Tag: ಸಾಕ್ಷಿ ಮಹಾರಾಜ್

  • ಬಾಂಬ್ ಸ್ಫೋಟಿಸಿ ಹತ್ಯೆ ಮಾಡ್ತೀವಿ- ಪಾಕ್‍ನಿಂದ ಸಾಕ್ಷಿ ಮಹಾರಾಜ್‍ಗೆ ಬೆದರಿಕೆ ಕರೆ

    ಬಾಂಬ್ ಸ್ಫೋಟಿಸಿ ಹತ್ಯೆ ಮಾಡ್ತೀವಿ- ಪಾಕ್‍ನಿಂದ ಸಾಕ್ಷಿ ಮಹಾರಾಜ್‍ಗೆ ಬೆದರಿಕೆ ಕರೆ

    ಲಕ್ನೋ: ಉನ್ನಾವೋ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಗೆ ಪಾಕಿಸ್ತಾನದ ನಂಬರಿಂದ ಬೆದರಿಕೆ ಕರೆ ಬಂದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.

    ಸದರ್ ಕೊಟ್ಟಾಲಿಯ ಪೊಲೀಸ್ ಅಧಿಕಾರಿ ದಿನೇಶ್ ಚಂದ್ರ ಮಿಶ್ರಾ ಅವರಿಗೆ ನೀಡಿದ ಲಿಖಿತ ದೂರಿನಲ್ಲಿ, ಪಾಕಿಸ್ತಾನದ ಕೆಲವು ಭಯೋತ್ಪಾದಕ ಸಂಘಟನೆಯಿಂದ ತನಗೆ ಎರಡು ದೂರವಾಣಿ ಕರೆಗಳು ಬಂದಿವೆ. ಕರೆಯಲ್ಲಿ ಬಾಂಬ್ ಸ್ಫೋಟದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕರೆ ಮಾಡಿರುವ ವ್ಯಕ್ತಿ, ಶೀಘ್ರವೇ ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ ಎಂದಿದ್ದಾನೆ. ಇತ್ತೀಚೆಗೆ ಅಯೋಧ್ಯೆ ರಾಮಮಂದಿರಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದ ಕುರಿತು ಕೂಡ ಅಶ್ಲೀಲ ಭಾಷೆಯನ್ನು ಬಳಸಿದ್ದಾನೆ ಎಂದು ಸಂಸದರು ಪೊಲೀಸರ ಮುಂದೆ ಹೇಳಿದ್ದಾರೆ.

    ಮುಜಾಹಿದ್ದೀನ್ ಸಂಘಟನೆಯವರು ನಿನ್ನ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಿದ ವ್ಯಕ್ತಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿದ್ದಾರೆ ಎಂದು ಸಂಸದರು ಪೊಲೀಸರಿಗೆ ನೀಡಿದ ಪತ್ರದಲ್ಲಿ ವಿವರಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೂಡಲೇ ತನಗೆ ರಕ್ಷಣೆ ನಿಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ. ಸಂಸದರ ದೂರಿನ ಮೇರೆಗೆ ಇದೀಗ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಪಿ ಕನಯ್ ಅವರು ಈ ಬಗ್ಗೆ ತನಿಖೆ ನಡೆಸಿ, ತಂಡ ರಚಿಸುವಂತೆ ಅಧಿಕಾರಿ ಯಾದವೇಂದ್ರ ಯಾದವ್ ಮತ್ತು ಕೊಟ್ಟಾಲಿ ಉಸ್ತುವಾರಿಗೆ ನಿರ್ದೇಶನ ನೀಡಿದ್ದಾರೆ.

    ಒಟ್ಟಿನಲ್ಲಿ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಸದ್ಯ ಸಂಸದರಿಗೆ ಭದ್ರತೆ ಒದಗಿಸಲಾಗಿದ್ದು, ಅವರ ನಿವಾಸಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ. ಬೆದರಿಕೆ ಕರೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಅಲ್ಲಿನ ಎಸ್‍ಪಿ ಮಾಹಿತಿ ನೀಡಿದ್ದಾರೆ.

  • ದೀದಿ ಹಿರಣ್ಯ ಕಶಿಪು ವಂಶಸ್ಥೆ: ಸಾಕ್ಷಿ ಮಹಾರಾಜ್

    ದೀದಿ ಹಿರಣ್ಯ ಕಶಿಪು ವಂಶಸ್ಥೆ: ಸಾಕ್ಷಿ ಮಹಾರಾಜ್

    ನವದೆಹಲಿ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು ಹಿರಣ್ಯ ಕಶಿಪು ವಂಶಸ್ಥೆ ಎಂದು ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಂಸದ ಸಾಕ್ಷಿ ಮಹಾರಾಜ್, ಈ ಹಿಂದೆ ಹಿರಣ್ಯ ಕಶಿಪು ಎಂಬ ರಾಕ್ಷಸನಿದ್ದ. ಜೈ ಶ್ರೀರಾಮ್ ಎಂದು ಜಪಿಸುತ್ತಿದ್ದ ಪುತ್ರನನ್ನು ಜೈಲಿನಲ್ಲಿ ಇರಿಸಿದ್ದ. ಇಂದು ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್ ಎಂದು ಹೇಳುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ. ಮಮತಾ ಬ್ಯಾನರ್ಜಿ ಅವರು ಹಿರಣ್ಯ ಕಶಿಪುವಿನ ವಂಶಸ್ಥರು ಇರಬಹುದು ಎನ್ನುವುದು ನನ್ನ ಅನಿಸಿಕೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಕೆಲವು ದಿನಗಳ ಸಿಎಂ ಮಮತಾ ಬ್ಯಾನರ್ಜಿ ಮಾರ್ಗ ಮಧ್ಯೆ ಕೆಲ ಯುವಕರು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ್ದರು. ಈ ವೇಳೆ ಕಾರಿನಿಂದ ಹೊರ ಬಂದ ಸಿಎಂ, ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

    ತೃಣಮೂಲಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಶಾಸಕ ಅರ್ಜುನ್ ಸಿಂಗ್, ಟಿಎಂಸಿಯ ಸಭೆಯ ವೇಳೆ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಈ ಘಟನೆ ಖಂಡಿಸಿ ದೀದಿ ನಿವಾಸಕ್ಕೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಅಂಚೆ ಕಾರ್ಡುಗಳನ್ನು ಬಿಜೆಪಿ ನಾಯಕರು ಕಳುಹಿಸಲಿದ್ದೇನೆ ಎಂದು ಹೇಳಿದ್ದಾರೆ.

    ಹಿರಣ್ಯ ಕಶಿಪು ಯಾರು?
    ವಿಷ್ಣು ಪುರಾಣದಲ್ಲಿ ಬರುವ ಹಿರಣ್ಯ ಕಶಿಪು ಹಿರಣ್ಯಾಕ್ಷನ ಅಣ್ಣ. ಪ್ರಹ್ಲಾದನ ತಂದೆ, ಕಯಾದುವಿ ಪತಿ. ತಪಸ್ಸು ಮಾಡಿದ್ದ ಈತ ಅಮರತ್ವ ವರವನ್ನು ಕೊಡುವಂತೆ ಬ್ರಹ್ಮನಲ್ಲಿ ಕೇಳಿದ್ದ. ಅಮರತ್ವದ ವರ ನೀಡಲು ಸಾಧ್ಯವಿಲ್ಲ ಎಂದು ಬ್ರಹ್ಮ ಹೇಳಿದ್ದಕ್ಕೆ, ನನಗೆ ಮನುಷ್ಯನಿಂದ, ಪ್ರಾಣಿಗಳಿಂದ, ದೇವತೆಗಳಿಂದ, ಭೂ, ಜಲ, ವಾಯು ಮತ್ತು ಯಾವುದೇ ಆಯುಧಗಳಿಂದಲೂ ಮರಣ ಸಂಭವಿಸದೇ ಇರುವ ವರವನ್ನು ಕೇಳಿ ಪಡೆದುಕೊಂಡಿದ್ದ. ಕೊನೆಗೆ ವಿಷ್ಣು ಅರ್ಧ ಮಾನವ ಅರ್ಧ ಸಿಂಹ ಹೀಗೆ ನರಸಿಂಹ ಅವತಾರದಲ್ಲಿ ಬಂದು ಶಿವನ ಆರಾಧಕನಾಗಿದ್ದ ಹಿರಣ್ಯ ಕಶಿಪುವನ್ನು ಸಂಹಾರ ಮಾಡಿದ್ದ.

  • ನನಗೆ ವೋಟ್ ಹಾಕದಿದ್ದರೆ ಶಾಪ ಹಾಕುವೆ: ಮತದಾರರಿಗೆ ಸಾಕ್ಷಿ ಮಹಾರಾಜ್ ಎಚ್ಚರಿಕೆ

    ನನಗೆ ವೋಟ್ ಹಾಕದಿದ್ದರೆ ಶಾಪ ಹಾಕುವೆ: ಮತದಾರರಿಗೆ ಸಾಕ್ಷಿ ಮಹಾರಾಜ್ ಎಚ್ಚರಿಕೆ

    ನವದೆಹಲಿ: ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ನಾನು ನಿಮಗೆ ಶಾಪ ಹಾಕುತ್ತೇನೆ ಎಂದು ಹೇಳುವ ಮೂಲಕ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ನಾನು ಒಬ್ಬ ಸನ್ಯಾಸಿ. ನೀವು ನಾನು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ. ಇಲ್ಲದಿದ್ದರೆ ದೇವಸ್ಥಾನದಲ್ಲಿ ಭಜನೆ, ಕೀರ್ತನೆಯನ್ನು ನಾನು ಮಾಡಿಕೊಂಡಿರುತ್ತೇನೆ. ಇಂದು ನಾನು ನಿಮ್ಮ ಮತಗಳನ್ನು ಕೇಳಲು ಬಂದಿದ್ದು, ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡಿರುವುದಾಗಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೀವು ನನ್ನನ್ನು ಗೆಲ್ಲಿಸಬೇಕು. ನಾನು ನಿಮ್ಮ ಮನೆ ಬಾಗಿಲಿಗೆ ಬೇಡಲು ಬಂದಿದ್ದೇನೆ. ನೀವು ಸನ್ಯಾಸಿಗೆ ಭಿಕ್ಷೆ ಕೊಡಲು ನಿರಾಕರಿಸಿದರೆ ನಿಮ್ಮ ಕುಟುಂಬದ ಸಂತೋಷವನ್ನು ಕಿತ್ತುಕೊಂಡು ಹೋಗುತ್ತೇನೆ. ಮತ್ತು ನಿಮಗೆ ಶಾಪ ಹಾಕುತ್ತೇನೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಸಾಕ್ಷಿ ಮಹಾರಾಜ್ ಹೇಳಿಕೆಗೆ ಪಕ್ಷ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಸಾಕ್ಷಿ ಮಹಾರಾಜ್ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಚಲಿತರಾಗಿದ್ದು, ಇದೀಗ ಬೆದರಿಕೆಯ ಮೂಲಕ ಮತ ಕೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

  • ರಾಮಮಂದಿರಕ್ಕೆ ಉಡುಪಿಯಲ್ಲಿ ಮುಹೂರ್ತ!?- ಪೇಜಾವರಶ್ರೀ ಹೇಳಿದ್ದಿಷ್ಟು

    ರಾಮಮಂದಿರಕ್ಕೆ ಉಡುಪಿಯಲ್ಲಿ ಮುಹೂರ್ತ!?- ಪೇಜಾವರಶ್ರೀ ಹೇಳಿದ್ದಿಷ್ಟು

    ಉಡುಪಿ: ಬಹು ಚರ್ಚಿತ ಮತ್ತು ಬಹು ನಿರೀಕ್ಷೆಯ ರಾಮಮಂದಿರ ನಿರ್ಮಾಣ ವಿಚಾರ ಚುರುಕುಗೊಂಡಿದೆ. ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಪೇಜಾವರಶ್ರೀಗಳ ಜೊತೆ ಚರ್ಚೆ ಮಾಡಿದ್ದಾರೆ. ನವೆಂಬರ್ ತಿಂಗಳ ಸಂತ ಸಮಾವೇಶದಲ್ಲಿ ರಾಮಮಂದಿರದ ನಿರ್ಮಾಣದ ಮಹೂರ್ತ ಫಿಕ್ಸ್ ಆಗಲಿದ್ಯಂತೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಪೇಜಾವರಶ್ರೀ ಮಾತನಾಡಿದ್ದಾರೆ.

    ಸಂಸದ ಸಾಕ್ಷಿ ಮಹಾರಾಜ್ ಉಡುಪಿ ಶ್ರೀಕೃಷ್ಣಮಠಕ್ಕೆ ಬಂದು ದರ್ಶನ ಪಡೆದಿದ್ದಾರೆ. ಈ ಸಂದರ್ಭ ನನ್ನ ಜೊತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣ ಕುರಿತು ತನ್ನ ಅಭಿಪ್ರಾಯ ಮಂಡಿಸಿದರು. ನಮ್ಮ ಮೂರನೇ ಪರ್ಯಾಯ ಸಂದರ್ಭ ರಾಮ ಮಂದಿರ ಆವರಣಕ್ಕೆ ಹಾಕಿದ ಬೀಗ ಮುರಿದು ಒಳ ಪ್ರವೇಶ ಮಾಡುವ ಬಗ್ಗೆ ನಿರ್ಧಾರ ಕೈಗೊಂಡಿದ್ದೆವು. ಆ ಸಂದರ್ಭ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬೀಗ ತೆಗೆದು ದರ್ಶನಕ್ಕೆ ಅನುವು ಮಾಡಿಕೊಟ್ಟರು. ಈ ಬಾರಿ ನವೆಂಬರ್ ತಿಂಗಳಲ್ಲಿ ಉಡುಪಿ ರಾಜಾಂಗಣದಲ್ಲಿ ವಿಶ್ವ ಸಂತ ಸಮ್ಮೇಳನ ನಡೆಸಲಾಗುವುದು. ಈ ಸಂದರ್ಭ ರಾಮಮಂದಿರ ವಿಚಾರದಲ್ಲಿ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಹೇಳಿದರು.

    ಸಾಕ್ಷಿ ಮಹಾರಾಜರು ತಮ್ಮ ಸ್ವಂತ ಅಭಿಪ್ರಾಯ ಹೇಳಿದ್ದಾರೆ. ಆದ್ರೆ ಕಮಿಟಿಯೊಂದು ರಚನೆಯಾಗಿ ಅದರಲ್ಲಿ ಈ ವಿಚಾರ ಚರ್ಚೆಯಾಗಬೇಕು. ಚರ್ಚೆಯ ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇಷ್ಟಕ್ಕೂ ಸಾಕ್ಷಿ ಮಹಾರಾಜ್ ಹಿಂದಿಯಲ್ಲಿ ರಾಮ ಮಂದಿರದ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿ ನಕ್ಕರು, ನಾನೂ ನಕ್ಕೆ. ಇದಕ್ಕಿಂತ ಹೆಚ್ಚಾಗಿ ಏನೂ ಆಗಿಲ್ಲ ಎಂದು ಪೇಜಾವರ ಶ್ರೀ ಹೇಳಿದರು.

    ರಾಮ ಮಂದಿರ ನಿರ್ಮಾಣಕ್ಕೆ ಮುನ್ನ ಕಾನೂನು ಇದೆ, ಸಂವಿಧಾನ ಇದೆ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದು ತೀರ್ಮಾನ ಆಗಬೇಕಿದೆ. ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ರಾಮ ಮಂದಿರಕ್ಕೆ ಅಸ್ತು ಸಿಗಬಹುದು. ಆದ್ರೆ ಅದಕ್ಕೂ ಮೊದಲು ಬೇರೆಲ್ಲಾ ಕಾನೂನಾತ್ಮಕ ನಿರ್ಣಯಗಳು ಆಗಬೇಕಿದೆ ಎಂದು ಹೇಳಿದರು. ನವೆಂಬರ್ ತಿಂಗಳಲ್ಲಿ ಉಡುಪಿಯಲ್ಲಿ ನಡೆಯುವ ಸಂತ ಸಮಾವೇಶದಲ್ಲಿ ಈ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆಯಿದೆ ಎಂದು ಹೇಳಿದರು.

    ಶಾಂತನಾಗಿ ಎಲ್ಲವನ್ನೂ ನೋಡುತ್ತಿದ್ದೇನೆ: ಉಡುಪಿ ಶ್ರೀಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿರೋ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಪೇಜಾವರ ಸ್ವಾಮೀಜಿ, ಜಸ್ಟ್ ವೈಯ್ಟ್ ಆಂಡ್ ಸೀ ಎಂದಿದ್ದಾರೆ. ಮುಂದೆನಾಗುತ್ತದೆ ಎಂಬುದರ ಬಗ್ಗೆ ಕಾದು ನೋಡುತ್ತೇವೆ. ಯಾವ ರೀತಿಯ ಪ್ರತಿಭಟನೆ ನಡೆಸುತ್ತಾರೆ ಗೊತ್ತಿಲ್ಲ. ನಾನಂತೂ ಶಾಂತವಾಗಿಯೇ ಇದ್ದೇನೆ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಎಂದಿದ್ದಾರೆ.

    ಪ್ರಮೋದ್ ಮುತಾಲಿಕ್ ಅವರ ಜೊತೆ ನೆನ್ನೆ ಬಹಳ ಹೊತ್ತು ಮಾತನಾಡಿದ್ದೇನೆ. ಇರುವ ಎಲ್ಲಾ ವಿಚಾರಗಳ ಚರ್ಚೆ ನಡೆಸಿದ್ದೇನೆ. ಆದ್ರೆ ಯಾವುದಕ್ಕೂ ಮುತಾಲಿಕ್ ಕನ್ವಿನ್ಸ್ ಆಗಿಲ್ಲ. ಮಠದ ಪರ್ಯಾಯದ ಸಂದರ್ಭದಲ್ಲಿ ಬಹಳ ಮುಸ್ಲಿಮರು ದುಡಿದಿದ್ದಾರೆ. ಹೊರೆ ಕಾಣಿಕೆ ನೀಡಿದ್ದಾರೆ. ಮೆರವಣಿಗೆ ಸಾಗುವಾಗೆಲ್ಲಾ ಮಜ್ಜಿಗೆ ವಿತರಿಸಿದ್ದಾರೆ. ಉಡುಪಿ ಚಲೋ ಕಾರ್ಯಕ್ರಮ ಸಂದರ್ಭ ಕೃಷ್ಣಮಠಕ್ಕೆ ಮುತ್ತಿಗೆ ಹಾಕಲು ಡೇಟ್ ಫಿಕ್ಸಾದಾಗ ನನಗೆ ಮುಸ್ಲಿಮರು ಬೆಂಬಲ ನೀಡಿದ್ದಾರೆ. ಇಷ್ಟೆಲ್ಲಾ ಮಾಡಿದವರಿಗೆ ನಾನು ಔತಣ ನೀಡಿದ್ದೇನೆ. ಉಪಹಾರಕ್ಕೆ ಮೊದಲು ನಮಾಜ್ ಮಾಡಬೇಕೆಂದು ಸಂಪ್ರದಾಯವಿದೆ ಎಂದು ಹೇಳಿದರು. ಹೀಗಾಗಿ ಛತ್ರದಲ್ಲಿ ನಮಾಜ್ ಮಾಡಿದರು ಎಂದು ಸ್ಪಷ್ಟನೆ ನೀಡಿದರು.

    ನನ್ನ ಮನಸ್ಸಿನಲ್ಲಿರುವ ಎಲ್ಲಾ ಅಭಿಪ್ರಾಯವನ್ನು ಸರಿಯಾಗಿ ತಿಳಿಸಿದ್ದೇನೆ. ಅವರಿಗೆ ಅದು ಒಪ್ಪಿಗೆ ಆಗದಿದ್ದರೆ ನಾನೇನು ಮಾಡಲಿ? ಏನಾಗುತ್ತೆ ಮುಂದೆ ನೋಡೋಣ ಅಂತ ಹೇಳಿದರು.

  • ನವೆಂಬರ್‍ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

    ನವೆಂಬರ್‍ನಲ್ಲಿ ಉಡುಪಿಯಲ್ಲಿ ರಾಮಮಂದಿರಕ್ಕೆ ಮುಹೂರ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

    ಲಕ್ನೋ: ರಾಮಮಂದಿರ ನಿರ್ಮಾಣ ಸಂಬಂಧವಾಗಿ ಉಡುಪಿಯಲ್ಲಿ ಸಾಧು ಸಂತರು ಮುಹೂರ್ತ ನಿಗದಿ ಮಾಡಲು ಮುಂದಾಗಿದ್ದಾರೆ.

    ನವೆಂಬರ್‍ನಲ್ಲಿ ಉಡುಪಿಯಲ್ಲಿ ಸಾಧು ಸಂತರ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ನಿರ್ಧಾರ ಮಾಡಲಾಗುವುದು ಎಂದು ಉತ್ತರ ಪ್ರದೇಶದ ಉನೌನ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಉಡುಪಿ ಸಮ್ಮೇಳನದಲ್ಲಿ ದೇಶದ ನಾನಾ ಭಾಗದ ಸಾಧು ಸಂತರು ಭಾಗಿಯಾಗಿದ್ದಾರೆ. ಈ ವೇಳೆ ರಾಮಮಂದಿರ ನಿರ್ಮಾಣ ಸಂಬಂಧ ದೀರ್ಘ ಚರ್ಚೆ ನಡೆಯಲಿದೆ ಎಂದು ಹೇಳಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಹೆಚ್ಚು ವಿಳಂಬ ಮಾಡದೇ ದೇಶದ ಸಂತರು ಒಮ್ಮತಾಭಿಪ್ರಾಯ ಹೊಂದಿದ್ದಾರೆ ಎಂದು ಅವರು ತಿಳಿಸಿದರು.