Tag: ಸರ್ಕಾರಿ ಕಾಲೇಜ್

  • ಅಂದು ಮಕ್ಕಳಿಲ್ಲದೇ ಮುಚ್ಚಿದ್ದ ಸರ್ಕಾರಿ ಕಾಲೇಜು ಇಂದು ರಾಜ್ಯಕ್ಕೆ ಮಾದರಿ

    ಅಂದು ಮಕ್ಕಳಿಲ್ಲದೇ ಮುಚ್ಚಿದ್ದ ಸರ್ಕಾರಿ ಕಾಲೇಜು ಇಂದು ರಾಜ್ಯಕ್ಕೆ ಮಾದರಿ

    ಕಾರವಾರ: ಇಂದಿನ ದಿನಗಳಲ್ಲಿ ಪೋಷಕರು ಖಾಸಗಿ ಕಾಲೇಜಿಗೆ ಲಕ್ಷ ಲಕ್ಷ ಡೊನೇಷನ್ ನೀಡಿ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಅವರ ಉಜ್ವಲ ಭವಿಷ್ಯದ ಕನಸು ಕಾಣುತ್ತಾರೆ. ಆದರೆ ಕೆಲ ಖಾಸಗಿ ಸಂಸ್ಥೆಗಳು ಹಣ ಮಾಡುವ ಉದ್ಯಮವಾದರೆ ಸರ್ಕಾರಿ ಕಾಲೇಜುಗಳು ಸಂಬಳ ಪಡೆಯುವ ಸಂಸ್ಥೆಯಾಗಿ ಮಾತ್ರ ನಿಂತಿದೆ. ಇಂತಹ ದಿನಗಳಲ್ಲಿ ಶಿರಸಿಯ ವೆಂಕಟರಾವ್ ನಿಲೇಕಣಿ ಸರ್ಕಾರಿ ಪದವಿಪೂರ್ವ ಕಾಲೇಜು ವಿಶೇಷ ಮುತುವರ್ಜಿಯಿಂದ ಖಾಸಗಿ ಕಾಲೇಜಗಳನ್ನು ಹಿಂದಿಕ್ಕಿದೆ.

    ಈ ಹಿಂದೆ ವಿದ್ಯಾರ್ಥಿಗಳಿಲ್ಲದೇ ಚಿಕ್ಕಮಗಳೂರಿನ ಕುದುರೆಮುಖದಲ್ಲಿದ್ದ ಈ ಕಾಲೇಜು ಶಿರಸಿಯ ನೀಲಕಣಿಗೆ ಸ್ಥಳಾಂತರಿಸಲಾಯಿತು. ಇನ್ಫೋಸಿಸ್‍ನ ನಂದನ್ ನೀಲಕಣಿಯವರ ಕುಟುಂಬ ಎರಡು ಎಕರೆ ಜಮೀನನ್ನು ದಾನವಾಗಿ ನೀಡಿತು. ಇದರಿಂದ ಅತ್ಯಲ್ಪ ಕಡಿಮೆ ವಿದ್ಯಾರ್ಥಿಗಳಿಂದ ಒಂಬತ್ತು ವರ್ಷಗಳ ಹಿಂದೆ ಪ್ರಾರಂಭವಾಗಿ ಇಂದು 500 ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

    ಕಾಲೇಜಿನ ವಿಶೇಷತೆ: ಈ ಕಾಲೇಜಿನಲ್ಲಿ 500 ವಿದ್ಯಾರ್ಥಿಗಳು ಪಿಯು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬಹುತೇಕರು ಬಡ ಹಾಗೂ ದಲಿತ, ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಸರ್ಕಾರಿ ಕಾಲೇಜ್ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ ರಾತ್ರಿ 8ರವರೆಗೆ ತೆರೆದಿರುತ್ತದೆ. ಕಾಲೇಜಿನ ಸಮಯ ಮುಗಿದರೂ ವಿದ್ಯಾರ್ಥಿಗಳ ಭವಿಷ್ಯ ಮುಂದಿಟ್ಟುಕೊಂಡು ಇಲ್ಲಿನ ಸಿಬ್ಬಂದಿಒ ವಿಶೇಷ ಮುತುವರ್ಜಿ ವಹಿಸಿ ರಾತ್ರಿ ಕೂಡ ಪಾಠ ಮಾಡುತ್ತಾರೆ.

    ರಾತ್ರಿ ಸಹ ಪಾಠ ಕೇಳುವುದರಿಂದ ಸಿಬ್ಬಂದಿಯೇ ಖರ್ಚು ಮಾಡಿ ವಿದ್ಯಾರ್ಥಿಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ದೂರದ ಹಳ್ಳಿಗಳಿಗೆ ತೆರಳಲು ತಡವಾದ್ರೆ ವಸತಿ ವ್ಯವಸ್ಥೆಯನ್ನು ಸಹ ಕಾಲೇಜು ಸಿಬ್ಬಂದಿ ಕಲ್ಪಿಸಿದ್ದಾರೆ. ಪಿಯು ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಸ್ಮಾರ್ಟ್ ಕ್ಲಾಸ್, ವೃತ್ತಿ ಕೌಶಲ್ಯ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ವಿಶೇಷ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಪ್ರತಿ ವರ್ಷ ಈ ಕಾಲೇಜು ಶೇಕಡ 80 ರಿಂದ 90 ಫಲಿತಾಂಶ ಬರುವ ಮೂಲಕ ರಾಜ್ಯದ ಗಮನ ಸೆಳೆದಿದೆ.

    ನಾಗರಾಜ್ ಗಾವಂಕ್ಕರ್ ಈ ಕಾಲೇಜಿನ ಪ್ರಾಚಾರ್ಯರಾಗಿದ್ದು, ಖಾಯಂ-ಅರೆಕಾಲಿಕ ಸೇರಿದಂತೆ 19 ಉಪನ್ಯಾಸಕರು ಪಾಠ ಮಾಡುತ್ತಾರೆ. ಈ ಕಾಲೇಜಿನ ಗುಣಮಟ್ಟದ ಶಿಕ್ಷಣ ನೋಡಿ ಜಿಲ್ಲೆಯ ಹೊರಗಿನ ವಿದ್ಯಾರ್ಥಿಗಳು ಸಹ ಇಲ್ಲಿ ಕಲಿಯುತ್ತಿದ್ದಾರೆ. ಈ ಕಾಲೇಜಿಗೆ ಮಕ್ಕಳನ್ನು ಸೇರಿಸಲು ಪೋಷಕರು ಸಹ ಮುಗಿಬೀಳುತಿದ್ದು ಯಾವ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲ ಎನ್ನುವಂತಿದೆ.

    ವಿಶೇಷ ತರಬೇತಿ: ಪಿ.ಯು ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಸ್ಪರ್ಧಾತ್ಮಕ ಪರೀಕ್ಷೆಯ ವಿಶೇಷ ತರಬೇತಿ ನೀಡಲಾಗುತ್ತದೆ. ಕೌಶಲ್ಯ, ವೃತ್ತಿಪರ ತರಬೇತಿಗಳು ಉಚಿತವಾಗಿ ನೀಡುತ್ತಿದ್ದು ಇದಕ್ಕೆ ತಗಲುವ ಎಲ್ಲಾ ಖರ್ಚನ್ನು ಸಿಬ್ಬಂದಿ ನೋಡಿಕೊಳ್ಳುವ ಮೂಲಕ ಪೋಷಕರಿಗೆ ಯಾವುದೇ ಪ್ರತ್ಯೇಕ ಶುಲ್ಕ ಬಾರದಂತೆ ನೋಡಿಕೊಳ್ಳುತ್ತಾರೆ.

    ಸಮಯ ಮೀಸಲಿಟ್ಟ ಸಿಬ್ಬಂದಿ: ಸರ್ಕಾರಿ ಕಾಲೇಜು ಅಂದರೆ ದಿನದ ಕೊನೆಯ ಬೆಲ್ ಹೊಡೆದರೆ ಸಾಕು ಶಿಕ್ಷಕರು ಮನೆಗೆ ಹೋಗಿಬಿಡುತ್ತಾರೆ. ಆದರೆ ಇಲ್ಲಿ ಶಿಕ್ಷಕರು ಮನೆಗೆ ಹೋಗುವುದಿಲ್ಲ. ಮಕ್ಕಳೊಂದಿಗೆ ಇದ್ದು ಅವರಿಗೆ ಕಷ್ಟವಾದ ಪಾಠವನ್ನು ಮತ್ತೆ ಹೇಳಿಕೊಡುತ್ತಾರೆ. ಯಾವ ಮಕ್ಕಳೂ ಶಿಕ್ಷಣದಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ ದೃಶ್ಯದ ಮೂಲಕವೂ ಸ್ಮಾರ್ಟ್ ಕ್ಲಾಸ್ ನಡೆಸುತ್ತಾರೆ.ಪ್ರತಿ ದಿನ ಇಲ್ಲಿನ ಉಪನ್ಯಾಸಕರು ಮನೆಯ ಮುಖ ನೋಡುವುದು ರಾತ್ರಿ ಹತ್ತರ ನಂತರ, ಅಲ್ಲಿಯವರೆಗೂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಇರುತ್ತಾರೆ.

    ನಮ್ಮ ಕಾಲೇಜಿನಲ್ಲಿ ಕಲಿಯುವ ಬಹುತೇಕ ಮಕ್ಕಳು ಬಡವರಾಗಿದ್ದಾರೆ. ಪಿಯು ಶಿಕ್ಷಣ ಇವರ ಮುಂದಿನ ಭವಿಷ್ಯಕ್ಕೆ ಅತೀ ಮುಖ್ಯ. ಹೀಗಾಗಿ ಮುತವರ್ಜಿವಹಿಸಿ ಮಕ್ಕಳಿಗೆ ಕಾಲೇಜಿನ ಸಮಯದ ನಂತರವೂ ಅವರಿಗೆ ಶಿಕ್ಷಣ ನೀಡುತಿದ್ದೇವೆ. ಇಲ್ಲಿ ಕಲಿತ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್ ನಂತಹ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಹೋಗಿದ್ದಾರೆ. ನಮ್ಮ ಶ್ರಮಕ್ಕೆ ಇಲ್ಲಿನ ಮಕ್ಕಳು ಪ್ರತಿಫಲವಾಗಿ ಉತ್ತಮ ಫಲಿತಾಂಶ ಕೊಡುತ್ತಿದ್ದಾರೆ. ಈ ಬಾರಿ 100% ಫಲಿತಾಂಶವನ್ನು ತರುವ ಗುರಿ ನಮ್ಮದು ಎಂದು ಪ್ರಾಚಾರ್ಯ ನಾಗರಾಜ್ ಗಾಂವ್ಕರ್ ಹೇಳುತ್ತಾರೆ.

    ಇನ್ನು ತಾವು ಬಡವರಾಗಿದ್ದೇವೆ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿ ಇಂಜಿನಿಯರಿಂಗ್ ಮಾಡಬೇಕು ಎನ್ನುವ ಆಸೆಯಿದೆ. ಮನೆಯ ಬಡತನ ಹೊರಗೆ ಟ್ಯೂಷನ್ ಕೊಡಿಸಲು ಸಾಧ್ಯವಿಲ್ಲ. ಆದ್ರೆ ಇಲ್ಲಿ ಉಚಿತವಾಗಿ ವಸತಿ ಕೊಟ್ಟು ನಮಗೆ ತರಬೇತಿ ನೀಡುತತ್ತಿದ್ದಾರೆ. ಇದರಿಂದ ತಮಗೆ ಅನುಕೂಲವಾಗಿದೆ ಎಂದು ದ್ವಿತೀಯ ಪಿಯು ವಿದ್ಯಾರ್ಥಿನಿ ಐಶ್ವರ್ಯ ಹೇಳುತ್ತಾಳೆ.

    ಸರ್ಕಾರಿ ಕಾಲೇಜು ಆಗಿದ್ದರೂ ತಮ್ಮ ವಿಶೇಷ ಕಾಳಜಿ ಮತ್ತು ಹಣ ಖರ್ಚು ಮಾಡಿ ಇಲ್ಲಿನ ಮಕ್ಕಳ ಮುಂದಿನ ಉಜ್ವಲ ಭವಿಷ್ಯ ಕಟ್ಟಲು ಇಲ್ಲಿನ ಉಪನ್ಯಾಸಕರು ಮುಂದಾಗಿರುವುದು ನಿಜವಾಗಿಯೂ ಶ್ಲಾಘನೀಯವಾಗಿದ್ದು ರಾಜ್ಯಕ್ಕೆ ಮಾದರಿಯಾಗಿದೆ.

  • ವಿಐಪಿಗಳ ಕಾರು ನಿಲುಗಡೆಗಾಗಿ ಸರ್ಕಾರಿ ಕಾಲೇಜ್ ಕಾಂಪೌಂಡ್ ಡೆಮಾಲಿಷನ್

    ವಿಐಪಿಗಳ ಕಾರು ನಿಲುಗಡೆಗಾಗಿ ಸರ್ಕಾರಿ ಕಾಲೇಜ್ ಕಾಂಪೌಂಡ್ ಡೆಮಾಲಿಷನ್

    ಮಂಡ್ಯ: ನಗರದಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಆಗಮಿಸುವ ವಿಐಪಿಗಳ ಕಾರು ನಿಲುಗಡೆಗೆ ಅನುಕೂಲವಾಗಲಿ ಅಂತ ಸರ್ಕಾರಿ ಮಹಾವಿದ್ಯಾಲಯದ ಕಾಂಪೌಂಡ್ ಡೆಮಾಲಿಷ್ ಮಾಡಿದ್ದಾರೆ.

    ಶುಕ್ರವಾರ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಸಲುವಾಗಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಇವರ ಆಗಮನಕ್ಕೆ ನಗರದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಬೃಹತ್ ವೇದಿಕೆಯನ್ನ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಆದ್ರೆ ಈ ವೇದಿಕೆಗೆ ಆಗಮಿಸೋದಕ್ಕೆ ರಸ್ತೆ ಇದ್ದರೂ ಕೂಡ ಮಂಡ್ಯ ಜಿಲ್ಲಾಡಳಿತ ಸರ್ಕಾರಿ ಮಹಾವಿದ್ಯಾಲಯದ ಕಾಂಪೌಂಡ್ ಒಡೆದು ಕೃತಕ ರಸ್ತೆ ನಿರ್ಮಾಣ ಮಾಡಿದೆ.

    ಮಹಾವಿದ್ಯಾಲಯದ ಆವರಣದಲ್ಲಿ ದಿನ ನಿತ್ಯ ನೂರಾರು ಜನ ಜಾಗಿಂಗ್ ಮಾಡ್ತಾರೆ. ಆದ್ರೆ ಕಳೆದ 3 ದಿನಗಳಿಂದ ವಿದ್ಯಾಲಯದ ಆವರಣದಲ್ಲಿ ನಿರ್ಮಾಣ ಮಾಡ್ತಿರೋ ಬೃಹತ್ ವೇದಿಕೆಯಿಂದ ಜಾಗಿಂಗ್ ಮಾಡಲು ತೊಂದರೆಯಾಗುತ್ತಿದೆ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಐಪಿಗಳ ಕಾರು ಪಾರ್ಕಿಂಗ್ ಮಾಡುವ ಸಲುವಾಗಿ ಮಹಾವಿದ್ಯಾಲಯದ ಎರಡು ಕಡೆ ಕಾಂಪೌಂಡ್ ಒಡೆಯಲಾಗಿದೆ. ಇದ್ರಿಂದ ಆಕ್ರೋಶಗೊಂಡ ಸಾರ್ವಜನಿಕರು, ಸರ್ಕಾರದ ಆಸ್ತಿಯನ್ನ ಈ ರೀತಿ ಹಾಳು ಮಾಡೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದ್ದಾರೆ.