Tag: ಸವಾರರು

  • ಅಪಘಾತಗಳಿಗೆ ಬ್ರೇಕ್ ಹಾಕಲು ಆರ್‌ಟಿಓ ಅಧಿಕಾರಿಗಳಿಂದ ಜಾಗೃತಿ

    ಅಪಘಾತಗಳಿಗೆ ಬ್ರೇಕ್ ಹಾಕಲು ಆರ್‌ಟಿಓ ಅಧಿಕಾರಿಗಳಿಂದ ಜಾಗೃತಿ

    ನೆಲಮಂಗಲ: ಈ ವಾರವನ್ನು 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ. ಆದರೂ ಹೆಲ್ಮೆಟ್ ಬಳಸದೆ ವಾಹನ ಸವಾರರ ಓಡಾಟ ಇನ್ನೂ ನಿಂತಿಲ್ಲ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ.ಡಿ.ಎಸ್ ಒಡೆಯರ್ ಕಳವಳ ವ್ಯಕ್ತಪಡಿಸಿದ್ದಾರೆ.

    ರಸ್ತೆ ಸುರಕ್ಷಾ ಸಪ್ತಾಹದ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿಯ ಖಾಸಗಿ ಕಂಪನಿ ಸಹಯೋಗದೊಂದಿಗೆ ರಸ್ತೆ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಹೆದ್ದಾರಿಯ ಅಪಘಾತಗಳ ಬಗ್ಗೆ ಮಾಹಿತಿ, ಅಪಘಾತಗಳಿಗೆ ಕಾರಣಗಳು ಹಾಗೂ ರಕ್ಷಣೆಯ ಉಪಾಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸಿಕೊಡಲಾಯಿತು.

    ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಖಾಸಗಿ ಕಂಪನಿ ಸಂಯುಕ್ತ ಆಶ್ರಯದಲ್ಲಿ ಈ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ. ಡಿ.ಎಸ್ ಒಡೆಯರ್ ಮಾತನಾಡಿ, 21ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಸುತ್ತಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ರಸ್ತೆ ನಿಯಮದ ಅರಿವು ಎಲ್ಲರಿಗೂ ಅತ್ಯಗತ್ಯ. ಸವಾರರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸಬೇಕು ಎಂದು ತಿಳಿಸಿದರು.

  • ಬೈಕ್-ಸ್ಕೂಟಿ ಮುಖಾಮುಖಿ ಡಿಕ್ಕಿ: ಓರ್ವನ ಕಾಲ್ಬೆರಳು ಕಟ್

    ಬೈಕ್-ಸ್ಕೂಟಿ ಮುಖಾಮುಖಿ ಡಿಕ್ಕಿ: ಓರ್ವನ ಕಾಲ್ಬೆರಳು ಕಟ್

    – ಮತ್ತೊಬ್ಬನ ಮೂಗಿನಿಂದ ಸುರಿದ ರಕ್ತ

    ಮಂಡ್ಯ: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ವಾಹನದ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.

    ಮಳವಳ್ಳಿ ಪಟ್ಟಣದ ನಿವಾಸಿ ದಕ್ಷಿಣ ಮೂರ್ತಿ (75) ಹಾಗೂ ಲೋಕೇಶ್ ಗಂಭೀರ ಗಾಯಗೊಂಡವರು. ಮಳವಳ್ಳಿ ಪಟ್ಟಣದ ಮದ್ದೂರು ಸರ್ಕಲ್‍ನಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ಕೈತಪ್ಪಿದೆ.

    ಬೈಕ್ ಹಾಗೂ ಸ್ಕೂಟಿ ಸವಾರರು ವೇಗವಾಗಿ ಬರುತ್ತಿದ್ದರು. ಈ ವೇಳೆ ಮದ್ದೂರು ಸರ್ಕಲ್‍ನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದಕ್ಷಿಣ ಮೂರ್ತಿ ಅವರ ಕಾಲ್ಬೆರಳು ತುಂಡಾಗಿ ಬಿದ್ದಿದ್ದು, ಲೋಕೇಶ್ ಮೂಗಿಗೆ ಗಂಭೀರ ಗಾಯವಾಗಿ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ.

    ಘಟನಾ ಸ್ಥಳದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ದಕ್ಷಿಣ ಮೂರ್ತಿ ಹಾಗೂ ಲೋಕೇಶ್‍ನನ್ನು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸ್ಕೂಟಿ ಹಾಗೂ ಬೈಕ್ ಜಖಂಗೊಂಡಿವೆ. ಈ ಸಂಬಂಧ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ವಾಹನ ಸವಾರರಿಗೆ ತಟ್ಟಿತು ಮೋದಿ ಎಫೆಕ್ಟ್

    ವಾಹನ ಸವಾರರಿಗೆ ತಟ್ಟಿತು ಮೋದಿ ಎಫೆಕ್ಟ್

    ಬೆಂಗಳೂರು: ಅರ್ಧ ಗಂಟೆ ಮುಂಚಿತವಾಗಿ ಮೇಕ್ರಿ ಸರ್ಕಲ್ ಹಾಗೂ ಬಳ್ಳಾರಿ ರಸ್ತೆ ಬಂದ್ ಮಾಡಿದ್ದಕ್ಕೆ ವಾಹನ ಸವಾರರು ಪೊಲೀಸರ ಮೇಲೆ ಆಕ್ರೋಶಗೊಂಡಿರುವ ಘಟನೆ ಮೇಕ್ರಿ ಸರ್ಕಲ್ ನಡೆದಿದೆ.

    ಪ್ರಧಾನಿ ನರೇಂದ್ರ ಮೋದಿ ಜಿಕೆವಿಕೆ 107ನೇ ಭಾರತ ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಕಾರ್ಯಕ್ರಮಕ್ಕೆ ತೆರಳಿದ್ದರು. ಗುರುವಾರ ರಾತ್ರಿ ತುಮಕೂರಿನ ರಾಜಭವನದಲ್ಲಿ ತಂಗಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜಭವನದಿಂದ ಮೇಕ್ರಿ ಸರ್ಕಲ್, ಬಳ್ಳಾರಿ ರಸ್ತೆಯ ಮೂಲಕ ಜಿಕೆವಿಕೆ ಕಾರ್ಯಕ್ರಮಕ್ಕೆ ಹೋಗುವ ಪ್ಲಾನ್ ಮಾಡಲಾಗಿತ್ತು.

    ಪ್ರಧಾನಿ ನರೇಂದ್ರ ಮೋದಿಯ ಭದ್ರತೆಯ ದೃಷ್ಟಿಯಿಂದ ಪೊಲೀಸರು ಅರ್ಧ ಗಂಟೆ ಮುಂಚಿತವಾಗಿ ಮೇಕ್ರಿ ಸರ್ಕಲ್‍ನ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿತ್ತು. ಜನರು ಕೆಲಸಕ್ಕೆ ಹೋಗುವ ಸಮಯದಲ್ಲಿಯೇ ಅರ್ಧ ಗಂಟೆ ಟ್ರಾಫಿಕ್ ಜಾಮ್ ಮಾಡಿದ್ದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದ್ದರಿಂದ ವಾಹನ ಸವಾರರು ಪೊಲೀಸರ ಮೇಲೆ ಮುಗಿಬಿದ್ದಿದ್ದರು.

    ಪೊಲೀಸರು ಯಾವುದೇ ಮಾಹಿತಿ ಕೊಡದೇ ಏಕಾಏಕಿ ಅರ್ಧಗಂಟೆ ನಿಲ್ಲಿಸಿದ್ದರಿಂದ ಪೊಲೀಸರ ವಿರುದ್ಧ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಪೊಲೀಸರು ವಾಹನ ಸವಾರರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ.

  • ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಬೆಂಗಳೂರು: ಹೊಸ ಟ್ರಾಫಿಟ್ ದಂಡ ಜಾರಿಯಿಂದಾಗಿ ವಾಹನ ಸವಾರರು ಶಾಕ್‍ಗೆ ಒಳಗಾಗಿದ್ದಾರೆ. ಸವಾರರು ಬೈಕ್‍ಗಳನ್ನು ಮನೆಯಿಂದ ಹೊರಗೆ ತರುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಈ ಬೆನ್ನಲ್ಲೇ ಸಂಚಾರ ನಿಯಮವೊಂದು ಸವಾರರು ಬೆಚ್ಚಿ ಬೀಳುವಂತೆ ಮಾಡಿದೆ.

    ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಭಾರೀ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ದಂಡದ ಮೊತ್ತವು 1,000 ರೂ. ಆಗಿದ್ದು, ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದನ್ನೂ ಓದಿ: ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

    ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ವಾಹನ ನಿಯಂತ್ರಣಕ್ಕೆ, ಪಾರ್ಕ್ ಮಾಡಲು, ಪಾರ್ಕಿಂಗ್‍ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಉತ್ತಮ ಎಂಬುದು ನಿಯಮದ ಉದ್ದೇಶವಾಗಿದೆ. 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ. ಇಲ್ಲಿಯವರೆಗೆ ಈ ನಿಯಮವನ್ನು ಗಂಭೀರವಾಗಿ ಟ್ರಾಫಿಕ್ ಪೊಲೀಸರು ಗಮನಿಸುತ್ತಿರಲಿಲ್ಲ. ಆದರೆ ಈಗ ದೇಶದ ವಿವಿಧ ಕಡೆಗಳಲ್ಲಿ ಈ ನಿಯಮವನ್ನು ಪಾಲಿಸಲು ಮುಂದಾಗಿದ್ದು ಹಲವು ನಗರಗಳಲ್ಲಿ ಸವಾರರು ಈ ಪ್ರಕರಣದ ಅಡಿ ದಂಡ ಪಾವತಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ವಾಹನ ಚಾಲಕನಿಗೂ ಬಿತ್ತು 1 ಸಾವಿರ ರೂ. ದಂಡ

    ಹೊಸ ಟ್ರಾಫಿಟ್ ದಂಡ ಜಾರಿಯಾದ ಬಳಿಕ ಟ್ರಾಫಿಕ್ ಪೊಲೀಸರು ಕೂಡ ಫುಲ್ ಆ್ಯಕ್ಟೀವ್ ಆಗಿದ್ದು, ಲೈಸನ್ಸ್, ಹೆಲ್ಮೆಟ್, ಲೈಸನ್ಸ್ ಸೇರಿ ಎಲ್ಲ ರೀತಿಯ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಹೀಗಾಗಿ ದಂಡದ ಮೊತ್ತವು ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ.

  • ರಸ್ತೆ ಮಧ್ಯೆ ಒಂಟಿ ಸಲಗನ ರಾಜಗಾಂಭೀರ್ಯ ನಡಿಗೆ

    ರಸ್ತೆ ಮಧ್ಯೆ ಒಂಟಿ ಸಲಗನ ರಾಜಗಾಂಭೀರ್ಯ ನಡಿಗೆ

    ಚಿಕ್ಕಮಗಳೂರು: ಆನೆ ಕಂಡು ಸರ್ಕಾರಿ ಬಸ್ ಚಾಲಕ ಬಸ್‍ನ್ನ ಒಂದು ಕಿ.ಮೀ. ಹಿಮ್ಮುಖವಾಗಿ ಓಡಿಸಿದ್ರು, ಅದೇ ಜಾಗದಲ್ಲಿ ಹಣ್ಣಿನ ಲಾರಿಯನ್ನ ಅಡ್ಡಗಟ್ಟಿದ ಒಂಟಿ ಸಲಗ ಹಣ್ಣನ್ನು ತಿಂದು ಟೆಂಪೋವನ್ನು ಸೈಡಿಗೆ ನೂಕಿತ್ತು. ಮತ್ತದೇ ಜಾಗದಲ್ಲಿ ಒಂಟಿ ಸಲಗನ ಕಾಟಕ್ಕೆ ಪ್ರಯಾಣಿಕರು ವಾಹನಗಳನ್ನು ಹಿಂದಿರುಗಿಸಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.

    ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಶಾಂತವೇರಿ ಗ್ರಾಮದಲ್ಲಿ ಒಂಟಿ ಸಲಗನ ಉಪಟಳ ಹೆಚ್ಚಾಗಿದೆ. ಈ ಮಾರ್ಗ ಹಾವು ಬಳುಕಿನ ಮೈಕಟ್ಟಿನ ರಸ್ತೆಯಾಗಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಅರಣ್ಯ ಇರುವುದರಿಂದ ಒಂಟಿ ಸಲಗೆ ಎಲ್ಲಿರುತ್ತೆ ಎಂದು ಹೇಳಲಾಗದು. ಕಣ್ಣಿಗೆ ಬಿದ್ದರಷ್ಟೆ ಕಾಣುತ್ತದೆ.

    ಎರಡು ದಿನಗಳ ಹಿಂದೆ ಇದೇ ಮಾರ್ಗವಾಗಿ ತರೀಕೆರೆಗೆ ಹೋಗುತ್ತಿದ್ದ ಬೈಕ್ ಸವಾರರು ತಿರುವಿನಲ್ಲಿ ಗಾಡಿಯನ್ನು ತಿರುಗಿಸುತ್ತಿದ್ದಂತೆ ಒಂಟಿ ಸಲಗನ ದರ್ಶನವಾಗಿದೆ. ಕೂಡಲೇ ಗಾಡಿಯನ್ನು ನಿಲ್ಲಿಸಿ, ಗಾಬರಿಯಿಂದ ಬೈಕ್ ತಿರುಗಿಸಿಕೊಂಡು ವಾಪಸ್ ಬಂದಿದ್ದಾರೆ. ಬೈಕ್ ತಿರುಗಿಸಿಕೊಂಡು ಬರಬಹುದು. ಆದರೆ ಕಾರು, ಬಸ್ಸುಗಳನ್ನ ಘಾಟಿ ರಸ್ತೆಯಲ್ಲಿ ತಿರುಗಿಸೋದು ಕಷ್ಟವಾಗುತ್ತದೆ.

    ಅದು ಸಾಧ್ಯವಿದ್ದರೂ ಕಣ್ಣಿಗೆ ಆನೆ ಕಂಡಾಗ ಅಸಾಧ್ಯ. ಮೂರು ತಿಂಗಳ ಅವಧಿಯಲ್ಲಿ ಇದೇ ಮಾರ್ಗದ ಮಲ್ಲೆನಹಳ್ಳಿ ವ್ಯಾಪ್ತಿಯಲ್ಲಿ ಇಬ್ಬರು ಆನೆ ದಾಳಿಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕೂಡಲೇ ಅಧಿಕಾರಿಗಳು ಒಂಟಿ ಸಲಗನನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    https://www.youtube.com/watch?v=afOhLRWdGW0

  • ವಿಜಯಪುರ-ಅಥಣಿ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಕುಸಿತ: ತಪ್ಪಿದ ಭಾರೀ ದುರಂತ

    ವಿಜಯಪುರ-ಅಥಣಿ ರಾಜ್ಯ ಹೆದ್ದಾರಿಯಲ್ಲಿ ಸೇತುವೆ ಕುಸಿತ: ತಪ್ಪಿದ ಭಾರೀ ದುರಂತ

    ವಿಜಯಪುರ: ವಿಜಯಪುರ ಹಾಗೂ ಅಥಣಿ ನಡುವಿನ ರಾಜ್ಯ ಹೆದ್ದಾರಿಯಲ್ಲಿನ ಸೇತುವೆ ಕುಸಿದು ಬಿದ್ದಿರುವ ಘಟನೆ ತಾಲೂಕಿನ ರತ್ನಾಪೂರ ಗ್ರಾಮದ ಬಳಿ ನಡೆದಿದೆ.

    ವಿಜಯಪುರ ಹಾಗೂ ಅಥಣಿ ನಡುವಿನ ರಾಜ್ಯ ಹೆದ್ದಾರಿಯ ರತ್ನಾಪುರ ಗ್ರಾಮದ ಬಳಿಯಿರುವ ಸೇತುವೆಯೊಂದು ಮಧ್ಯಾಹ್ನ 2 ಗಂಟೆಯ ವೇಳೆಗೆ ಕುಸಿದು ಬಿದ್ದಿದೆ. ಸೇತುವೆ ಕುಸಿದು ಬೀಳುವ ವೇಳೆ ಯಾವುದೇ ವಾಹನಗಳು ಸಂಚರಿಸದೇ ಇರುವುದರಿಂದ ಆಗಬಹುದಾಗಿದ್ದ ಭಾರೀ ಅನಾಹುತವೊಂದು ಕ್ಷಣಮಾತ್ರದಲ್ಲಿ ತಪ್ಪಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ರಾಜ್ಯ ಹೆದ್ದಾರಿ ಮಾರ್ಗವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಅಲ್ಲದೇ ಈ ಮಾರ್ಗದ ಬದಲಾಗಿ ರತ್ನಾಪೂರ ಹಾಗೂ ತಿಕೋಟ ಮಾರ್ಗವಾಗಿ ಸಂಚಾರವನ್ನು ಬದಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಮಾಹಿತಿಗಳ ಪ್ರಕಾರ ಸೇತುವೆ 2002 ರಲ್ಲಿ ನಿರ್ಮಾಣವಾಗಿತ್ತು. ಆದರೆ ನಿರ್ಮಾಣವಾದ 16 ವರ್ಷದಲ್ಲೇ ಕುಸಿದು ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸೇತುವೆ ಕುಸಿದ ಪರಿಣಾಮ ವಾಹನ ಸವಾರು ಹಾಗೂ ಸ್ಥಳೀಯರು ತೀವ್ರ ಪರದಾಟ ನಡೆಸಿದ್ದಾರೆ. ಅಲ್ಲದೇ ಸೇತುವೆ ಕುಸಿದ ಪರಿಣಾಮ ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರಿನ ಪೆಟ್ರೋಲ್ ಬಂಕ್‍ಗಳಿಗೆ ಪ್ರವಾಹ ಬಿಸಿ!

    ಬೆಂಗಳೂರು: ಭಾರೀ ಮಳೆಯಿಂದಾಗಿ ಪೆಟ್ರೋಲ್ ಸರಬರಾಜಿನಲ್ಲಿ ವ್ಯತ್ಯಯವಾಗಿ ನಗರದಲ್ಲಿ ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

    ಗುಡ್ಡಗಳು ಕುಸಿದು ಬೀಳುವ ಕಾರಣ ಶಿರಾಡಿ, ಸಂಪಾಜೆ ಘಾಟಿಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇದರ ಜೊತೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೈಲವನ್ನು ತರಲು ಸಂಕಷ್ಟವಾಗಿದೆ.

    ಕಳೆದ 2-3 ದಿನಗಳಿಂದಲೂ ಬೆಂಗಳೂರಿನ ಖಾಸಗಿ ಬಂಕ್‍ಗಳಲ್ಲಿ ಡೀಸೆಲ್ ಖಾಲಿಯಾಗಿದೆ. ನಗರದ ಖಾಸಗಿ ಬಂಕ್ ಗಳಾದ ಶೆಲ್, ಇಸ್ಸಾರ್ ಬಂಕ್ ಗಳಲ್ಲಿ ಡೀಸೆಲ್ ಸಂಪೂರ್ಣ ಖಾಲಿಯಾಗಿದೆ. ಬರೀ ಖಾಸಗಿ ಬಂಕ್‍ಗಳಿಗೆ ಮಾತ್ರ ಈ ರೀತಿಯ ಸಮಸ್ಯೆ ಉಂಟಾಗಿದ್ದು, ಸರ್ಕಾರಿ ಸ್ವಾಮ್ಯದ ಬಂಕ್‍ಗಳಿಗೆ ಬೇರೆ ಕಡೆಗಳಿಂದ ಪೂರೈಕೆಯಾಗುತ್ತಿವೆ. ಪೆಟ್ರೋಲ್, ಡೀಸೆಲ್ ಇಲ್ಲದ ಕಾರಣ ಮಾಲೀಕರು ಬಂಕ್ ಮುಚ್ಚಿದ್ದಾರೆ.

    ಇಂಡಿಯನ್, ಭಾರತ್ ಪೆಟ್ರೋಲ್ ಬಂಕ್ ಗಳಿಗೆ ಬೆಳಗಾವಿ, ಸಜ್ಜಾಪುರ ಭಾಗಗಳಿಂದ ಪೆಟ್ರೋಲ್ ಪೊರೈಕೆ ಆಗುತ್ತಿರುವುದರಿಂದ ಅಷ್ಟಾಗಿ ಸಮಸ್ಯೆ ಕಂಡುಬಂದಿಲ್ಲ.

    ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಮಂಗಳೂರಿನಿಂದ ಪೆಟ್ರೋಲ್ ತರಲು ಸಮಸ್ಯೆಯಾಗಿದೆ. ತೈಲ ಇಲ್ಲದ ಕಾರಣ ಬಂಕ್ ಗಳನ್ನು ಮುಚ್ಚಲಾಗಿದೆ ಎಂದು ಬಂಕ್ ಮಾಲೀಕರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಚಾರ್ಮಾಡಿಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿದ ಕಾರಣ ಈಗ ಘನ ವಾಹನಗಳು ಕುದುರೆಮುಖ ಮಾರ್ಗವಾಗಿ ಮಂಗಳೂರಿಗೆ ಹೋಗಲು ಅನುಮತಿ ನೀಡಲಾಗಿದೆ. ಈ ರಸ್ತೆಯಲ್ಲೂ ಈಗ ಭಾರೀ ಸಂಖ್ಯೆಯಲ್ಲಿ ವಾಹನಗಳ ಸಂಚರಿಸುತ್ತಿದ್ದು, ಆಗಾಗ ಜಾಮ್ ಆಗುತ್ತಿದೆ. ಭಾನುವಾರ ಮಣ್ಣು ಕುಸಿದು ಬಿದ್ದ ಪರಿಣಾಮ ಸಂಚಾರ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಗಿತಗೊಂಡಿತ್ತು. ಸಂಜೆ ವೇಳೆ ಮಣ್ಣು ತೆರವು ಕಾರ್ಯ ನಡೆದ ಪರಿಣಾಮ ರಾತ್ರಿ ಮತ್ತೆ ಈ ಮಾರ್ಗದಲ್ಲಿ ಸಂಚಾರ ಆರಂಭಗೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಪರಿಚಿತ ವಾಹನ ಡಿಕ್ಕಿ- ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

    ಅಪರಿಚಿತ ವಾಹನ ಡಿಕ್ಕಿ- ಸವಾರರಿಬ್ಬರು ಸ್ಥಳದಲ್ಲೇ ದುರ್ಮರಣ

    ಬೆಂಗಳೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ.

    ಮೃತರನ್ನು ತಮಿಳುನಾಡಿನ ಸೇಲಂ ಮೂಲದ ಅಜಿತ್(21) ಹಾಗೂ ಹೊಸೂರು ಮೂಲದ ಸೂರ್ಯ(29) ಎಂದು ಗುರುತಿಸಲಾಗಿದೆ. ಆನೇಕಲ್ ತಾಲೂಕಿನಲ್ಲಿ ನೆರಳೂರು ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಅಪರಿಚಿತ ವಾಹನ ಬೈಕಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.

    ಇನ್ನು ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ವಾಹನ ಹಾಗೂ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಡಿಸಿಎಂನಿಂದಾಗಿ ತುಮಕೂರು, ಬೆಂಗ್ಳೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಂ!

    ಡಿಸಿಎಂನಿಂದಾಗಿ ತುಮಕೂರು, ಬೆಂಗ್ಳೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಂ!

    ಬೆಂಗಳೂರು: ಉಪ ಮುಖ್ಯಮಂತ್ರಿಗಾಗಿ ಜೀರೋ ಟ್ರಾಫಿಕ್ ಮಾಡಲು ಹೋಗಿ, ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಗೂ ಟೋಲ್ ಗಳಲ್ಲಿ ಫುಲ್ ಟ್ರಾಫಿಕ್ ಜಾಂ ಉಂಟಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲದ ನವಯುಗ ಹಾಗೂ ಜಾಸ್ ಟೋಲ್ ಗಳಲ್ಲಿ ವಾಹನ ಸವಾರರು ಜಾಮ್ ನಿಂದ ಹೈರಾಣಾಗಿದ್ದಾರೆ. ಡಿಸಿಎಂ ಡಾ. ಜಿ ಪರಮೇಶ್ವರ್ ಕೊರಟಗೆರೆಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರಿಂದ ಜೀರೋ ಟ್ರಾಫಿಕ್ ಮಾಡಲಾಗಿತ್ತು.

    ಅಷ್ಟೇ ಅಲ್ಲದೇ ರಂಜಾನ್ ಹಬ್ಬದ ರಜೆ ಹಾಗೂ ವಾರಾಂತ್ಯದ ರಜೆ ಮುಗಿಸಿಕೊಂಡು, ಜನರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಅಧಿಕ ದಟ್ಟಣೆ ಉಂಟಾಗಿ, ಟೋಲ್ ಗಳಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಸುಮಾರು ಹೆದ್ದಾರಿಯಲ್ಲಿ ಐದಾರು ಕಿಲೋಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು.

    ಇನ್ನೂ ಸಂಚಾರ ದಟ್ಟಣೆ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರು, ಟೌನ್ ಪೊಲೀಸರು ಹಾಗೂ ಮಾದನಾಯಕನಹಳ್ಳಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಒಟ್ಟಿನಲ್ಲಿ ಉಪಮುಖ್ಯಮಂತ್ರಿಯಿಂದಾಗಿ ಬೆಂಗಳೂರಿಗೆ ತೆರಳಲು ಸವಾರರು ಪರದಾಡುವಂತಾಗಿತ್ತು.