡಿಕೆಶಿವಕುಮಾರ್ ಅವರಿಗೆ ಬೆಂಬಲಿಗರು ಅದ್ಧೂರಿ ಸ್ವಾಗತ ನೀಡಿದ್ದರು. ಡಿಕೆ ಶಿವಕುಮಾರ್ ಈ ಮೂಲಕ ಪರೋಕ್ಷವಾಗಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದರು. ಇತ್ತ ಡಿಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಎಲ್ಲ ತನಿಖೆಗಳಿಂದ ಡಿಕೆ ಶಿವಕುಮಾರ್ ರಿಲೀಫ್ ಪಡೆದುಕೊಂಡರೆ ಕಾಂಗ್ರೆಸ್ ಪಟ್ಟಾಭಿಷೇಕ ಮಾಡಲು ಪ್ಲಾನ್ ಮಾಡಿಕೊಂಡಿದೆ. ಒಂದು ವೇಳೆ ಸಿಬಿಐ ಪ್ರಕರಣವನ್ನು ಕೈಬಿಟ್ಟರೆ ಡಿಕೆ ಶಿವಕುಮಾರ್ ಮತ್ತಷ್ಟು ಪ್ರಬಲ ನಾಯಕರಾಗುತ್ತಾರೆ ಎಂಬ ಮಾತು ಕಾಂಗ್ರೆಸ್ ಅಂಗಳದಲ್ಲಿ ಕೇಳಿ ಬರುತ್ತಿದೆ.

    ಇದನ್ನೇ ಬಂಡವಾಳನ್ನಾಗಿ ಮಾಡಿಕೊಂಡು ಡಿಕೆ ಶಿವಕುಮಾರ್ ತಮ್ಮ ಹಳೇ ಖದರ್ ಮೂಲಕ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ತಾವು ಜೈಲಿಗೆ ಹೋಗಿಬಂದಿದ್ದನ್ನೇ ಲಾಭವನ್ನಾಗಿ ಮಾಡಿಕೊಂಡು ಮತಯಾಚಿಸುವ ಸಾಧ್ಯತೆಗಳಿವೆ. ಅನರ್ಹ ಶಾಸಕರ ಕ್ಷೇತ್ರಗಳಿಗೆ ಭೇಟಿ, ಕಾಂಗ್ರೆಸ್ ಪಾದಯಾತ್ರೆಯಲ್ಲಿ ಭಾಗಿಯಾಗೋದು ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನತೆಗೆ ಹತ್ತಿರವಾಗುವ ಮೂಲಕ ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಬಲ ನಾಯಕನಾಗಿ ಬೆಳೆಯಲು ಡಿಕೆ ಶಿವಕುಮಾರ್ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • ಪತ್ನಿಯ ಕೊಲೆಗೈದು ಎಲ್ಲ ಸಾಕ್ಷ್ಯ ನಾಶಮಾಡಿದ್ರೂ ಮಾಂಸದ ತುಣುಕಿನಿಂದ ಜೈಲು ಸೇರಿದ!

    ಪತ್ನಿಯ ಕೊಲೆಗೈದು ಎಲ್ಲ ಸಾಕ್ಷ್ಯ ನಾಶಮಾಡಿದ್ರೂ ಮಾಂಸದ ತುಣುಕಿನಿಂದ ಜೈಲು ಸೇರಿದ!

    ಹಾಸನ: ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ್ದ ಪತಿರಾಯನೊಬ್ಬ ತನ್ನ ಮಾಂಸದ ತುಣುಕಿನಿಂದಾಗಿ ಕೊನೆಗೂ ಜೈಲು ಸೇರಿದ್ದಾನೆ.

    ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೊಂಗಡಹಳ್ಳದ ನಿವಾಸಿ ಸುರೇಶ್ ಶಿಕ್ಷೆಗೆ ಗುರಿಯಾಗಿರೋ ಅಪರಾಧಿ. ಹಾಸನದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುರೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಪ್ರಕಟಿಸಿದೆ.

    ಏನಿದು ಪ್ರಕರಣ?
    ಮದುವೆಯಾಗಿ 20 ವರ್ಷ ಕಳೆದು ಪಿಯುಸಿ ಓದುತ್ತಿದ್ದ ಮಗ ಇದ್ದರೂ, ಸುರೇಶ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರವಾಗಿ ಸುರೇಶ್ ಮತ್ತು ಪತ್ನಿ ಗೀತಾ ನಡುವೆ ಅನೇಕ ಸಲ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ಹೋಗಿ, 2015ರ ಮಾರ್ಚ್ 8 ರಂದು ಮನೆಯಲ್ಲಿಯೇ ಪತ್ನಿ ಗೀತಾಳನ್ನು ಸುರೇಶ್ ಕೊಲೆ ಮಾಡಿದ್ದ.

    ಸಾಕ್ಷ್ಯ ನಾಶಪಡಿಸಿ ತಾನು ಬಚಾವಾಗಲು, ಗೀತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಾನೇ ಅಂಬುಲೆನ್ಸ್ ನಲ್ಲಿ ಮೃತದೇಹವನ್ನು ಪತ್ನಿಯ ತವರು ಮನೆಗೆ ಕೊಂಡೊಯ್ದಿದ್ದ. ಆದರೆ ಸುರೇಶ್ ಮುಖ ಹಾಗೂ ಮೃತ ಗೀತಾಳ ಮೈಮೇಲೆ ಗಾಯಗಳಾಗಿದ್ದರಿಂದ ಅನುಮಾನಗೊಂಡ ಗೀತಾ ತಂದೆ ಗೋವಿಂದೇಗೌಡ, ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರರಣ ದಾಖಲಿಸಿಕೊಂಡು ಪೋಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಹ ಸಲ್ಲಿಸಿದ್ದರು.

    ಡಿಎನ್‍ಎ ಪರೀಕ್ಷೆ:
    ವಿಚಾರಣೆ ವೇಳೆ ಗೀತಾ ಪೋಷಕರು ಹಾಗೂ ಸಂಬಂಧಿಕರು ಪ್ರತಿಕೂಲ ಸಾಕ್ಷಿ ನುಡಿದಿದ್ದರಿಂದ ಇಡೀ ಪ್ರಕರಣ ಬಿದ್ದು ಹೋಗುವ ಹಂತಕ್ಕೆ ಬಂದಿತ್ತು. ಮರಣೋತ್ತರ ಪರೀಕ್ಷೆ ವೇಳೆ ಗೀತಾ ಉಗುರಲ್ಲಿದ್ದ ಸಣ್ಣ ಮಾಂಸದ ತುಣುಕನ್ನು ವೈದ್ಯರು ಸಂಗ್ರಹ ಮಾಡಿದ್ದರಿಂದ ಅದನ್ನೇ ಡಿಎನ್‍ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಆರೋಪಿಯ ರಕ್ತವನ್ನೂ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಅಂತಿಮವಾಗಿ ಉಗುರಿನಲ್ಲಿದ್ದ ಸಣ್ಣ ಚರ್ಮದ ಕಲೆ ಸುರೇಶನದ್ದೇ ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ಶಿಕ್ಷೆಯನ್ನು ಪ್ರಕಟಿಸಿತು. ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲ ಎಂದು ಖುಲಾಸೆ ಕನಸು ಕಾಣುತ್ತಿದ್ದ ಕೊಲೆಗಡುಕನನ್ನು ಆತನದೇ ಸಣ್ಣ ಮಾಂಸದ ತುಣುಕು ಬದುಕಿರುವವರೆಗೂ ಜೈಲಿನಲ್ಲಿ ಕೊಳೆಯುವಂತೆ ಮಾಡಿರುವುದು ವಿಶೇಷ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv