Tag: ಸಸಿಕಾಂತ್ ಸೆಂಥಿಲ್

  • ಕೇಂದ್ರದ ನೀತಿಯೇ ರಾಜೀನಾಮೆಗೆ ಕಾರಣ- ಸಸಿಕಾಂತ್ ಸೆಂಥಿಲ್

    ಕೇಂದ್ರದ ನೀತಿಯೇ ರಾಜೀನಾಮೆಗೆ ಕಾರಣ- ಸಸಿಕಾಂತ್ ಸೆಂಥಿಲ್

    ಮಂಗಳೂರು: ಐಎಎಸ್ ಅಧಿಕಾರಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ಶುಕ್ರವಾರ ರಾಜೀನಾಮೆ ನೀಡಿ ಸೇವೆಯಿಂದ ದೂರ ಉಳಿದಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದರು ಅನ್ನೋದು ನಿಗೂಢವಾಗಿಯೇ ಇದ್ದು ಇಂದು ಸ್ಫೋಟಕ ಕಾರಣವನ್ನು ಹೊರ ಹಾಕಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಸೆಂಥಿಲ್ ಅವರನ್ನು ಮಾತನಾಡಿಸಿದಾಗ, ಕೇಂದ್ರ ಸರ್ಕಾರದ ಈಗಿನ ನೀತಿಯೇ ನನ್ನ ರಾಜೀನಾಮೆಗೆ ಕಾರಣ. ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಒಪ್ಪಿಗೆ ಇಲ್ಲ. ಹೀಗಾಗಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಸಂಭಾಷಣೆ ಹೀಗಿದೆ:
    ಪ್ರತಿನಿಧಿ: ರಾಜೀನಾಮೆ ಕಾರಣ ಸರ್
    ಸಸಿಕಾಂತ್ ಸೆಂಥಿಲ್: ಕಾರಣ ಇಷ್ಟೇ, ಕೇಂದ್ರ ಸರ್ಕಾರದ ಪಾಲಿಸಿಗಳು ಸೈದ್ಧಾಂತಿಕವಾಗಿ ನನಗೆ ಒಪ್ಪಿಗೆ ಇಲ್ಲ ಅಷ್ಟೇ.
    ಪ್ರತಿನಿಧಿ: ಕೇಂದ್ರ ಸರ್ಕಾರನಾ ಸರ್ ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಬೇಸತ್ತು ಸಸಿಕಾಂತ್ ಸೆಂಥಿಲ್ ರಾಜೀನಾಮೆ?

    ಸಸಿಕಾಂತ್ ಸೆಂಥಿಲ್: ಅಂದ್ರೆ ನಮ್ಮ ರಾಜ್ಯ ಸರ್ಕಾರಕ್ಕೂ ರಾಜೀನಾಮೆಗೂ ಯಾವುದೇ ಸಂಬಂಧ ಇಲ್ಲ. ಈಗ ನ್ಯಾಷನಲ್ ಲೆವೆಲ್ ಪಾಲಿಸಿ ಏನ್ ನಡೀತಾ ಇದೆ, ನನ್ನ ವೈಯಕ್ತಿಕ ನಿಲುವುಗಳಿಗೆ ಅದು ಸರಿ ಹೊಂದುತ್ತಿಲ್ಲ.
    ಪ್ರತಿನಿಧಿ :ಅದು ಕಷ್ಟ ಆಗ್ತಿದೆಯಾ ಸರ್

    ಸಸಿಕಾಂತ್ ಸೆಂಥಿಲ್: ಈಗ ತಾವು ನೋಡ್ತಾ ಇದ್ದೀರಲ್ಲ, ರಾಷ್ಟ್ರೀಯ ಲೆವಲ್‍ನಲ್ಲಿ ಏನೇನು ನಡೀತಿದೆ, ಯಾವ ರೀತಿ ರಾಜಕೀಯ ನಡೆಯುತ್ತಿದೆ ಅನ್ನೋದನ್ನು ನೀವೂ ನೋಡ್ತಿದ್ದೀರಲ್ಲ, ನನಗೂ ಅದಕ್ಕೂ ಒಪ್ಪಿಗೆ ಇಲ್ಲದಿರೋದ್ರಿಂದ ನಾನು ಸೇವೆಯಿಂದ ಹೊರಗೆ ಹೋಗ್ತಾ ಇದ್ದೇನೆ ಅಷ್ಟೇ. ನಮ್ಮ ರಾಜ್ಯ ಸರ್ಕಾರಕ್ಕೂ, ಅದಕ್ಕೂ ಸಂಬಂಧನೇ ಇಲ್ಲ

    ಪ್ರತಿನಿಧಿ: ಕಾಶ್ಮೀರ ವಿಚಾರ ಏನಾದ್ರೂ ಬೇಜಾರಾಗಿದ್ದೀಯಾ?
    ಸಸಿಕಾಂತ್ ಸೆಂಥಿಲ್: ಕಾಶ್ಮೀರ ವಿಚಾರನೂ ನನ್ನ ರಾಜೀನಾಮೆಯ ಒಂದು ಭಾಗ ಇದೆ.

    ಆಗಸ್ಟ್ 3ರಿಂದ ರಜೆಯಲ್ಲಿ ತೆರಳಿರುವ ಜಿಲ್ಲಾಧಿಕಾರಿ ಸೆಂಥಿಲ್ ಅವರು ಶುಕ್ರವಾರ ಧಿಡೀರ್ ಆಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ ಇಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ನೈತಿಕವೆಂದು ನನಗೆ ಅನಿಸುತ್ತಿಲ್ಲ. ಸಂವಿಧಾನದ ಮೂಲ ಆಶಯಗಳು ಕಾಣೆಯಾಗುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಅಡೆತಡೆ ಬರುವ ಸಾಧ್ಯತೆಯಿದೆ. ಜೊತೆಗೆ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದರು.

    2009ರ ಬ್ಯಾಚಿನ ಈ ಅಧಿಕಾರಿ 2017 ಅಕ್ಟೋಬರ್ ತಿಂಗಳಿಂದ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಸಸಿಕಾಂತ್ ಅವರು ಕೆಲಸ ಮಾಡಿದ್ದರು. ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಸಿಂಧೂ ಬಿ. ರೂಪೇಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಯಾರು ಈ ಸಿಂಧೂ?
    ಮೈಸೂರು ಮೂಲದ ಸಿಂಧೂ ಬಿ.ಇ ಪದವೀಧರರಾಗಿದ್ದಾರೆ. ಎರಡು ವರ್ಷ ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಿ, ನಂತ ರಾಜೀನಾಮೆ ನೀಡಿದ್ದಾರೆ. ಆ ಬಳಿಕ ಯುಪಿಎಸ್‍ಸಿ ಪರೀಕ್ಷೆ ಬರೆದು 17ನೇ ರ್ಯಾಂಕ್ ಪಡೆದು ತೇರ್ಗಡೆಗೊಂಡಿದ್ದರು.

  • ಸಿಎಂ, ಪುತ್ರರ ಕಿರುಕುಳದಿಂದ ಸೆಂಥಿಲ್ ರಾಜೀನಾಮೆ: ಹರೀಶ್ ಕುಮಾರ್

    ಸಿಎಂ, ಪುತ್ರರ ಕಿರುಕುಳದಿಂದ ಸೆಂಥಿಲ್ ರಾಜೀನಾಮೆ: ಹರೀಶ್ ಕುಮಾರ್

    – ರಾಜೀನಾಮೆ ಹಿಂದಿದೆ ಷಡ್ಯಂತ್ರ

    ಮಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಪುತ್ರರ ಕಿರುಕುಳದಿಂದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಆರೋಪಿಸಿದ್ದಾರೆ.

    ಸಸಿಕಾಂತ್ ರಾಜೀನಾಮೆ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಹರೀಶ್ ಕುಮಾರ್, ಬಿಜೆಪಿ ಸರ್ಕಾರದ ಕಿರುಕುಳ ಮತ್ತು ಒತ್ತಡದಿಂದ ಸಸಿಕಾಂತ್ ರಾಜೀನಾಮೆ ನೀಡಿದ್ದಾರೆ. ಸಿಎಂ ಮತ್ತು ಪುತ್ರರು ಅಧಿಕಾರಿಗಳ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಇದೇ ಸರ್ಕಾರ ಮುಂದುವರಿದ್ರೆ ಕೇವಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಅಲ್ಲದೇ ಕೆಳವರ್ಗದ ನೌಕರರು ರಾಜಿನಾಮೆ ನೀಡುವ ಪರಿಸ್ಥಿತಿ ಬರಲಿದೆ. ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ಸರ್ಕಾರ ಸುಸ್ಥಿತ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.

    ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಮಾತನಾಡಿ, ಸಸಿಕಾಂತ್ ಸೆಂಥಿಲ್ ಕಾರಣವಿಲ್ಲದೇ ರಾಜೀನಾಮೆ ನೀಡುವಂತಹ ಅಧಿಕಾರಿ ಅಲ್ಲ. ಒಬ್ಬ ಐಎಎಸ್ ಅಧಿಕಾರಿ ರಾಜೀನಾಮೆ ನೀಡಿರುವ ಹಿಂದೆ ಒಂದು ಷಡ್ಯಂತ್ರವಿರುವ ಅನುಮಾನಗಳಿವೆ. ಓರ್ವ ಐಎಎಸ್ ಅಧಿಕಾರಿ ಯಾಕೆ ರಾಜೀನಾಮೆ ನೀಡಿದ್ರು ಎಂಬ ವಿಷಯವನ್ನು ಮುಖ್ಯಮಂತ್ರಿಗಳು ರಾಜ್ಯದ ಜನತೆ ತಿಳಿಸಬೇಕು. ಸೆಂಥಿಲ್ ಜಿಲ್ಲೆಯಲ್ಲಿ ಡ್ರಗ್ ಮಾಫಿಯಾ ಸೇರಿದಂತೆ ಹಲವು ಅವ್ಯವಹಾರಗಳನ್ನು ತಡೆದಿದ್ದರು. ಏಕಚಕ್ರಾಧಿಪತ್ಯ ಹೊಂದಿರುವ ಬಿಜೆಪಿ ಸರ್ಕಾರ ಮರಳು ದಂಧೆಗೆ ಮುಂದಾಗಿತ್ತು. ತಮಗೆ ಸಂಬಂಧಿಸಿದ ಜನರಿಗೆ ಮರಳು ದಂಧೆಗೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ತಂದಿದ್ದರು ಎಂದು ಆರೋಪಿಸಿದರು. ಇದನ್ನೂ ಓದಿ: ಅಕ್ರಮ ಮರಳು ದಂಧೆಗೆ ಸಸಿಕಾಂತ್ ಸೆಂಥಿಲ್ ಬಲಿ?

    ದೇಶದ ಪ್ರಜಾಪ್ರಭುತ್ವ ಗಂಡಾಂತರದಲ್ಲಿದೆ. ನಾನು ಹೊಂದಾಣಿಕೆ ಮತ್ತು ಅನೈತಿಕ ಕಾರ್ಯಗಳಲ್ಲಿ ಭಾಗಿಯಾಗಲು ಇಷ್ಟಪಡಲ್ಲ. ಮನಸ್ಸಿಗೆ ಒಪ್ಪದ ವಿಚಾರಗಳಿಗೆ ಅಡ್ಜಸ್ಟ್ ಮಾಡಿಕೊಳ್ಳದೇ ರಾಜೀನಾಮೆ ನೀಡುತ್ತಿದ್ದೇನೆ. ರಾಜೀನಾಮೆ ನೀಡಿ ಓರ್ವ ಸಾಮಾನ್ಯ ವ್ಯಕ್ತಿಯಾಗಿ ಹೋರಾಟ ಮಾಡುತ್ತೇನೆ ಎಂದು ಸೆಂಥಿಲ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಸೆಂಥಿಲ್ ಮರಳು ಮಾಫಿಯಾಗೆ ಬಲಿಯಾಗಿದ್ದು, ಮುಖ್ಯಮಂತ್ರಿಗಳು ಅಧಿಕಾರಿಯ ಮನವೊಲಿಸಿ ರಾಜೀನಾಮೆ ಹಿಂಪಡೆಯುವಂತೆ ಮಾಡಬೇಕೆಂದು ಐವಾನ್ ಡಿಸೋಜ ಆಗ್ರಹಿಸಿದರು. ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಿಢೀರ್ ರಾಜಿನಾಮೆ

  • ಮಂಗಳೂರಲ್ಲಿ ನಿಪಾ ವೈರಸ್ ಜ್ವರ ಪತ್ತೆ ಆಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ಮಂಗಳೂರಲ್ಲಿ ನಿಪಾ ವೈರಸ್ ಜ್ವರ ಪತ್ತೆ ಆಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ಮಂಗಳೂರು: ನಿಪಾ ವೈರಸ್ ಶಂಕಿತರಿಬ್ಬರ ತಪಾಸಣೆ ನಡೆಸಲಾಗಿದ್ದು ನಿಪಾ ಜ್ವರದ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದ್ದಾರೆ.

    ಮಂಗಳೂರಿನ ಇಬ್ಬರಲ್ಲಿ ಶಂಕಿತ ನಿಪಾ ಪ್ರಕರಣ ಪತ್ತೆಯಾಗಿತ್ತು. ಮಣಿಪಾಲದಲ್ಲಿ ಸೋಂಕು ಶಂಕಿತರಿಬ್ಬರ ತಪಾಸಣೆ ನಡೆಸಲಾಗಿದೆ. ಯಾವುದೇ ನಿಪಾ ಜ್ವರದ ಲಕ್ಷಣಗಳು ಕಂಡುಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನರು ಭಯ ಪಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಗೆ ನಿಪಾ ಜ್ವರ ಬರುವ ಸಾಧ್ಯತೆ ಕಡಿಮೆ. ಪ್ರಾಣಿಗಳು, ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನ ತಿನ್ನಬೇಡಿ. ನಿಪಾ ಸೋಂಕು ಗಾಳಿಯಲ್ಲಿ ಹರಡುವುದಿಲ್ಲ. ಸೋಂಕಿತ ವ್ಯಕ್ತಿಗಳ ಸಂಪರ್ಕದಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಿದೆ ಎಚ್ಚರವಿರಲಿ. ನೆರವಿಗಾಗಿ 104 ಸಂಖ್ಯೆಗೆ ಕರೆ ಮಾಡಿ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ. ಇದನ್ನೂ ಓದಿ:ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಬಾವಲಿಗಳ ಮೂಲಕ ನಿಪಾ ವೈರಸ್ ಜ್ವರಕ್ಕೆ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ರಾಜ್ಯದಲ್ಲಿ ಫುಲ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲೂ ನಿಪಾ ಭಯ ಕಾಡತೊಡಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಸುತ್ತೋಲೆ ರವಾನೆಯಾಗಿದೆ. ಜ್ವರ, ವಾಂತಿ, ಸುಸ್ತು ಇಂತಹ ಲಕ್ಷಣ ಕಾಣಿಸಿಕೊಂಡ ರೋಗಿಗಳ ರಕ್ತ ಪರೀಕ್ಷೆಯ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಆದೇಶ ಹೊರಡಿಸಿದೆ.