Tag: ಸರ್ಜಿಕಲ್ ಸ್ಟ್ರೈಕ್

  • ಭಾರತದ 3ನೇ ಸರ್ಜಿಕಲ್ ಸ್ಟ್ರೈಕ್ – ಉಗ್ರರ ಕೇಂದ್ರಗಳು ಉಡೀಸ್

    ಭಾರತದ 3ನೇ ಸರ್ಜಿಕಲ್ ಸ್ಟ್ರೈಕ್ – ಉಗ್ರರ ಕೇಂದ್ರಗಳು ಉಡೀಸ್

    – ಭಾರತ, ಮ್ಯಾನ್ಮಾರ್ ಸೇನೆಯ ಜಂಟಿ ಕಾರ್ಯಾಚರಣೆ
    – 12ಕ್ಕೂ ಹೆಚ್ಚು ಕೇಂದ್ರಗಳು ಧ್ವಂಸ

    ನವದೆಹಲಿ: ಭಾರತ, ಮ್ಯಾನ್ಮಾರ್ ಸೇನೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಿಜೋರಾಂ ಗಡಿ ಪ್ರದೇಶದಲ್ಲಿ ನಿರ್ಮಾಣವಾಗಿದ್ದ 12ಕ್ಕೂ ಹೆಚ್ಚು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ಮೂಲಕ 3ನೇ ಸರ್ಜಿಕಲ್ ಸ್ಟ್ರೈಕನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ಹೌದು. ಇಡೀ ವಿಶ್ವವೇ ಭಾರತದ ವಾಯುಪಡೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯ ನಂತರದ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಇತ್ತ ಭಾರತದ ಸೇನೆ ಮತ್ತೊಂದು ಸರ್ಜಿಕಲ್ ಸ್ಟ್ರೈಕನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

    ಫೆ.17 ಮತ್ತು ಮಾರ್ಚ್ 2ರ ಅವಧಿಯಲ್ಲಿ ಈ ದಾಳಿ ನಡೆಸಲಾಗಿದ್ದು, ಮ್ಯಾನ್ಮಾರ್ ನಲ್ಲಿ ತಲೆ ಎತ್ತಿದ್ದ ಅರಾಕನ್ ಆರ್ಮಿ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಅರಾಕನ್ ಆರ್ಮಿಗೆ ಕಚಿನ್ ಇಂಡಿಪೆಂಡೆನ್ಸ್ ಆರ್ಮಿ(ಕೆಐಎ) ಬೆಂಬಲ ನೀಡಿತ್ತು. ಈ ಎರಡು ಉಗ್ರ ಸಂಘಟನೆಗಳು ಮ್ಯಾನ್ಮರ್ ನಲ್ಲಿ ವಿಧ್ವಸಂಕ ಕೃತ್ಯಗಳನ್ನು ನಡೆಸುತ್ತಿದ್ದವು.

    ಅರಾಕನ್ ಸಂಘಟನೆ ಭಾರತದ ಕೇಂದ್ರ ಸರ್ಕಾರ ಪೂರ್ವ ರಾಷ್ಟ್ರಗಳ ಅಭಿವೃದ್ಧಿಗೆ ಜಾರಿ ಮಾಡಿದ್ದ ಮೆಗಾ ಕಲಾಡನ್ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಕೋಲ್ಕತ್ತಾದಿಂದ ಮಿಜೋರಾಂವರೆಗೂ ಉತ್ತಮ ಸಾರಿಗೆ, ಸಂಪರ್ಕದ ಅಭಿವೃದ್ಧಿಯ ಯೋಜನೆ ಆಗಿದೆ. ಭಾರತ ಯೋಜನೆಯನ್ನು ತಡೆಯಲು ಅರಾಕನ್ ಉಗ್ರರು ದೇಶದೊಳಗೆ ನುಸುಳಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಆಧಾರಿಸಿ ಭಾರತ ಈ ಕಾರ್ಯಾಚರಣೆಯನ್ನು ನಡೆಸಿದೆ. ಚೀನಾದ ಗಡಿ ಪ್ರದೇಶದಿಂದ ಭಾರತಕ್ಕೆ ನುಸುಳಲು ಉಗ್ರರು ಸ್ಕೆಚ್ ರೂಪಿಸಿದ್ದರು. ಈ ಬಗ್ಗೆ ಭಾರತದ ಗುಪ್ತಚರ ಇಲಾಖೆಗೆ ಖಚಿತ ಲಭ್ಯವಾಗಿತ್ತು.

    ಕಾರ್ಯಾಚರಣೆಯ ಮೊದಲ ಭಾಗವಾಗಿ ಮಿಜೋರಾಂ ಗಡಿ ಪ್ರದೇಶದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಉಗ್ರರ ನೆಲೆಗಳನ್ನು ನಾಶ ಪಡಿಸಲಾಗಿದೆ. ಬಳಿಕ ನಾಗಾ ಉಗ್ರರ ಕೇಂದ್ರಗಳನ್ನು ಧ್ವಂಸ ಮಾಡಲಾಗಿದೆ. ಅರುಣಾಚಲ ಪ್ರದೇಶದಿಂದ 1 ಸಾವಿರ ಕಿಮೀ ದೂರದಲ್ಲಿದ್ದ ಉಗ್ರರ ಕೇಂದ್ರಗಳನ್ನು ನಾಶ ಪಡಿಸಲಾಗಿದೆ. 2 ವಾರದ ಕಾಲ ನಡೆದ ಈ ಆಪರೇಷನ್ ಮಾರ್ಚ್ 2 ರಂದು ಅಂತ್ಯವಾಗಿದೆ.

    ಭಾರತ ಸೇನೆಯ ವಿಶೇಷ ದಳಗಳು, ಅಸ್ಸಾಂ ರೈಫಲ್ಸ್ ಹಾಗೂ ಮ್ಯಾನ್ಮಾರ್ ಸೇನೆಯನ್ನು ಬಳಕೆ ಮಾಡಲಾಗಿದೆ. ಕಾರ್ಯಾಚರಣೆಗೆ ಹೆಲಿಕಾಪ್ಟರ್, ಡ್ರೋನ್ ಮತ್ತು ಕಣ್ಗಾವಲು ಸಾಧನಗಳನ್ನು ಕೂಡ ಬಳಕೆ ಮಾಡಲಾಗಿದೆ.

    ಅರಾಕನ್ ಆರ್ಮಿ ಉತ್ತಮ ತರಬೇತಿ ಪಡೆದ ಉಗ್ರರ ಗುಂಪಾಗಿದ್ದು, ಸುಧಾರಿತ ಸ್ಫೋಟಕಗಳನ್ನು ಬಳಸಿ ಕೃತ್ಯ ನಡೆಸುತಿತ್ತು. ಈ ಉಗ್ರ ಸಂಘಟನೆ ಮ್ಯಾನ್ಮಾರ್, ಭಾರತದ ತಲೆನೋವಿಗೆ ಕಾರಣವಾಗಿತ್ತು. ಮ್ಯಾನ್ಮಾರ್ ಸರ್ಕಾರ ನೀಡಿದ್ದ ಮಾಹಿತಿ ಆಧಾರಿಸಿ ಭಾರತ ಉಗ್ರರನ್ನು ಹೊಡೆದುರಳಿಸಿದೆ. ಕಾರ್ಯಾಚರಣೆಯಲ್ಲಿ 12ಕ್ಕೂ ಹೆಚ್ಚು ಉಗ್ರರ ಅಡಗುತಾಣಗಳು ನಾಶವಾಗಿರುವುದು ಖಚಿತವಾಗಿದೆ.

    ಮ್ಯಾನ್ಯಾರ್ ಮತ್ತು ಚೀನಾದ ಗಡಿಯನ್ನು ಹೊಂದಿರುವ ಕಚೀನ್ ರಾಜ್ಯದಲ್ಲಿ ಅರಾಕನ್ ಅರ್ಮಿ ಸಂಘಟನೆ ಹೆಚ್ಚು ಸಕ್ರಿಯವಾಗಿದೆ. ಚೀನಾ ಕೆಐಎ ಸಂಘಟನೆ ಕಳೆದ ಎರಡು ವರ್ಷಗಳಲ್ಲಿ 3000 ಅರಾಕನ್ ಉಗ್ರರಿಗೆ ತರಬೇತಿ ನೀಡಿದೆ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಂಗ್ಲಾ ಯುದ್ಧದಲ್ಲಿ ಪಾಕ್ ಶರಣಾಗಿದ್ದು ಗೊತ್ತಿಲ್ವ, ಅದಕ್ಕಿಂತ್ಲೂ ದೊಡ್ಡದಾ ಈ ಸರ್ಜಿಕಲ್ ಸ್ಟ್ರೈಕ್: ಮಾಜಿ ಸಿಎಂ

    ಬಾಂಗ್ಲಾ ಯುದ್ಧದಲ್ಲಿ ಪಾಕ್ ಶರಣಾಗಿದ್ದು ಗೊತ್ತಿಲ್ವ, ಅದಕ್ಕಿಂತ್ಲೂ ದೊಡ್ಡದಾ ಈ ಸರ್ಜಿಕಲ್ ಸ್ಟ್ರೈಕ್: ಮಾಜಿ ಸಿಎಂ

    – ಕಾಂಗ್ರೆಸ್ ಅವಧಿಯಲ್ಲಿ 10-15 ಸರ್ಜಿಕಲ್ ಸ್ಟ್ರೈಕ್
    – ಭಾವನಾತ್ಮಕ ವಿಚಾರ ಮುಂದಿಟ್ಟು ಬಿಜೆಪಿಯಿಂದ ರಾಜಕೀಯ

    ಮೈಸೂರು: ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ಗೊತ್ತಿಲ್ಲವಾ. ಅದಕ್ಕಿಂತಲು ದೊಡ್ಡದಾ ಈ ಸರ್ಜಿಕಲ್ ಸ್ಟ್ರೈಕ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, “ಬಿಜೆಪಿ ಅವರು ರಾಜಕೀಯ ಲಾಭಕ್ಕೆ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಯಾರೂ ಕೂಡ ರಾಷ್ಟ್ರೀಯ ಭದ್ರತೆ ಬಗ್ಗೆ ಯಾರೂ ರಾಜಕೀಯ ಲಾಭ ಪಡೆದುಕೊಳ್ಳಬಾರದು. ಹಾಗೇ ಲೆಕ್ಕ ಹಾಕಿದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 11-12 ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು” ಎಂದು ಹೇಳಿದ್ದಾರೆ.

    ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಬಾಂಗ್ಲಾ ಯುದ್ಧದಲ್ಲಿ ಪಾಕಿಸ್ತಾನ ಶರಣಾಗಿದ್ದು ಗೊತ್ತಿಲ್ಲವಾ. ಅದಕ್ಕಿಂತಲು ದೊಡ್ಡದಾ ಈ ಸರ್ಜಿಕಲ್ ಸ್ಟೈಕ್. ನಾವು ದೇಶದ ರಕ್ಷಣೆ ವಿಚಾರದಲ್ಲಿ ಕಾಂಗ್ರೆಸ್ ಯಾವತ್ತು ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಬಿಜೆಪಿ ಅವರಿಗೆ ಬುದ್ಧಿ ಇಲ್ಲ. ಏಕೆಂದರೆ ಅವರು ಇದರಲ್ಲಿ ಲಾಭ ಪಡೆಯುತ್ತಿದ್ದಾರೆ ಎಂದು ದೂರಿದರು.

    ಬಿಜೆಪಿಯವರು ಯಾವತ್ತು ಅಭಿವೃದ್ಧಿ ವಿಚಾರದಲ್ಲಿ ರೈತರ ವಿಚಾರಲ್ಲಿ ಮತ ಕೇಳಿದ್ದಾರೆ?. ಭಾವನಾತ್ಮಕ ವಿಚಾರ ಇಟ್ಟುಕೊಂಡು ಅವರು ರಾಜಕಾರಣ ಮಾಡುತ್ತಾರೆ. ಈ ಬಾರಿ ಅವರು ಯಾವ ಅಭಿವೃದ್ಧಿಯನ್ನು ಮಾಡಿಲ್ಲ. ಹೀಗಾಗಿ ಈ ವಿಚಾರ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ನಿಂದ ತಮಗೆ ಲಾಭವಾಗಿದೆ ಎಂದು ಬಿಜೆಪಿ ಬಿಂಬಿಸಿಕೊಳ್ಳುತ್ತಿದೆ. ಆದರೆ ಸರ್ಜಿಕಲ್ ಸ್ಟ್ರೈಕ್ ಮೊದಲು ಮೋದಿ ಹವಾ ಬಿದ್ದು ಹೋಗಿತ್ತಾ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬದ್ರಿ ವರ್ಸಸ್ ಮಧುಮತಿ: ಇದರಲ್ಲಿದೆ ಮೈನವಿರೇಳಿಸೋ ಸರ್ಜಿಕಲ್ ಸ್ಟ್ರೈಕ್!

    ಬದ್ರಿ ವರ್ಸಸ್ ಮಧುಮತಿ: ಇದರಲ್ಲಿದೆ ಮೈನವಿರೇಳಿಸೋ ಸರ್ಜಿಕಲ್ ಸ್ಟ್ರೈಕ್!

    ಪಾಕಿಸ್ತಾನ ಪ್ರಣೀತ ಪಾಪಿ ಉಗ್ರರು ಪುಲ್ವಾಮಾ ದಾಳಿಯಲ್ಲಿ ನಮ್ಮ ಸೈನಿಕರನ್ನು ಬಲಿ ಪಡೆದ ನಂತರ ದೇಶದ ಜನರ ರಕ್ತ ಕುದಿಯಲಾರಂಭಿಸಿದೆ. ಭಾರತೀಯ ಸೈನಿಕರು ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರ ನೆಲೆಗಳನ್ನು ನಿರ್ನಾಮ ಮಾಡಿದ್ದಾರೆ. ಈ ಕುರಿತಾಗಿ ಸಿನಿಮಾಗಳನ್ನು ಮಾಡಲೂ ಪೈಪೋಟಿ ನಡೆದಿದೆ.

    ಆದರೆ ಈ ದಾಳಿಗೂ ತಿಂಗಳುಗಳ ಮುಂಚೆಯೇ ಈ ಚಿತ್ರಕ್ಕಾಗಿ ಸರ್ಜಿಕಲ್ ಸ್ಟ್ರೈಕ್ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು. ಇದುವೇ ಈ ಚಿತ್ರದ ಪ್ರಮುಖ ಆಕರ್ಷಣೆ. ಈ ಸರ್ಜಿಕಲ್ ಸ್ಟ್ರೈಕ್ ದೃಶ್ಯಾವಳಿಗಳು ಈಗಿನ ಸನ್ನಿವೇಶಕ್ಕೆ ಕನೆಕ್ಟ್ ಆಗುವಂತಿವೆಯಂತೆ. ನೋಡಿದ ಪ್ರತಿಯೊಬ್ಬರೂ ರೋಮಾಂಚನಗೊಳ್ಳುವ ರೀತಿಯಲ್ಲಿದು ಮೂಡಿ ಬಂದಿದೆಯಂತೆ.

    ಸರ್ಜಿಕಲ್ ಸ್ಟ್ರೈಕ್ ದೃಶ್ಯಾವಳಿಗಳು ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಕಾರಣರಾಗಿರುವವರು ಸಾಹಸ ನಿರ್ದೇಶಕ ವಿಕ್ರಂ. ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಕೆಜಿಎಫ್ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದವರು ಇದೇ ವಿಕ್ರಂ. ಅವರು ಭಿನ್ನವಾಗಿ, ಹೊಸತನದೊಂದಿಗೆ ಸರ್ಜಿಕಲ್ ಸ್ಟ್ರೈಕ್ ಮತ್ತು ಇನ್ನೊಂದು ಸಾಹಸ ದೃಶ್ಯಾವಳಿಯನ್ನು ನಿರ್ದೇಶನ ಮಾಡಿದ್ದಾರಂತೆ.

    ಹಾಗಾದರೆ ಇಡೀ ಚಿತ್ರದುದ್ದಕ್ಕೂ ಸೈನ್ಯದ, ಯುದ್ಧದ ಸನ್ನಿವೇಶಗಳಿವೆಯಾ ಎಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ ಈ ಚಿತ್ರದಲ್ಲಿ ಪ್ರೀತಿ, ಫ್ಯಾಮಿಲಿ, ಸೆಂಟಿಮೆಂಟ್, ಹಾಸ್ಯ, ಸಾಹಸ ಸೇರಿದಂತೆ ಎಲ್ಲ ರಸಗಳ ರಸಾಯನವೂ ಸವಿಯಲು ಸಿಗುತ್ತೆ. ಅದು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳಲಿದೆ ಅನ್ನೋದು ಚಿತ್ರತಂಡದ ಭರವಸೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾಂಗ್ರೆಸ್ ಅವಧಿಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ನಡೆದಿದೆ: ಅಶೋಕ್ ಗೆಹ್ಲೋಟ್

    ಕಾಂಗ್ರೆಸ್ ಅವಧಿಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ನಡೆದಿದೆ: ಅಶೋಕ್ ಗೆಹ್ಲೋಟ್

    ನವದೆಹಲಿ: ಕಾಂಗ್ರೆಸ್ ಅವಧಿಯಲ್ಲಿ 15 ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು ದೇಶದ ಜನ ಮುಗ್ಧರು. ಜನ ಮೋದಿ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎಂದು ಭಾವಿಸಿದ್ದಾರೆ. ಆದರೆ ಈ ಹಿಂದೆ 15 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಆದರೆ ಕಾಂಗ್ರೆಸ್ ಇದನ್ನು ಯಾವತ್ತೂ ಹೇಳಿಕೊಂಡಿರಲಿಲ್ಲ ಎಂದು ತಿಳಿಸಿದರು.

    ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಅದಕ್ಕೆ ಹೆಚ್ಚು ಪ್ರಚಾರ ಕೊಡುವುದು ಸರಿಯಲ್ಲ ಎಂದು ಗೆಹ್ಲೋಟ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಮೋದಿ ಬಂದ ನಂತರ ಭಾರತದಲ್ಲಿ ಉಪಗ್ರಹ ಉಡಾವಣೆಯಾಗುತ್ತಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಇಂದಿರಾ ಗಾಂಧಿ ಅವಧಿಯಲ್ಲಿ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು ಎಂದು ತಿಳಿಸಿದರು.

    ನೆಹರು ಅವರು ಸ್ವಾತಂತ್ರ್ಯದ ಅವಧಿಯಲ್ಲಿ 12 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಆದರೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ನವರು ನೆಹರು ವಂಶದ ವಿರುದ್ಧ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿದ್ದಾರೆ ಎಂದು ಕಿಡಿಕಾರಿದರು.

    ನರೇಂದ್ರ ಮೋದಿ ಅವರು ಬಾಲಿವುಡ್ ನಲ್ಲಿ ನಟನಾಗಬಹುದು. 2014ರ ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಬಿಜೆಪಿ ಮರೆತಿದೆ. ಕಪ್ಪುಹಣ ತರಲಿಲ್ಲ. 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ. ಮೇಕ್ ಇನ್ ಇಂಡಿಯಾ ಪೇಪರ್ ನಲ್ಲಿ ಮಾತ್ರ ಇದೆ. ಸ್ಮಾರ್ಟ್‍ಸಿಟಿಯನ್ನು ಜನ ನೋಡಿಲ್ಲ ಎಂದು ಗೆಹ್ಲೋಟ್ ದೂರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸಾಕ್ಷಿ ಕೇಳುವವರನ್ನು ಏರ್ ಸ್ಟ್ರೈಕ್ ನಡೆದ ಸ್ಥಳಕ್ಕೆ ಒಯ್ದು ಒಗೆಯಿರಿ: ಯತ್ನಾಳ್ ಕಿಡಿ

    ಸಾಕ್ಷಿ ಕೇಳುವವರನ್ನು ಏರ್ ಸ್ಟ್ರೈಕ್ ನಡೆದ ಸ್ಥಳಕ್ಕೆ ಒಯ್ದು ಒಗೆಯಿರಿ: ಯತ್ನಾಳ್ ಕಿಡಿ

    ವಿಜಯಪುರ: ಪಾಕಿಸ್ತಾನದ ಉಗ್ರರ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿರುವುದಕ್ಕೆ ಸಾಕ್ಷಿ ಕೇಳುತ್ತಿರುವ ಪ್ರತಿಪಕ್ಷ ನಾಯಕರನ್ನು ಹೆಲಿಕಾಪ್ಟರ್ ನಲ್ಲಿ ಕರೆದೊಯ್ದು, ದಾಳಿ ನಡೆದ ಸ್ಥಳಕ್ಕೆ ಬಿಟ್ಟುಬನ್ನಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಪಕ್ಷ ನಾಯಕರಿಗೆ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೋದಿ ಹಾಗೂ ಭಾರತೀಯ ವಾಯುಪಡೆಯು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡು ಸರ್ಜಿಕಲ್ ಸ್ಟ್ರೈಕ್ ಮಾಡಿದೆ. ಆದ್ರೆ ಈ ಏರ್ ಸ್ಟ್ರೈಕ್‍ಗೆ ಸಾಕ್ಷಿ ಕೇಳುವವರನ್ನು ದಾಳಿ ನಡೆದ ಸ್ಥಳದಲ್ಲಿ ಒಯ್ದು ಒಗೆಯಿರಿ. ಅವರು ಅಲ್ಲಿಯೇ ಭಾರತೀಯ ಸೇನೆಯ ಪರಾಕ್ರಮ ವೀಕ್ಷಿಸಲಿ. ಅಲ್ಲಿಯೇ ಎಷ್ಟು ಜನ ಮೃತಪಟ್ಟರು, ಯಾವ ಬಾಂಬ್ ಹಾಕಲಾಗಿದೆ ಅಂತ ನೋಡಿ ಬರಲಿ ಎಂದು ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ದೆಹಲಿ ಸಿಎಂ ಕೇಜ್ರೀವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಎಸ್‍ಪಿ ನಾಯಕಿ ಮಾಯಾವತಿ ಹೆಸರು ಹೇಳಿ ಪ್ರತಿಪಕ್ಷ ನಾಯಕರ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ಸಂಭ್ರಮಾಚರಣೆ ಕುರಿತು ಸಿಎಂ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಭಾರತೀಯರು ಆಟದಲ್ಲಿ ಗೆದ್ದಾಗ ಅಥವಾ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗ ಸಂಭ್ರಮಿಸಬಾರದಾ? ಸೀತಾರಾಮ ಕಲ್ಯಾಣ ಸಿನಿಮಾ ನೋಡಿ ಸಂಭ್ರಮಿಸಬೇಕಾ? ಎಂದು ಸಿಎಂಗೆ ತಿರುಗೇಟು ನೀಡಿದರು.

    ಈಗ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದಾರೆ. ಅವರು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲಿದ್ದಾರೆ. ನೋಡುತ್ತಿರಿ ಕಾಂಗ್ರೆಸ್ ಜೆಡಿಎಸ್ ಮನೆ ಖಾಲಿಯಾಗಲಿವೆ ಎಂದು ಮೈತ್ರಿ ಸರ್ಕಾರದ ಬಗ್ಗೆ ಯತ್ನಾಳ್ ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸ್ಟ್ರೈಕ್‍ನಲ್ಲಿ ಹೆಚ್ಚಿನ ಹಾನಿ ಆಗಿಲ್ಲ: ಕೇಂದ್ರ ಸಚಿವ ಅಹ್ಲುವಾಲಿಯಾ

    ಏರ್ ಸ್ಟ್ರೈಕ್‍ನಲ್ಲಿ ಹೆಚ್ಚಿನ ಹಾನಿ ಆಗಿಲ್ಲ: ಕೇಂದ್ರ ಸಚಿವ ಅಹ್ಲುವಾಲಿಯಾ

    ನವದೆಹಲಿ: ಬಾಲಕೋಟ್‍ನಲ್ಲಿ ನಡೆದ ವಾಯುದಾಳಿಯಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಎಸ್.ಎಸ್ ಅಹ್ಲುವಾಲಿಯಾ ಹೇಳಿಕೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.

    ಕೇಂದ್ರ ಸರ್ಕಾರ ವಾಯುದಾಳಿಯಲ್ಲಿ ಯಾವುದೇ ಸಾವನ್ನು ಬಯಸಲಿಲ್ಲ. ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿ ಉಗ್ರರ ನೆಲಗಳನ್ನು ಧ್ವಂಸ ಮಾಡಲು ನಾವು ಸಮರ್ಥರಿದ್ದಾರೆ ಎಂದು ತೋರಿಸಿಕೊಡಲು ಏರ್ ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

    ನಮ್ಮ  ಶಕ್ತಿ, ಸಾಮರ್ಥ್ಯದ ಪ್ರದರ್ಶನಕ್ಕೆ ಈ ದಾಳಿ ಮಾಡಲಾಗಿದೆ. ನಾನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮವನ್ನು ನೋಡಿದ್ದೇನೆ. ಏರ್ ಸ್ಟ್ರೈಕ್ ನಡೆದ ಬಳಿಕ ನರೇಂದ್ರ ಮೋದಿ ಅವರು ರಾಜಸ್ಥಾನದ ಚುರುವಿನಲ್ಲಿ ಮಾಡಿದ ಭಾಷಣವನ್ನು ಕೇಳಿದ್ದೇನೆ. ಈ ವೇಳೆ 300 ಮಂದಿ ಹತ್ಯೆಯಾಗಿದ್ದಾರೆ ಎಂದು ಹೇಳಿದ್ದಾರಾ? ಯಾರಾದರೂ ವಕ್ತಾರರು ಹೇಳಿದ್ದಾರಾ? ಅಮಿತ್ ಶಾ ಹೇಳಿದ್ದಾರಾ ಎಂದು ಅಹ್ಲುವಾಲಿಯಾ ಪ್ರಶ್ನಿಸಿದರು.

    ಈ ಹಿಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಂಗಳವಾರದಂದು ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ತಿಳಿಸಿಲ್ಲ. ಏರ್ ಸ್ಟ್ರೈಕ್  ಬಗ್ಗೆ ನಾವು ಮಾಧ್ಯಮಗಳನ್ನು ನೋಡಿ ಮಾಹಿತಿ ಪಡೆದಿದ್ದೇವೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸಿದ್ದರು.

    ಜೈಷ್ ಉಗ್ರರ ನೆಲೆಯಾದ ಬಾಲಕೋಟ್ ನಲ್ಲಿ ನಡೆದ ವಾಯು ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.

  • ಪಾಕ್ ಸೇನೆಯಿಂದ ಮಾನಸಿಕ ಕಿರುಕುಳ – ಅಭಿನಂದನ್ ಮುಂದೇನು..?

    ಪಾಕ್ ಸೇನೆಯಿಂದ ಮಾನಸಿಕ ಕಿರುಕುಳ – ಅಭಿನಂದನ್ ಮುಂದೇನು..?

    – ಇಂದಿನಿಂದ ನಾಲ್ಕು ದಿನಗಳ ಕಾಲ ಡಿ-ಬ್ರೀಫಿಂಗ್
    – ವೈದ್ಯಕೀಯ ಪರೀಕ್ಷೆ ವೇಳೆ ಆಘಾತಕಾರಿ ಅಂಶ ಬಯಲು

    ನವದೆಹಲಿ: ಪಾಕಿಸ್ತಾನದ ಸೈನಿಕರ ವಶದಲ್ಲಿದ್ದರೂ ಭಾರತದ ಬಗೆಗಿನ ರಹಸ್ಯ ಬಾಯ್ಬಿಡದ ಕೆಚ್ಚೆದೆಯ ವೀರ ಅಭಿನಂದನ್ ಅವರನ್ನು ಮಾನಸಿಕವಾಗಿ ಸಾಕಷ್ಟು ಹಿಂಸಿಸಲಾಗಿತ್ತು ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ.

    ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡುವ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಪಾಕ್ ಸೇನಾಧಿಕಾರಿಗಳು ಮಾನಸಿಕವಾಗಿ ಕಿರುಕುಳ ನೀಡಿ, ಬಲವಂತವಾಗಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎನ್ನುವ ವಿಚಾರ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಪಾಕ್ ಏನು ಕೇಳಿತ್ತು?
    ಭಾರತದ ಯೋಜನೆಗಳ ಕುರಿತಂತೆ, ವೈಯಕ್ತಿಕ ವಿಚಾರಗಳ ಬಗ್ಗೆ ಮಾಹಿತಿ ನೀಡುವಂತೆ ಗೆ ಪಾಕ್ ಸೇನಾಧಿಕಾರಿಗಳು ಮಾನಸಿಕವಾಗಿ ಒತ್ತಡ ಹೇರಿ ಕಿರುಕುಳ ನೀಡಿದ್ದರು ಎಂದು ಅಭಿನಂದನ್ ತಿಳಿಸಿದ್ದಾರೆ ಎನ್ನಲಾಗಿದೆ. ಅಭಿನಂದನ್ ದೆಹಲಿಯ ಆರ್ಮಿ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂಲಗಳ ಪ್ರಕಾರ ಅಭಿನಂದನ್ ಪಾಕಿಸ್ತಾನದ ಸೈನ್ಯದ ಸೆರೆಯಲ್ಲಿದ್ದಾಗ ಪಕ್ಕೆಲುಬು ಮುರಿದಿದೆ. ಮೂಗಿಗೆ ಏಟು ಬಿದ್ದಿದೆ ಮತ್ತು ಹಿಂಸೆಗೆ ಒಳಗಾಗಿರುವುದು ಆಸ್ಪತ್ರೆಯ ವೈದ್ಯಕೀಯ ತಪಾಸಣೆ ವೇಳೆ ಬೆಳಕಿಗೆ ಬಂದಿದೆ. ಅಭಿನಂದನ್‍ರನ್ನು ಇನ್ನೂ ಎರಡು ದಿನ ಆಸ್ಪತ್ರೆಯಲ್ಲಿ ಅಬ್ಸರ್ವೇಶನ್‍ನಲ್ಲಿ ಇಡಲಾಗುತ್ತದೆ.

    ಅಭಿನಂದನ್ ಮುಂದೇನು?
    ಇಂದು ವಿಶ್ರಾಂತಿ ಜೊತೆಗೆ ವೈದ್ಯಕೀಯ ಪರೀಕ್ಷೆ ನಡೆಯಲಿದ್ದು, ವಾಯುಪಡೆಯ ಇಂಟೆಲಿಜೆನ್ಸ್ ಯೂನಿಟ್‍ನಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಡಿ-ಬ್ರೀಫಿಂಗ್ ನಡೆಯಲಿದೆ. ನಮ್ಮ ಸೈನಿಕರು ವೈರಿ ರಾಷ್ಟ್ರದಿಂದ ಬಿಡುಗಡೆಯಾದಾಗ ಸೇನೆ ನಡೆಸುವ ತನಿಖಾ ಪ್ರಕ್ರಿಯೆಗೆ ಡಿ ಬ್ರೀಫಿಂಗ್ ಎಂದು ಕರೆಯಲಾಗುತ್ತದೆ.

    ದೇಹದಲ್ಲಿ ಯಾವುದಾದರೂ ಟ್ರ್ಯಾಕಿಂಗ್ ಡಿವೈಸ್ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಸ್ಕ್ಯಾನಿಂಗ್ ಮಾಡಲಾಗುತ್ತದೆ. ಬಂಧನದಲ್ಲಿದ್ದಾಗ ಪಾಕಿಸ್ತಾನ ಯಾವ ಮಾಹಿತಿ ಕೇಳಿತ್ತು ಎಂಬ ಬಗ್ಗೆ ಅಧಿಕಾರಿಗಳು ವಿಚಾರಣೆ ನಡೆಸುತ್ತಾರೆ.

    ಈ ಹಿಂದೆ ವೈರಿ ರಾಷ್ಟ್ರದ ಸೈನಿಕ ಸೆರೆ ಸಿಕ್ಕ ಸೈನಿಕನನ್ನು ತನ್ನ ಗುಢಾಚಾರಿಕೆಗೆ ಬಳಸಿದ ಉದಾಹರಣೆಗಳು ಇವೆ. ಹೀಗಾಗಿ ಪಾಕಿಸ್ತಾನ ತನ್ನನ್ನು ಸ್ಪೈ ಆಗಿ ನೇಮಕ ಮಾಡಿಕೊಂಡಿಲ್ಲ ಎಂಬುದನ್ನು ಅಭಿನಂದನ್ ಖಚಿತಪಡಿಸಬೇಕು. ಎಲ್ಲಾ ಸೇನಾ ಪ್ರಕ್ರಿಯೆ ಬಳಿಕ ಬೆಂಗಳೂರಿನ ಹೆಚ್‍ಎಎಲ್‍ನಲ್ಲಿ ಪೈಲಟ್ ಫಿಟ್ನೆಸ್ ಪರೀಕ್ಷೆ ನಡೆಯುತ್ತದೆ. ಇದೆಲ್ಲ ನಡೆದ ಬಳಿಕ ಕುಟುಂಬದ ಜೊತೆ ಸಮಯ ಕಳೆಯಲು ರಜೆ ಆಫರ್ ನೀಡಲಾಗುತ್ತದೆ. ಮೆಡಿಕಲ್ ಫಿಟ್‍ನೆಸ್ ಸರ್ಟಿಫಿಕೇಟ್, ಪ್ಲೈಯಿಂಗ್ ಸರ್ಟಿಫಿಕೇಟ್ ಸಿಕ್ಕ ತಕ್ಷಣ ಕರ್ತವ್ಯಕ್ಕೆ ಮತ್ತೆ ಅಭಿನಂದನ್ ಹಾಜರಾಗುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿ ಷಡ್ಯಂತ್ರ ಒಂದೆರಡು ದಿನದಲ್ಲಿ ಬಹಿರಂಗ- ಸಚಿವ ಪ್ರಿಯಾಂಕ್ ಖರ್ಗೆ

    ಬಿಜೆಪಿ ಷಡ್ಯಂತ್ರ ಒಂದೆರಡು ದಿನದಲ್ಲಿ ಬಹಿರಂಗ- ಸಚಿವ ಪ್ರಿಯಾಂಕ್ ಖರ್ಗೆ

    ಚಾಮರಾಜನಗರ: ಸರ್ಜಿಕಲ್ ಸ್ಟ್ರೈಕ್ ಹಿಂದೆ ಷಡ್ಯಂತ್ರ ಇದೆ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ. ಬಿಜೆಪಿಯ ಈ ಷಡ್ಯಂತ್ರ ಒಂದೆರೆಡು ದಿನದಲ್ಲಿ ಬಹಿರಂಗವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

    ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದಲ್ಲಿ ಮಾತನಾಡಿದ ಸಚಿವರು, ಭಾರತ ಹಾಗು ಪಾಕಿಸ್ತಾನ ಈ ಎರಡೂ ದೇಶಗಳಲ್ಲಿ ಯುದ್ಧೋನ್ಮಾದ ಸ್ಥಿತಿ ಉಂಟಾಗಿದ್ದರೂ ರಕ್ಷಣಾ ಸಚಿವರು ಎಲ್ಲಿ ಹೋಗಿದ್ದಾರೆ? ಇಷ್ಟೆಲ್ಲಾ ನಡೆಯುತ್ತಿದ್ದರೂ ಅವರೇಕೆ ಹೊರಗೆ ಬಂದಿಲ್ಲ ಎಂದು ಪ್ರಶ್ನಿಸಿದರು.

    ಸರ್ಜಿಕಲ್ ಸ್ಟ್ರೈಕ್ ನಿಂದ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕೇವಲ ವೋಟಿಗೋಸ್ಕರ ಅವರು ಯಾವ ಹಂತಕ್ಕಾದರು ಹೋಗುತ್ತಾರೆ ಎಂಬುದು ಇದರಿಂದ ಸಾಬೀತಾಗಿದೆ. ಯಡಿಯೂರಪ್ಪ ಅವರ ಮನಸ್ಸಿನಲ್ಲಿರುವುದು ಬಹಿರಂಗವಾಗಿದೆ 44 ಯೋಧರನ್ನು ಬಲಿಕೊಟ್ಟು 22 ಸೀಟು ಗೆಲ್ಲಲ್ಲು ಮುಂದಾಗಿದ್ದಾರೆಂದು ಅವರ ಹೇಳಿಕೆಯಿಂದ ಅರ್ಥವಾಗುತ್ತದೆ ಎಂದ್ರು.

    ಬಿಎಸ್‍ವೈ ಹೇಳಿದ್ದೇನು..?
    ಭಾರತೀಯ ವಾಯುಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದಾರೆ. ಉಗ್ರರ ಮೇಲೆ ಭಾರತದ ವಾಯುಸೇನೆ ದಾಳಿಯ ಪರಿಣಾಮ ರಾಜ್ಯದಲ್ಲಿ 22 ಕ್ಕೂ ಹೆಚ್ಚು ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಉಗ್ರರ ನೆಲೆಗಳ ಮೇಲೆ ಯಶಸ್ವಿಯಾಗಿ ನಡೆದ ಏರ್ ಸ್ಟ್ರೈಕ್ ನಿಂದಾಗಿ ದೇಶದಲ್ಲಿ ಬಿಜೆಪಿ ಪರ ಉತ್ತಮ ಅಲೆಯಿದೆ. ಭಾರತದಲ್ಲಿ ಇಂದಿನ ವಾತಾವರಣ ಭಾರತೀಯ ಜನತಾ ಪಕ್ಷದ ಪರವಾಗಿದೆ. ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನೆ ಉಗ್ರರ ನೆಲೆ ನಾಶ ಮಾಡಿದ್ದು ಸಂತೋಷವಾಗಿದೆ. ಅಲ್ಲದೇ 40 ವರ್ಷದ ಬಳಿಕ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಇದೆ. ರಾಜ್ಯದಿಂದ 22 ಸಂಸದರನ್ನು ಕರೆದ್ಯೊಯ್ದು ಮೋದಿ ಅವರಿಗೆ ನಮ್ಮ ಕಾಣಿಕೆ ಕೊಡಬೇಕಿದೆ. ಅಲ್ಲಿಯವರೆಗೂ ನಾನು ಮನೆ ಸೇರುವುದಿಲ್ಲ ಎಂದು ಯಡಿಯೂರಪ್ಪ ಅವರು ಬುಧವಾರ ಚಿತ್ರದುರ್ಗದಲ್ಲಿ ಹೇಳಿದ್ದರು.

    https://www.youtube.com/watch?v=-HDTIgjGwJg

    https://www.youtube.com/watch?v=LLIlyAySnxg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೇರ ಯುದ್ಧ ಬೇಡ, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಉತ್ತಮ: ಪಲಿಮಾರು ಶ್ರೀ

    ನೇರ ಯುದ್ಧ ಬೇಡ, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಉತ್ತಮ: ಪಲಿಮಾರು ಶ್ರೀ

    ಉಡುಪಿ: ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಿಂದ ಶುಕ್ರವಾರ ಬಿಡುಗಡೆಯಾಗಲಿದ್ದಾರೆ. ಅಭಿನಂದನ್ ಬಿಡುಗಡೆ ಸಂಬಂಧ ರಾಜ್ಯದ ಹಲವು ಕಡೆ ಪೂಜೆ ಪುನಸ್ಕಾರಗಳು ನಡೆದಿತ್ತು.

    ಕೋಲಾರ, ಕೊಪ್ಪಳ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೋಧ ವಾಪಾಸ್ ಭಾರತಕ್ಕೆ ಬರಲಿ ಎಂದು ಪೂಜೆ ಪ್ರಾರ್ಥಿಸಿದ್ದರು. ಹಾಗೆಯೇ ಯೋಧರಿಗಾಗಿ ಉಡುಪಿಯ ಕೃಷ್ಣಮಠದಲ್ಲಿ ಕೂಡ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಪರ್ಯಾಯ ಪಲಿಮಾರು ಸ್ವಾಮೀಜಿಗಳು ಮಧ್ಯಾಹ್ನದ ಮಹಾಪೂಜೆಯಲ್ಲಿ ಅಭಿಷೇಕ ಮತ್ತು ಲಕ್ಷ ತುಳಸಿ ಅರ್ಪಣೆ ವೇಳೆ ಕೃಷ್ಣನಲ್ಲಿ ಸ್ವಾಮೀಜಿ ಅಭಿನಂದನ್ ಅವರಿಗಾಗಿ ಪ್ರಾರ್ಥಿಸಿದ್ದರು. ಇದನ್ನೂ ಓದಿ:ಭಾರತಕ್ಕೆ ರಾಜತಾಂತ್ರಿಕ ಜಯ – ಶುಕ್ರವಾರ ಪೈಲಟ್ ಅಭಿನಂದನ್ ಬಿಡುಗಡೆ

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪಲಿಮಾರು ವಿದ್ಯಾಧೀಶ ಶ್ರೀಗಳು, ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ಒಂದು ದಿಟ್ಟ ಹೆಜ್ಜೆ ಎಂದಿದ್ದಾರೆ. ಇದರಿಂದ ಸೇನೆಯ ಬಗ್ಗೆ ತುಂಬ ಅಭಿಮಾನ ಮೂಡಿದೆ. ಪಾಕಿಸ್ತಾನ ಅಭಿನಂದನ್ ವರ್ಧಮಾನ್‍ರನ್ನು ಬಂಧಿಸಿರುವುದು ಕಾನೂನು ಬಾಹಿರ. ಪಾಕ್ ಅವರನ್ನು ಶೀಘ್ರ ಬಿಡುಗಡೆ ಮಾಡಲಿ. ಜರಾಸಂಧನ ಸೆರೆಮನೆಯಲ್ಲಿಟ್ಟ ರಾಜಕುಮಾರರನ್ನು ಶ್ರೀಕೃಷ್ಣ ಬಿಡಿಸಿದ್ದ. ನರಕಾಸುರನನ್ನು ವಧೆ ಮಾಡಿ ರಾಜಕುಮಾರಿಯರನ್ನು ಸೆರೆಯಿಂದ ಬಿಡಿಸಿದ್ದ ಹಾಗೆಯೇ ದೇವರ ಕೃಪೆ ಯೋಧರ ಮೇಲೆ ಇದೆ ಅವರು ಕೂಡ ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂದಿದ್ದರು.

    ಪಾಕಿಸ್ತಾನದ ಮೇಲೆ ಯುದ್ಧ ಬೇಡ. ನೇರ ಯುದ್ಧದಿಂದ ಮಾನವ ಜನಾಂಗದ ನಾಶವಾಗುತ್ತದೆ. ಸರ್ಜಿಕಲ್ ಸ್ಟ್ರೈಕ್ ಮೂಲಕವೇ ಉಗ್ರರ ನಾಶವಾಗಬೇಕು. ಉಗ್ರರಿರುವ ಅಡಗುದಾಣಗಳನ್ನು ಹುಡುಕಿ ದಾಳಿ ಮಾಡಬೇಕು ಎಂದು ಪರ್ಯಾಯ ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv