Tag: ಸಹೋದರಿಯರು

  • ‘ಏನೋ ನಡೆಯುತ್ತಿದೆ’ – ಮದನಪಲ್ಲಿ ಸಹೋದರಿಯರ ಸಾಮಾಜಿಕ ಖಾತೆಗಳ ಬಗ್ಗೆ ಅನುಮಾನ

    ‘ಏನೋ ನಡೆಯುತ್ತಿದೆ’ – ಮದನಪಲ್ಲಿ ಸಹೋದರಿಯರ ಸಾಮಾಜಿಕ ಖಾತೆಗಳ ಬಗ್ಗೆ ಅನುಮಾನ

    – ಕಿಡಿಗೇಡಿಗಳಿಂದ ದುರ್ಬಳಕೆ ಆರೋಪ
    – ಸಾಯಿದಿವ್ಯಾ ಖಾತೆ ಡಿಲೀಟ್

    ಹೈದರಬಾದ್: ಮದನಪಲ್ಲಿ ಸಹೋದರಿಯರ ಹತ್ಯೆ ವಿಚಾರವಾಗಿ ಈಗ ಅವರು ಬಳಸುತ್ತಿದ್ದ ಸಾಮಾಜಿಕ ಜಾಲತಾಣ ಖಾತೆಯ ಬಗ್ಗೆ ಅನುಮಾನ ಎದ್ದಿದೆ. ಯಾರು ದುರುದ್ದೇಶ ಪೂರ್ವಕವಾಗಿ ಖಾತೆಗಳನ್ನು ಬಳಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಹತ್ಯೆಯಾದ ಅಲೇಖ್ಯಾಳ ಸ್ನೇಹಿತ ಮೃಣಾಲ್ ಪ್ರೇಮ್ ಸ್ವರೂಪ್ ಶ್ರೀವಾಸ್ತವ್ ಈ ಆರೋಪ ಮಾಡಿದ್ದರಿಂದ ಪ್ರಕರಣಕ್ಕೆ ಮತ್ತಷ್ಟು ತಿರುವು ಪಡೆದುಕೊಂಡಿದೆ.

    ಈ ಹಿಂದೆ ಅಲೇಖ್ಯಾಳ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್ ಪೋಸ್ಟ್ ಗಳಿಗೆ ಆಕೆಯ ಸಹೋದರಿ ಸಾಯಿ ದಿವ್ಯಾ ನೀಡುತ್ತಿದ್ದ ಲೈಕ್ಸ್ ಮತ್ತು ಕಮೆಂಟ್‍ಗಳನ್ನು ನೋಡಿದ್ದೇನೆ. ಆದರೆ ಈಗ ಈ ಕಮೆಂಟ್‍ಗಳು ಕಾಣುತ್ತಿಲ್ಲ. ಅಲೇಖ್ಯಾ ಜೊತೆ ಮೃತಪಟ್ಟ ಆಕೆಯ ಸಹೋದರಿ ಸಾಯಿ ದಿವ್ಯಾ ಫೇಸ್ ಬುಕ್ ಖಾತೆಯನ್ನು ಕೂಡ ಅಳಿಸಿದ್ದಾರೆ ಎಂದು ಶ್ರೀವಾಸ್ತವ್ ಹೇಳಿದ್ದಾನೆ.

    ಸಾಯಿ ದಿವ್ಯಾ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಲೇಖ್ಯಾ ಫೋಟೋಗಳು ಹಾಗೆಯೇ ಇದೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಯಾರೋ ಸಾಯಿ ದಿವ್ಯಾಳನ್ನು ಆರೋಪಿಯನ್ನಾಗಿ ಬಿಂಬಿಸುವ ಸಲುವಾಗಿ ಈ ರೀತಿ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮೃತಪಟ್ಟ ಅಲೇಖ್ಯಾ ಸಾಮಾಜಿಕ ಜಾಲತಾಣದ ಖಾತೆಯನ್ನು ಯಾರೋ ಕಿಡಿಗೇಡಿಗಳು ಉಪಯೋಗಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾನೆ.

    ಲಾಕ್‍ಡೌನ್ ಸಮಯದಲ್ಲಿ ಅಲೇಖ್ಯಾ ನನ್ನ ಜೊತೆ ಚಾಟ್ ಮಾಡುತ್ತಿದ್ದಳು. ಅಲೇಖ್ಯಾ ಸ್ವತಂತ್ರವಾಗಿ ಇರಲು ಯಾವಾಗಲೂ ಇಚ್ಛಿಸುತ್ತಿದ್ದಳು. ಕ್ಯಾಲಿಫೋರ್ನಿಯಾದಲ್ಲಿರುವ ಚೆಗ್ ಶಿಕ್ಷಣ ತಂತ್ರಜ್ಞಾನ ಕಂಪನಿಗೆ ಕಾರ್ಯನಿರ್ವಹಿಸುವುದಾಗಿ ಸಹಿ ಮಾಡಿದ್ದಳು ಹಾಗೂ ಪ್ರತಿ ನಿತ್ಯ ಮಕ್ಕಳಿಗೆ ಪಾಠ ಮಾಡುವ ಸಲುವಾಗಿ ಮುಂಜಾನೆ 3 ಗಂಟೆಯವರೆಗೂ ಎದ್ದಿರುತ್ತಿದ್ದಳು. ಅಲ್ಲದೆ ಅಲೇಖ್ಯಾ ನಾನು ದೆಹಲಿಯಲ್ಲಿ ವಾಸ್ತವ್ಯ ಹೂಡಲು ಇಚ್ಛಿಸುತ್ತೇನೆ ಮತ್ತು ದೇಶಾದ್ಯಂತ ಪ್ರವಾಸ ಮಾಡುವ ಆಸೆಯನ್ನು ತನ್ನೊಂದಿಗೆ ಹಂಚಿಕೊಂಡಿದ್ದಳು. ಆದರೆ ಒಮ್ಮೆ ಅಲೇಖ್ಯಾ ಕೊಲೆಯಾಗಿರುವ ಸುದ್ದಿ ಕೇಳಿ ನನಗೆ ಬಹಳ ಆಘಾತವಾಯಿತು ಎಂದು ಶ್ರೀವಾಸ್ತವ್ ಹೇಳಿದ್ದಾನೆ.

    ಘಟನೆ ಕುರಿತಂತೆ ಪ್ರತಿಕ್ರಿಯಿಸಿದ ಮದನಪಲ್ಲಿ ಡಿಎಸ್ಪಿ ರವಿ ಮನೋಹರ್ಚರಿ, ಈಗಾಗಲೇ ಪ್ರಕರಣ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಮೃತರ ಸಾಮಾಜಿಕ ಜಾಲತಾಣಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

  • ಸಹೋದರಿಯರಿಂದ ತಂದೆ-ತಾಯಿಯ ಮದುವೆ ದಿನದ ವಿಡಿಯೋ ಮರುಸೃಷ್ಟಿ

    ಸಹೋದರಿಯರಿಂದ ತಂದೆ-ತಾಯಿಯ ಮದುವೆ ದಿನದ ವಿಡಿಯೋ ಮರುಸೃಷ್ಟಿ

    – ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
    – ಪೋಷಕರಂತೆ ಉಡುಗೆ ಧರಿಸಿದ್ದ ಅಕ್ಕ-ತಂಗಿ

    ಚೆನ್ನೈ: ಸಾಮಾನ್ಯವಾಗಿ ಮಕ್ಕಳು ತಮ್ಮ ಪೋಷಕರ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಸಹೋದರಿಯರಿಬ್ಬರು ತಮ್ಮ ತಂದೆ-ತಾಯಿ ಮದುವೆ ವಿಡಿಯೋವನ್ನು ಮರುಸೃಷ್ಟಿ ಮಾಡುವ ಮೂಲಕ ಸರ್ಪ್ರೈಸ್ ಉಡುಗೊರೆ ನೀಡಿದ್ದಾರೆ.

    ಗೋಪಿಕಾ ಮತ್ತು ದೇವಿಕಾ ಸಹೋದರಿಯರು ತಮ್ಮ ಪೋಷಕರ 24ನೇ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಣೆ ಮಾಡಲು ಬಯಸಿದ್ದರು. ಆದರೆ ಕೊರೊನಾದಿಂದ ಅದು ಸಾಧ್ಯವಾಗಿಲ್ಲ. ಆಗ ತಮ್ಮ ತಂದೆ-ತಾಯಿ ಮದುವೆಯ ದಿನದ ವೀಡಿಯೊವನ್ನು ಮರುಸೃಷ್ಟಿಸಲು ನಿರ್ಧರಿಸಿದ್ದರು. ಅದರಂತೆಯೇ ಗೋಪಿಕಾ ಮತ್ತು ದೇವಿಕಾ ಈ ವಿಡಿಯೋವನ್ನು ಸೀಕ್ರೆಟ್ ಆಗಿ ರೆಕಾರ್ಡ್ ಮಾಡಿದ್ದು, ಆಗಸ್ಟ್ 28 ರಂದು ವಿವಾಹ ವಾರ್ಷಿಕೋತ್ಸವದಂದು ಅದನ್ನು ಪೋಷಕರಿಗೆ ತೋರಿಸಿದ್ದಾರೆ.

    ದೇವಿಕಾ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಗೋಪಿಕಾ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಷಕರಾದ ಗೋಪಾಲಕೃಷ್ಣನ್ ನಾಯರ್ ಮತ್ತು ರಾಧಿಕಾ ಅವರ ವಿವಾಹ ಸಂದರ್ಭದಲ್ಲಿ ಹೇಗಿದ್ದರು ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವಧು-ವರ ನಗುವುದು, ನಾಚಿಕೆ ಪಡುವುದು, ಪರಸ್ಪರ ಸಿಹಿ ತಿನಿಸುವುದು. ಅಲ್ಲದೇ ವರ (ತಂದೆ) ಕನ್ನಡಿಯಲ್ಲಿ ಮುಂದೆ ನಿಂತುಕೊಂಡು ನೋಡಿಕೊಳ್ಳುವುದು, ವಧು (ತಾಯಿ) ತನ್ನ ಸೀರೆಯನ್ನು ಸರಿ ಮಾಡಿಕೊಳ್ಳುವುದು. ಹೀಗೆ ಎಲ್ಲವನ್ನು ಸಹೋದರಿಯರು ವಿಡಿಯೋದಲ್ಲಿ ಮರುಸೃಷ್ಟಿ ಮಾಡಿರುವುದನ್ನು ಕಾಣಬಹುದಾಗಿದೆ.

    ಗೋಪಿಕಾ ಮತ್ತು ದೇವಿಕಾ ಇಬ್ಬರು ವ್ಯಾಸಂಗ ಮಾಡುತ್ತಿದ್ದು, ತಂದೆ ಎಲೆಕ್ಟ್ರಿಕಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಸಹೋದರಿಯರು ಮದುವೆಯಲ್ಲಿ ತಮ್ಮ ಪೋಷಕರು ಧರಿಸಿದ್ದ ರೇಷ್ಮೆ ಸೀರೆ ಮತ್ತು ಬಿಳಿ ಪಂಜೆ, ಶರ್ಟ್ ಅನ್ನು ಹಾಗೆಯೇ ಧರಿಸಿದ್ದಾರೆ. ಮೇಕಪ್ ಸಹ ಹಾಗೇ ಮಾಡಿಕೊಂಡಿದ್ದಾರೆ. ವಿಡಿಯೋ ಕೇವಲ 1.5 ನಿಮಿಷವಿದ್ದು, ಸಹೋದರಿಯ ಅದ್ಭುತವಾಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಹೋದರಿಯರು ಹಂಚಿಕೊಂಡಿದ್ದಾರೆ.

  • ಒಂದೇ ದಿನ ಅವಳಿ ಸೋದರರ ಜೊತೆ ಮದ್ವೆ – ಒಟ್ಟಿಗೆ ಸಿಹಿ ಸುದ್ದಿ ಕೊಟ್ಟ ಜೋಡಿಗಳು

    ಒಂದೇ ದಿನ ಅವಳಿ ಸೋದರರ ಜೊತೆ ಮದ್ವೆ – ಒಟ್ಟಿಗೆ ಸಿಹಿ ಸುದ್ದಿ ಕೊಟ್ಟ ಜೋಡಿಗಳು

    ವಾಷಿಂಗ್ಟನ್: ಕೆಲ ಅವಳಿ ಸಹೋದರರು, ಸಹೋದರಿಯರು ಒಂದೇ ದಿನ ಮದುವೆಯಾಗುವುದು ಸಾಮಾನ್ಯವಾಗಿದೆ. ಆದರೆ ಅಮೆರಿಕದ ಇಬ್ಬರು ಅವಳಿ ಸಹೋದರಿಯರು ಒಂದೇ ದಿನ ಅವಳಿ ಸಹೋದರರನ್ನು ವಿವಾಹವಾಗಿದ್ದರು. ಇದೀಗ ಇಬ್ಬರು ಸಹೋದರಿಯರು ಒಂದೇ ದಿನ ಗರ್ಭಿಣಿಯಾಗಿರುವುದನ್ನು ಘೋಷಣೆ ಮಾಡಿರುವುದು ವಿಶೇಷವಾಗಿದೆ.

    ಬ್ರಿಟಾನಿ ಮತ್ತು ಬ್ರಿಯಾನಾ ಡೀನ್ ಇಬ್ಬರು ಅವಳಿ ಸಹೋದರಿಯರು ಒಟ್ಟಿಗೆ ಗರ್ಭಿಣಿಯಾಗಿದ್ದಾರೆ. ಇವರಿಬ್ಬರು ಒಂದೇ ದಿನ ಜೋಶ್ ಮತ್ತು ಜೆರೆಮಿ ಸ್ಯಾಲಿಯರ್ಸ್ ಎಂಬ ಇಬ್ಬರು ಅವಳಿ ಸಹೋದರರನ್ನು ಮದುವೆಯಾಗಿದ್ದರು. ಈ ದಂಪತಿ @salyerstwins ಎಂಬ ಇನ್‍ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಇಲ್ಲಿ ತಮ್ಮ ಟ್ಬಿನ್ಸ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ಇತ್ತೀಚೆಗೆ ಜೋಡಿಗಳು ಫೋಟೋವನ್ನು ಶೇರ್ ಮಾಡುವ ಮೂಲಕ ಇಬ್ಬರು ಒಟ್ಟಿಗೆ ಗರ್ಭಿಣಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ದಂಪತಿ ಈ ಪೋಸ್ಟನ್ನು ಆಗಸ್ಟ್ 14 ರಂದು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ನಾಲ್ವರು ಒಂದೇ ಬಣ್ಣದ ಬಿಕಿನಿ ಉಡುಪನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. “ಗೆಸ್ ಮಾಡಿ, ಇಬ್ಬರೂ ದಂಪತಿ ಗರ್ಭಿಣಿಯಾಗಿದ್ದಾರೆ” ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

    ಅಲ್ಲದೇ “ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ರೋಮಾಂಚನಗೊಂಡಿದ್ದೇವೆ ಮತ್ತು ಕೃತಜ್ಞರಾಗಿರುತ್ತೇವೆ. ನಮ್ಮ ಮಕ್ಕಳು ಸೋದರಸಂಬಂಧಿಗಳು ಮಾತ್ರವಲ್ಲದೆ ಒಡಹುಟ್ಟಿದವರು ಆಗುತ್ತಾರೆ. ನಾವು ಅವರ ಭೇಟಿಗಾಗಿ ಕಾಯಲು ಸಾಧ್ಯವಾಗುತ್ತಿಲ್ಲ” ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮಾಡಿ ಮೂರು ದಿನಗಳಾಗಿದ್ದು, ಇವರೆಗೂ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

    ನೂರಾರು ಮಂದಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಕೆಲವರು “ನಿಮಗಿಬ್ಬರಿಗೂ ಅವಳಿ ಮಕ್ಕಳು ಆಗುವ ಸಾಧ್ಯತೆಗಳಿವೆಯೇ” ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಒಂದೇ ವೇಳೆ ಅವಳಿ ಮಕ್ಕಳಾದರೆ ಅದು ಅದ್ಭುತವಾಗುತ್ತದೆ ಎಂದು ಹೇಳಿದ್ದಾರೆ. ಎರಡು ಜೋಡಿಗಳು 2018ರಲ್ಲಿ ಒಟ್ಟಿಗೆ ಒಂದೇ ದಿನ ಮದುವೆಯಾಗಿದ್ದರು.

    https://www.instagram.com/p/CD15iIUj4EK/?utm_source=ig_embed

  • ಧಾರಾವಾಹಿ ನೋಡುವ ವಿಚಾರಕ್ಕೆ ಜಗಳ – ವಿಷ ಸೇವಿಸಿದ ಮೂವರು ಸಹೋದರಿಯರು

    ಧಾರಾವಾಹಿ ನೋಡುವ ವಿಚಾರಕ್ಕೆ ಜಗಳ – ವಿಷ ಸೇವಿಸಿದ ಮೂವರು ಸಹೋದರಿಯರು

    – ಒಬ್ಬಳು ಸಾವು, ಇನ್ನಿಬ್ಬರು ಸ್ಥಿತಿ ಗಂಭೀರ

    ಲಕ್ನೋ: ಧಾರಾವಾಹಿ ನೋಡುವ ವಿಚಾರಕ್ಕೆ ಜಗಳವಾಡಿಕೊಂಡು ಮೂವರು ಸಹೋದರಿಯರು ವಿಷ ಸೇವಿಸಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ ಜಿಲ್ಲೆಯ ಭಲಸ್ವ ಗ್ರಾಮದಲ್ಲಿ ನಡೆದಿದೆ.

    ವಿಷ ಸೇವಿಸಿದ ಸಹೋದರಿಯರನ್ನು ರೀಟಾ, ಶೀತಲ್ ಮತ್ತು ತನು ಎಂದು ಗುರುತಿಸಲಾಗಿದೆ. ಇದರಲ್ಲಿ ವಿಷ ಸೇವಿಸಿ ರೀಟಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಶೀತಲ್ ಮತ್ತು ತನು ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿ ಇಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ವರದಿಯ ಪ್ರಕಾರ, ಈ ಮೂವರು ಯುವತಿಯರು ಓರ್ವ ಕೂಲಿ ಕಾರ್ಮಿಕನ ಮಕ್ಕಳಾಗಿದ್ದು, ತಂದೆ ಪಿಒಪಿ ಕೆಲಸಗಾರರಾಗಿದ್ದಾರೆ. ಈ ಮೂವರು ಎಂದಿನಂತೆ ಮನೆ ಕೆಲಸ ಮುಗಿಸಿ ಟಿವಿ ನೋಡಲು ಕುಳಿತುಕೊಂಡಿದ್ದಾರೆ. ಈ ವೇಳೆ ಮೂವರು ತನ್ನ ನೆಚ್ಚಿನ ಧಾರಾವಾಹಿಯನ್ನೇ ನೋಡಬೇಕು ಎಂದು ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಜಗಳ ಅತಿರೇಕಕ್ಕೆ ಹೋಗಿ ಮನೆಯಲ್ಲೇ ಇದ್ದ ವಿಷವನ್ನು ತೆಗೆದುಕೊಂಡು ತನ್ನ ನೆಚ್ಚಿನ ಧಾರಾವಾಹಿ ಹಾಕದಿದ್ದರೆ, ವಿಷ ಕುಡಿಯುತ್ತೇನೆ ಎಂದು ಒಬ್ಬರಿಗೊಬ್ಬರು ಬೆದರಿಕೆ ಹಾಕಿಕೊಂಡಿದ್ದಾರೆ.

    ಈ ವೇಳೆ ಬೆದರಿಕೆ ಹಾಕುವಾಗ ರೀಟಾ ನಿಜವಾಗಿಯೇ ವಿಷ ಕುಡಿದಿದ್ದಾಳೆ. ಆ ನಂತರ ಉಳಿದ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಇದನ್ನು ತಿಳಿದ ಊರಿನವರು ಹಾಗೂ ಕುಟುಂಬಸ್ಥರು ಮೂವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ರೀಟಾ ಸಾವನ್ನಪ್ಪಿದರೆ, ಶೀತಲ್ ಮತ್ತು ತನು ಸ್ಥಿತಿ ಗಂಭೀರವಾಗಿದೆ. ಈ ವಿಚಾರ ತಿಳಿದ ಊರಿನ ಗ್ರಾಮಸ್ಥರು ಶಾಕ್‍ಗೆ ಒಳಗಾಗಿದ್ದು, ಎಲ್ಲರೂ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ರೀಟಾ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದೇವೆ. ವರದಿ ಬಂದ ನಂತರ ಹೆಚ್ಚಿನ ತನಿಖೆ ಮಾಡುತ್ತೇನೆ. ಇನ್ನಿಬ್ಬರ ಪರಿಸ್ಥಿತಿ ತೀರ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ. ಈ ಸಂಬಂಧ ನಂಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೀದಿ ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮರೆದ ಸಹೋದರಿಯರು

    ಬೀದಿ ಶ್ವಾನಗಳಿಗೆ ಆಹಾರ ನೀಡಿ ಮಾನವೀಯತೆ ಮರೆದ ಸಹೋದರಿಯರು

    ಮುಂಬೈ: ಕೊರೊನಾ ಎಫೆಕ್ಟ್ ನಿಂದ ಆಹಾರವಿಲ್ಲದೆ ಬಳಲುತ್ತಿದ್ದ ಬೀದಿ ನಾಯಿಗಳಿಗೆ ಊಟ ಹಾಕಿ ಮಹಾರಾಷ್ಟ್ರದ ನಾಗ್ಪುರದ ಸಹೋದರಿಯರು ಮಾನವೀಯತೆ ಮೆರೆದಿದ್ದಾರೆ.

    ಕೊರೊನಾ ವೈರಸ್ ಭೀತಿಯಿಂದ ದೇಶವನ್ನು ಕಾಪಾಡಲು ಪ್ರಧಾನಿ ಮೋದಿ ಲಾಕ್‍ಡೌನ್ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಸಮಯದಲ್ಲಿ ಜನರಿಗೆ ತಿನ್ನಲು ಆಹಾರ ಸಿಗದೆ ಪರಾದಡುತ್ತಿದ್ದಾರೆ. ಇನ್ನೂ ಬೀದಿ ಶ್ವಾನಗಳು, ಪಕ್ಷಿಗಳು ಕೂಡ ಆಹಾರ ಸಿಗದೇ ಸಂಕಷ್ಟಕ್ಕೆ ಸಿಲುಕಿವೆ.

    ಹೀಗೆ ಆಹಾರವಿಲ್ಲದೇ ಸಂಕಷ್ಟದಲ್ಲಿ ಸಿಲುಕಿರುವ ಶ್ವಾನಗಳಿಗೆ ಮಹಾರಾಷ್ಟ್ರದ ಸಹೋದರಿಯರಾದ ಕಾಜಲ್ ಮತ್ತು ದಿಶಾ ನಾಗ್ಪುರದಲ್ಲಿರುವ ಬೀದಿ ನಾಯಿಗಳಿಗೆ ತಮ್ಮ ಮನೆಯಿಂದ ಬಾಕ್ಸ್‍ಗಳಲ್ಲಿ ಊಟವನ್ನು ತೆಗೆದುಕೊಂಡು ಹೋಗಿ ನೀಡುತ್ತಿದ್ದಾರೆ. ತಮ್ಮ ಬಗ್ಗೆ ಮಾತ್ರ ಯೋಚಿಸುವ ಜನರ ಮಧ್ಯೆ ಬೀದಿಶ್ವಾನಗಳ ಕಷ್ಟವನ್ನು ಅರ್ಥ ಮಾಡಿಕೊಂಡ ಸಹೋದರಿಯರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ವಿಚಾರವಾಗಿ ಮಾತನಾಡಿರುವ ಸಹೋದರಿಯರು, ಲಾಕ್ ಡೌನ್ ಆಗಿರುವುರಿಂದ ಯಾವ ಜನರು ಹೊರಗೆ ಬರುತ್ತಿಲ್ಲ. ಹೀಗಾಗಿ ಬೀದಿಯಲ್ಲಿರುವ ಶ್ವಾನಗಳಿಗೆ ಆಹಾರ ಸಿಗುತ್ತಿಲ್ಲ. ನಾವು ನಮ್ಮ ಬಗ್ಗೆ ಮಾತ್ರ ಯೋಚನೆ ಮಾಡುತ್ತೇವೆ. ನಮಗಾಗಿ ಸರ್ಕಾರ ಊಟದ ವ್ಯವಸ್ಥೆ ಮಾಡುತ್ತದೆ. ಆದರೆ ಈ ಶ್ವಾನಗಳು ಹಸಿವಿನಿಂದ ಸಾಯಬೇಕಾ? ಕೇವಲ ನಮ್ಮ ಬಗ್ಗೆ ನಾವು ಯೋಚಿಸಿದರೆ ಸಾಲದು ಇವುಗಳ ಬಗ್ಗೆಯೂ ಯೋಚಿಸಬೇಕು ಎಂದು ಹೇಳಿದ್ದಾರೆ.

    ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ರಾಜ್ಯದಲ್ಲಿ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಎದುರುಸುತ್ತಿದ್ದೇವೆ. ಆದರೆ ಈ ಪ್ರಾಣಿಗಳು ಹಸಿವಿನಿಂದ ಸಾಯುವುದನ್ನು ಹೇಗೆ ನೋಡುವುದು. ಈ ರೀತಿಯ ಸಮಯದಲ್ಲಿ ನಾವು ಅವುಗಳನ್ನು ಹಸಿವಿನಿಂದ ಸಾಯಲು ಬಿಡಬಾರದು. ಕಷ್ಟದ ಪರಿಸ್ಥಿತಿಯಲ್ಲಿ ಅವುಗಳಿಗೆ ಆಹಾರ ನೀಡುವುದು ಮತ್ತು ಅವುಗಳನ್ನು ಪೋಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಕಾಜಲ್ ಮತ್ತು ದಿಶಾ ತಿಳಿಸಿದ್ದಾರೆ.

    ಕೊರೊನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ರವರಗೆ ಲಾಕ್‍ಡೌನ್ ಮಾಡಿದ್ದಾರೆ. ಕೊರೊನಾ ವೈರಸ್ ಸೋಂಕಿನಿಂದ ಭಾರತದಲ್ಲಿ ಇಲ್ಲಿಯವರಗೆ 20 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 761 ಜನರಿಗೆ ಈ ವೈರಸ್ ತಗುಲಿದೆ.

  • ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

    ಅಂಧ ಸೋದರಿಯರಿಗೆ ಬೆಳಕಾದ ಜಗ್ಗೇಶ್

    ಬೆಂಗಳೂರು: ಅಂಧ ಸಹೋದರಿಯರ ಕಷ್ಟವನ್ನು ಆಲಿಸಿದ ನವರಸ ನಾಯಕ ಜಗ್ಗೇಶ್ ಅವರ ಬಡ ಕುಟುಂಬಕ್ಕೆ ಸಹಾಯದ ಹಸ್ತವನ್ನು ಚಾಚಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಪಮ ಶೋಗೆ ತುಮಕೂರಿನ ಮಧುಗಿರಿ ತಾಲೂಕಿನ ರತ್ನಮ್ಮ ಮತ್ತು ಮಂಜಮ್ಮ ಇಬ್ಬರು ಸಹೋದರಿಯರು ಬಂದಿದ್ದರು. ಈ ವೇಳೆ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದರು. ಇದೀಗ ಈ ಅಂಧ ಸಹೋದರಿಯರ ಬದುಕಿಗೆ ನವರಸ ಜಗ್ಗೇಶ್ ಬೆಳಕಾಗಿದ್ದಾರೆ.

    ಸಹೋದರಿಯ ನೋವಿನ ಕಥೆ ಕೇಳಿದ ನವರಸ ನಾಯಕ ಜಗ್ಗೇಶ್ ಅವರ ಕಷ್ಟಕ್ಕೆ ಸಹಾಯದ ಹಸ್ತ ಚಾಚಿದ್ದಾರೆ. ಸಹೋದರಿಯರ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ “ದೇವರ ಮಕ್ಕಳ ಸ್ಥಿತಿಕಂಡು ಭಾವುಕನಾದೆ. ತಡಮಾಡದೆ ಇವರಿಗೆ ಸೂರು ಕಲ್ಪಿಸಿಕೊಡುವಂತೆ ರಾಯರ ಪ್ರೇರಣೆಯಾಯಿತು. ಆ ಕಾರ್ಯಕ್ಕೆ ಶಿರಬಾಗಿ ಮಾಡಿಕೊಡಲು ಕೊರಟಗೆರೆ ಜಗ್ಗೇಶ್ ಅಭಿಮಾನಿಗಳ ಸಂಘದ ಫ್ರೆಂಡ್ಸ್ ಗ್ರೂಪ್‍ಗೆ ಜವಾಬ್ಧಾರಿ ನೀಡಿರುವೆ. ಈ ಕಲಾವಿದರ ಕೂಗು ರಾಯರ ಮಡಿಲು ಸೇರಿತು” ಎಂದು ಬರೆದುಕೊಂಡಿದ್ದಾರೆ.

    ಜಗ್ಗೇಶ್ ಅವರ ಈ ಮಾನವೀಯ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಕೂಡ ಸಹೋದರಿಯರ ಸಹಾಯಕ್ಕೆ ಮುಂದಾಗಿದ್ದಾರೆ. ನನಗೆ ಶಕ್ತಿ ಇರುವವರೆಗೂ ನಿಮ್ಮ ಮನೆಗೆ ಪ್ರತಿ ತಿಂಗಳ ಊಟಕ್ಕೆ ಏನು ಬೇಕು ಅದು ನನ್ನ ಕಡೆಯಿಂದ ಸಿಗಲಿದೆ ಎಂದು ಭರವಸೆ ಕೊಟ್ಟಿದ್ದಾರೆ.

    https://www.instagram.com/p/B8alhdFpw-j/?igshid=1k84g3s74w787

    ಸಹೋದರಿಯರಿಗೆ ಹುಟ್ಟಿನಿಂದ ಕಣ್ಣಿಲ್ಲ. ಇವರು ಒಟ್ಟು ನಾಲ್ಕು ಜನ ಮಕ್ಕಳು, ಅವರಲ್ಲಿ ಇಬ್ಬರಿಗೆ ಕಣ್ಣಿಲ್ಲ. ಗಂಡು ಮಗ ಇದ್ದನು. ಆತನೂ ಕೂಡ ಕಾಯಿಲೆಯಿಂದ ಮೃತಪಟ್ಟಿದ್ದಾನೆ. ತಾಯಿಯೂ ಕೂಡ ಸಾವನ್ನಪ್ಪಿದು, ಅಜ್ಜಿ ಜೊತೆ ವಾಸವಾಗಿದ್ದಾರೆ. ತಂದೆಯೂ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕಷ್ಟದಲ್ಲೂ ಅಂಧ ಸಹೋದರಿಯರು ಸಂಸಾರದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಊಟಕ್ಕಾಗಿ ರತ್ಮಮ್ಮ ಮತ್ತು ಮಂಜಮ್ಮ ಊರಿನ ದಂಡಿನ ಮಾರಮ್ಮ ದೇವಾಲಯದ ಮುಂದೆ ಹಾಡು ಹೇಳಲು ಶುರು ಮಾಡಿದರು. ಅಲ್ಲಿಗೆ ಬರುವ ಭಕ್ತರು ನೀಡುವ ಹಣದಿಂದ ಸಂಸಾರವನ್ನು ನಡೆಸುತ್ತಿದ್ದಾರೆ.

     

  • ನೇಪಾಳಿಗಳಂತೆ ಹೋಲಿಕೆ- ಪಾಸ್‍ಪೋರ್ಟ್ ಅರ್ಜಿ ತಿರಸ್ಕೃತ

    ನೇಪಾಳಿಗಳಂತೆ ಹೋಲಿಕೆ- ಪಾಸ್‍ಪೋರ್ಟ್ ಅರ್ಜಿ ತಿರಸ್ಕೃತ

    -ರಾಷ್ಟ್ರೀಯತೆ ಸಾಬೀತು ಮಾಡಿ ಎಂದ ಅಧಿಕಾರಿ

    ಚಂಡೀಗಢ: ನೇಪಾಳಿಗಳಂತೆ ಕಾಣುತ್ತೀರಾ ಎಂದು ಯುವತಿಯರಿಗೆ ಅಧಿಕಾರಿಗಳು ಪಾಸ್‍ಪೋರ್ಟ್ ಅರ್ಜಿ ನಿರಾಕರಣೆ ಮಾಡಿರುವ ಘಟನೆ ಚಂಡೀಗಢದ ಅಂಬಾಲದಲ್ಲಿ ನಡೆದಿದೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಯುವತಿ, ನಾನು ಮತ್ತು ನನ್ನ ತಂಗಿ ಪಾಸ್‍ಪೋರ್ಟ್ ಮಾಡಿಸಬೇಕು ಎಂದು ಅರ್ಜಿ ಹಾಕಲು ಹೋಗಿದ್ದೆವು. ಅಲ್ಲಿ ನಮ್ಮನ್ನು ನೋಡಿದ ಅಧಿಕಾರಿಗಳು ನೀವು ನೇಪಾಳಿಗಳಂತೆ ಕಾಣುತ್ತೀರಾ, ನಿಮ್ಮ ರಾಷ್ಟ್ರೀಯತೆಯನ್ನು ಮೊದಲು ಸಾಬೀತು ಮಾಡಿ ಎಂದು ಹೇಳಿದರು ಎಂದು ಹೇಳಿದ್ದಾರೆ.

    ನಾವು ತೆಗೆದುಕೊಂಡು ಹೋಗಿದ್ದ ಅರ್ಜಿ ಮೇಲೆ ಅಲ್ಲಿನ ಪಾಸ್‍ಪೋರ್ಟ್ ಮಾಡಿಕೊಡುವ ಅಧಿಕಾರಿಗಳು ಅರ್ಜಿದಾರರು ನೇಪಾಳಿಗಳಂತೆ ಕಾಣುತ್ತಾರೆ ಎಂದು ಬರೆದುಕೊಟ್ಟರು. ಮತ್ತು ನಮ್ಮ ರಾಷ್ಟ್ರೀಯತೆಯನ್ನು ಸಾಬೀತು ಮಾಡಿ ಎಂದು ಹೇಳಿದರು. ಆಗ ನಾವು ಈ ವಿಷಯವನ್ನು ಸಚಿವರಾದ ಅನಿಲ್ ವಿಜ್ ಅವರಿಗೆ ಹೇಳಿದ ನಂತರ ನಮ್ಮ ಪಾಸ್‍ಪೋರ್ಟ್ ಮಾಡಿಕೊಡುವ ಪ್ರಕ್ರಿಯೆಯನ್ನು ಆರಂಭಿಸಿದರು ಎಂದು ಯುವತಿ ಮಾಹಿತಿ ನೀಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಅಂಬಾಲದ ಜಿಲ್ಲಾಧಿಕಾರಿ ಅಶೋಕ್ ಶರ್ಮಾ, ಭಗತ್ ಬಹದ್ದೂರ್ ಎಂಬ ವ್ಯಕ್ತಿ ತನ್ನ ಹೆಣ್ಣುಮಕ್ಕಳಾದ ಸಂತೋಷ್ ಮತ್ತು ಹೆನ್ನಾಳೊಂದಿಗೆ ಪಾಸ್‍ಪೋರ್ಟ್ ಗಾಗಿ ಚಂಡೀಗಢದ ಪಾಸ್‍ಪೋರ್ಟ್ ಕಚೇರಿಗೆ ಹೋಗಿದ್ದಾರೆ. ಆದರೆ ಅಲ್ಲಿನ ಅಧಿಕಾರಿಗಳು ಪಾಸ್‍ಪೋರ್ಟ್ ಕೊಡಲು ನಿರಾಕರಿಸಿ ಅರ್ಜಿಯ ಮೇಲೆ ಅರ್ಜಿದಾರರು ನೇಪಾಳಿಗಳಂತೆ ಕಾಣುತ್ತಾರೆ ಎಂದು ಬರೆದು ಕಳುಹಿಸಿದ್ದಾರೆ ಎಂದು ಹೇಳಿದರು.

    ಈ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಆ ಇಬ್ಬರು ಸಹೋದರಿಯರನ್ನು ಕರೆಸಿ, ಅಧಿಕಾರಿಗಳಿಗೆ ಅವರ ಪಾಸ್‍ಪೋರ್ಟ್ ಮಾಡಿಕೊಡಿ ಎಂದು ಸೂಚಿಸಿದ್ದೇನೆ. ಅವರಿಬ್ಬರಿಗೂ ಶ್ರೀಘದಲ್ಲೇ ಪಾಸ್‍ಪೋರ್ಟ್ ಮಾಡಿಕೊಡಲಾಗುತ್ತದೆ. ಜೊತೆಗೆ ಘಟನೆಯ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಶೋಕ್ ಶರ್ಮಾ ತಿಳಿಸಿದ್ದಾರೆ.

  • 2017ರಲ್ಲಿ ರೇಪ್ – ಈಗ ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ ಜನ

    2017ರಲ್ಲಿ ರೇಪ್ – ಈಗ ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ ಜನ

    ತಿರುವನಂತಪುರಂ: ಕೇರಳದಲ್ಲಿ 2017 ರಲ್ಲಿ ನಡೆದಿದ್ದ ವಲಯರ್ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಕೆಲ ಜನರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.

    ಇಂದು ಬೆಳಗ್ಗೆ ವಲಯರ್ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಧು ಎಂಬವನ ಮೇಲೆ ಐದು ಜನರ ಗುಂಪೊಂದು ದಾಳಿ ಮಾಡಿ ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆರೋಪಿಯು ಪಲಕ್ಕಾಡ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ವಲಯರ್ ಪೊಲೀಸ್ ಠಾಣೆಯ ಅಧಿಕಾರಿಗಳು, ಮೊದಲಿಗೆ ಐದು ಜನರ ಗುಂಪೊಂದು ಆರೋಪಿ ಮಧುವಿನ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಆರೋಪಿಯನ್ನು ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಐದು ಮಂದಿಯಲ್ಲಿ ಮೂವರನ್ನು ನಾವು ವಶಕ್ಕೆ ಪಡೆದಿದ್ದೇವೆ. ಆಸ್ಪತ್ರೆಗೆ ಹೋಗಿ ಹಲ್ಲೆಗೊಳಾಗದ ಆರೋಪಿಯ ಬಳಿ ಹೇಳಿಕೆಯನ್ನು ಪಡೆದು ಬಂದಿದ್ದೇವೆ ಎಂದು ಹೇಳಿದ್ದಾರೆ.

    ಏನಿದು ವಲಯರ್ ಅತ್ಯಾಚಾರ ಪ್ರಕರಣ?
    2017 ರಲ್ಲಿ ಕೇರಳದ ಪಲಕ್ಕಾಡ್ ಜಿಲ್ಲೆಯ ವಲಯರ್ ಪ್ರದೇಶದ ಹಳೆಯ ಮನೆಯೊಂದರಲ್ಲಿ 13 ವರ್ಷದ ಅಪ್ರಾಪ್ತೆಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆದರೆ ಮೃತಪಡುವುದಕ್ಕೂ ಮುನ್ನ ಆಕೆಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಈ ಸಾವಿನ ಪ್ರಕರಣದಲ್ಲಿ ಸಂತ್ರಸ್ತೆಯ 9 ವರ್ಷದ ತಂಗಿ ಅಕ್ಕ ಸಾವನ್ನಪ್ಪಿದ ದಿನ ನಮ್ಮ ಮನೆ ಬಳಿ ಇಬ್ಬರು ಅನುಮಾಸ್ಪದವಾಗಿ ಓಡಾಡುತ್ತಿದ್ದರು ಎಂದು ಸಾಕ್ಷಿ ಹೇಳಿದ್ದಳು.

    ಈ ಘಟನೆಯಾದ ಎರಡು ತಿಂಗಳ ಬಳಿಕ 9 ವರ್ಷದ ತಂಗಿಯೂ ಸಹ ಅದೇ ಜಗದಲ್ಲಿ ಅದೇ ರೀತಿಯಾಗಿ ಕೊಲೆಯಾಗಿದ್ದಳು. ಆಕೆಯ ಮರಣೋತ್ತರ ಪರೀಕ್ಷೆಯ ನಂತರ ಸಂತ್ರಸ್ತೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ವರದಿ ಬಂದಿತ್ತು. ಈ ಸಹೋದರಿಯರ ಪ್ರಕರಣವು ಕೇರಳದಲ್ಲಿ ಕೋಲಾಹಲನ್ನು ಸೃಷ್ಟಿಸಿತ್ತು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕಲಾಗಿತ್ತು.

    ಸಾರ್ವಜನಿಕರ ಒತ್ತಡಕ್ಕೆ ಮಣಿದ ಪೊಲೀಸ್ ಸಂತ್ರಸ್ತ ಸಹೋದರಿಯರ ಮನೆಗೆ ಸದಾ ಬರುತ್ತಿದ್ದ ಮೂವರನ್ನು ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದರು. ಆದರೆ ಸ್ಥಳೀಯ ನ್ಯಾಯಾಲಯವು ಈ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ವಿಚಾರವಾಗಿ ಹೈಕೋರ್ಟಿನಲ್ಲಿ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.

  • ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿ

    ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿ

    -ಒಟ್ಟಿಗೆ ಸಮಾಧಿ ಮಾಡಿ ಕಣ್ಣೀರಿಟ್ಟ ಪೋಷಕರು

    ತಿರುವನಂತಪುರಂ: ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿಯಾದ ಮನಕಲಕುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.

    ಮಲಪ್ಪುರಂ ಜಿಲ್ಲೆಯ ನಿಲಾಂಬೂರು ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಪುಟ್ಟ ಕವಲಪ್ಪರ ಗ್ರಾಮದ ಅನಘಾ (4) ಮತ್ತು ಅಲೀನಾ(8) ಮೃತ ಸಹೋದರಿಯರು. ಮುತಪ್ಪನ್ ಕುನ್ನು ಬೆಟ್ಟದಲ್ಲಿ ಗುರುವಾರ ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟಿದ್ದ ಸಹೋದರಿಯರ ಮೃತದೇಹವು ಸೋಮವಾರ ಸಿಕ್ಕಿದ್ದು, ಅಂದೇ ಇಬ್ಬರನ್ನು ಒಂದೇ ಜಾಗದಲ್ಲಿ ಸಮಾಧಿ ಮಾಡಿ ಪೋಷಕರು ಕಣ್ಣೀರಿಟ್ಟಿದ್ದಾರೆ.

    ಪುಟ್ಟ ಕವಲಪ್ಪರ ಗ್ರಾಮದ ವಿಕ್ಟರ್ ಹಾಗೂ ಥಾಮಸ್ ಸಹೋದರರ ಮನೆಯು ಕವಲಪ್ಪರ ಗ್ರಾಮದ ಮುತಪ್ಪಂಕ್ ಬೆಟ್ಟದ ಅತ್ಯಂತ ಮೇಲ್ಭಾಗದಲ್ಲಿತ್ತು. ಈ ಇಬ್ಬರಲ್ಲಿ ಒಬ್ಬರು ಬಡಗಿ ಮತ್ತು ಮತ್ತೊಬ್ಬರು ಪೇಂಟಿಂಗ್ ಕೆಲಸ ಮಾಡಿ, ಜೀವನ ನಡೆಸುತ್ತಿದ್ದರು. ವಿಕ್ಟರ್ ಹಾಗೂ ಥಾಮಸ್ ಅವರಿಗೆ ಐವರು ಮಕ್ಕಳಿದ್ದು, ಪತ್ನಿಯರ ಜೊತೆಗೆ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡ ಮಳೆ ಅವರ ಬದುಕನ್ನೇ ಕಿತ್ತುಕೊಂಡಿದೆ.

    ವಿಕ್ಟರ್ ಹಾಗೂ ಥಾಮಸ್ ಅವರ ಮಕ್ಕಳಾದ ಅನಘಾ ಮತ್ತು ಅಲೀನಾ ಒಟ್ಟಾಗಿ ಇರುತ್ತಿದ್ದರು. ಮಲಗುವಾಗಲೂ ಅಷ್ಟೇ ಒಂದೇ ಚಾಪೆಯ ಮೇಲೆ ಪರಸ್ಪರ ತಬ್ಬಿಕೊಂಡು ಮಲಗುತ್ತಿದ್ದರು. ಆದರೆ ಗುರುವಾರ ರಾತ್ರಿ ಕವಲಪ್ಪರಾದ ಮುತಪ್ಪಂಕ್ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ಸುಮಾರು 40 ಮನೆಗಳು ನಾಶವಾದವು. ಈ ವೇಳೆ ವಿಕ್ಟೋರ್ ಹಾಗೂ ಥಾಮಸ್ ಅವರ ಮನೆ ಭೂಕುಸಿತಕ್ಕೆ ಒಳಗಾಗಿ ಮಣ್ಣಿನ ಅಡಿ ಸಿಲುಕ್ಕಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಅವರು ಪತ್ನಿಯರು ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಆಚೆಗೆ ಬಂದಿದ್ದರು. ಆದರೆ ಅನಘಾ ಮತ್ತು ಅಲೀನಾ ಮನೆಯಲ್ಲಿಯೇ ಉಳಿದಿದ್ದರಿಂದ ಮಣ್ಣಿನ ಅಡಿ ಸಿಕ್ಕು ಮೃತಪಟ್ಟಿದ್ದರು.

    ಮನೆಯಿಂದ ಹೊರಗೆ ಬಂದಿದ್ದ ವಿಕ್ಟರ್ ಇಬ್ಬರು ಹುಡುಗಿಯರನ್ನು ಹುಡುಕಲು ಇತರರೊಂದಿಗೆ ಮರಳಿದ್ದರು. ಮನೆ ಸಂಪೂರ್ಣವಾಗಿ ನೆಲ ಸಮವಾಗಿತ್ತು. ಇದನ್ನು ನೋಡಿದ ಅವರು ಸುಮಾರು ಗಂಟೆಗಳ ಕಾಲ ಮಣ್ಣು ಅಗೆದರು. ಆದರೆ ಮಕ್ಕಳು ಸಿಗಲಿಲ್ಲ ಎಂದು ಕವಲಪ್ಪರ ನಿವಾಸಿ ಅಯ್ಯಪ್ಪನ್ ಹೇಳಿದ್ದಾರೆ.

    ಮಲಪ್ಪುರಂ ಜಿಲ್ಲೆಯ ಭೂತಾನಂನ ಸೇಂಟ್ ಮೇರಿಸ್ ಚರ್ಚ್ ನಲ್ಲಿ ಸೋಮವಾರ ಜನಸಮೂಹ ಜಮಾಯಿಸಿತ್ತು. ಪೋಷಕರು ಕಣ್ಣೀರಿಡುತ್ತಾ ಅನಘಾ ಹಾಗೂ ಅಲೀನಾ ಮೃತ ದೇಹವನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿ ಇಟ್ಟು ಸಮಾಧಿ ಮಾಡಿದರು. ಈ ವೇಳೆ ಅಲ್ಲಿ ನೆರೆದಿದ್ದ ಜನರು ಪುಟ್ಟ ಮಕ್ಕಳನ್ನು ನೆನೆದು ಕಣ್ಣೀರಿಟ್ಟರು.

    ಗುರುವಾರ ಸಂಭವಿಸಿದ ಗುಟ್ಟ ಕುಸಿತದಲ್ಲಿ ಸಾವನ್ನಪ್ಪಿದವರ ಪೈಕಿ ಇಬ್ಬರು ಬಾಲಕಿಯರು ಸೇರಿದಂತೆ 14 ಜನರ ಮೃತ ದೇಹಗಳು 55ಕ್ಕೂ ಹೆಚ್ಚು ಜನರ ಮೃತ ದೇಹಗಳು ಅವಶೇಷಗಳ ಅಡಿಯಲ್ಲಿವೆ ಎಂದು ಹೇಳಲಾಗುತ್ತಿದೆ.

  • ಉದ್ಯಮಿಯನ್ನು ಪ್ರಜ್ಞೆ ತಪ್ಪಿಸಿ ದರೋಡೆಗೈದ ಸಹೋದರಿಯರು

    ಉದ್ಯಮಿಯನ್ನು ಪ್ರಜ್ಞೆ ತಪ್ಪಿಸಿ ದರೋಡೆಗೈದ ಸಹೋದರಿಯರು

    ಲಕ್ನೋ: ಉದ್ಯಮಿಯೊಬ್ಬರನ್ನು ಪ್ರಜ್ಞೆ ತಪ್ಪಿಸಿ ನಂತರ ಮೂವರು ಸಹೋದರಿಯರು ಸೇರಿ ಅವನ ಹತ್ತಿರ ಇದ್ದ ದುಡ್ಡು ಮತ್ತು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ.

    ಈ ಘಟನೆ ಶನಿವಾರ ನಡೆದಿದ್ದು, ಮೂರು ಜನ ಸಹೋದರಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಸಹೋದರಿಯರನ್ನು, ರಾಜಸ್ಥಾನದ ಬಿಕಾನೆರ್ ಮೂಲದ 25 ವರ್ಷದ ವಿಜಯಲಕ್ಷ್ಮಿ ಮತ್ತು ಅವಳ ಸಹೋದರಿ 21 ವರ್ಷದ ಕೃಷ್ಣ ಮತ್ತು ಇವರ ಸೋದರಸಂಬಂಧಿ ಬುಲಂದ್‍ಶಹರ್‍ ನ 27 ವರ್ಷದ ಸುನೀತಾ ಎಂದು ಗುರುತಿಸಲಾಗಿದೆ. ಇದರಲ್ಲಿ ಸುನೀತಾ ವಿಧವೆಯಾಗಿದ್ದು, ಈ ಹಿಂದೆ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಳು. ಉಳಿದ ಇಬ್ಬರು ಆರೋಪಿಗಳು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.

    ಪೊಲೀಸರು ಹೇಳುವ ಪ್ರಕಾರ, ಮಹಿಳೆಯರು ಮೊದಲು ಉದ್ಯಮಿಯೊಂದಿಗೆ ಸ್ನೇಹ ಬೆಳೆಸಿ ನಂತರ ಅವನನ್ನು ಹೋಟೆಲ್‍ಗೆ ಎಂದು ಕರೆದುಕೊಂಡು ಹೋಗಿ, ನಂತರ ಉದ್ಯಮಿಗೆ ಜಾಸ್ತಿ ಮದ್ಯಪಾನ ಮಾಡಿಸಿ ಪ್ರಜ್ಞೆ ತಪ್ಪಿಸಿ ನಂತರ ಅವನ ಹತ್ತಿರ ಇರುವ ಎಲ್ಲಾ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ಹೇಳಿದ್ದಾರೆ. ಬಂಧಿತ ಆರೋಪಿಗಳಿಂದ ಎರಡು ಮೊಬೈಲ್‍ಗಳು, ಎರಡು ವಾಚ್‍ಗಳು ಮತ್ತು ಉದ್ಯಮಿಯ ಕಾರಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಈ ವೇಳೆ ಪೊಲೀಸ್ ವಿಚಾರಣೆಯಲ್ಲಿ ನಡೆದ ಘಟನೆಯನ್ನು ಒಪ್ಪಿಕೊಂಡಿರುವ ಸಹೋದರಿಯರು, ಉದ್ಯಮಿಯ ಕ್ರೆಡಿಟ್ ಕಾರ್ಡ್ ಬಳಸಿ 15,000 ರೂಪಾಯಿ ಹಣವನ್ನು ಎರಡು ಬಾರಿ ಡ್ರಾ ಮಾಡಿರುವುದಾಗಿ ಮತ್ತು ಅವರ ಡೆಬಿಟ್ ಕಾರ್ಡ್ ಬಳಸಿ 4,500 ರೂಗಳನ್ನು ಡ್ರಾ ಮಾಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ.

    ಉದ್ಯಮಿಯೂ ಮದ್ಯಪಾನ ಮಾಡಿ ಪ್ರಜ್ಞಾಹೀನನಾಗಿದ್ದಾಗ, ನಾವು ಅವನ ಮೊಬೈಲ್ ಪಿನ್ ಪಡೆದುಕೊಂಡು ನಂತರ ಅವನ ಪೇಟಿಎಂ ಮೂಲಕ 26,000 ರೂಗಳನ್ನು ವಿವಿಧ ಮೂರು ನಂಬರ್ ಗೆ ವರ್ಗಾಯಿಸಿದ್ದೇವೆ. ನಂತರ ನಾವು ಕ್ಯಾಬ್ ಮಾಡಿಕೊಂಡು ಮನೆಗೆ ಹೋದೆವು ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

    ಈ ಹಿಂದೆಯೂ ಈ ಮೂವರು ಸಹೋದರಿಯರು ನಕಲಿ ಗುರುತಿನ ಚೀಟಿಗಳನ್ನು ತೋರಿಸುವ ಮೂಲಕ ಪ್ರವೇಶ ಶುಲ್ಕವಿಲ್ಲದೆ ಪಬ್‍ಗಳಿಗೆ ಹೋಗಿದ್ದ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಈ ಹಿಂದೆ ಈ ಮೂವರು ಸಹೋದರಿಯರು ಸೇರಿ ಹಲವಾರು ಪುರುಷರನ್ನು ಈ ರೀತಿಯಲ್ಲೇ ವಂಚನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.