Tag: ಸಹಕಾರ ರತ್ನ

  • 69ನೇ ಅಖಿಲ ಭಾರತ ಸಹಕಾರ ಸಪ್ತಾಹ – 54 ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

    69ನೇ ಅಖಿಲ ಭಾರತ ಸಹಕಾರ ಸಪ್ತಾಹ – 54 ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

    ಬೆಂಗಳೂರು: ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೆಂಗಳೂರು ವಿಭಾಗದ 9 ಜಿಲ್ಲೆಗಳ 54 ಸಹಕಾರಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

    ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಗೋಪೂಜೆ ನೆರವೇರಿಸಿ ಸಹಕಾರಿ ಧ್ವಜಾರೋಹಣ ಮಾಡಿದರು. ಇದೇ ವೇಳೆ ಯಶಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಿಸಲಾಯಿತು. ಬಳಿಕ ಸಹಕಾರ ಪತ್ರಿಕೆ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಇದನ್ನೂ ಓದಿ: ವೋಟರ್‌ ಡೇಟಾ ಹಗರಣ ಆರೋಪ – ಕಾಂಗ್ರೆಸ್‌ ವಿರುದ್ಧ ರಾಜ್ಯ ಮುಖ್ಯಚುನಾವಣಾಧಿಕಾರಿ ಬಿಜೆಪಿ ದೂರು

    ಕಾರ್ಯಕ್ರಮದಲ್ಲಿ ಮಾತನಾಡಿದ ಕಾಗೇರಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವರಾಗಿ ಸೋಮಶೇಖರ್ (S.T.Somshekar) ಅವರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾಗೆ ವಿಶೇಷ ಮೆರುಗು ನೀಡಿದವರು ಎಂದು ಸೋಮಶೇಖರ್ ಅವರ ಕಾರ್ಯವೈಖರಿಯನ್ನು ಕೊಂಡಾಡಿದರು.

    ಸಹಕಾರ ಕ್ಷೇತ್ರ ಬಹಳ ದೊಡ್ಡ ಕ್ಷೇತ್ರ. ಸಹಕಾರಿ ರತ್ನ ಪ್ರಶಸ್ತಿ ಪಡೆದ ಹಿರಿಯರು, ಸಹಕಾರಿ ಕ್ಷೇತ್ರದ ಏಳಿಗೆಗೆ ಅಪಾರವಾಗಿ ಶ್ರಮಿಸಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿನ ಸವಾಲುಗಳನ್ನು ಮೆಟ್ಟಿ ನಿಂತು ಜನಜೀವನಕ್ಕೆ ಬೇಕಾದ ಕೊಡುಗೆಗಳನ್ನು ಕೊಡಲು ಸಹಕಾರಿ ಸಪ್ತಾಹ ಕಾರ್ಯಕ್ರಮ ಸಹಕಾರಿಯಾಗಲಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಉತ್ತಮ ಸಲಹೆಗಳನ್ನು ನೀಡಲು ಈ ಸಹಕಾರ ಸಪ್ತಾಹ ಕಾರ್ಯಕ್ರಮ ಸಾಕ್ಷಿಯಾಗಬೇಕು. ಸಹಕಾರಿ ಸಂಘಗಳು ಜನತೆಯ ವಿಶ್ವಾಸ ಗಳಿಸುವುದರ ಜೊತೆಗೆ ಭಾವನಾತ್ಮಕ ಸಂಬಂಧ ಹೊಂದಿವೆ ಎಂದು ಹೇಳಿದರು.

    ಸಹಕಾರಿ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ, ರಾಜ್ಯದ 6 ಸಾವಿರಕ್ಕಿಂತ ಹೆಚ್ಚು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ, ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ, ಯಶಸ್ವಿನಿ ಯೋಜನೆ ಮರುಜಾರಿ, 33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ. ಸಾಲ ವಿತರಣೆಗೆ ಸೋಮಶೇಖರ್ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಗುಜರಾತ್ ಮೂಲದ ಗಣಿ ಉದ್ಯಮಿಗೆ ಶಾಸಕನಿಂದ 9 ಕೋಟಿ ದೋಖಾ ಆರೋಪ

    ಯಶವಂತಪುರ ಕ್ಷೇತ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. 209 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಸ್ತೆ, ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮಂಚನಬೆಲೆಯಿಂದ ಕುಡಿಯುವ ನೀರು ಕಲ್ಪಿಸುವ ಭಗೀರಥ ಪ್ರಯತ್ನ ಮಾಡಿದ್ದಾರೆ ಎಂದರು.

    ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ನ.14 ರಿಂದ 20ರವರೆಗೆ ಪ್ರತಿ ವರ್ಷ ಏಳು ದಿನಗಳ ಕಾಲ ಸಹಕಾರ ಸಪ್ತಾಹ ಆಚರಣೆ ಮಾಡಲಾಗುತ್ತದೆ. 20 ವರ್ಷಕ್ಕೂ ಹೆಚ್ಚು ಕಾಲದಿಂದ ಸಹಕಾರ ಸಪ್ತಾಹ ಮಾಡಿಕೊಂಡು ಬಂದಿದ್ದೇನೆ. ಸಹಕಾರ ಮಹಾಮಂಡಳ ಮಾತೃ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ಸಹಕಾರಿ ಕ್ಷೇತ್ರವನ್ನು ಮುನ್ನಡೆಸುವಲ್ಲಿ ಜಿ.ಟಿ.ದೇವೇಗೌಡ ಅವರು ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

    ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ ಸಹಕಾರ ಸಚಿವರಾಗಿ ಕೆಲಸ ಮಾಡುತ್ತಿದ್ದೇನೆ. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಅತಿಹೆಚ್ಚು ಸಾಲ ನೀಡಿದ್ದು ಬಸವರಾಜ ಬೊಮ್ಮಾಯಿ ಅವರ ಸರ್ಕಾರ. 5,700 ಕೋಟಿ ರೂ. ಸಾಲಮನ್ನಾ ಮಾಡಿದ್ದು ನಮ್ಮ ನೆಚ್ಚಿನ ನಾಯಕರಾದ ಬಿ.ಎಸ್.ಯಡಿಯೂರಪ್ಪ ಎಂದು ಬಣ್ಣಿಸಿದರು.

    ಸಾಲ ಮನ್ನಾಕ್ಕಾಗಿ ಬಜೆಟ್‌ನಲ್ಲಿ ಹಣ ಒದಗಿಸಿ ಐತಿಹಾಸಿಕ ತೀರ್ಮಾನ ಮಾಡಿದ್ದು ಯಡಿಯೂರಪ್ಪ ಅವರು. ಕಾಂಗ್ರೆಸ್ ಸರ್ಕಾರ ಯಶಸ್ವಿನಿ ಯೋಜನೆಯನ್ನು ರದ್ದು ಮಾಡಿತು. ಆದರೆ ಬಿಜೆಪಿ ಸರ್ಕಾರ ಅದನ್ನು ಮರುಜಾರಿ ಮಾಡಿದೆ. ಈ ಮೂಲಕ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯೋಧರ ವಿರುದ್ಧ ಮೀಡಿಯಾ ಪಾಟ್ನರ್ಸ್‌ಗೆ ಜಯ – ಮಾಧ್ಯಮ ತಂಡಕ್ಕೆ ಸೌಹಾರ್ದ ಕ್ರಿಕೆಟ್ ಕಪ್

    ಹಾಲು ಪೂರೈಸುವ ರೈತರಿಗೆ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಮುಖಾಂತರ ಸಾಲಸೌಲಭ್ಯ ಕಲ್ಪಿಸಲಾಗುವುದು. ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸದಿಂದ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೈಸೂರು ಉಸ್ತುವಾರಿ ಸಚಿವರಾಗಿ ಯಶಸ್ವಿಯಾಗಿ ದಸರಾ ಆಚರಣೆ ಮಾಡಲಾಯಿತು. ಸರ್ಕಾರ, ಪಕ್ಷಕ್ಕೆ ಮುಜುಗರವಾಗದಂತೆ ಕೆಲಸ ಮಾಡಿದ್ದೇನೆ. ಯಶವಂತಪುರ ಜನತೆಯ ಪ್ರೀತಿ ವಿಶ್ವಾಸ ಉಳಿಸಿಕೊಂಡಿದ್ದೇನೆ. ದ್ವೇಷದ ರಾಜಕಾರಣ ಮಾಡಿಲ್ಲ, ಮಾಡುವುದಿಲ್ಲ ಎಂದರು.

    ಕ್ಷೇತ್ರದ ಡಾಂಬರೀಕರಣಕ್ಕೆ 200 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಾಜಕಾಲುವೆ ಸಮಸ್ಯೆ ಬಗೆಹರಿಸಲು 120 ಕೋಟಿ ಅನುದಾನ ಬಿಡುಗಡೆ ಆಗಿದೆ. ವಿಶ್ವೇಶ್ವರಯ್ಯ, ಬನಶಂಕರಿ 6ನೇ ಹಂತದ ಅಭಿವೃದ್ಧಿಗೆ 208 ಕೋಟಿ ಹಣ ಬಿಡುಗಡೆಯಾಗಿದೆ. ಕಾವೇರಿ ನೀರು ಪೂರೈಕೆ ಕಾಮಗಾರಿ ಆರಂಭವಾಗಿದೆ. ಮಂಚನಬೆಲೆಯಿಂದ 72 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೆತ್ತುಕೊಳ್ಳಲಾಗಿದೆ ಎಂದು ಹೇಳಿದರು. ನಂತರ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರು ಮಾತನಾಡಿದರು.

    Live Tv
    [brid partner=56869869 player=32851 video=960834 autoplay=true]

  • `ಯುವರತ್ನ’ನಿಗೆ `ಸಹಕಾರ ರತ್ನ’ ಪ್ರಶಸ್ತಿ

    `ಯುವರತ್ನ’ನಿಗೆ `ಸಹಕಾರ ರತ್ನ’ ಪ್ರಶಸ್ತಿ

    ಬೆಂಗಳೂರು: ನೆನ್ನೆಯಷ್ಟೇ ಮೈಸೂರು ವಿಶ್ವವಿದ್ಯಾನಿಲಯವು ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ (ಮರಣೋತ್ತರ) ನೀಡಿ ಗೌರವಿಸಲಾಗಿತ್ತು. ಈ ಬೆನ್ನಲ್ಲೇ ಇಂದು ಸಹಕಾರ ಇಲಾಖೆ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷರಾದ ಜಿ.ಟಿ.ದೇವೇಗೌಡ ಅವರು ಪನೀತ್ ರಾಜ್‍ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಡಾ.ಪುನೀತ್ ರಾಜ್‍ಕುಮಾರ್ ಅವರಿಗೆ `ಸಹಕಾರ ರತ್ನ’ (ಮರಣೋತ್ತರ) ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

    ಪ್ರಶಸ್ತಿಯು 15 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದು, ಬೆಂಗಳೂರಿನ ಸದಾಶಿವನಗರದಲ್ಲಿನ ಪುನೀತ್ ಅವರ ನಿವಾಸದಲ್ಲಿ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಇದನ್ನೂ ಓದಿ: ರಾಜಕೀಯ ದಾಳವಾದ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ

    ಈಚೆಗಷ್ಟೇ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟ ಬೆನ್ನಲ್ಲೇ, ಸರಕಾರದ ಮತ್ತೊಂದು ಪ್ರಶಸ್ತಿ ಘೋಷಣೆಯಾಗಿತ್ತು. ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಕೊಡಮಾಡುವ ಸಹಕಾರ ರತ್ನ ಪ್ರಶಸ್ತಿಯನ್ನು ಪುನೀತ್ ಅವರಿಗೆ ಘೋಷಿಸಲಾಗಿತ್ತು. ನಂದಿನಿ ಹಾಲು ಉತ್ಪನ್ನಗಳಿಗೆ ಉಚಿತವಾಗಿ ಜಾಹೀರಾತು ನೀಡಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಘೋಷಿಸಲಾಗಿತ್ತು.

    ಮಾರ್ಚ್ 20ರಂದು ಕಂಗೇರಿ ಉಪನಗರದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 60 ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಿದ್ದರು. ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಿಸಿದ್ದರಿಂದ ಇಂದು ಅವರ ನಿವಾಸದಲ್ಲೇ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದನ್ನೂ ಓದಿ: ಇಡೀ ಥಿಯೇಟರ್ ನಲ್ಲಿ ಒಬ್ಬರೇ ಕೂತು ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ವೀಕ್ಷಿಸಿದ ಡೈಮಂಡ್ ರವಿ