Tag: ಸರಣಿ ಕೊಲೆ

  • 14 ವರ್ಷ 6 ಕೊಲೆ- ಸೈನೈಡ್ ಹಂತಕಿಯ ನಿಗೂಢ ಹೆಜ್ಜೆ ಪತ್ತೆ

    14 ವರ್ಷ 6 ಕೊಲೆ- ಸೈನೈಡ್ ಹಂತಕಿಯ ನಿಗೂಢ ಹೆಜ್ಜೆ ಪತ್ತೆ

    -ಕ್ರೂರಿಯ ಸಂಚಿಗೆ ಬಲಿಯಾದ ಅಮಾಯಕರು
    -ಒಬ್ಬೊಬ್ಬರನ್ನು ಹಂತ ಹಂತವಾಗಿ ಕೊಂದಿದ್ದಳು

    ತಿರುವನಂತಪುರಂ: ಕೇರಳ ಪೊಲೀಸರು ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನದೇ ಕುಟುಂಬಸ್ಥರನ್ನು ಹಂತ ಹಂತವಾಗಿ ಕೊಲ್ಲುತ್ತಾ ಆಸ್ತಿಯನ್ನು ಅನುಭವಿಸುವ ಪ್ಲಾನ್ ಮಾಡಿದ್ದ ಹಂತಕಿ ಜೂಲಿಯ ಕನಸಿಗೆ ಪೊಲೀಸರು ತಣ್ಣೀರು ಹಾಕಿದ್ದಾರೆ. ಸುದೀರ್ಘ ತನಿಖೆಯ ಬಳಿಕ ಪ್ರಕರಣಕ್ಕೆ ಪೊಲೀಸರು ಇತಿಶ್ರೀ ಹಾಡಿ, ಕೊಲೆಯ ಸುತ್ತ ಹುಟ್ಟಿಕೊಂಡಿದ್ದ ನಿಗೂಢ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಂಡಿದ್ದಾರೆ.

    ಹಂತಕಿ ಜೂಲಿ ತನ್ನ ಕುಟುಂಬಸ್ಥರನ್ನು ಕೊಲ್ಲುವದರ ಜೊತೆಗೆ ಸಂಬಂಧಿ ಮಹಿಳೆಯನ್ನು ಕೊಂದು ಆಕೆಯ ಪತಿಯನ್ನ ಮದುವೆ ಆಗಿದ್ದಳು. ಎರಡು ಕುಟುಂಬಗಳ ಆಸ್ತಿಯನ್ನು ಅನುಭವಿಸಲು ಹಂತಕಿ ಜೂಲಿ ಮತ್ತು ಆಕೆಯ ಎರಡನೇ ಗಂಡ ಶಜು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಈ ಇಬ್ಬರಿಗೆ ಸೈನೈಡ್ ಪೂರೈಸುತ್ತಿದ್ದ ಮತ್ತಿಬ್ಬರು ಸೆರೆಮನೆ ಸೇರಿಕೊಂಡಿದ್ದಾರೆ.

    ಕೇರಳದ ಕೊಜ್ಹಿಕೊಡೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಶನಿವಾರ ಪೊಲೀಸರು ಹಂತಕಿ ಜೂಲಿಯನ್ನು ಬಂಧಿಸಿದ್ದಾರೆ. ಅಲ್ಲದೇ ಕೊಲೆ ಮಾಡಲು ಸಹಕಾರ ನೀಡಿದ್ದ ಜೂಲಿ 2ನೇ ಪತಿ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

    ಹಂತ ಹಂತವಾಗಿ ಕೊಲೆ: 2002 ರಿಂದ 2016ರ ಅವಧಿಯಲ್ಲಿ ಕ್ಯಾಥೊಲಿಕ್ ಕುಟುಂಬದ 6 ಮಂದಿಯನ್ನು ಜೂಲಿ ಕೊಲೆ ಮಾಡಿದ್ದಾಳೆ. ನಿವೃತ್ತ ಶಿಕ್ಷಕಿ ಅಣ್ಣಮ್ಮ ಥಾಮಸ್ (57) 2002ರಲ್ಲಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ವೇಳೆ ಅವರ ಸಾವನ್ನ ಸಹಜಸಾವು ಎಂದು ತಿಳಿದ ಕುಟುಂಬಸ್ಥರು ಅಂತ್ಯಕ್ರಿಯೆ ನಡೆಸಿದ್ದರು. 6 ವರ್ಷದ ಬಳಿಕ ಅಣ್ಣಮ್ಮ ಥಾಮಸ್ ಪತಿ ಟಾಮ್ ಥಾಮಸ್ (66) ಹೃದಯಘಾತದಿಂದ ಸಾವನ್ನಪ್ಪಿದ್ದರು. 2001 ರಲ್ಲಿ ದಂಪತಿಯ ಪುತ್ರ ರಾಯ್ ಥಾಮಸ್ (40) ಕೂಡ ಇದೇ ರೀತಿ ಮೃತ ಪಟ್ಟಿದ್ದರು. ಈ ವೇಳೆ ಅವರನ್ನು ವಿಷ ಉಣಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಆ ಬಳಿಕ ಅಣ್ಣಮ್ಮ ಸಹೋದರ ಮ್ಯಾಥ್ಯೂ ಮಂಜಡಿಯಿಲ್ (67) 2014 ರಲ್ಲಿ ಸಾವನ್ನಪ್ಪಿದ್ದರು. ಎಲ್ಲರನ್ನು ಒಂದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

    ಎರಡರ ಕಂದಮ್ಮ ಬಲಿ: 2016 ರಲ್ಲಿ ಇದೇ ಕುಟುಂಬದ ಸಂಬಂಧಿಯ 2 ವರ್ಷದ ಮಗಳು ಅಲ್ಫೋನ್ಸ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಇದಾದ ಕೆಲ ತಿಂಗಳ ಅಂತರದಲ್ಲೇ ಅಲ್ಫೋನ್ಸ ತಾಯಿ 27 ವರ್ಷದ ಸಿಲಿ ಕೂಡ ಸಾವನ್ನಪ್ಪಿದ್ದರು. ಇತ್ತ ಪತಿ ಮರಣದ ಬಳಿಕ ಪತ್ನಿ ಜೂಲಿ ಮೃತ ಸಿಲಿ ಪತಿಯನ್ನು ಮದುವೆಯಾಗಿ ಕುಟುಂಬ ಅಸ್ತಿ ತಮಗೆ ಸೇರಬೇಕು ಎಂದು ಕಾನೂನಿನ ಅನ್ವಯ ಮನವಿ ಸಲ್ಲಿಸಿದ್ದರು. ಆದರೆ ಟಾಮ್ ಥಾಮಸ್ ಕಿರಿಯ ಪುತ್ರನ ಮಗ ಯುಎಸ್ ಎನ್‍ಆರ್ ಐ ಆಗಿರುವ ಮೆಜೊ ಇದಕ್ಕೆ ಆಕ್ಷೇಪಣೆ ಸಲ್ಲಿಸಿ ಕುಟುಂಬ ಸರಣಿ ಸಾವಿನ ಕುರಿತು ಕ್ರೈಂ ಬ್ರಾಂಚ್‍ಗೆ ದೂರು ನೀಡಿದ್ದರು.

    ಪ್ರಕರಣದ ದಾಖಲಿಸಿ ವಿಚಾರಣೆ ಆರಂಭಿಸಿದ ಅಪರಾಧದಳ ಪೊಲೀಸರಿಗೆ ವಿಚಾರಣೆ ವೇಳೆ ಶಾಕಿಂಗ್ ಅಂಶಗಳು ತಿಳಿದು ಬಂದಿದ್ದವು. ಈ ಪ್ರಕರಣ ಕೇರಳದಲ್ಲಿ ಸಂಚಲನವನ್ನು ಉಂಟು ಮಾಡಿದೆ.

    ಪ್ರತಿ ಬಾರಿ ಕುಟುಂಬ ಸದಸ್ಯರನ್ನು ಕೊಲೆ ಮಾಡುವ ವೇಳೆ ಜೂಲಿ ಸೂಕ್ತ ಪ್ಲಾನ್ ಮಾಡಿ ಯಾರಿಗೂ ಅನುಮಾನಬಾರದಂತೆ ಕೃತ್ಯ ಎಸಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವ ಮೃತರ ವೈಜ್ಞಾನಿಕ ಪರೀಕ್ಷೆಗಳ ವರದಿಗೆ ಪೊಲೀಸರು ಕಾಯುತ್ತಿದ್ದಾರೆ. ವಿಚಾರಣೆ ವೇಳೆ ಮೃತ 6 ಮಂದಿ ಸಾವಿನ ವೇಳೆ ಜೂಲಿ ಸ್ಥಳದಲ್ಲಿ ಇರುವುದು ಖಚಿತವಾಗಿದೆ. ಈ ಪ್ರಕರಣ ತಮಗೆ ಹೆಚ್ಚು ಚಾಲೆಂಜಿಂಗ್ ಆಗಿತ್ತು ಎಂದು ಪೊಲೀಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಪ್ರಕರಣವನ್ನು ಬೇದಿಸಲು ಪೊಲೀಸರು ಜೂಲಿ ಹಾಗೂ ಆಕೆಯ 2ನೇ ಪತಿ ಶಾಜುನನ್ನು 8 ಬಾರಿ ತೀವ್ರ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದರು. ಎಂಟು ಬಾರಿ ವಿಚಾರಣೆಯಲ್ಲಿಯೂ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಅಲ್ಲದೇ ಜೂಲಿಯ ಫೋನ್ ವಿವರ ಪಡೆದ ವೇಳೆ ಆಕೆ ಶಾಜುನೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದು ತಿಳಿದು ಬಂದಿತ್ತು. ಅಂದಹಾಗೇ ಜೂಲಿ ವಾಣಿಜ್ಯ ಪದವೀಧರೆಯಾಗಿದ್ದು, ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ ಎಂದು ಹೇಳಿ ಕೆಲಸ ಪಡೆದಿದ್ದಳು.

    ಕೊಲೆಗೆ ಸೈನೈಡ್ ಬಳಕೆ: ಜೂಲಿ ತನ್ನ ಕುಟುಂಬದ 6 ಮಂದಿಯನ್ನು ಕೊಲೆ ಮಾಡಲು ನಿಧಾನವಾಗಿ ಸಾಯಿಸುವ ಸೈನೈಡನ್ನು ಬಳಕೆ ಮಾಡಿದ್ದಳು. ಮೃತ ದೇಹಗಳನ್ನು ಹೊರ ತೆಗೆದು ಪರೀಕ್ಷೆ ನಡೆಸಿದ ವೇಳೆ ಮೃತರ ದೇಹದಲ್ಲಿ ವಿಷ ಇರುವುದು ವೈಜ್ಞಾನಿಕ ಪರೀಕ್ಷೆಗಳಲ್ಲಿ ಖಚಿತವಾಗಿತ್ತು. ಜೂಲಿಗೆ ಸೈನೈಡ್ ಪೂರೈಕೆ ಮಾಡುತ್ತಿದ್ದ ಆರೋಪದ ಅಡಿ ಅಭರಣದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಜಿಕುಮಾರ್ ಹಾಗೂ ಎಂಎಸ್ ಮ್ಯಾಥ್ಯೂರನ್ನು ಬಂಧಿಸಿದ್ದಾರೆ.

  • ಶಾಕಿಂಗ್: ಕಬ್ಬಿಣದ ರಾಡ್‍ನಿಂದ 2 ಗಂಟೆಯಲ್ಲಿ 6 ಕೊಲೆ ಮಾಡ್ದ!

    ಶಾಕಿಂಗ್: ಕಬ್ಬಿಣದ ರಾಡ್‍ನಿಂದ 2 ಗಂಟೆಯಲ್ಲಿ 6 ಕೊಲೆ ಮಾಡ್ದ!

    -7ನೇ ಕೊಲೆ ಮಾಡಲು ಹೋಗಿ ಸಿಕ್ಕಿ ಬಿದ್ದ

    ಚಂಡೀಗಢ: ಹರಿಯಾಣ ರಾಜ್ಯದಲ್ಲಿ ವ್ಯಕ್ತಿಯೊಬ್ಬ ಎರಡು ಗಂಟೆಯಲ್ಲಿ ಬರೋಬ್ಬರಿ 6 ಕೊಲೆಗಳನ್ನು ಮಾಡಿರುವ ಶಾಕಿಂಗ್ ಘಟನೆಯೊಂದು ನಡೆದಿದೆ. ಇಂದು ಬೆಳಗಿನ ಜಾವ ಈ ಆರು ಕೊಲೆಗಳು ನಡೆದಿರುವುದು ವಿಶೇಷ.

    ಇಂದು ಬೆಳಗಿನ ಜಾವ 2 ರಿಂದ 4 ಗಂಟೆಯಲ್ಲಿ ಪಲ್ವಾನ್ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಕಬ್ಬಿಣದ ರಾಡ್ ಬಳಸಿ ವ್ಯಕ್ತಿಯೊಬ್ಬ 6 ಕೊಲೆಗಳನ್ನು ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಆರೋಪಿ 7ನೇ ಸಲ ಪೊಲೀಸ್ ಅಧಿಕಾರಿಯೊಬ್ಬರನ್ನು ಕೊಲೆ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.

    ಯಾರು ಆ ಹಂತಕ?: ಅಂದಾಜು 40 ರಿಂದ 45 ವಯಸ್ಸಿನ ನರೇಶ್ ಎಂಬಾತನೇ 6 ಕೊಲೆಗೈದ ಆರೋಪಿ. ನರೇಶ್ ಮಾಜಿ ಸೈನಿಕ ಎಂಬುದು ಆತನ ಬಳಿಯಿದ್ದ ಐಡಿ ಕಾರ್ಡ್ ನಿಂದ ತಿಳಿದು ಬಂದಿದೆ. ಸದ್ಯ ಆರೋಪಿ ನರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

    ನರೇಶ್ ಒಬ್ಬ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದ್ದು, ಬಂಧನದ ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನರೇಶ್ ಕೊಲೆ ಮಾಡಲು ಕಬ್ಬಿಣದ ರಾಡ್ ಬಳಸಿದ್ದು, ಪಲ್ವಾನ್ ನಗರದ ಬೀದಿಗಳಲ್ಲಿ ನಡೆಯುತ್ತಿದ್ದವರನ್ನು ಕೊಲೆ ಮಾಡುತ್ತಾ ಮುಂದೆ ಹೋಗಿದ್ದಾನೆ ಅಂತಾ ಪಲ್ವಾನ್ ನಗರ ಠಾಣೆಯ ಎಸ್‍ಪಿ ಸಲೋಚನಾ ಗಜರಾಜ್ ತಿಳಿಸಿದ್ದಾರೆ.

    ಕೊಲೆಗಳು ನಡೆದಿದ್ದು ಹೇಗೆ?: ಈ ಆರು ಕೊಲೆಗಳು ನಗರದ ಬೇರೆ ಬೇರೆ ಬೀದಿಗಳಲ್ಲಿ ನಡೆದಿವೆ. ಬೆಳಗಿನ ಜಾವ ಸುಮಾರು 2.30ಕ್ಕೆ ಪಲ್ವಾನ್ ಆಸ್ಪತ್ರೆಯಲ್ಲಿ ಅಂಜುಮ್ ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಅಂಜುಮ್ ಮೃತ ದೇಹವನ್ನು ವಾಶ್ ರೂಮಿನಲ್ಲಿ ಬಚ್ಚಿಟ್ಟು, ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಕೈ ಯಲ್ಲಿ ಕಬ್ಬಿಣದ ರಾಡ್ ಹಿಡಿದು ಹೊರ ಬಂದವನೇ ಒಟ್ಟು 4 ಕೊಲೆಗಳನ್ನು ಮಾಡಿದ್ದಾನೆ. ಪಲ್ವಾನ್ ನಗರದ ಆಗ್ರಾ ರೋಡ್ ಮತ್ತು ಮಿನಾರ್ ಗೇಟ್ ಬೀದಿಯಲ್ಲಿ ನಾಲ್ಕು ಜನರನ್ನು ಕೊಂದಿದ್ದಾನೆ. ನಗರದ ಮಾರುಕಟ್ಟೆ ಬಳಿಕ ಎಂಜಿನಿಯರಿಂಗ್ ವರ್ಕ್ ಶಾಪ್ ನ ವಾಚ್ ಮ್ಯಾನ್ ಕೊನೆಯದಾಗಿ ಕೊಲೆಯಾಗಿದ್ದಾನೆ.

    6 ಕೊಲೆ ಮಾಡಿ ಆದರ್ಶ ಕಾಲೋನಿಯಲ್ಲಿ ಹೋಗುತ್ತಿದ್ದ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಎದುರಾಗಿದ್ದು, ಅವರನ್ನು ಕೊಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ತಮ್ಮ ಚಾಣಾಕ್ಷತೆಯಿಂದ ನರೇಶ್‍ನನ್ನು ಬಂಧಿಸಿದ್ದಾರೆ.

    ನರೇಶ್‍ನನ್ನು ಬಂಧಿಸಿದ ನಂತರ ಆತನನ್ನು ಪಲ್ವಾನ್ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೆ ವೈದ್ಯರ ಸಲಹೆ ಮೇರೆಗೆ ಫರೀದಾಬಾದ್ ನ ಆಸ್ಪತ್ರೆಗೆ ನರೇಶ್ ನನ್ನು ರವಾನಿಸಲಾಗಿದೆ.

    https://www.youtube.com/watch?v=xE_HlevalBQ