Tag: ಸಾಂಪ್ರದಾಯ

  • ಚಿತ್ರದುರ್ಗ ಮುಳ್ಳಿನ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ

    ಚಿತ್ರದುರ್ಗ ಮುಳ್ಳಿನ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ತೆರೆ

    ಚಿತ್ರದುರ್ಗ: ಇಂದಿನ ತಂತ್ರಜ್ಞಾನ ಯುಗದಲ್ಲಿ ಕಾಲ ಬದಲಾದಂತೆ ಸಾಂಪ್ರದಾಯಿಕ ಆಚರಣೆಗಳು ಕೂಡ ತೆರೆಮರೆಗೆ ಸರಿಯುತ್ತಿವೆ. ಆದರೆ ಬುಡಕಟ್ಟು ಸಮುದಾಯದವರೆಂದು ಗುರುತಿಸಿಕೊಂಡಿರುವ ಕಾಡುಗೊಲ್ಲ ಸಮುದಾಯ ತನ್ನ ಸಾಂಪ್ರದಾಯಿಕ ಆಚರಣೆಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದೆ.

    ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪುರ್ಲಹಳ್ಳಿಯ ವಸಲುದಿಬ್ಬದಲ್ಲಿ ಇಂದು ವಿಜೃಂಭಣೆಯಿಂದ ಜಾತ್ರಾಮಹೋತ್ಸವ ನಡೆಯಿತು. ಕಾಡುಗೊಲ್ಲ ಸಮುದಾಯದ 13 ಗುಡಿಕಟ್ಟುಗಳ ಕ್ಯಾತೆದೇವರ ಜಾತ್ರೆ ಇದಾಗಿದ್ದು, 15 ಅಡಿ ಅಗಲ ಮತ್ತು 20 ಅಡಿ ಎತ್ತರದ ಗೋಪುರವಿರುವ ಮುಳ್ಳಿನ ಗುಡಿಯಲ್ಲಿ ಐದು ದಿನಗಳ ಕಾಲ ಕ್ಯಾತೆದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ. ಜಾತ್ರೆಯ ಕೊನೆಯ ದಿನವಾದ ಇಂದು ಸಮುದಾಯದ ಐದು ಜನ ವೀರಗಾರರು ಉಪವಾಸದಿಂದ ಓಡಿ ಬಂದು, ಬಾರೆ ಮುಳ್ಳಿನಿಂದ ಕಟ್ಟಿರುವ ಗುಡಿಯನ್ನೇರಿ ಗೋಪುರದ ತುದಿಯಲ್ಲಿರುವ ಕಳಶ ಕೀಳುವ ದೃಶ್ಯ ನೆರೆದಿದ್ದವರನ್ನು ರೋಮಾಂಚನಗೊಳಿಸಿತು.

    ಈ ಸಾಂಪ್ರದಾಯಿಕ ಮುಳ್ಳಿನ ಉತ್ಸವ ನೋಡಲು ರಾಜ್ಯದ ವಿವಿಧ ಜಿಲ್ಲೆಗಳ ಜನರಲ್ಲದೇ, ನೆರೆ ರಾಜ್ಯಗಳಾದ ಆಂಧ್ರಪ್ರದೇಶದಿಂದಲೂ ಭಕ್ತರು ಕುತೂಹಲದಿಂದ ಆಗಮಿಸಿದ್ದರು. ಸಡಗರ ಹಾಗೂ ಸಂಭ್ರಮದಿಂದ ನಡೆದ ಜಾತ್ರೆಗೆ ಇಂದು ಅದ್ಧೂರಿ ತೆರೆ ಬಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv