Tag: ಸರ್ಕಾರಿ ಬಸ್

  • ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    ಸರ್ಕಾರಿ ಬಸ್ ಪೂಜೆಗೆ 100 ರೂಪಾಯಿ ನೀಡಿದ ಸಾರಿಗೆ ಇಲಾಖೆ

    -ಕಾರ್, ಜೀಪ್ ಪೂಜೆಗೆ 40 ರೂಪಾಯಿ

    ಬೆಂಗಳೂರು: ಸರ್ಕಾರಿ ಬಸ್ ಆಯುಧ ಪೂಜೆಗಾಗಿ ಸಾರಿಗೆ ಇಲಾಖೆ ನೌಕರರಿಗೆ 100 ರೂಪಾಯಿ ನೀಡಿರುವುದು ಸುದ್ದಿಯಾಗಿದೆ.

    ಸಾರಿಗೆ ಸಚಿವರೇನೋ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬ ಮಾಡುತ್ತಾರೆ. ಅವ್ರಿಗೇನು ಕಡಿಮೆ ಹೇಳಿ, ಸಾರಿಗೆ ಇಲಾಖೆ ನನಗೆ ಬೇಡ ಎನ್ನುತ್ತಿದ್ದ ಅವರು ಕೊನೆಗೆ ಅನಿವಾರ್ಯವಾಗಿ ಸಾರಿಗೆ ಸಚಿವರಾಗಿ ಮುಂದುವರೆಯುತ್ತಿದ್ದು, ಶ್ರೀರಾಮುಲು ಅವ್ರಿಗೆ ಸಾರಿಗೆ ನೌಕರರ ಕಷ್ಟವೇನು ಅನ್ನೋದು ತಿಳಿದಿಲ್ಲ. ಸಾರಿಗೆ ನೌಕರರ ಕಷ್ಟ ತಿಳಿದಿದ್ರೆ ಖಂಡಿತ ಹೀಗೆ ಬಸ್ ಪೂಜೆಗೆ ಅಂತಾ 100 ರೂ ನೀಡ್ತಿರಲಿಲ್ಲ. ಸಾರಿಗೆ ಇಲಾಖೆಯವರು ಆಯುಧ ಪೂಜೆ ಪ್ರಯುಕ್ತ ಬಸ್ ಪೂಜೆಗೆ 100 ರೂ ನೀಡಿದ್ದಾರೆ. ಇವತ್ತಿನ ದುಬಾರಿ ದುನಿಯಾದಲ್ಲಿ 100 ರೂಪಾಯಿಗೆ ಏನ್ ಬರುತ್ತೆ ಎಂದು ನೌಕರರು ಈ ಬಗ್ಗೆ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಇನ್ನೊಂದು ವಾರ ಶಾರೂಖ್ ಮಗನಿಗೆ ಜೈಲೇ ಗತಿ

    100 ರೂಪಾಯಿಯಲ್ಲಿ ಹೂ, ಹಣ್ಣು, ಬಾಳೆಕಂದು, ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡೋದಕ್ಕೆ ಆಗುತ್ತಾ? ಕೋಟ್ಯಂತರ ರೂಪಾಯಿ ಸಂಪಾದನೆಗೆ ಕಾರಣವಾಗಿರೋ ಬಸ್ ಗಳ ಪೂಜೆಗೆ ಹಣ ಕೊಡಲು ಸಾರಿಗೆ ಇಲಾಖೆ ಹೀಗೆ ಯಾಕೆ ಮಾಡುತ್ತಿದೆ ಎನ್ನುವುದು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಾರಿಗೆ ಇಲಾಖೆ ಸಿಬ್ಬಂದಿ ಸಮಸ್ಯೆ ಆಲಿಸಿದ ಶ್ರೀರಾಮುಲು

    100 ರೂಪಾಯಿ ಆಯುಧ ಪೂಜೆ ಮಾಡಬೇಕಾದ ದಾರುಣ ಪರಿಸ್ಥಿತಿ ಮಾತ್ರ ನಮ್ಮ ಸಾರಿಗೆ ನೌಕರರದ್ದು. ಅಷ್ಟೇ ಅಲ್ಲ ಸಾರಿಗೆ ಇಲಾಖೆಯಲ್ಲಿರುವ ಕಾರ್, ಜೀಪ್ ಪೂಜೆಗೂ ಸಾರಿಗೆ ಇಲಾಖೆ 40 ರೂಪಾಯಿ ನೀಡಿದೆ. 40 ರೂಪಾಯಿ ತಗೊಂಡು ಯಾವ ಮಾರ್ಕೆಟ್‍ಗೆ ಹೋಗಿ ಶಾಪಿಂಗ್ ಮಾಡಿ ಪೂಜೆ ಮಾಡಬೇಕೋ ಗೊತ್ತಿಲ್ಲ ಎನ್ನುತ್ತಿದ್ದಾರೆ ಸಾರಿಗೆ ನೌಕರರು.

  • ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಬೆಂಗಳೂರು: ರಾಜ್ಯದಲ್ಲಿ ಶಾಲಾ-ಕಾಲೇಜು ಆರಂಭವಾದರೂ ಕೂಡ ಸೂಕ್ತವಾದ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರ ಉಸ್ತುವಾರಿ ಜಿಲ್ಲೆಯಲ್ಲೇ ನೂರಾರು ವಿದ್ಯಾರ್ಥಿಗಳು ಕಾಲ್ನಡಿಗೆಯ ಮೂಲಕ ಶಾಲೆಗೆ ತೆರಳುವ ಪರಿಸ್ಥಿತಿ ಇದೆ.

    ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆ ಯಾದಗಿರಿಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೆ, ಕಿಲೋ ಮೀಟರ್ ಗಟ್ಟಲೆ ನಡೆದುಕೊಂಡೆ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ಅಷ್ಟು ದೂರ ನಡೆಯಬೇಕಾದರೂ ಸಹ ವಿದ್ಯಾರ್ಥಿಗಳಲ್ಲಿ ಕೊಂಚವೂ ಓದುವ ಉತ್ಸಾಹ ಮಾತ್ರ ಕಡಿಮೆ ಆಗಿಲ್ಲ. ಓದಿನಲ್ಲಿ ಗುರಿ ಹೊಂದಿರುವ ವಿದ್ಯಾರ್ಥಿಗಳು ಹುಮ್ಮಸ್ಸಿನಲ್ಲೇ ನಿತ್ಯ ನಡೆದು ಶಾಲೆಯತ್ತ ಸಾಗುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆ ಸಂದರ್ಭ ಮಾತ್ರವಲ್ಲ, ನಿರಂತರವಾಗಿ ಜನರ ಯೋಗಕ್ಷೇಮ ವಿಚಾರಿಸಬೇಕು: ಆರ್.ಅಶೋಕ್

    ಯಾದಗಿರಿ ಮಾತ್ರವಲ್ಲದೇ ಇತ್ತ ದಾವಣಗೆರೆ ಜಿಲ್ಲೆಯಲ್ಲೂ ಇದೇ ಪರಸ್ಥಿತಿ. ಚನ್ನಗಿರಿ ತಾಲೂಕಿನ 15ಕ್ಕೂ ಅಧಿಕ ಹಳ್ಳಿಗಳಿಗೆ ಇನ್ನೂ ಸಹ ಬಸ್‍ಗಳ ವ್ಯವಸ್ಥೆಯೇ ಇಲ್ಲ. ಸಂತೆಬೆನ್ನೂರು ಹೊರವಲಯದಲ್ಲಿರುವ ಕಾಲೇಜ್‍ಗೆ ತೆರಳಲು ವಿದ್ಯಾರ್ಥಿಗಳು ನಿತ್ಯ ಎರಡು ಕಿಲೋ ಮೀಟರ್ ನಡೆಯಲೇಬೇಕು. ನಲ್ಕುದುರೆ, ವೆಂಕಟೇಶ್ವರ ಕ್ಯಾಂಪ್, ಕೋಗಲುರು ಸೇರಿ 15ಕ್ಕೂ ಅಧಿಕ ಹಳ್ಳಿಗಳಲ್ಲಿ ಬಸ್ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

    ಡೀಸೆಲ್ ಬೆಲೆ ದುಬಾರಿ ಆಗಿರುವುದರಿಂದ ಖಾಸಗಿ ಬಸ್, ಆಟೋದವರು ದುಪ್ಪಟ್ಟು ಹಣ ಪೀಕುತ್ತಿದ್ದಾರೆ. ಇದರಿಂದಾಗಿ ಅವರಿಗೆ ಹಣ ನೀಡುವ ಬದಲು ವಿದ್ಯಾರ್ಥಿಗಳೇ ನಡೆದುಕೊಂಡು ಹೋಗುತ್ತಿದ್ದಾರೆ. ಇದೇ ರೀತಿಯ ಪರಿಸ್ಥಿತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡು ಬರುತ್ತಿದ್ದು, ಶಿಕ್ಷಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಬೇಕಾಗಿದೆ. ಇದನ್ನೂ ಓದಿ: ಕಲಬುರಗಿ ಮೇಯರ್ ಚುನಾವಣೆ- ಜೆಡಿಎಸ್ ಮುಂದೆ ಮಂಡಿಯೂರಲು ಕಾಂಗ್ರೆಸ್ ಸಜ್ಜಾಗಿದ್ಯಾ?

  • ಸರ್ಕಾರಿ ಬಸ್ಸಿನಲ್ಲೇ ಕೋವಿಡ್ ನಿಯಮ ಉಲ್ಲಂಘನೆ- ನೇತಾಡಿಕೊಂಡು ಹೋದ ಜನ

    ಸರ್ಕಾರಿ ಬಸ್ಸಿನಲ್ಲೇ ಕೋವಿಡ್ ನಿಯಮ ಉಲ್ಲಂಘನೆ- ನೇತಾಡಿಕೊಂಡು ಹೋದ ಜನ

    ಮಡಿಕೇರಿ: ರಾಜ್ಯದಲ್ಲಿ ಕೋವಿಡ್ ಸೋಂಕು ಇನ್ನೂ ಸಂಪೂರ್ಣ ಹೋಗಿಲ್ಲ ಎನ್ನುವ ಕಾರಣದಿಂದಲೇ ಸರ್ಕಾರ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲಿ ಅಥವಾ ಯಾವುದೇ ಸಾರಿಗೆ ಬಸ್ಸುಗಳಲ್ಲಿ ಶೇ.50 ರಷ್ಟು ಸೀಟುಗಳಲ್ಲಿ ಮಾತ್ರ ಜನರ ಸಾಗಾಟಕ್ಕೆ ಅವಕಾಶ ಮಾಡಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲೇ ಕೋವಿಡ್ ನಿಯಮ ಸಂಪೂರ್ಣ ಉಲ್ಲಂಘನೆ ಆಗುತ್ತಿದೆ.

    ಎಲ್ಲಾ ಸೀಟುಗಳಲ್ಲಿ ಜನರನ್ನು ಭರ್ತಿಯಾಗಿ ಕುಳಿತುಕೊಳ್ಳುವ ಜೊತೆಗೆ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸೋಂಕು ಇನ್ನಷ್ಟು ಹರಡುವುದಕ್ಕೆ ಕಾರಣವಾಗುತ್ತಿದ್ದಾರೆ.

    ಮಡಿಕೇರಿಯಿಂದ ಕುಶಾಲನಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಪ್ರಯಾಣಿಸುತ್ತಿದ್ದರು. ಮಾಧ್ಯಮಗಳನ್ನು ಕಂಡು ಮಡಿಕೇರಿಯ ಟೋಲ್ ಗೇಟ್ ನಲ್ಲಿ ಡ್ರೈವರ್ ಬಸ್ಸು ನಿಲ್ಲಿಸಿದ್ದಾನೆ. ಒಂದಷ್ಟು ಜನರು ಕೆಳಗಿಳಿಯುವಂತೆ ಹೇಳಿದ್ದಕ್ಕೆ ಜನರು ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್

    ಒಂದೆಡೆ ಕೊಡಗು ಜಿಲ್ಲೆಯಲ್ಲಿ ಕೊವಿಡ್ ಸೋಂಕು ನಿಯಂತ್ರಣಕ್ಕೆ ಬಾರದೆ ಇಂದಿಗೂ ಲಾಕ್ ಡೌನ್ ಮುಂದುವರಿಸಲಾಗಿದೆ. ಆದರೂ ಕೆಎಸ್‍ಆರ್ ಟಿಸಿ ಬಸ್ಸುಗಳಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಮತ್ತಷ್ಟು ಜನರಿಗೆ ಸೋಂಕು ಹರಡುವಂತೆ ಮಾಡುತ್ತಿರುವುದು ವಿಷಾದನೀಯ.

  • ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ವ್ಯವಸ್ಥೆ – ಸರ್ಕಾರಿ ಬಸ್ ಇದೀಗ ಆಕ್ಸಿಜನ್ ಬಸ್

    ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ವ್ಯವಸ್ಥೆ – ಸರ್ಕಾರಿ ಬಸ್ ಇದೀಗ ಆಕ್ಸಿಜನ್ ಬಸ್

    ಚಿಕ್ಕಮಗಳೂರು: ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಆಸ್ಪತ್ರೆ ಬಾಗಿಲಲ್ಲೇ ಆಕ್ಸಿಜನ್ ಕೊಡುವ ವ್ಯವಸ್ಥೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ತಯಾರಿ ನಡೆಸಲಾಗಿದ್ದು, ಅದಕ್ಕಾಗಿ ಸರ್ಕಾರಿ ಬಸ್‍ನ್ನು ಆಕ್ಸಿಜನ್ ಬಸ್ ಆಗಿ ಮಾರ್ಪಡಿಸಲಾಗಿದೆ.

    ಈಗಾಗಲೇ ರಾಜಧಾನಿಯಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಬೆಂಗಳೂರಿನ ಬಳಿಕ ಈ ಯೋಜನೆಯನ್ನು ಚಿಕ್ಕಮಗಳೂರಿನಲ್ಲೂ ಜಾರಿಗೆ ತರಲು ಈಗಾಗಲೇ ಜಿಲ್ಲಾಡಳಿತ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದು, ಸರ್ಕಾರಿ ಬಸ್‍ನ್ನು ಆಕ್ಸಿಜನ್ ಬಸ್ ಆಗಿ ರೆಡಿ ಮಾಡಲು ಮುಂದಾಗಿದೆ. ಈ ಆಕ್ಸಿಜನ್ ಬಸ್‍ನಲ್ಲಿ ಆರರಿಂದ ಎಂಟು ಜನ ರೋಗಿಗಳಿಗೆ ಏಕಕಾಲದಲ್ಲಿ ಆಕ್ಸಿಜನ್ ನೀಡಬಹುದಾಗಿದೆ. ಬಸ್‍ನಲ್ಲಿ ಈ ಯೋಜನೆಗೆ ಬೇಕಾದ ಕೆಲ ತಾಂತ್ರಿಕ ಕೆಲಸಗಳು ನಡೆಯುತ್ತಿದ್ದ ಸೋಮವಾರ ಇದು ಸೇವೆಗೆ ಲಭ್ಯವಾಗಲಿದೆ.

    ಆಸ್ಪತ್ರೆಗೆ ಬರುವ ರೋಗಿಗಳಿಗೆ ಕೂಡಲೇ ಆಕ್ಸಿಜನ್ ಬೆಡ್ ನೀಡಲು ಸಾಧ್ಯವಾಗದಿರಬಹುದು. ಈ ವೇಳೆ ಅವರಿಗೆ ಯಾವಾಗಲು ಆಸ್ಪತ್ರೆ ಮುಂಭಾಗವೇ ಇರುವ ಬಸ್‍ನಲ್ಲಿ ಕೂರಿಸಿ ಆಕ್ಸಿಜನ್ ನೀಡಲಾಗುತ್ತದೆ. ತದನಂತರ ವೈದ್ಯರ ಪರೀಕ್ಷೆ ಮೂಲಕ ಆವರ ಆರೋಗ್ಯದ ಸ್ಥಿತಿಗತಿ ಆಧಾರದ ಮೇಲೆ ಅವರಿಗೆ ಮುಂದಿನ ಚಿಕಿತ್ಸೆ ನೀಡಬಹುದು. ರೋಗಿಗಳಿಗೆ ಈ ರೀತಿ ಬಂದ ಕೂಡಲೇ ಆಕ್ಸಿಜನ್ ಸೌಲಭ್ಯ ನೀಡಿದರೆ ಅವರಿಗೆ ಅರ್ಧ ಧೈರ್ಯ ಬರುತ್ತದೆ. ಅನ್ನೋದು ಜಿಲ್ಲಾಡಳಿತ ನಂಬಿಕೆ. ಈಗಾಗಲೇ ಆಕ್ಸಿಜನ್ ಬಸ್ ಕೆಲಸ ಬಹುತೇಕ ಮುಗಿದಿದ್ದು ನಾಳೆ ಮಧ್ಯಾಹ್ನ ಈ ಆಕ್ಸಿಜನ್ ಆನ್ ವೀಲ್ಸ್ ಯೋಜನೆಗೆ ಚಾಲನೆ ಸಿಗಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

  • ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಾರಿಗೆ ನೌಕರರು

    ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಾರಿಗೆ ನೌಕರರು

    – ಹಲವು ಬೇಡಿಕೆ ಈಡೇರಿಸುವಂತೆ ಪತ್ರದಲ್ಲಿ ಮನವಿ

    ಮಡಿಕೇರಿ: ಆರನೇ ವೇತನ ಜಾರಿಗೊಳಿಸುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಕೊಡಗಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಪತ್ರ ನೀಡಿದರು.

    ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸಂಪೂರ್ಣ ಸ್ತಬ್ಧವಾಗಿತ್ತು. ಬೆಳಗ್ಗೆಯಿಂದಲೇ ಬಸ್ಸುಗಳು ಮಡಿಕೇರಿಯ ಡಿಪೋ ಬಿಟ್ಟು ರಸ್ತೆಗೆ ಇಳಿಯಲಿಲ್ಲ. ಇದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಖಾಸಗಿ ಬಸ್ ಮತ್ತು ಕ್ಯಾಬ್ ಗಳು ತಮ್ಮ ಸೇವೆ ಆರಂಭಿಸಿದ್ದರಿಂದ ಪ್ರಯಾಣಿಕರು ನಿರಾಳರಾದರು. ಸರ್ಕಾರಿ ಬಸ್ ಒಂದೇ ಒಂದು ಕೂಡ ಡಿಪೋ ಬಿಟ್ಟು ಹೊರಗೆ ಬಾರದಿದ್ದರಿಂದ ಮಡಿಕೇರಿ ಬಸ್ ನಿಲ್ದಾಣ ಸಂಪೂರ್ಣ ಖಾಲಿ ಹೊಡೆಯುತಿತ್ತು. ದೂರ ದೂರದ ಹೊರ ಜಿಲ್ಲೆಗಳಿಗೆ ಹೋಗಬೇಕಾಗಿದ್ದ ಕೆಲವರು ಬಸ್‍ಗಳ ವ್ಯವಸ್ಥೆ ಇಲ್ಲದೆ ಪರದಾಡಿದರು.

    ಸಾರಿಗೆ ನೌಕರರು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಗಮಿಸಿದರು. ಈ ವೇಳೆ ಶಾಸಕ ಅಪ್ಪಚ್ಚು ರಂಜನ್ ಮುಷ್ಕರ ನಡೆಸುವ ಮೂಲಕ ನಿಮ್ಮ ಸಂಸ್ಥೆಗೆ ನೀವೇ ನಷ್ಟ ಮಾಡುತ್ತಿದ್ದೀರಿ. ಅನ್ನ ಕೊಡುವ ಸಂಸ್ಥೆಗೆ ಮಣ್ಣು ಹಾಕುತ್ತಿದ್ದೀರಿ ಎಂದು ಗರಂ ಆದರು. ಅಷ್ಟೇ ಅಲ್ಲ ನಿಮ್ಮ ಪ್ರತಿಭಟನೆಯನ್ನು ಕೈಬಿಡಿ, ನಾವು ಕೂಡ ಕಳೆದ ಒಂದು ವರ್ಷದಿಂದ ಅರ್ಧ ಸಂಬಳ ತೆಗೆದುಕೊಳ್ಳುತ್ತಿದ್ದೇವೆ. ಕೋವಿಡ್ ನಿಂದಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಇದು ಸರಿಯಾದ ಬಳಿಕ ನಿಮ್ಮ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆ ಎಂದರು. ಇದಕ್ಕೆ ನೌಕರರು ಕೂಡ ಸರ್ಕಾರ ಈಗ ಆರನೇ ವೇತನ ಜಾರಿಮಾಡಲಿ, ಆರ್ಥಿಕ ಸಂಕಷ್ಟದಿಂದ ಹೊರಬಂದ ಬಳಿಕವೇ ನಮಗೆ ಸಮಾನ ವೇತನ ನೀಡಲಿ ಎಂದು ಆಗ್ರಹಿಸಿ ಅಪ್ಪಚ್ಚು ರಂಜನ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

  • ಮುಷ್ಕರದ ನಡುವೆಯೂ ಪೀಲ್ಡಿಗಿಳಿದ ಸರ್ಕಾರಿ ಬಸ್

    ಮುಷ್ಕರದ ನಡುವೆಯೂ ಪೀಲ್ಡಿಗಿಳಿದ ಸರ್ಕಾರಿ ಬಸ್

    ಗದಗ: ಸಾರಿಗೆ ನೌಕರರು ಇಂದು ನಡೆಸುತ್ತಿರುವ ಮುಷ್ಕರದ ನಡುವೆಯೂ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಪೀಲ್ಡಿಗಿಳಿದಿದೆ. ನಗರದ ಹೊಸ ಬಸ್ ನಿಲ್ದಾಣಕ್ಕೆ ಹೊಸಪೇಟೆ ಘಟಕದ ಬಸ್ ಪ್ರಯಾಣಿಕರನ್ನು ಹೊತ್ತು ತಂದಿದೆ.

    ಸರ್ಕಾರಿ ಬಸ್ ಹುಬ್ಬಳ್ಳಿಯಿಂದ ಗದಗ ಮಾರ್ಗವಾಗಿ ಹೊಸಪೇಟೆಗೆ ಸಂಚರಿಸುತ್ತಿದೆ. ಈ ವೇಳೆ ಗದಗ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆತಂದಿದೆ. ಎಲ್ಲಾ ಕಡೆಗಳಲ್ಲಿ ಸಾರಿಗೆ ನೌಕರರು ನಿನ್ನೆಯೇ ಸೆಕೆಂಡ್ ಶಿಫ್ಟ್‍ಗೆ ಗೈರು ಹಾಜರಾಗಿದ್ದರು. ಆದರೆ ಹೊಸಪೇಟೆ ಘಟಕದ ಕೆಲವು ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದರು. ನಿನ್ನೆ ಮಧ್ಯಾಹ್ನ ಬಸ್ ಹೊಸಪೇಟೆಯಿಂದ ಹೊರಟು ರಾತ್ರಿ ಹುಬ್ಬಳ್ಳಿಗೆ ತಲುಪಿದೆ. ಮತ್ತೆ ಇಂದು ಮುಂಜಾನೆ ಹುಬ್ಬಳ್ಳಿಯಿಂದ ಹೊರಟು ಗದಗ ಮಾರ್ಗವಾಗಿ ಹೊಸಪೇಟೆಗೆ ಬಸ್ ತಲುಪಲಿದೆ.

    ಕೆಲವರು ನಿನ್ನೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ ನಿಜ. ಆದರೆ ಬಂದ್ ಇರೋದು ಇಂದು. ಹಾಗಾಗಿ ಸರ್ಕಾರದ ಆದೇಶವನ್ನು ನಾವು ಪಾಲಿಸಿದ್ದೇವೆ. ಸಂಘಟಕರು ಮತ್ತು ಅಧಿಕಾರಿಗಳು ಹೇಳಿದರೆ ಮತ್ತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಹೊಸಪೇಟೆ ಘಟಕದ ಬಸ್ ಚಾಲಕರು ಮತ್ತು ನಿರ್ವಾಹಕರು ಅಭಿಪ್ರಾಯಪಟ್ಟಿದ್ದಾರೆ.

  • ಖಾಸಗಿ ಬಸ್‌ ಸಂಚಾರ ಬಂದ್‌ ಇಲ್ಲ – ಉಡುಪಿಯಲ್ಲಿ ಒಕ್ಕೂಟದ ಖಜಾಂಚಿ ಹೇಳಿಕೆ

    ಖಾಸಗಿ ಬಸ್‌ ಸಂಚಾರ ಬಂದ್‌ ಇಲ್ಲ – ಉಡುಪಿಯಲ್ಲಿ ಒಕ್ಕೂಟದ ಖಜಾಂಚಿ ಹೇಳಿಕೆ

    ಉಡುಪಿ : ಸೋಮವಾರದ ಖಾಸಗಿ ಬಸ್‌ ಸಂಚಾರ ಬಂದ್‌ ವಿಚಾರದಲ್ಲಿ ಸಂಘಟನೆಯ ಮುಖಂಡರಲ್ಲೇ ಭಿನ್ನ ರಾಗ ಎದ್ದಿದೆ. ಬೆಂಗಳೂರಿನ ಮುಖಂಡರು ಖಾಸಗಿ ಬಸ್‌ ಸಂಚಾರ ಸ್ಥಗಿತ ಮಾಡುತ್ತೇವೆ ಎಂದು ಹೇಳಿದ್ದರೆ, ಕರಾವಳಿ ಭಾಗದ ಮುಖಂಡರು ನಾವು ಬಸ್‌ ಸಂಚಾರ ಸ್ಥಗಿತ ಮಾಡುವುದಿಲ್ಲ ಎಂದು ವಿರುದ್ಧ ಹೇಳಿಕೆ ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟ ಖಜಾಂಚಿ ಕುಯಿಲಾಡಿ ಸುರೇಶ್ ನಾಯಕ್ ಪ್ರತಿಕ್ರಿಯಿಸಿ, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿಕೆಗೂ ನಮಗೂ ಸಂಬಂಧ ಇಲ್ಲ. ರಾಜ್ಯದಲ್ಲಿ ನಾಳೆ ಖಾಸಗಿ ಬಸ್ ಬಂದ್ ಇಲ್ಲ. ರಾಜ್ಯಾದ್ಯಂತ ಎಂದಿನಂತೆ 8,500 ಬಸ್ ಓಡಾಡುತ್ತದೆ ಎಂದು ತಿಳಿಸಿದ್ದಾರೆ.

    ಈ ಹಿಂದೆಯೂ ನಮ್ಮ ಸಂಘಟನೆಯನ್ನು ಬೆದರಿಸುವ ಪ್ರಯತ್ನ ನಡೆದಿತ್ತು. ಇದೂವರೆಗೂ ನಾವು ಜನರಿಗೆ ಸಮಸ್ಯೆ ಮಾಡಿ ಬಂದ್‌ ಮಾಡಿಲ್ಲ.  ನಮ್ಮ ಸಮಸ್ಯೆಗಳು ಏನೇ ಇದ್ದರೂ ನ್ಯಾಯಯುತವಾಗಿ ಪರಿಹರಿಸುವ ಪ್ರಯತ್ನ ಮಾಡುತ್ತೇವೆ. ಎಂದಿನಂತೆ ಬಸ್‌ ಸಂಚಾರ ಇರಲಿದೆ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾತನಾಡಿದ ನಟರಾಜ್‌ ಶರ್ಮಾ ಈ ಹಿಂದೆ ನಾವು ಹಲವು ಬೇಡಿಕೆಗಳನ್ನು ಇಟ್ಟಿದ್ದೇವೆ. ಆದರೆ ಈ ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿಲ್ಲ. ಹೀಗಾಗಿ ನಾವು ಸರ್ಕಾರಿ ನೌಕರರ ಜೊತೆ ಬೆಂಬಲಕ್ಕೆ ನಿಂತಿದ್ದು ಖಾಸಗಿ ಬಸ್ಸುಗಳನ್ನು ರಸ್ತೆಗೆ ಇಳಿಸಲ್ಲ ಎಂದು ಎಂದು ತಿಳಿಸಿದ್ದರು.

    ಖಾಸಗಿ ವಾಹನಗಳ ಮುಖಂಡರು ಒಂದೊಂದು ಹೇಳಿಕೆ ನೀಡುತ್ತಿರುವ ಕಾರಣ ಖಾಸಗಿ ಬಸ್‌ ಸಂಚಾರ ಇರುತ್ತಾ? ಇಲ್ಲವೋ? ಎನ್ನುವುದು ಸೋಮವಾರ ಬೆಳಗ್ಗೆ ಸ್ಪಷ್ಟವಾಗಲಿದೆ.

  • ಸರ್ಕಾರಿ ಬಸ್ಸಿಗೆ ಶಾಸಕ ವಿರೂಪಾಕ್ಷಪ್ಪ ಪುತ್ರನ ಕಾರು ಡಿಕ್ಕಿ

    ಸರ್ಕಾರಿ ಬಸ್ಸಿಗೆ ಶಾಸಕ ವಿರೂಪಾಕ್ಷಪ್ಪ ಪುತ್ರನ ಕಾರು ಡಿಕ್ಕಿ

    ಹಾವೇರಿ: ಜಿಲ್ಲೆ ಬ್ಯಾಡಗಿ ಕ್ಷೇತ್ರದ ಶಾಸಕ ವಿರೂಪಾಕ್ಷಪ್ಪನವರ ಪುತ್ರ ಯುವರಾಜ ಬಳ್ಳಾರಿ ಚಲಾಯಿಸುತ್ತಿದ್ದ ಕಾರ್ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಸಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.

    ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ. ಆದರೆ ಕಾರಿನ ಮುಂಭಾಗ ಹಾಗೂ ಬಸ್ಸಿನ ಹಿಂಭಾಗ ಜಖಂ ಆಗಿದೆ.

    ವಿರೂಪಾಕ್ಷಪ್ಪನವರ ಪುತ್ರ ಯುವರಾಜ, ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದಾಗ ಈ ಘಟನೆ ನಡೆದಿದೆ. ಕಾರಿನಿಂದ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆಯಲಾಗಿದೆ. ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಸರ್ಕಾರಿ ಬಸ್ ಪಲ್ಟಿ – 15ಕ್ಕೂ ಅಧಿಕ ಮಂದಿಗೆ ಗಾಯ

    ಬೀದರ್: ಕಾರಿಗೆ ಡಿಕ್ಕಿ ಹೊಡೆಯೋದನ್ನು ತಪ್ಪಿಸಲು ಹೋಗಿ ಸರ್ಕಾರಿ ಬಸ್ಸೊಂದು ಪಲ್ಟಿಯಾಗಿದ್ದು, 15ಕ್ಕೂ ಅಧಿಕ ಮಂದಿಗೆ ಗಾಯವಾಗಿರುವ ಘಟನೆ ಬೀದರಿನ ಹುಮನಾಬಾದ್ ತಾಲೂಕಿನ ದುಬಲಗುಂಡಿಯಲ್ಲಿ ನಡೆದಿದೆ.

    ಸುಮಾರು 27 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್‍ಗೆ ದುಬಲಗುಂಡಿ ಕ್ರಾಸಿನ ಬಳಿ ಕಾರೊಂದು ಅಡ್ಡ ಬಂದಿದೆ. ಈ ವೇಳೆ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಬಸ್ ಚಾಲಕ ಸಡನ್ ಬ್ರೇಕ್ ಹಾಕಿದ್ದಾರೆ. ಈ ಕಾರಣದಿಂದ ಬಸ್ ರಸ್ತೆಯ ಪಕ್ಕಕ್ಕೆ ಹೋಗಿ ಪಲ್ಟಿಯಾಗಿದೆ.

    ಈ ಅಪಘಾತದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಂದಿಗೆ ಸಣ್ಣ ಪುಟ್ಟಗಾಯಗಳು ಆಗಿವೆ. ಆದರೆ ಅದೃಷ್ಟವಾಶತ್ ಯಾವುದೇ ಸಾವು ಸಂಭವಿಸಿಲ್ಲ. ಗಾಯಗೊಂಡ ಎಲ್ಲರನ್ನು ಹುಮನಾಬಾದ್ ಹಾಗೂ ಹಳ್ಳಿಖೇಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಶಾಸಕ ರಾಜಶೇಖರ್ ಪಾಟೀಲ್ ಬಂದು ಗಾಯಗೊಂಡವರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಟೇರಿಂಗ್ ಕಟ್ ಆಗಿ ಕಂದಕಕ್ಕೆ ಉರುಳಿದ ಬಸ್ – ವಿದ್ಯಾರ್ಥಿನಿ ತಲೆ ಅಪ್ಪಚ್ಚಿ

    ಸ್ಟೇರಿಂಗ್ ಕಟ್ ಆಗಿ ಕಂದಕಕ್ಕೆ ಉರುಳಿದ ಬಸ್ – ವಿದ್ಯಾರ್ಥಿನಿ ತಲೆ ಅಪ್ಪಚ್ಚಿ

    – 25ಕ್ಕೂ ಅಧಿಕ ಜನರಿಗೆ ಗಾಯ

    ಗದಗ: ಸ್ಟೇರಿಂಗ್ ಕಟ್ ಆಗಿ ಸಾರಿಗೆ ಬಸ್ ಕಂದಕಕ್ಕೆ ಉರುಳಿದ್ದು, ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಂಗನಕಟ್ಟಿ ಕ್ರಾಸ್ ಬಳಿ ನಡೆದಿದೆ.

    ಈ ದುರ್ಘಟನೆಯಲ್ಲಿ 25 ಜನರಿಗೆ ಗಾಯಗಳಾಗಿದೆ. ಶಾಲೆ ಮುಗಿಸಿಕೊಂಡು ಊರಿಗೆ ಹೊರಟಿದ್ದ 15 ವರ್ಷದ ಜಲ್ಲಿಗೇರಿ ಗ್ರಾಮದ ವಿದ್ಯಾರ್ಥಿನಿ ವಿದ್ಯಾ ಡೊಂಕಬಳ್ಳಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 25ಕ್ಕೂ ಅಧಿಕ ಗಾಯಾಳುಗಳನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಶಿರಹಟ್ಟಿಯಿಂದ ಮುಂಡರಗಿ ಹೊರಟಿದ್ದ ಬಸ್ ಸ್ಟೇರಿಂಗ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಆಗ ರಸ್ತೆಯಿಂದ ಕಂದಕಕ್ಕೆ ಬಸ್ ನುಗಿದ್ದು, ಈ ಅಪಘಾತದಲ್ಲಿ ಚಾಲಕ ಶಿವಾನಂದ ಅವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ತಾಲೂಕಿನ ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.