Tag: ಸಸಿ

  • ಪರಿಸರ ಉಳಿಸೋಕೆ ಕೊಪ್ಪಳ ಗೆಳೆಯರ ಬಳಗದಿಂದ ಮಹತ್ವದ ಕಾರ್ಯ!

    ಪರಿಸರ ಉಳಿಸೋಕೆ ಕೊಪ್ಪಳ ಗೆಳೆಯರ ಬಳಗದಿಂದ ಮಹತ್ವದ ಕಾರ್ಯ!

    ಕೊಪ್ಪಳ: ಪರಿಸರ ದಿನಾಚರಣೆ ದಿನ ಒಂದು ಸಸಿ ನೆಟ್ಟು ಫೋಟೋಗೆ ಫೋಸ್ ಕೊಟ್ಟು ಕೆಲವರು ಸುಮ್ನಾಗ್ಬಿಡ್ತಾರೆ. ಆದ್ರೆ ಈ ಗೆಳೆಯರ ಬಳಗ ಪರಿಸರ ಉಳಿಸೋಕೆ ಬೆಳೆಸೋಕೆ ಪರಿಸರ ದಿನಾಚರಣೆ ಅಗತ್ಯವಿಲ್ಲಾ ಎನ್ನುವಂತೆ ಕೆಲಸ ಮಾಡ್ತಿದೆ.

    ಹೌದು. ಕೊಪ್ಪಳದ ಗಂಗಾವತಿಯಲ್ಲಿ ಈ ಗೆಳೆಯರ ಬಳಗದ ಕೆಲಸ ಇದೀಗ ಎಲ್ಲರ ಗಮನ ಸೆಳೆದಿದೆ. ಪ್ರತೀ ದಿನ ಗೆಳೆಯರೆಲ್ಲಾ ಒಂದು ಕಡೆ ಸೇರಿ ಟೀ ಕುಡಿದು ಮಾತಾಡಿ ಟೈಮ್ ಪಾಸ್ ಮಾಡಿ ಹೋಗ್ತಿದ್ದರು ಅಂತಾ ಎಲ್ಲರೂ ಅನ್ಕೊಂಡಿದ್ರು. ಆದ್ರೆ ಇವತ್ತು ಇವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆ ಗಳಿಸಿದೆ. ಇದನ್ನೂ ಓದಿ: ನಿಸರ್ಗ ರಕ್ಷಣೆಗೆ ಪಣತೊಟ್ಟ ನರಗುಂದ ಯುವಕರು

    ಸುಮ್ನೆ ಕೂತ್ಕೊಂಡು ಟೈಮ್ ಪಾಸ್ ಮಾಡಿ ಮನೆಗೆ ಹೋಗುವುದಕ್ಕಿಂತ ಏನಾದ್ರೂ ಮಾಡ್ಬೇಕು ಅಂತಾ ಡಿಸೈಡ್ ಮಾಡಿ. ಟೀ ಕುಡಿಯೋಕೆ ಬರುವ ಎಲ್ಲರೂ ಸೇರಿ ಅರಣ್ಯ ಪ್ರದೇಶದಲ್ಲಿ ಬೀಜವನ್ನು ಬಿತ್ತಿ, ಸಸಿ ಬೆಳಸುವ ಕಾರ್ಯವನ್ನು ಮಾಡಲು ಮುಂದಾಗಿದ್ದಾರೆ. ಇಷ್ಟಕ್ಕೂ ಈ ಟೀ ಕುಡಿದು ಟೈಮ್ ಪಾಸ್ ಮಾಡಿ ಹೋಗುತ್ತಿದ್ದವರು ಪೊಲೀಸರು, ಶಿಕ್ಷಕರು, ಪತ್ರಕರ್ತರು, ಸಂಘ ಸಂಸ್ಥೆ ಹೀಗೆ ಹಲವಾರು ಗೆಳೆಯರ ಬಳಗದವರು ಸೇರಿ ಈ ಮಹತ್ವದ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಅಭಿಮಾನಿಗಳು ಗಿಡ ನೆಡೋದರಲ್ಲಿ ಬ್ಯುಸಿ!

    ನಾವು ಹಚ್ಚುವ 500 ಬೀಜಗಳಲ್ಲಿ 50 ಆದ್ರೂ ಬೆಳೆದು ಮರವಾದ್ರೆ ಅದೇ ಖುಷಿ ಅಂತ ಅವರು ಹೇಳುತ್ತಿದ್ದಾರೆ.

  • ಎಂಜಿನಿಯರಿಂಗ್ & ಶಾಲಾ ವಿದ್ಯಾರ್ಥಿಗಳಿಂದ ಮಿನಿ ಫಾರೆಸ್ಟ್ ನಿರ್ಮಾಣ – 2000ಕ್ಕೂ ಅಧಿಕ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದ ವಿದ್ಯಾರ್ಥಿ ಸಮೂಹ

    ಎಂಜಿನಿಯರಿಂಗ್ & ಶಾಲಾ ವಿದ್ಯಾರ್ಥಿಗಳಿಂದ ಮಿನಿ ಫಾರೆಸ್ಟ್ ನಿರ್ಮಾಣ – 2000ಕ್ಕೂ ಅಧಿಕ ಸಸಿ ನೆಟ್ಟು ಪರಿಸರ ಪ್ರೇಮ ಮೆರೆದ ವಿದ್ಯಾರ್ಥಿ ಸಮೂಹ

    ಬೆಳಗಾವಿ: ವೀಕೆಂಡ್ ಬಂದರೆ ಸಾಕು ಇಂದಿನ ವಿದ್ಯಾರ್ಥಿಗಳು ರಜೆಯಲ್ಲಿ ಮೋಜು ಮಸ್ತಿ ಎಂದು ಎಂಜಾಯ್ ಮಾಡುತ್ತಾರೆ. ಆದರೆ ಈ ವಿದ್ಯಾರ್ಥಿಗಳು ಮಾಡಿದ ಶ್ರಮದಾನದಿಂದ ಮುಂದಿನ ಪೀಳಿಗೆಗೆ ಪ್ರಕೃತಿಯ ವರದಾನವಾಗಿದೆ. ಗ್ರೀನ್ ಸೇವರ್ಸ್ ಸಂಸ್ಥೆವತಿಯಿಂದ ಪ್ರಕೃತಿ ಮಡಿಲಲ್ಲಿ ಸಾವಿರಾರು ಸಸಿಗಳನ್ನ ನೆಟ್ಟು ಮುಂದಿನ ಪೀಳಿಗೆಗೆ ವಿದ್ಯಾರ್ಥಿಗಳು ನೈಸರ್ಗಿಕ ವಾತಾವರಣವನ್ನ ಕೊಡುಗೆಯಾಗಿ ನೀಡಿದ್ದಾರೆ.

    ಜಿಲ್ಲೆಯ ಜೆಐಟಿ, ಕೆಎಲ್‍ಇ ಮತ್ತು ಎಂಜಿನಿಯರಿಂಗ್ ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಬೆಳಗಾವಿ ಗ್ರೀನ್ ಸೇವರ್ಸ್ ಸಂಸ್ಥೆ ವತಿಯಿಂದ ಮಿನಿ ಫಾರೆಸ್ಟ್ ನಿರ್ಮಾಣ ಮಾಡಿದ್ದಾರೆ. ಬೆಳಗಾವಿಯ ಹೊರವಲಯದ ರಾಜಗೋಳ ಹೊರವಲಯದಲ್ಲಿ ಮಿನಿ ಫಾರೆಸ್ಟ್ ನಿರ್ಮಾಣ ಮಾಡಲಾಗಿದ್ದು, ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಈ ಸಸಿ ನೆಡುವ ಕಾರ್ಯಕ್ಕೆ ಶಾಲಾ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಭಾಗವಸಿದ್ದಾರೆ. ವೀಕೆಂಡ್ ನಲ್ಲಿ ಹರಟೆ, ಮೋಜು ಮಸ್ತಿ ಮಾಡದೇ ಪ್ರಕೃತಿಯ ಸೇವೆಗಾಗಿ ಸೇವೆ ಸಲ್ಲಿಸಿದ್ದಾರೆ.

    ಗ್ರೀನ್ ಸೇವರ್ಸ್ ಸಂಸ್ಥೆ 2016 ರಿಂದ ಇದೇ ಸೇವೆ ಸಲ್ಲಿಸುತ್ತಿದೆ. ಗ್ರೀನ್ ಸೇವರ್ಸ್ ಸಂಸ್ಥೆಯಿಂದ ಸಸಿಗಳನ್ನು ಖರೀದಿಸಿ ಖಾಲಿ ಇರುವ ಜಾಗದಲ್ಲಿ ಸಸಿ ನೆಡುತ್ತಾರೆ. ಎರಡು ವರ್ಷಗಳಿಂದ ಸುಮಾರು ನೂರಕ್ಕೂ ಹೆಚ್ಚು ಈ ರೀತಿ ಗ್ರೀನ್ ಪ್ಲಾಂಟ್ ತಯಾರಿಸಿದ್ದು, ನಾಲ್ಕು ಮಿನಿ ಫಾರೆಸ್ಟ್ ನಿರ್ಮಾಣ ಮಾಡಿದ್ದಾರೆ. ಇಲ್ಲಿಯವರೆಗೆ ಸುಮಾರು 9000 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದಾರೆ.

    ಎಲ್ಲಾ ವರ್ಗದ, ಎಲ್ಲಾ ವಯಸ್ಸಿನವರು ಹಾಗೂ ಸಮಾನಮನಸ್ಕರಿಂದ ಕಟ್ಟಿದ ಈ ಗ್ರೀನ್ ಸೇವರ್ಸ್ ತಂಡ ಪ್ರಕೃತಿ ಮಡಿಲಲ್ಲಿ ಪರಿಸರ ಬೆಳೆಸಲು, ಉಳಿಸಲು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಖಾಲಿ ಜಾಗ ಇದ್ದರೆ ಸಾಕು ನಮಗೆ ಮಾಹಿತಿ ನೀಡಿದರೆ ನಾವೇ ಸಸಿ ತಂದು ನೆಡುತ್ತೇವೆ ಎಂದು ಗ್ರೀನ್ ಸೇವರ್ಸ್ ಸದಸ್ಯ ಕೀರ್ತಿ ಸೂರಂಜನ್ ಹೇಳಿದ್ದಾರೆ.

    ಮರ ಬೆಳೆಸಿ ಕಾಡು ಉಳಿಸಿ ಎಂಬುದು ಕೇವಲ ನಾಮಫಲಕಕ್ಕೆ ಸೀಮಿತವಾಗಿರುವ ಕಾಲದಲ್ಲಿ ಮುಂದಿನ ಪೀಳಿಗೆಗೆ ನೈಸರ್ಗಿಕ ವಾತಾವರಣ ನೀಡಿ ಪರಿಸರ ಕಾಳಜಿಯಿಂದ ಗ್ರೀನ್ ಸೇವರ್ಸ್ ತಂಡ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

  • ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

    ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಎಳನೀರು ಹಾಗೂ ಗುಲಾಬಿ ಹೂಗಳ ಸಸಿಗಳನ್ನು ಮಾರಾಟ ಮಾಡುತ್ತಿರುವ ಈಕೆಯ ಹೆಸರು ಮಹಾದೇವಿ.

    ಮಳೆಗಾಲ ಬಂತೆಂದರೆ ಫಾರ್ಮ್ ನಲ್ಲಿ ಬೆಳೆದ ಬಗೆಬಗೆಯ ಹೂವಿನ ಗಿಡಗಳನ್ನು ಮಹಾದೇವಿಯವರು ದೂರದ ಊರುಗಳಾದ ಮಹಾರಾಷ್ಟ್ರದ ಕೋಲ್ಹಾಪುರ, ನಿಪ್ಪಾಣಿ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಬೆಳಗಾವಿ ಹೀಗೆ ಅನೇಕ ಕಡೆ ತಮ್ಮದೇ ಟಾಟಾ ಏಸ್ ವಾಹನದ ಮೂಲಕ ಸಾಗಿಸಿ ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಿ ಎಳೆ ನೀರು ಮಾರಾಟ ಮಾಡುತ್ತಾರೆ. ನಿತ್ಯ ಡ್ರೈವ್ ಮಾಡಿಕೊಂಡು ಪಕ್ಕದ ಊರುಗಳಿಂದ ಎಳನೀರು ತಂದು ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಸದೃಢವಾಗಿರದ ಕಾರಣ ರಸ್ತೆ ಪಕ್ಕದಲ್ಲಿ ಕುಳಿತು ವ್ಯಾಪಾರ ಮಾಡಲು ಒಂದು ಸೂರು ನಿರ್ಮಿಸಿಕೊಡಿ ಎನ್ನುತ್ತಿದ್ದಾರೆ ಮಹಾದೇವಿ.

    ಮಹಾದೇವಿಯವರು ತಮ್ಮ ಜೀವನದಲ್ಲಾದ ಕೆಡುಕುಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿತ್ಯ ಕೂಲಿ ಕಾರ್ಮಿಕರ ಜೊತೆ ಕೆಲಸ ಮಾಡುತ್ತಾರೆ. ಜೊತೆಗೆ ಏಳನೀರು ಮಾರಿ ಬಂದ ದುಡ್ಡಲ್ಲಿ ಲೋನ್ ಮೂಲಕ ಒಂದು ವಾಹನ ಖರೀದಿಸಿ ನಿತ್ಯ ಕಾಯಕದಲ್ಲಿ ತೊಡಗಿದ್ದಾರೆ. ಇಬ್ಬರು ತಮ್ಮಂದಿರು ಮತ್ತು ಅಪ್ಪ-ಅಮ್ಮನನ್ನು ಸಾಕುವ ಹೊಣೆ ಹೊತ್ತಿರುವ ಮಹಾದೇವಿ ಟಾಟಾ ಏಸ್ ವಾಹನವನ್ನು ಲೀಲಾಜಾಲವಾಗಿ ಓಡಿಸುತ್ತಾರೆ. ಮದುವೆಯಾಗಿ ಕೆಲ ವರ್ಷಗಳ ನಂತರ ಗಂಡ ಬೇರೊಬ್ಬ ಹೆಂಗಸಿನ ಸಹವಾಸ ಮಾಡಿ ಮಹಾದೇವಿಯವರನ್ನ ಮನೆಯಿಂದ ಹೊರಹಾಕಿದ ನಂತರ ಮಹಾದೇವಿ ಧೃತಿಗೆಡದೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಮಾದರಿ ಅಂತಾರೆ ಸ್ಥಳೀಯರು.

    ಹುಟ್ಟುತ್ತಲೇ ಗಂಡು ಹೆಣ್ಣೆಂಬ ಬೇಧ-ಭಾವ ಮಾಡಿ ಅದೆಷ್ಟೋ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿರುವ ಜನರಿಗೆ ಮಹಾದೇವಿ ಗಂಡಿಗಿಂತ ನಾನು ಯಾವುದರಲ್ಲೂ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಜೀವನ ಒಡ್ಡಿರುವ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿ ಮುನ್ನುಗ್ಗುತ್ತಿರುವ ಮಹಾದೇವಿಗೆ ಸಹಾಯ ಬೇಕಿದೆ.

    https://www.youtube.com/watch?v=TK7Qbe6tjD0

  • ಈ ಕಾರಣಕ್ಕಾಗಿ 4 ದಿನ ಜೈಲಿನಲ್ಲಿ ಬಂಧಿಯಾದ 8 ಕತ್ತೆಗಳು

    ಈ ಕಾರಣಕ್ಕಾಗಿ 4 ದಿನ ಜೈಲಿನಲ್ಲಿ ಬಂಧಿಯಾದ 8 ಕತ್ತೆಗಳು

    ಲಕ್ನೋ: ಉತ್ತರಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಪೊಲೀಸರು 8 ಕತ್ತೆಗಳನ್ನು 4 ದಿನಗಳ ಕಾಲ ವಶದಲ್ಲಿ ಇರಿಸಿಕೊಂಡಿದ್ದ ವಿಲಕ್ಷಣ ಘಟನೆ ನಡೆದಿದೆ. ಕತ್ತೆಗಳು ಜೈಲಿನ ಆವರಣದಲ್ಲಿ ಬೆಲೆ ಬಾಳುವ ಸಸಿಗಳನ್ನು ತಿಂದಿದ್ದರಿಂದ ಅವುಗಳನ್ನು ವಶಕ್ಕೆ ಪಡೆಯಲಾಗಿತ್ತು.

    ಈ ಹಿಂದೆ ಕತ್ತೆಗಳನ್ನು ಬೇಕಾಬಿಟ್ಟಿಯಾಗಿ ಬಿಡದಂತೆ ಅವುಗಳ ಮಾಲೀಕನಿಗೆ ತಿಳಿಸಲಾಗಿತ್ತು. ಆದರೂ ಕತ್ತೆಗಳನ್ನು ಬಿಟ್ಟಿದ್ದರಿಂದ ದುಬಾರಿ ಬೆಲೆಯ ಸಸಿಗಳನ್ನು ತಿಂದಿವೆ. ಹೀಗಾಗಿ 8 ಕತ್ತೆಗಳನ್ನು 4 ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಸೋಮವಾರ ರಾತ್ರಿ ಬಿಜೆಪಿ ನಾಯಕರೊಬ್ಬರು ಹೇಳಿದ ನಂತರ ಪೊಲೀಸರು ಕತ್ತೆಗಳನ್ನ ಬಿಟ್ಟು ಕಳಿಸಿದ್ದಾರೆ.

    ಈ ಹಿಂದೆಯೂ ಕತ್ತೆಗಳು ಜೈಲಿನ ಆವರಣ ಪ್ರವೇಶ ಮಾಡಿದ್ದರ ಬಗ್ಗೆ ಅವುಗಳ ಮಾಲೀಕನಿಗೆ ಎಚ್ಚರಿಕೆ ನೀಡಲಾಗಿತ್ತು. ಜೈಲಿನ ಆವರಣವನ್ನ ಸುಂದರಗೊಳಿಸಲು ಹಿರಿಯ ಅಧಿಕಾರಿಗಳು ಬೆಲೆ ಬಾಳುವ ಸಸಿಗಳನ್ನು ತರಸಿದ್ದರು. ಈ ಸಸಿಗಳನ್ನ ಜೈಲಿನ ಆವರಣದಲ್ಲಿ ನೆಡಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದ್ರೆ ಕತ್ತೆಗಳು ಸಸಿಗಳನ್ನು ತಿಂದು ಹಾಳು ಮಾಡಿವೆ ಎಂದು ಮುಖ್ಯ ಪೇದೆ ಆರ್.ಕೆ.ಶರ್ಮಾ ಹೇಳಿದ್ದಾರೆ.

    2 ಲಕ್ಷ ರೂ. ಮೌಲ್ಯದ ಸಸಿ: ಕತ್ತೆಗಳು ತಿಂದಿರುವ ಸಸಿಗಳ ಮೌಲ್ಯ 2 ಲಕ್ಷ ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ. ಕತ್ತೆಗಳು ದುಬಾರಿ ಬೆಲೆಯ ಸಸಿಗಳನ್ನ ತಿಂದಿದ್ದಲ್ಲದೆ ನನ್ನ ಮನೆಗೂ ನುಗ್ಗಿದ್ದವು. ನಾವು ಮಾಲೀಕನನ್ನು ಪತ್ತೆ ಮಾಡಲು ಕತ್ತೆಗಳನ್ನ ವಶಕ್ಕೆ ತೆಗೆದುಕೊಂಡೆವು. ಕತ್ತೆಗಳ ಮಾಲೀಕ ಬಿಡಿಸಿಕೊಳ್ಳಲು ಬಂದಾಗ ಆತನಿಗೆ ಬುದ್ಧಿ ಹೇಳಿ ಮತ್ತೆ ಈ ರೀತಿ ಆಗದಂತೆ ನೋಡಿಕೊಳ್ಳಲು ಹೇಳುವ ಸಲುವಾಗಿ ವಶಕ್ಕೆ ತೆಗೆದುಕೊಂಡೆವು ಎಂದು ಜೈಲಿನ ಹಿರಿಯ ಅಧಿಕಾರಿ ಎಸ್.ಆರ್.ಶರ್ಮಾ ಹೇಳಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕತ್ತೆಯ ಮಾಲೀಕ ಕಮಲೇಶ್, ಕತ್ತೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ನಂತರ ನಾನು ಠಾಣೆಗೆ ತೆರಳಿ ಹಲವು ಬಾರಿ ಮನವಿ ಮಾಡಿದ್ದೇನೆ. ಆದರೆ ಯಾವ ಆಧಿಕಾರಿಗಳು ಕತ್ತೆಗಳನ್ನು ಬಿಡಲಿಲ್ಲ. ಕೊನೆಗೆ ನಾನು ಸ್ಥಳೀಯ ಬಿಜೆಪಿ ನಾಯಕರೊಬ್ಬರಿಂದ ಹೇಳಿಸಿದ ಮೇಲೆ 4 ದಿನಗಳ ಬಳಿಕ ಕತ್ತೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ