Tag: ಸಮಾಜ ಸೇವಕ

  • 5 ದಿನಗಳಿಂದ ರಸ್ತೆ ಬದಿಯಲ್ಲಿ ಅನಾಥವಾಗಿದ್ದ ಮಹಿಳೆಯ ರಕ್ಷಣೆ

    5 ದಿನಗಳಿಂದ ರಸ್ತೆ ಬದಿಯಲ್ಲಿ ಅನಾಥವಾಗಿದ್ದ ಮಹಿಳೆಯ ರಕ್ಷಣೆ

    ಚಿಕ್ಕೋಡಿ: ರಸ್ತೆ ಬದಿಯಲ್ಲಿ ಅನಾಥವಾಗಿ ಐದು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂತ್ರಸ್ತ ಮಹಿಳೆಯೋರ್ವಳನ್ನ ಸಮಾಜ ಸೇವಕರೊಬ್ಬರು ಚಿಕಿತ್ಸೆ ಕೊಡಿಸಿದ್ದಾರೆ.

    ಈ ಘಟನೆ ಬೆಳಗಾವಿ ಜಿಲ್ಲೆಯೆ ಹುಕ್ಕೇರಿ ತಾಲೂಕಿನ ಕಮತನೂರ ಗ್ರಾಮದಲ್ಲಿ ನಡೆದಿದ್ದು, ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಐದು ದಿನಗಳಿಂದ ಈ ಮಹಿಳೆ ಎಲ್ಲಿಯೂ ಹೋಗದೆ ಅನ್ನ ನೀರಿಗಾಗಿ ಪರದಾಡುವುದನ್ನು ಕಂಡು, ಬೋರಗಲ್ಲ ಗ್ರಾಮದ ಮಹಾಂತೇಶ ಚೌಗಲಾ ಎಂಬವರು ಸ್ಥಳೀಯರ ಸಹಾಯದಿಂದ ಸಮೀಪದ ಸಂಕೇಶ್ವರ ಸರಕಾರಿ ಆಸ್ಪತ್ರೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಿ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಗಳಿಗೆ ಮಾಹಿತಿ ನೀಡಿದ್ದಾರೆ.

    ಸದ್ಯ ಸಂತ್ರಸ್ತೆಯನ್ನು ಹುಕ್ಕೇರಿ ತಾಲೂಕಿನ ಹಿಡಕಲ್ಲ ಡ್ಯಾಂ ದಲ್ಲಿರುವ ಮಹಿಳಾ ಸ್ವಾಂತನ ಕೇಂದ್ರಕ್ಕೆ ಸೇರಿಸಲಾಗಿದೆ.

  • ಶಾಲೆ ನಿರ್ಮಾಣಕ್ಕೆ ತನ್ನ ಜಮೀನನ್ನೇ ಸರ್ಕಾರಕ್ಕೆ ದಾನ ಮಾಡಿದ ಹೀರೋ

    ಶಾಲೆ ನಿರ್ಮಾಣಕ್ಕೆ ತನ್ನ ಜಮೀನನ್ನೇ ಸರ್ಕಾರಕ್ಕೆ ದಾನ ಮಾಡಿದ ಹೀರೋ

    ಗದಗ: ಈಗಿನ ಕಾಲದಲ್ಲಿ ಒಂದಂಗುಲ ಜಾಗಕ್ಕಾಗಿ ಹೊಡೆದಾಡಿ ಕೋರ್ಟ್ ಮೆಟ್ಟಿಲು ಹತ್ತಿರುವ ಜನರನ್ನು ಪ್ರತಿದಿನ ಕಾಣುತ್ತಿರ. ಆದರೆ ನಾವು ಇಂದು ನಿಮಗೆ ಹೇಳುತ್ತಿರುವ ಸ್ಟೋರಿ ವಿಭಿನ್ನವಾಗಿದೆ.

    ತನ್ನ ಊರಿನಲ್ಲಿ ಶಾಲೆಯನ್ನು ನಿರ್ಮಾಣ ಮಾಡಲು ಎಲ್‍ಐಸಿ ಏಜೆಂಟ್‍ವೊಬ್ಬರು ತಮ್ಮ 3 ಎರಕೆ ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಿದ್ದಾರೆ. ಅಂದಹಾಗೇ ಈ ಸಮಾಜ ಸೇವಕರ ಹೆಸರು ಆನಂದ ಕೃಷ್ಣಾ ಜಿ ಕುಲಕರ್ಣಿ. ಗದಗ ಜಿಲ್ಲೆಯ ರೋಣ ತಾಲೂಕಿನ ನರೇಗಲ್ ನಿವಾಸಿಯಾದ ಇವರು ಪರಿಸರ ಪ್ರೇಮಿ, ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕ. ಕೃಷಿ ಜೊತೆ ಎಲ್‍ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

    ಸರ್ಕಾರ 2006ರಲ್ಲಿ ನರೇಗಲ್ ಪಟ್ಟಣಕ್ಕೆ ಸರ್ಕಾರಿ ಹೈಸ್ಕೂಲ್ ಮಂಜೂರು ಮಾಡಿತ್ತು. ಆದರೆ ಕಟ್ಟಡ ಕಟ್ಟೋಕೆ ಯಾರೂ ಜಾಗ ಕೊಡಲಿಲ್ಲ. ಇಂತಹ ಸಮಯದಲ್ಲಿ ನಮ್ಮ ಹೀರೋ ಆನಂದ ಕುಲಕರ್ಣಿ, ತಮ್ಮ ಕೋಟ್ಯಂತರ ರೂಪಾಯಿ ಬೆಲೆಬಾಳುವ 3 ಎಕರೆ 5 ಗುಂಟೆ ಜಮೀನನ್ನೇ ಬಿಟ್ಟು ಕೊಟ್ಟಿದ್ದಾರೆ. ಪತಿಯ ಎಲ್ಲಾ ಕೆಲಸಕ್ಕೆ ಪತ್ನಿ ಅರ್ಚನಾ ಸಾಥ್ ನೀಡ್ತಿದ್ದಾರೆ.

    ಪ್ರಸ್ತುತ ಅನೇಕ ಬಡ ಮಕ್ಕಳ ಶಿಕ್ಷಣ, ಊಟ, ವಸತಿ ಜವಾಬ್ದಾರಿಯನ್ನ ಇವರೇ ನೋಡಿಕೊಳ್ಳುತ್ತಿದ್ದಾರೆ. ಪತ್ನಿ ಅರ್ಚನಾ ಎಂ.ಕಾಮ್ ಓದಿದ್ದು, ಮನೆಯಲ್ಲೇ ಉಚಿತವಾಗಿ ಬಡ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದಾರೆ.

    ಅಷ್ಟೇ ಅಲ್ಲದೆ ಪರಿಸರ ಪ್ರೇಮಿಯಾಗಿರುವ ಆನಂದ್ ಶಾಲಾ-ಕಾಲೇಜು ಆವರಣ, ದೇವಸ್ಥಾನದ ಬಯಲು, ಪಾಳುಬಿದ್ದ ಸರ್ಕಾರಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಪೋಷಣೆ ಮಾಡಿತ್ತಿದ್ದಾರೆ. ಇದುವರೆಗೂ ಸುಮಾರು 5 ಸಾವಿರಕ್ಕೂ ಅಧಿಕ ಮರಗಳನ್ನು ನೆಟ್ಟು ಪೋಷಣೆ ಮಾಡಿದ್ದು, ಅದರಲ್ಲಿ ಬೇವು, ನೆರಳೆ, ಹತ್ತಿ, ಅರಳಿ, ಬನ್ನಿ ಮರಳನ್ನು ಹೆಚ್ಚು ನಾಟಿ ಮಾಡಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಜನಸೇವೆ ಮಾಡುತ್ತಿರುವ ಆನಂದ್ ದಂಪತಿಗೆ ಶುಭ ಹಾರೈಕೆ.