Tag: ಸರ್ಕಾರಿ ಬಸ್

  • ಚಿತ್ರದುರ್ಗ ಡಿಸಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ

    ಚಿತ್ರದುರ್ಗ ಡಿಸಿ ಕಾರಿಗೆ ಸರ್ಕಾರಿ ಬಸ್ ಡಿಕ್ಕಿ

    ಚಿತ್ರದುರ್ಗ: ಸಭೆಯೊಂದರಲ್ಲಿ ಭಾಗಿಯಾಗಲು ಚಿತ್ರದುರ್ಗದಿಂದ ಹೊಳಲ್ಕೆರೆಗೆ ತೆರಳುತ್ತಿದ್ದ ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯ ಅವರ ಕಾರಿಗೆ ಹಸುವೊಂದು ಅಡ್ಡ ಬಂದ ಪರಿಣಾಮ ಸರ್ಕಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ.

    ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಡಿಸಿ ವಿನೋತ್ ಪ್ರಿಯಾ, ಚಾಲಕ ಮನ್ಸೂರ್ ಹಾಗೂ ಗನ್ ಮ್ಯಾನ್ ನವೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆಯ ಬಳಿಕ ಬಸ್ ಚಾಲಕ ಪೊಲೀಸರ ವಶದಲ್ಲಿದ್ದು, ಕಾರಿನ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ವಿನೋತ್ ಪ್ರಿಯ ಅವರ ಕೈ ಬೆರಳಿಗೂ ಚಿಕ್ಕ ಗಾಯವಾಗಿದ್ದು, ಚಿಕಿತ್ಸೆ ಬಳಿಕ ಬೇರೆ ಕಾರಿನಲ್ಲಿ ಡಿಸಿ ಚಿತ್ರದುರ್ಗಕ್ಕೆ ವಾಪಾಸ್ ತೆರಳಿದ್ದಾರೆ.

    ಈ ಘಟನೆ ಚಿತ್ರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ದತ್ತಪೀಠಕ್ಕೆ ಸರ್ಕಾರಿ ಬಸ್ – ಪೂಜೆ ಮಾಡಿ ಸ್ವಾಗತಿಸಿಕೊಂಡ ಕಾಫಿನಾಡಿಗರು

    ದತ್ತಪೀಠಕ್ಕೆ ಸರ್ಕಾರಿ ಬಸ್ – ಪೂಜೆ ಮಾಡಿ ಸ್ವಾಗತಿಸಿಕೊಂಡ ಕಾಫಿನಾಡಿಗರು

    ಚಿಕ್ಕಮಗಳೂರು: ದತ್ತಪೀಠಕ್ಕೆ ಸರ್ಕಾರಿ ಬಸ್ ಬಿಡಬೇಕೆಂಬ ಸ್ಥಳೀಯರು ಹಾಗೂ ಪ್ರವಾಸಿಗರ ಬಹುದಿನದ ಬೇಡಿಕೆ ಕೊನೆಗೂ ಈಡೇರಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಕೂಡ ಚಿಕ್ಕಮಗಳೂರಿನಿಂದ ದತ್ತಪೀಠ ಬಸ್ ಸೌಲಭ್ಯ ಇರಲಿಲ್ಲ. ಈ ಭಾಗದ ಜನ ಹಾಗೂ ಪ್ರವಾಸಿಗರು ಈ ಭಾಗಕ್ಕೆ ಬಸ್ ಬಿಡಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದರು. ಆದರೆ ಕಿರಿದಾದ ಹಾಗೂ ಹಾವು-ಬಳುಕಿನ ಮೈಕಟ್ಟಿನ ರಸ್ತೆಯಾಗಿರುವುದರಿಂದ ಸರ್ಕಾರ ಬಸ್ ಸೌಲಭ್ಯ ಕಲ್ಪಿಸಿರಲಿಲ್ಲ.

    ಗಿರಿ ಭಾಗದ ಅತ್ತಿಗುಂಡಿ, ಪಂಡರವಳ್ಳಿ, ಎನ್‍ಎಂಡಿಸಿ, ಬ್ಯಾಗದಹಳ್ಳಿ, ಮಹಲ್, ತಿಪ್ಪನಹಳ್ಳಿ ಎಸ್ಟೇಟ್ ಸೇರಿದಂತೆ ಹಲವು ಗ್ರಾಮದ ಜನ ಆಗೊಮ್ಮೆ-ಈಗೊಮ್ಮೆ ಬರುವ ಖಾಸಗಿ ಬಸ್ ಹಾಗೂ ಆಟೋ, ಜೀಪ್ ಗಳನ್ನೇ ಆಶ್ರಯಿಸಿದ್ದರು. ದೈನಂದಿನ ಕೆಲಸಕ್ಕೆ ನಗರ ಪ್ರದೇಶಗಳಿಗೆ ಬರುವ ಈ ಭಾಗದ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಗ್ರಾಮೀಣ ಭಾಗದಿಂದ ಶಾಲಾ-ಕಾಲೇಜಿಗೆ ಬರುವ ಮಕ್ಕಳು ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದರು. ಆದ್ದರಿಂದ ಈ ಭಾಗದ ಜನ ಬಸ್‍ಗಾಗಿ ಸರ್ಕಾರಕ್ಕೆ ಹತ್ತಾರು ಮನವಿ ಸಲ್ಲಿಸಿದ್ದರು. ದತ್ತಪೀಠದ ಮಾರ್ಗದಲ್ಲಿ ಕಿರಿದಾಗಿದ್ದ ರಸ್ತೆಯನ್ನು ಸರ್ಕಾರ ಅಗಲೀಕರಣ ಮಾಡಿದ್ದು, ಈಗ ದತ್ತಪೀಠಕ್ಕೆ ಬಸ್ ಸೌಲಭ್ಯ ಕಲ್ಪಿಸಿದ್ದು ಸ್ಥಳೀಯರಲ್ಲಿ ಸಂತಸ ಮೂಡಿದೆ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸಂಚರಿಸುವ ಬಸ್ಸಿಗೆ ಸಚಿವ ಸಿ.ಟಿ ರವಿ ಚಾಲನೆ ನೀಡಿದ್ದಾರೆ.

    ತಮ್ಮ ಮಾರ್ಗಕ್ಕೆ ಬಸ್ ಬಂದ ಖುಷಿಗೆ ಈ ಮಾರ್ಗದ ಗ್ರಾಮಸ್ಥರೆಲ್ಲಾ ಬಸ್ಸಿಗೆ ಪೂಜೆ ಮಾಡಿ ಸ್ವಾಗತಿಸಿಕೊಂಡಿದ್ದು, ಬಳಿಕ ದತ್ತಪೀಠದಲ್ಲೂ ಪೂಜೆ ಸಲ್ಲಿಸಲಾಗಿದೆ. ತಮ್ಮ ಮಾರ್ಗಕ್ಕೆ ಬಸ್ ಬಂದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಭಾಗದಲ್ಲಿ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರೇ ಹೆಚ್ಚಿದ್ದರು. ಅವರ ನಗರ ಪ್ರದೇಶಕ್ಕೆ ಬರಬೇಕಂದರೆ ಖಾಸಗಿ ಜೀಪ್, ಆಟೋಗಳಿಗೆ ಅವರು ಕೇಳಿದಷ್ಟು ಹಣವನ್ನು ನೀಡಬೇಕಿತ್ತು. ಈಗ ಸರ್ಕಾರ ಬಸ್ ಬಿಟ್ಟಿರುವುದರಿಂದ ಸ್ಥಳೀಯರಲ್ಲಿ ಸಂತಸ ಮನೆ ಮಾಡಿದೆ.

  • ಮಗಳನ್ನು ನೋಡಲು ಹಾಸ್ಟೆಲ್‍ಗೆ ತೆರಳುತ್ತಿದ್ದ ತಾಯಿಯ ಮೇಲೆ ಹರಿದ ಬಸ್

    ಮಗಳನ್ನು ನೋಡಲು ಹಾಸ್ಟೆಲ್‍ಗೆ ತೆರಳುತ್ತಿದ್ದ ತಾಯಿಯ ಮೇಲೆ ಹರಿದ ಬಸ್

    ಮೈಸೂರು: ಸರ್ಕಾರಿ ಬಸ್ ಚಾಲಕನ ಬೇಜವಾಬ್ದಾರಿತನದಿಂದ ಮಗಳನ್ನು ನೋಡಲು ಹಾಸ್ಟೆಲ್‍ಗೆ ಹೋಗುತ್ತಿದ್ದ ವಿವಾಹಿತ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

    ನಂಜನಗೂಡು ತಾಲೂಕಿನ ಮುದ್ದಹಳ್ಳಿ ಸಮೀಪದ ಕಡುಬಿನ ಕಟ್ಟೆ ಗೇಟ್ ಬಳಿ ಈ ಘಟನೆ ನಡೆದಿದ್ದು, ಚನ್ನಪಟ್ಟಣ ಗ್ರಾಮದ ಮಹಿಳೆ ಭಾಗ್ಯಮ್ಮ (30) ಮೃತ ದುರ್ದೈವಿ. ಕಡುಬಿನ ಕಟ್ಟೆ ಗೇಟ್ ಬಳಿಯಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನ್ನ ಮಗಳನ್ನು ಭೇಟಿ ಮಾಡಲು ಮೊರಾರ್ಜಿ ವಸತಿ ಶಾಲೆಗೆ ಬಸ್ಸಿನಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

    ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಭಾಗ್ಯಮ್ಮ ಸಂಪೂರ್ಣವಾಗಿ ಇಳಿಯುವ ಮುನ್ನವೇ ಚಾಲಕ ಬಸ್ ಚಲಾಯಿಸಿದ್ದಾನೆ. ಇದರಿಂದ ಭಾಗ್ಯಮ್ಮ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಬಸ್ಸಿನ ಹಿಂಬದಿ ಚಕ್ರ ಹರಿದ ಪರಿಣಾಮ ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಂಜನಗೂಡಿನ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.

  • ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಡರಾತ್ರಿಯಲ್ಲಿ ವಿದ್ಯಾರ್ಥಿನಿಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಬಸ್ ಡ್ರೈವರ್, ಕಂಡಕ್ಟರ್

    ತಿರುವನಂತಪುರಂ: ತಡರಾತ್ರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಸುರಕ್ಷತೆಗಾಗಿ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿಕೊಂಡು ಕಾದು ಕುಳಿತ ಬಸ್ ಕಂಡಕ್ಟರ್ ಮತ್ತು ಡ್ರೈವರ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಇತ್ತೀಚಿಗೆ ದೇಶಾದ್ಯಂತ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಮನೆ ಮಾಡಿದೆ. ಇದರ ಬೆನ್ನಲ್ಲೇ ಕೇರಳ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡ್ರೈವರ್ ಡೆನ್ನಿಸ್ ಕ್ಸೇವಿಯರ್ ಓರ್ವ ವಿದ್ಯಾರ್ಥಿನಿಗೆ ಮಾಡಿರುವ ಸಹಾಯಕ್ಕೆ ಎಲ್ಲರೂ ಮೆಚ್ಚಿಕೊಂಡಾಡಿದ್ದಾರೆ.

    ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಫಿಲ್ ಓದುತ್ತಿರುವ ಕೇರಳದ ಕಣ್ಣೂರಿನ ವಿದ್ಯಾರ್ಥಿ ಎಲ್ಸಿನಾ ತನ್ನ ಸಂಶೋಧನೆ ಕೆಲಸದ ನಿಮಿತ್ತ ಕಳೆದ ಮಂಗಳವಾರ ಸರ್ಕಾರಿ ಬಸ್ ನಲ್ಲಿ ಕೊಟ್ಟಾಯಂ ಜಿಲ್ಲೆಯ ಪೊಡಿಮಟ್ಟಂಗೆ ತೆರಳಿದ್ದಾಳೆ. ಈ ವೇಳೆ ಅವಳು ಪೊಡಿಮಟ್ಟಂ ಹತ್ತಿರದ ಕಂಜರಪಲ್ಲಿ ಬಸ್ ನಿಲ್ದಾಣಕ್ಕೆ ಬರುವುದರೊಳಗೆ ರಾತ್ರಿ 11 ಗಂಟೆಯಾಗಿದೆ. ಆ ದಿನ ಅಂದು ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ನಿಲ್ದಾಣದ ಬಳಿಯಿದ್ದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.

    ಈ ವೇಳೆ ಅಲ್ಲಿ ಎಲ್ಸಿನಾ ಒಬ್ಬಳೇ ಆ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಜನರೇ ಇಲ್ಲದ ಸ್ಥಳದಲ್ಲಿ ಒಬ್ಬಳೇ ಹೆಣ್ಣುಮಗಳನ್ನು ಕೆಳಗಿಳಿಸಬಾರದು ಎಂದು ಡ್ರೈವರ್ ಮತ್ತು ಕಂಡಕ್ಟರ್ ಅದೇ ನಿಲ್ದಾಣದಲ್ಲಿ ಬಸ್ ಸಿಲ್ಲಿಸಿಕೊಂಡು ಎಲ್ಸಿನಾಳನ್ನು ಕರೆದುಕೊಂಡು ಹೋಗಲು ಅವಳ ಸಂಬಂಧಿ ಬರುವವರೆಗೂ ಕಾಯ್ದಿದ್ದಾರೆ. ಇದಕ್ಕೆ ಬಸ್‍ನಲ್ಲಿ ಇದ್ದ ಸಹ ಪ್ರಯಾಣಿಕರು ಸಹ ಸಾಥ್ ನೀಡಿದ್ದಾರೆ. ಕೆಲ ಸಮಯದ ನಂತರ ಎಲ್ಸಿನಾ ಸಂಬಂಧಿಯೊಬ್ಬರು ಸ್ಥಳಕ್ಕೆ ಬಂದು ಅವಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

    ಬಸ್ ಕಂಡಕ್ಟರ್ ಪಿ.ಶಜುದ್ದೀನ್ ಮತ್ತು ಡೆನ್ನಿಸ್ ಕ್ಸೇವಿಯರ್ ಅವರು ರಾತ್ರಿ ವೇಳೆ ವಿದ್ಯಾರ್ಥಿನಿಯ ಭದ್ರತೆಯ ಬಗ್ಗೆ ತೋರಿದ ಕಾಳಜಿಗೆ ಮತ್ತು ಸಹ ಪ್ರಯಾಣಿಕರ ತಾಳ್ಮೆಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೊಟ್ಟಾಯಂ ಜಿಲ್ಲೆಯ ಪುಂಜಾರ್ ತಾಲೂಕಿನ ಶಾಸಕರಾದ ಪಿ.ಸಿ. ಜಾರ್ಜ್ ಅವರು ಶಜುದ್ದೀನ್ ಮತ್ತು ಕ್ಸೇವಿಯರ್ ಅವರನ್ನು ಅಭಿನಂದಿಸಿದ್ದಾರೆ.

  • 1 ರೂ. ಚಿಲ್ಲರೆಗಾಗಿ ಪ್ರಯಾಣಿಕನ ತಲೆ ಒಡೆದ ಬಸ್ ಕಂಡಕ್ಟರ್

    1 ರೂ. ಚಿಲ್ಲರೆಗಾಗಿ ಪ್ರಯಾಣಿಕನ ತಲೆ ಒಡೆದ ಬಸ್ ಕಂಡಕ್ಟರ್

    ತುಮಕೂರು: ಒಂದು ರೂಪಾಯಿ ಚಿಲ್ಲರೆಗಾಗಿ ಬಸ್ ಕಂಡಕ್ಟರ್ ಪ್ರಯಾಣಿಕನ ತಲೆ ಒಡೆದಿದ್ದಾನೆ. ಬೆಂಗಳೂರು-ಕೊರಟಗೆರೆ ಹೆದ್ದಾರಿಯ ಚಿಕ್ಕಪಾಲನಹಳ್ಳಿ ಬಳಿ ಈ ಘಟನೆ ನಡೆದಿದೆ.

    ಪಾವಗಡದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‍ನಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕ ಕಂಬಯ್ಯ ಎಂಬವರಿಗೆ ಬಸ್ ಕಂಡಕ್ಟರ್ ಟಿಕೆಟ್ ಕೊಡುವ ಮೆಷಿನ್‍ಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಹಲ್ಲೆಯ ತೀವ್ರತೆಗೆ ಪ್ರಯಾಣಿಕ ತಲೆ ಒಡೆದು ರಕ್ತ ಬಂದಿದೆ.

    ಪಾವಗಡದಿಂದ ಬರುತ್ತಿದ್ದ ಬಸ್‍ಗೆ ನಾಗೇನಹಳ್ಳಿ ನಿಲ್ದಾಣದಲ್ಲಿ ಹತ್ತಿದ್ದ ಕಂಬಯ್ಯ ಮಾಕಳಿಗೆ ಟಿಕೆಟ್ ಪಡೆಯಲು ಹಣ ನೀಡಿದ್ದಾರೆ. ಈ ವೇಳೆ ಒಂದು ರೂಪಾಯಿ ಚಿಲ್ಲರೆ ಕಡಿಮೆ ಇದೇ ಎಂಬ ವಿಚಾರಕ್ಕೆ ಕಂಡಕ್ಟರ್ ಮತ್ತು ಕಂಬ್ಬಯ್ಯನ ನಡುವೆ ಜಗಳವಾಗಿದೆ. ಈ ಕಾರಣಕ್ಕೆ ಕೋಪಗೊಂಡ ಕಂಡಕ್ಟರ್ ಟಿಕೆಟ್ ಮೆಷಿನ್ ನಿಂದ ಕಂಬಯ್ಯನ ತಲೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಪರಿಣಾಮ ಕಂಬ್ಬಯ್ಯನ ತಲೆ ಒಡೆದು ಹೋಗಿ ಬಟ್ಟೆಯೆಲ್ಲಾ ರಕ್ತಸಿಕ್ತವಾಗಿದೆ.

    ಒಂದು ರೂ. ಚಿಲ್ಲರೆಗಾಗಿ ಪ್ರಯಾಣಿಕ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಬಸ್ ಕಂಡಕ್ಟರ್ ಮೇಲೆ ಸಾರ್ವಜನಿಕರು ಮತ್ತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಕಂಬ್ಬಯ್ಯನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

  • ಬೈಕಿನಲ್ಲಿದ್ದ ಬಾಲಕರಿಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ – ಓರ್ವ ಸಾವು, 20 ಮಂದಿಗೆ ಗಾಯ

    ಬೈಕಿನಲ್ಲಿದ್ದ ಬಾಲಕರಿಗೆ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಪಲ್ಟಿ – ಓರ್ವ ಸಾವು, 20 ಮಂದಿಗೆ ಗಾಯ

    ವಿಜಯಪುರ: ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಪಲ್ಟಿಯಾದ ಘಟನೆ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬಳಗಾನೂರ ಗ್ರಾಮದ ಹತ್ತಿರ ನಡೆದಿದೆ. ಈ ಘಟನೆಯಲ್ಲಿ ಬೈಕಿನಲ್ಲಿದ್ದ ಬಾಲಕ ಸಾವನ್ನಪ್ಪಿದ್ದು, ಬಸಿನಲ್ಲಿದ್ದ 20 ಜನರಿಗೆ ಗಾಯಗಳಾಗಿವೆ.

    ವಿಜಯಪುರದಿಂದ ತಾಳಿಕೋಟೆಗೆ ಆಗಮಿಸುತ್ತಿದ್ದ ಕೆಎ 28 ಎಫ್ 2087 ಬಸ್, ರಸ್ತೆ ಮಧ್ಯೆ ಬೈಕಿನಲ್ಲಿ ಬಂದ ಇಬ್ಬರು ಬಾಲಕರನ್ನು ತಪ್ಪಿಸಲು ಹೋಗಿ ಈ ಅನಾಹುತ ಸಂಭವಿಸಿದೆ. ಬಸ್ಸಿನ ಚಕ್ರದೊಳಗೆ ಬೈಕ್ ಸಿಲುಕಿಕೊಂಡ ಕಾರಣ ಓರ್ವ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಮೃತ ಬಾಲಕನನ್ನು ಬೀರಣ್ಣ ಪರದಾನಿ ಬೀರಗುಂಡ(15) ಎಂದು ಗುರುತಿಸಲಾಗಿದೆ. ಇಬ್ಬರು ಬಾಲಕರು ಸಹೋದರರಾಗಿದ್ದು, ಡವಳಗಿ ಗ್ರಾಮದಿಂದ ಕೊಣ್ಣೂರ ಗ್ರಾಮದಲ್ಲಿರುವ ತಮ್ಮ ಸಹೋದರಿಯನ್ನು ಕರೆದುಕೊಂಡು ಹೋಗಲು ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

    ಸದ್ಯ ಗಾಯಾಳುಗಳನ್ನು ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ ಅಪ್ರಾಪ್ತರು ಚಲಾಯಿಸಿದ್ದರೆ 25,000 ದಂಡ ಹಾಗೂ ಪೋಷಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ.

  • ಸರ್ಕಾರಿ ರಾಜಹಂಸ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಸರ್ಕಾರಿ ರಾಜಹಂಸ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಗದಗ: ಸರ್ಕಾರಿ ರಾಜಹಂಸ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, 5 ಜನರಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ನಡೆದಿದೆ.

    ರಾಜಹಂಸ ಬಸ್ ಯಾದಗಿರಿಯಿಂದ ಗದಗ ಮಾರ್ಗವಾಗಿ ಧಾರವಾಡಕ್ಕೆ ತೆರಳುತ್ತಿತ್ತು. ಆದರೆ ಗಜೇಂದ್ರಗಡ ತಾಲೂಕಿನ ನಿಡಗುಂದಿ ಬಳಿ ಬರುತ್ತಿದ್ದಂತೆ ಬಸ್ ರಸ್ತೆ ಬದಿ ಪಲ್ಟಿಯಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳು ನರಳಾಡುತ್ತಿರುವುದನ್ನ ಕಂಡ ಸ್ಥಳೀಯರು ತಕ್ಷಣ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಚಾಲಕನ ಅಜಾಗರೂಕತೆಯಿಂದ ಬಸ್ ರಸ್ತೆ ಬದಿ ಉರುಳಿದೆ ಎನ್ನಲಾಗುತ್ತಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಕ್ಸಲ್ ತುಂಡಾಗಿ ಸರ್ಕಾರಿ ಬಸ್ ಪಲ್ಟಿ- 3 ಸಾವು, 20 ಪ್ರಯಾಣಿಕರು ಗಂಭೀರ

    ಆಕ್ಸಲ್ ತುಂಡಾಗಿ ಸರ್ಕಾರಿ ಬಸ್ ಪಲ್ಟಿ- 3 ಸಾವು, 20 ಪ್ರಯಾಣಿಕರು ಗಂಭೀರ

    ಯಾದಗಿರಿ: ಆಕ್ಸಲ್ ತುಂಡಾಗಿ ಸರ್ಕಾರಿ ಬಸ್ ರಸ್ತೆಯಲ್ಲಿ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಪುರ ತಾಲೂಕಿನ ನಡಿಹಾಳ ಬಳಿ ನಡೆದಿದೆ.

    ಘಟನೆಯಲ್ಲಿ 20 ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕನ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡವರನ್ನು ಶಹಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಹಪುರ ಡಿಪೋಗೆ ಸೇರಿದ ಬಸ್ ಇದಾಗಿದ್ದು, ಇಂದು ಮಧ್ಯಾಹ್ನ ಶಹಪುರದಿಂದ ಕೆಂಭಾವಿಗೆ ಕಡೆಗೆ ಹೋಗುತಿತ್ತು. ಮಾರ್ಗ ಮಧ್ಯೆ ಏಕಾಏಕಿ ಬಸ್ಸಿನ ಆಕ್ಸಲ್ ಕಟ್ ಆದ ಪರಿಣಾಮ, ಪಲ್ಟಿ ಹೊಡೆದು ಅಪಘಾತಕ್ಕೊಳಗಾಗಿದೆ.

    ಬಸ್ ಪಲ್ಟಿಯಾದ ಪರಿಣಾಮ ಹೊರ ಬರಲಾಗದೇ ಮೂವರು ಪ್ರಯಾಣಿಕರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಹೊರ ಕರೆತಂದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಘಟನಾ ಸ್ಥಳಕ್ಕೆ ಎಸ್‍ಪಿ ಋಷಿಕೇಶ್ ಭಗವಾನ್ ಭೇಟಿ ನೀಡಿ, ಘಟನೆ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ. ಸದ್ಯ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ತುಂಬಿದ ಬಸ್ಸಿನಲ್ಲಿ ಪ್ರೇಮಿಗಳ ಪರಸ್ಪರ ಚುಂಬನ

    ತುಂಬಿದ ಬಸ್ಸಿನಲ್ಲಿ ಪ್ರೇಮಿಗಳ ಪರಸ್ಪರ ಚುಂಬನ

    ಕೋಲಾರ: ತುಂಬಿದ ಬಸ್ಸಿನಲ್ಲಿ ಪ್ರೇಮಿಗಳು ಪರಸ್ಪರ ಚುಂಬನ ನೀಡಿ ಅಸಭ್ಯವಾಗಿ ವರ್ತಿಸಿದ ಘಟನೆ ಶುಕ್ರವಾರ ಕೋಲಾರದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಪ್ರೇಮಿಗಳು ಬಂಗಾರಪೇಟೆ ಮೂಲದವರು ಎಂದು ಹೇಳಲಾಗುತ್ತಿದೆ. ಶುಕ್ರವಾರ ಕೋಲಾರದಿಂದ ಬಂಗಾರಪೇಟೆಗೆ ಸಂಚರಿಸುತ್ತಿದ್ದ ಕೆಎ 07- ಎಫ್-1432 ಸರ್ಕಾರಿ ಸರ್ಕಾರಿ ಬಸ್ಸಿನಲ್ಲಿ ಯುವಕ- ಯುವತಿ ಅಸಭ್ಯವಾಗಿ ವರ್ತಿಸಿದ್ದಾರೆ.

    ಪ್ರಯಾಣಿಕರು ಪ್ರೇಮಿಗಳು ಪರಸ್ಪರ ಚುಂಬನ ನೀಡುತ್ತಿರುವ ವಿಡಿಯೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಪ್ರೇಮಿಗಳ ರೊಮ್ಯಾನ್ಸ್ ನಿಂದ ಸಹ ಪ್ರಯಾಣಿಕರು ಮುಜುಗರಕ್ಕೆ ಒಳಗಾಗಿದ್ದಾರೆ.

    ಸರ್ಕಾರಿ ಬಸ್ಸಿನಲ್ಲಿ ಪ್ರೇಮಿಗಳ ರೊಮ್ಯಾನ್ಸ್ ಜರ್ನಿ ನಡೆದಿದೆ. ಪ್ರೇಮಿಗಳು ಬಸ್ಸಿನಲ್ಲಿ ಮೈ ಮರೆತು ಅಸಭ್ಯವಾಗಿ ವರ್ತಿಸಿದ್ದನ್ನು ನೋಡಿದ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

  • ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಲ್ಲೇ ಓಡಾಡಿ – ಉಡುಪಿ ಡಿಸಿ ಹೆಪ್ಸಿಬಾ ರಾಣಿ ಆದೇಶ

    ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಲ್ಲೇ ಓಡಾಡಿ – ಉಡುಪಿ ಡಿಸಿ ಹೆಪ್ಸಿಬಾ ರಾಣಿ ಆದೇಶ

    ಉಡುಪಿ: ಪರಿಸರ ಪ್ರೇಮಿಯಾದ ಉಡುಪಿ ಡಿಸಿ ಹೆಪ್ಸಿಬಾ ರಾಣಿ ಸರ್ಕಾರಿ ಅಧಿಕಾರಿಗಳೆಲ್ಲಾ ಪ್ರತಿ ಗುರುವಾರ ಬಸ್ಸಿನಲ್ಲಿ ಓಡಾಡಬೇಕು ಎಂದು ಹೊಸ ಆದೇಶವನ್ನು ನೀಡಿದ್ದಾರೆ.

    ವರ್ಷದಿಂದ ವರ್ಷಕ್ಕೆ ಜನರಲ್ಲಿ ಪರಿಸರದ ಕಾಳಜಿ ಜಾಸ್ತಿಯಾಗುತ್ತಿದೆ. ಆದರೆ ಪರಿಸರ ಮಾಲಿನ್ಯ ಮಾತ್ರ ಕಮ್ಮಿ ಆಗುತ್ತಿಲ್ಲ. ನಗರಗಳಲ್ಲಿ ವಾಹನ ದಟ್ಟಣೆಯೇ ಇದಕ್ಕೆ ನೇರ ಕಾರಣ, ಹೇಗಾದರೂ ಮಾಡಿ ಪರಿಸರ ಮಾಲಿನ್ಯ ಕಡಿಮೆ ಮಾಡಲು ಉಡುಪಿ ಡಿಸಿ ಪಣ ತೊಟ್ಟಿದ್ದಾರೆ.

     

    ಪ್ರತಿ ಗುರುವಾರ ಅಧಿಕಾರಿಗಳು ಸರ್ಕಾರಿ ವಾಹನ ಉಪಯೋಗಿಸದೆ, ಬಸ್‍ನಲ್ಲಿ ಓಡಾಡೋ ಆದೇಶವನ್ನು ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಇದನ್ನು ಪಾಲಿಸುತ್ತಿದ್ದಾರೆ. ಪ್ರತೀ ಗುರುವಾರ ಬಸ್ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತದೆ. ನಗರದ ಪ್ರಮುಖ ಜಂಕ್ಷನ್‍ಗಳಲ್ಲಿ ಸರ್ಕಾರಿ ನೌಕರರರು ಈ ಬಸ್ಸಿಗಾಗಿ ಕಾಯುತ್ತಿರಬೇಕು. ಬಸ್ ಬಂದ ಕೂಡಲೇ ಹತ್ತಿಕೊಂಡು ಜಿಲ್ಲಾಧಿಕಾರಿ ಕಚೇರಿ ಸೇರಬೇಕು ಎಂದು ಆದೇಶ ನೀಡಿದ್ದಾರೆ.

    ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ, ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆಯಾದರೆ ಅಟೋಮ್ಯಾಟಿಕ್ ಆಗಿ ಪರಿಸರ ಮಾಲಿನ್ಯ ಕಡಿಮೆ ಆಗುತ್ತದೆ. ಮಾಲಿನ್ಯ ಕಡಿಮೆ ಆದರೆ ನಮ್ಮದೇ ಆರೋಗ್ಯ ಚೆನ್ನಾಗಿರುತ್ತದೆ. ಸಮಸ್ಯೆಯೂ ನಮ್ಮಿಂದನೇ ಆಗುತ್ತಿದೆ ಅದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಒಂದೇ ಸಂಸ್ಥೆಗಳಲ್ಲಿ ಅಥವಾ ಕಂಪನಿಗಳಲ್ಲಿ ಕೆಲಸ ಮಾಡುವ ಹತ್ತಿಪ್ಪತ್ತು ಜನ ಒಂದು ವಾಹನದಲ್ಲಿ ಹೋದರೆ ಅಷ್ಟೂ ವಾಹನ ಓಡಾಟ ಇರಲ್ಲ ಮತ್ತು ಇಂಧನ ಕೂಡಾ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಡಿಸಿ ಸದ್ಯ ವಾರ್ತಾ ಇಲಾಖೆಯ ಬಸ್ಸನ್ನು ಗುರುವಾರ ಎರಡು ಟ್ರಿಪ್ ಓಡಿಸೋಕೆ ಆದೇಶ ಮಾಡಿದ್ದಾರೆ. ಮುಂದೆ ಸರ್ಕಾರಿ ಬಸ್ಸು ಓಡಾಡಲಿದೆಯಂತೆ. ಪ್ರತಿಯೊಬ್ಬರು ಈ ರೀತಿಯ ನಿರ್ಧಾರ ಮಾಡಿದರೆ ನಿಜವಾದ ಪರಿಸರ ರಕ್ಷಣೆ ಮಾಡಬಹುದು. ಪರಿಸರ ನಾಶ ಕಡಿಮೆ ಮಾಡಿ ಪರಿಸರ ರಕ್ಷಣೆ ಮಾಡುವ ಈ ಯೋಜನೆಯ ರಿಸಲ್ಟ್ ಪಾಸಿಟಿವ್ ಆಗಿ ಇರಲಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.