Tag: ಸಸ್ಯಾಹಾರ

  • ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    ಹೋಳಿಗೆ, ನಿಪ್ಪಟ್ಟು, ಆಲೂ ಕೂರ್ಮಾ; ತೆಲಂಗಾಣ ಸಾಂಪ್ರದಾಯಿಕ ಖಾದ್ಯ ಸವಿದ ಮೋದಿ – ಮೆನುವಿನಲ್ಲಿತ್ತು 50 ಐಟಂ

    ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ಹೈದರಾಬಾದ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಬಿಜೆಪಿ ನಾಯಕರಿಗೆ ತೆಲಂಗಾಣ ಸಾಂಪ್ರದಾಯಿಕ ಶೈಲಿಯ ಅಡುಗೆ ರುಚಿ ತೋರಿಸಲು ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

    ಇಲ್ಲಿನ ಕರೀಂನಗರ ಜಿಲ್ಲೆಯ ಹುಸ್ನಾಬಾದ್ ಕ್ಷೇತ್ರದ ಗೌರವೆಲ್ಲಿ ಗುಡತಿಪಲ್ಲಿಯ ಯಾದಮ್ಮ, ಪ್ರಧಾನಿಗೆ ತೆಲಂಗಾಣದ ಅಡುಗೆಯ ರುಚಿ ತೋರಿಸಿದರು. ಸಂಪೂರ್ಣ ಸಸ್ಯಾಹಾರ ಖಾದ್ಯಗಳನ್ನೇ ಸವಿದು ಪ್ರಧಾನಿ ಮೋದಿ ಸಂತಸಪಟ್ಟರು. ಇದನ್ನೂ ಓದಿ: ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು; ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡ್ತೀನಿ – ಯಶವಂತ್‌ ಸಿನ್ಹಾ

    50 ಬಗೆಯ ಖಾದ್ಯ: ಪ್ರಧಾನಿ ಮೋದಿ ಸೇರಿದಂತೆ ಇತರ ನಾಯಕರಿಗಾಗಿ 50 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಸ್ವತಃ ಖಾದ್ಯಗಳ ರುಚಿ ಪರಿಶೀಲನೆ ಮಾಡಿದರು. ನಂತರ ಬಿಜೆಪಿ ಅತಿರಥರು ಯಾದಮ್ಮರ ಕೈರುಚಿ ಸವಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಗಣ್ಯರು ನನ್ನ ಅಡುಗೆಯ ರುಚಿ ಸವಿದಿರುವುದು ನನ್ನ ಪಾಲಿನ ಪುಣ್ಯ. ನನಗೆ ಈ ಅವಕಾಶ ಕಲ್ಪಿಸಿದ ಬಂಡಿ ಸಂಜಯ್ ಅವರಿಗೆ ಋಣಿಯಾಗಿದ್ದೇನೆ ಎಂದು ಯಾದಮ್ಮ ಕೃತಜ್ಞತೆ ಅರ್ಪಿಸಿದ್ದಾರೆ. ಇದನ್ನೂ ಓದಿ: ಬ್ಯಾಟರಾಯನಪುರದಲ್ಲಿ ಕೇಸರಿ ಫೌಂಡೇಶನ್‌ ವತಿಯಿಂದ ಆಷಾಢ ಅಷ್ಟಲಕ್ಷ್ಮಿ ಪೂಜೆ

    ಏನೆಲ್ಲಾ ಇತ್ತು ಊಟದ ಮೆನುವಿನಲ್ಲಿ?
    ಚಿಕ್ಕುಡುಕಾಯಿ ಟೊಮ್ಯಾಟೊ, ಆಲೂ ಕೂರ್ಮಾ, ಬದನೆಕಾಯಿ ಮಸಾಲಾ, ತೊಂಡೇಕಾಯಿ ಹಸಿಕೊಬ್ಬರಿ ಫ್ರೈ, ಬೆಂಡೇಕಾಯಿ ಕಾಜು ಫ್ರೈ, ತೋಟಕೂರ ಟೊಮ್ಯಾಟೊ ಫ್ರೈ, ಬೀರೆಕಾಯಿ ಮೀಲ್ ಮೇಕರ್ ಫ್ರೈ, ಮೆಂತ್ಯೆ ಹೆಸರುಕಾಳು ಫ್ರೈ, ಮಾವಿನಕಾಯಿ ಪಪ್ಪು, ಸಾಂಬಾರ್, ಮುದ್ದಪಪ್ಪು, ಪಚ್ಚಿಪುಲುಸು, ಬಗಾರಾ, ಪುಲಿಹೋರಾ, ಪುದೀನಾ ರೈಸ್, ವೈಟ್ ರೈಸ್, ಮೊಸರನ್ನ, ಗೋಂಗೂರ ಪಚ್ಚಡಿ, ಸೌತೆಕಾಯಿ ಚಟ್ನಿ, ಟೊಮ್ಯಾಟೊ ಚಟ್ನಿ, ಸೋರೆಕಾಯಿ ಚಟ್ನಿ, ಕಡಲೆ ಬೀಜದ ಚಟ್ನಿ, ಹಸಿ ತೆಂಗಿನಕಾಯಿ ಚಟ್ನಿ, ಹಸಿ ಮೆಣಸಿನ ಕಾಯಿ ಫ್ರೈ.

    ಸಿಹಿ ತಿನಿಸು: ಬೆಲ್ಲದ ಪರಮಾನ್ನ, ಶ್ಯಾವಿಗೆ ಪಾಯಸ, ಹೋಳಿಗೆ, ಬೂರೆಲು, ಕಜ್ಜಾಯ.

    ಕುರುಕುಲು ತಿಂಡಿ: ಉದ್ದಿನ ವಡೆ, ಮಿರ್ಚಿ ಬಜ್ಜಿ, ಚಕ್ಕುಲಿ, ಖಾರ ಬೂಂದಿ, ನಿಪ್ಪಟ್ಟು.

    Live Tv

  • ಮೊಟ್ಟೆ ವಿತರಣೆ ಕೈಬಿಡಿ, ಇಲ್ಲದಿದ್ದರೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ

    ಮೊಟ್ಟೆ ವಿತರಣೆ ಕೈಬಿಡಿ, ಇಲ್ಲದಿದ್ದರೆ ಸಸ್ಯಾಹಾರಿಗಳಿಗೆ ಪ್ರತ್ಯೇಕ ಶಾಲೆ ತೆರೆಯಿರಿ: ದಯಾನಂದ ಸ್ವಾಮೀಜಿ

    ಹುಬ್ಬಳ್ಳಿ: ಶಾಲೆಗಳಲ್ಲಿ ಮತ್ತು ಅಂಗನವಾಡಿಯಲ್ಲಿ ಮೊಟ್ಟೆಗೆ ಬದಲಾಗಿ ಸತ್ವಯುತ-ಸರ್ವಸಮ್ಮತ ಸಸ್ಯಹಾರ ಪದಾರ್ಥ ನೀಡಬೇಕು ಎಂದು ಅಖಿಲ ಭಾರತ ಸಸ್ಯಹಾರಿ ಪ್ರಧಾನ ಸಂಚಾಲಕರಾದ ದಯಾನಂದ ಸ್ವಾಮೀಜಿ ಆಗ್ರಹಿಸಿದರು.

    ನಗರದಲ್ಲಿಂದು ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮತ್ತು ಅಂಗನವಾಡಿಗಳಲ್ಲಿನ ಮಕ್ಕಳಿಗೆ – ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಹೆಸರಿನಲ್ಲಿ ಸರ್ಕಾರ ಮೊಟ್ಟೆ ತಿನ್ನಿಸುತ್ತಿರುವುದನ್ನು ಕೈಬಿಟ್ಟು, ಮೊಟ್ಟೆಗಿಂತಲೂ ಅಧಿಕ ಬಹುಪೋಷಕಾಂಶಗಳನ್ನೊಳಗೊಂಡ ಶುದ್ಧ ಸಸ್ಯಹಾರ ಪದಾರ್ಥಗಳನ್ನು ನೀಡಲು ಕೇಳಿಕೊಂಡರು. ಇದನ್ನೂ ಓದಿ: ಇಂತಹ ಕೆಟ್ಟ, ದುರಾಡಳಿತ, ಭ್ರಷ್ಟಾಚಾರದ ಸರ್ಕಾರವನ್ನು ಇದುವರೆಗೂ ನಾನು ನೋಡಿರಲಿಲ್ಲ: ಸಿದ್ದರಾಮಯ್ಯ

    ಮೊಟ್ಟೆ ಮುಕ್ತಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೇ ರಾಜ್ಯದ ಲಿಂಗಾಯತ ಧರ್ಮ, ಜೈನ ಧರ್ಮ ಮುಂತಾದ ಧರ್ಮಗಳ, ಬ್ರಾಹ್ಮಣ, ವೈಶ್ಯ ಸೇರಿದಂತೆ ಸಸ್ಯಾಹಾರಿ ಪರ ಜನತೆಯ ಲಕ್ಷಾಂತರ ಮಕ್ಕಳಿಗೆ ಪ್ರತ್ಯೇಕ ಸಸ್ಯಹಾರಿ ಶಾಲೆ ಮತ್ತು ಅಂಗನವಾಡಿಗಳನ್ನು ತೆರೆಯಬೇಕು. ಈ ಹಕ್ಕೋತ್ತಾಯಿಸಿ ಡಿ.20 ರಂದು ಬೆಳಗ್ಗೆ 10ಕ್ಕೆ ಬೆಳಗಾವಿ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಸಂತ ಸಮಾವೇಶ ಮತ್ತು ವಿಧಾನಸೌಧ ಚಲೋ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಶಾಲೆಗಳಲ್ಲಿ ಏಕರೂಪತೆ ಪಡೆದುಕೊಳ್ಳಬೇಕಿದ್ದ ಸರ್ಕಾರ ಈ ರೀತಿ ಮಾಡಬಾರದು. ಮೌಲ್ಯ ಆಧಾರಿತ ಶಿಕ್ಷಣ ಕೊಡಿ, ಮೊಟ್ಟೆ ಅಲ್ಲ. ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು ಏಕೆ? ಎಲ್ಲರಿಗೂ ಒಂದೇ ತರವಾಗಿ ಸರ್ಕಾರ ನೋಡಬೇಕು. ಮೊಟ್ಟೆಯನ್ನ ಶಾಲೆಯಲ್ಲಿ ತರಲು ಹುನ್ನಾರ ಏನು? ಕಾಂಗ್ರೆಸ್, ಜೆಡಿಎಸ್ ತೆಗೆದಿರುವ ಈ ಯೋಜನೆಯನ್ನ ಬಿಜೆಪಿ ಏಕೆ ತಂದಿದೆ? ಲಿಂಗಾಯತ, ಬ್ರಾಹ್ಮಣ, ಜೈನ ಧರ್ಮದ ಜನರಿಂದ ಮತ ಪಡೆದ ಬಿಜೆಪಿ ಈ ರೀತಿ ಏಕೆ ಮಾಡಿದೆ. ಸಾಮರಸ್ಯ ಬಗ್ಗೆ ಸಾರಿ ಹೇಳುವ, ಆರ್ ಎಸ್ ಎಸ್ ಇದರ ಬಗ್ಗೆ ಏಕೆ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು.

    ಈ ಬಗ್ಗೆ ಆರ್ ಎಸ್ ಎಸ್ ಮಾತನಾಡದಿದ್ದರೆ ನಾವು ಸಸ್ಯಾಹಾರಿಗಳು ಮುಂದೆಂದು ಅವರ ಮಾತು ಕೇಳೋದಿಲ್ಲ. ರಾಜ್ಯದ ನೂರಾರು ಶ್ರೀಗಳು ಸಿಎಂ ಗೆ ಮನವಿ ಮಾಡಿದ್ದಾರೆ. ಆದ್ರೂ ಸರ್ಕಾರ ಸ್ವಾಮಿಗಳಿಂದಲೇ ಮೊಟ್ಟೆ ತಿನ್ನಿಸುವ ಹುನ್ನಾರ ಮಾಡುತ್ತಿದೆ. ಇನ್ನೇನಿದ್ರೂ ನಾವು ಯಾರ ಜೊತೆ ಮಾತನಾಡೋದಿಲ್ಲ. ಎಲ್ಲ ಸ್ವಾಮೀಜಿಗಳು ಬೀದಿಗಿಳಿದು ಹೋರಾಟ ಮಾಡುತ್ತೇವೆ. ಲಿಂಗಾಯತರಿಂದಲೇ ಸರ್ಕಾರ ಪತನವಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಹೆಂಡ್ತಿ ಇಲ್ಲ ಅಂತ ಎರಡನೇ ಮದುವೆ- ಈಕೆಗೆ ಇವನು ನಾಲ್ಕನೆಯವನು!

    ಸುದ್ದಿಗೋಷ್ಠಿಯಲ್ಲಿ ಬಸವಧರ್ಮ ಪೀಠದ ಮಾತೆ ಗಂಗಾದೇವಿ, ಚನ್ನಬಸವನಂದ ಸ್ವಾಮೀಜಿ, ಭವರಲಾಲ್ ಜೈನ್, ರಮೇಶ್ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

  • 10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    10 ಕೋಟಿ ಮಂದಿಗೆ ಉದ್ಯೋಗ ನೀಡುತ್ತಾ? – ಪೇಟಾ ವಿರುದ್ಧ ಅಮುಲ್ ಗರಂ

    ನವದೆಹಲಿ: ಈ ಹಿಂದೆ ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆ ಕಂಬಳ ಮತ್ತು ತಮಿಳುನಾಡಿನ ಜಲ್ಲಿಕಟ್ಟು ನಿಷೇಧಿಸುವಂತೆ ಆಗ್ರಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಾಣಿ ದಯಾ ಸಂಘ(ಪೇಟಾ)ನೀಡಿದ ಸಲಹೆಗೆ ಅಮುಲ್ ಸಂಸ್ಥೆ ಗರಂ ಆಗಿದೆ.

    ಹಾಲು ಉತ್ಪಾದನೆಯ ಬೃಹತ್ ಸಹಕಾರಿ ಸಂಸ್ಥೆಯಾದ ಅಮುಲ್‍ಗೆ ಪೇಟಾ ಪತ್ರ ಬರೆದು ವಿಚಿತ್ರ ಸಲಹೆಯನ್ನು ನೀಡಿದೆ. ಈಗ ಮಾರುಕಟ್ಟೆ ಬದಲಾಗಿದೆ. ದನದಿಂದ ಹಾಲನ್ನು ಕರೆಯುವ ಬದಲು ಸಸ್ಯಗಳ ಉತ್ಪನ್ನಗಳಿಂದ ಕಾರ್ಖಾನೆಗಳಲ್ಲಿ ಹಾಲನ್ನು ತಯಾರಿಸಬೇಕು. ಈ ಬದಲಾವಣೆಯನ್ನು ಅಮುಲ್ ಒಪ್ಪಿಕೊಳ್ಳುತ್ತದೆ ಎಂಬ ಭರವಸೆ ನನ್ನದು ಎಂದು ಹೇಳಿದೆ.

    ಈ ಸಲಹೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಕೆಂಡಾಮಂಡಲವಾಗಿದ್ದಾರೆ. ಹೈನುಗಾರಿಕೆಯನ್ನು ನಂಬಿರುವ ದೇಶದ 10 ಕೋಟಿ ಮಂದಿಗೆ ಪೇಟಾ ಉದ್ಯೋಗ ನೀಡುತ್ತಾ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ : ಕುದುರೆ ರೇಸಲ್ಲಿ ಹಿಂಸೆ ಇಲ್ವಾ? ಪೇಟಾದ್ದು ಅತಿಯಾಯ್ತು- ಸಚಿವ ಡಿವಿಎಸ್ ವಾಗ್ದಾಳಿ

    ಹೈನುಗಾರಿಕೆ ಉದ್ಯೋಗ ಮಾಡುತ್ತಿರುವ ಶೇ.75 ಮಂದಿಗೆ ಭೂಮಿಯೇ ಇಲ್ಲ. ಈ ರೈತರ ಮಕ್ಕಳ ಶಾಲಾ ಶಿಕ್ಷಣಕ್ಕೆ ಹಣ ನೀಡುತ್ತಾ? ದೇಶದ ಬಡ ಜನತೆಗೆ ಇರುವ ಹಾಲಿನ ಅಗತ್ಯವನ್ನು ಕಡಿಮೆ ಬೆಲೆಗೆ ನೀಡುತ್ತಾ? ಲ್ಯಾಬ್ ಗಳಲ್ಲಿ ರಸಾಯನಿಕ ಮತ್ತು ಸಿಂಥೆಟಿಕ್ ವಿಟಮಿನ್ ಬಳಸಿ ತಯಾರಾಗುವ ಈ ಫ್ಯಾಕ್ಟರಿ ಆಹಾರವನ್ನು ಎಷ್ಟು ಮಂದಿ ಖರೀದಿಸಲು ಸಾಧ್ಯ ಎಂದು ಸೋಧಿ ಖಾರವಾಗಿ ಪ್ರಶ್ನಿಸಿದ್ದಾರೆ.

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಪೇಟಾ ಫೋರ್ಬ್ಸ್ ಸುದ್ದಿಯನ್ನು ಉಲ್ಲೇಖಿಸಿ, ಸಸ್ಯಾಹಾರಿ ಆಹಾರ ಮತ್ತು ಹಾಲಿನ ಮಾರುಕಟ್ಟೆಯಲ್ಲಿ ಭಾರತ ವಿಶ್ವನಾಯಕ ಎನಿಸಿಕೊಳ್ಳಲಿದೆ. ಪ್ರಾಣಿಗಳ ಜೀವ ಉಳಿಸಲು ಭಾರತದ ರೈತರು ಮತ್ತು ಉದ್ಯಮಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದೆ.

    ವಿಚಿತ್ರ ಸಲಹೆಗೆ ಜನರು ಗರಂ ಆಗಿದ್ದು ಪೇಟಾ ಇಂಡಿಯಾವನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನಿಮಗೆ ಯಾಕೆ ಭಾರತದ ಮೇಲೆಯೇ ಕಣ್ಣು? ವಿದೇಶದಲ್ಲಿ ಕುಳಿತ ನೀವು ನಮಗೆ ಸಲಹೆ ನೀಡುವ ಅಗತ್ಯವಿಲ್ಲ. ಭಾರತದ ಆರ್ಥಿಕತೆಯೆ ಮೇಲೆ ಹೊಡೆತ ನೀಡಲು ಈ ಸಲಹೆ ನೀಡಿದ್ದೀರಾ ಎಂದು ಪ್ರಶ್ನಿಸಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಐಎಂಎ ವರ್ಸಸ್ ಆರ್ಯುವೇದ, ಪೇಟಾ ವರ್ಸಸ್ ಅಮುಲ್. ಭಾರತದ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ. ಇದರ ಬೇರುಗಳ ಬಗ್ಗೆ ನಾವು ಹುಷಾರಾಗಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಪೇಟಾ ನೀಡಿದ ಸಲಹೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ.

  • ಸಸ್ಯಾಹಾರಿ ದಂಪತಿಗೆ ಮಾಂಸಾಹಾರ ತಿನ್ನಿಸಿದ ಸಿಬ್ಬಂದಿ – ವಿಮಾನ ಸಂಸ್ಥೆಗೆ 20 ಸಾವಿರ ದಂಡ

    ಸಸ್ಯಾಹಾರಿ ದಂಪತಿಗೆ ಮಾಂಸಾಹಾರ ತಿನ್ನಿಸಿದ ಸಿಬ್ಬಂದಿ – ವಿಮಾನ ಸಂಸ್ಥೆಗೆ 20 ಸಾವಿರ ದಂಡ

    ಬೆಂಗಳೂರು: ಸಸ್ಯಾಹಾರ ಬದಲಿಗೆ ಬೆಂಗಳೂರು ಮೂಲದ ದಂಪತಿಗೆ ಮಾಂಸಾಹಾರ ನೀಡಿದ್ದಕ್ಕೆ ಕೋರ್ಟ್ ದುಬೈ ಮೂಲದ ಎಮಿರೇಟ್ಸ್ ವಿಮಾನಯಾನ ಸಂಸ್ಥೆಗೆ 20 ಸಾವಿರ ರೂ. ದಂಡ ವಿಧಿಸಿದೆ.

    ಲಂಡನ್ ನಲ್ಲಿ ನೆಲೆಸಿರುವ ದಂಪತಿ ಬೆಂಗಳೂರಿಗೆ ಆಗಮಿಸಿದ್ದರು. 2 ತಿಂಗಳು ನಗರದಲ್ಲಿದ್ದ ದಂಪತಿ ಮರಳಿ ಲಂಡನ್ ಗೆ ತೆರಳಲು ಎಮಿರೇಟ್ಸ್ ಕಂಪನಿಯ ವಿಮಾನ ಟಿಕೆಟ್ ಬುಕ್ ಮಾಡಿದ್ದರು.

    ಬುಕ್ಕಿಂಗ್ ವೇಳೆ ಯಾವ ರೀತಿಯ ಆಹಾರ ಬೇಕು ವಿಭಾಗದಲ್ಲಿ  ‘ಸಸ್ಯಾಹಾರ’ ಆಯ್ಕೆ ಮಾಡಿಕೊಂಡಿದ್ದರು. ಆದರೆ ವಿಮಾನ ಪ್ರಯಾಣದ ಸಂದರ್ಭದಲ್ಲಿ ಸಿಬ್ಬಂದಿ ಮಾಂಸಾಹಾರ ನೀಡಿದ್ದಾರೆ. ಆರಂಭದಲ್ಲಿ ಪತ್ನಿ ಆಹಾರ ಸೇವಿಸಿದ್ದಾರೆ. ನಂತರ ಪತಿ ಆಹಾರ ಸೇವಿಸುತ್ತಿದ್ದಾಗ ಅನುಮಾನ ಬಂದು ಸಿಬ್ಬಂದಿ ಜೊತೆ ಪ್ರಶ್ನಿಸಿದ್ದಾರೆ.

    ಈ ವೇಳೆ ಮಿಸ್ ಆಗಿ ನಾನ್ ವೆಜ್ ಆಹಾರ ನೀಡಲಾಗಿದೆ ಎಂದು ಉತ್ತರಿಸಿದ್ದಾರೆ. ಇಷ್ಟು ಹೊತ್ತಿಗೆ ಪತ್ನಿ ಊಟ ಸೇವಿಸಿದ್ದರೆ ಪತಿ ಕೂಡ ಸ್ವಲ್ಪ ಊಟ ಸೇವಿಸಿದ್ದರು. ಯಾವಾಗ ಇದು ನಾನ್ ವೆಜ್ ಅಂತಾ ಗೊತ್ತಾಯ್ತೋ ದಂಪತಿ ಅಲ್ಲೇ ಪ್ರಶ್ನೆ ಮಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಲ್ಲಿಯವರೆಗೂ ನಾವು ನಾನ್ ವೆಜ್ ತಿಂದಿಲ್ಲ, ನಾವು ಶುದ್ಧ ಸಸ್ಯಹಾರಿಗಳು. ನಿಮ್ಮ ಎಡವಟ್ಟಿನಿಂದ ನಾನ್ ವೆಜ್ ತಿನ್ನುವಂತಾಯ್ತು ಎಂದು ಆರೋಪಿಸಿ ದಂಪತಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ನೀಡಿದ್ದರು. ಅರ್ಜಿ ವಿಚಾರಣೆ ನಡೆಸಿದ  ವೇದಿಕೆ ಎಮಿರೇಟ್ಸ್ ಸಂಸ್ಥೆಗೆ 20 ಸಾವಿರ ರೂ. ದಂಡ ಹಾಕಿ ಆದೇಶ ಪ್ರಕಟಿಸಿದೆ.

  • ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ನಾನ್ ವೆಜ್ ಸಿಗೋದು ಡೌಟ್!

    ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ನಾನ್ ವೆಜ್ ಸಿಗೋದು ಡೌಟ್!

    ನವದೆಹಲಿ: ರೈಲ್ವೇ ಬೋರ್ಡ್ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿದಲ್ಲಿ ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಮಾಂಸಾಹಾರ ಸಿಗುವುದಿಲ್ಲ.

    ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟು ಹಬ್ಬದ ವಿಶೇಷ ಸಂಭ್ರಮಾಚರಣೆ ಪ್ರಯುಕ್ತ 2018, 2019, 2020 ರ ಅಕ್ಟೋಬರ್ 2 ರಂದು ರೈಲ್ವೇ ನಿಲ್ದಾಣದಲ್ಲಿ ಸಸ್ಯಾಹಾರ ದಿನವನ್ನಾಗಿ ಆಚರಿಸಲು ಮುಂದಾಗಿದೆ. ಸಸ್ಯಾಹಾರದ ರಾಯಭಾರಿಯಾಗಿದ್ದ ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ ಅಕ್ಟೋಬರ್ 2 ರಂದು ರಾಷ್ಟ್ರೀಯ ಸ್ವಚ್ಛತಾ ದಿವಸದ ಜೊತೆಗೆ ಸಸ್ಯಾಹಾರ ದಿನವನ್ನಾಗಿ ಆಚರಣೆ ಮಾಡಲು ಅನುಮತಿ ನೀಡುವಂತೆ ರೈಲ್ವೇ ಬೋರ್ಡ್ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ.

    ಗಾಂಧೀಜಿಯರ 150ನೇ ಹುಟ್ಟು ಹಬ್ಬದ ಪ್ರಯುಕ್ತ ಕೇಂದ್ರ ಸಂಸ್ಕೃತಿ  ಇಲಾಖೆ ಹೊರತಂದಿರುವ ಲೋಗೋವನ್ನು ರೈಲ್ವೆ ಕೋಚ್ ಗಳ ಹೊರ ಭಾಗದಲ್ಲಿ ಬಾಗಿಲ ಬಳಿ ಪ್ರಯಾಣಿಕರಿಗೆ ಕಾಣುವಂತೆ ಹಾಕಲು ಇಲಾಖೆಯ ಅನುಮತಿಯನ್ನು ಕೋರಿದೆ ಎಂದು ತಿಳಿಸಿದೆ.

    ಮಾರ್ಚ್ 12 ರಂದು ದಂಡಿ ಸತ್ಯಾಗ್ರಹದ ಸ್ಮರಣಾರ್ಥ ಸಬರಮತಿಯಿಂದ ಸ್ವಚ್ಛತಾ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಾಗುವುದು. ಟಿಕೆಟ್ ಗಳ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವಿರುತ್ತದೆ ಎಂದು ತಿಳಿಸಿದೆ.

    ಸಸ್ಯಾಹಾರ ದಿನಾಚಾರಣೆಯನ್ನು ಯಶಸ್ವಿಯಾಗಿ ಆಚರಿಸಬೇಕು. ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಹಾಗೂ ಅವರ ಕಾರ್ಯಗಳ ಕುರಿತಾದ ವಿಡಿಯೋಗಳನ್ನು ಎಲ್ಲ ನಿಲ್ದಾಣಗಳಲ್ಲಿ ಪ್ರದರ್ಶನ ಮಾಡಲು ರೈಲ್ವೇ ಇಲಾಖೆ ಸಿದ್ಧತೆ ನಡೆಸುತ್ತಿದೆ.

    150ನೇ ಹುಟ್ಟು ಹಬ್ಬದ ವಿಶೇಷ ಸಂಭ್ರಮಾಚರಣೆಗೆ ಸಮಿತಿ ರಚನೆಯಾಗಿದ್ದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ನೇತೃತ್ವದಲ್ಲಿ ಒಂದು ತಿಂಗಳ ಹಿಂದೆ ಮೊದಲ ಸಭೆ ನಡೆದಿದೆ.