Tag: ಸಹಾಯ ಧನ

  • ಕೊಬ್ಬರಿಗೆ ಸಹಾಯ ಧನ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ಶಿವಲಿಂಗೇಗೌಡ ಎಚ್ಚರಿಕೆ

    ಕೊಬ್ಬರಿಗೆ ಸಹಾಯ ಧನ ನೀಡದಿದ್ದರೆ ಸಿಎಂ ಮನೆ ಮುಂದೆ ಪ್ರತಿಭಟನೆ: ಶಿವಲಿಂಗೇಗೌಡ ಎಚ್ಚರಿಕೆ

    – ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ

    ಹಾಸನ: ಕೊಬ್ಬರಿಗೆ ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ 1,200 ರೂಪಾಯಿ ಸಹಾಯ ಧನ ನೀಡದಿದ್ದರೆ ಸಿಎಂ ಯಡಿಯೂರಪ್ಪ ಮನೆಮುಂದೆ ಹೋಗಿ ಧಿಕ್ಕಾರ ಕೂಗುತ್ತೇನೆ. ಜೊತೆಗೆ ಅವರ ಮನೆ ಮುಂದೆ ಕುಳಿತು ಹೋರಾಟ ಮಾಡುವುದಾಗಿ ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.

    ಕೊಬ್ಬರಿಗೆ ರಾಜ್ಯ ಸರ್ಕಾರ ಸಹಾಯಧನ ನೀಡಬೇಕು ಮತ್ತು ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳುವ ಅವಧಿ ವಿಸ್ತರಣೆ ಮಾಡಬೇಕು ಎಂದು ಶಾಸಕ ಶಿವಲಿಂಗೇಗೌಡ ನೇತೃತ್ವದಲ್ಲಿ ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ಮಾತನಾಡಿದ ಶಾಸಕರು ನಫೆಡ್‍ನಲ್ಲಿ ಬೆಂಬಲ ಬೆಲೆಯಲ್ಲಿ ಕೊಬ್ಬರಿ ಕೊಳ್ಳಲು ಕೇವಲ 800 ಜನ ರೈತರ ಹೆಸರು ನೋಂದಣಿ ಮಾಡಿಕೊಂಡು ನೋಂದಣಿ ಸಮಯ ಮುಗಿದಿದೆ ಅಂತಿದ್ದಾರೆ. ಇದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಕೊರೊನಾ ಇಲ್ಲದಿದ್ದರೆ ಬಸ್ ನಿಲ್ಲಿಸಿ, ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಏನು ಎಚ್ಚರಿಕೆ ನೀಡಬೇಕೋ ನೀಡುತ್ತಿದ್ದೆವು. ಗೌರವದಿಂದ ಬೀದಿಯಲ್ಲಿ ನಡೆದು ಬಂದು ನಿಮ್ಮ ಮಾನ ಮರ್ಯಾದೆ ಉಳಿಸಿದ್ದೇವೆ. ಕೂಡಲೇ ಕೊಬ್ಬರಿಗೆ ರಾಜ್ಯ ಸರ್ಕಾರ 1,200 ಪ್ರೋತ್ಸಾಹ ಧನ ನೀಡಿ ರೈತರ ಹಿತ ಕಾಯಬೇಕು ಎಂದು ಶಾಸಕ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ. ಇದೇ ವೇಳೆ ಬಿಜೆಪಿ ಸರ್ಕಾರದ ರಾಜಕೀಯದ ಬಗ್ಗೆ ಆಕ್ರೋಶ ಹೊರಹಾಕಿದ ಶಾಸಕರು, ಈ ರಾಜಕೀಯದ ಬಗ್ಗೆ ಮಾತನಾಡಿ ಬಾಯಿ ಹೊಲಸು ಮಾಡಿಕೊಳ್ಳಲ್ಲ. ಇದು ಕೆಟ್ಟ ರಾಜಕಾರಣ. ಇದು ಅಂಬೇಡ್ಕರ್ ಬರೆದ ಪ್ರಜಾಪ್ರಭುತ್ವದ ರಾಜಕಾರಣ ಅಲ್ಲ ಎಂದರು.

    ಇಂದಿರಾಗಾಂಧಿ ಎಮರ್ಜೆನ್ಸಿ ಡಿಕ್ಲೇರ್ ಮಾಡಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ ಪ್ರತಿಫಲ ಅನುಭವಿಸಿದ್ದಾರೆ. ಇವರು ಅನುಭವಿಸುವುದಾದರೆ ಅನುಭವಿಸಲಿ. ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಇವರ್ಯಾರಿಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎನಿಸುತ್ತಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಆ ಬಗ್ಗೆ ಮಾತನಾಡಲು ಮನಸ್ಸಿಗೆ ಬೇಸರ ಮತ್ತು ಸಂಕಟ ಆಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

  • ದೇವ್ರು ನಂಗೆ ಸಾಕಷ್ಟು ಹಣ ನೀಡಿದ್ದಾನೆ, ಅದನ್ನ ಎಲ್ಲಿ ತಗೊಂಡು ಹೋಗ್ಲಿ: ಅಕ್ಷಯ್

    ದೇವ್ರು ನಂಗೆ ಸಾಕಷ್ಟು ಹಣ ನೀಡಿದ್ದಾನೆ, ಅದನ್ನ ಎಲ್ಲಿ ತಗೊಂಡು ಹೋಗ್ಲಿ: ಅಕ್ಷಯ್

    ಮುಂಬೈ: ಬಾಲಿವುಡ್ ಆ್ಯಕ್ಷನ್ ಹೀರೋ ಅಕ್ಷಯ್ ಕುಮಾರ್ ಅವರು ಅಸ್ಸಾಂ ಪ್ರವಾಹಕ್ಕೆ 2 ಕೋಟಿ ರೂ. ಸಹಾಯಧನ ನೀಡಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಲಿ ಎಂದು ಪ್ರತಿಕ್ರಿಯಿಸಿದ್ದಾರೆ.

    ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಅಸ್ಸಾಂಗೆ ಅಕ್ಷಯ್ ಕುಮಾರ್ ಅವರು ಪ್ರವಾಹ ಪೀಡಿತ ಜನರಿಗೆ ಮತ್ತು ಕಾಜಿರಂಗ ಉದ್ಯಾನವನಕ್ಕೆ ತಲಾ 1 ಕೋಟಿ ರೂ.ಯಂತೆ ಒಟ್ಟು 2 ಕೋಟಿ ರೂ. ಸಹಾಯ ಧನವನ್ನು ನೀಡಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದ್ದಾಗ, “ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾನೆ. ನಾನು ಆ ಹಣವನ್ನು ಎಲ್ಲಿ ತೆಗೆದುಕೊಂಡು ಹೋಗಲಿ” ಎಂದು ಹೇಳಿದ್ದಾರೆ.

    ಇತ್ತೀಚೆಗೆ ಅಕ್ಷಯ್ ಕುಮಾರ್ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, “ಅಸ್ಸಾಂ ಪ್ರವಾಹದ ಫೋಟೋಗಳನ್ನು ನೋಡಿ ನನಗೆ ತುಂಬಾ ದುಃಖ ಆಗುತ್ತಿತ್ತು. ಹಾಗಾಗಿ ನಾನು ಬೇರೆ ಏನೂ ಯೋಚಿಸದೇ ಹಣವನ್ನು ದಾನ ಮಾಡಿದೆ” ಎಂದು ತಿಳಿಸಿದ್ದಾರೆ.

    ಅಲ್ಲದೆ ತಾಯಿಯೊಬ್ಬರು ಮಕ್ಕಳನ್ನು ಭುಜದ ಮೇಲೆ ಎತ್ತಿಕೊಂಡು ಪ್ರವಾಹದ ನೀರಿನಲ್ಲಿ ಹೋಗುತ್ತಿರುವ ಫೋಟೋ ನೋಡಿ ನನ್ನ ಮನಸ್ಸಿಗೆ ತುಂಬಾ ಪ್ರಭಾವ ಬೀರಿತ್ತು. ಅವರ ಮುಖದಲ್ಲಿ ಯಾವುದೇ ದುಃಖ ಅಥವಾ ಒತ್ತಡ ಕಾಣಿಸಲಿಲ್ಲ. ನಾನು ಪ್ರವಾಹದ ಫೋಟೋಗಳನ್ನು ನೋಡಿದಾಗ ಇದು ನನ್ನ ಪತ್ನಿಯ ಜೊತೆ ಅಥವಾ ನನ್ನ ಮಗಳ ಜೊತೆನೂ ಸಂಭವಿಸಬಹುದು ಎಂದು ಅನಿಸಿತ್ತು. ಈ ರೀತಿಯ ಫೋಟೋಗಳನ್ನು ನೋಡಿದರೆ ನನ್ನ ಮನಸ್ಸು ಚುಚ್ಚುತ್ತದೆ. ಹಾಗಾಗಿ ನಾನು ಸಹಾಯಧನ ನೀಡಿದೆ ಎಂದು ಅಕ್ಷಯ್ ಹೇಳಿದ್ದಾರೆ.

    ಬಳಿಕ ಮಾತನಾಡಿದ ಅವರು, ನಾನು ಇದೇ ರೀತಿಯ ಪ್ರಾಣಿಗಳ ಫೋಟೋವನ್ನು ಕೂಡ ನೋಡಿದೆ. ದೇವರು ನನಗೆ ಸಾಕಷ್ಟು ಹಣವನ್ನು ನೀಡಿದ್ದಾರೆ. ನಾನು ಹಿಂದೆ ಮುಂದೆ ಯೋಚಿಸದೇ ಅಸ್ಸಾಂ ಪ್ರವಾಹಕ್ಕಾಗಿ ಹಣವನ್ನು ನೀಡಿದೆ ಎಂದು ಕಿಲಾಡಿ ತಿಳಿಸಿದ್ದಾರೆ.

    ಪ್ರವಾಹದ ಸಂದರ್ಭದಲ್ಲಿ ಅಕ್ಷಯ್ ತಮ್ಮ ಟ್ವಿಟ್ಟರಿನಲ್ಲಿ, “ಅಸ್ಸಾಂನಲ್ಲಿ ಪ್ರವಾಹದಿಂದ ಎದುರಾಗಿರುವ ಪರಿಸ್ಥಿತಿ ನಿಜಕ್ಕೂ ಹೃದಯವಿದ್ರಾವಕವಾಗಿದೆ. ಪ್ರವಾಹ ಪೀಡಿತರಾದ ಎಲ್ಲಾ ಮನುಷ್ಯರು ಹಾಗೂ ಪ್ರಾಣಿಗಳು, ಈ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಅರ್ಹ. ಆದ್ದರಿಂದ ನಾನು ಸಿಎಂ ಪರಿಹಾರ ನಿಧಿಗೆ ಹಾಗೂ ಕಾಜಿರಂಗ ಪಾರ್ಕ್ ರಕ್ಷಣೆಗೆ ತಲಾ ಒಂದು ಕೋಟಿ ರೂ. ದಾನ ಮಾಡಲು ಬಯಸುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಕೂಡ ಸಂತ್ರಸ್ತರಿಗೆ ಸಹಾಯ ಹಸ್ತಚಾಚಿ ನೆರವಾಗಿ ಎಂದು ಮನವಿ ಮಾಡಿಕೊಂಡಿದ್ದರು.