Tag: ಸರ್ಕಾರಿ ಅಧಿಕಾರಿಗಳು

  • ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗ್ಳೂರು, ಮಂಡ್ಯ ಸೇರಿ ರಾಜ್ಯದ 30 ಕಡೆ ದಾಳಿ

    ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗ್ಳೂರು, ಮಂಡ್ಯ ಸೇರಿ ರಾಜ್ಯದ 30 ಕಡೆ ದಾಳಿ

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bengaluru), ಮಂಡ್ಯ, ರಾಮನಗರ, ಬಳ್ಳಾರಿ ಸೇರಿದಂತೆ ರಾಜ್ಯದ ಸುಮಾರು 30 ಕಡೆಗಳಲ್ಲಿ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದಾರೆ.

    ಬೆಂಗಳೂರು ನಗರದಲ್ಲಿ 10 ಕಡೆ, ಬಳ್ಳಾರಿಯಲ್ಲಿ 7 ಕಡೆ ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ 30 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು (BBMP Officials) ಸೇರಿದಂತೆ ಇತರ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಲೋಕಾ ಚುನಾವಣೆಗೆ ಬಿಜೆಪಿ ತಯಾರಿ – ಸಭೆಯಲ್ಲಿ ಏನಾಯ್ತು? ಇನ್‌ಸೈಡ್‌ ವರದಿ ಇಲ್ಲಿದೆ

    ಬೆಸ್ಕಾಂ (BESCOM) ಕಚೇರಿಯಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿದ್ದ ಎಂ.ಎಲ್‌ ನಾಗರಾಜ್ ಮನೆ, ಕಚೇರಿಗಳ ಮೇಲೂ ದಾಳಿ ನಡೆದಿದೆ. ಕೆಲ ದಿನಗಳ ಹಿಂದೆ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ ನಾಗರಾಜ್‌ ಕಳೆದ ಒಂದೂವರೆ ತಿಂಗಳಿನಿಂದ ಅಮಾನತಿನಲ್ಲಿದ್ದರು. ಈಗ ಆತನ ಮನೆಯ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಹಲವು ಆಸ್ತಿಗಳನ್ನ ಬಯಲಿಗೆಳೆದಿದ್ದಾರೆ. ನಾಗರಾಜ್ ಈ ಹಿಂದೆ ವಾಣಿಜ್ಯ ಲೈಸೆನ್ಸ್ ಕೊಡುವ ವಿಚಾರಕ್ಕೆ 7.50 ಲಕ್ಷ ರೂ. ಲಂಚ ಕೇಳಿದ್ದರು. ನಾಗರಾಜ್ ಪರವಾಗಿ ಡ್ರೈವರ್ ಮುರಳಿಕೃಷ್ಣ 7 ಲಕ್ಷ ರೂ. ಪಡೆದಿದ್ದ, ಹಣ ಪಡೆಯುವಾಗಲೇ ಸಿಕ್ಕಿಬಿದ್ದಿದ್ದರಿಂದ ನಾಗರಾಜ್ ಅವರನ್ನ ಒಂದೂವರೆ ತಿಂಗಳಿನಿಂದ ಅಮಾನತ್ತಿನಲ್ಲಿಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

    ಇದೀಗ ನಾಗರಾಜ್‌ಗೆ ಸೇರಿದ ಬಳ್ಳಾರಿಯ 7 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ ನಾಗರಾಜ್ ಹೆಸರಲ್ಲಿ 9 ಸೈಟ್‌ಗಳು, 3 ಮನೆಗಳು, 3 ಪೆಟ್ರೋಲ್ ಬಂಕ್, ಕೃಷಿ ಜಮೀನು, ಶಿಕ್ಷಣ ಸಂಸ್ಥೆಗಳು ಪತ್ತೆಯಾಗಿದೆ. ದಾಳಿ ವೇಳೆ ಹಲವಾರು ದಾಖಲೆಗಳನ್ನ ಪತ್ತೆಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅಶ್ಲೀಲ ಪದ ಬಳಸುತ್ತಿದ್ದ, ಖಾಸಗಿ ಅಂಗ ಮುಟ್ಟುತ್ತಿದ್ದ – ಪ್ರಾಧ್ಯಾಪಕನ ವಿರುದ್ಧ 500 ವಿದ್ಯಾರ್ಥಿನಿಯರಿಂದ ಮೋದಿ ಕಚೇರಿಗೆ ಪತ್ರ

  • ನಿರ್ದಿಷ್ಟ ಇಲಾಖೆಯ ಸರ್ಕಾರಿ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು: ಸಿಎಸ್

    ನಿರ್ದಿಷ್ಟ ಇಲಾಖೆಯ ಸರ್ಕಾರಿ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು: ಸಿಎಸ್

    ಬೆಂಗಳೂರು: ನಾವು ಸೂಚಿಸಿದ ಇಲಾಖೆಯ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು, ಕೆಲ ಇಲಾಖೆಗಳಲ್ಲಿ ಶೇ.100ರಷ್ಟು ಹಾಗೂ ಇನ್ನು ಕೆಲ ಇಲಾಖೆಗಳಲ್ಲಿ ಶೇ.50ರಷ್ಟು ಸಿಬ್ಬಂದಿ ರೊಟೇಷನ್ ಆಧಾರದಲ್ಲಿ ಕೆಲಸ ಮಾಡಬೇಕು ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

    ಈ ಕುರಿತು ಆದೇಶ ಹೊರಡಿಸಿರುವ ಅವರು, ಕಂದಾಯ, ಗೃಹ, ಆರೋಗ್ಯ, ವೈದಕೀಯ, ಒಳಾಡಳಿತ ಸಿಬ್ಬಂದಿ ಶೇ.100ರಷ್ಟು ಕರ್ತವ್ಯಕ್ಕೆ ಹಾಜರಿರಬೇಕು. ಪಂಚಾಯತ್ ರಾಜ್, ನಗರಾಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ಆರ್ಥಿಕ, ಪಶುಸಂಗೋಪನೆ, ಕೃಷಿ, ಕಾರ್ಮಿಕ, ತೋಟಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳಲ್ಲಿ ಶೇ.50ರಷ್ಟು ರೊಟೇಷನ್ ಆಧಾರದ ಮೇಲೆ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

    ಉಳಿದ ಇಲಾಖೆಗಳಿಗೆ ವಿನಾಯಿತಿ ನೀಡಲಾಗಿದ್ದು, ಅಗತ್ಯ ಇದ್ದಾಗ ಕಾರ್ಯದರ್ಶಿಯವರು ಸೂಚನೆ ನೀಡಿದ ತಕ್ಷಣ ಕೆಲಸಕ್ಕೆ ಹಾಜರಾಗಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ದೃಷ್ಟಿಹೀನ, ದೈಹಿಕ ಅಂಗವೈಕಲ್ಯ, ಗರ್ಭಿಣಿ ಮಹಿಳಾ ಸಿಬ್ಬಂದಿ ಕಚೇರಿ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಈ ಆದೇಶ ಮೇ 12ರ ವರೆಗೂ ಜಾರಿಯಲ್ಲಿ ಇರುತ್ತದೆ ಎಂದು ರವಿಕುಮಾರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

  • ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಸೂಚನೆ

    ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಸೂಚನೆ

    ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಕೆಲಸಕ್ಕೆ ಹಾಜರಾಗುವಂತೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

    ಕೊರೊನಾ ಭೀತಿಯಿಂದ ಕೆಲ ಸರ್ಕಾರಿ ಇಲಾಖೆಗಳಿಗೆ ರಜೆ ನೀಡಲಾಗಿತ್ತು. ಈಗ ಸೂಚಿಸಿರುವ ಎಲ್ಲ ಸರ್ಕಾರಿ ಅಧಿಕಾರಿಗಳು ಮರಳಿ ಕೆಲಸಕ್ಕೆ ಹಾಜರಗಬೇಕು ಎಂದು ವಿಜಯ್ ಭಾಸ್ಕರ್ ಸುತ್ತೋಲೆ ಹೊರಡಿಸಿ ಸೂಚಿಸಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಚಿವಾಲಯ ಸೇರಿದಂತೆ ರಾಜ್ಯಮಟ್ಟದ ಕಚೇರಿಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಒಳಾಡಳಿತ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ರಾಜ್ಯದಲ್ಲಿರುವ ಎಲ್ಲಾ ಖಜಾನೆಗಳನ್ನು ಸೇರಿದಂತೆ ಆರ್ಥಿಕ ಇಲಾಖೆ, ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಮತ್ತು ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವರ್ಗದ ಅಧಿಕಾರಿ/ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.

    ಮೇಲ್ಕಾಣಿಸಿದ ಇಲಾಖೆಗಳನ್ನು ಹೊರತುಪಡಿಸಿ ಉಳಿದ ಇಲಾಖೆಗಳಲ್ಲಿ ಸರ್ಕಾರಿ ನಿಗಮ ಮಂಡಳಿಗಳಲ್ಲಿ ಮತ್ತು ಪ್ರಾಧಿಕಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಎ ವೃಂದದ ಎಲ್ಲಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

    ಆದರೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ದೃಷ್ಟಿಹೀನ ಹಾಗೂ ಇತರೆ ದೈಹಿಕ ಅಂಗವೈಕಲ್ಯ ಹೊಂದಿರುವ ಅಧಿಕಾರಿ ಅಥವಾ ಸಿಬ್ಬಂದಿ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

  • ಬ್ಯಾರಿಕೇಡ್ ಕಲ್ಯಾಣ – ಜನಸಂದಣಿ ಇಲ್ಲದೇ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಎಂಜಿನಿಯರ್ ವಿವಾಹ

    ಬ್ಯಾರಿಕೇಡ್ ಕಲ್ಯಾಣ – ಜನಸಂದಣಿ ಇಲ್ಲದೇ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಎಂಜಿನಿಯರ್ ವಿವಾಹ

    ಚಿತ್ರದುರ್ಗ: ವಿಶ್ವದೆಲ್ಲೆಡೆ ತಾಂಡವವಾಡುತ್ತಿರುವ ಕೊರೊನಾ ಭೀತಿಯಿಂದಾಗಿ ಎಂಜಿನಿಯರಿಂಗ್ ವರನೊಬ್ಬ ಬ್ಯಾರಿಕೇಡ್ ನಡುವೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ನಿವಾಸಿ ಅಮರೇಶ್, ಸಂಬಂಧಿಗಳ ಸಮ್ಮುಖವಿಲ್ಲದೇ ಸ್ವಾತಿ ಜೊತೆ ಬ್ಯಾರಿಕೇಡ್ ನಡುವೆ ಮದುವೆಯಾಗಿದ್ದಾರೆ. ವರ ಅಮರೇಶ್ ಕೆನಡಾದಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ವಾರದ ಹಿಂದೆಯೇ ಕೆನಡಾದಿಂದ ಆಗಮಿಸಿದ್ದು, ಅದ್ಧೂರಿಯಾಗಿ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದರು.

    ಆದರೆ ರಾಂಪುರದಲ್ಲಿ ಇಂದು ವಿವಾಹ ಇರುವ ಮಾಹಿತಿ ತಿಳಿದ ಜಿಲ್ಲಾಡಳಿತ ಜಾಗೃತಿ ವಹಿಸಿದ್ದು, ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಹೆಚ್ಚು ಜನರನ್ನು ಸೇರಿಸದಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂದಿಸಿರುವ ಅಮರೇಶ್ ಸರಳವಾಗಿ ವಿವಾಹವಾಗುವ ಮೂಲಕ ಕೊರೊನಾ ಜಾಗೃತಿಗೆ ಸಹಕರಿಸಿದ್ದಾರೆ.

    ಮದುವೆಯಲ್ಲಿ ಜನಸಂದಣಿ ಸೇರದಂತೆ ಅಧಿಕಾರಿಗಳ ಸೂಚನೆ ನೀಡಿದ್ದರು. ಹೀಗಾಗಿ ಜನರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಬ್ಯಾರಿಕೇಡ್ ಕೂಡ ಹಾಕಲಾಗಿತ್ತು. ಮೊದಲೇ ಆರೋಗ್ಯ ಅಧಿಕಾರಿಗಳ ಹೇಳಿದ್ದ ಪರಿಣಾಮ ಅಧಿಕಾರಿಗಳ ಸೂಚನೆಯನ್ನು ನೂತನ ವಧು-ವರರು ಪಾಲಿಸಿದ್ದಾರೆ. ಹೆಚ್ಚು ಸಂಬಂಧಕರನ್ನು ಸೇರಿಸದೆ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ.

    ವರನಾದ ಅಮರೇಶ್ ಒಂದು ವಾರದ ಹಿಂದೆಯೇ ಕೆನಡಾದಿಂದ ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಯಾವುದೇ ಪರೀಕ್ಷೆಗೂ ಈ ಮೊದಲು ಒಳಪಡಿಸಿರಲಿಲ್ಲ. ಆದರೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಅಮರೇಶ್‍ಗೆ ಕೊರೊನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಡಿಹೆಚ್‍ಓ ಡಾಕ್ಟರ್ ಪಾಲಾಕ್ಷ ಸ್ಪಷ್ಟಪಡಿಸಿದ್ದಾರೆ.

  • ಸರ್ಕಾರಿ ಸಂಘವೇ ಇಸ್ಪೀಟ್ ಅಡ್ಡ- ಅಧಿಕಾರಿಗಳು, ನೌಕರರೇ ಜೂಜುಕೋರರು

    ಸರ್ಕಾರಿ ಸಂಘವೇ ಇಸ್ಪೀಟ್ ಅಡ್ಡ- ಅಧಿಕಾರಿಗಳು, ನೌಕರರೇ ಜೂಜುಕೋರರು

    ಹಾಸನ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ದೇವರು-ಕೆಲಸ ಎಲ್ಲಾ ಪಕ್ಕಕಿರಲಿ. ಸರ್ಕಾರಿ ಕಟ್ಟಡದ ಗೌರವ ಉಳಿಸಿಕೊಂಡರೆ ಸಾಕಾಗಿದೆ. ಯಾಕೆಂದರೆ ಹಾಸನದ ಸರ್ಕಾರಿ ಸಂಘವೇ ಅಲ್ಲಿನ ಅಧಿಕಾರಿಗಳು, ನೌಕರರಿಗೆ ಇಸ್ಪೀಟ್ ಅಡ್ಡೆಯಾಗಿದೆ.

    ಆಯಕಟ್ಟಾದ ಸ್ಥಳ, ಹತ್ತಾರು ಟೇಬಲ್‍ಗಳು, ಒಂದು ಟೇಬಲ್‍ಗೆ ಇಷ್ಟು ಜನ ಎಂದು ಜೂಜುಕೋರರು ಕುಳಿತು, ಎಲ್ಲರು ಕೈಯಲ್ಲಿ ಇಸ್ಪೀಟ್ ಕಾರ್ಡ್ ಹಿಡಿದುಕೊಂಡಿರೋದನ್ನ ನೋಡಿದರೆ ಇದು ಯಾವುದೋ ಲೈಸೆನ್ಸ್ ಹೊಂದಿದ ಇಸ್ಪೀಟ್ ಕ್ಲಬ್ ಎಂದು ನೋಡುಗರಿಗೆ ಅನಿಸುತ್ತೆ. ಅಷ್ಟರ ಮಟ್ಟೆಗೆ ಹಾಸನದ ಜಿಲ್ಲಾ ನೌಕರರ ಸಂಘದ ಕಟ್ಟಡದ ಚಿತ್ರಣವನ್ನೇ ಸಿಬ್ಬಂದಿ ಬದಲಿಸಿದ್ದಾರೆ.


    ಇವರ ಜೂಜಾಟ ಯಾರಿಗೂ ಗೊತ್ತಿಲ್ಲದ ವಿಚಾರ ಏನಲ್ಲ. ಜಿಲ್ಲೆಯಾದ್ಯಂತ ವೈರಲ್ ಕೂಡ ಆಗಿವೆ. ಆದರೆ ಈ ಸರ್ಕಾರಿ ನೌಕರರು ಮಾತ್ರ ಯಾವುದಕ್ಕೂ ಕ್ಯಾರೆ ಮಾಡಲ್ಲ ಎನ್ನುವ ಹಾಗೆ ಇದ್ದಾರೆ. ಇಲ್ಲಿ ಪ್ರತಿನಿತ್ಯ 150 ರಿಂದ 200 ಮಂದಿ ಜೂಜು ಆಟದಲ್ಲಿ ತೊಡಗಿರುತ್ತಾರೆ. ಸಾವಿರ ಅಲ್ಲ ಲಕ್ಷಗಳ ಲೆಕ್ಕದಲ್ಲಿ ಇಲ್ಲಿ ಜೂಜು ನಡೆಯುತ್ತೆ. ಇಷ್ಟೆಲ್ಲಾ ಆಗುತ್ತಿದ್ದರು, ಒಬ್ಬ ಅಧಿಕಾರಿಯೂ ಕೂಡ ಈ ಬಗ್ಗೆ ತುಟಕ್ ಪಿಟಕ್ ಅನ್ನಲ್ಲ. ಯಾಕೆಂದರೆ ಇಲ್ಲಿ ಎಲ್ಲರಿಗೂ ಮಾಮೂಲಿ ಹೋಗುತ್ತೆ. ಆದ್ದರಿಂದ ಅವರೆಲ್ಲಾ ಸುಮ್ಮನೆ ನಮಗೆ ಬರೋ ಹಣ ಬರುತ್ತಲ್ಲ ಎಂದು ಕಣ್ಮುಚ್ಚಿ ಕುಳಿತಿದ್ದಾರೆ.

    ಈ ರೀತಿಯ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. 2018ರಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳೇ ಈ ರೀತಿ ಜೂಜು ಅಡ್ಡೆಯ ಮೇಲೆ ರೇಡ್ ಮಾಡಿ ಹಲವರನ್ನು ಬಂಧಿಸಿ ಬೀಗ ಕೂಡ ಜಡಿದಿದ್ದರು. ಆದರೆ ಇದೀಗ ಮತ್ತೆ ಅದೇ ಹಳೇ ವರಸೆ ಶುರುವಾಗಿದೆ. ಮತ್ತೊಮ್ಮೆ ಇಸ್ಪೀಟ್ ಆಟ ಎಗ್ಗಿಲ್ಲದೆ ಸಾಗಿದ್ದು, ಇದೆಕ್ಕೆ ತಡೆಹಾಕಬೇಕಿದೆ. ಈಗಿನ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ತಮ್ಮ ಇಚ್ಛಾಶಕ್ತಿ ಕೊರತೆಯನ್ನ ನೀಗಿಸಿಕೊಂಡು ಕ್ರಮ ತೆಗೆದುಕೊಂಡರೆ, ಸರ್ಕಾರಿ ಕಟ್ಟಡದ ಮರ್ಯಾದೆ ಆದರೂ ಉಳಿಯುತ್ತೆ.

  • ಚಿನ್ನ, ಭೂಮಿ ಅಡವಿಟ್ಟ ಖಾಸಗಿ ಸಾಲ ಮನ್ನಾ – ಎಚ್‍ಡಿಕೆ ಗಿಫ್ಟ್

    ಚಿನ್ನ, ಭೂಮಿ ಅಡವಿಟ್ಟ ಖಾಸಗಿ ಸಾಲ ಮನ್ನಾ – ಎಚ್‍ಡಿಕೆ ಗಿಫ್ಟ್

    – ಕೊನೆ ಕ್ಷಣದಲ್ಲೂ ರಾಜ್ಯದ ಜನರಿಗೆ ಸಿಹಿ ಸುದ್ದಿ
    – ನಿನ್ನೆಯೇ ಸಾಲ ಮನ್ನಾ ಆದೇಶ ಜಾರಿ

    ಬೆಂಗಳೂರು: ಅಧಿಕಾರ ಕಳೆದುಕೊಂಡ ಹೊತ್ತಲ್ಲೇ ಕುಮಾರಸ್ವಾಮಿ ಬಂಪರ್ ಗಿಫ್ಟ್ ಕೊಟ್ಟಿದ್ದು ಖಾಸಗಿ ವ್ಯಕ್ತಿಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಿದ್ದಾರೆ. ಫೈನಾನ್ಸ್ ಸೇರಿದಂತೆ ಖಾಸಗಿ ವ್ಯಕ್ತಿಗಳಿಂದ ಪಡೆದಿದ್ದ ಸಾಲವನ್ನು ಮನ್ನಾ ಮಾಡುವ ಕರ್ನಾಟಕ ಋಣ ಪರಿಹಾರ ಕಾಯ್ದೆ ನಿನ್ನೆಯಿಂದಲೇ ಜಾರಿಯಾಗಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭೂರಹಿತರು, ಕಾರ್ಮಿಕರು ಹಾಗೂ ಬಡವರ ಆದಾಯ 1.20 ಲಕ್ಷ ರೂ.ಗಳಿಗಿಂತ ಕಡಿಮೆ ಇದ್ದರೆ ಅವರಿಗೆ ಈ ಕಾಯ್ದೆ ಅನ್ವಯ ಆಗಲಿದೆ. ಅಲ್ಲದೇ ಈ ಬಗ್ಗೆ ಕಾಯ್ದೆಯ ಜಾರಿಗೆ ನಾನು ಕೊನೆಯ ಸಹಿ ಹಾಕಿದ್ದು, ಖಾಸಗಿ ಅವರ ಬಳಿ ಪಡೆದ ಮಾಹಿತಿಯನ್ನು ಪಡೆಯಲು ಸೂಚನೆ ನೀಡಿದ್ದೇನೆ. ಋಣ ಮುಕ್ತ ಕಾಯ್ದೆ ಅಡಿ ಅವರು ಋಣ ಮುಕ್ತರಾಗಲಿದ್ದಾರೆ. ಒಂದು ವರ್ಷಗಳ ಕಾಲ ಈ ಕಾಯ್ದೆಯ ಅವಧಿ ಇದ್ದು, 90 ದಿನಗಳ ಒಳಗೆ ನೋಡಲ್ ಅಧಿಕಾರಿಗೆ ಮಾಹಿತಿ ನೀಡಬೇಕು ಮನವಿ ಮಾಡಿದರು.

    ಒನ್ ಟೈಂ ಅವಧಿಯಲ್ಲಿ ಇದು ಜಾರಿ ಆಗಲಿದ್ದು, ಚಿನ್ನ, ಭೂಮಿ ಅಡವಿಟ್ಟ ಸಾಲಮನ್ನಾ ಆಗಲಿದೆ ಎಂದರು. ಇದಕ್ಕೆ ಪ್ರೇರಣೆ ನೀಡಿದ ಮಹಿಳೆಯ ಕಥೆಯನ್ನ ವಿವರಿಸಿದ ಕುಮಾರಸ್ವಾಮಿ ಅವರು, ಪತಿಯೊಬ್ಬರು ಸಾಲ ಮಾಡಿ ಮೃತಪಟ್ಟಿದ್ದರು. ಈ ಸಾಲದ ಹೊರೆ ಪತ್ನಿಯ ಮೇಲೆ ಬಿದ್ದಿತ್ತು. ಈ ಸಾಲವನ್ನು ತೀರಿಸಲು ಮಹಿಳೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಆ ಮಹಿಳೆ ರೈತರ ಸಾಲವನ್ನು ಮಾಡಿದಂತೆ ಈ ರೀತಿಯ ಸಾಲವನ್ನು ಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿ ಮನವಿ ಮಾಡಿದರು. ಹೀಗಾಗಿ ನಾನು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು ಎಂದು ವಿವರಿಸಿದರು.

    ನಿನ್ನೆಯವರೆಗೆ ಎಷ್ಟು ಸಾಲ ಮಾಡಿದ್ದಾರೆ ಎಷ್ಟು ವರ್ಷದ ಹಿಂದೆ ಮಾಡಿದ್ದರೂ ಕೂಡ ಇದು ಅನ್ವಯ ಆಗಲಿದೆ. 90 ದಿನಗಳ ಒಳಗೆ ಈ ಬಗ್ಗೆ ಮಾಹಿತಿ ನೀಡಿ, 5 ಎಕರೆ ಗಿಂತ ಭೂಮಿ ಕಡಿಮೆ ಇರುವವರಿಗೂ ಇದು ಅನ್ವಯ ಆಗಲಿದೆ. ಖಾಸಗಿ ಅವರಿಂದ ಪಡೆದ ಸಾಲವಷ್ಟೇ ಮನ್ನಾ ಆಗಲಿದೆ. ಆದರೆ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ಪಡೆದು ವ್ಯವಹಾರ ಮಾಡುವವರಿಗೆ ಇದು ಅನ್ವಯ ಆಗುವುದಿಲ್ಲ. ಈ ಯೋಜನೆ ಬಗ್ಗೆ ಕೇಂದ್ರ ಸರ್ಕಾರವೂ ಮಾಹಿತಿ ಕೇಳಿತ್ತು. ಅಧಿಕಾರಿಗಳು ನಿರಂತರವಾಗಿ ಮಾಹಿತಿ ನೀಡಿ ಕೇಂದ್ರದ ಗೊಂದಲಗಳನ್ನು ನಿವಾರಣೆ ಮಾಡಿದ್ದಾರೆ. ಫೆಬ್ರವರಿಯಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂದಿದ್ದ ಮಸೂದೆಗೆ ರಾಷ್ಟ್ರಪತಿಗಳು ಜುಲೈ 16 ರಂದು ಅಂಕಿತ ಹಾಕಿದ್ದಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಖಾಸಗಿಯವರಿಗೆ ಸರ್ಕಾರದಿಂದ ಹಣವನ್ನು ಪಾವತಿಸಲಾಗುತ್ತಾ ಎಂಬ ಪ್ರಶ್ನೆಗೆ, ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳು ಬಡ್ಡಿ ಹಣವನ್ನು ತಿಂದದ್ದು ಸಾಕು. ಯಾವುದೇ ಹಣವನ್ನು ಮರು ಪಾವತಿ ಮಾಡುವುದಿಲ್ಲ ಎಂದು ಉತ್ತರಿಸಿದರು.

    ಕಳೆದ 14 ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಹಲವು ರಾಜಕೀಯ ಸಮಸ್ಯೆಗಳ ನಡುವೆ ಅಭಿವೃದ್ಧಿ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಸಹಕಾರ ನೀಡಿದ ಎಲ್ಲ ಅಧಿಕಾರಿ ವರ್ಗಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

    ರೈತರ ಸಾಲಮನ್ನಾ, ರೈತರ ಅಭಿವೃದ್ಧಿ, ಕೈಗಾರಿಕೆಗಳ ಅಭಿವೃದ್ಧಿಗೆ ಸಹಕಾರ ನೀಡಿದ ಅಧಿಕಾರಿಗಳಿಗೆ ಧನ್ಯವಾದ. ರಾಜಕೀಯ ಅಸ್ಥಿರತೆ ಉಂಟು ಮಾಡಲು ಕಳೆದ 14 ತಿಂಗಳು ನಡೆದ ಪ್ರಯತ್ನ ನಡುವೆ ರಾಜ್ಯದ ಆರ್ಥಿಕ ಸ್ಥಿತಿ ಕಾಪಾಡಲು ಅಸಹಕಾರ ನೀಡಿದ ಅಧಿಕಾರಿಗಳಿಗೆ ವಂದನೆ ತಿಳಿಸಿದ್ದೇನೆ ಎಂದರು.

    ಮುಂದಿನ ಅವಧಿಯಲ್ಲೂ ರಾಜಕೀಯ ಅಸ್ಥಿರತೆ ನಿರ್ಮಾಣವಾಗುವ ಸಂದರ್ಭಗಳು ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಸರ್ಕಾರ ಅಸ್ಥಿರವಾಗಿದ್ದರೂ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿರ್ವಹಿಸಲು ಸಲಹೆ ನೀಡಿದ್ದೇನೆ. ಅಧಿಕಾರದಿಂದ ನಿರ್ಗಮಿಸುತ್ತಿರುವ ಸಂದರ್ಭದಲ್ಲಿ ಜನರಿಗೂ ಧನ್ಯವಾದ ತಿಳಿಸುತ್ತೇನೆ. 1976 ರಲ್ಲಿ ದೇವರಾಜ ಅರಸು ಅವರ ಕಾಲದಲ್ಲಿ ಇದ್ದ ಋಣ ಪರಿಹಾರ ಕಾಯ್ದೆ ಮುಂದುವರಿಸಲು ಪ್ರಯತ್ನ ಪಟ್ಟಿದ್ದೆ.

  • ಸರ್ಕಾರಿ ಅಧಿಕಾರಿಗಳು ಯಾರಿಂದಲೂ ಗಿಫ್ಟ್ ಪಡೆಯುವಂತಿಲ್ಲ: ಯೋಗಿ ಆದಿತ್ಯನಾಥ್

    ಸರ್ಕಾರಿ ಅಧಿಕಾರಿಗಳು ಯಾರಿಂದಲೂ ಗಿಫ್ಟ್ ಪಡೆಯುವಂತಿಲ್ಲ: ಯೋಗಿ ಆದಿತ್ಯನಾಥ್

    ಲಕ್ನೋ: ರಾಜ್ಯ ಸರ್ಕಾರದ ಯಾವುದೇ ಅಧಿಕಾರಿ ಯಾರಿಂದಲೂ ಉಡುಗೊರೆಗಳನ್ನು ಪಡೆಯುವಂತಿಲ್ಲ ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

    ಸಚಿವ ಸಂಪುಟ ಸಭೆಗಳಲ್ಲಿ ಮೊಬೈಲ್ ನಿಷೇಧ, ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ಹಾಜರಾಗುವುದು ಸೇರಿದಂತೆ ವಿವಿಧ ನಿಯಮಗಳನ್ನು ಅಧಿಕಾರಿಗಳ ಮೇಲೆ ಹೇರಿದ್ದರು. ಇದೀಗ ಯಾರಿಂದಲೂ, ಯಾವುದೇ ರೀತಿಯ ಉಡುಗೊರೆಗಳನ್ನು ಪಡೆಯುವಂತಿಲ್ಲ ಎಂದು ಯುಪಿ ಸರ್ಕಾರದ ಅಧೀನ ಕಾರ್ಯದರ್ಶಿ ಮಹೇಶ್ ಗುಪ್ತಾ ಸುತ್ತೋಲೆ ಹೊರಡಿಸಿದ್ದಾರೆ.

    ಉಡುಗೊರೆಗಳೊಂದಿಗೆ ಯಾವುದೇ ಸರ್ಕಾರಿ ವ್ಯಕ್ತಿ ಕಾರ್ಯದರ್ಶಿಗಳ ಕಚೇರಿಯನ್ನು ಪ್ರವೇಶಿಸುವಂತಿಲ್ಲ. ಅಲ್ಲದೆ, ಉನ್ನತ ಅಧಿಕಾರಿಗಳ ಅನುಮತಿ ಇಲ್ಲದೆ, ಯಾವುದೇ ಉಡುಗೊರೆಗಳನ್ನು ಸ್ವೀಕರಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.

    ಐಎಎಸ್ ಅಧಿಕಾರಿಗಳು ಉಡುಗೊರೆಗಳನ್ನು ತಮ್ಮ ಮನೆಗೆ ಸಾಗಿಸುತ್ತಾರೆ, ಸಿಹಿಯನ್ನು ಕಚೇರಿಯಲ್ಲಿ ಪಡೆಯುತ್ತಾರೆ. ಇದನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿದ್ದು, ದುಬಾರಿ ಬೆಲೆ ಬಾಳುವ ವಸ್ತುಗಳು ಅಧಿಕಾರಿಗಳ ಮನೆ ತಲುಪಿದರೆ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಹಲವು ವರ್ಷಗಳಿಂದ ಸರ್ಕಾರದ ಅಧಿಕಾರಿಗಳು ಲಂಚದ ರೂಪದಲ್ಲಿ ಗಿಫ್ಟ್ ಗಳನ್ನು ಪಡೆಯುತ್ತಿದ್ದರು. ಹೊಸ ವರ್ಷದ ಸಂದರ್ಭದಲ್ಲಿ ಕ್ಯಾಲೆಂಡರ್, ಸ್ವೀಟ್ ಹಾಗೂ ದೀಪಾವಳಿ, ಹೋಳಿಯಂತಹ ಹಬ್ಬ ಹರಿದಿನಗಳ ಸಂದರ್ಭದಲ್ಲಿ, ಅಲ್ಲದೆ, ಮದುವೆ ಸಂದರ್ಭದಲ್ಲಿ ಬೆಲೆ ಬಾಳುವ ಗಿಫ್ಟ್ ಗಳನ್ನು ಪಡೆಯುತ್ತಿದ್ದರು. ಇದೀಗ ಕಾರ್ಯದರ್ಶಿಗಳ ಕಚೇರಿಯಲ್ಲಿ ಯಾವುದೇ ರೀತಿಯ ಗಿಫ್ಟ್ ಗಳನ್ನು ನಿಷೇಧಿಸಲಾಗಿದೆ.

    ಈ ಹಿಂದೆ ಸರ್ಕಾರಿ ಕಚೇರಿ ಆವರಣದಲ್ಲಿ ಬಂದೂಕುಗಳನ್ನು ತರದಂತೆ ಹಾಗೂ ಭದ್ರತಾ ಸಿಬ್ಬಂದಿಗಳು ತಮ್ಮ ಆಯುಧವನ್ನು ಗೇಟ್ ಬಳಿಯೇ ಇಡುವಂತೆ ಆದೇಶಿಸಿದ್ದರು. ಅಲ್ಲದೆ, ಸರ್ಕಾರಿ ಕಚೇರಿ ಅವರಣದಲ್ಲಿ ಅಧಿಕಾರಿಗಳು ಗುಟ್ಕಾ, ಪಾನ್ ಜಗಿಯುವುದನ್ನು ನಿಷೇಧಿಸಿದ್ದರು. ನಿಯಮ ಉಲ್ಲಂಘನೆಯಾದಲ್ಲಿ 500 ರೂ. ದಂಡ ವಿಧಿಸುವಂತೆ ಸುತ್ತೋಲೆ ಹೊರಡಿಸಲಾಗಿತ್ತು.

    ಈ ಹಿಂದೆ ಅಧಿಕೃತ ಸಭೆಯಲ್ಲಿ ಮೊಬೈಲ್ ಫೋನ್ ಬಳಸದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಚಿವರಿಗೆ ಸೂಚನೆ ನೀಡಿದ್ದಾರೆ. ಚರ್ಚೆಯಲ್ಲಿ ಸಚಿವರು ಭಾಗಿಯಾಗುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮೊಬೈಲ್‍ನಿಂದ ಉಂಟಾಗುವ ಅಡಚಣೆ ತಡೆಯುವ ನಿಟ್ಟಿಯಲ್ಲಿ ಯೋಗಿ ಆದಿತ್ಯನಾಥ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಆದೇಶವು ಕ್ಯಾಬಿನೆಟ್ ಸಭೆಗೂ ಅನ್ವಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಹಿರಿಯ ಕಾರ್ಯದರ್ಶಿಯೊಬ್ಬರು ತಿಳಿಸಿದ್ದರು.

    ಈ ಮೊದಲು ಸಭೆಗೆ ಮೊಬೈಲ್ ಫೋನ್ ತರಲು ಮಂತ್ರಿಗಳಿಗೆ ಅವಕಾಶವಿತ್ತು. ಆದರೆ ಸೈಲೆಂಟ್ ಮೂಡ್‍ನಲ್ಲಿ ಇಡಬೇಕು, ಇಲ್ಲವೆ ಸ್ವಿಚ್‍ಆಫ್ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಈಗ ಸಭೆಗೂ ಮುನ್ನ ಕೌಂಟರ್ ನಲ್ಲಿ ಮೊಬೈಲ್ ಇಟ್ಟು ಟೋಕನ್ ಪಡೆಯಬೇಕು. ಸಭೆಯ ಬಳಿಕ ಟೋಕನ್ ನೀಡಿ ತಮ್ಮ ತಮ್ಮ ಮೊಬೈಲ್ ಪಡೆಬೇಕು ಎನ್ನುವ ಸೂಚನೆಯನ್ನು ಯೋಗಿ ಆದಿತ್ಯನಾಥ್ ನೀಡಿದ್ದಾರೆ ಎನ್ನಲಾಗಿದೆ.

  • ಬಗೆದಷ್ಟೂ ಬಂಗಾರ, ಹಣ, ಒಬ್ಬೊಬ್ಬರ ಬಳಿಯೂ ಭವ್ಯ ಬಂಗಲೆ – ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಸಲಿ ಬಣ್ಣ ಬಟಾಬಯಲು.!

    ಬಗೆದಷ್ಟೂ ಬಂಗಾರ, ಹಣ, ಒಬ್ಬೊಬ್ಬರ ಬಳಿಯೂ ಭವ್ಯ ಬಂಗಲೆ – ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಸಲಿ ಬಣ್ಣ ಬಟಾಬಯಲು.!

    ಬೆಂಗಳೂರು: ಎಸಿಬಿ ದಾಳಿಯಿಂದ ನಾಲ್ವರು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಅಸಲಿ ಬಣ್ಣ ಬಟಾಬಯಲಾಗಿದೆ.

    ಬೆಂಗಳೂರಿನ ಸಹಕಾರ ಸಂಘಗಳ ಅಪರ ನಿಬಂಧಕ ಸತೀಶ್, ಕಂದಾಯ ಅಧಿಕಾರಿ ಎಸ್.ಬಿ ಮಂಜುನಾಥ್, ರೈತ ಸಂಪರ್ಕ ಕೇಂದ್ರದ ಭ್ರಷ್ಟ ಅಧಿಕಾರಿ ಪ್ರಕಾಶ್ ಗೌಡ ಕುದರಿಮೊಟಿ ಮತ್ತು ವಿಜಯಪುರದ ಗ್ರಾಮೀಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಭ್ರಷ್ಟ ಅಧಿಕಾರಿ ಶರದ್ ಗಂಗಪ್ಪ ಈ ನಾಲ್ವರು ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ಮಂಗಳವಾರ ಬೆಳ್ಳಂಬೆಳಗ್ಗೆ ಕಣ್ಣುಜ್ಜಿಕೊಂಡು ಹಾಸಿಗೆಯಿಂದ ಏಳೋ ಮೊದಲೇ ಮನೆಗೆ ಎಸಿಬಿ ಅಧಿಕಾರಿಗಳು ಬಂದಿದ್ದು, ತಮ್ಮ ಸಿಬ್ಬಂದಿ ಜೊತೆ ಬಂದು ಇಡೀ ಮನೆ ಪರಿಶೀಲನೆ ನಡೆಸಿದ್ದಾರೆ. ದಾಳಿಯಲ್ಲಿ ಪತ್ತೆಯಾದ ಅಕ್ರಮ ಆಸ್ತಿ-ಪಾಸ್ತಿ ಹಾಗೂ ದಾಳಿಯ ಕುರಿತಾಗಿ ಖುದ್ದು ಎಸಿಬಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.

    ಸತೀಶ್ ಬಿ.ಸಿ-ಬೆಂಗಳೂರಿನ ಸಹಕಾರ ಸಂಘಗಳ ಅಪರ ನಿಬಂಧಕ
    * ಭವ್ಯವಾದ ಬಂಗಲೆ, ಕೋಟಿ ಬೆಲೆಬಾಳುವ 2 ನಿವೇಶನ
    * 1.3 ಕೆಜಿ ಚಿನ್ನ, ಒಂದೂವರೆ ಕೆಜಿ ಬೆಳ್ಳಿ ಆಭರಣ
    * 1 ಕಾರ್, 1 ಲಾಕರ್, ಮಡದಿ ಹೆಸರಿನಲ್ಲಿ 3.84 ಲಕ್ಷ
    * 34.16 ಲಕ್ಷದ ಗೃಹೋಪಯೋಗಿ ವಸ್ತು..

    ಎಸ್.ಬಿ ಮಂಜುನಾಥ್-ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ, ಜೆ.ಬಿ.ನಗರ
    * ಮಡದಿ ಹೆಸರಲ್ಲಿ 2 ಮನೆ, 4 ನಿವೇಶನ
    * 1 ವಾಣಿಜ್ಯ ಸಂಕೀರ್ಣ, 13 ಗುಂಟೆ ಜಮೀನು
    * 453 ಗ್ರಾಂ ಚಿನ್ನ, 1 ಕೆಜಿ 230 ಗ್ರಾಂ ಬೆಳ್ಳಿ
    * 1 ಕಾರ್,19 ಲಕ್ಷ ಗೃಹ ಉಪಯೋಗಿ ವಸ್ತು,
    * 2 ಲಾಕರ್ ಪತ್ತೆ

                 ಪ್ರಕಾಶ್ ಗೌಡ                    ಶರದ್ ಗಂಗಪ್ಪ                ಸತೀಶ್                         ಮಂಜುನಾಥ್ 

    ವಿಜಯಪುರದ ಗ್ರಾಮೀಣ ಮತ್ತು ಮೂಲ ಸೌಕರ್ಯ ಅಭಿವೃದ್ದಿ ನಿಗಮದ ಭ್ರಷ್ಟ ಅಧಿಕಾರಿ ಶರದ್ ಗಂಗಪ್ಪ ಬಳಿ, 2 ಮನೆ, 1 ಫ್ಲಾಟ್, 32 ಎಕರೆ 24 ಗುಂಟೆ ಜಮೀನು ಪತ್ತೆಯಾಗಿದೆ. ಅಷ್ಟೇ ಅಲ್ಲ, 675 ಗ್ರಾಂ ಚಿನ್ನ, 12.5 ಕೆಜಿ ಬೆಳ್ಳಿ. 3 ಕಾರ್, 3 ದ್ವಿಚಕ್ರ ವಾಹನ, 42.66 ಲಕ್ಷ ನಗದು ಮತ್ತು ಹೆಂಡತಿ ಖಾತೆಯಲ್ಲಿ 2.6 ಲಕ್ಷ ಸಿಕ್ಕಿದೆ.

    ಇನ್ನು ಗದಗ ಜಿಲ್ಲೆ ಮುಂಡರಗಿಯ ರೈತ ಸಂಪರ್ಕ ಕೇಂದ್ರದ ಭ್ರಷ್ಟ ಅಧಿಕಾರಿ ಪ್ರಕಾಶ್ ಗೌಡ ಕುದರಿಮೊಟಿ ಸಹ ಮುಂಡರಗಿಯಲ್ಲಿ 2 ಮನೆ, 3 ನಿವೇಶನ, 16 ಎಕರೆ ಜಮೀನು, 570 ಗ್ರಾಂ ಚಿನ್ನ, 2 ಕೆಜಿ 290 ಗ್ರಾಂ ಬೆಳ್ಳಿ, 1 ಕಾರ್, 2 ದ್ವಿಚಕ್ರ ವಾಹನ ಪತ್ತೆಯಾಗಿದೆ.

    ಸದ್ಯಕ್ಕೆ ಈ ನಾಲ್ವರು ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ತನಿಖೆ ಇನ್ನೂ ಮುಂದುವರಿದಿದೆ.

  • ಶಾಸಕರ ಬಳಿಕ ರೆಸಾರ್ಟಿನಲ್ಲಿ ಸರ್ಕಾರಿ ಅಧಿಕಾರಿಗಳ ಮೋಜು ಮಸ್ತಿ

    ಶಾಸಕರ ಬಳಿಕ ರೆಸಾರ್ಟಿನಲ್ಲಿ ಸರ್ಕಾರಿ ಅಧಿಕಾರಿಗಳ ಮೋಜು ಮಸ್ತಿ

    – ಬರ ಸಭೆಗೆ ಬಂದ ಜಿಲ್ಲಾ ಪಂಚಾಯತ್ ಸಿಇಓಗಳ ಸಫಾರಿ

    ಮೈಸೂರು: ಇಷ್ಟು ದಿನ ಶಾಸಕರು ಮತದಾರರನ್ನು ಮರೆತು ರೆಸಾರ್ಟ್ ಸೇರಿಕೊಂಡು ಎಂಜಾಯ್ ಮಾಡಿ ಬಂದರು. ಇದೀಗ ಬರ ಸಭೆಗೆ ಬಂದಿದ್ದ ಸರ್ಕಾರಿ ಅಧಿಕಾರಿಗಳು ನಾವೇನು ಕಡಿಮೆ ಇಲ್ಲ ಎಂಬಂತೆ ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಸಫಾರಿಯಲ್ಲಿ ಬ್ಯೂಸಿಯಾಗಿದ್ದಾರೆ. ಬರ ಸಭೆ ಹೆಸರಿನಲ್ಲಿ ಮೈಸೂರಿಗೆ ಬಂದಿದ್ದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಸಿಇಓಗಳು ಈಗ ನಾಗರಹೊಳೆ ಐಷಾರಾಮಿ ರೆಸಾರ್ಟ್ ನಲ್ಲಿ ತಂಗಿ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ.

    ಹೆಚ್.ಡಿ.ಕೋಟೆ ತಾಲೂಕಿನ ಖಾರಪುರ ಸಮೀಪ ಇರುವ ಐಷಾರಾಮಿ ರೆಸಾರ್ಟ್ ನಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಗಳು ತಂಗಿದ್ದು, ಸರ್ಕಾರಿ ಸ್ವಾಮ್ಯದ ಜಂಗಲ್ ಲಾಡ್ಜ್ ರೆಸಾರ್ಟ್ ನಲ್ಲಿ ಕಾರ್ಯಾಗಾರ ನಡೆಯುತ್ತಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಅಧಿಕಾರಿಗಳು ಕಾರ್ಯಾಗಾರಕ್ಕೆ ಬಂದಿದ್ದಾರಾ ಅಥವಾ ಐಷಾರಾಮಿ ರೆಸಾರ್ಟ್‍ನಲ್ಲಿ ಉಳಿದು ಸಫಾರಿ ಮಾಡಲು ಬಂದಿದ್ದಾರಾ? ಎಂಬ ಪ್ರಶ್ನೆ ಮೂಡಿಸಿದೆ.

    ಬುಧವಾರ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿದ್ದ ಸಿಇಓಗಳು ಇಂದು ಸಹ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲೇ ಕಾರ್ಯಾಗಾರ ಮುಂದುವರಿಸಬಹುದಿತ್ತು. ಆದ್ರೆ ಐಷಾರಾಮಿ ರೆಸಾರ್ಟ್ ವಾಸ್ತವ್ಯ ಯಾಕೆ ಬೇಕಾಗಿತ್ತು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರೋಗ್ಯ ಇಲಾಖೆಯ ದೊಡ್ಡ ಹಗರಣ-ಒಂದಲ್ಲ, ಎರಡಲ್ಲ ಬರೋಬ್ಬರು 150 ಕೋಟಿ ಹಗರಣ!

    ಆರೋಗ್ಯ ಇಲಾಖೆಯ ದೊಡ್ಡ ಹಗರಣ-ಒಂದಲ್ಲ, ಎರಡಲ್ಲ ಬರೋಬ್ಬರು 150 ಕೋಟಿ ಹಗರಣ!

    ಬೆಂಗಳೂರು: ಸರ್ಕಾರಿ ಅಧಿಕಾರಿಗಳು ಹೇಗೆ ದುಡ್ಡು ಮಾಡೋದು ಹೇಗೆ ಅಂತ ತಿಳಿದುಕೊಳ್ಳಬೇಕಾ? ಹಾಗಾದ್ರೆ ಆರೋಗ್ಯ ಇಲಾಖೆ ಎಂಜಿನಿಯರ್ ಗಳನ್ನ ನೋಡಬೇಕು. ಆರೋಗ್ಯ ಕೇಂದ್ರದ ಹೆಸರಲ್ಲಿ ಕೋಟಿ ಕೋಟಿ ಹಣ ನುಂಗಿ ನೀರು ಕುಡಿದಿದ್ದಾರೆ.

    ನಮ್ಮ ಆರೋಗ್ಯ ಇಲಾಖೆಯ ಎಂಜಿನಿಯರ್ ಗಳು ಎಷ್ಟು ಬುದ್ದಿವಂತರು ಅನ್ನೋದಕ್ಕೆ ಈ ಸ್ಟೋರಿ ನೋಡಲೇಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿಯಲ್ಲಿ ಕೋಟಿ ಕೋಟಿ ಹಣ ಮಾಡಿ ದುಡ್ಡು ಮಾಡೋರಿಗೆ ಮಾದರಿಯಾಗಿದ್ದಾರೆ. ಪ್ರತಿ ತಾಲೂಕಿನಲ್ಲಿ ನಿರ್ಮಾಣವಾಗಿರೋ ಆರೋಗ್ಯ ಕೇಂದ್ರದಲ್ಲೂ ಎಂಜಿನಿಯರ್ ಗಳು ದುಡ್ಡು ಮಾಡೋ ಅಂಶ ಆರ್ ಟಿಐನಲ್ಲಿ ಬಯಲಾಗಿದೆ. ಸ್ವತಃ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ಕೇಂದ್ರ ಬೇಡ ಅಂತ ಪತ್ರ ಬರೆದಿದ್ದರು 1.20 ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ ಕಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ವಡ್ನಾಳ್ ಗ್ರಾಮದಲ್ಲಿ ಈ ರೀತಿಯ ಬಹು ದೊಡ್ಡ ಹಗರಣ ನಡೆದಿದೆ.

    ಇದು ಕೇವಲ ದಾವಣಗೆರೆ ಕಥೆ ಮಾತ್ರವಲ್ಲ. ಪ್ರತೀ ಜಿಲ್ಲೆಯಲ್ಲಿ 2-3 ಆರೋಗ್ಯ ಕೇಂದ್ರಗಳನ್ನ ಅನಾವಶ್ಯಕವಾಗಿ ಕಟ್ಟಿದ್ದಾರಂತೆ. 2017-18 ನೇ ಸಾಲಿನಲ್ಲಿ ನಿರ್ಮಾಣವಾಗಿರೋ 100-200 ಕೇಂದ್ರಗಳಲ್ಲಿ 50ಕ್ಕೂ ಹೆಚ್ಚು ಕೇಂದ್ರಗಳು ಬೋಗಸ್ ಆಗಿವೆಯಂತೆ. ಇದರಲ್ಲಿ ಸುಮಾರು 150 ಕೋಟಿ ಹಗರಣ ನಡೆದಿರುವ ಶಂಕೆ ಮೂಡಿದೆ. ಇನ್ನು ಆಶ್ಚರ್ಯ ಸಂಗತಿ ಅಂದ್ರೆ ಚುನಾವಣೆ ಸಮಯದಲ್ಲಿ ನೀತಿ ಸಂಹಿಂತೆ ಇದ್ದರು ಹಣ ಬಿಡುಗಡೆಯಾಗಿದೆ. ಅಲ್ಲದೆ 1.20 ಕೋಟಿಗೆ ಪ್ರಾರಂಭವಾಗುವ ಕಾಮಗಾರಿ ಮುಗಿಯೋಕೆ 1.60 ಕೋಟಿ ದಾಟುತ್ತಂತೆ. ವಿಚಿತ್ರ ಅಂದ್ರೆ ಕಾಮಗಾರಿ ಮುಗಿಯದೇ ಇದ್ರು ಟೆಂಡರ್‍ದಾರನಿಗೆ ಹಣ ಬಿಡುಗಡೆಯಾಗಿದೆಯಂತೆ.

    ಜನರಿಗೆ ಅನುಕೂಲವಾಗಲಿ ಅಂತ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿತ್ತು. ಆದರೆ ಅವಶ್ಯಕತೆಯೇ ಇಲ್ಲದೆ ಇರೋ ಕಡೆ ಆರೋಗ್ಯ ಕೇಂದ್ರ ಸ್ಥಾಪಿಸಿ ಇದರಲ್ಲೂ ಹಣ ಮಾಡಿದ್ದಾರೆ. ಇದು ಕೇವಲ ಒಂದು ಜಿಲ್ಲೆಯ ಸ್ಯಾಂಪಲ್. ಇಡೀ ರಾಜ್ಯದಲ್ಲಿ ಇಂತಹ ಎಷ್ಟು ಕೇಂದ್ರಗಳು ಸ್ಥಾಪನೆ ಆಗಿರಬೇಕು. ಈ ಬಗ್ಗೆ ಆರೋಗ್ಯ ಇಲಾಖೆ ಸಚಿವರು ಏನ್ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv