Tag: ಸಲೈವಾ

  • ಐಸಿಸಿ ನಿಯಮ ಉಲ್ಲಂಘನೆ – ಚೆಂಡಿಗೆ ಎಂಜಲು ಸವರಿದ ಇಂಗ್ಲೆಂಡ್ ಕ್ರಿಕೆಟಿಗ

    ಐಸಿಸಿ ನಿಯಮ ಉಲ್ಲಂಘನೆ – ಚೆಂಡಿಗೆ ಎಂಜಲು ಸವರಿದ ಇಂಗ್ಲೆಂಡ್ ಕ್ರಿಕೆಟಿಗ

    ಮ್ಯಾಂಚೆಸ್ಟರ್: ಚೀನಿ ವೈರಸ್‌ ಕಷ್ಟದ ನಡುವೆಯೂ ಇಂಗ್ಲೆಂಡ್‍ನಲ್ಲಿ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಿದೆ. ಆದರೆ ಇಂಗ್ಲೆಂಡ್ ಕ್ರಿಕೆಟಿಗ ಡೊಮಿನಿಕ್ ಸಿಬ್ಲಿ ಪಂದ್ಯದ ನಡುವೆ ಚೆಂಡಿಗೆ ಸಲೈವಾ (ಎಂಜಲು) ಉಜ್ಜಿದ್ದಾರೆ. ಈ ಮೂಲಕ ಐಸಿಸಿ ಜಾರಿ ಮಾಡಿದ್ದ ಹೊಸ ನಿಯಮವನ್ನು ಉಲ್ಲಂಘಿಸಿದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.

    ಕ್ರಿಕೆಟ್‍ನಲ್ಲಿ ಬೌಲರ್ ಕೈಗೆ ಚೆಂಡು ನೀಡುವ ಮುನ್ನ ಆಟಗಾರ ಚೆಂಡಿಗೆ ಎಂಜುಲು ಉಜ್ಜಿ ಚೆಂಡಿನ ಶೈನ್ ಕಾಪಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಇತ್ತೀಚೆಗೆ ಐಸಿಸಿ ಇದಕ್ಕೆ ನಿರ್ಬಂಧ ಹೇರಿದ್ದು, ಆಟಗಾರ 2 ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ತಂಡಕ್ಕೆ 5 ರನ್ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿತ್ತು.

    ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವೆ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಫೀಲ್ಡರ್ ಡೊಮಿನಿಕ್ ಸಿಬ್ಲಿ ಹಲವು ದಿನಗಳ ಅಭ್ಯಾಸದಂತೆ ಚೆಂಡು ಕೈಗೆ ಬರುತ್ತಿದಂತೆ ಎಂಜಲು ಉಜ್ಜಿ ನಿಯಮ ಉಲ್ಲಂಘಿಸಿದ್ದಾರೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನ 42ನೇ ಓವರಿನಲ್ಲಿ ಘಟನೆ ನಡೆದಿದ್ದು, ಆಫ್ ಸ್ಪಿನ್ನರ್ ಡೊಮ್ ಬೆಸ್ ಬೌಲಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಡೊಮಿನಿಕ್ ಸಿಬ್ಲಿ ಚೆಂಡಿಗೆ ಎಂಜಲು ಸವರಿಸಿದ್ದರು. ಕೂಡಲೇ ತಮ್ಮ ತಪ್ಪನ್ನು ಅರಿತ ಸಿಬ್ಲೆ ಫೀಲ್ಡ್ ಅಂಪೈರ್ ಗೆ ಮಾಹಿತಿ ನೀಡಿದ್ದರು. ತಕ್ಷಣ ಅಂಪೈರ್ ಚೆಂಡನ್ನು ಸ್ಯಾನಿಟೈಸ್ ಮಾಡಿ ಪಂದ್ಯವನ್ನು ಪುನರ್ ಆರಂಭಿಸಿದ್ದರು.

    ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಪಂದ್ಯಗಳ ಟೂರ್ನಿಯನ್ನು ಸಂಪೂರ್ಣವಾಗಿ ಬಯೋ ಸೆಕ್ಯೂರ್ ವಾತಾವರಣದಲ್ಲಿ ನಿರ್ವಹಿಸಲಾಗುತ್ತಿದೆ. ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಸೋತ ಇಂಗ್ಲೆಂಡ್ ಬ್ಯಾಟಿಂಗ್ ಆರಂಭ ಮಾಡುವ ಅವಕಾಶ ಪಡೆದು 9 ವಿಕೆಟ್‌ ಕಳೆದುಕೊಂಡು 469 ರನ್‌ ಗಳಿಸಿದ್ದಾಗ ಡಿಕ್ಲೇರ್‌ ಮಾಡಿಕೊಂಡಿತ್ತು. ಬಳಿಕ ಮೊದಲ ಇನ್ನಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಭಾನುವಾರ 287 ರನ್‍ಗಳಿಗೆ ಆಲೌಟ್ ಆಗಿತ್ತು. 182 ರನ್ ಮುನ್ನಡೆ ಪಡೆದ ಇಂಗ್ಲೆಂಡ್ ಭಾನುವಾರ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 37 ರನ್ ಗಳಿಸಿ 219 ರನ್‍ಗಳಿಗೆ ಮುನ್ನಡೆಯನ್ನು ಹೆಚ್ಚಿಸಿದೆ. ಉಳಿದಂತೆ ಸೌತಾಪ್ಟಂನ್‍ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿದ್ದ ವೆಸ್ಟ್ ಇಂಡೀಸ್ ತಂಡ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ.

  • ಚೆಂಡಿನ ಹೊಳಪಿಗಾಗಿ ಎಂಜಲು, ಬೆವರಿನ ಬಳಕೆ ನಿಷೇಧಿಸಿ- ಐಸಿಸಿಗೆ ಕುಂಬ್ಳೆ ಕಮಿಟಿ ಶಿಫಾರಸು

    ಚೆಂಡಿನ ಹೊಳಪಿಗಾಗಿ ಎಂಜಲು, ಬೆವರಿನ ಬಳಕೆ ನಿಷೇಧಿಸಿ- ಐಸಿಸಿಗೆ ಕುಂಬ್ಳೆ ಕಮಿಟಿ ಶಿಫಾರಸು

    ನವದೆಹಲಿ: ತೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು ಮತ್ತು ಬೆವರಿನ ಬಳಕೆಯನ್ನು ಮಾಡುವುದನ್ನು ನಿಷೇಧ ಮಾಡುವಂತೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಐಸಿಸಿಗೆ ಶಿಫಾರಸು ಮಾಡಿದೆ.

    ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಕ್ರಿಕೆಟ್ ಆಟದಲ್ಲಿ ಎಂಜಲು ಹಾಗೂ ಬೆವರನ್ನು ಚೆಂಡಿಗೆ ಸವರಿ ಹೊಳಪು ಹೆಚ್ಚಿಸುವ ಕ್ರಮವನ್ನು ನಿಷೇಧಿಸಬೇಕೆಂಬ ಚರ್ಚೆ ಹೆಚ್ಚಾಗಿತ್ತು. ಈ ಕಾರಣದಿಂದ ಐಸಿಸಿ ಕ್ರಿಕೆಟ್ ಕಮಿಟಿ ಸೂಚನೆಗಳನ್ನು ನೀಡಿದೆ. ಶೀಘ್ರವೇ ಐಸಿಸಿ ಸಮಾವೇಶ ನಡೆಯಲಿದ್ದು, ಆ ವೇಳೆ ಸಮಿತಿಯ ಸೂಚನೆಗಳನ್ನು ಚರ್ಚೆ ಮಾಡುವ ಸಾಧ್ಯತೆ ಇದೆ. ಇತ್ತ ಸೋಮವಾರ ಕುಂಬ್ಳೆ ನೇತೃತ್ವದ ಐಸಿಸಿ ಕಮಿಟ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶ ನಡೆಸಿ, ತಾವು ತೆಗೆದುಕೊಂಡ ನಿರ್ಧಾರಗಳ ಕುರಿತು ಪ್ರಸ್ತಾಪ ಮಾಡಿದ್ದಾಗಿ ಕುಂಬ್ಳೆ ಹೇಳಿದ್ದಾರೆ.

    ಸದ್ಯ ನಾವೆಲ್ಲರೂ ಅಸಾಧಾರಣ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇದೇ ಕಾರಣದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಆ ಮೂಲಕ ಸುರಕ್ಷಿತ ವಾತಾವರಣದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತವೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈಗಾಗಲೇ ಸಾಕಷ್ಟು ಬಾರಿ ಆಟಗಾರರು ಸಲೈವಾ (ಎಂಜಲು) ಬಳಕೆ ಮಾಡುವುದನ್ನು ನಿಷೇಧ ಮಾಡುಬೇಕು ಎಂಬ ಚರ್ಚೆ ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಆದರೆ ಈ ಬಾರಿ ಐಸಿಸಿ ಕಮಿಟಿ ನೀಡಿರುವ ಶಿಫಾರಸುಗಳಿಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಆಟಗಾರರು ಸಲೈವಾ ಬಳಕೆ ಮಾಡುತ್ತಾರೆ. ಉಳಿದಂತೆ ಕೊರೊನಾ ವೈರಸ್ ಕಾರಣದಿಂದ ಸ್ಥಗಿತಗೊಂಡಿದ್ದ ಆಟಗಾರರ ತರಬೇತಿ ಶಿಬಿರಗಳು ಮತ್ತೆ ಆರಂಭವಾಗುತ್ತಿವೆ.