Tag: ಸಮನ್ವಯ ಸಮಿತಿ

  • ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ: ಹೆಚ್‌ಡಿಕೆ

    ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ: ಹೆಚ್‌ಡಿಕೆ

    – ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ

    ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರ (JDS State President) ಬದಲಾವಣೆ ಚರ್ಚೆ ಸದ್ಯಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ.

    ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಪಕ್ಷದಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ಚರ್ಚೆ ಇಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆಗೆ ಬಂದಿಲ್ಲ. ಸದ್ಯ ನಾನೇ ಅಧ್ಯಕ್ಷ ಆಗಿ ಇದ್ದೇನೆ. ರಾಜ್ಯಾಧ್ಯಕ್ಷ ಬದಲಾವಣೆ ಬೇಡ ಅಂತ ಒಂದು ವಿಂಗ್ ಇದೆ. ಇನ್ನೊಂದು ಕಡೆ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಜವಾಬ್ದಾರಿ ಕೊಡಬೇಕು ಅಂತ ಇದೆ. ಆದರೆ ಇದ್ಯಾವುದರ ಬಗ್ಗೆ ಚರ್ಚೆ ಆಗಿಲ್ಲ, ಸದ್ಯಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಬದಲಾವಣೆ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಟ್ರಂಪ್‌ ಆಸೆಗೆ ತಣ್ಣೀರು – ಮಲೇಷ್ಯಾಗೆ ಬರಲ್ಲ ಎಂದ ಮೋದಿ

    ಇದೇ ವೇಳೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ಪಕ್ಷದ ಬೆಳವಣಿಗೆಗಳು ಏನಿದೆ ನಾವು ಅದರ ಬಗ್ಗೆ ಚರ್ಚೆ ಮಾಡೋ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿ ಏನೇನು ಬೇಕು ಅವರು ತೀರ್ಮಾನ ಮಾಡಿಕೊಳ್ಳಲಿ ಎಂದರು. ಇದನ್ನೂ ಓದಿ: ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ

    ಸಮನ್ವಯ ಸಮಿತಿ (Coordination Committee) ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶೀಘ್ರವೇ ಜೆಡಿಎಸ್-ಬಿಜೆಪಿ ನಡುವೆ ಸಮನ್ವಯ ಸಮಿತಿ ರಚನೆ ಆಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಬಿಜೆಪಿ ನಾಯಕರು ಬಂದು ಚರ್ಚೆ ಮಾಡಿದ್ದಾರೆ. ಬೆಂಗಳೂರಿಗೆ ಒಂದು, ರಾಜ್ಯಕ್ಕೆ ಒಂದು ಸಮನ್ವಯ ಸಮಿತಿ ರಚನೆ ಬಗ್ಗೆ ತೀರ್ಮಾನ ಆಗಿದೆ. ಒಂದು ವಾರ ಅಥವಾ 10 ದಿನಗಳಲ್ಲಿ ಅದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: 17 ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಕೆಟ್ಟ ಸಾಧನೆ ಬರೆದ ಕೊಹ್ಲಿ

    ಕೋರ್ ಕಮಿಟಿ ಪುನರ್ ರಚನೆ ವಿಚಾರ ಸಂಬಂಧ ಮಾತನಾಡಿ, ಕೋರ್ ಕಮಿಟಿ ಪುನರ್ ರಚನೆ ಬಗ್ಗೆ ನಮ್ಮ ಪಕ್ಷದಲ್ಲಿ ಒಂದು ಸಭೆ ಆಗಿದೆ. ಕೋರ್ ಕಮಿಟಿ ಮತ್ತು ಕಾರ್ಪೋರೇಷನ್ ಚುನಾವಣೆ ಸಂಬಂಧ ಪಕ್ಷ ಸಂಘಟನೆಗೆ ಸಮಿತಿ ಮಾಡುವ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

  • ಸಿದ್ದು ವಿದೇಶ ಪ್ರವಾಸ ನಂತರ ಸಂಪುಟ ವಿಸ್ತರಣೆ

    ಸಿದ್ದು ವಿದೇಶ ಪ್ರವಾಸ ನಂತರ ಸಂಪುಟ ವಿಸ್ತರಣೆ

    ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ನೂರು ದಿನ ಹಾಗೂ ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿಗೆ ಸಿಎಂ ಕುಮಾರಸ್ವಾಮಿ ದೂರು ನೀಡಿದ್ದಾರೆ ಅಂತ ಕೇಳಿ ಬಂದ ಕಾರಣ ಇವತ್ತಿನ ಸಮನ್ವಯ ಸಮಿತಿ ಸಭೆ ಭಾರೀ ಕುತೂಹಲ ಮೂಡಿಸಿತ್ತು. ಆದರೆ ಇಂದಿನ ಸಭೆಯಲ್ಲಿ ಮುಖಾಮುಖಿಯಾದ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಇಬ್ಬರೂ ಏನೂ ಆಗಿಲ್ಲ ಎನ್ನುವ ರೀತಿ ಪರಸ್ಪರ ಹಸ್ತಲಾಘವ ಮಾಡಿ ಒಗ್ಗಟ್ಟು ಪ್ರದರ್ಶಿಸಿದರು.

    ಸಿಎಂ ಕುಮಾರಸ್ವಾಮಿ ಬೆನ್ನು ತಟ್ಟಿದ ಸಿದ್ದರಾಮಯ್ಯ ಅವರು ನಗುಮೊಗದಿಂದಲೇ ಸಭೆಗೆ ಬರಮಾಡಿಕೊಂಡರು. ಸುಮಾರು ಒಂದೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚೆ ಮಾಡಿದರು. ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡದೆ ತೆರಳಿದ ಸಿಎಂ ಕುಮಾರಸ್ವಾಮಿ, ಸಭೆ ಬಗ್ಗೆ ಸಮಿತಿಯ ಅಧ್ಯಕ್ಷರು ಮಾಹಿತಿ ನೀಡುತ್ತಾರೆ ಎಂದು ತಿಳಿಸಿದರು.

    ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು, ಸೆಪ್ಟೆಂಬರ್ 3ನೇ ವಾರದಲ್ಲಿ ಸಂಪುಟ ವಿಸ್ತರಣೆ ಜೊತೆಗೆ ನಿಗಮ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೂ ನೇಮಕಾತಿ ಮಾಡಲಾಗುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ನಾವು ಜಾರಿಗೆ ತರುತ್ತೇವೆ. ಈ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದ್ದು, ಈ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಎಲ್ಲಾ ಯೋಜನೆಗಳು ಮುಂದುವರಿಯಲಿದೆ ಎಂದು ತಿಳಿಸಿದರು.

    ಇದೇ ವೇಳೆ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಚುನಾವಣೆಯಲ್ಲಿ ಕೆಲವು ಕಡೆ ಸ್ನೇಹಪೂರ್ವಕವಾಗಿ ಸ್ಪರ್ಧೆ ಮಾಡಿದ್ದೇವೆ. ಅತಂತ್ರ ಇರುವ ಸ್ಥಳಗಳಲ್ಲಿ ಎರಡು ಪಕ್ಷಗಳು ಸೇರಿ ಅಧಿಕಾರ ಹೊಂದಾಣಿಕೆ ಮಾಡಿಕೊಳ್ಳಲಿದೆ. ಅಲ್ಲದೇ ಸಭೆಯಲ್ಲಿ ವಿಧಾನಪರಿಷತ್‍ಗೆ ಮೂವರನ್ನು ಆಯ್ಕೆ ಮಾಡಲು ಚರ್ಚೆ ನಡೆಸಲಾಗಿದ್ದು, ಸ್ಥಳೀಯ ಸಂಸ್ಥೆ ಚುನಾವಣೆ ಮುಕ್ತಾಯವಾದ ಬಳಿಕ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.

    ಇಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಡಿಸಿಎಂ ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ಭಾಗವಹಿಸಿದ್ದರು. ಎರಡು ಪಕ್ಷಗಳ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸುವ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಸಿಎಂ ದೆಹಲಿ ರಾಜಕಾರಣಕ್ಕೆ ಹೋಗೋದು ಡೌಟ್!

    ಮಾಜಿ ಸಿಎಂ ದೆಹಲಿ ರಾಜಕಾರಣಕ್ಕೆ ಹೋಗೋದು ಡೌಟ್!

    ಮಂಡ್ಯ: ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಹಾಗಂದ ಮಾತ್ರಕ್ಕೆ ತಕ್ಷಣವೇ ದೆಹಲಿ ರಾಜಕಾರಣಕ್ಕೆ ಹೋಗುತ್ತಾರೆ ಎನ್ನುವ ಅರ್ಥವಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

    ನಾಗಮಂಗಲ ತಾಲೂಕಿನ ಅದಿಚುಂಚನಗಿರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಅವರನ್ನೇ ಕೇಳಬೇಕು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಗೆ ಹೈಕಮಾಂಡ್ ಒಪ್ಪಿಗೆ ಅಗತ್ಯವಿಲ್ಲ. ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಸಭೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳುತ್ತಾರೆ. ಸಮನ್ವಯ ಸಮಿತಿ ಸಭೆ ಇದೇ ತಿಂಗಳಲ್ಲಿ ನಡೆಯಬಹುದು ಎಂದರು ತಿಳಿಸಿದರು.

    ಕಾಂಗ್ರೆಸ್ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೋಟಿಸ್ ನೀಡಿದ್ದಾರೆ. ಅವರು ಕೊಡುವ ಉತ್ತರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮಂಡ್ಯ ಲಾಕಪ್ ಡೆತ್ ಪ್ರಕರಣ ತನಿಖೆ ಹಂತದಲ್ಲಿದ್ದು, ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

  • ಎಚ್‍ಡಿಕೆಯ ವಿಷಕಂಠ ಹೇಳಿಕೆಗೂ ಕಾಂಗ್ರೆಸ್‍ಗೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

    ಎಚ್‍ಡಿಕೆಯ ವಿಷಕಂಠ ಹೇಳಿಕೆಗೂ ಕಾಂಗ್ರೆಸ್‍ಗೂ ಸಂಬಂಧವಿಲ್ಲ: ದಿನೇಶ್ ಗುಂಡೂರಾವ್

    ಮಂಡ್ಯ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಜೆಡಿಎಸ್ ಅಭಿನಂದನಾ ವೇದಿಕೆಯಲ್ಲಿ ಸಿಎಂ ಕಣ್ಣೀರಿಟ್ಟು, ವಿಷಕಂಠನಾಗಿದ್ದೇನೆ ಎಂದ ಹೇಳಿಕೆ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, ಸಿಎಂ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಮುಖ್ಯಮಂತ್ರಿಗಳು ಅವರ ಪಕ್ಷದ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಏನೇ ಪಕ್ಷದ ವೇದಿಕೆಯಲ್ಲಿ ಹೇಳಿದ್ದ ಮಾತುಗಳು ಕಾಂಗ್ರೆಸ್‍ಗೆ ಅನ್ವಯಿಸಲ್ಲ. ನಾವು ಜೆಡಿಎಸ್‍ಗೆ ನಮ್ಮ ಪೂರ್ಣ ಸಹಕಾರ ನೀಡುತ್ತಿದ್ದೇವೆ. ಸಿಎಂ ಯಾವ ಕಾರಣಕ್ಕೆ ಕಣ್ಣೀರಿಟ್ಟಿದಾರೋ ಗೊತ್ತಿಲ್ಲ. ಈ ಬಗ್ಗೆ ಸಿಎಂ ಅವರನ್ನೇ ಕೇಳಬೇಕು ಅಂತ ಹೇಳಿದ್ರು.

    ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸುತ್ತಿದೆ ಎಂಬುದೆಲ್ಲಾ ಊಹಾಪೋಹ. ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸಂಪುಟದಲ್ಲಿ ಸ್ಥಾನ ನೀಡುವುದರ ಬಗ್ಗೆ ಯಾವುದೇ ರೀತಿಯ ಚರ್ಚೆಯನ್ನು ಸರ್ಕಾರ ಇದೂವರೆಗೂ ನಡೆಸಿಲ್ಲ. ಹೀಗಾಗಿ ಈ ವಿಚಾರ ನನಗೇ ಗೊತ್ತಿಲ್ಲ ಅಂದ್ರು.

    ಸಿಎಂ ಕಣ್ಣೀರು:
    ಪಕ್ಷದ ಕಾರ್ಯಕರ್ತರು ಹಾಗೂ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಇಂದು ಸಮ್ಮಿಶ್ರ ಸರ್ಕಾರದ ಜವಾಬ್ದಾರಿ ಹೊತ್ತಿದ್ದೇನೆ. ಇದರಿಂದಾಗಿ ನಿಮ್ಮೆಲ್ಲರನ್ನ ಕೂತು ಮಾತಾಡಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ. ನಾನು ಸಿಎಂ ಆಗಿರೋದಕ್ಕೆ ನೀವೆಲ್ಲಾ ಸಂಭ್ರಮಿಸುತ್ತಿದ್ದೀರಾ. ನಮ್ಮ ಅಣ್ಣನೋ, ತಮ್ಮನೋ ಸಿಎಂ ಆಗಿದ್ದಾರೆ ಎಂದು ಸಂತೋಷ ಪಟ್ಟಿದ್ದೀರಾ. ಆದರೆ ನನಗೆ ಸಂತೋಷವಿಲ್ಲ. ನಾನೇ ಎಲ್ಲಾ ನೋವನ್ನು ವಿಷಕಂಠನಾಗಿ ನುಂಗಿ ಈ ಸ್ಥಾನದಲ್ಲಿದ್ದೇನೆ ಎಂದು ಹೇಳಿ ಕುಮಾರಸ್ವಾಮಿ ಶನಿವಾರ ಕಣ್ಣಿರು ಹಾಕಿದ್ದರು.

    https://www.youtube.com/watch?v=3i0iSh9JK3g

  • ದೋಸ್ತಿಗಳ ನಡ್ವೆ ಸಮನ್ವಯ ಸುಸೂತ್ರ – ರೈತರ ಸಾಲ ಮನ್ನಾಗೆ ಒಪ್ಪಿದ ಸಿದ್ದು ಸಮಿತಿ

    ದೋಸ್ತಿಗಳ ನಡ್ವೆ ಸಮನ್ವಯ ಸುಸೂತ್ರ – ರೈತರ ಸಾಲ ಮನ್ನಾಗೆ ಒಪ್ಪಿದ ಸಿದ್ದು ಸಮಿತಿ

    ಬೆಂಗಳೂರು: ಜುಲೈ 5ರಂದು ಸಿಎಂ ಹೆಚ್‍ಡಿಕೆ ಮಂಡಿಸುವ ಬಜೆಟ್‍ಗೆ ಮುನ್ನ ಎದುರಾಗಿದ್ದ ಅಡ್ಡಿ ಆತಂಕಗಳು ಮಾಯವಾಗಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ಇಂದಿನ ಸಮನ್ವಯ ಸಮಿತಿ ಸಭೆ ಸಾಂಗವಾಗಿ ನಡೆದಿದೆ.

    ಚುನಾವಣಾ ಪ್ರಣಾಳಿಕೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನೀಡಿದ್ದ ಭರವಸೆಗಳ ಸಂಬಂಧ ಸಿಎಂಪಿಯ ಶಿಫಾರಸುಗಳಿಗೆ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ ಸಭೆ ಒಪ್ಪಿಗೆ ನೀಡಿದೆ. ಬೆಂಗಳೂರಿನ ಕುಮಾರಕೃಪಾ ಗೆಸ್ಟ್‍ಹೌಸ್‍ನಲ್ಲಿ ನಡೆದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಡ್ಯಾನಿಶ್ ಆಲಿ, ಕೆಸಿ ವೇಣುಗೋಪಾಲ್ ಪಾಲ್ಗೊಂಡು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ವಿತ್ತೀಯ ಶಿಸ್ತು ಉಲ್ಲಂಘನೆ ಆಗದ ರೀತಿಯಲ್ಲಿ ಸಾಲ ಮನ್ನಾ ಮಾಡಲು ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು.

    ಮೂಲಗಳ ಪ್ರಕಾರ ಬೆಳೆ ಸಾಲವನ್ನಷ್ಟೇ ಮನ್ನಾ ಮಾಡಲು ತೀರ್ಮಾನಿಸಲಾಗಿದೆ. ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಯೋಜನೆಗಳ ಮುಂದುವರಿಕೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇನ್ನು ತೀವ್ರ ವಿವಾದ ಹುಟ್ಟು ಹಾಕಿದ್ದ ಸಿದ್ದರಾಮಯ್ಯನವರ ಆಫ್ ದಿ ರೆಕಾರ್ಡ್ ವೀಡಿಯೋ ಬಗ್ಗೆಯೂ ಚರ್ಚೆ ನಡೆದು, ಕೊನೆಗೆ ಇದು ಕಿಡಿಗೇಡಿ ಕೃತ್ಯ ಎಂಬ ನಿರ್ಧಾರಕ್ಕೆ ಸಭೆ ಬಂತು. ಆದರೆ ಸಿಎಂ ಮಾತ್ರ ಎಲ್ಲವನ್ನು ಈಗಲೇ ಹೇಳೋಕೆ ಆಗಲ್ಲ ಎಂದು ಹೇಳಿ ಕುತೂಹಲ ಮೂಡಿಸಿದ್ದು, ಕಾಂಗ್ರೆಸ್ ರೈತರ ಸಾಲ ಮನ್ನಾದ ವಿರೋಧಿಯಲ್ಲ ಎಂದು ಕೆಸಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ.

    ಸಮನ್ವಯ ಸಮಿತಿ ಸಭೆ ನಿರ್ಧಾರಗಳು:
    ತೀರ್ಮಾನ 1 – ವಿತ್ತೀಯ ಶಿಸ್ತಿಗೆ ಧಕ್ಕೆಯಾಗದ ರೀತಿ ರೈತರ ಸಾಲ ಮನ್ನಾ
    ತೀರ್ಮಾನ 2 – ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 1.25 ಲಕ್ಷ ಕೋಟಿ ಅನುದಾನ
    ತೀರ್ಮಾನ 3 – ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಮುಂದುವರಿಕೆ
    ತೀರ್ಮಾನ 4 – ಐದು ವರ್ಷದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಟಿ
    ತೀರ್ಮಾನ 5 – 5 ವರ್ಷದಲ್ಲಿ ಆರೋಗ್ಯ ಕರ್ನಾಟಕ ಯೋಜನೆ ಜಾರಿ
    ತೀರ್ಮಾನ 6 – 5 ವರ್ಷದಲ್ಲಿ 20 ಲಕ್ಷ ವಸತಿಹೀನರಿಗೆ ಮನೆ ನಿರ್ಮಾಣ
    ತೀರ್ಮಾನ 7 – ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ
    ತೀರ್ಮಾನ 8 – ಬಜೆಟ್ ಬಳಿ ಬಳಿಕ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳಿಗೆ ನೇಮಕ, ನಾಳೆ ಸ್ಥಾನಗಳ ಹಂಚಿಕೆ

  • ಇಂದು ಸಮ್ಮಿಶ್ರ ಸರ್ಕಾರದ ಫಸ್ಟ್ ಮೀಟಿಂಗ್ – ಸಿದ್ದು ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ

    ಇಂದು ಸಮ್ಮಿಶ್ರ ಸರ್ಕಾರದ ಫಸ್ಟ್ ಮೀಟಿಂಗ್ – ಸಿದ್ದು ನೇತೃತ್ವದಲ್ಲಿ ಸಮನ್ವಯ ಸಮಿತಿ ಸಭೆ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಲು ರಚಿಸಿರೋ ಸಮನ್ವಯ ಸಮಿತಿಯ ಮೊದಲ ಸಭೆ ಇಂದು ನಡೆಯಲಿದೆ. ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಜಿ ಸಿ.ಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

    ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಡಿಸಿಎಂ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ರಚನೆಯಾದ ಬಳಿಕ ಮೊದಲ ಸಮನ್ವಯ ಸಮಿತಿ ಸಭೆ ಇದಾಗಿದ್ದು, ಮೊದಲ ಸಭೆಯಲ್ಲಿ ಯಾವೆಲ್ಲ ನಿರ್ಧಾರಗಳು ಆಗ್ತವೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.

    ಸರ್ಕಾರ ಗೊಂದಲವಿಲ್ಲದೆ ನಡೆಯಬೇಕು. ಎರಡು ಪಕ್ಷಗಳ ಕನಿಷ್ಠ ಕಾರ್ಯಕ್ರಮಗಳ ಜಾರಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಮುಂದಿನ ಲೋಕಸಭೆ ಚುನಾವಣೆ ಮೈತ್ರಿ ಸೇರಿದಂತೆ ಹಲವು ವಿಷಯಗಳು ಇಂದಿನ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದ್ದು, ಸಭೆ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

    ಚರ್ಚೆಯಾಗಲಿರುವ ಪ್ರಮುಖ ವಿಷಯಗಳು:
    ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಟ ಕಾರ್ಯಕ್ರಮಗಳ ಜಾರಿ, ಹಿಂದಿನ ಸರ್ಕಾರದ ಘೋಷಿತ ಯೋಜನೆಗಳ ಮುಂದುವರಿಕೆ ಬಗ್ಗೆ, ರೈತರ ಸಾಲಮನ್ನಾ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.

    ಎರಡು ಪಕ್ಷಗಳ ಪ್ರಣಾಳಿಕೆಯಲ್ಲಿನ ಭರವಸೆಗಳ ಜಾರಿ ಸಂಬಂಧ, ನೂತನ ಬಜೆಟ್ ಮಂಡನೆ ಸಿದ್ಧತೆ ಬಗ್ಗೆ ಹಾಗೂ ಸಂಪುಟ ವಿಸ್ತರಣೆ ಗೊಂದಲ, ಬಾಕಿ ಉಳಿದ ಸಚಿವ ಸ್ಥಾನಗಳ ಭರ್ತಿ ಸಂಬಂಧಗಳ ಕುರಿತು ಮಾತುಕತೆ ನಡೆಯಲಿದೆ.

    ಜಿಲ್ಲಾ ಉಸ್ತುವಾರಿಗಳ ನೇಮಕದ ಬಗ್ಗೆ ಮತ್ತು ನಿಗಮ -ಮಂಡಳಿಗಳ ಹಂಚಿಕೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳೀವೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

  • ಡೈರಿ ಸ್ಫೋಟ ಬಳಿಕ ಕೈ ಕಕ್ಕಾಬಿಕ್ಕಿ – 4 ವರ್ಷ ಪೂರೈಸಿದ ಸಚಿವರಿಗೆ ಗೇಟ್‍ಪಾಸ್?

    ಡೈರಿ ಸ್ಫೋಟ ಬಳಿಕ ಕೈ ಕಕ್ಕಾಬಿಕ್ಕಿ – 4 ವರ್ಷ ಪೂರೈಸಿದ ಸಚಿವರಿಗೆ ಗೇಟ್‍ಪಾಸ್?

    – ನಾಳೆಯ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ

    ಬೆಂಗಳೂರು: ಕಾಂಗ್ರೆಸ್ ಕಪ್ಪ ಕೊಟ್ಟಿರೋ ಡೈರಿ ಬೆಳಕಿಗೆ ಬಂದ ಬೆನ್ನಲ್ಲೇ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯಾಗಲಿದೆ. ನಾಲ್ಕು ವರ್ಷ ಪೂರೈಸಿದ ಸಚಿವರನ್ನ ಕೈ ಬಿಟ್ಟು ಅವರಿಗೆ ಪಕ್ಷದ ಜವಾಬ್ದಾರಿ ವಹಿಸಲು ಕಾಂಗ್ರೆಸ್ ನಲ್ಲಿ ಗಂಭೀರ ಚರ್ಚೆ ಆರಂಭವಾಗಿದ್ದು, ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರ ಹೊರಬೀಳಲಿದೆ.

    ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ಕೊಟ್ಟಿರುವ ವಿಚಾರ ಒಂದೆಡೆ ಆದ್ರೆ, ಇದೀಗ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ತರಲು ಸಮನ್ವಯ ಸಮಿತಿ ಸಜ್ಜಾಗಿದೆ. ಭಾನುವಾರದಂದು ನಡೆಯಲಿರುವ 20 ಜನ ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಹಿರಿಯ ಸಚಿವರಿಗೆ ಗೇಟ್ ಪಾಸ್ ನೀಡಲು ಮಹತ್ವದ ಚರ್ಚೆ ನಡೆಯಲಿದೆ.

    ನಾಲ್ಕು ವರ್ಷ ಪೂರೈಸಿದ ಸಚಿವರನ್ನ ಕೈಬಿಟ್ಟು ಹೊಸ ಮುಖಗಳಿಗೆ, ಆರೋಪಗಳಿಲ್ಲದವರಿಗೆ ಸಂಪುಟದಲ್ಲಿ ಅವಕಾಶ ನೀಡಲು ಚಿಂತಿಸಲಾಗುತ್ತಿದೆ. ಸಂಪುಟ ಸರ್ಜರಿಯಲ್ಲಿ ಪ್ರಾದೇಶಿಕತೆ, ಜಾತಿ ಸಮೀಕ್ಷೆ ಆಪಾದನೆ ಇಲ್ಲದವರಿಗೆ ಆದ್ಯತೆ ಹಾಗೂ ಸಂಪುಟದಿಂದ ಹೊರ ಬರುವ ಸಚಿವರಿಗೆ ಕನಿಷ್ಠ 15 ಕ್ಷೇತ್ರಗಳ ಸಂಘಟನಾ ಹೊಣೆ ನೀಡಲಾಗುತ್ತೆ ಎಂದು ಹೇಳಲಾಗಿದೆ.

    ದಿಗ್ವಿಜಯ್ ಸಿಂಗ್ ನೇತೃತ್ವದ 20 ಸದಸ್ಯರಿರುವ ಕಾಂಗ್ರೆಸ್ ಸಮನ್ವಯ ಸಮಿತಿಯಲ್ಲಿ ಇರೋರೆಲ್ಲ ಬಹುತೇಕ ಮೂಲ ಕಾಂಗ್ರೆಸಿಗರು. ಜಾಫರ್ ಶರೀಫ್ ಸೇರಿದಂತೆ ಎಸ್.ಎಮ್ ಕೃಷ್ಣ ಕೂಡ ಈ ಸಮಿತಿಯಲ್ಲಿದ್ರು. ಆದ್ರೆ ಎಸ್.ಎಮ್.ಕೆ ಈಗ ಕಾಂಗ್ರೆಸ್ ನಲ್ಲಿ ಇಲ್ಲ. ಹೀಗಾಗಿ ಸಂಪುಟ ಮೇಜರ್ ಸರ್ಜರಿಗೆ ಸಿದ್ದು ಬಣ ಒಪ್ಪಲಿದೆಯಾ? ಅನ್ನೋ ಪ್ರಶ್ನೆ ಮೂಡಿದೆ. ಮೂಲ ಕಾಂಗ್ರೆಸಿಗರು ಹಾಗೂ ಸಿದ್ದು ಬಣದ ನಡುವೆ ಫೈಟ್ ನಡೆಯಲಿದೆ ಎನ್ನಲಾಗ್ತಿದೆ.

    ನಾಲ್ಕು ವರ್ಷ ಪೂರೈಸಿದವರಲ್ಲಿ ಎಚ್.ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಕೆ.ಜೆ ಜಾರ್ಜ್, ಆರ್.ವಿ ದೇಶಪಾಂಡೆ, ಎಚ್.ಸಿ ಮಹದೇವಪ್ಪ, ಟಿ.ಬಿ ಜಯಚಂದ್ರ, ರಮಾನಾಥ ರೈ ಹೀಗೆ ಬಹುತೇಕ ಹಿರಿಯ ಸಚಿವರಿದ್ದಾರೆ. ಹಿರಿಯ ಸಚಿವರನ್ನ ಸಂಪುಟದಿಂದ ಕೈ ಬಿಟ್ರೆ, ಸಿಎಂ ಸರ್ಜರಿಗೂ ಸಿಎಂ ವಿರೋಧಿ ಹಿರಿಯ ಸಚಿವರು ಒತ್ತಾಯಿಸೋ ಸಾಧ್ಯತೆ ಇದೆ. ಸಿಎಂ ಮೇಲಿನ ಆರೋಪಗಳನ್ನೇ ಅಸ್ತ್ರವಾಗಿ ಬಳಸಬಹುದಾದ ಸಾಧ್ಯತೆಗಳಿವೆ.

    ಇದೆಲ್ಲದರ ನಡುವೆ ಕಾಂಗ್ರೆಸ್ ಪಕ್ಷದಲ್ಲೂ ಭಾರೀ ಬದಲಾವಣೆಗೆ ಸಮನ್ವಯ ಸಮಿತಿ ವೇದೆಕೆಯಾಗಲಿದೆ. ಮೂಲ ಕಾಂಗ್ರೆಸಿಗರಿಗೆ ಹೆಚ್ಚು ಸ್ಥಾನ ನೀಡಲು ಒತ್ತಾಯಿಸಲಿದೆ. 20 ಜನ ಜಿಲ್ಲಾಧ್ಯಕ್ಷರ ಬದಲಾವಣೆಗೆ ಬಗ್ಗೆ ಹಾಗೂ 25 ಮಹಿಳೆಯರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಬಗ್ಗೆ ಚರ್ಚೆ ನಡೆಯಲಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಹಾಲಿ ಶಾಸಕರಿಗೆ ಟಿಕೆಟ್ ಇಲ್ಲ ಎನ್ನಲಾಗ್ತಿದೆ. ಸೋತ 102 ಕ್ಷೇತ್ರಗಳಲ್ಲಿ ಆಂತರಿಕೆ ಸಮೀಕ್ಷೆ ಪ್ರಕಾರ ಗೆಲ್ಲೋ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಿದ್ದು, ನಂಜನಗೂಡು, ಗುಂಡ್ಲಪೇಟೆ ಉಪ ಚುನಾವಣೆ ಗೆಲ್ಲಲು ಶ್ರಮವಹಿಸಲಿದ್ದಾರೆ ಎಂದು ಹೇಳಲಾಗಿದೆ.

    ಒಟ್ಟಾರೆ ಭಾನುವಾರದ ಸಮನ್ವಯ ಸಮಿತಿ ಸಭೆ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿದೆ.