Tag: ಸರ ಕಳ್ಳತನ

  • ಯೂಟ್ಯೂಬ್‍ನಿಂದ ಸರಗಳ್ಳತನ ಕಲಿತ- ಕೋಟೆನಾಡಲ್ಲಿನ ಖತರ್ನಾಕ್ ಗ್ಯಾಂಗ್ ಅಂದರ್

    ಯೂಟ್ಯೂಬ್‍ನಿಂದ ಸರಗಳ್ಳತನ ಕಲಿತ- ಕೋಟೆನಾಡಲ್ಲಿನ ಖತರ್ನಾಕ್ ಗ್ಯಾಂಗ್ ಅಂದರ್

    ಚಿತ್ರದುರ್ಗ: ಕಳೆದ ಆರು ತಿಂಗಳಿನಿಂದ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಕಳ್ಳರ ತಂಡವನ್ನು ನಗರದ ಪೊಲೀಸರು ಮುದ್ದಾಪುರ ಗ್ರಾಮದಲ್ಲಿ ಬಂಧಿಸಿದ್ದಾರೆ.

    ತಾಲೂಕಿನ ಮುದ್ದಾಪುರ ಹೊಸಹಟ್ಟಿ ಗ್ರಾಮದ ಉದಯ್(21), ಉಮ್ಮೇಶ್(22) ಹಾಗೂ ಕೀರ್ತಿ(21) ಬಂಧಿತ ಆರೋಪಿಗಳು. ಬಂಧಿತರಿಂದ 10 ಲಕ್ಷ ರೂ. ಮೌಲ್ಯದ 190 ಗ್ರಾಂ.ನ 9 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಪ್ರತಿಷ್ಟಿತ ಕುಟುಂಬದಲ್ಲಿ ಜನಿಸಿದ ಯುವಕರಾಗಿದ್ದು, ಕಳೆದ ಆರು ತಿಂಗಳಿನಿಂದ ನಗರದ ಹೊರವಲಯದ ಫ್ಲೈ ಓವರ್ ಹಾಗೂ ನಿರ್ಜನ ಪ್ರದೇಶದಲ್ಲಿ ಓಡಾಡುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಸರಗಳ್ಳರು, ಪಲ್ಸರ್ ಬೈಕಿನಲ್ಲಿ ಬಂದು ಸರ ಕದ್ದೊಯ್ಯುತ್ತಿದ್ದರು.

    ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 3, ಬಡಾವಣೆ ಠಾಣೆಯಲ್ಲಿ 3 ಹಾಗೂ ನಗರ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು. ಸರಗಳ್ಳರನ್ನು ಪತ್ತೆ ಹಚ್ಚಲು ಚಿತ್ರದುರ್ಗ ಪೊಲೀಸರನ್ನೊಳಗೊಂಡ ಪ್ರತ್ಯೇಕ ತಂಡವನ್ನು ರಚನೆ ಮಾಡಲಾಗಿತ್ತು. ಸರಗಳ್ಳರ ಚಲನವಲನಗಳನ್ನು ಅರಿತ ಪೊಲೀಸರ ತಂಡ, ಮುದ್ದಾಪುರ, ಹೊಸಹಟ್ಟಿ ಗ್ರಾಮದ ಉದಯ, ಉಮ್ಮೇಶ್ ಹಾಗೂ ಕೀರ್ತಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಜಿ. ತಿಳಿಸಿದ್ದಾರೆ.

    ಯೂಟ್ಯೂಬ್ ನೋಡಿ ಕಳ್ಳತನ ಕಲಿತರು
    ಮೊದಲು ಉದಯ್ ಎಂಬ ಯುವಕ ಯುಟ್ಯೂಬ್ ನೋಡಿಕೊಂಡು ಸರಗಳ್ಳತನ ಮಾಡಲು ಮುಂದಾಗಿದ್ದನು, ಇದರಲ್ಲಿ ಒಬ್ಬನೇ ಯಶಸ್ಸು ಕಾಣಲು ಸಾಧ್ಯವಾಗದ ಕಾರಣ ಉಮ್ಮೇಶ್ ಹಾಗೂ ಕೀರ್ತಿ ಎಂಬ ಯುವಕರನ್ನು ಬಳಸಿಕೊಂಡು ಒಂದು ತಂಡವಾಗಿ ಸರಗಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡುವ ವೇಳೆ ವಾಹನದ ನಂಬರ್ ಪ್ಲೇಟ್ ತೆಗೆದುಹಾಕಿ ಸರಗಳ್ಳತನ ಮಾಡಿ, ನಂತರ ನಂಬರ್ ಪ್ಲೇಟ್ ಹಾಕುತ್ತಿದ್ದರು. ಇವರನ್ನು ಶನಿವಾರ ಮುದ್ದಾಪುರ ಹತ್ತಿರ ಬಂಧಿಸಿ, 10 ಲಕ್ಷ ರೂ. ಮೌಲ್ಯದ 190 ಗ್ರಾಂ.ನ 9 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಪಲ್ಸರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಕಳ್ಳತನ ಮಾಡಿದ್ದ ಚಿನ್ನ ಖರೀದಿಸುತ್ತಿದ್ದ ಅಂಗಡಿಯ ಮಾಲೀಕ ವಿನಯ್ ಹಾಗೂ ಯಶವಂತ್ ಅವರನ್ನು ಸಹ ಬಂಧಿಸಲಾಗಿದೆ ಎಂದು ವಿವರಿಸಿದರು. ಎಸ್‍ಪಿ ಅವರೊಂದಿಗೆ ಹೆಚ್ಚುವರಿ ಪೊಲೀಸ್ ಆಧೀಕ್ಷಕ ಮಹಾಲಿಂಗ ನಂದಾಗಾಂವಿ, ಡಿವೈಎಸ್ಪಿ ಪಾಂಡುರಂಗಪ್ಪ ಹಾಜರಿದ್ದರು.

  • ಮುದುಕಿ ಎನ್ನುವುದನ್ನೂ ಲೆಕ್ಕಿಸದ ಕಳ್ಳರು- ಎಳೆದ ರಭಸಕ್ಕೆ ನೆಲಕ್ಕುರುಳಿ ಒದ್ದಾಡಿದ ವೃದ್ಧೆ

    ಮುದುಕಿ ಎನ್ನುವುದನ್ನೂ ಲೆಕ್ಕಿಸದ ಕಳ್ಳರು- ಎಳೆದ ರಭಸಕ್ಕೆ ನೆಲಕ್ಕುರುಳಿ ಒದ್ದಾಡಿದ ವೃದ್ಧೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸರಗಳ್ಳರ ಹಾವಳಿ ಮಿತಿ ಮೀರುತ್ತಿದ್ದು, ಮಹಿಳೆಯರು, ವೃದ್ಧೆಯರು ಚಿನ್ನಾಭರಣ ಧರಿಸಿ ಓಡಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃದ್ಧೆಯನ್ನೂ ಬಿಡದ ಕಳ್ಳರು, ಸರ ಕದಿಯುವ ಭರದಲ್ಲಿ ಹಲ್ಲೆ ನಡೆಸಿದ್ದಾರೆ.

    ಅಜ್ಜಿಯನ್ನೂ ಬಿಡದ ಕಳ್ಳ ಕುತ್ತಿಗೆಯಲ್ಲಿನ ಸರಕ್ಕೆ ಕೈ ಹಾಕಿ ಎಳೆದು ನೆಲಕ್ಕೆ ಬೀಳಿಸಿದ್ದಾನೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಪರಿಚಯಸ್ಥರ ರೀತಿ ಮಾತನಾಡಿಕೊಂಡು ಹತ್ತಿರ ಬಂದು ಸರ ಎಳೆದಿದ್ದಾನೆ.

    ಬೈಕ್‍ನಲ್ಲಿದ್ದ ಕಳ್ಳರು ನಿಧಾನವಾಗಿ ಬಂದು ವೃದ್ಧೆಯ ಸರಕ್ಕೆ ಕೈ ಹಾಕಿ ಎಳೆದಿದ್ದಾರೆ. ಎಳೆಯುವ ರಭಸಕ್ಕೆ ಅಜ್ಜಿ ಮಕಾಡೆ ಬೀಳುತ್ತಾರೆ. ಆಗ ಕಳ್ಳ ಸರ ಕಿತ್ತುಕೊಂಡು ಕ್ಷಣಾರ್ಧದಲ್ಲಿ ಪರಾರಿಯಾಗುತ್ತಾರೆ. ಅಜ್ಜಿಯ ಸರ ಕೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗೇಟಿನೊಳಗೆ ಹೋಗುತ್ತಿದ್ದ ಅಜ್ಜಿಯನ್ನು ಮಾತನಾಡಿಸುವ ನೆಪದಲ್ಲಿ ತಡೆದು ಕಳ್ಳರು ಕೈ ಚಳಕ ತೋರಿದ್ದಾರೆ. ಈ ಕುರಿತು ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಮಾನವೀಯತೆ ಮರೆತ ಕಳ್ಳ! – ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಹಿಳೆಯ ಸರಗಳ್ಳತನ

    ಮಾನವೀಯತೆ ಮರೆತ ಕಳ್ಳ! – ಅಪಘಾತಕ್ಕೀಡಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಹಿಳೆಯ ಸರಗಳ್ಳತನ

    ಚಿಕ್ಕಬಳ್ಳಾಪುರ: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಬೈಪಾಸ್ ರಸ್ತೆಯ ಅಗಲಗುರ್ಕಿ ಬಳಿ ನಡೆದಿದೆ.

    ಬೈಪಾಸ್ ರಸ್ತೆಯ ಬಳಿ ಇನ್ನೋವಾ ಕಾರಿನ ಮೇಲೆ ಟಿಪ್ಪರ್ ಲಾರಿ ಹರಿದಿತ್ತು. ಪರಿಣಾಮ ಕಾರು ಚಲಾಯಿಸುತ್ತಿದ್ದ 32 ವರ್ಷದ ಮಹಿಳೆ ದೀಪಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಈ ವೇಳೆ ಕಾರಿನಲ್ಲಿ ಮಹಿಳೆಯ ರಕ್ಷಣೆಗೆ ಧಾವಿಸಿದ್ದ ಜನರ ಗುಂಪಿನಲ್ಲಿದ್ದ ಕಳ್ಳನೊಬ್ಬ ಸುಮಾರು 80 ಗ್ರಾ ಮಾಂಗಲ್ಯ ಸರ ಕಳ್ಳತನ ಮಾಡಿದ್ದಾನೆ.

    ಟಿಪ್ಪರ್ ಲಾರಿ ಹರಿದ ಪರಿಣಾಮ ಕಾರು ಅಪ್ಪಚ್ಚಿಯಾಗಿತ್ತು. ಈ ವೇಳೆ ಮಹಿಳೆಯನ್ನು ಕಾರಿನಿಂದ ರಕ್ಷಣೆ ಮಾಡಲು ಹೊರ ತೆಗೆದ ವೇಳೆ ಘಟನೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕುಟುಂಬಸ್ಥರೊಂದಿಗೆ ಚಿಕ್ಕಜಾಲ ಬಳಿಯ ಉತ್ತನಹಳ್ಳಿ ಬೆಟ್ಟದ ಮುನೇಶ್ವರ ದೇವಸ್ಥಾನಕ್ಕೆ ತೆರಳಿ ಸ್ವಗ್ರಾಮ ಅಗಲಗುರ್ಕಿಗೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಈ ವೇಳೆ ಕಾರಿನಲ್ಲಿದ್ದ ದೀಪಾ ಅವರ ತಾಯಿಗೆ ಕಾಲು ಮುರಿದಿದ್ದು, ಮೃತ ದೀಪಾ ಅವರ ಬಾವನ ಮಕ್ಕಳಾದ ಪವನ್ ಹಾಗೂ ಸಂಗೀತ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ.

    ಈ ಕುರಿತು ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಲಿಸುತ್ತಿದ್ದ ರೈಲಿನಲ್ಲಿ ಓಡಿ ಹೋಗಿ ಕಳ್ಳನನ್ನು ಹಿಡಿದ ರೈಲ್ವೇ ಪೊಲೀಸ್ ಪೇದೆ!

    ಚಲಿಸುತ್ತಿದ್ದ ರೈಲಿನಲ್ಲಿ ಓಡಿ ಹೋಗಿ ಕಳ್ಳನನ್ನು ಹಿಡಿದ ರೈಲ್ವೇ ಪೊಲೀಸ್ ಪೇದೆ!

    ವಿಜಯಪುರ: ಬಸವ ಎಕ್ಸ್ ಪ್ರೆಸ್ ರೈಲಿನಲ್ಲಿ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿದು ರೈಲ್ವೇ ಪೇದೆಯೊಬ್ಬರು ಸಮಯ ಪ್ರಜ್ಞೆ ಮೆರೆದಿದ್ದಾರೆ.

    ಶ್ರೀಶಾಂತ ರಾಠೋಡ್ ಬಂಧಿತ ಆರೋಪಿ. ವಿಜಯಪುರ ತಾಲೂಕಿನ ಅತಾಲಟ್ಟಿ ಗ್ರಾಮದ ನಿವಾಸಿ ಬಾಳಕ್ಕ ಮನಗೂಳಿ ಸರ ಕಳೆದುಕೊಂಡಿದ್ದ ಮಹಿಳೆ. ಬಸವನಬಾಗೇವಾಡಿ ತಾಲೂಕಿನ ಆಲಮಟ್ಟಿ ರೈಲ್ವೇ ನಿಲ್ದಾಣ ಸಮೀಪದಲ್ಲಿ ಘಟನೆ ನಡೆದಿದೆ.

    ಶುಕ್ರವಾರ ಸಂಜೆ ಬಾಳಕ್ಕ ಅವರು ಬಸವ ಎಕ್ಸ್ ಪ್ರೆಸ್ ರೈಲಿನಲ್ಲಿ ಬಾಗಲಕೋಟೆಯಿಂದ ವಿಜಯಪುರಕ್ಕೆ ಪ್ರಯಾಣಿಸುತ್ತಿದ್ದರು. ಚಲಿಸುತ್ತಿರುವ ರೈಲಿನಲ್ಲಿಯೇ ಶ್ರೀಕಾಂತ, ಬಾಳಕ್ಕ ಅವರು ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರ ಕಳೆದುಕೊಳ್ಳುತ್ತಿದ್ದಂತೆ ಬಾಳಕ್ಕ ಕಿರುಚಿದ ಧ್ವನಿ ಕೇಳಿ ಎಚ್ಚೆತ್ತುಕೊಂಡ ರೈಲ್ವೇ ಪೇದೆ ಅರುಣಕುಮಾರ್ ಕಳ್ಳನ ಹಿಂದೆ ವೇಗವಾಗಿ ಓಡಿ ಹೋಗಿ ಬಂಧಿಸಿದ್ದಾರೆ.

    ಪೇದೆ ಅರುಣಕುಮಾರ್ ಅವರ ಸಮಯಪ್ರಜ್ಞೆ ಮೆಚ್ಚಿ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀಕಾಂತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾಡಿಗೆ ಮನೆ ಕೇಳೋ ನೆಪದಲ್ಲಿ ಸರ ಕದಿಯಲು ಯತ್ನಿಸಿದಾತನಿಗೆ ಬಿತ್ತು ಗೂಸ!

    ಬಾಡಿಗೆ ಮನೆ ಕೇಳೋ ನೆಪದಲ್ಲಿ ಸರ ಕದಿಯಲು ಯತ್ನಿಸಿದಾತನಿಗೆ ಬಿತ್ತು ಗೂಸ!

    ಬೆಂಗಳೂರು: ಮನೆ ಬಾಡಿಗೆ ಕೇಳುವ ನೆಪದಲ್ಲಿ ಮಹಿಳೆಯ ಚಿನ್ನದ ಮಾಂಗಲ್ಯ ಸರ ಕದಿಯಲು ಯತ್ನಿಸಿದ ಕಳ್ಳನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನೆಲಮಂಗಲ ತಾಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬರಗೂರು ಗ್ರಾಮದ ನಿವಾಸಿ ಲೋಪಾಕ್ಷಿ ಸರ ಕಳವು ಮಾಡಿ ಈಗ ಸಾರ್ವಜನಿಜಕರಿಂದ ಹೊಡೆತ ತಿಂದಿದ್ದಾನೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಭೈರನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಮನೆ ಒಡತಿ ಪ್ರೇಮಾ ಎಂಬುವವರ ಸರವನ್ನು ಕಳುವು ಮಾಡಲು ಯತ್ನಿಸಿದಾಗ ಕಳ್ಳ ಸಿಕ್ಕಿ ಬಿದ್ದಿದ್ದಾನೆ.

    ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದ ಆತ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಮಹಿಳೆಯ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪ್ರೇಮಾ ಅವರು ಕಿರುಚಿದಾಗ ಜನರು ಸರಗಳ್ಳನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸರ ವಶದಲ್ಲಿ ಲೋಪಾಕ್ಷಿ ಇದ್ದು, ವಿಚಾರಣೆ ನಡೆಯುತ್ತಿದೆ.

  • ನೆಲಮಂಗಲ: ಅಡ್ರೆಸ್ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿಯಾದ್ರು

    ನೆಲಮಂಗಲ: ಅಡ್ರೆಸ್ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕಿತ್ತು ಪರಾರಿಯಾದ್ರು

    ಬೆಂಗಳೂರು: ಬ್ಲಾಕ್ ಪಲ್ಸರ್‍ನಲ್ಲಿ ಬಂದ ಇಬ್ಬರು ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದ ಮಹಿಳೆಗೆ ಅಡ್ರೆಸ್ ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕದ್ದು ಪರಾರಿಯಾಗಿರುವ ಘಟನೆ ನಗರದ ಹೊರವಲಯದ ನೆಲಮಂಗಲ ಪಟ್ಟಣದ ಸುಭಾಷ್ ನಗರದಲ್ಲಿ ನಡೆದಿದೆ.

    ಸುಜಾತಾ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ. ಇಂದು ಬೆಳಗಿನ ಜಾವ ಸುಮಾರು 6 ಗಂಟೆ ವೇಳೆಯಲ್ಲಿ ಸುಜಾತಾ ಅವರು ಮನೆಯ ಮುಂದೆ ರಂಗೋಲಿ ಹಾಕುವಾಗ ಬೈಕ್‍ನಲ್ಲಿ ಬಂದ ಇಬ್ಬರು ವಿಳಾಸ ಕೇಳೋ ನೆಪದಲ್ಲಿ ಮಾಂಗಲ್ಯ ಸರ ಕದಿಯಲು ಪ್ರಯತ್ನಿಸಿದ್ದಾರೆ. ಸುಜಾತ ಅವರು ಭಯದಿಂದ ಕಿರುಚಿದಾಗ ಸ್ಥಳೀಯರು ನೆರವಿಗೆ ಧಾವಿಸುತ್ತಿದ್ದಂತೆ ಕಳ್ಳರು ಕೇವಲ ಅರ್ಧದಷ್ಟು ಮಾತ್ರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

    ಸುಮಾರು 15 ಗ್ರಾಂ. ಬಂಗಾರ ಕಳ್ಳತನವಾಗಿದೆ ಎಂದು ಸುಜಾತಾ ಅವರು ತಿಳಿಸಿದ್ದಾರೆ. ಈ ಸಂಬಂಧ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.