Tag: ಸರ್ಕಾರಿ ಗೌರವ

  • ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ರಜೆಗೆ ಬಂದಿದ್ದ ಯೋಧ ಸಾವು – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

    ಚಿಕ್ಕೋಡಿ: ಅನಾರೋಗ್ಯ ಕಾರಣದಿಂದ ರಜೆಗೆ ಬಂದಿದ್ದ ಯೋಧ ಸಾವನ್ನಪ್ಪಿದ್ದಾರೆ. ಪರಿಣಾಮ ಸರ್ಕಾರಿ ಸಕಲ ಗೌರದೊಂದಿಗೆ ಸಂಜೆ ಅಂತಿಮ ನಮನ ಸಲ್ಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನಡೆದಿದೆ.

    ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕಲಗೌಡ ಹಡಗಿನಾಳ. ಕಳೆದ ಮಾರ್ಚ 20 ರಂದು ಎರಡು ತಿಂಗಳ ರಜೆಯ ಮೇಲೆ ಸ್ವಗ್ರಾಮ ಬೆಳಗಾವಿ ಗ್ರಾಮಕ್ಕೆ ಬಂದಿದ್ದರು. ಭಾನುವಾರ ರಾತ್ರಿ ಮನೆಯಲ್ಲಿದ್ದ ಕಲಗೌಡರಿಗೆ ರಕ್ತದೊತ್ತಡ ಕಡಿಮೆಯಾಗಿದ್ದರಿಂದ ಬೆಳವಿ ಸೇನೆ ಆಸ್ಪತ್ರೆಗೆ ಚಿಕಿತ್ಸೆಗೆಂದು ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲಗೌಡ ಮೃತಪಟ್ಟಿದ್ದಾರೆ. ಇದನ್ನೂ ಓದಿ: ತಮ್ಮ ವೇಯ್ಟ್‌ ಲಾಸ್ ಜರ್ನಿ ಬಗ್ಗೆ ಹೇಳಿದ ಕಾಶ್ಮೀರಿ ಪಂಡಿತಾ

    ಅಣ್ಣ-ತಮ್ಮ ಇಬ್ಬರು ಯೋಧರು
    ರೈತ ಕುಟುಂಬದಿಂದ ಬೆಳೆದ ಯೋಧ ಕಲಗೌಡ ಭೀಮಪ್ಪ ಹಡಗಿನಾಳ ಕಳೆದ(2014) ಎಂಟು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಹಿರಿಯ ಸಹೋದರ ಮಲ್ಲಪ್ಪ ಕೂಡ ಭಾರತೀಯ ಸೇನೆಯ ಆಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕಲಗೌಡ ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.

    ಬೆಳವಿ ಗ್ರಾಮ ಪಂಚಾಯತಿ ಆವರಣದಲ್ಲಿ ವೀರಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಅನುಕೂಲ ಮಾಡಿದ್ದರಿಂದ ಸಾರ್ವಜನಿಕರು ದರ್ಶನ ಮಾಡಿ ಅಂತಿಮ ನಮನ ಸಲ್ಲಿಸಿದರು.

    ಪುಷ್ಪ ನಮನ ಸಲ್ಲಿಸಿದ ಗಣ್ಯರು
    ಅಲಂಕೃತಗೊಂಡ ವಾಹನದಲ್ಲಿ ಯೋಧ ಕಲಗೌಡ ಪಾರ್ಥಿವ ಶರೀರದ ಮೆರವಣಿಗೆ ನಡೆಸಿದರು. ಕಲಗೌಡ ‘ಅಮರ್ ರಹೇ’ ಎಂಬ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಪ್ರಾರಂಭದಲ್ಲಿ ಗ್ರಾಮ ಪಂಚಾಯತಿ ಚೇರಮನ್ ಜಯಶ್ರೀ ಸತ್ಯಾಯಿಗೋಳ ಹಿರಿಯ ಸದಸ್ಯರಾದ ರಮೇಶ್ ಕುಲಕರ್ಣಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಸತ್ಯಪ್ಪ ನಾಯಿಕ, ಪಿಡಿಓ ಶೋಭಾ, ತಳವಾರ ಗ್ರಾಮ ಲೆಕ್ಕಾಧಿಕಾರಿ ಶಾನೂರ ಮುಲ್ತಾನಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾದೇವ ಬನ್ನಕಗೋಳ ಗ್ರಾಮದ ಪರವಾಗಿ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದು 53 ಸೋಂಕು – ಶೂನ್ಯ ಮರಣ ಪ್ರಮಾ

    ಯೋಧನ ಸ್ವತೋಟದಲ್ಲಿ ಅಂತಿಮ ಗೌರವ ನಮನ ನಡೆಯಿತು. ಗ್ರಾಮದ ಜನರು, ಹಾಲಿ, ಮಾಜಿ ಸೈನಿಕರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸೈನಿಕರು ಪಾಲ್ಗೊಂಡಿದ್ದರು.

  • ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ನಾಡೋಜ ಪಾಪು ಅಂತ್ಯಕ್ರಿಯೆ

    ಸಕಲ ಸರ್ಕಾರಿ ಗೌರವದೊಂದಿಗೆ ಹುಟ್ಟೂರಿನಲ್ಲಿ ನಾಡೋಜ ಪಾಪು ಅಂತ್ಯಕ್ರಿಯೆ

    ಹುಬ್ಬಳ್ಳಿ: ಸೋಮವಾರ ರಾತ್ರಿ ನಿಧನರಾದ ಹಿರಿಯ ಪತ್ರಕರ್ತ, ಸಾಹಿತಿ, ನಾಡೋಜ ಡಾಕ್ಟರ್ ಪಾಟೀಲ ಪುಟ್ಟಪ್ಪನವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಜರುಗಿತು.

    ರಾಣೆಬೆನ್ನೂರ ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅವರ ಪಿತ್ರಾರ್ಜಿತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೋಮ್ಮಾಯಿ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕೃಷಿ ಸಚಿವ ಬಿ.ಸಿ.ಪಾಟೀಲ್, ಕೂಡಲ ಸಂಗಮದ ಬಸವಮೃತ್ಯುಂಜಯ ಸ್ವಾಮೀಜಿ, ತರಳಬಾಳು ಶಾಖಾ ಮಠದ ಪಂಡಿತಾರಾದ್ಯ ಸ್ವಾಮೀಜಿ, ಮುಂಡರಗಿಯ ನಿಜಗುಣನಾನಂದ ಸ್ವಾಮೀಜಿ, ಶಾಸಕ ಅರುಣಕುಮಾರ ಗುತ್ತೂರ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಮಾಜಿ ಸಚಿವರಾದ ಹೆಚ್.ಕೆ.ಪಾಟೀಲ್, ರುದ್ರಪ್ಪ ಲಮಾಣಿ, ಮಾಜಿ ಶಾಸಕ ಬಿ.ಹೆಚ್.ಬನ್ನಿಕೋಡ, ಮಾಜಿ ಸಂಸದ ಐ.ಜಿ.ಸನದಿ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಅವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮಾರ್ಚ್ 16ರ ರಾತ್ರಿ 10 ಗಂಟೆ 10 ನಿಮಿಷಕ್ಕೆ ನಿಧನರಾಗಿದ್ದರು.

    ಕಡಿಮೆ ರಕ್ತದೊತ್ತಡ, ರಕ್ತಹೀನತೆ, ಬ್ರೇನ್ ಹೆಮರೈಜ್, ಶ್ವಾಸಕೋಶದ ಸೋಂಕು ಸೇರಿದಂತೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಪಾಟೀಲ ಪುಟ್ಟಪ್ಪ ಅವರಿಗೆ ಕಿಮ್ಸ್ ನಲ್ಲಿ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದ ಅವರಿಗೆ ಶ್ವಾಸಕೋಶದ ಸೋಂಕು ತಗುಲಿತ್ತು. ಹಲವು ದಿನ ಚಿಕಿತ್ಸೆಯ ನಂತರ ಪಾಪು ಕೊನೆಯುಸಿರೆಳೆದಿದ್ದಾರೆ.

    ಹುಬ್ಬಳ್ಳಿಯ ಮನೆಯಲ್ಲಿ ಇಂದು ಬೆಳಗ್ಗೆ 9 ರಿಂದ 12 ವರಗೆ ಸಾರ್ವಜನಿಕರ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಗಿತ್ತು. ನಂತರ ಮಧ್ಯಾಹ್ನ 12 ಗಂಟೆಯಿಂದ ಅರ್ಧಗಂಟೆ ಧಾರವಾಡದ ಕರ್ನಾಟಕದ ವಿದ್ಯಾವರ್ಧಕ ಸಂಘದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಹಾವೇರಿಯ ರಾಣೇಬೆನ್ನೂರು ತಾಲೂಕಿನ ಸ್ವಗ್ರಾಮ ಹಲಗೇರಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

  • ಸಾವಿರಾರು ಜನರು, ಗಣ್ಯರ ಸಮ್ಮುಖದಲ್ಲಿ ವೀರ ಯೋಧನ ಅಂತ್ಯಸಂಸ್ಕಾರ

    ಸಾವಿರಾರು ಜನರು, ಗಣ್ಯರ ಸಮ್ಮುಖದಲ್ಲಿ ವೀರ ಯೋಧನ ಅಂತ್ಯಸಂಸ್ಕಾರ

    – ತಾಯಿ ಕಣ್ಣೀರು, ಜಿಲ್ಲಾಡಳಿತದಿಂದ ಸಹಾಯ ಹಸ್ತದ ಭರವಸೆ

    ಕೋಲಾರ: ಸಾವಿರಾರು ಜನರು ಮತ್ತು ಗಣ್ಯರ ಸಮ್ಮುಖದಲ್ಲಿ ಕೋಲಾರದ ವೀರ ಯೋಧ ಪ್ರಶಾಂತ್, ಅಮರ್ ರಹೇ ಅನ್ನೋ ಜನರ ಜಯ ಘೋಷಗಳ ನಡುವೆ ಮಣ್ಣಲ್ಲಿ ಮಣ್ಣಾಗಿದ್ದಾರೆ.

    ರಸ್ತೆಯುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲೂ ಸೇರಿರುವ ಜನಸಾಗರ, ವೀರ ಯೋಧನ ಪಾರ್ಥಿವ ಶರೀರಕ್ಕೆ ಹೂಮಳೆ ಸುರಿಸುತ್ತಾ, ಎಲ್ಲರ ಬಾಯಲ್ಲೂ ಪ್ರಶಾಂತ್ ಅಮರ್ ರಹೇ.. ಅಮರ್ ರಹೇ ಅನ್ನೋ ಜಯಘೋಷ ಮೊಳಗಿತು. ಅದ್ಧೂರಿಯಾಗಿ ತ್ರಿವರ್ಣ ದ್ವಜದ ನಡುವೆ ವೀರ ಯೋಧನ ಪಾರ್ಥಿವ ಶರೀರದ ಮೆರವಣಿಗೆ, ಮತ್ತೊಂದೆಡೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

    ಬಂಗಾರಪೇಟೆ ತಾಲೂಕು ಕಣಿಂಬೆಲೆ ಗ್ರಾಮದ ನಾರಾಯಣಪ್ಪ ಹಾಗೂ ಲಕ್ಷ್ಮಮ್ಮ ದಂಪತಿಯ ಪುತ್ರ ಪ್ರಶಾಂತ್ ಕಳೆದ ಐದು ವರ್ಷಗಳಿಂದ ಗಡಿಭದ್ರತಾ ಪಡೆಯ 17ನೇ ಮದ್ರಾಸ್ ರೆಜ್‍ಮೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ಫೆ.26 ರ ಬುಧವಾರ ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. ಶುಕ್ರವಾರ ಮಧ್ಯರಾತ್ರಿ ಸುಮಾರಿಗೆ ವಿಮಾನದ ಮೂಲಕ ಯೋಧನ ಪಾರ್ಥಿವ ಶರೀರ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಅಲ್ಲಿಂದ ನೇರ ಬಂಗಾರಪೇಟೆ ಪಟ್ಟಣಕ್ಕೆ ತರಲಾಗಿತ್ತು, ಈ ವೇಳೆ ಜನರು ಮಧ್ಯರಾತ್ರಿಯಲ್ಲೂ ಯೋಧನ ಪಾರ್ಥಿವ ಶರೀರವನ್ನು ಸ್ವಾಗತ ಮಾಡಿಕೊಂಡಿದ್ದರು.

    ಇಂದು ಬೆಳಗ್ಗೆ 7 ಗಂಟೆಯಿಂದ ವೀರ ಯೋಧ ಪ್ರಶಾಂತ್ ಪಾರ್ಥಿವ ಶರೀರವನ್ನು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ, ಮಾಲೂರು ಶಾಸಕ ನಂಜೇಗೌಡ, ಸಂಸದ ಮುನಿಸ್ವಾಮಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಹಲವು ಗಣ್ಯರು ಪಕ್ಷ ಭೇದ ಮರೆತು ಹುತಾತ್ಮ ಯೋಧ ಪ್ರಶಾಂತ್‍ಗೆ ಹೂಗುಚ್ಚವಿಟ್ಟು ಅಂತಿಮ ನಮನ ಸಲ್ಲಿಸಿದರು. ಹೊಸ ಮನೆ ಕಟ್ಟಿಸಲು ಸಾಲ ಮಾಡಿ ಹಣ ನೀಡಿ ಈ ಬಾರಿ ಬಂದಾಗ ಗೃಹಪ್ರವೇಶ ಮಾಡೋಣ ಎಂದು ಹೇಳಿ ಹೋಗಿದ್ದ ಮಗ ನಮ್ಮನ್ನೆಲ್ಲಾ ಅಗಲಿದನ್ನು ನೆನೆದು ತಾಯಿ ಲಕ್ಷ್ಮಮ್ಮ ಕಣ್ಣೀರಾಕಿದರು.

    10.30ರ ಸುಮಾರಿಗೆ ಯೋಧನ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬಂಗಾರಪೇಟೆ ಪಟ್ಟಣದ ಪ್ರಮುಖ ಬೀದಿ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯ ಜನಸ್ತೋಮದ ನಡುವೆ ವೀರ ಯೋಧನ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಕೊಂಡೊಯ್ಯಲಾಯಿತು. ಈ ವೇಳೆ ರಸ್ತೆಯ ಎರಡೂ ಬದಿಗಳಲ್ಲಿ ಜನರು ಅಮರ್ ರಹೇ ಅಮರ್ ರಹೇ ಪ್ರಶಾಂತ್ ಎಂದು ಜಯಘೋಷಗಳನ್ನು ಕೂಗುತ್ತಾ ಪಾರ್ಥಿವ ಶರೀರಕ್ಕೆ ಹೂಮಳೆ ಸುರಿಸಿದರು. ಪಾರ್ಥಿವ ಶರೀರ ಸಾಗಿದ ನಾಲ್ಕು ಕಿಲೋಮೀಟರ್ ದೂರಕ್ಕೂ ಜನ ಸಾಗರ ತುಂಬಿತ್ತು.

    ಸಂಸದರು, ಶಾಸಕರುಗಳು ಪಾರ್ಥಿವ ಶರೀರದ ಜೊತೆಗೆ ನಡೆದೇ ಸಾಗಿದರು. ವೀರಯೋಧ ಪ್ರಶಾಂತ್ ಓದಿದ್ದ ಶಾಲೆಯಲ್ಲಿ ತ್ರಿವರ್ಣದ್ವಜವನ್ನು ಅರ್ಧಕ್ಕೆ ಹಾರಿಸಿ ಶಾಲೆಗೆ ರಜೆ ನೀಡಿ ಗೌರವ ಸಲ್ಲಿಸಲಾಯಿತು. ಗ್ರಾಮದ ಹೊರಗಡೆ ಸರ್ಕಾರಿ ಜಾಗದಲ್ಲಿ ಯೋಧನ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಸಾವಿರಾರು ಜನರ ನಡುವೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಪ್ರಶಾಂತ್ ಪಾರ್ಥಿವ ಶರೀರದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಆಗ ಮಗನನ್ನು ನೆನೆದು ಕಣ್ಣೀರಾಕುತ್ತಿದ್ದ ಕುಟುಂಬಸ್ಥರಿಗೆ ಅಧಿಕಾರಿಗಳು ಜನಪ್ರತಿನಿಧಿಗಳು ಧೈರ್ಯ ಹೇಳಿ ನಿಮ್ಮ ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.

    ದೇಶಸೇವೆ ಮಾಡುತ್ತೇನೆ ಎಂದು ಕನಸು ಕಟ್ಟಿಕೊಂಡು ಸೇನೆಗೆ ಸೇರಿದ್ದ ಯುವಕ ಪ್ರಶಾಂತ್, ಇಂದು ದೇಶದ ಮಗನಾಗಿ ಮಣ್ಣಲ್ಲಿ ಮಣ್ಣಾದರು. ಆದರೆ ಅವನನ್ನೇ ನಂಬಿದ್ದ ಯೋಧ ಪ್ರಶಾಂತ್ ಕುಟುಂಬ ನಾವಿಕನನ್ನು ಕಳೆದು ಕೊಂಡ ದೋಣಿಯಂತಾಗಿದ್ದು, ಸರ್ಕಾರಗಳು ಯೋಧನ ಕುಟುಂಬಕ್ಕೆ ಬೆನ್ನೆಲುಬಾಗಿ ನಿಲ್ಲಬೇಕಿದೆ.