Tag: ಸಲೂನ್ ಶಾಪ್

  • ಹಾಸನ ಜಿಲ್ಲೆಯಾದ್ಯಂತ 15 ದಿನ ಸಲೂನ್ ಶಾಪ್ ಬಂದ್

    ಹಾಸನ ಜಿಲ್ಲೆಯಾದ್ಯಂತ 15 ದಿನ ಸಲೂನ್ ಶಾಪ್ ಬಂದ್

    ಹಾಸನ: ಕೊರೊನಾ ಸಮುದಾಯಕ್ಕೆ ಹರಡುತ್ತಿರುವ ಆತಂಕ ಎದುರಾಗಿದ್ದು ಜಿಲ್ಲೆಯಾದ್ಯಂತ 15 ದಿನ ಸಲೂನ್ ಬಂದ್ ಮಾಡಲು ಸವಿತಾ ಸಮಾಜದವರು ನಿರ್ಧರಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್, ನಾವು ನಮ್ಮ ಸಮಾಜದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಕೊರೊನಾ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ ಇದೇ ಜುಲೈ 11 ರಿಂದ ಜುಲೈ 26 ರವರೆಗೆ ಜಿಲ್ಲೆಯ ಎಲ್ಲಾ ಸಲೂನ್‍ಗಳನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಹಾಸನ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡುವ ಲಕ್ಷಣ ಕಾಣುತ್ತಿದ್ದು, ಸೋಂಕಿತರು ಕೆಲವರು ಅದರ ಅರಿವಿಲ್ಲದೆ ಸಲೂನ್‍ಗೆ ಬರುವ ಸಾಧ್ಯತೆಯಿರುತ್ತದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಲಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಸಲೂನ್‍ನಲ್ಲಿ ಕರ್ತವ್ಯ ನಿರ್ವಹಿಸುವವರ ಅನುಕೂಲಕ್ಕಾಗಿ ಹದಿನೈದು ದಿನ ಹಾಸನ ಜಿಲ್ಲೆಯಲ್ಲಿ ಸಲೂನ್ ಬಂದ್ ಮಾಡುವುದಾಗಿ ರವಿಕುಮಾರ್ ಹೇಳಿದ್ದಾರೆ.

    ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಕಷ್ಟವನ್ನು ಮನಗಂಡು ಇನ್ನೂ ಹೆಚ್ಚಿನ ಸಹಾಯವನ್ನು ನಮ್ಮ ಸಮುದಾಯದವರಿಗೆ ಮಾಡಬೇಕೆಂದು ಜಿಲ್ಲಾಧ್ಯಕ್ಷ ರವಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.

  • ಸಲೂನ್ ಶಾಪ್‍ನಲ್ಲಿ ಸೋಂಕಿತ ಕಟಿಂಗ್- ನಂತ್ರ 15ಕ್ಕೂ ಹೆಚ್ಚು ಜನರಿಂದ ಹೇರ್ ‌‍ಕಟ್

    ಸಲೂನ್ ಶಾಪ್‍ನಲ್ಲಿ ಸೋಂಕಿತ ಕಟಿಂಗ್- ನಂತ್ರ 15ಕ್ಕೂ ಹೆಚ್ಚು ಜನರಿಂದ ಹೇರ್ ‌‍ಕಟ್

    – ಮಲೇಷಿಯಾದಿಂದ ಬಂದ ಸೋಂಕಿತನ ಎಡವಟ್ಟು

    ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸಲೂನ್ ಒಂದರಲ್ಲಿ ಕೊರೊನಾ ಸೋಂಕಿತ ಕಟಿಂಗ್ ಮಾಡಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಲೂನ್ ಶಾಪ್ ಮಾಲೀಕರಲ್ಲಿ ಆತಂಕ ಹೆಚ್ಚಾಗಿದೆ.

    ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಜಿಲ್ಲೆಯಲ್ಲಿ ಈವರೆಗೆ 24 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದುವರೆಗೂ ಐವರು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಕೋಲಾರ ಜಿಲ್ಲೆಗೆ ಹೊರ ರಾಜ್ಯ, ವಿದೇಶದಿಂದ ಬಂದವರಿಂದಲೇ ಕಂಟಕ ಎದುರಾಗುತ್ತಿದೆ. ಸದ್ಯಕ್ಕೆ ಮಲೇಷಿಯಾದಿಂದ ಬಂದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿರುವುದು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ.

    ಈ ನಡುವೆ ಸಲೂನ್ ಶಾಪ್‍ನಿಂದ ಬಂಗಾರಪೇಟೆಗೆ ಆತಂಕ ಶುರುವಾಗಿದೆ. ಬಂಗಾರಪೇಟೆ ಪಟ್ಟಣದ ವಿವೇಕಾನಂದ ನಗರಕ್ಕೆ ಮಲೇಷಿಯಾದಿಂದ ಬಂದಿದ್ದ ರೋಗಿ 3186 ವ್ಯಕ್ತಿ ಬಂಗಾರಪೇಟೆ ಪಟ್ಟಣದ ಸೂಪರ್ ಜೆಂಟ್ಸ್ ಪಾರ್ಲರ್ ನಲ್ಲಿ ಹೇರ್ ಕಟ್ ಮಾಡಿಸಿಕೊಂಡಿದ್ದ. ಅದಾದ ನಂತರ ಸುಮಾರು 15ಕ್ಕೂ ಹೆಚ್ಚು ಜನ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದು, ಅವರಿಗಾಗಿ ಅಧಿಕಾರಿಗಳು ಹುಡುಕಾಟ ಮಾಡುತ್ತಿದ್ದಾರೆ.

    ಅಲ್ಲದೇ ಆ ದಿನ ಯಾರೆಲ್ಲಾ ಶೇವಿಂಗ್ ಮತ್ತು ಕಟಿಂಗ್ ಮಾಡಿಸಿಕೊಂಡಿದ್ದಾರೋ ಅವರೆಲ್ಲ ಕೂಡಲೇ ಸರ್ಕಾರಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕೆಂದು ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಬೀದಿ ಬೀದಿಯಲ್ಲಿ ಮೈಕ್‍ನಲ್ಲಿ ಅನೌನ್ಸ್ ಮಾಡುತ್ತಿದ್ದಾರೆ. ಈ ಮೂಲಕ ಸಲೂನ್ ಶಾಪ್‍ನಿಂದ ಬಂಗಾರಪೇಟೆ ಪಟ್ಟಣದಲ್ಲಿ ಆತಂಕ ಶುರುವಾಗಿದೆ.

    ಸಲೂನ್ ಮಾಲೀಕರಿಂದ ವಿಭಿನ್ನ ಪ್ರಯತ್ನ:
    ಕೋಲಾರದಲ್ಲಿ ಎಚ್ಚೆತ್ತ ಸಲೂನ್ ಮಾಲೀಕರು ಸಲೂನ್‍ನಲ್ಲಿ ಪಿಪಿಇ ಕಿಟ್ ಧರಿಸಿ ಗ್ರಾಹಕರಿಗೆ ಕಟಿಂಗ್ ಮಾಡುತ್ತಿದ್ದಾರೆ. ಅಲ್ಲದೇ ಕೋಲಾರ ತಾಲೂಕಿನ ಚಿಟ್ನಹಳ್ಳಿ ಗ್ರಾಮದ ಮಂಜುನಾಥ್ ಹೇರ್ ಕಟಿಂಗ್ ಶಾಪ್‍ನ ಮಾಲೀಕ ವಿಭಿನ್ನ ಪ್ರಯತ್ನ ಮಾಡುತ್ತಿದ್ದು, ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಹೇರ್ ಕಟಿಂಗ್ ಮಾಡುತ್ತಿದ್ದಾರೆ. ಸೋಂಕು ಹರಡದಂತೆ ಸಲೂನ್ ನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

  • ಸಲೂನ್ ಶಾಪ್‍ಗಳಲ್ಲಿ ಫುಲ್ ಗೊಂದಲ- ಪ್ರತ್ಯೇಕ ಮಾರ್ಗಸೂಚಿ ನೀಡಲು ಒತ್ತಾಯ

    ಸಲೂನ್ ಶಾಪ್‍ಗಳಲ್ಲಿ ಫುಲ್ ಗೊಂದಲ- ಪ್ರತ್ಯೇಕ ಮಾರ್ಗಸೂಚಿ ನೀಡಲು ಒತ್ತಾಯ

    ಬೆಂಗಳೂರು: ಬರೋಬ್ಬರಿ 54 ದಿನಗಳ ಬಳಿಕ ರಾಜ್ಯದಲ್ಲಿ ಸಲೂನ್ ಶಾಪ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಸಲೂನ್ ಶಾಪ್ ತೆರಲು ಅನುಮತಿ ನೀಡಿದ್ದರು ಕೆಲ ಗೊಂದಲಗಳು ಸಲೂನ್ ಶಾಪ್‍ಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಮೂಡಿದೆ. ಪರಿಣಾಮ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ನೀಡಬೇಕು ಎಂದು ಸವಿತಾ ಸಮಾಜ ಆಗ್ರಹಿಸಿದೆ.

    ಸಲೂನ್ ಶಾಪ್ ಬಹುದಿನಗಳ ಬಳಿಕ ತೆರೆಯುತ್ತಿರುವ ಕಾರಣ ಸಾಕಷ್ಟು ಗ್ರಾಹಕರು ಆಗಮಿಸುತ್ತಾರೆ. ಆದರೆ ಜ್ವರ, ಶೀತ, ಕೆಮ್ಮು ಇರುವ ಗ್ರಾಹಕರಿಗೆ ನಾವು ಸೇವೆ ಕೊಡಬೇಕಾ ಬೇಡ್ವಾ ಎಂಬ ಬಗ್ಗೆ ಇನ್ನು ಗೊಂದಲ ಇದೆ ಎಂದು ಸವಿತಾ ಸಮಾಜದವರು ಹೇಳಿದ್ದಾರೆ. ಅಲ್ಲದೇ ಸರ್ಕಾರ ನಾಳೆಯಿಂದ ಸಲೂನ್ ತೆರೆಯಲು ಅನುಮತಿ ನೀಡದ್ದರೂ ಸಾಮಾನ್ಯ ದಿನಗಳಲ್ಲಿ ಮಂಗಳವಾರ ಸಲೂನ್ ತೆರೆಯುವುದಿಲ್ಲ. ಆದರು ನಾಳೆ ಬಹುತೇಕ ಅಂಗಡಿಗಳು ಜನರ ಸೇವೆಗೆ ಲಭ್ಯವಿರುತ್ತವೆ ಎಂಬ ಮಾಹಿತಿ ಲಭಿಸಿದೆ.

    ಇತ್ತ ಉಡುಪಿಯಲ್ಲಿ ಸಲೂನ್ ಶಾಪ್ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಸವಿತಾ ಸಮಾಜಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮ ವಿಧಿಸಿದೆ. ಮಾಸ್ಕ್ -ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರದ ಜೊತೆಗೆ ಸಾಕಷ್ಟು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಲಾಗಿದೆ. ಹೇರ್ ಕಟ್ಟಿಂಗ್, ಶೇವಿಂಗ್ ಮಾಡಲು ಬೆಳವಣಿಗೆ ಬರುವ ಗ್ರಾಹಕರು ಮುಂಚಿತವಾಗಿಯೇ ಮಾಲೀಕನಿಗೆ ಫೋನ್ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬೇಕು. ಮಾಲೀಕರು ಗ್ರಾಹಕರಿಗೆ ಕೊಟ್ಟ ಸಮಯಕ್ಕೆ ಬಂದು ಹೇರ್ ಕಟ್ಟಿಂಗ್, ಶೇವಿಂಗ್ ಮಾಡಿಕೊಂಡು ವಾಪಸ್ಸಾಗಬೇಕು. ಸಲೂನ್ ಮುಂಭಾಗ ಮತ್ತು ಒಳಭಾಗದಲ್ಲಿ ಜನ ಜಮಾಯಿಸುವಂತಿಲ್ಲ. ಪ್ರತಿಯೊಬ್ಬ ಗ್ರಾಹಕನಿಗೆ ಉಪಯೋಗಿಸಿದ ಬಟ್ಟೆಯನ್ನು ಪೆಟ್ರೋಲ್ ಅಥವಾ ಸಾಬೂನಿನ ನೀರಿನಲ್ಲಿ ಮುಳುಗಿಸಿಡಬೇಕು. ಯೂಸ್ ಆಂಡ್ ಥ್ರೋ ಶೇವಿಂಗ್ ಕಿಟ್ ಗಳನ್ನು ಮಾತ್ರ ಬಳಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಈ ಎಲ್ಲ ನಿಯಮಗಳನ್ನು ಪಾಲಿಸಿ ದಿನಕ್ಕೆ ಹದಿನೈದರಿಂದ ಇಪ್ಪತ್ತು ಜನರಿಗೆ ಮಾತ್ರ ಕ್ಷೌರ ಸೇವೆ ಕೊಡಲು ಜಿಲ್ಲಾಧಿಕಾರಿ ಜಗದೀಶ್ ಸೂಚನೆ ನೀಡಿದ್ದಾರೆ.