Tag: ಸಮಲತಾ

  • ಸಂಸದರಾಗಿ ಏನು ಮಾಡಬೇಕೆಂಬ ಜವಾಬ್ದಾರಿ ಇಲ್ಲ – ಸಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಸಂಸದರಾಗಿ ಏನು ಮಾಡಬೇಕೆಂಬ ಜವಾಬ್ದಾರಿ ಇಲ್ಲ – ಸಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಮಂಡ್ಯ: ಸಂಸದರಾಗಿ ನಿಮಗೆ ಏನು ಮಾಡಬೇಕು ಎಂಬ ಜವಾಬ್ದಾರಿ ಇಲ್ಲ ಎಂದು ಸಂಸದೆ ಸಮಲತಾ ಅಂಬರೀಶ್ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

    ಶಾಸಕರ ಕೆಲಸವನ್ನು ನಾನೇ ಮಾಡುತ್ತಿದ್ದೇನೆ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ಸಂಸದರಾಗಿ ಏನು ಮಾಡಬೇಕು ಎಂಬ ಜವಬ್ದಾರಿಯ ಅರಿವಿಲ್ಲ. ಶಾಸಕರಿಗೆ ಸಂಸದರಿಗೆ ಸಾಮಾನ್ಯವಾಗಿ ಅನುದಾನ ಬರುತ್ತದೆ. ಅದನ್ನು ಬಿಟ್ಟು ಬೇರೆ ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಾ ಮೊದಲು ಹೇಳಿ. ನಾನು ಅನುದಾನ ತಂದಿದ್ದೇನೆ. ಬೇಕು ಅಂದರೆ ಲೆಕ್ಕ ಕೊಡುತ್ತೇನೆ. ಆದರೆ ನೀವೇನು ಅನುದಾನ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ರೈಲ್ವೆ ಯೋಜನೆಗೆ ದಕ್ಷಿಣ ಭಾರತಕ್ಕೆ 55 ಕೋಟಿ ಬಿಡುಗಡೆಯಾಗಿದೆ. ಉತ್ತರ ಭಾರತಕ್ಕೆ 13 ಸಾವಿರ ಕೋಟಿ ಬಿಡುಗಡೆಯಾಗಿದೆ. ಸಂಸದರಾಗಿ ನೀವು ಏನು ಮಾಡುತ್ತಿದ್ದೀರಾ? ಇವರಿಗೆ ಇವರ ಜವಾಬ್ದಾರಿಯ ಅರಿವಿಲ್ಲ. ಕೆ.ಆರ್. ನಗರದಲ್ಲಿ ಸ್ಟೇಟ್ ಫಂಡ್ ಕಾಮಗಾರಿಗೆ ಪೂಜೆ ಮಾಡುವುಕ್ಕೆ ಹೋಗುತ್ತಾರೆ. ಅದರಲ್ಲೂ ಎಂಎಲ್‍ಎ ಬಿಟ್ಟು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೆಳೆಯನ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್

    ಮಂಡ್ಯ ಜಿಲ್ಲೆಗೆ ಸಂಸದರು ಏನು ಕೊಡುಗೆ ಕೊಡುತ್ತಾರೆ ಅಂತ ಜನ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಗೆ ಜನರು ಉತ್ತರ ಕೊಡುತ್ತಾರೆ. ಈಗ ಭ್ರಮ ಲೋಕದಲ್ಲಿ ಇರುವಂತೆ ಕಾಣುತ್ತಾರೆ. ಮಂಡ್ಯ ಜಿಲ್ಲೆಗೆ ಏನಾದರೂ ಅಭಿವೃದ್ಧಿ ಮಾಡಿ. ಸಮುದಾಯ ಭವನಕ್ಕೆ ಕೊಟ್ಟಿದ್ದೇನೆ ಅಂತಾರೆ. ಯಾರೇ ಮೆಂಬರ್ ಆದರೂ ಎಂಪಿ ಫಂಡ್ ಬರುತ್ತದೆ.ಸಚಿವರಿಗೆ ಲೆಟರ್ ಕೊಟ್ಟು ಫೇಸ್ ಬುಕ್ ವಾಟ್ಸ್ ಆಫ್‍ನಲ್ಲಿ ಫೋಟೋ ಹಾಕಿಸಿಕೊಳ್ಳುತ್ತಾರೆ. ಅದನ್ನು ಬಿಟ್ಟು ಏನಾದರೂ ಹೊಸ ಯೋಜನೆ ತಂದಿದ್ದೇನೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲಿ ಎಂದಿದ್ದಾರೆ.

    ನೀವು ಗೆದ್ದಿದ್ದು ಅಂಬರೀಶ್ ಹೆಂಡತಿ, ಅಂಬರೀಶ್ ಅವರು ಅಕಾಲಿಕವಾಗಿ ಮರಣಹೊಂದಿದರು ಎನ್ನುವ ಗೌರವಾರ್ಥದಲ್ಲಿ ಜನರು ಗೆಲ್ಲಿಸಿದ್ದಾರೆ. ಇದು ಎಲ್ಲಾ ಟೈಂನಲ್ಲಿಯೂ ನಡೆಯುವುದಿಲ್ಲ. ಅಂಬರೀಶ್ ಅವರು 25 ವರ್ಷ ಎಂಪಿಯಾಗಿ ಅನುಭವಿಸಿದ್ದಾರೆ. ಆದರೆ ಮಂಡ್ಯ ಇದ್ದಂತೆಯೇ ಇದೆ. ಆದರೆ ಪಕ್ಕದಲ್ಲಿರುವ ಹಾಸನ ಜಿಲ್ಲೆ ಅಭಿವೃದ್ಧಿಯಾಗಿದೆ. ಈಗಲಾದರೂ ಹೆಚ್ಚೆತ್ತು ಹೋರಾಟ ಮಾಡಿ ವಿಶೇಷ ಅನುದಾನ ತೆಗೆದುಕೊಂಡು ಬನ್ನಿ. ಜನರಿಗೆ ಗೊಂದಲ ಸೃಷ್ಟಿ ಮಾಡಿ. ಮುಗ್ದ ಜನರು ಹೊಡೆದಾಡುವಂತೆ ಮಾಡಬೇಡಿ ಎಂದು ಹರಿಹಾಯ್ದಿದ್ದಾರೆ.

  • ಡ್ಯಾಮೇಜ್ ಕಂಟ್ರೋಲ್ – ಕಾಂಗ್ರೆಸ್ ಕಚೇರಿಗೆ ಸುಮಲತಾ ಭೇಟಿ

    ಡ್ಯಾಮೇಜ್ ಕಂಟ್ರೋಲ್ – ಕಾಂಗ್ರೆಸ್ ಕಚೇರಿಗೆ ಸುಮಲತಾ ಭೇಟಿ

    – ನನ್ನ ವಿರುದ್ಧ ಗಾಸಿಪ್ ಹರಿದಾಡುತ್ತಿವೆ
    – ಜೆಡಿಎಸ್‍ನವರು ನನಗೆ ಮತ ಹಾಕಿದ್ದಾರೆ

    ಮಂಡ್ಯ: ಮಂಗಳವಾರ ಬಿಜೆಪಿ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಜಿಲ್ಲೆಯ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಸಂಸದೆ ಸುಮಲತಾ ಅವರು ಇಂದು ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಹಾಜರಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಿದ್ದಾರೆ.

    ಇಂದು ನಾಗಮಂಗಲ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಬಿಜೆಪಿ ಆಫೀಸ್‍ನಿಂದ ಆಹ್ವಾನ ಬಂದಿತ್ತು. ಥ್ಯಾಂಕ್ಸ್ ಹೇಳಬೇಕಾಗಿದ್ದರಿಂದ ನಾನು ಹೋಗಿದ್ದೆ. ಇವತ್ತು ಕಾಂಗ್ರೆಸ್ ಮುಖಂಡರು ಕರೆದಿದ್ದ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿ ನಾನು ಕಾಂಗ್ರೆಸ್ ಕಾರ್ಯಕರ್ತರಿಗೆ ಥ್ಯಾಂಕ್ಸ್ ಹೇಳಿದ್ದೇನೆ. ನಾನು ಪಕ್ಷೇತರ ಸಂಸದೆಯಾಗಿದ್ದು ನಾನು ಎಲ್ಲಿಗೆ ಹೋಗಬೇಕು ಅನ್ನೋದು ಗೊತ್ತು ಎಂದು ಹೇಳಿದರು.

    ನನ್ನಲ್ಲಿ ಹಾಗೂ ನನ್ನ ಉದ್ದೇಶದಲ್ಲಿ ಯಾವುದೇ ದುರುದ್ದೇಶವಿಲ್ಲ. ಪ್ರತಿಯೊಬ್ಬರ ಅಭಿಪ್ರಾಯಗಳಿಗೆ ಉತ್ತರ ಕೊಡಲು ಆಗುವುದಿಲ್ಲ. ಹೀಗಾಗಿ ನನ್ನ ವಿರುದ್ಧ ಗಾಸಿಪ್ ಗಳು ಹರಿದಾಡುತ್ತಿವೆ. ಪಕ್ಷದ ವಿರುದ್ಧ ನಿಂತು ನನ್ನ ಪರ ಕೆಲಸ ಮಾಡಿದವರಿಗೆ ನಾನು ವೇದಿಕೆಯ ಮೇಲೆ ಕರೆದು ಥ್ಯಾಂಕ್ಸ್ ಹೇಳಿದ್ದೇನೆ. ಅಂಬರೀಶ್ ಅವರನ್ನು ಪ್ರೀತಿಸುತ್ತಿದ್ದವರು, ಸ್ವಾಭಿಮಾನ ಇದ್ದವರು ನನಗೆ ಮತ ಹಾಕಿದ್ದಾರೆ. ಜೆಡಿಎಸ್ ಮತದಾರರು ನನಗೆ ಮತ ಹಾಕಿದ್ದಾರೆ. ಜೆಡಿಎಸ್ ಆಫೀಸ್‍ಗೆ ನನ್ನನ್ನು ಕರೆದರೂ ನಾನು ಹೋಗುತ್ತೇನೆ. ಅವರಿಗೂ ನಾನು ಥ್ಯಾಂಕ್ಸ್ ಹೇಳುತ್ತೇನೆ ಎಂದರು. ಇದನ್ನು ಓದಿ: ಮಂಡ್ಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಮಲತಾ ಭಾಗಿ

    ಪಕ್ಷೇತರ ಎಂಪಿ ಆಗಿರಬೇಕು ಎನ್ನುವುದನ್ನು ಜನರೇ ನಿರ್ಧಾರ ಮಾಡಿದ್ದಾರೆ. ಅಮಿತ್ ಶಾ ಭೇಟಿ ಮಾಡಿದಾಗ ಅವರು ನಮ್ಮ ಸಹಕಾರವಿದೆ ಎಂದು ಹೇಳಿದ್ದಾರೆ. ಅವರು ಕೂಡ ನನ್ನಿಂದ ಯಾವುದೇ ನಿರೀಕ್ಷೆ ಇಟ್ಟಿಲ್ಲ. ಚುನಾವಣೆಯಲ್ಲಿ ನನಗೆ ಸಹಾಯ ಮಾಡಿದ್ದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು. ಇದಕ್ಕಾಗಿ ನಾನು ಕಾಂಗ್ರೆಸ್‍ಗೆ ಋಣಿಯಾಗಿರುತ್ತೇನೆ. ನಾನು ಯಾವುದೇ ಪಕ್ಷ ಸೇರಿದರೂ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆಯಲ್ಲ ಎಂದು ಸ್ಪಷ್ಟಪಡಿಸಿದರು.

    ನನಗೆ ಯಾರು ಹೈಕಮಾಂಡ್ ಇಲ್ಲ. ನನಗೆ ಜನರೇ ಹೈಕಮಾಂಡ್. ನಾನು ಉಪಚುನಾವಣೆಯಲ್ಲಿ ತಟಸ್ಥವಾಗಿ ಇರಬಹುದು. ಕೆಲವರು ಪ್ರಚಾರ ಸಿಗುತ್ತದೆ ಎನ್ನುವ ಕಾರಣಕ್ಕೆ ನನ್ನ ಹೆಸರು ಬಳಸುತ್ತಿದ್ದಾರೆ ಎಂದು ಅಸಮಾಧಾನವನ್ನು ಹೊರ ಹಾಕಿದರು.

  • ದೇವೇಗೌಡರಿಗೆ ಶುಭಕೋರಿದ ಸುಮಲತಾ ಅಂಬರೀಶ್

    ದೇವೇಗೌಡರಿಗೆ ಶುಭಕೋರಿದ ಸುಮಲತಾ ಅಂಬರೀಶ್

    ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಸುಮಲತಾ ಅಂಬರೀಶ್ ಅವರು ಶುಭಾಶಯ ಕೋರಿದ್ದಾರೆ.

    ಸುಮಲತಾ ಅವರು ಟ್ವೀಟ್ ಮಾಡುವ ಮೂಲಕ ದೇವೇಗೌಡರಿಗೆ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. “ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ಸೇರಿದಂತೆ ಅನೇಕರು ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ. “ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಚರಾದ ಎಚ್.ಡಿ. ದೇವೇಗೌಡ ಅವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ರೈತರು, ಗ್ರಾಮ ಭಾರತದ ಬಗೆಗಿನ ಅವರ ಕಾಳಜಿ ಹಾಗೂ ಇಳಿವಯಸ್ಸಿನಲ್ಲಿಯೂ ದಣಿವರಿಯದ ಹೋರಾಟದ ಕೆಚ್ಚು ನನಗೆ ಸದಾ ಪ್ರೇರಣೆ. ಅವರಿಗೆ ಆರೋಗ್ಯ, ಆಯುಷ್ಯವನ್ನು ಹಾರೈಸುತ್ತೇನೆ” ಎಂದು ಸಿದ್ದರಾಮಯ್ಯ ಶುಭ ಕೋರಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರು ಇಂದು 87ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬಂದಿದ್ದಾರೆ. ಅಲ್ಲಿಂದ ವಾಪಸ್ಸಾದ ಬಳಿಕ ಮನೆಯಲ್ಲಿ ಸತ್ಯನಾರಾಯಣಸ್ವಾಮಿ ಪೂಜೆಯನ್ನು ಮಾಡಿಸಿದ್ದಾರೆ.

  • ಇಂದು ಮಂಡ್ಯದಲ್ಲಿ ತಮ್ಮ ನಿರ್ಧಾರ ಪ್ರಕಟಿಸ್ತಾರಾ ಸುಮಲತಾ..?

    ಇಂದು ಮಂಡ್ಯದಲ್ಲಿ ತಮ್ಮ ನಿರ್ಧಾರ ಪ್ರಕಟಿಸ್ತಾರಾ ಸುಮಲತಾ..?

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಸುಮಲತಾ ಅಂಬರೀಶ್ ಅವರು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.

    ಮಂಗಳವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಲತಾ ಅವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ಸುಮಲತಾ ಅವರು ಇಂದು ಸ್ವತಂತ್ರವಾಗಿ ಸ್ಪರ್ಧೆ ಮಾಡೋ ಬಗೆಗೆ ಅಧಿಕೃತವಾಗಿ ಪ್ರಕಟ ಮಾಡೋ ಸಾಧ್ಯತೆಗಳಿವೆ ಎಂಬುದಾಗಿ ಮೂಲಗಳು ತಿಳಿಸಿವೆ.

    ಆರಂಭದಿಂದಲೂ ಕಾಂಗ್ರೆಸ್ ಪಕ್ಷ ನನ್ನ ಆದ್ಯತೆ. ಹೀಗಾಗಿ ಟಿಕೆಟ್ ಕೇಳಿದ್ದೀನಿ ಮೊದಲು ಪಕ್ಷದ ನಿರ್ಧಾರ ಏನೆಂದು ಹೇಳಲಿ ನಂತರ ನನ್ನ ನಿರ್ಧಾರ ಏನೆಂದು ಹೇಳ್ತಿನಿ ಎಂದು ಸುಮಲತಾ ಹೇಳಿದ್ದರು. ಆದ್ರೆ ಮಂಗಳವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜೆಡಿಎಸ್ ಗೆ ಬಿಟ್ಟುಕೊಡಬೇಕಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಂದ ಸುಮಲತಾ ಅವರಿಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ. ಸ್ವತಂತ್ರವಾಗಿ ನಿಲ್ಲೋದು ಅವರಿಗೆ ಬಿಟ್ಟಿದ್ದು ಎಂದು ಹೇಳಿದ್ದರು. ಇದನ್ನೂ ಓದಿ: ರಾಜಕಾರಣಕ್ಕೆ ಗ್ರ್ಯಾಂಡ್ ಎಂಟ್ರಿ ನಿರೀಕ್ಷೆಯಲ್ಲಿದ್ದ ಸುಮಲತಾ ಒಂಟಿಯಾದ್ರಾ?

    ಹೀಗಾಗಿ ಇಂದು ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭೆಗೆ ಸೇರಿರುವ ವಿವಿಧ ಹಳ್ಳಿಗಳಲ್ಲಿ ಸುಮಲತಾ ಅವರು ಪ್ರವಾಸ ನಡೆಸಲಿದ್ದಾರೆ. ಈ ವೇಳೆ ಸ್ವತಂತ್ರವಾಗಿ ಸ್ಪರ್ಧೆ ಮಾಡೋ ಬಗೆಗೆ ಅಧಿಕೃತವಾಗಿ ಪ್ರಕಟ ಮಾಡೋ ಸಾಧ್ಯತೆಗಳಿವೆ. ಈಗಾಗಲೇ ಸಮಲತಾ ಅವರು ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ನೆಪದಲ್ಲಿ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಪಡೆದಿದ್ದರು. ಈ ನಡುವೆ ಸುಮಲತಾಗೆ ಜಿಲ್ಲಾ ಕಾಂಗ್ರೆಸ್ ಮುಖಂಡರ ಬೆಂಬಲ ಸಿಗುತ್ತಾ ಎನ್ನುವ ಚರ್ಚೆ ಕೂಡ ಎದ್ದಿದೆ.

    ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಡುವುದಕ್ಕೆ ಕೆಲವು ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಚುನಾವಣೆಯಲ್ಲಿ ಸುಮಲತಾರನ್ನ ಎಷ್ಟರ ಮಟ್ಟಿಗೆ ಬೆಂಬಲಿಸುತ್ತಾರೆ ಅನ್ನೋದು ಮಾತ್ರ ನಿಗೂಢವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv