Tag: ಸರ್ಜಿಕಲ್ ಸ್ಟ್ರೈಕ್

  • ಸೈನಿಕರ ವಿಚಾರ ಚುನಾವಣೆಗೆ ಬಳಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ: ಬಿಎಸ್‍ವೈ

    ಸೈನಿಕರ ವಿಚಾರ ಚುನಾವಣೆಗೆ ಬಳಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ: ಬಿಎಸ್‍ವೈ

    ಯಾದಗಿರಿ: ಉಗ್ರರ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಲ್ಲೂ ರಾಜಕೀಯ ಲೆಕ್ಕಾಚಾರ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರ ಹೇಳಿಕೆಗೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆ ಯಾದಗಿರಿಯ ರೈಲ್ವೇ ನಿಲ್ದಾಣದಲ್ಲಿ ಮಾತನಾಡಿದ ಯಡಿಯೂರಪ್ಪನವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

    ಪ್ರಪಂಚಾದ್ಯಂತ ಪಾಕಿಸ್ತಾನ ನಡುವಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ. ಈಗಲಾದರು ಪಾಕಿಸ್ತಾನ ತನ್ನ ತಪ್ಪು ಅರ್ಥ ಮಾಡಿಕೊಂಡು ಭಯೋತ್ಪಾದಕರಿಗೆ ತರಬೇತಿ ಕೊಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪಾಕಿಸ್ತಾನ ಸರ್ವನಾಶವಾಗುತ್ತದೆ. ಅಜರ್ ನನ್ನು ವಿಶ್ವಮಟ್ಟದಲ್ಲಿ ಭಯೋತ್ಪಾದನಾ ಪಟ್ಟಿಯಲ್ಲಿ ಸೇರಿಸುವ ಪ್ರಯತ್ನ ಸ್ವಾಗತರ್ಹವಾಗಿದೆ. ಸೈನಿಕರ ವಿಚಾರ ಚುನಾವಣೆಗೆ ಬಳಕೆ ಮಾಡಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಯಡಿಯೂರಪ್ಪನವರು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜಕೀಯ ಲಾಭ ಕಾಣುತ್ತಿರುವ ಬಿಎಸ್‍ವೈ ಹೇಳಿಕೆಯಿಂದ ಸಂಶಯ- ಸಿದ್ದರಾಮಯ್ಯ

    ವಿಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನ ವಶದಲ್ಲಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾನೂನಿನಂತೆ ಅಭಿನಂದನ್‍ರನ್ನು ದೇಶಕ್ಕೆ ವಾಪಸ್ಸು ಕರೆತರಬೇಕು. ಸೆರೆಸಿಕ್ಕ ವ್ಯಕ್ತಿ ಮೇಲೆ ಹಲ್ಲೆ ನಡೆಸುವುದು ಕಾನೂನಿನಲ್ಲಿ ಅವಕಾಶವಿಲ್ಲ. ಭಾರತ ಅವರನ್ನು ವಾಪಸ್ ಕಳುಹಿಸಬೇಕು ಎಂದು ಕೇಳಿದೆ. ಹೀಗಾಗಿ ಪಾಕಿಸ್ತಾನ ಮತ್ತೊಂದು ಸಾಹಸಕ್ಕೆ ಪ್ರಯತ್ನಿಸುವುದಿಲ್ಲ. ಅಭಿನಂದನ್ ಅವರನ್ನು ವಾಪಸ್ ಕಳಿಸುವ ವಿಶ್ವಾಸವಿದೆ. ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರ ಯಾವುದೇ ಮಾತನಾಡುವದಿಲ್ಲ ಎಂದರು.

    ಸುಷ್ಮಾ ಸ್ವರಾಜ್ ಸರ್ವ ಪಕ್ಷದ ಸಭೆ ಕರೆದು ಎಲ್ಲಿ ಏನು ನಡೆದಿದೆ ಎಂದು ತಿಳಿಸಿದ್ದಾರೆ. ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಎಲ್ಲರನ್ನು ಕರೆದು ಗಡಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ರಾಜಕೀಯ ಲಾಭ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. ದೇಶದ 135 ಕೋಟಿ ಜನರು ಅಭಿನಂದನೆ ಸಲ್ಲಿಸುವ ಕಾರ್ಯ ಭಾರತೀಯ ವಾಯು ಸೇನೆ ಮಾಡಿದೆ ಎಂದು ಯಡಿಯೂರಪ್ಪ ಸ್ಪಷ್ಟನೆ ತಿಳಿಸಿದ್ದಾರೆ.

    ಬಿಎಸ್‍ವೈ ಹೇಳಿದ್ದೇನು..?
    ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ. ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಎಂದು ಯಡಿಯೂರಪ್ಪ ಅವರು ಬುಧವಾರ ಚಿತ್ರದುರ್ಗದಲ್ಲಿ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ವಿಮಾನವನ್ನು ಹೊಡೆದು ಉರುಳಿಸಿದ್ದೇವೆ – ಭಾರತದ ಅಧಿಕೃತ ಹೇಳಿಕೆ

    ಪಾಕ್ ವಿಮಾನವನ್ನು ಹೊಡೆದು ಉರುಳಿಸಿದ್ದೇವೆ – ಭಾರತದ ಅಧಿಕೃತ ಹೇಳಿಕೆ

    ನವದೆಹಲಿ: ಪಾಕಿಸ್ತಾನದ ಒಂದು ವಿಮಾನವನ್ನು ನಾವು ಹೊಡೆದು ಉರುಳಿಸಿದ್ದೇವೆ ಎಂದು ಭಾರತ ಅಧಿಕೃತವಾಗಿ ಹೇಳಿಕೆ ನೀಡಿದೆ.

    ಬುಧವಾರ ಮಧ್ಯಾಹ್ನ ವಿದೇಶಾಂಗ ವ್ಯವಹಾರಗಳ ಖಾತೆಯ ಕಾರ್ಯದರ್ಶಿ ರವೀಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

    ಜೈಷ್ ಉಗ್ರರ ಮೇಲೆ ದಾಳಿ ನಡೆಸಿದ ಬಳಿಕ ಭಾರತದ ಸೈನಿಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ವಾಯುಸೇನೆ ಇಂದು ಬೆಳಗ್ಗೆ ದಾಳಿ ಮಾಡಿದೆ. ಈ ದಾಳಿಯ ವಿಚಾರ ತಿಳಿಯುತ್ತಿದ್ದಂತೆ ಭಾರತ ಪ್ರತಿದಾಳಿ ನಡೆಸುವ ವೇಳೆ ಪಾಕಿಸ್ತಾನದ ಒಂದು ವಿಮಾನ ಪತನವಾಗಿದೆ ಎಂದು ತಿಳಿಸಿದರು.

    ಪಾಕ್ ವಾಯುಸೇನೆಯನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ನಮ್ಮ ಮಿಗ್ ವಿಮಾನ ಪತನಗೊಂಡಿದ್ದು ಪೈಲಟ್ ನಾಪತ್ತೆಯಾಗಿದ್ದಾರೆ. ಪಾಕಿಸ್ತಾನ ಪೈಲಟ್ ನಮ್ಮ ಬಳಿ ಇದ್ದಾರೆ ಎಂದು ಹೇಳುತ್ತಿದೆ. ಈ ಮಾಹಿತಿಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ವಿಮಾನ ಪತನಗೊಂಡಿರುವ ವಿಚಾರವನ್ನು ಭಾರತ ಖಚಿತ ಪಡಿಸಿದ್ದು ಯಾವ ವಿಮಾನ ಎನ್ನುವುದು ತಿಳಿದು ಬಂದಿಲ್ಲ. ಪಾಕಿಸ್ತಾನ ಎಫ್ 16 ವಿಮಾನವನ್ನು ವಾಯುಸೇನೆ ಹೊಡೆದಿದೆ ಎಂದು ಸೇನೆಯ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಪಾಕಿಸ್ತಾನ ಸೇನೆ ಇಬ್ಬರು ಭಾರತೀಯ ಪೈಲಟ್ ಗಳು ನಮ್ಮ ಬಳಿ ಇದ್ದಾರೆ ಎಂದು ಹೇಳಿಕೊಂಡಿದೆ. ಆದರೆ ಪಾಕಿಸ್ತಾನದ ಈ ಆರೋಪಕ್ಕೆ ಭಾರತ ನಮ್ಮ ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಪ್ರತಿಕ್ರಿಯಿಸಿದೆ.

    ಮಂಗಳವಾರ ಸುದ್ದಿಗೋಷ್ಠಿ ನಡೆಸಿದ್ದ ಭಾರತ ನಾವು ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದ್ದೇವೆಯೇ ಹೊರತು ಪಾಕಿಸ್ತಾನದ ಮಿಲಿಟರಿ ಮತ್ತು ನಾಗರಿಕರ ನೆಲೆ ಮೇಲೆ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಆದರೆ ಪಾಕಿಸ್ತಾನ ಇಂದು ವಾಯುಸೇನೆಯ ಮೂಲಕ ಭಾರತದ ಸೇನೆಯ ಮೇಲೆ ದಾಳಿ ನಡೆಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿನ ಯಲಹಂಕದಿಂದ ಯುದ್ಧ ವಿಮಾನಗಳು ರವಾನೆ

    ಬೆಂಗಳೂರಿನ ಯಲಹಂಕದಿಂದ ಯುದ್ಧ ವಿಮಾನಗಳು ರವಾನೆ

    ಬೆಂಗಳೂರು: ಭಾರತದ ಮೇಲೆ ಪಾಕ್ ದಾಳಿಗೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಯುದ್ಧ ವಿಮಾನಗಳು ರವಾನೆಯಾಗಿದೆ.

    ಈಗಾಗಲೇ ರಜೆಯಲ್ಲಿರುವ ಎಲ್ಲ ಸೈನಿಕರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಮೂರು ಸೇನೆಗಳು ಸೂಚನೆ ಕೊಟ್ಟಿವೆ.

    ಗಡಿಯಲ್ಲಿ ಭಾರತ ಹೈ ಅಲರ್ಟ್ ಘೋಷಿಸಿದ್ದು, ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಿದೆ. ಭಾರತ ಸರ್ಕಾರ ಗಡಿಯಲ್ಲಿರುವ ನಾಗರಿಕರನ್ನು ಸುರಕ್ಷಿತ ಕಡೆಗೆ ಸಾಗಿಸುವಂತೆ ಭಾರತೀಯ ಸೇನೆಗೆ ಸೂಚಿಸಿದೆ. ಇದನ್ನೂ ಓದಿ:ಕರಾವಳಿಯಲ್ಲಿ ಹೈ ಅಲರ್ಟ್: ನೌಕಾ ಸಿಬ್ಬಂದಿಗಳಿಗೆ ಮಂಜೂರಾದ ರಜೆ ಕಟ್

    ಭಾರತದ ಸರ್ಜಿಕಲ್ ಸ್ಟ್ರೈಕ್ ನಿಂದ ದಿಕ್ಕೆಟ್ಟ ಪಾಕಿಸ್ತಾನ ಈಗ ಗಡಿಯಲ್ಲಿ ಒಂದೇ ಸಮನೆ ಗುಂಡಿನ ದಾಳಿ ನಡೆಸುತ್ತಿದೆ. ಪಾಕ್ ಗುಂಡಿನ ದಾಳಿಗೆ ಭಾರತ ಪ್ರತಿದಾಳಿ ನಡೆಸಿ ಈಗಾಗಲೇ 5 ಸೇನಾ ಚೌಕಿಗಳನ್ನು ಧ್ವಂಸ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದ ದಾಳಿಗೆ ಪಾಕಿಸ್ತಾನದ ಎಫ್ -16 ವಿಮಾನ ಉಡೀಸ್

    ಭಾರತದ ದಾಳಿಗೆ ಪಾಕಿಸ್ತಾನದ ಎಫ್ -16 ವಿಮಾನ ಉಡೀಸ್

    ಶ್ರೀನಗರ: ಭಾರತದ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ಬಳಿಕ ಪ್ರತಿದಾಳಿ ನಡೆಸಲು ನುಗ್ಗಿದ್ದ ಪಾಕಿಸ್ತಾನದ ವಿಮಾನವನ್ನು ಭಾರತ ಹೊಡೆದುರುಳಿಸಿದೆ.

    ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಎಫ್ -16 ವಿಮಾನ ಭಾರತವನ್ನು ಪ್ರವೇಶಿಸಿತ್ತು. ಗಡಿಯನ್ನು ದಾಟಿ 3 ಕಿ.ಮೀ ಪ್ರವೇಶಿಸಿದ ವಿಮಾನವನ್ನು ಭಾರತದ ವಾಯುಸೇನೆ ಹೊಡೆದು ಉರುಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಭಾರತದ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಶ್ರೀನಗರ ಮತ್ತು ಅಮೃತಸರ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ವಿಮಾನಗಳ ಹಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪಾಕಿಸ್ತಾನದ ಗಡಿಗೆ ಹತ್ತಿರದಲ್ಲಿರುವ ಧರ್ಮಶಾಲಾ, ಡೆಹ್ರಡೂನ್‍ನಲ್ಲಿ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ.

    ಪಾಕಿಸ್ತಾನ ಈಗ ಮುಲ್ತಾನ್, ಲಾಹೋರ್, ಇಸ್ಲಾಮಾಬಾದ್, ಫೈಸಲಾಬಾದ್, ಸಿಯಾಲ್‍ಕೋಟ್ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಏರ್ ಸ್ಟ್ರೈಕ್ ಮಾಸ್ಟರ್ ಮೈಂಡ್ ಬೀರೇಂದ್ರ ಸಿಂಗ್ ಧನೋವಾ

    ಏರ್ ಸ್ಟ್ರೈಕ್ ಮಾಸ್ಟರ್ ಮೈಂಡ್ ಬೀರೇಂದ್ರ ಸಿಂಗ್ ಧನೋವಾ

    -ಭದ್ರತಾ ಸಲಹೆಗಾರ ಧೋವಲ್‍ಗೆ ಧನೋವಾ ಸಲಹೆ..!?

    ನವದೆಹಲಿ: ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್ ವಾಯುಸೇನೆಯ ಮುಖ್ಯಸ್ಥರಾದ ಬೀರೇಂದ್ರ ಸಿಂಗ್ ಧನೋವಾ. ಕಾರ್ಗಿಲ್ ಯುದ್ಧದ ವೇಳೆ ಕತ್ತಲಿನಲ್ಲಿ ಆಪರೇಷನ್ ನಡೆಸಿದ್ದ ಧನೋವಾ ಅವರೇ ಏರ್ ಸ್ಟ್ರೈಕ್‍ಗೆ ಸೂಚಿಸಿದ್ದರಂತೆ.

    ಬೀರೇಂದ್ರ ಸಿಂಗ್ ಧನೋವಾ ಇಂಡಿಯನ್ ಏರ್ ಫೋರ್ಸ್ ನ ಮುಖ್ಯಸ್ಥರು. ಸೆಪ್ಟೆಂಬರ್ 7, 1957ರಲ್ಲಿ ಜನಿಸಿದ ಧನೋವಾ ಅವರು ಸೇನಾಪಡೆಯಲ್ಲಿ 37 ವರ್ಷಗಳಿಂದ ಅವಿರತ ಶ್ರಮಿಸುತ್ತಿದ್ದಾರೆ. ಪಾಕಿಸ್ತಾನದ ನೆಲಕ್ಕೆ ನುಗ್ಗಿ ಬಾಲ್‍ಕೋಟ್‍ನಲ್ಲಿ 350 ಉಗ್ರರ ಚೆಂಡಾಡಿದ ಏರ್ ಸ್ಟ್ರೈಕ್ ಹಿಂದಿನ ಮಾಸ್ಟರ್ ಮೈಂಡ್. ಅಲ್ಲದೆ, ಈ ಸಂಪೂರ್ಣ ಆಪರೇಷನ್ ನಿರ್ವಹಿಸಿದವರು.

    ಪಾಕಿಸ್ತಾನ ಪ್ರಾಯೋಜಿತ ಜೈಶ್ ಉಗ್ರರು, ಪುಲ್ವಾಮಾದ ಆವಂತಿಪೋರ್ ನಲ್ಲಿ ಫೆಬ್ರವರಿ 14ರಂದು ಮಧ್ಯಾಹ್ನ 3.15ರ ವೇಳೆಗೆ ನಡೆದ ಆತ್ಮಾಹುತಿ ದಾಳಿಗೆ 40 ಯೋಧರ ಹುತಾತ್ಮರಾಗಿದ್ದರು. ಘಟನೆ ಬಳಿಕ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಭೂಸೇನೆ, ವಾಯುಸೇನೆ, ನೌಕಾಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ವೇಳೆ ಪಾಕ್ ಉಗ್ರರ ಹುಟ್ಟಡಗಿಸಲು ಏರ್ ಸ್ಟ್ರೈಕ್ ಒಳ್ಳೆಯ ಆಯ್ಕೆ ಅಂತ ಧನೋಆ ಸಲಹೆ ನೀಡಿದ್ದರು ಅಂತ ತಿಳಿದು ಬಂದಿದೆ.

    ಧನೋವಾ ಅವರು 1999ರ ಕಾರ್ಗಿಲ್ ಯುದ್ಧದ ವೇಳೆ ಫೈಟರ್ ಸ್ಕ್ವಾಡ್ರನ್ ಮತ್ತು ಅಂದಿನ ಏರ್ ಫೋರ್ಸ್ ಮುಖ್ಯಸ್ಥರಾಗಿದ್ದ ಎ.ವೈ ಟಿಪ್ನಿಸ್ ಅವರಿಗೆ ಸಾಥ್ ನೀಡಿದ್ದರು. ಐಎಎಫ್ ಪೈಲಟ್‍ಗಳಿಗೆ ಮಾನಸಿಕ ಸ್ಥೈರ್ಯ ತುಂಬಲು ಅಂದಿನ ಮಾರ್ಷಲ್ ಟಿಫ್ನಿಸ್ ಅವರೇ ಖುದ್ದಾಗಿ ಪೈಲಟ್‍ಗಳ ಜೊತೆಗೆ ತೆರಳಿದ್ದರು. ಆದರೆ ಟಿಪ್ನಿಸ್ ಹಾಗೂ ಪೈಲಟ್‍ಗಳ ಪ್ರಾಣ ಕಾಪಾಡಲು ಧನೋವಾ ಅವರು ರಾತ್ರಿ ವೇಳೆ ಅತ್ಯಂತ ಎತ್ತರದದಿಂದಲೇ ದಾಳಿ ಮಾಡೋಣ ಅಂತ ಐಡಿಯಾ ಕೊಟ್ಟಿದ್ದರು. ಇದರಲ್ಲಿ ಯಶಸ್ವಿ ಸಹ ಆಗಿದ್ದರು.

    1978ರಲ್ಲಿ ವಾಯು ಸೇನೆ ಸೇರಿದ್ದ ಧನೋವಾ, ಎಚ್‍ಜೆಟಿ-16 ಕಿರಣ್, ಸೆಪೆಕ್ಯಾಟ್, ಜಾಗ್ವಾರ್, ಮಿಗ್-29 ಹಾಗೂ ಸುಖೋಯ್-30 ಎಂಕೆಐ ಫೈಟರ್ ಜೆಟ್‍ಗಳನ್ನು ಹಾರಿಸಿದ್ದಾರೆ. ಈ ಮೂಲಕ ಪರಿಣತ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷಗಳ ಸೇವೆಯಲ್ಲಿ ಹಲವಾರು ಅತ್ಯುನ್ನತ ಪ್ರಶಸ್ತಿ, ಪದಕಗಳನ್ನು ಧನೋವಾ ಪಡೆದಿದ್ದಾರೆ.

    https://www.youtube.com/watch?v=LuNOYN08Gu0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 21 ನಿಮಿಷಗಳ ದಾಳಿಗೆ 3,686 ಕೋಟಿ ವೆಚ್ಚದ ವಸ್ತುಗಳ ಬಳಕೆ..!

    21 ನಿಮಿಷಗಳ ದಾಳಿಗೆ 3,686 ಕೋಟಿ ವೆಚ್ಚದ ವಸ್ತುಗಳ ಬಳಕೆ..!

    – ಯುದ್ಧ ಸಾಮಾಗ್ರಿಗಳ ಮೌಲ್ಯ ಹೀಗಿದೆ

    ನವದೆಹಲಿ: ಭಾರತೀಯ ವಾಯುಸೇನೆ ಜೆಇಎಂ ಉಗ್ರಸಂಘಟನೆಗಳ ತರಬೇತಿ ಶಿಬಿರದ ಮೇಲೆ ದಾಳಿ ಮಾಡಿ ಸರ್ವನಾಶ ಮಾಡಿದೆ. ಫೆ.26ರಂದು ಮುಂಜಾನೆ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ಮಿಂಚಿನ ವೇಗದಲ್ಲಿ ವೈಮಾನಿಕ ದಾಳಿ ನಡೆಸಿ ಸೇಫಾಗಿ ತವರಿಗೆ ಬಂದು ನೆಲೆಸಿದೆ. ಬಾಲಾಕೋಟ್‍ನಲ್ಲಿರುವ ಉಗ್ರರ ತಾಣ ನಾಶ ಮಾಡಲು 2,568 ಕೋಟಿ ರೂ.ಮೌಲ್ಯದ ವಾಯುಪಡೆಯ ಯುದ್ಧ ಸಾಮಾಗ್ರಿಗಳನ್ನು ಬಳಸಿಕೊಳ್ಳಲಾಗಿದೆ.

    ದಾಳಿಯಲ್ಲಿ ಸಾವಿರ ಕೆಜಿ ಬಾಂಬ್ ಬಳಕೆ ಮಾಡಲಾಗಿದ್ದು, ಪ್ರತಿ ಬಾಂಬ್ ಮೌಲ್ಯ 56 ಲಕ್ಷ ರೂ. ಆಗಿದೆ. ಒಂದೊಂದು ಬಾಂಬ್ 225 ಕೆಜಿ ತೂಕದ ಜಿಬಿಯು 12 ಬಾಂಬ್ ಸ್ಫೋಟಿಸಿದ್ದು, ಬಾಂಬ್ ದಾಳಿಗೆ 1.7 ಕೋಟಿಯಿಂದ 2.2 ಕೋಟಿ ವೆಚ್ಚವಾಗಿದೆ.

    ಫೆ.26 ಮುಂಜಾನೆ 3.30ರ ವೇಳೆಗೆ ಬಾಲಕೋಟ್, ಮುಜಾಫರಾಬಾದ್, ಚಕ್ಕೋತಿಯಲ್ಲಿ ನೆಲೆಸಿದ್ದ 200 ರಿಂದ 300 ಉಗ್ರರನ್ನು ಹೊಡೆದುರುಳಿಸಿ ಉಗ್ರರ ತಾಣ ಧ್ವಂಸಗೊಳಿಸಲಾಯ್ತು. ಉಗ್ರರ ಬೇಟೆಗೆ 6,300 ಕೋಟಿ ಮೌಲ್ಯದ ವಸ್ತುಗಳನ್ನು ಸಜ್ಜುಗೊಳಿಸಿತ್ತು. ಇವುಗಳಲ್ಲಿ ಯುದ್ಧ ವಿಮಾನ, ಬಾಂಬ್ ಎಲ್ಲವೂ ಸೇರಿದಂತೆ 3,686 ಕೋಟಿ ಮೌಲ್ಯದ ವಸ್ತುಗಳನ್ನು ಬಳಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: 7 ಶಕ್ತಿಗಳನ್ನು ಬಳಸಿ ಪಾಕ್ ಮೇಲೆ ಬಾಂಬ್ ದಾಳಿಗೈದ ಭಾರತ!

    ಉಗ್ರರ ಬೇಟೆ ಸಂದರ್ಭದಲ್ಲಿ ಪಾಕ್ ಸೇನೆ ಪ್ರತಿದಾಳಿ ನಡೆಸಬಹುದು ಅಂತಾ ಭಾರತೀಯ ವಾಯುಪಡೆ 1,750 ಕೋಟಿ ಮೌಲ್ಯದ ರೆಡಾರ್ ಹೊಂದಿರುವ ಎಡಬ್ಲ್ಯೂಎಸಿಎಸ್ ವಿಮಾನದ ಕಾವಲಿಗಿರಿಸಿತ್ತು. ಕಾರ್ಯಾಚರಣೆಯಲ್ಲಿ ವಿಮಾನಗಳಿಗೆ ಇಂಧನ ತುಂಬುವ 22 ಕೋಟಿ ಮೌಲ್ಯದ ಟ್ಯಾಂಕರ್ ಜೆಟ್, 80 ಕೋಟಿ ಮೌಲ್ಯದ ಡ್ರೋಣ್ ಕ್ಯಾಮೆರಾಗಳನ್ನು ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಯ್ತು. ಅಲ್ಲದೇ 3 ಸುಖೋಯ್ ವಿಮಾನಗಳನ್ನು ಸನ್ನದ್ಧವಾಗಿರಿಸಿತ್ತು.

    ಮಧ್ಯಪ್ರದೇಶದ ಗ್ವಾಲಿಯರ್‍ನಿಂದ ಹಾರಿದ ಮಿರಾಜ್ 2000 ಯುದ್ಧ ವಿಮಾನಗಳು ಪಾಕಿಸ್ತಾನಕ್ಕೂ ಸಣ್ಣದೊಂದು ಸುಳಿವು ನೀಡದೇ 21 ನಿಮಿಷಗಳಲ್ಲಿ ಉಗ್ರರ ತಾಣಗಳನ್ನು ಸರ್ವನಾಶ ಮಾಡಿ ಭಾರತಕ್ಕೆ ಸೇಫಾಗಿ ಮರಳಿದೆ. ಆದರೆ 21 ನಿಮಿಷಗಳ ಯುದ್ಧಕ್ಕೆ ಸಾವಿರಾರು ಕೋಟಿ ವೆಚ್ಚವಾಗಿದ್ದು ಬಲಿಷ್ಠ ಭಾರತೀಯ ಸೇನೆ ಎದುರು ಭಿಕ್ಷುಕ ರಾಷ್ಟ್ರ ಪಾಕಿಸ್ತಾನ ಯುದ್ಧಕ್ಕೆ ಮುಂದಾಗುತ್ತಾ ಅನ್ನೋದು ಕಾದು ನೋಡಬೇಕಿದೆ.

    ದಾಳಿಗೆ ಬಳಕೆಯಾದ ಯುದ್ಧಸಾಮಾಗ್ರಿಗಳ ಮೌಲ್ಯ

    * 12 ಮಿರಾಜ್ 2000 ಜೆಟ್ ಮೌಲ್ಯ – 2,568 ಕೋಟಿ
    * ಎಡಬ್ಲ್ಯೂಎಸಿಆರ್ ವಿಮಾನ – 1750 ಕೋಟಿ
    * 1 ಸುಖೋಯ್ ಯುದ್ಧ ವಿಮಾನಕ್ಕೆ 358 ಕೋಟಿ ವೆಚ್ಚ
    * 3 ಸುಖೋಯ್ ಎಸ್‍ಯು-30ಎಸ್ ಯುದ್ಧ ವಿಮಾನ – 1,074 ಕೋಟಿ
    * 1 ಮಿಗ್ 29 ಎಸ್ ಯುದ್ಧ ವಿಮಾನಕ್ಕೆ 154 ಕೋಟಿ
    * 5 ಮಿಗ್ 29 ಎಸ್ ಯುದ್ಧ ವಿಮಾನ – 770 ಕೋಟಿ
    * ಹೆರೋನ್ ಡ್ರೋಣ್ – 80 ಕೋಟಿ
    * ವಿಮಾನಗಳಿಗೆ ಇಂಧನ ತುಂಬುವ ಟ್ಯಾಂಕರ್ ಜೆಟ್ – 22 ಕೋಟಿ
    * ಒಟ್ಟಾರೆ 21 ನಿಮಿಷದ ದಾಳಿಗೆ – 6, 264 ಕೋಟಿ ರೂ.ಸೇನಾ ಸಂಪತ್ತಿನ ಬಳಕೆ

    https://www.youtube.com/watch?v=tWx5VyQ388w

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ದಾಳಿಯಲ್ಲಿ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಹತ್ಯೆ!

    ಸರ್ಜಿಕಲ್ ದಾಳಿಯಲ್ಲಿ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಹತ್ಯೆ!

    ನವದೆಹಲಿ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಬಾಲಕೋಟ್ ನೆಲೆಯ ಮೇಲೆ ಭಾರತೀಯ ವಾಯು ಪಡೆಯು ಇಂದು ಬೆಳಗ್ಗೆ ನಡೆಸಿದ ದಾಳಿಯಲ್ಲಿ 300 ಉಗ್ರರು, ತರಬೇತುದಾರರು ಹಾಗೂ ಜೇಶ್ ಸಂಘಟನೆಯ ಕಮಾಂಡೋಗಳು ಬಲಿಯಾಗಿದ್ದಾರೆ ಎನ್ನಲಾಗಿದೆ.

    ಈ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಅಲಿಯಾಸ್ ಉಸ್ತಾದ್ ಘೋರಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

    ಉಸ್ತಾದ್ ಘೋರಿ ಯಾರು?:
    ಮಸೂದ್ ಅಜರ್ ಭಾಮೈದ ಯೂಸುಫ್ 1999ರಲ್ಲಿ ಇಂಡಿಯನ್ ಏರ್‌ಲೈನ್ಸ್‌ ವಿಮಾನ ಐಸಿ-814ರ ಹೈಜಾಕ್ ಪ್ರಕರಣದಲ್ಲಿ ಭಾಗಿಯಾಗಿದ್ದ. ಅಷ್ಟೇ ಅಲ್ಲದೆ ಪ್ರಮುಖ ಆರೋಪಗಳಿಂದ ಇಂಟರ್‍ಪೋಲ್‍ನ ಪಟ್ಟಿಸೇರಿದ್ದ.

    ಭಾರತದ ಸಿಬಿಐ 2000ರಲ್ಲಿ ಸಲ್ಲಿಸಿದ್ದ ಮನವಿಯಂತೆ ಇಂಟರ್‍ಪೋಲ್, ಯೂಸುಫ್ ವಿರುದ್ಧ ಕಳೆದ ವರ್ಷ ರೆಡ್ ಕಾರ್ನನ್ ನೋಟಿಸ್ ಹೊರಡಿಸಿತ್ತು. ಇಂಟರ್‍ಪೋಲ್, ಮಾಹಿತಿ ಪ್ರಕಾರ ಯೂಸುಫ್ ಪಾಕಿಸ್ತಾನ ಕರಾಚಿ ನಗರದವನಾಗಿದ್ದು, ಉರ್ದು, ಹಿಂದಿ, ಮತ್ತು ಪಾಕಿಸ್ತಾನಿ ಭಾಷೆ ಮಾತನಾಡಬಲ್ಲವನಾಗಿದ್ದ.

    ಯೂಸುಫ್ ಬಾಲಕೋಟ್‍ನಲ್ಲಿರುವ ಉಗ್ರ ತರಬೇತಿ ಶಿಬಿರದ ಮುಖ್ಯಸ್ಥನಾಗಿದ್ದ. ಈ ಶಿಬಿರವನ್ನೇ ಭಾರತೀಯ ವಾಯುಪಡೆ ಮಂಗಳವಾರದ ದಾಳಿಯಲ್ಲಿ ಧ್ವಂಸಗೊಳಿಸಿದೆ.

    ಮಸೂದ್ ಅಜರ್ ನನ್ನು ಭಾರತೀಯ ಸೇನೆಯಿಂದ ಬಿಡುಗಡೆಗೊಳಿಸಲು ಯೂಸುಫ್ ಸೇರಿದಂತೆ ಕೆಲ ಉಗ್ರರು, 1999ರಲ್ಲಿ ನೇಪಾಳದಿಂದ ಕಂದಹಾರ್ ಗೆ ಇಂಡಿಯನ್ ಏರ್‍ಲೈನ್ಸ್ ವಿಮಾನವನ್ನು ಅಪಹರಣ ಮಾಡಿದ್ದರು. ಪ್ರಯಾಣಿಕರ ಜೀವ ರಕ್ಷಿಸುವ ಉದ್ದೇಶದಿಂದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಜರ್ ಮಸೂದ್ ಸೇರಿದಂತೆ ಒಟ್ಟು ಮೂವರು ಉಗ್ರರನ್ನು ಬಿಡುಗಡೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ನವದೆಹಲಿ: ಭಾರತೀಯ ವಾಯು ಪಡೆ ದಾಳಿಗೆ ಯಾವುದೇ ಹಾನಿ ಸಂಭವಿಸಿಲ್ಲವೆಂದು ಪಾಕಿಸ್ತಾನ ಮೊಂಡುವಾದ ಮುಂದುವರಿಸಿತ್ತು. ಆದರೆ ಬಾಲಕೋಟ್ ನಿವಾಸಿಗಳು ಏರ್ ಸ್ಟ್ರೈಕ್‍ನಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳುವ ಮೂಲಕ ಪಾಕ್ ಮೊಂಡುವಾದವನ್ನು ಬಯಲು ಮಾಡಿದ್ದಾರೆ.

    ಯುದ್ಧದ ರೀತಿಯಲ್ಲಿ ಇಂದು 3 ಗಂಟೆ ಸುಮಾರು ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿ ಬಂತು. ಅದು ಹವಾಮಾನ ವೈಪರಿತ್ಯದಂತೆ ನಮ್ಮನ್ನು ತಲ್ಲಣಗೊಳಿಸಿತ್ತು. ಇದರಿಂದಾಗಿ ಇಡೀ ರಾತ್ರಿ ನಾವು ನಿದ್ರಿಸಲು ಸಾಧ್ಯವಾಗಲಿಲ್ಲ. ಶಬ್ಧ ಕೇಳಿಬಂದ 5 ರಿಂದ 10 ನಿಮಿಷದಲ್ಲಿ ಮೂರು ಸ್ಫೋಟಗಳು ಸಂಭವಿಸಿದವು. ಪರಿಣಾಮ ಕಟ್ಟಡಗಳು ನೆಲ ಸಮವಾದವು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದನ್ನು ನಾವು ನೋಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

    ಅಷ್ಟೇ ಅಲ್ಲದೆ ದಾಳಿಯ ಅವಶೇಷಗಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ. ಈ ಮೂಲಕ ದಾಳಿಯಿಂದ ಪಾಕಿಸ್ತಾನದ ಮೊಂಡುವಾದ ಬಯಲಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಗಫೂರ್, ಭಾರತದ ವಾಯು ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಹೇಳಿ ಮೊಂಡುತನ ಪ್ರದರ್ಶನ ಮಾಡಿದ್ದರು. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದರು. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ವಾಯುಸೇನೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ನವದೆಹಲಿ: ಉಗ್ರರ ವಿರುದ್ಧ ಹೋರಾಡಬೇಕಾದರೆ ನಮಗೆ ಸಾಕ್ಷ್ಯ ನೀಡಿ. ಪ್ರಬಲ ಸಾಕ್ಷ್ಯವನ್ನು ಕೊಟ್ಟರೆ ನಾವು ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಎಂದಿದ್ದ ಪಾಕಿಸ್ತಾನಕ್ಕೆ ಭಾರತ ಸಾಕ್ಷ್ಯ ಸಮೇತ ಉತ್ತರವನ್ನು ನೀಡಿದೆ.

    ಹೌದು. ಇಲ್ಲಿಯವರೆಗೆ ಭಾರತ ಮಾತಿನ ಮೂಲಕ ಪ್ರತಿಕ್ರಿಯೆ ನೀಡುತಿತ್ತು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮರ್ಯಾದೆಯನ್ನು ಕಳೆಯುವ ಪ್ರಯತ್ನವನ್ನು ನಡೆಸುತಿತ್ತು. ಉರಿ ಮತ್ತು ಪುಲ್ವಾಮಾ ದಾಳಿ ಬಳಿಕ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲಿದೆ ಎನ್ನುವುದನ್ನು ಮೊದಲೇ ಅರಿತ ಭಾರತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವಾಯುದಾಳಿ ನಡೆಸಿ ಪಾಕಿಸ್ತಾನಕ್ಕೆ ಶಾಕ್ ನೀಡಿದೆ.

    ಉಗ್ರರು ಒಳ ನುಸುಳುವ ಸಮಯದಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ದಾಳಿ ಆರಂಭಿಸುತ್ತದೆ. ಈ ವೇಳೆ ಭಾರತ ಸಹ ಪ್ರತಿದಾಳಿ ನಡೆಸುತ್ತದೆ. ಭಾರತ ಸೈನಿಕರ ಗಮನವನ್ನು ಸೆಳೆದು ಪಾಕಿಸ್ತಾನ ಉಗ್ರರು ಕಾಶ್ಮೀರ ಪ್ರವೇಶಿಸಲು ಸಹಾಯ ಮಾಡುತ್ತಿರುತ್ತದೆ. ಈ ವಿಚಾರ ಭಾರತಕ್ಕೆ ಗೊತ್ತಿದ್ದರೂ ದಾಳಿ ನಡೆಸಲು ಧೈರ್ಯ ತೋರಿರಲಿಲ್ಲ. ಆದರೆ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ಬಳಿಕ ಭಾರತೀಯರ ಆಕ್ರೋಶದ ಕಟ್ಟೆ ಒಡೆದಿತ್ತು. ಯಾವ ರೀತಿ ದಾಳಿ ನಡೆಸಿ ಉಗ್ರರನ್ನು ಹೆಡೆಮುರಿ ಕಟ್ಟಿ ಹಾಕುತ್ತಿರಿ ಎಂದು ಜನ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಜನರ ಆಕ್ರೋಶ ಕಟ್ಟೆ ಒಡೆಯುತ್ತಿದ್ದಂತೆ ಸರ್ಕಾರ ಉಗ್ರರನ್ನು ಹೀಗೆಯೇ ಬಿಟ್ಟರೆ ಆಗುವುದಿಲ್ಲ ಎಂದು ಅರಿತ ಗಡಿಯನ್ನು ದಾಟಿ ದಾಳಿ ನಡೆಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಇಂದು ಮುಹೂರ್ತ ಫಿಕ್ಸ್ ಮಾಡಿತ್ತು. ಈ ಪ್ಲಾನ್ ಯಶಸ್ವಿಯಾಗಿದ್ದು ಭಾರತ ತನ್ನ ಗಡಿಯನ್ನು ದಾಟಿ ದಾಳಿ ನಡೆಸಲು ತಯಾರಾಗುತ್ತಿದ್ದ ಉಗ್ರರನ್ನು ಅವರ ನೆಲದಲ್ಲೇ ಹತ್ಯೆ ಮಾಡಿ ತನ್ನ ಪರಾಕ್ರಮವನ್ನು ತೋರಿಸಿದೆ.

    ಕಾರಣ 1:
    ಬಾಲ್‍ಕೋಟ್ ನಲ್ಲಿ ಜೈಶ್-ಇ-ಮೊಹಮ್ಮದ್ (ಜೆಇಎಂ) ನ ದೊಡ್ಡ ತರಬೇತಿ ಶಿಬಿರವನ್ನು ವಾಯುಸೇನೆ ಬಾಂಬ್ ದಾಳಿ ನಡೆಸಿ ಧ್ವಂಸ ಮಾಡಿದೆ. ಈ ಹಿಂದೆ ಉರಿ ಸೇನಾ ನೆಲೆಯ ಮೆಲೆ ದಾಳಿ ನಡೆದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ಹೆಲಿಕಾಪ್ಟರ್ ಸಹಾಯದಿಂದ ನುಗ್ಗಿ ಭೂ ಸೇನೆಯ ಸೈನಿಕರು ಉಗ್ರರನ್ನು ಸಂಹಾರ ಮಾಡಿದ್ದರು. ಆದರೆ ಮೊದಲ ಬಾರಿಗೆ ವಾಯುಸೇನೆ ಬಾಂಬ್ ಬಳಸಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಮೌಲಾನಾ ಯೂಸುಫ್ ಅಝರ್ (ಅಲಿಯಾಸ್ ಉಸ್ತಾದ್ ಘೌರಿ), ಜೆಇಎಂ ಮುಖ್ಯಸ್ಥ ಮಸೂದ್ ಅಝರ್‍ನ ಸೋದರ ಸಂಬಂಧಿ ನಡೆಸುತ್ತಿದ್ದ ಬಾಲಕೋಟ್ ಅಡಗುದಾಣದ ಮೇಲೆಯೇ ದಾಳಿ ನಡೆದಿದೆ. ಮೂರು ದಾಳಿಯಲ್ಲಿ ಭಯೋತ್ಪಾದಕರು, ತರಬೇತುದಾರರು ಮತ್ತು ಹಿರಿಯ ಕಮಾಂಡರ್‍ಗಳು ಸೇರಿ ಒಟ್ಟು 350ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಭಾರತ ಪಾಕಿಸ್ತಾನ ಸೇರಿದಂತೆ ವಿಶ್ವಕ್ಕೆ ತನ್ನ ವಾಯುಸೇನೆಯ ಶಕ್ತಿಯನ್ನು ತೋರಿಸಿದೆ.

    ಕಾರಣ 2 :
    ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳ ಮೇಲೆ ದಾಳಿ ಭಾರತೀಯ ವಾಯುಸೇನೆ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದೆ. 1971 ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಇದೇ ರೀತಿಯ ದಾಳಿ ನಡೆದಿತ್ತು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲೂ ವಾಯುಸೇನೆಯ ವಿಮಾನ ಬಳಸಿ ದಾಳಿ ಮಾಡಲಾಗಿತ್ತು. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗಡಿ ನಿಯಂತ್ರಣ ರೇಖೆಯನ್ನು ದಾಟದಂತೆ ಸೂಚನೆ ಬಂದಿತ್ತು. ಆದರೆ ಈ ಬಾರಿ ಸೇನೆಗೆ ಸರ್ಕಾರ ಸಂಪೂರ್ಣ ಅನುಮತಿ ನೀಡಿತ್ತು. ಪುಲ್ವಾಮಾ ದಾಳಿ ಬಳಿಕ ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಭಾರತ ಗಡಿನಿಯಂತ್ರಣ ರೇಖೆಯನ್ನು ದಾಟಿ ನಮ್ಮ ನೆಲದ ಮೇಲೆ ಬಂದು ದಾಳಿ ಮಾಡಿದೆ ಎನ್ನುವುದನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ.

    ಕಾರಣ 3 :
    ಭಾರತ ಹೇಗೆ ಬಜೆಟ್ ನಲ್ಲಿ ಮಿಲಿಟರಿ ಶಕ್ತಿ ಹೆಚ್ಚಿನ ಹಣವನ್ನು ಮೀಸಲಿಡುತ್ತದೋ ಅದೇ ರೀತಿಯಾಗಿ ಪಾಕಿಸ್ತಾನ ಸಹ ಬಜೆಟ್‍ನಲ್ಲಿ ಹಣವನ್ನು ಮೀಸಲಿಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಪಾಕಿಸ್ತಾನ ಖರೀದಿಸಿದೆ. ಪುಲ್ವಾಮಾ ದಾಳಿ ಬಳಿಕ ಭಾರತ ಪ್ರತಿದಾಳಿ ನಡೆಸಲಿದೆ ಎನ್ನುವುದನ್ನು ಅರಿತ ಪಾಕಿಸ್ತಾನ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. ಈ ನಡುವೆ ಮೋದಿ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹಿಂದಿನ ಎಲ್ಲ ಬಾಕಿಗಳನ್ನು ತೀರಿಸಿಯೇ ತೀರಿಸುತ್ತೇವೆ ಎಂದು ಗುಡುಗಿದ್ದರು. ಹೀಗಾಗಿ ಪಾಕಿಸ್ತಾನ ತನ್ನ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿತ್ತು. ಇಷ್ಟೆಲ್ಲ ಅಲರ್ಟ್ ಘೋಷಿಸಿದರೂ ಭಾರತ ಮಂಗಳವಾರ ಬೆಳಗ್ಗೆ ಪಾಕ್ ಸೈನಿಕರ ಕಣ್ಣು ತಪ್ಪಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರಪಂಚವೇ ನಿಬ್ಬೆರಾಗುವಂತೆ ಮಾಡಿ ತನ್ನ ಶಕ್ತಿಯನ್ನು ತೋರಿಸಿದೆ.

    ಭಾರತದಿಂದ ಪ್ರತೀಕಾರದ ಮಾತು ಬರುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಾವು ಯಾವುದೇ ದಾಳಿ ಎದುರಿಸಲು ಸಿದ್ಧ ಎಂದು ಹೇಳಿದ್ದರು. ಕಳೆದ ಶುಕ್ರವಾರ ಪಾಕಿಸ್ತಾನದ ಸೇನೆಯ ವಕ್ತಾರ ಮೇಜರ್ ಜನರಲ್ ಗಫೂರ್ ಮಾತನಾಡಿ, ಪಾಕಿಸ್ತಾನದ ಸೇನಾ ಪಡೆಗಳು ನಿಮ್ಮಿಂದ ಎಂದಿಗೂ ಆಶ್ಚರ್ಯಪಡುವುದಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇವೆ. ನಾವು ನಿಮ್ಮನ್ನು ಅಚ್ಚರಿಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳಿಗೆ ಭಾರತ ತಲೆ ಕೆಡಿಸಿಕೊಳ್ಳದೇ ಪ್ಲಾನ್ ಮಾಡಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ.

    ಕಾರಣ 4 :
    ಭಾರತದ ಮೇಲೆ ನೇರವಾಗಿ ಯುದ್ಧ ಮಾಡಿದರೆ ನಮಗೆ ಸೋಲು ಖಚಿತ ಎನ್ನುವುದು ಪಾಕಿಸ್ತಾನಕ್ಕೆ ಗೊತ್ತಿದೆ. ಹೀಗಾಗಿ ಅದು ಉಗ್ರರನ್ನು ಛೂ ಬಿಡುವ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡುತ್ತಿದೆ. ಉರಿ ದಾಳಿ ಬಳಿಕವೇ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉತ್ತರ ನೀಡಿ ಭಯೋತ್ಪಾದನೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿತ್ತು. ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತೊಂದು ದಾಳಿ ನಡೆಸಬಹುದು ಎಂದು ಪಾಕಿಸ್ತಾನ ತನ್ನ ಗಡಿಯಲ್ಲಿದ್ದ ಉಗ್ರರ ಕೇಂದ್ರಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಿತ್ತು. ಪಾಕ್ ಈ ಉಗ್ರರನ್ನು ಕಾಪಾಡುತ್ತಿದ್ದರೂ ಭಾರತ ಈಗ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ. ಇಲ್ಲಿಯವರೆಗೆ ಉಗ್ರರ ವಿಚಾರದಲ್ಲಿ ನಾವು ಕಟು ಮಾತಿನಲ್ಲಿ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದರೆ ಈಗ ನಮ್ಮಲ್ಲಿರುವ ರಕ್ಷಣಾ ಪಡೆಗಳ ಮೂಲಕ ಪ್ರತಿ ಉತ್ತರ ನೀಡುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ಬಾಲಕೋಟ್: ಭಾರತದ ವಾಯು ಸೇನೆಯ ದಾಳಿಗೆ ಒಳಗಾದ ಬಾಲಕೋಟ್ ನಿವಾಸಿಗಳು ಇಂದು ಬೆಳಗಿನ ಜಾವದ ಅನುಭವವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಯುದ್ಧ ವಿಮಾನಗಳ ಹಾರಾಟದ ಸದ್ದು ಜೋರಾಗಿದ್ದರಿಂದ ಅಲ್ಲಿಯ ನಿವಾಸಿಗಳು ನಿದ್ದೆಯಿಂದ ಎದ್ದು ಭಯದಲ್ಲಿ ಕಾಲ ಕಳೆದಿದ್ದಾರೆ.

    ಬೆಳಗಿನ ಜಾವ 3 ಗಂಟೆಗೆ ದೊಡ್ಡ ದೊಡ್ಡ ಸದ್ದುಗಳು ಕೇಳುತ್ತಿತ್ತು. ಮೊದಲಿಗೆ ವಿಮಾನಗಳು ಹಾರಾಟ ಎಂದು ನಿರ್ಲಕ್ಷ್ಯ ಮಾಡಲಾಗಿತ್ತು. ಸಮಯ ಕಳೆದಂತೆ ವಿಮಾನಗಳ ಸದ್ದು ಹೆಚ್ಚಾಗತೊಡಗಿತು. ಭಯದಿಂದ ರಾತ್ರಿ ನಿದ್ದೆಯ ಮಾಡಲಿಲ್ಲ. ಕೊನೆಗೆ ದಿಢೀರ್ ಅಂತಾ ಎಲ್ಲ ಶಬ್ಧ ನಿಂತು ಹೋಯ್ತು. ಬಾಲಕೋಟ್ ಬಳಿಯ ಕಂಗಡ್ ಎಂಬಲ್ಲಿ ಬಾಂಬ್ ಹಾಕಲಾಗಿದೆ ಎಂದು ಅಲ್ಲಿಯ ನಮ್ಮ ಸಂಬಂಧಿಕರು ತಿಳಿಸಿದರು ಎಂದು ಬಾಲಕೋಟ್ ನಿವಾಸಿ ಮೊಹಮ್ಮದ್ ಆದಿಲ್ ಹೇಳಿದ್ದಾರೆ.

    ಬೆಳಗ್ಗೆ ನಾವೆಲ್ಲ ಕಂಗಡ್ ಪ್ರದೇಶಕ್ಕೆ ಹೋದಾಗ ಅಲ್ಲಿ ದೊಡ್ಡ ಕಂದಕಗಳು ಉಂಟಾಗಿದ್ದವು. ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ಓರ್ವ ಗಾಯಗೊಂಡಿದ್ದನು ಎಂದು ತಾವು ನೋಡಿದ್ದನ್ನು ಮೊಹಮ್ಮದ್ ಆದಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಬೆಳಗಿನ ಜಾವ ಮೂರು ಗಂಟೆಯಿಂದ ಆಗಸದಲ್ಲಿ ವಿಮಾನಗಳ ಹಾರಾಟ ಹೆಚ್ಚಾಯ್ತು. ಮೊದಲಿಗೆ ಗುಂಡು ಹಾರುವ ಸದ್ದು ಕೇಳಿತು. ಇದಾದ ಕೆಲವೇ ನಿಮಿಷಗಳಲ್ಲಿ ಮೂರು ಬಾರಿ ದೊಡ್ಡ ಶಬ್ಧ ಕೇಳಿಸಿತು. ಮೂರನೇ ಬಾರಿಗೆ ದೊಡ್ಡ ಸದ್ದು ಕೇಳಿದ ಕೂಡಲೇ ಎಲ್ಲವೂ ಶಾಂತವಾಯ್ತು ಎಂದು ಬಾಲಕೋಟ್‍ನ ಮತ್ತೋರ್ವ ನಿವಾಸಿ ವಾಜಿದ್ ಶಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

    https://www.youtube.com/watch?v=rfZHzL93mzs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv