Tag: ಸರ್ಕಾರಿ ಕಾರ್ಯಕ್ರಮ

  • ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯ

    ಇನ್ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆ ಕಡ್ಡಾಯ

    ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ನಡೆಯುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲೂ ಕನ್ನಡ ಕಡ್ಡಾಯ ಬಳಕೆಗೆ ಸೂಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಕೇಂದ್ರ ಸರ್ಕಾರ ಪ್ರಾಯೋಜಕತ್ವದ ಕಾರ್ಯಕ್ರಮಗಳಲ್ಲಿ ಕನ್ನಡ ಮಾಯವಾಗುತ್ತಿದೆ ಎನ್ನುವ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವಂತೆ ಸರ್ಕಾರದಿಂದ ಇಂದು ಸುತ್ತೋಲೆ ಪ್ರಕಟಿಸಿದೆ. ಇದನ್ನೂ ಓದಿ: ಬೊಮ್ಮಾಯಿ ಕಾಂಗ್ರೆಸ್ ದೂಷಿಸಿ ಮೋದಿ ಶಿಷ್ಯರೆನಿಸಿಕೊಳ್ಳಲು ಹೊರಟಿದ್ದಾರೆ – ಕಾಂಗ್ರೆಸ್ ಟೀಕೆ

    ಸುತ್ತೋಲೆಯಲ್ಲಿ ಏನಿದೆ?
    ಕನ್ನಡವನ್ನು ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಇರತಕ್ಕದ್ದೆಂದು ಕರ್ನಾಟಕ ರಾಜ್ಯ ಭಾಷಾ ಅಧಿನಿಯಮ- 1953ರಲ್ಲಿ ಸ್ಪಷ್ಟಪಡಿಸಲಾಗಿದೆ. ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯ ಜೊತೆಗೆ ಸಾರ್ವಭೌಮ ಭಾಷೆಯಾಗಿದೆ. ಕನ್ನಡವನ್ನು ರಾಜ್ಯದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಳಿಸುವ ಸಂಬಂಧ ಕನ್ನಡ ಭಾಷೆ ಮತ್ತು ಕನ್ನಡಿಗರ ಹಿತಾಸಕ್ತಿಯನ್ನು ಕಾನೂನಿನನ್ವಯ ಸಂರಕ್ಷಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿರುತ್ತದೆ.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪತ್ರದಲ್ಲಿ ಆಗಸ್ಟ್ 6ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆ ಬಳಸದಿರುವ ಬಗ್ಗೆ ಪ್ರಸ್ತಾಪಿಸಿದ್ದರು. ಜೊತೆಗೆ ವೇದಿಕೆ ಮೇಲೆ ಅಳವಡಿಸಲಾಗುವ ಪರದೆ, ಫಲಕಗಳು ಸೇರಿದಂತೆ ಒಟ್ಟಾರೆ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಕೋರಿದ್ದರು. ಇದನ್ನೂ ಓದಿ: ಕೊನೆಗೂ ಫಿಕ್ಸ್ ಆಯ್ತು ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆ ದಿನಾಂಕ

    ಕನ್ನಡ ಭಾಷೆ ನಮಗೆ ಆದ್ಯತೆ ಆಗಬೇಕೇ ಹೊರತು ಆಯ್ಕೆಯಾಗಬಾರದು. ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರಸ್ತಾವನೆಯ ಅನ್ವಯ, ಇನ್ನು ಮುಂದೆ ರಾಜ್ಯದಲ್ಲಿ ಜರುಗುವ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸತಕ್ಕದ್ದೆಂದು ಈ ಮೂಲಕ ಸೂಚಿಸಿದೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ಕಾರ್ಯಕ್ರಮಕ್ಕೆ ಎತ್ತಿನಗಾಡಿ ಏರಿ ಬಂದ ಸುಧಾಕರ್

    ಸರ್ಕಾರಿ ಕಾರ್ಯಕ್ರಮಕ್ಕೆ ಎತ್ತಿನಗಾಡಿ ಏರಿ ಬಂದ ಸುಧಾಕರ್

    ಚಿಕ್ಕಬಳ್ಳಾಪುರ: ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಖಾತೆ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎತ್ತಿನಗಾಡಿಯಲ್ಲಿ ಬರುವ ಮೂಲಕ ಗಮನಸೆಳೆದರು.

    ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ’ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರು ಇದಕ್ಕೂ ಮುನ್ನ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನಕ್ಕೆ ಚಾಲನೆ ನೀಡಿದರು. ತದನಂತರ ಜಾತವಾರ ಗ್ರಾಮದಲ್ಲಿ ನಿರ್ಮಾಣವಾಗಿರುವ 10 ಲಕ್ಷ ರೂ. ವೆಚ್ಚದ ಗರಡಿ ಹಾಗೂ ಸಮುದಾಯ ಭವನವನ್ನ ಲೋಕಾರ್ಪಣೆ ಮಾಡಿದರು. ಇದನ್ನೂ ಓದಿ: ದರ್ಗಾ ಕಟ್ಟಡಕ್ಕೆ ಹಾನಿಮಾಡಿದ ಆರೋಪಿಗಳು ಪೊಲೀಸರ ಬಲೆಗೆ!

    ತದನಂತರ ಹೊಸಹುಡ್ಯ ಗ್ರಾಮಕ್ಕೆ ಬಂದ ಸುಧಾಕರ್ ಅವರನ್ನು ಅದ್ದೂರಿಯಾಗಿ ಬರ ಮಾಡಿಕೊಂಡರು. ಸಚಿವರನ್ನು ಸೇರಿದಂತೆ ಅಧಿಕಾರಿಗಳನ್ನು ಗ್ರಾಮಸ್ಥರು ಎತ್ತಿನ ಬಂಡಿ ಮೂಲಕ ಗ್ರಾಮಕ್ಕೆ ಕರೆದೊಯ್ದರು. ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮಕ್ಕೆ ಸುಧಾಕರ್ ಅವರು ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳು ಹಾಗೂ ಸಚಿವರು ಸಹ ಇಂದು ರಾತ್ರಿ ಗ್ರಾಮ ವಾಸ್ತವ್ಯ ಮಾಡಿ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.

  • ಕರುನಾಡಿನಲ್ಲಿಯೇ ಕನ್ನಡಕ್ಕೆ ಅಪಮಾನ – ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ

    ಕರುನಾಡಿನಲ್ಲಿಯೇ ಕನ್ನಡಕ್ಕೆ ಅಪಮಾನ – ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಮರಾಠಿ ಪ್ರೇಮ

    ಬೆಳಗಾವಿ: ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಿ ಮರಾಠಿಗೆ ಮಣೆ ಹಾಕಲಾಗಿದೆ.

    ಒಂದೆಡೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬೆಳಗಾವಿ ಗಡಿ ವಿಚಾರವಾಗಿ ಕ್ಯಾತೆ ತೆಗೆದಿದ್ದಾರೆ. ಮತ್ತೊಂದೆಡೆ ಇದೀಗ ಕರ್ನಾಟಕದ ಸಚಿವರು ಮರಾಠಿ ಪ್ರೇಮ ಮೆರೆದಿದ್ದಾರೆ. ಇಂದು ಬೆಳಗಾವಿಯ ನಿಪ್ಪಾಣಿ ನಗರದಲ್ಲಿನ ತಾಯಿ-ಮಗು ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಆರೋಗ್ಯ ಸಚಿವ ಸುಧಾಕರ್ ಆಗಮಿಸಿದ್ದರು.

    ಬೆಳಗಾವಿ ಸಚಿವೆ ಶಶಿಕಲಾ ಜೊಲ್ಲೆ ಕ್ಷೇತ್ರದಲ್ಲಿಯೇ ಈ ಕಾರ್ಯಕ್ರಮ ನಡೆಸಲಾಗಿದ್ದು, ಸ್ವಾಗತ ಕೋರುವುದರಿಂದ ಹಿಡಿದು ಬಹುತೇಕ ಭಾಷಣ ಮರಾಠಿ ಭಾಷೆಯಲ್ಲಿಯೇ ನಡೆಸಿದರು. ಜೊತೆಗೆ ಅಲ್ಲಿನ ಆಯೋಜಕರು ಸ್ವಾಗತ ಗೀತೆಯನ್ನು ಕೂಡ ಮರಾಠಿ ಭಾಷೆಯಲ್ಲಿಯೇ ಹಾಡಿಸಿದ್ದಾರೆ. ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿಯೇ ಕನ್ನಡ ಭಾಷೆಯನ್ನು ಬಳಸದೇ ಮರಾಠಿ ಭಾಷೆಗೆ ಆದ್ಯತೆ ನೀಡಿದ್ದರಿಂದ ಸರ್ಕಾರದ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಭಾನುವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕರ್ನಾಟಕ ಆಕ್ರಮಿತ ಕೆಲ ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲಿದ್ದೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಕುರಿತಂತೆ ರಾಜ್ಯಾದ್ಯಂತ ಕನ್ನಡಿಗರು ಕಿಡಿಕಾರುತ್ತಿದ್ದಾರೆ. ಈ ನಡುವೆ ಇಂದು ನಡೆದ ಬೆಳಗಾವಿ ಸರ್ಕಾರಿ ಕಾರ್ಯಕ್ರದಲ್ಲಿ ಮರಾಠಿ ಭಾಷೆ ಬಳಸಿರುವುದು ಕನ್ನಡಿಗರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

  • ಸರ್ಕಾರಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಸಂಪೂರ್ಣ ನಿಷೇಧ

    ಸರ್ಕಾರಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಸಂಪೂರ್ಣ ನಿಷೇಧ

    ಬೆಂಗಳೂರು: ರಾಜ್ಯ ಸರ್ಕಾರ ಅಧಿಕೃತ ಸಭೆ, ಸಮಾರಂಭಗಳು ಹಾಗೂ ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್‍ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಿದೆ.

    ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ಸೆ.5 ರಂದು ಆದೇಶವನ್ನು ಪ್ರಕಟಿಸಿದೆ. ರಾಜ್ಯಾದ್ಯಂತ ಸರಕಾರಿ ಸ್ವಾಮ್ಯದ ನಿಗಮ, ಮಂಡಳಿ, ವಿಶ್ವವಿದ್ಯಾಲಯ ಹಾಗೂ ಸರಕಾರಿ ಅನುದಾನದ ಯಾವುದೇ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಕೆಯನ್ನು ನಿಷೇಧಿಸಲಾಗಿದೆ.

    ಪ್ಲಾಸ್ಟಿಕ್ ಬಾಟಲ್ ಬದಲಿಗೆ 20 ಲೀಟರ್ ಕ್ಯಾನ್ ಅಥವಾ ಹೆಚ್ಚಿನ ಸಾಮರ್ಥ್ಯದ ಕ್ಯಾನ್‍ಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.

    ಕಚೇರಿಗಳು, ಸಭೆಗಳು ನಡೆಯುವ ಜಾಗಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಿ ಗಾಜಿನ ಲೋಟ, ಸ್ಟೀಲ್ ಲೋಟ ಅಥವಾ ಪೇಪರ್ ಲೋಟದಲ್ಲಿ ನೀರು ಕುಡಿಯಲು ವ್ಯವಸ್ಥೆ ಮಾಡಬೇಕು. ಇದರಿಂದಾಗಿ ನೀರಿನ ಬಾಟಲಿ ಖರೀದಿಗೆ ಮಾಡುತ್ತಿರುವ ಖರ್ಚು ಕೂಡ ಉಳಿತಾಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv