Tag: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

  • ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಪಾಪ ಪ್ರಜ್ಞೆ ಕಾಡುತ್ತಿದೆ – ರಿಷಬ್ ಚಿತ್ರ ನೋಡಿ 200 ರೂ. ಕಳುಹಿಸಿಕೊಟ್ಟ ಅಭಿಮಾನಿ

    ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ನೋಡಿ ಅಭಿಮಾನಿಯೋರ್ವ ಅವರಿಗೆ ಪತ್ರ ಬರೆದು ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

    ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ 2018 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಈಗ ನೋಡಿದ ಮೈಸೂರಿನ ಅಭಿಮಾನಿಯೋರ್ವ ರಿಷಬ್ ಶೆಟ್ಟಿಗೆ ಪತ್ರ ಬರೆದು ಕ್ಷಮೆ ಕೇಳಿ ಜೊತೆಗೆ 200 ರೂ. ದುಡ್ಡನ್ನು ಕಳುಹಿಸಿಕೊಟ್ಟಿದ್ದಾರೆ.

    ರಿಷಬ್‍ಗೆ ಪತ್ರ ಬರೆದಿರುವ ಮೈಸೂರಿನ ಅಭಿಮಾನಿ ಭರತ್ ರಾಮಸ್ವಾಮಿ, ನನ್ನ ಹೆಸರು ಭರತ್ ರಾಮಸ್ವಾಮಿ, ನಾನು ಮೈಸೂರಿನವನು. ವೃತ್ತಿಯಲ್ಲಿ ಒಬ್ಬ ಪುಸ್ತಕ ಪ್ರಕಾಶಕ. ನಾನು ಜನವರಿ 12 ರಂದು ನೀವು ನಿರ್ದೇಶನ ಮಾಡಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಎಂಬ ಸಿನಿಮಾವನ್ನು ಒಂದು ವೆಬ್‍ಸೈಟಿನಲ್ಲಿ ನೋಡಿದೆ. ಈ ಚಿತ್ರ ನನ್ನ ಊಹೆಗೂ ಮೀರಿದ್ದಾಗಿತ್ತು. ನಾನೊಬ್ಬ ಚಿತ್ರ ರಸಿಕ. ನಿಮ್ಮ ನಿರೂಪಣಾ ಶೈಲಿ ಮತ್ತು ಸ್ಕ್ರೀನ್ ಪ್ಲೇ ಅತ್ಯದ್ಭುತವಾಗಿದೆ ಎಂದು ಹೊಗಳಿದ್ದಾರೆ.

    ಕನ್ನಡದ ಅಸ್ಮಿತೆ ಮತ್ತು ಕನ್ನಡದ ಮೇಲೆ ನಮಗಿರುವ ಭಾವನೆಗಳನ್ನು ಅನಂತ್ ನಾಗ್ ಅವರು ಮಾಡಿರುವ ಪಾತ್ರದ ಮೂಲಕ ಹೇಳಿಸಿದ ಶೈಲಿ ಮನ ಮುಟ್ಟುವಂತಿತ್ತು. ಇಂತಹ ರಚನಾತ್ಮಕ ಆಲೋಚನೆಗಳಿಂದ ಕೂಡಿದ ಸಿನಿಮಾವನ್ನು ಇಷ್ಟು ತಡವಾಗಿ ನೋಡಿದ ಮತ್ತು ದುಡ್ಡು ಕೊಟ್ಟು ಚಿತ್ರಮಂದಿರದಲ್ಲಿ ನೋಡದ ಪಾಪ ಪ್ರಜ್ಞೆ ನನ್ನನ್ನು ಕಾಡುತ್ತಿದೆ. ಆದ್ದರಿಂದ ಈ ಪತ್ರದೊಡನೆ 200 ರೂಪಾಯಿ ಟಿಕೆಟ್ ದರವನ್ನು ನನ್ನ ಮೆಚ್ಚುಗೆಯ ಸಂಕೇತವಾಗಿ ಕಳುಹಿಸಿರುತ್ತೇನೆ ಎಂದು ಪತ್ರದಲ್ಲಿ ಭರತ್ ತಿಳಿಸಿದ್ದಾರೆ.

    ಈ ನನ್ನ ಕ್ರಿಯೆ ನಿಮಗೆ ಹಾಸ್ಯಾಸ್ಪದವೆನಿಸಿದರೂ ನನ್ನೊಳಗಿನ ಸಿನಿಮಾ ರಸಿಕನಿಗೆ ತೃಪ್ತಿ ತರುವಂತಾಗಿದೆ. ಮುಂದೆಯೂ ಇಂತಹುದೇ ಪ್ರಗತಿಪರ ಸಿನಿಮಾಗಳನ್ನು ನಿಮ್ಮ ಮೂಲಕ ತಯಾರಾಗಲಿ ಎಂದು ಆಶಿಸುತ್ತೇನೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

    ಅಭಿಮಾನಿಯ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಸಮೇತ ಟ್ವೀಟ್ ಮಾಡಿರುವ ರಿಷಬ್ ಶೆಟ್ಟಿ, ಇಂತಹ ಚಿತ್ರಪ್ರೇಮಿಗಳಿರುವ ತನಕ ಒಳ್ಳೆಯ ಕನ್ನಡ ಚಿತ್ರಗಳಿಗೆ ಎಂದಿಗೂ ಸೋಲಿಲ್ಲ. ಪ್ರೇಕ್ಷಕರ ಒಲವೇ ಚಿತ್ರದ ನಿಜವಾದ ಗೆಲುವು. ಭರತ್ ರಾಮಸ್ವಾಮಿ ಅವರಿಗೆ ಧನ್ಯವಾದಗಳು. ನಿಮ್ಮ ಈ ಪ್ರೀತಿಯ ಕಾಣಿಕೆಯನ್ನು ಅದರ ದುಪ್ಪಟ್ಟು ಪ್ರೀತಿಯಿಂದ ಸ್ವೀಕರಿಸುತ್ತೇವೆ. (ಜೊತೆಗೆ ಚಿತ್ರದ ಕಲೆಕ್ಷನ್ ತಿದ್ದುಪಡಿ ಮಾಡಿಕೊಳ್ಳುತ್ತೇವೆ) ಎಂದು ಬರೆದುಕೊಂಡಿದ್ದಾರೆ.

    2018 ಆಗಸ್ಟ್ 24 ರಂದು ಬಿಡುಗಡೆಗೊಂಡಿದ್ದ ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಮಕ್ಕಳ ಜೊತೆ ಹಿರಿಯ ನಟ ಅನಂತ್ ನಾಗ್ ಅವರು ಮನಮಿಡಿಯುವಂತೆ ಅಭಿನಯಿಸಿದ್ದರು. ಕನ್ನಡ ಭಾಷೆ, ಕನ್ನಡ ಮಾಧ್ಯಮ ಶಾಲೆಯ ಅವಶ್ಯಕತೆಯನ್ನು ಮಕ್ಕಳ ಮೂಲಕ ಮನಮುಟ್ಟುವಂತೆ ಹೇಳಿದ್ದ ಈ ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂದು ರಾಷ್ಟ್ರೀಯ ಪ್ರಶಸ್ತಿ ಕೂಡ ಬಂದಿದೆ.

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ರಿಷಬ್ ಶೆಟ್ಟಿ

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಕ್ಕೆ ಸ್ವರ್ಣ ಕಮಲ ಪಡೆದ ರಿಷಬ್ ಶೆಟ್ಟಿ

    ನವದೆಹಲಿ: ರಿಷಬ್ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾಗಿದ್ದು, ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರಿಂದ ರಿಷಬ್ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

    ಉತ್ತಮ ಮಕ್ಕಳ ಚಿತ್ರವಾಗಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ರಾಷ್ಟ್ರೀಯಾ ಪ್ರಶಸ್ತಿ ಪಡೆದಿದ್ದು, ಕನ್ನಡ ಚಿತ್ರರಂಗದ ಖ್ಯಾತಿ ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಸೋಮವಾರ ದೆಹಲಿಯಲ್ಲಿ ನಡೆದ 66ನೇ ರಾಷ್ಟ್ರೀಯ ಚಲನಚಿತ್ರ ಸಮಾರಂಭದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ರಿಷಬ್ ಶೆಟ್ಟಿ ಅವರಿಗೆ ಸ್ವರ್ಣ ಕಮಲ ಪ್ರಶಸ್ತಿ ನೀಡಿ ಗೌರವಿಸಿದರು.

    2018ರಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ಬಿಡುಗಡೆಯಾಗಿತ್ತು. ಗಡಿಭಾಗ ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಸ್ಥಿತಿ ಏನು? ಅಲ್ಲಿನ ಮಕ್ಕಳು ತಮ್ಮ ಶಾಲೆಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟರು ಎನ್ನುವುದನ್ನು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರು ಅದ್ಭುತವಾಗಿ ತೋರಿಸಿದ್ದರು. ಜೊತೆಗೆ ಈ ಚಿತ್ರದ ಮೂಲಕ ಕನ್ನಡ ಶಾಲೆಗಳನ್ನು ಉಳಿಸುವ ಸಕಾರಾತ್ಮಕ ಸಂದೇಶವನ್ನು ಸಾರುವ ಮೂಲಕ ರಿಷಬ್ ಶೆಟ್ಟಿ ಪ್ರೇಕ್ಷಕರ ಮನ ಗೆದ್ದಿದ್ದರು.

    ರಿಷಬ್ ಶೆಟ್ಟಿ ಅವರು ಸ್ವರ್ಣ ಕಮಲ ಪ್ರಶಸ್ತಿ ಪಡೆದ ಬಳಿಕ ಟ್ವೀಟ್ ಮಾಡಿ, ಪ್ರಶಸ್ತಿ ಸ್ವಿಕರಿಸಿರುವ ಬಗ್ಗೆ ನಿಜಕ್ಕೂ ತುಂಬಾ ಹೆಮ್ಮೆಯಾಗುತ್ತಿದೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ತಾರೆಯರು ಕೂಡ ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅವರ ಸ್ನೇಹಿತ, ನಟ ರಕ್ಷಿತ್ ಶೆಟ್ಟಿ ಕೂಡ ಗೆಳೆಯನ ಸಾಧನೆಗೆ ಖುಷಿ ಪಟ್ಟಿದ್ದಾರೆ.

    ಎಂಥಾ ಸಾಧನೆ, ನಮ್ಮ ಇಡೀ ತಂಡವೇ ನಿನ್ನ ಬಗ್ಗೆ ಹೆಮ್ಮೆ ಪಡುತ್ತಿದೆ ಮಗಾ. ಇನ್ನೂ ಸಾಕಷ್ಟು ಪ್ರಶಸ್ತಿಗಳು ನಿನ್ನ ಸಾಧನೆಯ ಹಾದಿಯಲ್ಲಿ ಜೊತೆಯಾಗಲಿದೆ ಎಂದು ಬರೆದು ರಿಷಬ್ ಶೆಟ್ಟಿ ಅವರು ಸ್ವರ್ಣ ಕಮಲ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋ, ಫೋಟೋವನ್ನು ಹಾಕಿ ಟ್ವಿಟ್ಟರ್ ನಲ್ಲಿ ಸಿಂಪಲ್ ಸ್ಟಾರ್ ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ.

  • ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಕೆಲಸ ಮಾಡಿಸ್ತಿದ್ದಾರೆ ಶಿಕ್ಷಕರು

    ಶಾಲೆಯಲ್ಲಿ ವಿದ್ಯಾರ್ಥಿಗಳಿಂದಲೇ ಕೆಲಸ ಮಾಡಿಸ್ತಿದ್ದಾರೆ ಶಿಕ್ಷಕರು

    ಕೊಪ್ಪಳ: ಶಾಲೆಗೆ ಓದಲು ಬರುವ ವಿದ್ಯಾರ್ಥಿಗಳ ಕೈಯಲ್ಲಿ ಶಿಕ್ಷಕರು ನೀರು ತರುವ ಕೆಲಸ ಮಾಡಿಸುತ್ತಿರೋ ಘಟನೆ ಜಿಲ್ಲೆಯ ಮಾದಿನೂರ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

    ಮಕ್ಕಳಿಗೆ ಪಾಠ ಮಾಡುವ ಬದಲಾಗಿ ಅವರ ಕೈಯಲ್ಲಿ ಶಿಕ್ಷಕರು ಕೆಲಸ ಮಾಡಿಸುತ್ತಿದ್ದಾರೆ. ಇದನ್ನು ನೋಡಿ ಸ್ಥಳೀಯರು ಶಾಲೆಯ ಸಿಬ್ಬಂದಿಗಳ ಮೇಲೆ ಸಿಡಿದೆದ್ದಿದ್ದಾರೆ. ಹೌದು, ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಓದಲಿ ಅಂತ ಶಾಲೆಗೆ ಕಳುಹಿಸುತ್ತಾರೆ. ಆದ್ರೆ ಪಾಠ ಕಲಿಯಬೇಕಾದ ಮಕ್ಕಳ ಕೈಯಲ್ಲಿ ನೀರು ತರುವ ಕೆಲಸವನ್ನು ಶಿಕ್ಷಕರು ಮಾಡಿಸುತ್ತಿದ್ದಾರೆ. ಶಾಲೆಯಲ್ಲಿ ನೀರಿನ ಅಭಾವವಿದ್ದು, ಪರ್ಯಾಯ ವ್ಯವಸ್ಥೆ ಮಾಡದೆ ಮಕ್ಕಳ ಕೈಯಲ್ಲೇ ಕುಡಿಯುವ ನೀರನ್ನು ತರಲು ಬಳಸಿಕೊಂಡಿದ್ದಾರೆ.

    ಒತ್ತು ಗಾಡಿಯ ಮೂಲಕ ವಿದ್ಯಾರ್ಥಿಗಳು ನೀರು ತರುತ್ತಿದ್ದಾರೆ. ಶಾಲೆಗೆ ಬಂದ ಮಕ್ಕಳಿಂದ ನಿತ್ಯ ಹೀಗೆ ಶಿಕ್ಷಕರು ನೀರು ತರೋ ಕೆಲಸ ಮಾಡಿಸುತ್ತಿದ್ದು, ಸರತಿ ಪ್ರಕಾರವಾಗಿ ಕುಡಿಯುವ ನೀರು ತರಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಶಿಕ್ಷಕರ ಈ ವರ್ತನೆಯನ್ನು ಪೋಷಕರು ಹಾಗೂ ಸ್ಥಳೀಯರು ವಿರೋಧಿಸುತ್ತಿದ್ದು, ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಗಮನ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಅಮೆರಿಕದಲ್ಲೂ ಸ.ಹಿ.ಪ್ರಾ.ಶಾ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್- ಯುಎಸ್‍ನಲ್ಲಿ ಚಿತ್ರ ಗಳಿಸಿದ್ದು ಎಷ್ಟು?

    ಅಮೆರಿಕದಲ್ಲೂ ಸ.ಹಿ.ಪ್ರಾ.ಶಾ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್- ಯುಎಸ್‍ನಲ್ಲಿ ಚಿತ್ರ ಗಳಿಸಿದ್ದು ಎಷ್ಟು?

    ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗ ಈ ಚಿತ್ರ ಕರ್ನಾಟಕ ಮಾತ್ರವಲ್ಲದೇ ಅಮೆರಿಕದಲ್ಲೂ ಯಶಸ್ವಿ ಕಾಣುತ್ತಿದೆ.

    ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಅವರು ಚಿತ್ರದ ಬಗ್ಗೆ ಟ್ವೀಟ್ ಮಾಡಿ “ಕನ್ನಡ ಚಿತ್ರ ಅಮೆರಿಕಾದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಿರುವುದನ್ನು ನೋಡಿ ಖುಷಿಯಾಗುತ್ತಿದೆ. ಅಮೆರಿಕದ ಕೆಲವು ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಟೈಟಲ್ ಹಾಗೂ ಸ್ಕೋರ್ಸ್ ನಿಂದಲೇ ಸೆ. 29ರ ವರೆಗೂ ಯುಎಸ್ ಬಾಕ್ಸ್ ಆಫೀಸ್‍ನಲ್ಲಿ 85,509 ಡಾಲರ್(62.04 ಲಕ್ಷ ರೂ.) ಕಲೆಕ್ಷನ್ ಆಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

    “ನಿಮ್ಮ ಈ ಟ್ವೀಟ್ ನಮಗೆ ತುಂಬಾ ಪ್ರೇರಣೆ ನೀಡಿದೆ. ನಿಮ್ಮ ಅಪ್‍ಡೇಟ್‍ಗೆ ಧನ್ಯವಾದಗಳು” ಎಂದು ಬರೆದು ನಿರ್ದೇಶಕ ಎಂದು ರಿಷಬ್ ಶೆಟ್ಟಿ ತರಣ್ ಅದರ್ಶ್ ಅವರ ಟ್ವೀಟ್ ನ್ನು ರೀ-ಟ್ವೀಟ್ ಮಾಡಿದ್ದಾರೆ.

    ಸದ್ಯ ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಒಂದು ಹೊಸ ದಾಖಲೆ ಬರೆದಿದೆ. ಮೊಟ್ಟ ಮೊದಲ ಬಾರಿಗೆ ಅಂಡಮಾನ್ ಹಾಗೂ ನಿಕೋಬಾರ್ ನಲ್ಲಿ ಈ ಚಿತ್ರ ಪ್ರದರ್ಶನವಾಗಿ ದಾಖಲೆ ಬರೆದಿದೆ. ಕರ್ನಾಟಕದಲ್ಲಿ ಈ ಚಿತ್ರ ಯಶಸ್ಸು ಕಂಡು ಬೇರೆ ರಾಜ್ಯ ಹಾಗೂ ಬೇರೆ ದೇಶದಲ್ಲಿ ಯಶಸ್ಸು ಕಂಡಿದೆ. ಸೆ. 29 ಹಾಗೂ 30 ರಂದು ಫೋರ್ಟ್‍ಬ್ಲೇರ್ ನ ದಿವ್ಯಂ ಟಾಕೀಸಿನಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕನ್ನಡಿಗರ ಮನಗೆದ್ದಿತು ರಿಷಬ್ ಶೆಟ್ಟಿ ಕ್ರಿಯೇಟಿವಿಟಿ!

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕನ್ನಡಿಗರ ಮನಗೆದ್ದಿತು ರಿಷಬ್ ಶೆಟ್ಟಿ ಕ್ರಿಯೇಟಿವಿಟಿ!

    ಬೆಂಗಳೂರು: ನಿರ್ದೇಶಕ ರಿಷಬ್ ಶೆಟ್ಟಿ ನಿಜಕ್ಕೂ ಜಾದೂ ಮಾಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಡೀ ಕರ್ನಾಟಕದ ಎಲ್ಲ ಭಾಗಗಳ ಜನರೂ ಈ ಚಿತ್ರವನ್ನು ಪ್ರೀತಿಯಿಂದ ವೀಕ್ಷಿಸುತ್ತಿದ್ದಾರೆ, ಮೆಚ್ಚಿಕೊಳ್ಳುತ್ತಿದ್ದಾರೆ. ಬಾಯಿಮಾತಲ್ಲೇ ಹರಡಿಕೊಂಡಿದ್ದ ಒಳ್ಳೆ ಮಾತುಗಳೆಲ್ಲವೂ ಈ ಚಿತ್ರದ ಗೆಲುವಾಗಿ ಮಾರ್ಪಾಡಾಗಿದೆ.

    ಒಂದು ಕಥೆಯನ್ನು ಒಂದು ಚೌಕಟ್ಟಿಗೆ ಸಿಗದಂತೆ ಮತ್ತು ಕಥೆಯ ಬಿಂದು ಚದುರದಂತೆ ಕಟ್ಟಿ ಕೊಡುವುದು ತ್ರಾಸದಾಯಕ ಕೆಲಸ. ಆದರೆ ಇದರಲ್ಲಿ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಗೆದ್ದಿದ್ದಾರೆ. ಆರಂಭದಲ್ಲಿ ಈ ಚಿತ್ರ ಕಲಾತ್ಮಕ ಎಂಬ ಸುದ್ದಿ ಹರಡಿತ್ತು. ಆ ನಂತರದಲ್ಲಿ ಮಕ್ಕಳ ಚಿತ್ರ ಎಂಬ ಸುದ್ದಿಯೂ ಅಲ್ಲಲ್ಲಿ ಹಬ್ಬಿಕೊಂಡಿತ್ತು. ಆದರೆ ರಿಷಬ್ ಮಾತ್ರ ಈ ಚಿತ್ರ ಅದ್ಯಾವುದೂ ಅಲ್ಲ, ಇದು ಪಕ್ಕಾ ಜ್ಯೂನಿಯರ್ ಕಿರಿಕ್ ಪಾರ್ಟಿ ಅಂತ ಸ್ಪಷ್ಟವಾಗಿಯೇ ಹೇಳಿದ್ದರು.

    ಚಿತ್ರ ನೋಡಿದ ಎಲ್ಲರಿಗೂ ಜ್ಯೂನಿಯರ್ ಕಿರಿಕ್ ಪಾರ್ಟಿಗಳ ಕೀಟಲೆ, ಅದರ ಜೊತೆಗೆ ತೆರೆದುಕೊಳ್ಳೋ ಮನ ಮಿಡಿಯುವ ಕಥೆಗಳೆಲ್ಲವೂ ಇಷ್ಟವಾಗಿವೆ. ಇದು ಕಾಸರಗೋಡು ಸೀಮೆಯಲ್ಲಿ ನಡೆಯೋ ಕಥೆಯಾದರೂ ಗುರುತು ಪರಿಚಯವಿಲ್ಲದ ಪ್ರದೇಶಗಳ ಮನಸುಗಳನ್ನೂ ಸೂರೆಗೊಂಡಿದೆ.

    ಮಕ್ಕಳ ಚಿತ್ರದ ಚೌಕಟ್ಟಿಗೂ ಸಿಗದೆ, ಗಡಿನಾಡಿನ ಸಮಸ್ಯೆಗಳ ಪರಿಧಿಯಲ್ಲಿಯೂ ನಿಲ್ಲದೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿರೋ ಈ ಚಿತ್ರ ಪಕ್ಕಾ ಎಂಟರ್ ಟೈನರ್ ಎಂಬುದರಲ್ಲಿ ಎರಡು ಮಾತಿಲ್ಲ. ನೀವು ಈವರೆಗೂ ಈ ಚಿತ್ರವನ್ನು ನೋಡಿಲ್ಲವಾದರೆ ಈ ವೀಕೆಂಡ್ ಅದಕ್ಕಾಗಿ ಮೀಸಲಾಗಲಿ. ಒಂದು ವೇಳೆ ಈ ಚಿತ್ರವನ್ನು ಮಿಸ್ ಮಾಡಿಕೊಂಡರೆ ಒಂದೊಳ್ಳೆ ಚಿತ್ರ ನೋಡೋ ಅವಕಾಶವನ್ನೂ ಕಳೆದುಕೊಂಡಂತಾಗುತ್ತೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕನ್ನಡ ಶಾಲೆ ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಸಿನಿಮಾ ಮಾಡಿದ್ವಿ- ರಿಷಬ್ ಶೆಟ್ಟಿ

    ಕನ್ನಡ ಶಾಲೆ ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಸಿನಿಮಾ ಮಾಡಿದ್ವಿ- ರಿಷಬ್ ಶೆಟ್ಟಿ

    ಧಾರವಾಡ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ತಂಡ ಇಂದು ಧಾರವಾಡಕ್ಕೆ ಆಗಮಿಸಿತ್ತು. ಈ ವೇಳೆ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಚಲನಚಿತ್ರ ಮಾಡಿದ್ದೇವೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

    ಈ ವೇಳೆ ನಗರದ ಕೆಸಿಡಿ ಕಾಲೇಜ್ ಬಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ತಂಡದ ಸದಸ್ಯರು ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ನಂತರ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಜೊತೆ ಮಾಧ್ಯಮಗೋಷ್ಠಿ ನಡೆಸಿದ ಸಿನಿಮಾ ನಿರ್ದೇಶಕ ರಿಷಬ್ ಶಟ್ಟಿ, ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಚಲನಚಿತ್ರ ಮಾಡಿದ್ದೇವೆ ಎಂದು ಹೇಳಿದರು. ಕನ್ನಡ ಶಾಲೆಗಳಿಗೆ ಮಕ್ಕಳಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ವಿಷಯದ ಮೇಲೆ ಈ ಚಿತ್ರ ಮಾಡಲಾಗಿದೆ ಎಂದ ಅವರು, ಸರ್ಕಾರಿ ಶಾಲೆಯ ಮಕ್ಕಳು ರ‍್ಯಾಂಕ್ ಬರ್ತಾರೆ ಎಂದು ಹೇಳಿದರು.

    ಕಾಸರಗೋಡಿನ ಒಂದು ಸರ್ಕಾರಿ ಶಾಲೆ ಅದು ಶಿಥಿಲಾವಸ್ಥೆಯಲ್ಲಿದೆ ಎಂಬ ನೆಪ ಹೇಳಿ ಕೇರಳದ ಶಿಕ್ಷಣ ಅಧಿಕಾರಿಯೊಬ್ಬ ಶಾಲೆಯನ್ನು ಮುಚ್ಚಿಸುತ್ತಾನೆ. ಮಕ್ಕಳು ಮತ್ತು ಊರ ಮಂದಿ ದಿಕ್ಕು ಕಾಣದಂತಾಗುತ್ತಾರೆ. ಕಡೆಗೆ ಮಕ್ಕಳೆಲ್ಲ ಸೇರಿ ಸಮಾಜಸೇವಕ ಅನಂತಪದ್ಮನಾಭ ಪಿ.(ಅನಂತನಾಗ್) ಅವರನ್ನು ಕರೆತರುತ್ತಾರೆ. ಅನಂತ್ ಬರೋತನಕ ಮಕ್ಕಳ ಕೀಟಲೆ, ಸಣ್ಣ ವಯಸ್ಸಿನಲ್ಲೇ ಶುರುವಾಗುವ ಪ್ರೀತಿಯ ಸೆಳೆತ ಮುಂತಾದವುಗಳ ಜೊತೆಗೆ ಸಾಗುವ ಕಥೆ ಅನಂತ್ ನಾಗ್ ಅವರು ಬರುತ್ತಿದ್ದಂತೇ ಬೇರೆಯದ್ದೇ ಆಯಾಮ ಪಡೆಯುತ್ತದೆ. ಅನಂತ್ ನಾಗ್ ಕೋರ್ಟ್ ನಲ್ಲಿ ವಾದ ಮಂಡಿಸುವ ಸಂದರ್ಭದಲ್ಲಂತೂ ಎಂಥವರಿಗಾದರೂ ನಗು ಮತ್ತು ಅಳು ಒಟ್ಟೊಟ್ಟಿಗೆ ಒತ್ತರಿಸಿಕೊಂಡು ಬರುತ್ತದೆ.

    ಬಹುಶಃ ಇದೇ ಕಥೆಯನ್ನೇ ತೀರಾ ಗಂಭೀರವಾಗಿ ಹೇಳಿದ್ದಿದ್ದರೆ ಅದು ಮಾಮೂಲಿ ಕಲಾತ್ಮಕ ಸಿನಿಮಾವಾಗಿ ಅಥವಾ ಡಾಕ್ಯುಮೆಂಟರಿ ರೀತಿಯ ಚಿತ್ರವಾಗಿಯಷ್ಟೇ ದಾಖಲಾಗುತ್ತಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಗಡಿನಾಡು ಮತ್ತು ಭಾಷೆಯ ಸಮಸ್ಯೆಯನ್ನು ಹೊಂದಿರುವ ತೀರಾ ಗಂಭೀರವಾದ ವಿಚಾರವನ್ನು ಪಕ್ಕಾ ಮನರಂಜನಾ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಮೂಲಕ ರಂಜಿಸುತ್ತಲೇ ಸೀರಿಯಸ್ಸಾದ ವಿಚಾರವನ್ನು ನೋಡುಗರ ಮನಸ್ಸಿಗೆ ದಾಟಿಸಿದ್ದಾರೆ.

    ಪ್ರಮೋದ್ ಶೆಟ್ಟಿ, ಅನಂತ್ ನಾಗ್ ಮತ್ತು ಎಲ್ಲ ಮಕ್ಕಳೂ ಅದ್ಭುತವಾಗಿ ನಟಿಸಿದ್ದಾರೆ. ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ ಕಣ್ಣೆದುರೇ ಕಾಸರಗೋಡನ್ನು ಕಟ್ಟಿಕೊಟ್ಟಿದೆ. ರಾಜ್ ಬಿ. ಶೆಟ್ಟಿ ಅವರ ಸಂಭಾಷಣೆ ಮನಸ್ಸಿಗೆ ಹತ್ತಿರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ಮೈಸೂರು: ಶನಿವಾರ ಮಾಜಿ ಸಿಎಂ ಸಿದ್ದರಾಮಯ್ಯನವರು ನಗರದ ಡಿಆರ್‍ಸಿ ಮಾಲ್ ನಲ್ಲಿ ಸಿನಿಮಾ ವೀಕ್ಷಿಸಿದ್ದಾರೆ.

    ಡಿಆರ್‍ಸಿ ಮಾಲ್ ನಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರವನ್ನು ವೀಕ್ಷಿಸಿದರು. ಈ ಹಿಂದೆಯೂ ಸಿದ್ದರಾಮಯ್ಯವರು ಪುನೀತ್ ರಾಜ್‍ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರವನ್ನು ವೀಕ್ಷಿಸಿದ್ದರು. ರಾಜಕೀಯದಲ್ಲಿ ಸಖತ್ ಫುಲ್ ಆ್ಯಕ್ಟೀವ್ ಆಗಿರುವ ಮಾಜಿ ಸಿಎಂ ಸಿನಿಮಾ ನೋಡುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ. ಈ ಹಿಂದೆ ತೆಲುಗು ಭಾಷೆಯ `ಬಾಹುಬಲಿ’ ಚಿತ್ರವನ್ನು ಮೊಮ್ಮಕ್ಕಳೊಂದಿಗೆ ವೀಕ್ಷಿಸಿದ್ದರು.

    ಅಪ್ಪಟ ಕನ್ನಡ ಸಿನಿಮಾ ಎಂದು ಕರೆಯಬಹುದಾದ ಚಿತ್ರ ಎಂಬ ಭಾವನೆಯನ್ನು ಚಿತ್ರ ತೋರಿಸುತ್ತಿದೆ. ಚಿತ್ರ ಕಲಾತ್ಮಕವಾಗಿ ಮೂಡಿಬಂದಿದ್ದರೂ ಪಕ್ಕ ಕಾಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಹೊಸ ಬಗೆಯ ಪ್ರಯೋಗತ್ಮಾಕ ಚಿತ್ರ ಅನ್ನಿಸುತ್ತಿದೆ. ಚಿತ್ರಕ್ಕೆ ರಾಮ ರಾಮಾ ರೇ ಖ್ಯಾತಿಯ ವಾಸುಕಿ ವೈಭವ್ ಸಂಗೀತವನ್ನು ಹೊಂದಿದೆ. ಹಿರಿಯ ನಟ ಅನಂತ್ ನಾಗ್ ವಿಶೇಷ ಪಾತ್ರದಲ್ಲಿ ನಟಿಸಿದ್ದು, ನೋಡುಗರ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಮಾಲ್‍ನಲ್ಲಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದಂತೆ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದರು. ಸಿದ್ದರಾಮಯ್ಯನವರು ಸಹ ನಗುತ್ತಲೇ ಎಲ್ಲರ ಸೆಲ್ಫಿಗೆ ಪೋಸ್ ನೀಡಿದರು. ಸಿನಿಮಾ ವೀಕ್ಷಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 3ಕ್ಕೆ ವಿದೇಶ ಪ್ರವಾಸ ಕೈಗೊಳ್ಳಲಿದ್ದೇನೆ. ಲಂಡನ್ ನಲ್ಲಿ ಓರ್ವ ಗೆಳೆಯನಿದ್ದು, ತುಂಬಾ ದಿನಗಳಿಂದ ತಮ್ಮ ಮನೆಗೆ ಬರಬೇಕೆಂದು ಒತ್ತಾಯ ಮಾಡುತ್ತಿದ್ದನು. ಹಾಗಾಗಿ ನಾನು ಮತ್ತು ನನ್ನ ಮಗ ಹೋಗಲಿದ್ದೇವೆ ಎಂದು ತಿಳಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವರಮಹಾಲಕ್ಷ್ಮಿ ಹಬ್ಬದಂದು 3 ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ!

    ವರಮಹಾಲಕ್ಷ್ಮಿ ಹಬ್ಬದಂದು 3 ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ!

    ಬೆಂಗಳೂರು: ಈ ವಾರ ವರಮಹಾಲಕ್ಷ್ಮಿಯ ಆರ್ಶೀವಾದದ ಜೊತೆ ಎಲ್ಲರ ಚಪ್ಪಾಳೆ-ಶಿಳ್ಳೆ ಪಡೆಯೋದಕ್ಕೆ 3 ಸಿನಿಮಾಗಳು ಥಿಯೇಟರ್ ಗೆ ಎಂಟ್ರಿ ಕೊಡುತ್ತಿವೆ.

    ಇಂದು ನಿಮ್ಮ ಮುಂದೆ 3 ಹೊಸ ಸಿನಿಮಾಗಳು ಬರಲಿವೆ. ಕಿರಿಕ್ ಪಾರ್ಟಿ ಸಾರಥಿ ರಿಷಬ್ ಶೆಟ್ಟಿ ಅವರ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ’ ಕಥೆ ಹೇಳೋಕೆ ಬರುತ್ತಿದ್ದಾರೆ. ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಸೇರಿದಂತೆ ಹಲವು ಮಕ್ಕಳು ಬಣ್ಣ ಹಚ್ಚಿದ್ದಾರೆ. ಗಡಿನಾಡ ಕನ್ನಡ ಶಾಲೆಗಳ ಸ್ಥತಿ-ಗತಿಗಳ ಜೊತೆ ಆ ಮಕ್ಕಳ ಬದುಕು ಬವಣೆ ಹೇಳಲು ಚಿತ್ರತಂಡ ಸಜ್ಜಾಗಿದೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಗ್ರಾಂಡ್ ರಿಲೀಸ್ ಆಗುತ್ತಿದೆ.

    ಕಾಸರಗೊಡು ಶಾಲೆಯ ಮಕ್ಕಳ ಜೊತೆ `ರಾಮ ರಾಮಾ ರೇ’ ಸತ್ಯಪ್ರಕಾಶ್ ಸಾರಥ್ಯದ `ಒಂದಲ್ಲ ಎರಡಲ್ಲಾ’ ಸಿನಿಮಾ ಬಿಡುಗಡೆಯಾಗುತ್ತಿದೆ. ಹೆಬ್ಬುಲಿ ನಿರ್ಮಾಪಕರು ಈ ಸಿನಿಮಾಗೆ ಬಂಡವಾಳ ಹಾಕಿದ್ದು ಮಾಸ್ಟರ್ ರೋಹಿತ್, ಸಾಯಿಕೃಷ್ಣ ಕುಡ್ಲ, ಎಂ.ಕೆ ಮೃ, ಆನಂದ್ ನಿನಾಸಂ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಮನಂಜನೇಯ ಜೊತೆ ಭಾವನಾತ್ಮಕ ವಿಚಾರಗಳನ್ನ ಹೇಳಲು ಚಿತ್ರತಂಡ ಸಜ್ಜಾಗಿದೆ.

    ಸೂಪರ್ ಹಿಟ್ ಸಾರಥಿ ಸಿನಿಮಾ ಆದ ಮೇಲೆ ದಿನಕರ್ ತೂಗುದೀಪ ಸಾರಥ್ಯದಲ್ಲಿ ಮೂಡಿ ಬರುತ್ತಿರೋ ಸಿನಿಮಾ ಲೈಫ್ ಜೊತೆ ಸೆಲ್ಫಿ. ದಿನಕರ್ ಮಡದಿ ಮಾನಸ ಚಿತ್ರಕ್ಕೆ ಕಥೆ ಬರೆದರೆ ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್, ಹರಿಪ್ರಿಯಾ ಲೀಡ್‍ನಲ್ಲಿ ಆ್ಯಕ್ಟ್ ಮಾಡಿದ್ದಾರೆ. ವಿ. ಹರಿಕೃಷ್ಣ ಸೆಲ್ಫಿ ಕಥೆಗೆ ಟ್ಯೂನ್ ಕಂಪೋಸ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಶಾಲೆಯ ಬಗ್ಗೆ ಅನಂತ್ ನಾಗ್ ಏನಂದ್ರು?

    ಸರ್ಕಾರಿ ಶಾಲೆಯ ಬಗ್ಗೆ ಅನಂತ್ ನಾಗ್ ಏನಂದ್ರು?

    ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರದ ಟ್ರೇಲರ್ ಈಗ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ಇಂಥಾದ್ದೊಂದು ಭರಪೂರ ಖುಷಿಯನ್ನಿಟ್ಟುಕೊಂಡೇ ಮತ್ತಷ್ಟು ವಿಚಾರಗಳನ್ನು ಹೇಳಿಕೊಳ್ಳುವ ಸಲುವಾಗಿ ಚಿತ್ರತಂಡ ಮಾಧ್ಯಮವನ್ನು ಮುಖಾಮುಖಿಯಾಗಿದೆ. ಇದೇ ಸಂದರ್ಭದಲ್ಲಿ ಹಿರಿಯ ನಟ ಅನಂತನಾಗ್ ಈ ಚಿತ್ರದ ಬಗ್ಗೆ ಭಾರೀ ಪ್ರೀತಿಯಿಟ್ಟುಕೊಂಡು ಭರವಸೆಯ ಮಾತುಗಳನ್ನಾಡಿದ್ದಾರೆ.

    ಈ ಚಿತ್ರದ ಪ್ರಧಾನ ಪಾತ್ರವೇ ಅನಂತ್ ನಾಗ್ ಅವರದ್ದು. ಅವರಿಲ್ಲಿ ಸರ್ಕಾರಿ ಶಾಲೆಯನ್ನು ಉಳಿಸಲು ಹೋರಾಡುವ ಶಿಕ್ಷಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಅವರು ಮಾತ್ರ ಈ ಚಿತ್ರದಲ್ಲಿನ ಜವಾಬ್ದಾರಿಯುತ ಭಾಗವನ್ನು ಎಳೆಯ ಮಕ್ಕಳೇ ನಿರ್ವಹಿಸಿದ್ದಾರೆನ್ನುವ ಮೂಲಕ ಈ ಚಿತ್ರದಲ್ಲಿ ಅಭಿನಯಿಸಿರೋ ಮಕ್ಕಳ ಉತ್ಸಾಹಕ್ಕೆ ರೆಕ್ಕೆ ಸಿಗಿಸಿದ್ದಾರೆ.

    ಅನಂತ್ ನಾಗ್ ಅಂದರೆ ಪ್ರತೀ ಚಿತ್ರಗಳಲ್ಲಿಯೂ ಪ್ರತೀ ಪಾತ್ರಗಳಲ್ಲಿಯೂ ಹೊಸತಾಗಿಯೇ ಕಾಣಿಸುವ ನಟ. ಈ ಚಿತ್ರದಲ್ಲಿಯೂ ಅವರದ್ದು ಭಿನ್ನವಾದ ಪಾತ್ರವೇ. ರಿಷಬ್ ಶೆಟ್ಟಿ ಕಥೆ ಹೇಳಿದಾಗ ಇಡೀ ಕಥೆಯನ್ನು ಮೆಚ್ಚಿಕೊಂಡೇ ಅನಂತ್ ನಾಗ್ ಅವರು ಈ ಚಿತ್ರವನ್ನು ಒಪ್ಪಿಕೊಂಡಿದ್ದರಂತೆ. ಇದೀಗ ಹೋರಾಟಗಳೆಲ್ಲ ವ್ಯರ್ಥವಾಗಿ ಕೇರಳದ ಭಾಗವಾಗಿದ್ದರೂ ಮೈ ಮನಸುಗಳಲ್ಲಿ ಕನ್ನಡತನವನ್ನು ತುಂಬಿಕೊಂಡಿರೋ ಊರು ಕಾಸರಗೋಡು.

    ಭಾಷೆಯ ಕಾರಣದಿಂದಲೂ ಕಿರುಕುಳಕ್ಕೊಳಗಾಗುತ್ತಾ ಮುಚ್ಚುವ ಭೀತಿಯನ್ನೂ ಎದುರಿಸುವ ಇಲ್ಲಿನ ಸರ್ಕಾರಿ ಶಾಲೆಯೊಂದರ ಸುತ್ತ ಚೇತೋಹಾರಿಯಾದ ಕಥೆ ಕಟ್ಟಿರುವ ನಿರ್ದೇಶಕ ರಿಷಬ್ ಶೆಟ್ಟಿಯವರ ಕಸುಬುದಾರಿಕೆಯನ್ನು ಅನಂತ ನಾಗ್ ಕೊಂಡಾಡಿದ್ದಾರೆ. ಎಳೇ ಮಕ್ಕಳ ಮೂಲಕವೇ ಸರ್ಕಾರಿ ಶಾಲೆಯನ್ನು ಹಿನ್ನೆಲೆಯಾಗಿಟ್ಟುಕೊಂಡು ಇಡೀ ಕಾಸರಗೋಡಿನ ತಲ್ಲಣಗಳನ್ನೂ ಕೂಡಾ ಈ ಚಿತ್ರದಲ್ಲಿ ದಾಖಲಿಸಲಾಗಿದೆಯಂತೆ. ಶಾಲೆಯ ಹಿನ್ನೆಲೆಯಲ್ಲಿ ನಡೆಯುವ ಈ ಚಿತ್ರ ಪಕ್ಕಾ ಮನೋರಂಜನೆಯ ಅಂಶಗಳನ್ನೂ ಒಳಗೊಂಡಿದೆ.

    ಇದೀಗ ಟ್ರೇಲರ್ ಮೂಲಕ ಗಮನ ಸೆಳೆದಿರೋ ಈ ಚಿತ್ರ ದೊಡ್ಡ ಮಟ್ಟದ ಗೆಲುವು ದಾಖಲಿಸುವ ಲಕ್ಷಣಗಳು ಅನಂತ್ ನಾಗ್ ಅವರ ಭರವಸೆಯ ಮಾತುಗಳಲ್ಲಿಯೇ ಸ್ಪಷ್ಟವಾಗಿ ಧ್ವನಿಸುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಪ್ರಮೋದ್ ಶೆಟ್ಟಿ ಪಾಲಿಗೆ ಆಕಸ್ಮಿಕವೇ ಆರಂಭ!

    ಪ್ರಮೋದ್ ಶೆಟ್ಟಿ ಪಾಲಿಗೆ ಆಕಸ್ಮಿಕವೇ ಆರಂಭ!

    – ರಂಗಭೂಮಿಯಿಂದಾಗಿ ಶುರುವಾಯ್ತು ಸಿನಿಮಾ ಯಾನ!

    ಶ್ರೀಮನ್ನಾರಾಯಣ ಚಿತ್ರದಲ್ಲಿನ ವಿಶಿಷ್ಟವಾದೊಂದು ವಿಲನ್ ಪಾತ್ರದ ಮೂಲಕ ಪ್ರೇಕ್ಷಕರಿಗೆ ಸರ್‍ಪ್ರೈಸ್ ಕೊಡೋ ಖುಷಿಯಲ್ಲಿರುವವರು ಪ್ರಮೋದ್ ಶೆಟ್ಟಿ. ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳಲ್ಲಿ ಮನಸಲ್ಲುಳಿಯುವಂಥಾ ನಟನೆ ನೀಡಿದ್ದ ಪ್ರಮೋದ್ ಅಪ್ಪಟ ರಂಗಭೂಮಿ ಪ್ರತಿಭೆ. ನಾಟಕಗಳೇ ತನ್ನ ಜಗತ್ತೆಂಬಂತೆ ಫಿಕ್ಸಾಗಿದ್ದ ಅವರು ನಟನೆಯನ್ನು ಆರಿಸಿಕೊಂಡಿದ್ದೇ ಒಂದು ಆಕಸ್ಮಿಕ. ಅಲ್ಲಿ ಬಣ್ಣ ಹಚ್ಚಿ ನಟನಾಗಿ ರೂಪುಗೊಂಡ ಪ್ರಮೋದ್ ಸಿನಿಮಾ ರಂಗದಲ್ಲಿಯೂ ಖ್ಯಾತ ನಟ ಅನ್ನಿಸಿಕೊಂಡಿದ್ದು ಮತ್ತೊಂದು ಆಕಸ್ಮಿಕ!

    ಪ್ರಮೋದ್ ಶೆಟ್ಟಿಯವರ ಒಟ್ಟಾರೆ ಸ್ಟೋರಿಯನ್ನು ಮುಂದಿಟ್ಟುಕೊಂಡು ಹೇಳೋದಾದರೆ ಆಕಸ್ಮಿಕಗಳೇ ಅವರ ಪಾಲಿನ ಅದ್ಭುತ ಆರಂಭ!

    ತಂದೆ ಹೋಟೆಲ್ ಉದ್ಯಮಿ. ಬುದ್ಧಿ ಬಲಿತಾಗಿಂದಲೂ ಯಾವುದಕ್ಕೂ ತತ್ವಾರವಿಲ್ಲದ ಸ್ಥಿತಿವಂತ ಕುಟುಂಬ. ತಂದೆಯ ಬ್ಯುಸಿನೆಸ್ಸಿನ ಕಾರಣದಿಂದ ಬದುಕು ಬೆಂಗಳೂರಿನಲ್ಲಿದ್ದರೂ ತಾಯಿ ದೇವಕಿಯವರ ಕಾರಣದಿಂದ ಕುಂದಾಪುರದ ಕಿರಾಡಿಯ ಮೇಲೆ ಕರುಳಬಳ್ಳಿಯ ಸೆಳೆತ. ಕಾಲೇಜು ತಲುಪಿಕೊಂಡಾದ ಮೇಲೂ ಕೂಡಾ ಪ್ರಮೋದ್ ಅವರದ್ದು ಹೇಳಿಕೊಳ್ಳುವಂಥಾ ಕನಸು, ಉದ್ದೇಶಗಳಿರದ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ ಬದುಕೋ ಮನಸ್ಥಿತಿ. ಒಳಗೊಳಗೇ ಮಗ ತನ್ನ ವಹಿವಾಟುಗಳ ವಾರಸುದಾರನಾಗುತ್ತಾನೆಂಬ ತಂದೆಯ ಒಳ ಆಸೆ. ಇದೆಲ್ಲವನ್ನೂ ಮೀರಿದ ಸಿಲ್ಲಿ ಆಕಸ್ಮಿಕವೊಂದು ಘಟಿಸಿದ್ದು ಪ್ರಮೋದ್ ಪಿಯುಸಿಯಲ್ಲಿದ್ದಾಗ!

    https://www.instagram.com/p/Bl2yZdbA_BH/?taken-by=pramodshettyk

    ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರಲ್ಲಾ ಸುಜಯ್. ಅವರು ಪ್ರಮೋದ್ ಅವರ ಕುಚಿಕು ಗೆಳೆಯ. ಇಬ್ಬರೂ ಒಗ್ಗಟ್ಟಾಗಿ ವರ್ಷ ಪೂರ್ತಿ ಬಂಕ್ ಹೊಡೆದು ಅಲೆದ ಪರಿಣಾಮವಾಗಿ ಹಾಲ್ ಟಿಕೆಟಿಗೇ ಕಂಟಕ ಎದುರಾಗಿತ್ತು. ಅಂಥಾ ಸಂದರ್ಭದಲ್ಲಿಯೇ ಕಾಲೇಜಿನ ನಾಟಕ ತಂಡದ ಕಡೆಯಿಂದ ಆಸಕ್ತಿ ಇರುವವರಿಗಾಗೊಂದು ಮೆಮೋ ಬಂದಿದ್ದೇ ಸುಜಯ್ ಹಿಂದೆ ಮುಂದೆ ನೋಡದೆ ನಾಟಕ ಟೀಮಿಗೆ ಹೊರಟು ನಿಂತಿದ್ದರು. ಅವರು ಒತ್ತಾಯದಿಂದಲೇ ಪ್ರಮೋದ್ ರನ್ನೂ ಕರೆದೊಯ್ದಿದ್ದರು. ನಾಟಕ ಟೀಮಿಗೆ ಸೇರಿದರೆ ಅಟೆಂಡೆನ್ಸ್ ಕೊಡುತ್ತಾರೆಂಬುದೊಂದೇ ಸುಜಯ್ ಗಿದ್ದ ದುರಾಸೆ!

    ಹಾಗೆ ಅಚಾನಕ್ಕಾಗಿ ನಾಟಕ ತಂಡಕ್ಕೆ ಸೇರಿಕೊಂಡು ಬೆರಗಿನಿಂದಲೇ ಅದರ ತೆಕ್ಕೆಗೆ ಬಿದ್ದಿದ್ದ ಪ್ರಮೋದ್ ಡಿಗ್ರಿಗೆ ಬರುವ ಹೊತ್ತಿಗೆಲ್ಲಾ ನಟನಾಗಿ ರೂಪುಗೊಂಡಿದ್ದರು. ಅಲ್ಲೇ ಅವರಿಗೆ ಕೃಷ್ಣಮೂರ್ತಿ ಕವತ್ತಾರ್ ಗುರುವಾಗಿ ಸಿಕ್ಕಿದರು. ಅಲ್ಲಿಂದಾಚೆಗೆ ಕಾಲೇಜು ಬಿಟ್ಟ ಮೇಲೆಯೂ ನಾನಾ ನಾಟಕ ತಂಡಗಳಲ್ಲಿ ಅಭಿನಯಿಸಿದ್ದ ಪ್ರಮೋದ್‍ಗೆ ಲೋಕಿ, ಸೃಜನ್ ಲೋಕೇಶ್, ಮುನಿ ಮುಂತಾದ ಅನೇಕ ಸಿನಿಮಾ ನಟರು ಸಹಪಾಠಿಗಳಾದರು. ಆದರೂ ಕೂಡಾ ಅವರೆಂದೂ ಸಿನಿಮಾದಲ್ಲಿ ನಟಿಸೋ ಆಲೋಚನೆ ಮಾಡಿರಲೇ ಇಲ್ಲ. ಆದರೂ ಗುರುಗಳ ಒತ್ತಾಸೆಯ ಮೇರೆಗೆ ನರಸಿಂಹರಾಜು ಅವರ ಮೊಮ್ಮಗ ಅರವಿಂದ್ ನಿರ್ದೇಶನದ ಜುಗಾರಿ ಚಿತ್ರದಲ್ಲಿ ನಟಿಸಿದ್ದ ಪ್ರಮೋದ್ ಗೆ ಸಿನಿಮಾ ಶೂಟಿಂಗ್ ಎಂಬುದೇ ಬೋರಿಂಗ್ ಅನ್ನಿಸಿತ್ತಂತೆ. ಆದ್ದರಿಂದಲೇ ಅವರು ಮತ್ತೆ ನಾಟಕದ ಲೋಕದಲ್ಲಿ ಲೀನವಾಗಿದ್ದರು.

    ಇಂಥಾ ಪ್ರಮೋದ್ ಶೆಟ್ಟಿಯವರನ್ನು ಸಿನಿಮಾ ನಟನಾಗಿ ರೂಪುಗೊಳ್ಳುವಂತೆ ಮಾಡಿದ್ದ ಕಾಲೇಜು ಗೆಳೆಯ, ಈಗಿನ ನಿರ್ದೇಶಕ ರಿಷಬ್ ಶೆಟ್ಟಿ. ಅವರು ರಕ್ಷಿತ್ ಗೆ ಪರಿಚಯಿಸಿ ಪ್ರಮೋದ್ ಗೆ ಮನಸಿಲ್ಲದಿದ್ದರೂ ಉಳಿದವರು ಕಂಡಂತೆ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುವಂತೆ ಮಾಡಿದ್ದರು. ಅಲ್ಲಿಂದೀಚೆಗೆ ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳ ಮೂಲಕ ಬೇಡಿಕೆ ಗಳಿಸಿಕೊಂಡಿರೋ ಪ್ರಮೋದ್ ಶ್ರೀಮನ್ನಾರಾಯಣ ಚಿತ್ರದಲ್ಲಿ ಅತಿರಥ ಮಹಾರಥ ಖಳ ನಟರನ್ನು ಮನಸಲ್ಲಿಟ್ಟುಕೊಂಡು ರೂಪಿಸಿದ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ.

    ರಂಗಭೂಮಿಯಲ್ಲಿದ್ದಾಗಲೇ ಸುಪ್ರಿಯಾ ಶೆಟ್ಟಿಯವರ ಜೊತೆ ಲವ್ವಲ್ಲಿ ಬಿದ್ದಿದ್ದ ಪ್ರಮೋದ್ ವರ್ಷಾಂತರಗಳ ಕಾಲ ಅದನ್ನು ಕಾಯ್ದುಕೊಂಡು ಅವರನ್ನೇ ಮದುವೆಯೂ ಆಗಿದ್ದಾರೆ. ಮುದ್ದಾದೊಂದು ಹೆಣ್ಣು ಮಗುವೂ ಇದೆ. ಇವರ ಮಡದಿ ಸುಪ್ರಿಯಾ ಇದೀಗ ಕುಲವಧು ಸೀರಿಯಲ್ಲಿನ ಕಾಂಚನಾ ಪಾತ್ರದಿಂದಲೇ ಕಿರುತೆರೆಯಲ್ಲಿಯೂ ಅಲೆ ಸೃಷ್ಟಿಸಿದ್ದಾರೆ.

    ತಂದೆ ರಾಜು ಶೆಟ್ಟರಿಗೆ ಮಗ ನಟನಾಗಿ ಬಣ್ಣ ಹಚ್ಚೋದು ಅದೇಕೋ ಇಷ್ಟವಿರಲಿಲ್ಲ. ಆದರೆ ಹಂತ ಹಂತವಾಗಿ ನಟನಾಗಿ ಬೆಳೆಯುತ್ತಿರೋ ಮಗನ ಬಗ್ಗೆ ಒಳಗೊಳಗೇ ಹೆಮ್ಮೆ ಹೊಂದಿದ್ದ ಅವರು ಅದೆಷ್ಟೋ ನಾಟಕಗಳನ್ನು ಕದ್ದು ನೋಡಿದ್ದರಂತೆ. ಆದರೂ ಮಗ ಎಲ್ಲಿ ಖಾಲಿ ಜೋಳಿಗೆ ಇಳಿಬಿಟ್ಟುಕೊಂಡು ಓಡಾಡ ಬೇಕಾಗುತ್ತದೋ ಎಂಬ ಭಯದಿಂದಿದ್ದ ಪ್ರಮೋದ್ ಅವರ ತಂದೆಗೀಗ ಭರ್ಜರಿ ಖುಷಿ. ಯಾಕೆಂದರೆ ಪ್ರಮೋದ್ ಈಗ ಪ್ರಸಿದ್ಧ ನಟರಾಗಿ ರೂಪುಗೊಂಡಿದ್ದಾರೆ. ಆಕಸ್ಮಿಕವಾಗಿ ಎಂಟ್ರಿ ಕೊಟ್ಟಿದ್ದ ರಂಗಭೂಮಿಯ ಅನುಭವಗಳನ್ನೇ ಶಕ್ತಿಯಾಗಿಸಿಕೊಂಡಿರುವ ಪ್ರಮೋದ್ ನಟನೆಯ ಕಸುವಿನಿಂದಲೇ ಗಮನ ಸೆಳೆದಿದ್ದಾರೆ.

    ಸದ್ಯ ಪ್ರಮೋದ್ ನಟಿಸಿರುವ, ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ ಚಿತ್ರ ಬಿಡುಗಡೆಗೆ ರೆಡಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ https://www.instagram.com/publictvnews/

    https://www.instagram.com/p/BkpmyRqgUTx/?taken-by=pramodshettyk