Tag: ಸಮವಸ್ತ್ರ

  • ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ

    ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ

    ಬೆಂಗಳೂರು: ಹಿಜಬ್ ಬಗ್ಗೆ ನಿನ್ನೆ ನಾನು ಪ್ರಸ್ತಾಪವನ್ನೇ ಮಾಡಿಲ್ಲ. ಹೀಗಿದ್ದಾಗ ಹಿಜಬ್‍ಗೂ ಮತ್ತು ಸ್ವಾಮೀಜಿಗಳ ಬಟ್ಟೆಗೂ ಹೋಲಿಕೆ ಮಾಡಲಾಗಿದೆ ಎಂಬಂಶ ಎಲ್ಲಿಂದ ಬರುತ್ತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳ ಮೇಲೆ ನನಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ. ಅವರಿಗೆ ಅಗೌರವ ತೋರುವಂತೆ ಈ ಹಿಂದೆಯೂ ಮಾತನಾಡಿಲ್ಲ, ಮುಂದೆಯೂ ಮಾತನಾಡಲ್ಲ. ಹೆಣ್ಣು ಮಕ್ಕಳು ಧರಿಸುವ ದುಪಟ್ಟ ಬಗ್ಗೆ ಮಾತನಾಡಿದ್ದೆ, ಹಿಜಬ್‍ಗೂ ದುಪಟ್ಟಗೂ ಭಾರಿ ವ್ಯತ್ಯಾಸವಿದೆ ಎಂದರು.

    ನಾನು ಸದನದಲ್ಲಿ ಮಾತನಾಡುವಾಗ ತರಗತಿ ಒಳಗೆ ಹಿಜಬ್ ಧರಿಸದಂತೆ ನ್ಯಾಯಾಲಯದ ಆದೇಶ ಇದೆ. ಹಾಗಾಗಿ ಸರ್ಕಾರ ಶಾಲಾ ಸಮವಸ್ತ್ರದ ಬಣ್ಣದ ದುಪಟ್ಟ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಸಚಿವರಾದ ಅಶ್ವತ್ಥ ನಾರಾಯಣ ಮತ್ತು ನಾಗೇಶ್ ಅವರಿಗೆ ಸಲಹೆ ನೀಡಿದ್ದೆ. ಇದನ್ನು ಸ್ವೀಕರಿಸೋದು ಬಿಡೋದು ಸರ್ಕಾರಕ್ಕೆ ಬಿಟ್ಟ ವಿಚಾರ. ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬ ಕಾರಣಕ್ಕೆ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಕೆಲವು ಸಮುದಾಯಗಳ ಮೇಲೆ ಬಿಜೆಪಿಗೆ ಅಲರ್ಜಿ ಇದೆ: ಪ್ರಿಯಾಂಕ್ ಖರ್ಗೆ

    ನಾವು ಸಮವಸ್ತ್ರಕ್ಕೆ ವಿರುದ್ಧವಾಗಿಲ್ಲ, ಸಮವಸ್ತ್ರವನ್ನು ಧರಿಸಲಿ, ಅದರ ಜೊತೆಗೆ ಸಮವಸ್ತ್ರದ ಬಣ್ಣದ ದುಪಟ್ಟವನ್ನು ಧರಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದೆ. ಮಕ್ಕಳಿಗೆ ಶಿಕ್ಷಣ ನೀಡಬೇಕಿರುವುದು ಸರ್ಕಾರದ ಜವಾಬ್ದಾರಿ, ಒಂದು ವೇಳೆ ಪರೀಕ್ಷೆಗೆ ಹಾಜರಾಗದೆ ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅದಕ್ಕೂ ಸರ್ಕಾರವೇ ಜವಾಬ್ದಾರಿಯಾಗುತ್ತದೆ. ಸಲಹೆ ನೀಡುವುದು ವಿರೋಧ ಪಕ್ಷವಾದ ನಮ್ಮ ಕರ್ತವ್ಯ. ಅದನ್ನು ಸ್ವೀಕರಿಸದಿದ್ದರೆ ನಾವೇನು ಮಾಡೋದು ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ: ಡಿಕೆಶಿ

  • ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

    ಸೇನಾ ಸಮವಸ್ತ್ರದಲ್ಲೇ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ

    ಬೆಳಗಾವಿ: ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ನೋಡಲು ನಿವೃತ್ತ ಯೋಧರೊಬ್ಬರು ಸೇನಾ ಸಮವಸ್ತ್ರದಲ್ಲೇ ಆಗಮಿಸಿ ಅಭಿಮಾನ ಮೆರೆದಿದ್ದಾರೆ.

    ನಗರದ ಚಿತ್ರಾ ಚಿತ್ರಮಂದಿರಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವಾಸಿ ನಿವೃತ್ತ ಯೋಧ ವಿನಾಯಕ ಮೇದಾರ್ ಅವರು ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿದ್ದಾರೆ. ಇದನ್ನೂ ಓದಿ: ಕಲಾವಿದ ದೇವಿಕಿರಣ್ ಕೈಚಳಕದಲ್ಲಿ ಪವರ್ ಸ್ಟಾರ್ ಪುನೀತ್

    ಪುನೀತ್ ರಾಜಕುಮಾರ್ ಅವರ ಅಪ್ಪಟ್ಟ ಅಭಿಮಾನಿ ಆಗಿರುವ ನಿವೃತ್ತ ಯೋಧ ವಿನಾಯಕ ಅವರು ಚಿತ್ರಾ ಟಾಕೀಸ್‍ನಲ್ಲಿ ಕೇಕ್ ಕಟ್ ಮಾಡುವ ಮೂಲಕ ಪುನೀತ್ ಅವರ ಹುಟ್ಟುಹಬ್ಬ ಆಚರಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪು ಕೊನೆಯ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಾನು ನಿವೃತ್ತ ಯೋಧನಾಗಿ ಸೇನಾ ಸಮವಸ್ತ್ರದಲ್ಲೇ ಚಿತ್ರ ನೋಡಲು ಬಂದಿದ್ದೇನೆ. ಇದನ್ನೂ ಓದಿ:  ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?

    ಅಪ್ಪು ಕೊನೆಯ ಸಿನಿಮಾ ಅಂತ ನಮಗೇನು ದುಃಖ ಇಲ್ಲ. ನಮ್ಮ ಎದೆಯಲ್ಲಿ ಎಂದೆಂದಿಗೂ ಅಪ್ಪು ಅಜರಾಮರ. ಇದು ಅಪ್ಪು ಅವರ ಕೊನೆಯ ಚಿತ್ರ ಅಂತ ಯಾರೂ ದಯವಿಟ್ಟು ಹೇಳಬೇಡಿ ಎಂದು ಮನವಿ ಮಾಡಿಕೊಂಡರು.

  • ಹಿಜಬ್‌ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್‌ ಹೇಳಿದ್ದೇನು?

    ಹಿಜಬ್‌ ಬಗ್ಗೆ ಎದ್ದಿದ್ದ 3 ಪ್ರಶ್ನೆಗಳಿಗೆ ಸಿಕ್ತು ಉತ್ತರ: ಅರ್ಜಿದಾರರು, ಸರ್ಕಾರ, ಹೈಕೋರ್ಟ್‌ ಹೇಳಿದ್ದೇನು?

    ಬೆಂಗಳೂರು: ಹಿಜಬ್‌ ಮುಸ್ಲಿಂ ಧರ್ಮದ ಅಗತ್ಯ ಆಚರಣೆ ಅಲ್ಲ ಎಂದು ಐತಿಹಾಸಿಕ ತೀರ್ಪು ಪ್ರಕಟಿಸುವ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಎದ್ದಿದ್ದ ಧರ್ಮ ಸಂಘರ್ಷಕ್ಕೆ ಹೈಕೋರ್ಟ್‌ ಪೂರ್ಣ ವಿರಾಮ ಹಾಕಿದೆ.

    ವಿಶ್ವ ಮಟ್ಟದಲ್ಲಿ ಸುದ್ದಿಯಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದ ಹಿಜಬ್‌ ವಿವಾದ ಸಂಬಂಧ ಸುದೀರ್ಘ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೈಬುನ್ನೀಸಾ ಎಂ ಖಾಜಿ ನೇತೃತ್ವದ ಪೀಠ ಮಂಗಳವಾರ ಬೆಳಗ್ಗೆ 10:35ಕ್ಕೆ ಮಹತ್ವದ ತೀರ್ಪು ಪ್ರಕಟಿಸಿತು.

    ತರಗತಿಗಳಲ್ಲಿ ಹಿಜಬ್‌ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ.

    ಹಿಜಬ್‌ ನಿಷೇಧಕ್ಕೆ ಸಂಬಂಧಿಸಿದಂತೆ 11 ದಿನಗಳ ಕಾಲ ಎರಡು ಕಡೆಯ ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಫೆ.25 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಮೂರು ಮಹತ್ವದ ಪ್ರಶ್ನೆಗಳಿಗೆ ಉತ್ತರ ನೀಡಿದೆ. ಈ ಪ್ರಶ್ನೆಗಳಿಗೆ ಅರ್ಜಿದಾರರ ಪರ ವಾದ ಏನಿತ್ತು? ಸರ್ಕಾರದ ಪರ ವಾದ ಏನಿತ್ತು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಹಿಜಬ್‌ ನಿಷೇಧದ ಹೈಕೋರ್ಟ್‌ ತೀರ್ಪು ತೀವ್ರ ನಿರಾಶಾದಾಯಕ: ಕಾಶ್ಮೀರ ಮಾಜಿ ಸಿಎಂ

    ಪ್ರಶ್ನೆ 1. ಇಸ್ಲಾಂ ಧರ್ಮದ ಅಡಿಯಲ್ಲಿ ಹಿಜಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯೇ?
    ಅರ್ಜಿದಾರರ ವಾದ: ಇಸ್ಲಾಂ ಧರ್ಮಕ್ಕೂ ಮುನ್ನವೇ ಹಿಜಬ್‌ ಧರಿಸುವ ಪದ್ಧತಿ ಚಾಲ್ತಿಯಲ್ಲಿತ್ತು ಮತ್ತು ಕುರಾನ್‌ ಪ್ರಕಾರ ಮುಸ್ಲಿಂ ಮಹಿಳೆಯರು ತಲೆ, ಮುಖ, ಎದೆ ಭಾಗವನ್ನು ಮುಚ್ಚಲು ಹಿಜಬ್‌ ಧರಿಸುವುದು ಕಡ್ಡಾಯ. ಅದು ಅಲ್ಲಾನ ಕೊನೆಯ ಆಜ್ಞೆ. ಕೇಂದ್ರಿಯ ವಿದ್ಯಾಲಯಗಳಲ್ಲಿ ಈಗಲೂ ಹಿಜಬ್‌ ಧರಿಸಲು ಅವಕಾಶವಿದೆ.

    ಸರ್ಕಾರದ ವಾದ: ಹಿಜಬ್‌ ಕಡ್ಡಾಯ ಆಚರಣೆ ಎಂದು ಅರ್ಜಿದಾರರು ಸಾಬೀತು ಪಡಿಸಬೇಕು. ಆದರೆ ಅರ್ಜಿದಾರರು ಕಡ್ಡಾಯ ಎಂಬುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಹಿಜಬ್‌ ಹಾಕದೇ ಇರುವುದು ಕೂಡ ಮುಸ್ಲಿಂ ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರ್ಯ. ಈ ವಾದದ ಪ್ರಕಾರ ಹಿಜಬ್‌ ಕಡ್ಡಾಯವಲ್ಲ ಎನ್ನುವುದು ಸಾಬೀತಾಗುತ್ತದೆ.

    ಹೈಕೋರ್ಟ್‌: ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಂ ಅಡಿಯಲ್ಲಿ ಅಗತ್ಯವಾದ ಧಾರ್ಮಿಕ ಆಚರಣೆಯ ಭಾಗವಲ್ಲ. ಹಿಜಬ್‌ ಅವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಕುರಾನ್‌ನಲ್ಲಿ ಯಾವುದೇ ಆಧಾರವಿಲ್ಲ.


    ಪ್ರಶ್ನೆ 2: ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿತನದ ಹಕ್ಕಿನ ಅಡಿ ಹಿಜಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯೇ?
    ಅರ್ಜಿದಾರರ ವಾದ: ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಇತ್ಯಾದಿ ವಿಚಾರ ಬಂದಾಗ ಸರ್ಕಾರ ಸಂವಿಧಾನ ನೀಡಿದ ಸ್ವಾತಂತ್ರ್ಯದ ಹಕ್ಕನ್ನು ನಿರ್ಬಂಧಿಸಬಹುದು. ಸರ್ಕಾರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು. ಆದರೆ ಸಾರ್ವಜನಿಕ ಸುವ್ಯವಸ್ಥೆ ನೆಪದಲ್ಲಿ ಹಕ್ಕುಗಳನ್ನು ಧಮನಿಸಬಾರದು. ಸತಿ ಪದ್ದತಿ, ದೇವದಾಸಿ ಪದ್ದತಿ, ನರಬಲಿಯನ್ನು ನಿರ್ಬಂಧಿಸಬಹುದು. ಆದರೆ ಕಡ್ಡಾಯ ಆಚರಣೆಯನ್ನು ಶಾಲಾ ಸಮವಸ್ತ್ರದ ಹೆಸರಿನಲ್ಲಿ ನಿರ್ಬಂಧಿಸುವುದು ಸರಿಯಲ್ಲ. ದಕ್ಷಿಣ ಆಫ್ರಿಕಾ ಕೋರ್ಟ್‌ ಮೂಗುತಿ ಹಿಂದೂ ಸಂಪ್ರದಾಯದ ಭಾಗ ಎಂದು ಹೇಳಿ ಭಾರತ ಮೂಲದ ವಿದ್ಯಾರ್ಥಿನಿ ವಾದವನ್ನು ಎತ್ತಿ ಹಿಡಿದು ಶಾಲಾ ಆಡಳಿತ ಮಂಡಳಿಯ ವಾದವನ್ನು ತಿರಸ್ಕರಿಸಿತ್ತು. ಈ ಮೂಲಕ ಆಕೆಯ ಹಕ್ಕನ್ನು ರಕ್ಷಿಸಿತ್ತು. ಸಂವಿಧಾನದ 25(1)ನೇ ವಿಧಿಯ ಅಡಿ ನೀಡಲಾಗಿರುವಾಗ ಧಾರ್ಮಿಕ ಸ್ವಾತಂತ್ರ್ಯರಕ್ಷಣೆಯ ಹೊಣೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ(ಸಿಡಿಸಿ) ನೀಡಿರುವುದು ಸಂವಿಧಾನ ವಿರೋಧಿ. ದನ್ನೂ ಓದಿ: ಹಿಜಬ್‌ ಕುರಿತ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ವಕ್ಫ್‌ ಬೋರ್ಡ್‌ ಅಧ್ಯಕ್ಷ

    ಸರ್ಕಾರದ ವಾದ: ಹಿಜಬ್‌ ಇಸ್ಲಾಂ ಧರ್ಮದ ಆಚರಣೆಯ ಭಾಗವಲ್ಲ. ಶಬರಿಮಲೆ ಮತ್ತು ತ್ರಿವಳಿ ತಲಾಖ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಸಂವಿಧಾನದ ನೈತಿಕತೆ ಹಾಗೂ ವೈಯಕ್ತಿಕ ಘನತೆ ಪರೀಕ್ಷೆಯಲ್ಲಿ ಪಾಸಾಗಬೇಕು ಎಂದು ಹೇಳಿದೆ. ಹಿಜಬ್‌ ಮೇಲೆ ನಿರ್ಬಂಧ ಹೇರಿದರೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಹಿಜಬ್‌ ಇಸ್ಲಾಂನ ಭಾಗವಾಗಿರದ ಕಾರಣ ಸರ್ಕಾರ ಅದನ್ನು ಕಾನೂನಿನ ಮೂಲಕ ನಿರ್ಬಂಧಿಸಬಹುದು. ಶಾಲೆಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಸಮಾನರಾಗಿರಬೇಕು ಎಂಬ ಕಾರಣಕ್ಕೆ ಸಮವಸ್ತ್ರವನ್ನು ತರಲಾಗಿದೆ. ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿತನದ ಹಕ್ಕುಗಳ ನಿರ್ಬಂಧ ಬರುವುದಿಲ್ಲ.

    ಹೈಕೋರ್ಟ್‌: ಶಾಲಾ ಸಮವಸ್ತ್ರದ ನಿಯಮ ಸರಿಯಾಗಿದ್ದು ವಿದ್ಯಾರ್ಥಿಗಳು ಇದನ್ನು ಆಕ್ಷೇಪಿಸುವಂತಿಲ್ಲ.

    ಪ್ರಶ್ನೆ 3: ಫೆಬ್ರವರಿ 5ರ ಸರ್ಕಾರಿ ಆದೇಶ ಸರಿಯಿದೆಯೇ?
    ಅರ್ಜಿದಾರರ ವಾದ: ಶಾಲೆ, ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಇಲ್ಲಿಯವರೆಗೆ ಯಾವುದೇ ರೀತಿಯ ಸೂಚನೆಯೇ ನೀಡಿಲ್ಲ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಿಡಿಸಿಗೆ ಯಾವುದೇ ಅಧಿಕಾರ ನೀಡಿಲ್ಲ. ಹೀಗಾಗಿ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಸಿಡಿಸಿಯೇ ಕಾನೂನು ಬಾಹಿರ. ಶಿಕ್ಷಣ ಕಾಯ್ದೆಯ ಅಡಿ ಪೋಷಕರು, ಶಿಕ್ಷಕರ ಸಮಿತಿ ರಚಿಸಲು ಅವಕಾಶವಿದೆ. ಆದರೆ ಕಾಲೇಜು ಅಭಿವೃದ್ಧಿ ಸಮಿತಿಗಲ್ಲ. ಶಾಸಕರ ನೇತೃತ್ವದಲ್ಲಿ ಸಿಡಿಸಿ ಕೆಲಸ ಮಾಡುತ್ತಿದೆ. ಈ ಸಮಿತಿ ಯಾರಿಗೂ ಉತ್ತರದಾಯಿಯಲ್ಲ. ಒಮ್ಮೆ ನಿಗದಿ ಪಡಿಸಿದ ಸಮವಸ್ತ್ರವನ್ನು 5 ವರ್ಷ ಬದಲಿಸಬಾರದು. ಬದಲಿಸುವ 1 ವರ್ಷಕ್ಕೆ ಮುನ್ನ ಪೋಷಕರಿಗೆ ನೋಟಿಸ್‌ ನೀಡಬೇಕೆಂಬ ನಿಯಮವಿದೆ. ಹಿಜಬ್‌ ವಿಚಾರದಲ್ಲಿ ನೋಟಿಸ್‌ ನೀಡಬೇಕಿತ್ತು. ಹಿಜಬ್‌ ಧಾರ್ಮಿಕ ಸಂಕೇತವಾದರೆ ಬಿಂದಿ, ಬಳೆ, ನಾಮ ಧಾರ್ಮಿಕ ಚಿಹ್ನಗಳೇ. ಸರ್ಕಾರ ಇವುಗಳಿಗೆ ನಿರ್ಬಂಧ ಹೇರದೇ ಮುಸ್ಲಿಂ ಹೆಣ್ಣು ಮಕ್ಕಳ ಹಿಜಬ್‌ ಅನ್ನೇ ಆಯ್ಕೆ ಮಾಡಿದ್ದು ಯಾಕೆ? ಸರ್ಕಾರ ಪೂರ್ವಗ್ರಹ ಪೀಡಿತವಾಗಿ ಈ ಆದೇಶ ಪ್ರಕಟಿಸಿದೆ.

    ಸರ್ಕಾರದ ವಾದ: ಶಿಕ್ಷಣ ಕಾಯ್ದೆಯ ಸೆಕ್ಷನ್‌ 133ರ ಅಡಿ ಲಭ್ಯ ಇರುವ ಅಧಿಕಾರವನ್ನು ಬಳಸಿ ಫೆ.5 ರಂದು ಆದೇಶ ಹೊರಡಿಸಿದೆ. ಸಮವಸ್ತ್ರ ನಿಗದಿಪಡಿಸುವಂತೆ ಸಿಡಿಸಿಗಳಿಗೆ ನಿರ್ದೇಶಿಸಿದೆ. ಅದರಂತೆ ಸಿಡಿಸಿ ಸಮವಸ್ತ್ರವನ್ನು ನಿಗದಿ ಮಾಡಿದೆ. ವಿದ್ಯಾರ್ಥಿಗಳಲ್ಲಿ ಏಕತೆ, ಸಮಾನತೆ, ಶಿಸ್ತು ಮೂಡಿಸಲು ಸಮವಸ್ತ್ರವನ್ನು ನಿಗದಿ ಮಾಡಲಾಗಿದೆಯೇ ಹೊರತು ಬೇರೆ ಉದ್ದೇಶಕ್ಕಲ್ಲ. ಅರ್ಜಿದಾರರು ಈ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. 2013ರಲ್ಲೇ ಸಮವಸ್ತ್ರ ಕುರಿತು ನಿರ್ಣಯ ಅಂಗೀಕರಿಸಲಾಗಿದ್ದು 2014ರಿಂದಲೂ ಸಿಡಿಸಿ ರಚನೆಯಾಗಿದೆ. ಇಲ್ಲಿಯವರೆಗೆ ಈ ಸಮಿತಿಗಳನ್ನು ಪ್ರಶ್ನೆ ಮಾಡಿಲ್ಲ. ಸಿಡಿಸಿಗಳಿಗೆ ಕಾನೂನಿನ ಮಾನ್ಯತೆ ಇದ್ದು ಇದು ಶಾಸಕರ ಇಚ್ಛೆಯಂತೆ ಕಾರ್ಯ ನಿರ್ವಹಿಸುವುದಿಲ್ಲ.

    ಕೋವಿಡ್‌ 19 ಸಂದರ್ಭದಲ್ಲಿ ದೇವಾಲಯ, ಮಸೀದಿ, ಚರ್ಚ್‌ಗಳನ್ನು ಮುಚ್ಚಲಾಗಿತ್ತು. ಅಲ್ಲಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿತ್ತು. ಆರೋಗ್ಯದ ಕಾರಣಕ್ಕೆ ಸರ್ಕಾರ ಈ ಆದೇಶವನ್ನು ಹೊರಡಿಸಲಾಗಿತ್ತು. ಇದರರ್ಥ ಅಗತ್ಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಚಲಾವಣೆಯನ್ನು ಸರ್ಕಾರ ನಿರ್ಬಂಧಿಸಬಹುದು. ಹೀಗಾಗಿ ಶಾಲಾ, ಕಾಲೇಜುಗಳಲ್ಲಿ ಯಾವುದೇ ಸಂಘರ್ಷ ನಡೆಯದೇ ಇರಲು ಸರ್ಕಾರ ಹಿಜಬ್‌ ನಿಷೇಧಿಸಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಅರ್ಜಿದಾರರು ಆರೋಪಿಸಿರುವಂತೆ ಸಂವಿಧನಾದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಲ್ಲೂ ಉಲ್ಲಂಘನೆಯಾಗಿಲ್ಲ.

    ಹೈಕೋರ್ಟ್‌: ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಆದೇಶ ಪ್ರಕಟಿಸಲು ಸರ್ಕಾರಕ್ಕೆ ಅಧಿಕಾರವಿದೆ. ಧರ್ಮವಸ್ತ್ರಗಳಿಗೆ ಶಾಲೆಗಳಿಗೆ ಅವಕಾಶವಿಲ್ಲ.

  • ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಹೈಕೋರ್ಟ್ ತೀರ್ಪು ಸ್ವಾಗತಾರ್ಹ: ಅಶ್ವತ್ಥನಾರಾಯಣ

    ಬೆಂಗಳೂರು: ವಿದ್ಯಾರ್ಥಿಗಳು ಆಯಾ ಶಾಲಾ-ಕಾಲೇಜುಗಳು ಸೂಚಿಸುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

    ಕೋರ್ಟ್ ತೀರ್ಪು ನೀಡಿದ ನಂತರ ಮಾತನಾಡಿದ ಅವರು, ರಾಜ್ಯ ಹೈಕೋರ್ಟ್ ಸಮವಸ್ತ್ರದ ವಿಚಾರದಲ್ಲಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಇದನ್ನು ಎಲ್ಲ ವಿದ್ಯಾರ್ಥಿಗಳೂ ಗೌರವಿಸಿ, ಪಾಲಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಮಂಗಳವಾರ ಬೆಳಗ್ಗೆ 10:30ಕ್ಕೆ ಹಿಜಬ್‌ ಹೈಕೋರ್ಟ್‌ ತೀರ್ಪು

    ಯಾವುದೇ ಧರ್ಮದ ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳತ್ತ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು. ಈ ಮೂಲಕ ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಬದುಕಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್‌ ಇಸ್ಲಾಂ ಧರ್ಮದ ಅಗತ್ಯದ ಆಚರಣೆ ಅಲ್ಲ: ಹೈಕೋರ್ಟ್‌ ಐತಿಹಾಸಿಕ ತೀರ್ಪು

    ಹಿಂದೆಂದೂ ಶಾಲಾ-ಕಾಲೇಜುಗಳಲ್ಲಿ ಇಂತಹ ವಿವಾದ ಕಂಡುಬಂದಿರಲಿಲ್ಲ. ಕೆಲವು ವಿಚ್ಛಿದ್ರಕಾರಿ ಶಕ್ತಿಗಳು ಬೇಕೆಂದೇ ಈ ವಿವಾದವನ್ನು ಸೃಷ್ಟಿಸಿದ್ದವು. ನ್ಯಾಯಾಲಯವು ಈ ವಿಚಾರವನ್ನು ಆಳವಾಗಿ ಅಧ್ಯಯನ ಮಾಡಿ, ಸರಿಯಾದ ತೀರ್ಪು ನೀಡಿದೆ. ಈ ಮೂಲಕ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣಕ್ಕೆ ಇದು ಒಂದು ಮಹತ್ವದ ತೀರ್ಪು ಆಗಿದೆ ಎಂದು ಸ್ವಾಗತಿಸಿದ್ದಾರೆ.

  • ಇಂದಿನಿಂದ ಹೈಸ್ಕೂಲ್‌ ಆರಂಭ – ಸಮವಸ್ತ್ರದಲ್ಲೇ ಬರಬೇಕು, ಪೊಲೀಸರ ನಿಗಾ

    ಇಂದಿನಿಂದ ಹೈಸ್ಕೂಲ್‌ ಆರಂಭ – ಸಮವಸ್ತ್ರದಲ್ಲೇ ಬರಬೇಕು, ಪೊಲೀಸರ ನಿಗಾ

    ಬೆಂಗಳೂರು: ಹೈಕೋರ್ಟ್ ಆದೇಶದ ಬೆನ್ನಲ್ಲೇ ಇಂದಿನಿಂದ ರಾಜ್ಯಾದ್ಯಂತ ಪ್ರೌಢ ಶಾಲೆಗಳು ಆರಂಭವಾಗುತ್ತಿದೆ. ಶಾಲೆಗಳಿಗೆ ಭದ್ರತೆ ಒದಗಿಸಲಾಗಿದ್ದು, ಮುನ್ನೆಚ್ಚರಿಕೆಯಾಗಿ ಶಾಲೆ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

    ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಶಾಂತಿಯುತವಾಗಿ ಎಲ್ಲಾ ತರಗತಿ ನಡೆಯಲಿದೆ. ಕಾಲೇಜುಗಳ ಆರಂಭದ ಬಗ್ಗೆ ನಿರ್ಧರಿಸುತ್ತೇವೆ ಎಂದಿದ್ದಾರೆ.

    ನಿಯಮ ಏನು?
    ವಿದ್ಯಾರ್ಥಿಗಳು ಸಮವಸ್ತ್ರದಲ್ಲೇ ಶಾಲೆಗೆ ಬರಬೇಕು. ಹಿಜಬ್, ಕೇಸರಿ ಶಾಲು, ನೀಲಿ ಶಾಲು, ಧಾರ್ಮಿಕ ಉಡುಗೆಗಳಿಗೆ ಅವಕಾಶ ಇಲ್ಲ. ಸರ್ಕಾರಿ ಆದೇಶ ಪಾಲಿಸದಿದ್ದರೆ ಶಾಲೆಗೆ ಪ್ರವೇಶ ಇಲ್ಲ. ಶಾಲಾ ಆವರಣದಲ್ಲಿ ಪ್ರತಿಭಟನೆ ನಿಷೇಧಿಸಲಾಗಿದ್ದು, ಸಮವಸ್ತ್ರ ಧರಿಸದಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲು ಅವಕಾಶ ಇಲ್ಲ. ಇದನ್ನೂ ಓದಿ: ಹಿಜಬ್ ಧರಿಸಿದ ಮಹಿಳೆಯೇ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ: ಓವೈಸಿ

    ಪೊಲೀಸರ ನಿಗಾ:
    ಸೂಕ್ಷ್ಮ ಜಿಲ್ಲೆಗಳಲ್ಲಿ ಪರಿಸ್ಥಿತಿಗೆ ಅನುಗುಣವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ನಿಷೇಧಾಜ್ಞೆ ಜಾರಿಗೆ ಎಸ್‍ಪಿಗಳಿಗೆ ಅಧಿಕಾರ ನೀಡಲಾಗಿದೆ. ಗಲಾಟೆ ನಡೆದ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸರ ನಿಯೋಜಿಸಿದ್ದು, ಪರಿಸ್ಥಿತಿ ಕೈ ಮಿರಿದರೆ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಡಿಸಿ, ಎಸ್‍ಪಿಗಳಿಗೆ ನೀಡಲಾಗಿದೆ.

    ಸರ್ಕಾರದ ಆದೇಶ ಪಾಲಿಸಿದ್ದರೆ ದೂರು ದಾಖಲಾಗುತ್ತದೆ. ರಾಷ್ಟ್ರ ಬಾವುಟ ಹಾರಾಡುವ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದ್ದು, ಶಾಲೆಗಳ ಆವರಣದಲ್ಲಿ ಪ್ರತಿಭಟನೆ, ಧರಣಿಗೆ ನಿರ್ಬಂಧ ಹೇರಲಾಗಿದೆ.  ಇದನ್ನೂ ಓದಿ: ಬುರ್ಖಾ ಪದ್ಧತಿ ಇಲ್ಲದೆ ಇರೋದಕ್ಕೇ ದೇಶದಲ್ಲಿ ರೇಪ್ ಹೆಚ್ಚಾಗ್ತಿದೆ: ಜಮೀರ್ ವ್ಯಾಖ್ಯಾನ

    ಯಾವುದೇ ಸಂಘಟನೆಗಳಿಗೆ ಶಾಲೆಯ ಆವರಣಕ್ಕೆ ಪ್ರವೇಶ ಇಲ್ಲ. ಪೋಷಕರು ಹೊರತುಪಡಿಸಿ ಇನ್ಯಾರು ಶಾಲೆ ಆವರಣಕ್ಕೆ ಬರುವಂತೆ ಇಲ್ಲ. ಶಾಲಾ-ಕಾಲೇಜುಗಳ ಸುತ್ತ ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಕೂಡಲೇ ಕ್ರಮ ಜರುಗಿಸಲಾಗುತ್ತದೆ. ಅನುಮಾನಾಸ್ಪದ ಸಂಘಟನೆಗಳ ಮೇಲೆ ನಿಗಾ ಇಡಲು ಸೂಚನೆ ನೀಡಲಾಗಿದೆ.

  • ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

    ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

    ಬೆಂಗಳೂರು: ರಾಜ್ಯದಲ್ಲಿ ಹಿಜಬ್-ಕೇಸರಿ ಫೈಟ್‍ಗೆ ಹೈಕೋರ್ಟ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ. ಇವತ್ತು ಎರಡೂವರೆ ಗಂಟೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠ, ಮುಂದಿನ ಮುಂದಿನ ಆದೇಶ ನೀಡುವವರೆಗೆ ಕಾಲೇಜು ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರ ಬಳಸಬಾರದೆಂದು ಸೂಚನೆ ನೀಡಿದೆ.

    ಇಂದು ಹಿಜಬ್ ವಿವಾದಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನಿಸಾ ಅವರ ತ್ರಿಸದಸ್ಯ ಪೀಠ ಐದು ಅರ್ಜಿಗಳ ವಿಚಾರಣೆ ನಡೆಸಿತು.

    ಹೈಕೋರ್ಟ್ ಸೂಚನೆ ಅನ್ವಯ, ಹಿಜಬ್ ಅಥವಾ ಕೇಸರಿ ಶಾಲುಗಳನ್ನು ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ. ಸದ್ಯಕ್ಕೆ ಯಥಾಸ್ಥಿತಿ ಕಾಪಾಡಲು ಕೋರ್ಟ್ ಸೂಚಿಸಿದ್ದು, ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಹಾಜರಾಗಬೇಕಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆ-ಕಾಲೇಜು ಪುನಾರಂಭ ಮಾಡುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ. ಇದು ಅಂತಿಮ ಆದೇಶವಲ್ಲ ಅಂತ ಕೋರ್ಟ್ ಸ್ಪಷ್ಟಪಡಿಸಿದ್ದು, ಸೋಮವಾರದಿಂದ ಪ್ರತಿನಿತ್ಯ ವಿಚಾರಣೆ ನಡೆಸಿ ಆದೇಶ ನೀಡುವುದಾಗಿಯೂ ತಿಳಿಸಿದೆ. ಇದನ್ನೂ ಓದಿ: ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

    ನ್ಯಾಯಪೀಠದ ಮೌಖಿಕ ಸೂಚನೆಗೆ ಅರ್ಜಿದಾರರ ಪರ ವಕೀಲ ದೇವದತ್‌ ಕಾಮತ್ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ನ್ಯಾಯಪೀಠ, ಈ ವಿವಾದ ಇತ್ಯರ್ಥ ಆಗಬೇಕು ಎಂದಿದ್ದರೆ ನಮಗೆ ಸಹಕರಿಸಿ. ಸೋಮವಾರದ ವಿಚಾರಣೆ ವೇಳೆ ನಿಮ್ಮ ಆಕ್ಷೇಪಗಳನ್ನು ದಾಖಲಿಸಿ ಎಂದು ಹೇಳಿತು.

    ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿತ್ತು. ಮುಖ್ಯ ನ್ಯಾಯಮೂರ್ತಿಗಳು ಪರಿಸ್ಥಿತಿ ಅರಿತು ಕೂಡಲೇ ತಮ್ಮನ್ನು ಒಳಗೊಂಡಂತೆ ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠವನ್ನು ರಚಿಸಿದ್ದರು.

    ಮೌಖಿಕ ಸೂಚನೆ ಏನು?
    ಸದ್ಯಕ್ಕೆ ಶಾಲೆ ಕಾಲೇಜು ಆರಂಭವಾಗಲಿ. ಆದರೇ ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರ ಧರಿಸಿ ತರಗತಿಗೆ ಹಾಜರಾಗುಂತಿಲ್ಲ. ಕೇಸರಿ ಶಾಲು, ಹೆಡ್ ಸ್ಕಾರ್ಫ್, ಇನ್ನಿತರೇ ಧಾರ್ಮಿಕ ಅಸ್ತ್ರ ಧರಿಸಬಾರದು.

    ಯಾರೂ ಕೂಡ ಧಾರ್ಮಿಕತೆ ಬಿಂಬಿಸುವ ವಸ್ತ್ರ ಧರಿಸುತ್ತೇವೆ ಎಂದು ಪಟ್ಟು ಹಿಡಿಯುವಂತಿಲ್ಲ. ನಾವು ಎರಡು ಕಡೆಯವರಿಗೂ ಈ ಸೂಚನೆ ನೀಡುತ್ತಿದ್ದೇವೆ. ನಮಗೆ ಶಾಂತಿ ಸೌಹಾರ್ದತೆ ಕಾಪಾಡುವುದು ಮುಖ್ಯ. ಆದಷ್ಟು ಬೇಗ ನಾವು ಈ ಪ್ರಕರಣವನ್ನು ಇತ್ಯರ್ಥ ಮಾಡುತ್ತೇವೆ. ವಿಚಾರಣೆ ನಡೆಯುವಾಗ ಶಿಕ್ಷಣ ಸಂಸ್ಥೆಗಳಿಗೆ ಧಾರ್ಮಿಕ ಉಡುಪು ಧರಿಸಲು ನಿರ್ಬಂಧ ವಿಧಿಸುತ್ತಿದ್ದೇವೆ. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

    ವಕೀಲ ದೇವದತ್ ಕಾಮತ್, ಸಂಜಯ್ ಹೆಗ್ಡೆ ವಾದ ಏನಿತ್ತು?
    ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಸಮವಸ್ತ್ರ ಕಡ್ಡಾಯ ಅಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಸಮವಸ್ತ್ರ ಇರಬೇಕು. ಕಾಲೇಜಿಗೆ ಅಗತ್ಯವಿಲ್ಲ. 2 ವರ್ಷದಿಂದ ನಮ್ಮ ವಿದ್ಯಾರ್ಥಿಗಳು ಹಿಜಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿನಲ್ಲಿ ಸಮವಸ್ತ್ರ ಎನ್ನುವುದು ಇತ್ತೀಚಿನ ಬೆಳವಣಿಗೆ ಅಷ್ಟೇ.

    ವಿವಾದ ಆದ ಮೇಲೆ ಸರ್ಕಾರ ಆದೇಶ ಹೊರಡಿಸಿದೆ.ಇದರ ಉದ್ದೇಶ ಏನು? ಆದೇಶದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಸರ್ಕಾರ ಕೋರ್ಟ್ ಆದೇಶ ಉಲ್ಲೇಖಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮನವಿ ಇಷ್ಟೇ. ಸರ್ಕಾರಕ್ಕೆ ಆದೇಶ ಮಾಡುವ ಅಧಿಕಾರ ಇಲ್ಲ. ತಮಿಳುನಾಡು ಶಿಕ್ಷಣ ಕಾಯ್ದೆಯನ್ನು ಇಲ್ಲಿಗೆ ತರುವ ಪ್ರಯತ್ನ ನಡೆದಿದೆ ಎಂದು ಉತ್ತರಿಸಿದರು.

    ಈ ವಿವಾದ ಶುರುವಾದ ಮೇಲೆ ಶಾಲು ಹಾಕೋಕೆ ಶುರು ಮಾಡಿದ್ದಾರೆ. ಮಕ್ಕಳು ಸಮವಸ್ತ್ರ ಬಣ್ಣದ ಹಿಜಬ್ ಧರಿಸುತ್ತಿದ್ದಾರೆ. ಇದರಿಂದ ಯಾರಿಗೂ ತೊಂದರೆ ಇಲ್ಲ. ಆದರೂ, ಕಳೆದ ವಾರದಿಂದ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಬಿಟ್ಟುಕೊಳ್ಳುತ್ತಿಲ್ಲ. ನಮಗೆ ಆ ಮಕ್ಕಳ ಹೋರಾಟ ನೋಡಲು ಆಗುತ್ತಿಲ್ಲ. ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಮಧ್ಯಂತರ ಆದೇಶ ನೀಡಿ ಎಂದು ಮನವಿ ಮಾಡಿದರು.

  • ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆ ಸೂಚಿಸಿರುವ ಡ್ರೆಸ್ ಕೋಡ್ ಅನುಸರಿಸಬೇಕು: ಪ್ರಹ್ಲಾದ್ ಜೋಶಿ

    ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆ ಸೂಚಿಸಿರುವ ಡ್ರೆಸ್ ಕೋಡ್ ಅನುಸರಿಸಬೇಕು: ಪ್ರಹ್ಲಾದ್ ಜೋಶಿ

    ನವದೆಹಲಿ: ಕೆಲವು ದಿನಗಳಿಂದ ಕರ್ನಾಟಕದಲ್ಲಿ ನಡೆಯುತ್ತಿರುವ ‘ಹಿಜಬ್’ ವಿವಾದ ನಡುವೆ, ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ಶಾಲೆಗಳು ಅಥವಾ ಆಡಳಿತ ಮಂಡಳಿಯು ಸೂಚಿಸುವ ಡ್ರೆಸ್ ಕೋಡ್ ಮಾತ್ರ ಅನುಸರಿಸಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

    ಎಲ್ಲಾ ವಿದ್ಯಾರ್ಥಿಗಳು ಶಾಲೆಗಳು ಅಥವಾ ಆಡಳಿತ ಮಂಡಳಿ ಸೂಚಿಸಿದ ಡ್ರೆಸ್ ಕೋಡ್ ಅನುಸರಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಇನ್ನೂ ಈ ವಿಚಾರವಾಗಿ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿರುವವರು ಯಾರು ಎಂಬುದನ್ನು ಕಂಡು ಹಿಡಿಯಬೇಕು ಎಂದಿದ್ದಾರೆ. ಇದನ್ನೂ ಓದಿ: ಕೇಸರಿ ಪೇಟ, ಕೇಸರಿ ಶಾಲಿನೊಂದಿಗೆ ಕಾಲೇಜಿಗೆ ಬಂದ ಎಂಜಿಎಂ ವಿದ್ಯಾರ್ಥಿಗಳು!

    ಫೆಬ್ರವರಿ 4 ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಹಿಜಬ್ ಪ್ರತಿಭಟನೆ ಪ್ರಾರಂಭವಾಯಿತು. ಕೆಲವು ವಿದ್ಯಾರ್ಥಿಗಳು ಹಿಜಾಬ್ (ಮುಸ್ಲಿಂ ಮಹಿಳೆಯರು ಧರಿಸುವ ಸ್ಕಾರ್ಫ್) ಧರಿಸಿ ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದ್ದರು. ನಂತರ ಸೋಮವಾರ ವಿಜಯಪುರದ ಶಾಂತೇಶ್ವರ ಶಿಕ್ಷಣ ಟ್ರಸ್ಟ್‌ಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

    ಹೀಗಾಗಿ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿ ಅನುಮೋದಿಸಿದ ಸಮವಸ್ತ್ರವನ್ನು ಮಾತ್ರ ಧರಿಸಬಹುದಾಗಿದ್ದು, ಕಾಲೇಜುಗಳಲ್ಲಿ ಇತರೆ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿತು. ಇದರಿಂದ ಪ್ರತಿಭಟನೆಯ ಕಾವು ಹೆಚ್ಚಾದ್ದರಿಂದ ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ) ಅಡಿಯಲ್ಲಿರುವ ಕಾಲೇಜುಗಳಿಗೆ ಫೆಬ್ರವರಿ 9 ರಿಂದ 11 ರವರೆಗೆ ಮೂರು ದಿನಗಳ ರಜೆ ಘೋಷಿಸಲಾಗಿದೆ.

  • ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ

    ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಪ್ರತಾಪ್ ಸಿಂಹ

    ಮಡಿಕೇರಿ: ಹಿಜಬ್-ಷರಿಯತ್ತೇ ಮುಖ್ಯ ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಕೊಡಗು, ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಅವರು, 1947 ರಲ್ಲೇ ಭಾರತವನ್ನು ವಿಭಾಗ ಮಾಡಲಾಗಿದೆ. ಶಾಲಾ ಕಾಲೇಜಿನಲ್ಲಿ ಸಮವಸ್ತ್ರ ಮಾಡಿರುವುದು ಏಕೆ? ಧರ್ಮ ಜಾತಿಗಳ ಭೇದವಿಲ್ಲದೇ, ಭ್ರಾತೃತ್ವದಿಂದ ಕಲಿಯಲು ಸಮವಸ್ತ್ರ ಮಾಡಲಾಗಿದೆ. ಶಿಕ್ಷಣ ನೀತಿ ನಿಯಮಗಳ ಆಧಾರದಲ್ಲಿ ಸಮವಸ್ತ್ರ ಮಾಡಲಾಗಿದೆ. ಆದರೆ ನೀವು ಹಿಜಬ್ ಆದರೂ ಹಾಕಿ, ಪೈಜಾಮ ಆದರೂ ಹಾಕಿ ಟೋಪಿಯನ್ನಾದರೂ ಹಾಕಿ ಅವುಗಳನ್ನು ಹಾಕಿಕೊಂಡು ಮದರಸಾಗಳಿಗೆ ಹೋಗಿ ಕಲಿಯಿರಿ ಎಂದಿದ್ದಾರೆ.

    ಎಲ್ಲರೂ ಕಾಲೇಜಿಗೆ ಹೋಗಿ ಕಲಿಯುವುದು ಉದ್ಯೋಗಕ್ಕಾಗಿ ಆದರೆ, ನೀವು ಹಿಜಬ್‍ಗಾಗಿ ಕಾಲೇಜಿಗೆ ಹೋಗಿ ಕಲಿಯುತ್ತೀರಾ. ಅಲ್ಲದೇ ನಮ್ಮ ಸರ್ಕಾರಿ ಖಾಸಗಿ ಶಾಲೆಗಳಲ್ಲಿ ಸರಸ್ವತಿ ಪೂಜೆ, ಗಣೇಶ ಪೂಜೆ ಮಾಡುವುದನ್ನು ಪ್ರಶ್ನಿಸಲು ಇವರು ಯಾರು? ಎಂದು ಕಿಡಿಕಾಡಿದ್ದಾರೆ. ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಬಿಜೆಪಿ – ಕಾಂಗ್ರೆಸ್ ನೇರ ಪೈಪೋಟಿ: ರಾಹುಲ್ ಗಾಂಧಿ

    ಭಾರತದ ಬುನಾದಿಯೇ ಹಿಂದೂ ಧರ್ಮ. ಇದು ಒಂದು ಜೀವನ ಪದ್ಧತಿ ಎಂದು ಸಂವಿಧಾನವೇ ಹೇಳಿದೆ. ಹೀಗಾಗಿ ಗಣೇಶ, ಸರಸ್ವತಿ ಪೂಜೆ ಮಾಡುವುದು ನಮ್ಮ ಹಕ್ಕು. ನಮ್ಮ ಹಕ್ಕನ್ನು ನಾವು ಪಾಲಿಸುತ್ತೇವೆ. ಅದನ್ನು ಯಾರು ಕೇಳಬೇಕಾಗಿಲ್ಲ. ನಾವು ಮೆಕ್ಕಾ, ಮದೀನಾ ಅಥವಾ ಜೆರಸಲೇಮ್‍ಗೆ ಹೋಗಿ ಗಣೇಶ ಸರಸ್ವತಿ ಪೂಜಿಸುತ್ತಿಲ್ಲ ಎಂದು ಆಕ್ರೋಶ ವ್ಯಕಪಡಿಸಿದ್ದಾರೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ

  • ಸಮವಸ್ತ್ರದ ಆದೇಶ ಪಾಲಿಸದಿದ್ದರೆ ಕಾಲೇಜಿನಿಂದಲೇ ಡಿಬಾರ್

    ಸಮವಸ್ತ್ರದ ಆದೇಶ ಪಾಲಿಸದಿದ್ದರೆ ಕಾಲೇಜಿನಿಂದಲೇ ಡಿಬಾರ್

    ಉಡುಪಿ: ಸರ್ಕಾರದ ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿಗಳನ್ನು ಡಿಬಾರ್ ಮಾಡುತ್ತೇವೆ ಎಂದು ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಕಾಲೇಜಿನಲ್ಲಿ ಮೂವತ್ತು ವರ್ಷಗಳಿಂದ ಯಾವುದೇ ತಾರತಮ್ಯ ಮಾಡಿಲ್ಲ. ಆದರೆ ಸರ್ಕಾರದ ನಿಯಮ ಪಾಲಿಸದಿದ್ದರೆ ವಿದ್ಯಾರ್ಥಿಗಳನ್ನು ಡಿಬಾರ್ ಮಾಡುತ್ತೇವೆ. ನಮಗೂ ಪ್ರತಿರೋಧ ಒಡ್ಡಲು ಗೊತ್ತಿದೆ ಎಂದು ಆರು ಜನ ವಿದ್ಯಾರ್ಥಿಗಳು ಸಾವಿರಾರು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇದನ್ನೂ ಓದಿ: ನಿಮಗೆ ಪ್ರವೇಶವಿಲ್ಲ – ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟ್‍ನಲ್ಲೇ ತಡೆದ ಪ್ರಿನ್ಸಿಪಾಲ್

     

    ಸರ್ಕಾರದ ಆದೇಶದಲ್ಲಿ ಯಾವುದೇ ರಾಜಿ ಇಲ್ಲ. ಆಡಳಿತ ಮಂಡಳಿಯ ಸದಸ್ಯನಾಗಿ ಈವರೆಗೆ ಚರ್ಚೆ ಮಾಡಿದ್ದೇನೆ. ಶೈಕ್ಷಣಿಕವಾಗಿ ಕೊರತೆಯಿದ್ದರೆ ನೀಗಿಸುತ್ತೇವೆ. ಮುಂದಿನ ದಿನದಲ್ಲಿ ಡಿಬಾರ್ ಮಾಡುವ ಕೆಲಸ ನೂರಕ್ಕೆ ನೂರು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‌ ಕೈಬಿಡಲು ಒಪ್ಪದ ಪೋಷಕರು – ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು!

  • ಸಮವಸ್ತ್ರದಲ್ಲಿ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ: ರಘುಪತಿ ಭಟ್ ಎಚ್ಚರಿಕೆ

    ಸಮವಸ್ತ್ರದಲ್ಲಿ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶ: ರಘುಪತಿ ಭಟ್ ಎಚ್ಚರಿಕೆ

    ಉಡುಪಿ: ಸಮವಸ್ತ್ರದಲ್ಲಿ ಎಲ್ಲ ವಿದ್ಯಾರ್ಥಿಗಳಂತೆ ಕಾಲೇಜಿಗೆ ಬರಲು ನಾಳೆ ಒಂದು ದಿನ ಅವಕಾಶವಿದೆ. ಅದು ತಪ್ಪಿದರೆ ಯಾವುದೇ ಕಾರಣಕ್ಕೂ ಕಾಲೇಜಿಗೆ ಬರುವ ಅವಕಾಶ ಇಲ್ಲ ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಕೆ ನೀಡಿದ್ದಾರೆ.

    ಉಡುಪಿಯ ಮಹಿಳಾ ಸರ್ಕಾರಿ ಪಿಯು ಕಾಲೇಜಿನ ಐವರು ವಿದ್ಯಾರ್ಥಿನೀಯರು ಹಿಜಬ್‍ಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಸಭೆ ನಡೆಸಲಾಯಿತು. ಶಾಸಕ ರಘುಪತಿ ನೇತೃತ್ವದಲ್ಲಿ ಕಾಲೇಜಿನಲ್ಲಿ ಮೀಟಿಂಗ್ ನಡೆದಿದ್ದು, ಈ ವೇಳೆ ವಿದ್ಯಾರ್ಥಿನಿಯರು ಅವರ ಪೋಷಕರು ಕಾಲೇಜಿನ ಆಡಳಿತ ಮಂಡಳಿ ಡಿಡಿಪಿಯು ಭಾಗಿಯಾದರು. ಇದನ್ನೂ ಓದಿ: ಆರ್ಥಿಕ ಲಾಭಕ್ಕಾಗಿ ಮದ್ಯ ಮಾರಾಟಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ: ಅಣ್ಣಾ ಹಜಾರೆ

    ಐವರು ಹಿಜಬ್ ಹೋರಾಟಗಾರ್ತಿಯರ ಪೈಕಿ ನಾಲ್ವರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಹಂತದಲ್ಲಿ ಹಿಜಬ್ ಗೆ ಅನುಮತಿ ಕೊಡಲು ಸಾಧ್ಯವಿಲ್ಲ. ಸರ್ಕಾರ, ಸಮಿತಿ ತೀರ್ಮಾನ ಮಾಡಿದಂತೆ ಸಮವಸ್ತ್ರದಲ್ಲಿ ಕಾಲೇಜಿಗೆ ಬರಬೇಕು ಎಂದು ಎಲ್ಲ ವಿಚಾರಗಳನ್ನು ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿದೆ. ತರಗತಿಯಲ್ಲಿ ಹಿಜಬ್ ಧರಿಸಿ ಪಾಠ ಕೇಳುವ ಅವಕಾಶವಿಲ್ಲ. ಮನೆಯ ಪುರುಷರ ಜೊತೆ ಮಾತನಾಡಿ, ಇಂದು ತೀರ್ಮಾನ ತೆಗೆದುಕೊಳ್ಳುವುದಾಗಿ ಪೋಷಕರು ಹೇಳಿದ್ದಾರೆ.

    ಹಿಜಬ್ ತೆಗೆದು ಕ್ಲಾಸಿಗೆ ಬರುವುದಾದರೆ ನಾಳೆಯಿಂದ ಬನ್ನಿ. ನಾಳೆಯಿಂದ ಯಾವುದೇ ಕಾಲೇಜು ಆವರಣದಲ್ಲಿ ಗೊಂದಲ ನಿರ್ಮಾಣಕ್ಕೆ ಅವಕಾಶವಿಲ್ಲ. ಮಾಧ್ಯಮ, ಸಂಘಸಂಸ್ಥೆ, ಸಂಘಟನೆಗೆ ಪ್ರವೇಶ ಇಲ್ಲ. ಎರಡು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗಲಿದೆ. ಕಾಲೇಜಿನ ಬೇರೆ ಮಕ್ಕಳು ಮತ್ತು ಪೋಷಕರಿಂದ ದೂರುಗಳು ಬಂದಿವೆ. ಮನವಿ ಕೊಡುವುದಿದ್ದರೆ ಕಾಲೇಜಿಗೆ, ಡಿಸಿಗೆ ಕೊಡಿ. ಹೊರಗಿನಿಂದ ಯಾರೂ ಕಾಲೇಜ್ ಕ್ಯಾಂಪಸ್ ಗೆ ಬರುವಂತಿಲ್ಲ. ಶಿಸ್ತು ಪಾಲಿಸುವವರು ಕಾಲೇಜಿಗೆ ಬರಬಹುದು ಇನ್ನು ಗೊಂದಲಕ್ಕೆ ಅವಕಾಶವಿಲ್ಲ ಎಂದು ಖಡಕ್ ಆಗಿ ಹೇಳಿದರು. ಇದನ್ನೂ ಓದಿ: ಡಿಕೆಶಿಯನ್ನು ಸಿಎಂ ಮಾಡಲು ಸಿದ್ದರಾಮಯ್ಯ ಬಿಡುತ್ತಾರೆಯೇ: ನಲಪಾಡ್‍ಗೆ ಬಿಜೆಪಿ ಗುದ್ದು