Tag: ಸಮಸ್ಯೆ

  • ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಾಟ ಮಂತ್ರ ಪತ್ತೆ ಮಾಡಿದ ಬಸವ

    ಮಂಡ್ಯ: ತಮ್ಮ ಮನೆಯ ಆವರಣದಲ್ಲಿ ಮಾಡಲಾಗಿದೆ ಎನ್ನಲಾದ ಮಾಟ ಮಂತ್ರದ ನಿವಾರಣೆಗಾಗಿ ರೈತ ಕುಟುಂಬವೊಂದು ಬಸಪ್ಪನ ಮೊರೆ ಹೋಗಿರುವ ಘಟನೆ ಜಿಲ್ಲೆ ನಾಗಮಂಗಲ ತಾಲೂಕಿನ ಚಿಕ್ಕವೀರನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಹೊನ್ನಲಗೇಗೌಡ ಎಂಬವರೇ ತಮ್ಮ ಮನೆಯಲ್ಲಿನ ಸಮಸ್ಯೆ ಪರಿಹಾರಕ್ಕಾಗಿ ಬಸವನ ಮೊರೆ ಹೋಗಿದ್ದರು. ರೈತ ಮನೆಯವರಿಗೆ ಯಾರೋ ಮಾಟ ಮಾಡಿಸಿದ್ದಾರೆ. ಅದನ್ನ ಮನೆಯ ಆವರಣದಲ್ಲಿ ಎಲ್ಲೋ ಒಂದು ಕಡೆ ಹೂತು ಹಾಕಿದ್ದಾರೆ ಎಂಬ ಬಗೆಗೆ ಅನುಮಾನಗೊಂಡಿದ್ದನು. ಈ ರೀತಿಯ ಮಾಟ ಮಂತ್ರಗಳನ್ನ ಗುರುತಿಸಿ ನಿವಾರಿಸುವುದರಲ್ಲಿ ಹೆಸರುವಾಸಿಯಾಗಿರುವ ರಾಮನಗರ ಜಿಲ್ಲೆಯ ಜಯಪುರ ಗ್ರಾಮದ ಶ್ರೀ ತಾಯಿ ಚಾಮುಂಡೇಶ್ವರಿ ದೇವಿಯ ಬಸವನನ್ನು ಊರಿಗೆ ಕರೆಸಿದ್ದಾರೆ.


    ಊರಿಗೆ ಬಂದ ಬಸಪ್ಪನಿಗೆ ಭಕ್ತಿ ಪೂರ್ವಕವಾಗಿ ಪೂಜೆ ಸಲ್ಲಿಸಿದ ನಂತರ ಬಸಪ್ಪ ಹೊನ್ನಲಗೇಗೌಡರ ಮನೆಯ ಮುಂದೆ ಎರಡು ಕಡೆ ಹೂತಿಟ್ಟಿದ್ದ ಎರಡು ಮಾಟದ ವಸ್ತುಗಳನ್ನು ಪತ್ತೆ ಹಚ್ಚಿದೆ. ಮಾಟ ಮಾಡಿ ಹೂತಿಟ್ಟಿದ್ದ ಸ್ಥಳವನ್ನ ತನ್ನ ಪಾದದ ಮೂಲಕ ತೋರಿಸಿಕೊಟ್ಟಿದೆ. ನಂತರ ಅಲ್ಲಿ ಗುಂಡಿ ತೆಗೆಸಿ ನೋಡಿದಾಗ ಮಾಟ ಮಾಡಿ ಹೂತಿಟ್ಟಿರುವುದು ಬೆಳಕಿಗೆ ಬಂದಿದೆ.

  • ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ನಾವು ನಿಮ್ಮ ಸಿನಿಮಾ ನೋಡ್ತೀವಿ, ನಮ್ಮ ಸಮಸ್ಯೆಗೂ ಸ್ಪಂದಿಸಿ – ಬೆಳಗಾವಿ ಜನತೆ

    ಬೆಳಗಾವಿ: ನಾವು ನಿಮ್ಮ ಸಿನಿಮಾ ನೋಡ್ತೀವಿ ನಮ್ಮ ಸಮಸ್ಯೆಗೂ ಸ್ಪಂದಿಸಿ ಎಂದು ಬೆಳಗಾವಿಯ ಪ್ರವಾಹ ಪೀಡಿತ ಜನರು ಕನ್ನಡ ಸಿನಿಮಾ ಕಲಾವಿದರಲ್ಲಿ ಮನವಿ ಮಾಡಿದ್ದಾರೆ.

    ಚಿತ್ರರಂಗದವರು ದಕ್ಷಿಣ ಕರ್ನಾಟಕದಲ್ಲಿ ಸಮಸ್ಯೆ ಆದಾಗ ಎಲ್ಲರೂ ನೆರವಾಗುತ್ತಾರೆ. ಕಾವೇರಿ ನೀರು ಸಂಬಂಧ ಎಲರೂ ಹೋರಾಡುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಏನೇ ಸಮಸ್ಯೆ ಆದರೂ ಬರುವುದಿಲ್ಲ. ನಮ್ಮ ನದಿ ನೀರು ಸಂಬಂಧ ಯಾರು ಹೋರಾಟ ಮಾಡುವುದಿಲ್ಲ ಎಂದು ಹುಕ್ಕೇರಿ ತಾಲೂಕಿನ ಚಿಕಲಗುಡ ಗ್ರಾಮಸ್ಥರು ಕೂಡಲೇ ಬಂದು ಸಮಸ್ಯೆಗೆ ಸ್ಪಂದಿಸುವಂತೆ ಸಿನಿಮಾ ಮಂದಿಗೆ ಆಹ್ವಾನ ನೀಡಿದ್ದಾರೆ.

    ನಮ್ಮ ಉತ್ತರ ಕರ್ನಾಟಕದಲ್ಲಿ ಸುದೀಪ್, ದರ್ಶನ್, ಯಶ್ ಮತ್ತು ಧ್ರುವ ಸರ್ಜಾಗೆ ಬಹಳ ಮಂದಿ ಅಭಿಮಾನಿಗಳಿದ್ದಾರೆ. ನಾವು ಅವರ ಎಲ್ಲಾ ಸಿನಿಮಾಗಳನ್ನು ನೋಡುತ್ತೇವೆ. ನಮಗೆ ಈ ರೀತಿಯ ಪರಿಸ್ಥಿತಿ ಬಂದಾಗ ಅವರು ಈ ಕಡೆ ಬರಬೇಕು ನಮ್ಮ ರಕ್ಷಣೆಗೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಅವರ ಯಶೋಮಾರ್ಗದ ಕೇವಲ ಕೊಪ್ಪಳ ಮಾತ್ರ ಸೀಮಿತ ಅಲ್ಲ. ಉತ್ತರ ಕರ್ನಾಟಕದ ಕಡೆಗೂ ಬನ್ನಿ ಎಂದು ಹೇಳಿದ್ದಾರೆ.

    ಇದೇ ವೇಳೆ ಸ್ಥಳೀಯ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಗ್ರಾಮಸ್ಥರು, ರೆಸಾರ್ಟ್ ರಾಜಕೀಯ ಮಾಡುತ್ತಾ ನಮ್ಮ ಕಡೆ ಗಮನಹರಿಸಿಲ್ಲ. ನಾವು ನಿಮಗೆ ವೋಟ್ ಹಾಕಿದ್ದೇವೆ ನಮ್ಮ ಕಡೆ ಸ್ವಲ್ಪ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಶಾಸಕರಿಂದ ರೆಸಾರ್ಟಿನಲ್ಲಿ ಮೋಜಿನಾಟ – ಇತ್ತ ನೀರಿಗಾಗಿ ಮತದಾರರು ಹೋರಾಟ

    ಶಾಸಕರಿಂದ ರೆಸಾರ್ಟಿನಲ್ಲಿ ಮೋಜಿನಾಟ – ಇತ್ತ ನೀರಿಗಾಗಿ ಮತದಾರರು ಹೋರಾಟ

    ಬಳ್ಳಾರಿ: ರಾಜ್ಯದ ಜನ ಪ್ರತಿನಿಧಿಗಳು ರೆಸಾರ್ಟ್ ಗಳಲ್ಲಿ ಮೋಜ-ಮಸ್ತಿ ಮಾಡುತ್ತಿದ್ದಾರೆ. ಆದರೆ ಇತ್ತ ಇವರಿಗೆ ಮತ ಹಾಕಿ ವಿಧಾನ ಸೌಧಕ್ಕೆ ಕಳಿಸಿದ ಜನರು ಮಾತ್ರ ಕನಿಷ್ಠ ಕುಡಿಯುವ ನೀರಿಗೂ ಹೋರಾಟ ಮಾಡಬೇಕಾದ ಸ್ಥಿತಿ ಎದುರಾಗಿದೆ.

    ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿ, ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಕುಡಿಯುವ ನೀರು ಸಹ ಪೂರೈಕೆ ಮಾಡಲು ಸಾಧ್ಯವಾಗದ ಜನಪ್ರತಿನಿಧಿಗಳು ಯಾಕೆ ನಮಗೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಸತತ ಎರಡು ವರ್ಷಗಳ ಕಾಲದಿಂದ ನಮಗೆ ಈ ಸಮಸ್ಯೆ ಇದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ನಮ್ಮ ಸಮಸ್ಯೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಹೀಗೆ ಮುಂದುವರಿದರೇ, ನಮ್ಮ ಗತಿ ಏನು ಎಂದು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ನಮಗೆ ಕೂಡಲೇ ನೀರು ಪೂರೈಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

  • ಮುಂಬೈ ಹೋಟೆಲಿನಲ್ಲಿ ಶಾಸಕರು – ಕುಡಿಯೋ ನೀರಿಗಾಗಿ ಕ್ಷೇತ್ರದ ಜನ ಪರದಾಟ

    ಮುಂಬೈ ಹೋಟೆಲಿನಲ್ಲಿ ಶಾಸಕರು – ಕುಡಿಯೋ ನೀರಿಗಾಗಿ ಕ್ಷೇತ್ರದ ಜನ ಪರದಾಟ

    ಕೋಲಾರ/ತುಮಕೂರು: ರಾಜ್ಯ ರಾಜಕೀಯದ ಹೈಡ್ರಾಮಾ ಮುಗಿಯುತ್ತಿಲ್ಲ. ಪರಿಣಾಮ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಲವೆಡೆ ಜನರಿಗೆ ಕುಡಿಯುವ ನೀರು ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ.

    ಪಕ್ಷೇತರ ಶಾಸಕ ನಾಗೇಶ್ ಕ್ಷೇತ್ರ ಮುಳಬಾಗಲಿನಲ್ಲಿ ಜನ ನೀರಿಲ್ಲದೇ ಸಿಡಿದು ನಿಂತಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಎಮ್ಮೆನತ್ತ ಗ್ರಾಮದ ಜನರು ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.

    ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ಗ್ರಾಮಸ್ಥರು, ಎಮ್ಮೆನತ್ತ ಗ್ರಾಮ ಪಂಚಾಯ್ತಿಯ ಸದಸ್ಯರೆಲ್ಲ ತಮ್ಮ ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿಕೊಂಡಿದ್ದು, ಗ್ರಾಮಪಂಚಾಯ್ತಿಯಲ್ಲಿ ಜನರ ಸಮಸ್ಯೆ ಆಲಿಸುವವರಿಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟವರು ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.

    ತುಮಕೂರಿನ ಹೊರ ವಲಯದ ಬೆಳಗುಂಬ ಪಂಚಾಯ್ತಿಯಲ್ಲಿ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ರೋಸಿಹೋದ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಅಧಿಕಾರಿಗಳನ್ನ ಹೊರಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ. ಬೆಳಗುಂಬ, ಕುಂದೂರು ಸೇರಿದಂತೆ ಮೂರು-ನಾಲ್ಕು ಊರುಗಳಿಗೆ ನೀರು ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಗ್ರಾಮಸ್ಥರೇ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದರು.

    ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿಹೋದ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಒಳಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ಅಧಿಕಾರಿಗಳನ್ನು ಹೊರಗೆ ಹಾಕಿ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ಇತ್ತ ಮಂಡ್ಯದಲ್ಲಿ ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿದ್ದಾರೆ. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಮಾದಿಹಳ್ಳಿ ಗ್ರಾಮದ ರೈತ ರಾಮಕೃಷ್ಣ ಮನೆ ಪಕ್ಕದ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮಕೃಷ್ಣ 6 ಲಕ್ಷ ಸಾಲ ಮಾಡಿ 3 ಬೋರ್ ವೆಲ್ ಕೊರೆಸಿದ್ದರು. ಆದರೆ ನೀರು ಬಂದಿರಲಿಲ್ಲ. ಈ ಕಾರಣದಿಂದ ನೊಂದು ರಾಮಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ.

  • ನಿಮಗೇನು ಮಾನ ಮರ್ಯಾದೆ ಇಲ್ವಾ, ಸಮಸ್ಯೆ ಬಗೆಹರಿಸಲು ಲಂಚ ಕೇಳ್ತೀರಾ – ಮಂಡ್ಯ ರೈತರ ಆಕ್ರೋಶ

    ನಿಮಗೇನು ಮಾನ ಮರ್ಯಾದೆ ಇಲ್ವಾ, ಸಮಸ್ಯೆ ಬಗೆಹರಿಸಲು ಲಂಚ ಕೇಳ್ತೀರಾ – ಮಂಡ್ಯ ರೈತರ ಆಕ್ರೋಶ

    – ಅಧಿಕಾರಿಗಳು ಲಂಚ ಪಡೀತಾರೆ, ಲಂಚ ಪಡೆದರೂ ಕೆಲಸ ಮಾಡಲ್ಲ

    ಮಂಡ್ಯ: ನಿಮಗೇನು ಮಾನ ಮರ್ಯಾದೆ ಇಲ್ವಾ? ರೈತರ ಸಮಸ್ಯೆ ಬಗೆಹರಿಸಿ ಎಂದರೆ ಲಂಚ ಕೇಳ್ತೀರಾ? ಲಂಚ ತಗೊಂಡು ಕೆಲಸ ಮಾಡಿಕೊಡದೇ ಸತಾಯಿಸುತ್ತೀರಾ ಎಂದು ಮಂಡ್ಯ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ಇಂದು ಶಾಸಕ ಸುರೇಶ್‍ಗೌಡ ಅಧ್ಯಕ್ಷತೆಯಲ್ಲಿ ಚೆಸ್ಕಾಂ ಎಂಡಿ ಗೋಪಾಲಕೃಷ್ಣ, ಮೈಸೂರು ಮುಖ್ಯ ಅಭಿಯಂತರ ಶ್ರೀನಿವಾಸ ಮೂರ್ತಿ ಮತ್ತು ನಾಗಮಂಗಲ ತಾಲೂಕಿನ ಚೆಸ್ಕಾಂ ಅಧಿಕಾರಿಗಳು ಸೇರಿದಂತೆ ಚೆಸ್ಕಾಂ ಕುಂದು ಕೊರತೆ ಸಭೆಯನ್ನು ನಡೆಸಲಾಯಿತು.

    ಈ ಸಭೆಯ ಮಧ್ಯೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಂಡ್ಯ ರೈತರು, ಶಾಸಕ ಸುರೇಶ್‍ಗೌಡ ಅವರ ಮುಂದೆಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಮಗೇನು ಮಾನ ಮರ್ಯಾದೆ ಇಲ್ವಾ. ನಿಮ್ಮಿಂದ ಶಾಸಕರ ಮರ್ಯಾದೇನೂ ಕಳೆಯುತ್ತಿರಾ. ಸರಿಯಾಗಿ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅಧಿಕಾರಿಗಳು ಲಂಚ ಪಡೆಯುತ್ತಾರೆ. ಲಂಚ ಪಡೆದರೂ ಕೆಲಸ ಮಾಡಲ್ಲ ಎಂದು ಆಕ್ರೋಶ ಹೊರಹಾಕಿದರು.

    ಈ ಸಭೆಯಲ್ಲಿ ರೈತರ ಕಷ್ಟಗಳನ್ನು ಅಲಿಸಿದ ಶಾಸಕ ಸುರೇಶ್‍ಗೌಡ ಮತ್ತು ಚೆಸ್ಕಾಂ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದಾಗಿ ರೈತರಿಗೆ ಭರವಸೆ ನೀಡಿದರು.

  • ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

    – ಆರ್ಥಿಕ ಸದೃಢ 3 ರಾಷ್ಟ್ರಗಳಲ್ಲಿ ಭಾರತ ಒಂದಾಗಲಿ
    – ಮುಂದಿನ ಪೀಳಿಗೆಗೆ ನಾವು ನೀರು ಉಳಿಸಬೇಕು

    ನವದೆಹಲಿ: 17ನೇ ಲೋಕಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಮಾನಾಥ್ ಕೋವಿಂದ ಇಂದು ಮಾತನಾಡಿದರು. ಭಾರತವನ್ನು ಪ್ರಬಲ ಆರ್ಥಿಕ ಶಕ್ತಿ ಕೇಂದ್ರವನ್ನಾಗಿ ಮಾಡಲು ನೂತನ ಸರ್ಕಾರ ಕೆಲಸ ಮಾಡಬೇಕಿದ ಎಂದು ಹೇಳಿದರು.

    ನೂತನ ಮೋದಿ ಸರ್ಕಾರ ತ್ರಿಪಲ್ ತಲಾಖ್ ನಿಷೇಧ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಮುಂದಿನ ಕಾರ್ಯ ನಿರ್ವಹಿಸಬೇಕಿದೆ. ದೇಶದ 75ನೇ ಸ್ವತಂತ್ರ ದಿನಾಚರಣೆಯ ವೇಳೆ ದೇಶ ಅಭಿವೃದ್ಧಿಯ ಕನಸು ಸಾಕಾರಗೊಳ್ಳುವಂತೆ ಮಾಡುವ ಮೂಲಕ ನಿಮ್ಮ ಕಾರ್ಯವನ್ನು ರೈತರು ಮತ್ತು ಸೈನಿಕರಿಗೆ ಅರ್ಪಿಸಬೇಕು.

    ದೇಶದ ಜನತೆ ದೀರ್ಘ ಅವಧಿಯಿಂದ ಮೂಲಭೂತ ಸೌಲಭ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ. ಆದ್ರೆ ಆ ಸ್ಥಿತಿ ಬದಲಾವಣೆಯತ್ತ ಸಾಗುತ್ತಿದೆ. ವಿಶ್ವದ ಅತಿದೊಡ್ಡ ಸದೃಢ ಮೂರು ದೇಶಗಳಲ್ಲಿ ಭಾರತ ಸಹ ಒಂದಾಗುವಂತೆ ನೂತನ ಸರ್ಕಾರ ಕಾರ್ಯ ನಿರ್ವಹಿಸಬೇಕೆಂದು ಗುರಿಯನ್ನು ನೀಡಿದರು.

    ಕಿಸಾನ್ ಸಮ್ಮಾನ್ ಯೋಜನೆ ದೇಶದ ಪ್ರತಿಯೊಬ್ಬ ರೈತರಿಗೆ ತಲುಪಿದೆ. ರೈತರಿಗೆ ಪಿಂಚಣಿ ನೀಡುವ ಕಾರ್ಯ ಸಹ ಆರಂಭಗೊಂಡಿದೆ. ಸಣ್ಣ ವ್ಯಾಪಾರಸ್ಥನ ಆರ್ಥಿಕ ಸುರಕ್ಷತೆಯನ್ನು ಗಮನದಲ್ಲಿರಿಸಿ ಮೊದಲ ಬಾರಿಗೆ ಸರ್ಕಾರವೊಂದು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. 3 ಕೋಟಿಗೂ ಅಧಿಕ ಸಣ್ಣ ವ್ಯಾಪಾರಸ್ಥರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

    ಜಲ ಸಂರಕ್ಷಣೆ:
    ಮುಂದಿನ ಪೀಳಿಗೆಗಾಗಿ ನಾವು ನೀರು ಉಳಿಸುವ ಅಚಲ ನಿರ್ಧಾರ ಮಾಡಬೇಕು. ಸಂಸತ್ತಿನ ಅಧಿವೇಶನದಲ್ಲಿ ಜೂನ್ 14 ರಂದು ಬಿಡುಗಡೆಯಾದ ನೀತಿ ಆಯೋಗದ ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಮಾತನಾಡಿದ ಅವರು, ಭಾರತ ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿದೆ. ನಾವು ನಮ್ಮ ಮಕ್ಕಳಿಗೆ ಮತ್ತು ಮುಂದಿನ ಪೀಳಿಗೆಗೆ ನೀರನ್ನು ಉಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಜಲಶಕ್ತಿ ಸಚಿವಾಲಯವನ್ನು ರಚಿಸುವುದು ನಿರ್ಣಾಯಕ ಹೆಜ್ಜೆಯಾಗಿದ್ದು, ಇದು ನೀರಿನ ಸಮಸ್ಯೆ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

    ಈ ವರದಿಯ ಪ್ರಕಾರ ಸುರಕ್ಷಿತ ನೀರಿನ ಕೊರೆತೆಯಿಂದಾಗಿ ಸುಮಾರು 60 ಕೋಟಿ ಜನರು ತೀವ್ರ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತೀ ವರ್ಷ ಸುಮಾರು ಎರಡು ಲಕ್ಷ ಜನರು ಇದರಿಂದ ಸಾಯುತ್ತಿದ್ದಾರೆ ಎಂದು ವರದಿ ಹೇಳಿದೆ. ಸಂಯೋಜಿತ ನೀರು ನಿರ್ವಹಣಾ ಸೂಚ್ಯಂಕ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದ ಈ ವರದಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ನೀರಿನ ಸಮಸ್ಯೆ ತುಂಬ ಉಲ್ಬಣಗೊಳ್ಳಬಹುದು ಎಂದು ಅತಂಕ ವ್ಯಕ್ತಪಡಿಸಿದೆ.

    2030ರ ಹೊತ್ತಿಗೆ ದೇಶದಲ್ಲಿ ನೀರಿನ ಬೇಡಿಕೆಯು ಈಗ ಇರುವ ಬೇಡಿಕೆಗಿಂತ ಎರಡು ಪಟ್ಟು ಹೆಚ್ಚಾಗುತ್ತದೆ ಎಂದು ಊಹಿಸಲಾಗಿದೆ. ಇಂದು ಬಹಳ ಜನರಿಗೆ ನೀರಿನ ಕೊರೆತೆಯನ್ನು ಸೂಚಿಸುತ್ತದೆ ಮತ್ತು ದೇಶದ ಜಿಡಿಪಿಯಲ್ಲಿ ಶೇ. 6 ರಷ್ಟು ನಷ್ಟವಾಗುತ್ತದೆ ಎಂದು ಹೇಳಲಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನಾಳೆ ಮಂಡ್ಯದಲ್ಲಿ ಸುಮಲತಾ ಪ್ರವಾಸ

    ನಾಳೆ ಮಂಡ್ಯದಲ್ಲಿ ಸುಮಲತಾ ಪ್ರವಾಸ

    ಮಂಡ್ಯ: ನೂನತ ಸಂಸದೆ ಸುಮಲತಾ ಅಂಬರೀಶ್ ಅವರು ನಾಳೆ(ಮಂಗಳವಾರ) ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.

    ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆಗೆ ಮಂಡ್ಯ ತಾಲೂಕು ಕೀಲಾರ ಗ್ರಾಮದಲ್ಲಿ ನಡೆಯುವ ಸ್ವಚ್ಛ ಮೇವ ಜಯತೆ ಜನಾಂದೋಲನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಇತ್ತೀಚೆಗೆ ನಿಧನರಾದ ಪತ್ರಿಕೆ ಛಾಯಾಗ್ರಾಹಕ ರಾಘವೇಂದ್ರ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಿದ್ದಾರೆ.

    ಮಧ್ಯಾಹ್ನ 1.00 ಗಂಟೆ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಜಿಲ್ಲಾಧಿಕಾರಿಗಳಿಂದ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಹಾಗೂ ವಿವಿಧ ಇಲಾಖಾವಾರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

    ಬಿ.ಹೊಸೂರು ಗ್ರಾಮದಲ್ಲಿರುವ ಕೇಂದ್ರೀಯ ವಿದ್ಯಾಲಯದ ಬಗ್ಗೆ ಸಾಕಷ್ಟು ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2.00 ಗಂಟೆಗೆ ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದಲ್ಲಿರುವ ಕೇಂದ್ರಿಯ ವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

  • ಎಲ್ಲ ಸಮಸ್ಯೆ ಕುರಿತು ಮಾತುಕತೆಗೆ ಪಾಕ್ ಸಿದ್ಧ – ಮೋದಿಗೆ ಇಮ್ರಾನ್ ಖಾನ್ ಪತ್ರ

    ಎಲ್ಲ ಸಮಸ್ಯೆ ಕುರಿತು ಮಾತುಕತೆಗೆ ಪಾಕ್ ಸಿದ್ಧ – ಮೋದಿಗೆ ಇಮ್ರಾನ್ ಖಾನ್ ಪತ್ರ

    ನವದೆಹಲಿ: ಭಾರತದ ಜೊತೆಗೆ ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲಾ ವಿವಾದದ ಬಗ್ಗೆ ಮಾತುಕತೆ ನಡೆಸಲು ಪಾಕ್ ಸಿದ್ಧ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

    ಕಿರ್ಗಿಸ್ತಾನದ ಬೆಶ್ಕೆಕ್‍ನಲ್ಲಿ ಜೂನ್ 13 ಮತ್ತು 14 ರಂದು ಶಾಂಘೈ ಸಹಕಾರ ಸಂಸ್ಥೆ (ಎಸ್‍ಸಿಒ) ಶೃಂಗ ಸಭೆ ನಡೆಯಲಿದ್ದು, ಈ ವೇಳೆ ಪಾಕ್ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ ಬೆನ್ನಲ್ಲೇ ಇಮ್ರಾನ್ ಖಾನ್ ಪತ್ರ ಬರೆದಿದ್ದಾರೆ.

    ಮೂಲಗಳ ಪ್ರಕಾರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿದ್ದಕ್ಕೆ ಬರೆದ ಅಭಿನಂದನಾ ಪತ್ರದಲ್ಲಿ, ಎರಡು ದೇಶಗಳು ಬಡತನದಿಂದ ಮುಕ್ತಿಯಗಬೇಕು ಎಂದರೆ ನಾವು ಪರಸ್ಪರ ಮಾತುಕತೆ ನಡೆಸುವುದೊಂದೆ ಪರಿಹಾರ. ಪ್ರಾದೇಶಿಕ ಅಭಿವೃದ್ಧಿಗಾಗಿ ಎರಡು ದೇಶಗಳು ಒಟ್ಟಿಗೆ ಕೆಲಸ ಮಾಡುವುದು ಮುಖ್ಯ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

    ಭಾರತ ಮತ್ತು ಪಾಕಿಸ್ತಾನ ನಡುವೇ ಇರುವ ಕಾಶ್ಮೀರ ಸಮಸ್ಯೆ ಸೇರಿದಂತೆ ಎಲ್ಲಾ ಸಮಸ್ಯೆಗಳಿಗೂ ಶಾಂತಿಯುತ ಮಾತುಕತೆಯನ್ನು ಪಾಕಿಸ್ತಾನ ಬಯಸುತ್ತದೆ. ನಾವು ಜನರ ಸುಧಾರಣೆಗೋಸ್ಕರ ಭಾರತದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಇಮ್ರಾನ್ ಖಾನ್ ಅವರು ಹೇಳಿದ್ದಾರೆ.

    ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್‍ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ವಾಯುಸೇನೆ ಬಾಂಬ್ ದಾಳಿ ನಡೆಸಿದ ಬಳಿಕ ಎರಡು ದೇಶಗಳ ಗಡಿಯಲ್ಲಿ ಹೈ ಅಲರ್ಟ್ ಘೋಷಣೆಯಾಗಿತ್ತು.

    ಮೋದಿ ಅವರು ಭಾರತ ದೇಶಾದ್ಯಂತ ಪ್ರಚಂಡ ಗೆಲುವು ಸಾಧಿಸಿ ಸತತ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಬಳಿಕ ಮೋದಿ ಅವರನ್ನು ಅಭಿನಂದಿಸಿದ್ದ ಇಮ್ರಾನ್ ಖಾನ್ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗಾಗಿ ಭಾರತದ ಜೊತೆ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

  • ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ- ಡಿಸಿ ತಮ್ಮಣ್ಣ

    ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ- ಡಿಸಿ ತಮ್ಮಣ್ಣ

    – ಸಮಸ್ಯೆ ಹೇಳಿಕೊಳ್ಳಲು ಬಂದ ಜನರಿಗೆ ಬೈದ ಸಚಿವ

    ಮಂಡ್ಯ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ನಾಲಿಗೆ ಸ್ಥಿಮಿತ ಕಳೆದುಕೊಂಡಿದ್ದಾರೆ.

    ಶುಕ್ರವಾರ ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.

    ಶಂಕುಸ್ಥಾಪನೆ ವೇಳೆ ಜನರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ಈ ವೇಳೆ ತಮ್ಮಣ್ಣ ಜನರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಕೇಳಿಕೊಂಡಿದ್ದರು.

    ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ.

    ಸಚಿವ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

  • ನೀರಿಗೆ ಬರ – ಸ್ತಬ್ಧವಾಗ್ತಿದೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆ

    ನೀರಿಗೆ ಬರ – ಸ್ತಬ್ಧವಾಗ್ತಿದೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆ

    ಕಾರವಾರ: ಏಷ್ಯಾದಲ್ಲಿಯೇ ಮೂರನೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬಾ ನೌಕಾನೆಲೆಗೀಗ ಬರದ ಕರಿ ಛಾಯೆ ತಟ್ಟಿದೆ. ಇಡೀ ನೌಕಾನೆಲೆಗೆ ನೀರಿನ ಕೊರತೆಯಿಂದಾಗಿ ನೌಕಾನೆಲೆಯ ಕೆಲಸಕಾರ್ಯಗಳನ್ನೇ ಬಂದ್ ಮಾಡಲು ನೌಕಾ ದಳ ಹೊರಟಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಭಾರತೀಯ ನೌಕಾದಳವು 11,500 ಎಕರೆ ಪ್ರದೇಶವನ್ನು ಹೊಂದುವ ಮೂಲಕ ಏಷ್ಯಾದಲ್ಲಿಯೇ ಮೂರನೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆಯನ್ನು ಗಿಟ್ಟಿಸಿಕೊಂಡಿದೆ. ಹೀಗಾಗಿ ಈ ನೌಕಾನೆಲೆಯಲ್ಲಿ ಫೇಸ್-2 ಹಂತದ ಅಭಿವೃದ್ಧಿ ಕಾರ್ಯಗಳು ನಡೆಯುತಿದ್ದು, ನೌಕಾನೆಲೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.

    ಇಲ್ಲಿಯೇ ದೇಶದ ಅತಿದೊಡ್ಡ ಯುದ್ಧ ನೌಕೆ ವಿಕ್ರಮಾದಿತ್ಯ ಹಡಗು, ಯುದ್ಧ ನೌಕೆಗಳು, ಸಬ್ ಮೆರಿನ್‍ಗಳ ನಿಲ್ದಾಣವಿದೆ. ಹೀಗಾಗಿ ಒಂದು ದಿನಕ್ಕೆ ನೌಕಾನೆಲೆಗೆ ಪ್ರತಿ ದಿನ ಆರು ಮಿಲಿಯನ್ ಲೀಟರ್ ನೀರು ಬೇಕಾಗುತ್ತದೆ. ಇದಲ್ಲದೇ ಇಲ್ಲಿನ ಕಾಲೋನಿ, ನಗರವ್ಯಾಪ್ತಿ ಸೇರಿ ಹದಿನೆಂಟು ಮಿಲಿಯನ್ ನೀರು ಒಂದು ದಿನಕ್ಕೆ ಬೇಕಿದೆ. ಈ ನೀರಿಗೆ ಮೂಲ ಅಂಕೋಲ ತಾಲೂಕಿನ ಗಂಗಾವಳಿ ನದಿಯಾಗಿದ್ದು, ಈ ನದಿಯಿಂದಲೇ ಅಂಕೋಲ ಪಟ್ಟಣ ಸೇರಿದಂತೆ ಕಾರವಾರಕ್ಕೂ ನೀರು ಪೂರೈಸಬೇಕು.

    ಗಂಗಾವಳಿ ನದಿಯಲ್ಲಿ ಈಗ ಮಳೆ ಬಾರದೆ ಸಂಪೂರ್ಣ ಬತ್ತಿ ಹೋಗಿದ್ದು, ಎಲ್ಲಿಯೂ ನೀರು ಪೂರೈಸದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ನೌಕಾನೆಲೆಗೆ ನಾಲ್ಕು ದಿನಕ್ಕೆ ಒಂದು ಸಾರಿ ನೀರು ಪೂರೈಕೆಯಾಗುತ್ತಿದ್ದು, ಜೂನ್ ಆದರೂ ಮಳೆ ಬಾರದ ಹಿನ್ನೆಲೆಯಲ್ಲಿ ಅದನ್ನೂ ಪೂರೈಕೆ ಮಾಡಲು ಸಾಧ್ಯವಾಗದೆ ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಕೈಚೆಲ್ಲಿ ಕುಳಿತಿದೆ. ಹೀಗಾಗಿ ಇನ್ನೆರಡು ದಿನದಲ್ಲಿ ಮಳೆ ಬಾರದಿದ್ದಲ್ಲಿ ನೌಕಾನೆಲೆಯ ಫೇಸ್-2 ಕಾಮಗಾರಿ ಹಾಗೂ ಅಭಿವೃದ್ಧಿ ಕೆಲಸಗಳನ್ನು ಸಂಪೂರ್ಣ ನಿಲ್ಲಿಸಲು ನೌಕಾದಳ ತೀರ್ಮಾನಿಸಿದೆ.

    ನೌಕಾನೆಲೆಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಪೂರೈಸುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ನದಿ ಹರಿಯುವ ಸ್ಥಳದಲ್ಲಿ ಅಳಿದುಳಿದ ನೀರಿಗೆ ಪಂಪ್‍ಗಳನ್ನು ಅಳವಡಿಸಿ ನೀರನ್ನು ಪೂರೈಕೆ ಮಾಡಿದ್ದೇವೆ. ಪ್ರತಿ ದಿನ 6 ಮಿಲಿಯನ್ ನಷ್ಟು ನೀರು ನೌಕಾನೆಲೆಗೆ ಬೇಕಾಗುತ್ತಿದೆ. ಇದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಇನ್ನೆರಡು ದಿನದಲ್ಲಿ ಮಳೆ ಬಾರದಿದ್ರೆ ನೌಕಾನೆಲೆಗೆ ನೀರು ಪೂರೈಸಲು ಸಾಧ್ಯವಾಗದು ಎಂದು ನೌಕಾನೆಲೆಗೆ ನೀರು ಪೂರೈಕೆ ಜವಾಬ್ದಾರಿ ಹೊತ್ತಿರುವ ಕರ್ನಾಟಕ ನಗರ ನೀರು ಪೂರೈಕೆ ಹಾಗೂ ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್ ಸುರೇಶ್ ಹೇಳಿದ್ದಾರೆ.

    ನೀರಿಲ್ಲದೆ ನೌಕೆಗಳೇ ಸ್ಥಳಾಂತರ!
    ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಗೆ ಅಂಕೋಲ ತಾಲೂಕಿನಲ್ಲಿರುವ ಗಂಗಾವಳಿ ನದಿಯಿಂದ ನೀರನ್ನು ಹೊನ್ನಳ್ಳಿಗೆ ತಂದು ಶುದ್ಧೀಕರಿಸಲಾಗುತ್ತದೆ. ಬಳಿಕ ನೀರನ್ನು ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಕದಂಬ ನೌಕಾನೆಲೆ ಹಾಗೂ ನೌಕಾ ನೆಲೆಯ ವಸತಿ ಗೃಹಕ್ಕೆ ನೀಡಲಾಗುತ್ತದೆ. ಕಳೆದ ಎಂಟು ದಿನದಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ. ಇದರಿಂದಾಗಿ 2 ಮಿ.ಲೀಟರ್ ನೀರನ್ನು ನಾಲ್ಕು ದಿನಕ್ಕೆ ಒಂದು ಬಾರಿ ಪೂರೈಕೆ ಮಾಡಿದರೆ ಅಲ್ಪ ನೀರನ್ನು ಟ್ಯಾಂಕರ್ ಮೂಲಕ ಕಾಲೋನಿಗೆ ವಿತರಿಸಲಾಗಿತ್ತು.

    ಆದರೆ ಎರಡು ದಿನದಿಂದ ಅದನ್ನೂ ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಇದರಿಂದಾಗಿ ಯುದ್ಧ ನೌಕೆಗಳಿಗೆ ಹಾಗೂ ಫೇಸ್ -2 ಕಾಮಗಾರಿಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ನೌಕಾನೆಲೆಯಲ್ಲಿ ನಡೆಯುತ್ತಿದ್ದ ವಿಸ್ತರಣಾ ಕಾರ್ಯಕ್ಕೆ ಅಡ್ಡಿಯಾಗಿದ್ದು, ಕೆಲವು ಭಾಗದಲ್ಲಿ ಕೆಲಸವನ್ನು ನಿಲ್ಲಿಸಲಾಗಿದೆ. ಶುದ್ಧ ಕುಡಿಯುವ ನೀರು ಕೊರತೆಯಿಂದ ಯುದ್ಧ ಹಡಗುಗಳು, ಸಬ್ ಮೆರಿನ್‍ಗಳು ಕಾರವಾರದ ಕದಂಬಾ ನೌಕಾನೆಲೆಯಿಂದ ಮುಂಬೈ ನೌಕಾನೆಲೆಗೆ ತಮ್ಮ ಸ್ಥಾನ ಬದಲಿಸಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜೂನ್ 8 ರೊಳಗೆ ಮಳೆ ಬರುವ ಸೂಚನೆ ನೀಡಿದೆ. ಒಂದು ವೇಳೆ ನಿಗದಿಯಂತೆ ಮಳೆ ಬಾರದಿದ್ದರೆ ಏಷ್ಯಾದ ಮೂರನೇ ಅತಿದೊಡ್ಡ ನೌಕಾನೆಲೆಯ ಪ್ರಮುಖ ಕಾರ್ಯಗಳು ಸ್ತಬ್ಧವಾಗಲಿವೆ.