Tag: ಸಮಾಜವಾದಿ

  • ಅಯೋಧ್ಯೆ ರಾಮಮಂದಿರ ನಿಷ್ಪ್ರಯೋಜಕ- SP ನಾಯಕ ವಿವಾದಾತ್ಮಕ ಹೇಳಿಕೆ

    ಅಯೋಧ್ಯೆ ರಾಮಮಂದಿರ ನಿಷ್ಪ್ರಯೋಜಕ- SP ನಾಯಕ ವಿವಾದಾತ್ಮಕ ಹೇಳಿಕೆ

    ಲಕ್ನೋ: ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ (Ram Gopal Yadav) ಅವರು ಮಂಗಳವಾರ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದ (Ayodhya Ram Mandir) ಬಗ್ಗೆ ಪ್ರತಿಕ್ರಿಯಿಸಿ ಭಾರೀ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ನಮ್ಮ ದೇಶದಲ್ಲಿ ದೇವಸ್ಥಾನಗಳನ್ನು ಈ ರೀತಿ ನಿರ್ಮಿಸಿಲ್ಲ ಎಂದಿರುವ ಸಮಾಜವಾದಿ ಪಕ್ಷದ (Samajawadi Party) ಮುಖಂಡರು, ರಾಮ ​​ಮಂದಿರವನ್ನು ವಾಸ್ತು ಪ್ರಕಾರ ನಿರ್ಮಿಸಿಲ್ಲ. ನಾನು ಪ್ರತಿದಿನ ರಾಮನನ್ನು ಆರಾಧಿಸುತ್ತೇನೆ. ಕೆಲವರು ರಾಮನವಮಿಯಂದು ಪೇಟೆಂಟ್ ಮಾಡಿದ್ದಾರೆ. ಆದರೆ ಅಯೋಧ್ಯೆಯಲ್ಲಿರುವ ಆ ದೇವಾಲಯವು ನಿಷ್ಪ್ರಯೋಜಕ ಆಗಿದೆ ಎಂದು ಹೇಳಿದ್ದಾರೆ.

    ರಾಮ್ ಗೋಪಾಲ್ ಯಾದವ್ ಹೇಳಿಕೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತ ಬ್ಯಾಂಕ್ ರಾಜಕೀಯಕ್ಕಾಗಿ ಜನರ ನಂಬಿಕೆಯೊಂದಿಗೆ ಆಟವಾಡುತ್ತಿದ್ದಾರೆ. ಅವರು ಯಾವಾಗಲೂ ರಾಮ ಮಂದಿರವನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

    ಇಂಡಿಯಾ ಬ್ಲಾಕ್ ಎಸ್ಪಿ ನಾಯಕ ರಾಮ್ ಗೋಪಾಲ್ ಯಾದವ್ ಅವರು ರಾಮಮಂದಿರದ ಬಗ್ಗೆ ಆಘಾತಕಾರಿ ಮತ್ತು ಅತ್ಯಂತ ಅವಮಾನಕರ ಕಾಮೆಂಟ್ ಮಾಡಿದ್ದಾರೆ. ಸಮಾಜವಾದಿ ಪಕ್ಷವು ರಾಮಭಕ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಇಂತಹ ಹೇಳಿಕೆಗಳಿಂದ ಇಂಡಿಯಾ ಒಕ್ಕೂಟ ಸನಾತನ ಧರ್ಮದ ನಿರ್ಮೂಲನೆಗೆ ಶ್ರಮಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕಿಡಿಕಾರಿದ್ದಾರೆ.

  • ಸತತ 5ನೇ ಬಾರಿ ರಾಜ್ಯಸಭೆಗೆ ಜಯಾ ಬಚ್ಚನ್: ಆಸ್ತಿ ಮೌಲ್ಯ 1589 ಕೋಟಿ ರೂ.

    ಸತತ 5ನೇ ಬಾರಿ ರಾಜ್ಯಸಭೆಗೆ ಜಯಾ ಬಚ್ಚನ್: ಆಸ್ತಿ ಮೌಲ್ಯ 1589 ಕೋಟಿ ರೂ.

    ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಪತ್ನಿ, ನಟಿ ಜಯಾ ಬಚ್ಚನ್ (Jaya Bachchan)  ಸತತ 5ನೇ ಬಾರಿ ಸಮಾಜವಾದಿ ಪಕ್ಷದಿಂದ ರಾಜ್ಯ ಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಚುನಾವಣಾ ಆಯೋಗಕ್ಕೆ ತಮ್ಮ ಒಟ್ಟು ಆಸ್ತಿಯನ್ನು ಘೋಷಣೆ ಮಾಡಿದ್ದು, ಅವರ ಕುಟುಂಬದ ಒಟ್ಟು ಆಸ್ತಿ (Property) 1589 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿದ್ದಾರೆ.

    ಜಯಾ ಬಚ್ಚನ್ ಸಿನಿಮಾ ರಂಗದಲ್ಲಿ ಸಕ್ರೀಯರಾಗಿಲ್ಲವಾದರೂ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2004 ರಿಂದ ಅವರು ಸಮಾಜವಾದಿ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಅಂದಿನಿಂದಲೇ ಸತತವಾಗಿ ರಾಜ್ಯಸಭಾ ಸದಸ್ಯೆಯಾಗಿಯೂ ಆಯ್ಕೆಯಾಗಿದ್ದಾರೆ. ಹೀಗಾಗಿ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಒಟ್ಟು ಆಸ್ತಿಯನ್ನು ಘೋಷಿಸೋದು ಕಡ್ಡಾಯ ಕೂಡ ಆಗಿದೆ.

    ಹಾಗಂತ ಅಷ್ಟೂ ಆಸ್ತಿಯೂ ಜಯಾ ಬಚ್ಚನ್ ಅವರಿಗೆ ಸೇರಿದ್ದಲ್ಲ. ಜಯಾ ಬಚ್ಚನ್ ಮತ್ತು ಪತಿ ಅಮಿತಾಭ್ ಬಚ್ಚನ್ ಸೇರಿದಂತೆ ದಂಪತಿಯ ಒಟ್ಟು ಆಸ್ತಿ 1589 ಕೋಟಿ ರೂಪಾಯಿ ಇದೆ. ಇದರಲ್ಲಿ ಅಮಿತಾಭ್ ಬಚ್ಚನ್ ಆಸ್ತಿ 273, 74,96, 590 ಕೋಟಿ ರೂಪಾಯಿ ಆಗಿದ್ದರೆ, ಜಯಾ ಬಚ್ಚನ್ ಅವರದ್ದು 1, 63, 56,190 ಕೋಟಿ ರೂಪಾಯಿ ಆಗಿದೆ.

    ಇದರಲ್ಲಿ ಚರಾಸ್ತಿ 849.11 ಕೋಟಿ ರೂಪಾಯಿ ಮೌಲ್ಯದ್ದು ಆಗಿದ್ದರೆ, ಚರಾಸ್ತಿಯಲ್ಲಿ 40.97 ಕೋಟಿ ರೂಪಾಯಿ ಜಯಾ ಬಚ್ಚನ್ ಅವರಿಗೆ ಸೇರಿದೆ. ಸ್ಥಿರಾಸ್ತಿ ಒಟ್ಟು ಮೌಲ್ಯ 729.77 ಕೋಟಿ ರೂಪಾಯಿ. ಜಯಾ ಅವರ ಬಳಿ 9.82 ಲಕ್ಷ ರೂಪಾಯಿ ಮೌಲ್ಯದ ಕಾರು ಇದ್ದರೆ, 4.97 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಾರ ಹೊಂದಿದ್ದಾರೆ. ಅಮಿತಾಭ್ ಬಳಿ 16 ಕಾರುಗಳಿದ್ದು, 54.77 ಕೋಟಿ ರೂಪಾಯಿ ಮೌಲ್ಯದ ಬಂಗಾರ ಹೊಂದಿದ್ದಾರೆ. ಅಮಿತಾಭ್ ಬಳಿ ಇರುವ ಕಾರಿನ ಬೆಲೆಯೇ 17.66 ಕೋಟಿ ರೂಪಾಯಿದ್ದು ಆಗಿದೆ.

    ಜಯಾ ಬಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 10,11,33,172 ಕೋಟಿ ರೂಪಾಯಿ ಹೊಂದಿದ್ದರೆ, ಅಮಿತಾಭ್ ಬಚ್ಚನ್ ಅವರ ಬ್ಯಾಂಕ್ ಬ್ಯಾಲೆನ್ಸ್ 120,45,62,083 ಹೊಂದಿದ್ದಾರೆ. ಈ ದಂಪತಿಯು ಬಾಡಿಗೆ, ವೇತನ, ವಿವಿಧ ಕಂಪೆನಿಗಳಲ್ಲಿನ ಹೂಡಿಕೆ, ನಿರ್ಮಾಣ ಸಂಸ್ಥೆ ಹೀಗೆ ನಾನಾ ಮೂಲಗಳಿಂದ ಬಂದಿರುವ ಆದಾಯದ ಒಟ್ಟು ಮೊತ್ತವಾಗಿದೆ.

  • EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    ಲಕ್ನೋ: ಉತ್ತರಪ್ರದೇಶದ ವಾರಣಾಸಿಯಲ್ಲಿ ಇವಿಎಂನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಅಖಿಲೇಶ್ ಯಾದವ್ ಅವರ ಆರೋಪದ ನಂತರ ಅಧಿಕಾರಿಯೊಬ್ಬರು ಲೋಪ ಮಾಡಿರುವುದಾಗಿ ಒಪ್ಪಿಕೊಂಡಿರುವ ವೀಡಿಯೋವೊಂದನ್ನು ಅವರ ಸಮಾಜವಾದಿ ಪಕ್ಷದ ನಾಯಕರು ಟ್ವೀಟ್ ಮಾಡಿದ್ದಾರೆ.

    ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಮಾತನಾಡಿ, ನೀವು ಇವಿಎಂಗಳ ಚಲನೆಯ ಪ್ರೋಟೋಕಾಲ್ ಬಗ್ಗೆ ಮಾತನಾಡಿದರೆ, ಪ್ರೋಟೋಕಾಲ್‍ನಲ್ಲಿ ಲೋಪವಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಮತದಾನದಲ್ಲಿ ಬಳಸುವ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

    ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿ ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದರು. ರಾಜಕೀಯ ಪಕ್ಷದ ಕಾರ್ಯಕರ್ತರು ಕಣ್ಣಿಡಲು ಕೇಂದ್ರಗಳ ಹೊರಗೆ ಕುಳಿತುಕೊಳ್ಳಬಹುದು ಎಂದರು. ಇದನ್ನೂ ಓದಿ: ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಈ ಬಗ್ಗೆ ಸಮಾಜವಾದಿ ಪಕ್ಷವು ಟ್ವಿಟ್ಟರ್‌ನಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದು, ಪ್ರೋಟೋಕಾಲ್ ಅನ್ನು ಅನುಸರಿಸಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

    ವಿವಿಧ ಜಿಲ್ಲೆಗಳ ಇವಿಎಂಗಳಲ್ಲಿ ಉಲ್ಲಂಘನೆಯ ಮಾಹಿತಿ ಇದೆ. ಯಾರ ಆದೇಶದ ಮೇರೆಗೆ ಇದು ನಡೆಯುತ್ತಿದೆ?, ಅಧಿಕಾರಿಗಳು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಒತ್ತಡಕ್ಕೆ ಒಳಗಾಗಿದ್ದಾರೆಯೇ? ಇವೆಲ್ಲವನ್ನು ಚುನಾವಣಾ ಆಯೋಗವು ಸ್ಪಷ್ಟಪಡಿಸಬೇಕು ಎಂದು ಸಮಾಜವಾದಿ ಪಕ್ಷ ಒತ್ತಾಯಿಸಿದೆ.

    ನಿನ್ನೆ ಮತ ಎಣಿಕೆ ಕೇಂದ್ರದಿಂದ ಇವಿಎಂ ತೆಗೆದುಕೊಂಡು ಹೋಗಿರುವ ಸಂಬಂಧ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ವಾರಣಾಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.

  • ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಲಕ್ನೋ: ಯಾರೇ ಆದರೂ ಹಿಜಬ್ ಮುಟ್ಟಲು ಬಂದರೆ ಅವರ ಕೈಯನ್ನು ಕತ್ತರಿಸುವುದಾಗಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಖಾನಮ್ ಎಚ್ಚರಿಸಿದರು.

    ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಬ್ ಧರಿಸಲು ನಿರಾಕರಿಸಿರುವುದನ್ನು ವಿರೋಧಿಸಿದ ಅವರು, ಹೆಣ್ಣುಮಕ್ಕಳ ಘನತೆಯೊಂದಿಗೆ ಆಟ ಆಡಲು ಬಂದರೆ ಅವರು ಝಾನ್ಸಿ ರಾಣಿ, ರಜಿಯಾ ಸುಲ್ತಾನ್‍ರಂತೆ ಹಿಜಬ್ ಮುಟ್ಟಲು ಬಂದ ಕೈಗಳನ್ನು ಕತ್ತರಿಸಲಾಗುವುದು. ಯಾವುದೇ ಸರ್ಕಾರ ಅಧಿಕಾರದಲ್ಲಿ ಇರಲಿ ಮಹಿಳೆಯರನ್ನು ದುರ್ಬಲರು ಎಂದು ಭಾವಿಸಬಾರದು ಎಂದರು.

    ಭಾರತವು ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಇಲ್ಲಿ ಒಬ್ಬ ವ್ಯಕ್ತಿಯು ಹಣೆಯ ಮೇಲೆ ತಿಲಕವನ್ನು ಹೊಂದಿದ್ದಾನೆಯೇ ಅಥವಾ ಟೋಪಿ ಧರಿಸಿದ್ದಾರೆಯೇ ಅಥವಾ ಹಿಜಬ್ ಧರಿಸಿದ್ದಾರೆಯೆ ಎನ್ನುವುದು ಮುಖ್ಯವಲ್ಲ. ಎಲ್ಲಾ ಧರ್ಮದವರ ಸಂಪ್ರದಾಯವನ್ನು ಗೌರವಿಸಬೇಕು ಎಂದ ಅವರು, ಘುಂಘಾಟ್ ಮತ್ತು ಹಿಜಬ್ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗಗಳು. ಈ ವಿಷಯಗಳಲ್ಲಿ ರಾಜಕೀಯ ಮಾಡುವ ಮೂಲಕ ವಿವಾದ ಸೃಷ್ಟಿಸುವುದು ಭಯಾನಕವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್‌ ಕುರಿತು ಯೋಗಿ ಪ್ರತಿಕ್ರಿಯೆ

     

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 7ಹಂತದಲ್ಲಿ ನಡೆಯಲಿದ್ದು, ಮಾರ್ಚ್ 7ರಂದು ಮುಕ್ತಾಯಗೊಳ್ಳಲಿದೆ. ಮಾರ್ಚ್ 10ರಂದು ಮತಗಳ ಎಣಿಕೆ ನಡೆಯಲಿದೆ. ಈಗಾಗಲೇ ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಪ್ರಬಲ ಪೈಪೋಟಿಯಲ್ಲಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಅನೇಕ ರಾಜಕೀಯ ನಾಯಕರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ

  • ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಲಕ್ನೋ: ತಾಪಮಾನ ಕಡಿಮೆ ಆಗುವುದರ ಬಗ್ಗೆ ಖಚಿತವಿಲ್ಲ. ಆದರೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಉದ್ಯೋಗ ನೇಮಕಾತಿಯಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟಾಂಗ್ ನೀಡಿದರು.

    ಇತ್ತೀಚೆಗೆ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಕೈರಾನಾದ ತಮಂಚವಾಡಿ ಪಕ್ಷದ ಅಭ್ಯರ್ಥಿ ಬೆದರಿಕೆ ಹಾಕಿದ್ದಾರೆ ಎಂದರೆ ಇನ್ನೂ ಬಿಸಿ ತಣ್ಣಗಿಲ್ಲ ಎಂದರ್ಥ. ಇದು ಮಾರ್ಚ್ 10ರ ನಂತರ ತಣ್ಣಗಾಗಲಿದೆ ಎಂದಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ರೈತರ ಮತ್ತು ಬಡವರ ಕಷ್ಟವನ್ನು ಅರ್ಥಮಾಡಿಕೊಳ್ಳದ ಸರ್ಕಾರ ರಚನೆಯಾದರೆ ಉಳಿದ ಪಕ್ಷಗಳಿಗೆ ಅವರ ಸ್ಥಾನವನ್ನು ತೋರಿಸುತ್ತೇವೆ ಎನ್ನುತ್ತಾರೆ. ಆದರೆ ತಾಪಮಾನ ಕಡಿಮೆ ಆಗುತ್ತದೆಯೋ ಇಲ್ಲವೋ ಎನ್ನುವುದರ ಕುರಿತು ಖಚಿತವಿಲ್ಲ, ಆದರೆ ನಮ್ಮ ಸರ್ಕಾರ ರಚನೆಯಾದರೆ, ಉದ್ಯೋಗ ನೇಮಕಾತಿ ನಡೆಯಲಿದೆ ಎಂದು ಭರವಸೆ ನೀಡಿದರು.

    ಕೇಂದ್ರದ ಉಡಾನ್ ಯೋಜನೆಯನ್ನು ಟೀಕಿಸಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ತುಂಬಾ ದುಬಾರಿಯಾಗಿದೆ, ಯುವಕರು ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    Akhilesh Yadav

    ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ ಇದಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷಗಳು ಕಳೆದಿವೆ. ಆದರೆ ಏನು ಅಭಿವೃದ್ಧಿಯಾಗಿಲ್ಲ. ಹವಾಯಿ ಚಪ್ಪಲಿ ಹಾಕಿಕೊಂಡವರು, ಏರೋಪ್ಲೇನ್‍ನಲ್ಲಿ ಕೂರುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಯಾವಾಗಿನಿಂದ ಡೀಸೆಲ್, ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿದೆಯೋ ಅಂದಿನಿಂದ ಬಡವರ ಟ್ರ್ಯಾಕ್ಟರ್, ಯುವಕರ ದ್ವಿಚಕ್ರವಾಹನ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

  • ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಸ್ಪರ್ಧಿಸಲ್ಲ: ಬಿಎಸ್‍ಪಿ ಸಂಸದ

    ವಿಧಾನಸಭಾ ಚುನಾವಣೆಯಲ್ಲಿ ಮಾಯಾವತಿ ಸ್ಪರ್ಧಿಸಲ್ಲ: ಬಿಎಸ್‍ಪಿ ಸಂಸದ

    ಲಕ್ನೋ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸ್ಪರ್ಧಿಸುವುದಿಲ್ಲ ಎಂದು ಬಿಎಸ್‍ಪಿ ಸಂಸದ ಸತೀಶ್ ಚಂದ್ರ ಮಿಶ್ರಾ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ನಾನು ಮತ್ತು ಮಾಯಾವತಿ ಇಬ್ಬರು ಸ್ಪರ್ಧಿಸುವುದಿಲ್ಲ. ಮಾಯವತಿ ಈ ಹಿಂದೆಯೂ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ ಎಂದು ಹೇಳಿದರು.

    ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳು ಸೋಲನ್ನು ಅನುಭವಿಸಲಿದೆ. ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ಪಕ್ಷವೇ ಅಧಿಕಾರದ ಗದ್ದುಗೆಯನ್ನು ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇತ್ತೀಚೆಗಷ್ಟೇ ಚುನಾವಣಾ ಆಯೋಗ ಪಂಚರಾಜ್ಯಗಳ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

    2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 403 ಸ್ಥಾನಗಳಲ್ಲಿ 312 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಹಿಡಿದಿತ್ತು. ಬಹುಜನ ಸಮಾಜವಾದಿ ಪಕ್ಷ (ಬಿಎಸ್‍ಪಿ) 19 ಸ್ಥಾನವನ್ನು ಗೆದ್ದಿತ್ತು. ಎಸ್‍ಪಿ 47 ಸ್ಥಾನಗಳನ್ನು ಹಾಗೂ ಕಾಂಗ್ರೆಸ್ ಏಳು ಸ್ಥಾನಗಳನ್ನು ಪಡೆದಿತ್ತು. ಇದನ್ನೂ ಓದಿ:  ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ