Tag: ಸಪ್ತಗಿರಿ ಆಸ್ಪತ್ರೆ

  • ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

    ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ ಇನ್ನಿಲ್ಲ

    ಬೆಂಗಳೂರು: ಸ್ಯಾಂಡಲ್‍ವುಡ್ ಹೆಸರಾಂತ ಹಾಸ್ಯ ಕಲಾವಿದ ಮೋಹನ್ ಜೂನೇಜ(54) ಇಂದು ನಿಧನರಾಗಿದ್ದಾರೆ

    ಕೆಲವು ದಿನಗಳಿಂದ ಅನಾರೋಗ್ಯದ ತೊಂದರೆಯಿಂದ ಬಳಲುತ್ತಿದ್ದ ಮೋಹನ್ ಜೂನೇಜ ಅವರು ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಸಪ್ತಗಿರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಗಂಗೂಲಿ, ಅಮಿತ್ ಶಾ ಭೇಟಿ – ಬಿಜೆಪಿ ಸೇರ್ತಾರಾ ದಾದಾ?

    ಮೋಹನ್ ಜೂನೇಜ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಕಿರುತೆರೆಯ `ವಠಾರ’ ಸೀರಿಯಲ್‍ನಿಂದ ಜನಪ್ರಿಯತೆ ಗಳಿಸಿದ್ದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ಮತ್ತು ಹಾಸ್ಯನಟನಾಗಿ ರಂಜಿಸಿದ್ದ ಮೋಹನ್ ಜೂನೇಜ ಅವರಿಗೆ `ಚೆಲ್ಲಾಟ’ ಚಿತ್ರದ ಮಧುಮಗನ ಪಾತ್ರ ತುಂಬಾ ಖ್ಯಾತಿ ತಂದುಕೊಟ್ಟಿತ್ತು. ಇತ್ತೀಚೆಗಷ್ಟೇ ಬಿಡುಗಡೆಯಾದ ಕೆಜಿಎಫ್ ಭಾಗ ಒಂದು ಮತ್ತು ಎರಡರಲ್ಲೂ ಪೋಷಕ ನಟನಾಗಿ ಮೋಹನ್ ಜೂನೇಜ ಅವರು ಅಭಿನಯಿಸಿದ್ದರು.

    ಸ್ಯಾಂಡಲ್‍ವುಡ್‍ನ ಪ್ರಮುಖ ನಾಯಕ ನಟರ ಜೊತೆ ತೆರೆ ಹಂಚಿಕೊಂಡಿರುವ ಮೋಹನ್ ಜೂನೇಜ ಅವರು ನವಗ್ರಹ, ಗಣೇಶನ ಗಲಾಟೆ, ಜೋಗಿ ಸೇರಿದಂತೆ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೀಗ ಪತ್ನಿ ಕುಸುಮಾ, ಇಬ್ಬರು ಪುತ್ರರು ಅಕ್ಷಯ್, ಅಶ್ವಿನ್‌ರನ್ನು ಅಗಲಿದ್ದಾರೆ  ಇದನ್ನೂ ಓದಿ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ – 5 ವಾರಗಳಲ್ಲಿ ಎರಡನೇ ಬಾರಿ ಹೇರಿಕೆ

    ಬೆಂಗಳೂರಿನ ಉತ್ತರ ತಾಲೂಕಿನ ತಮ್ಮೇನಹಳ್ಳಿಯಲ್ಲಿ ವಾಸಿಸುತ್ತಿದ್ದ ಮೋಹನ್ ಜುನೇಜ ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬಸ್ಥರು, ಬಂಧುಗಳು, ಕಲಾವಿದರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

  • ಮಹಿಳೆಯ ಹರಿದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ವೈದ್ಯರು

    ಮಹಿಳೆಯ ಹರಿದ ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾದ ವೈದ್ಯರು

    ಬೆಂಗಳೂರು: ಮನುಷ್ಯನ ಹೃದಯ ಹರಿದು ಹೋದ್ರೆ ಆ ಮನುಷ್ಯ ಬದುಕೋದೇ ಕಷ್ಟ. ಆದರೆ, ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಈಗ ಅತೀ ಅಪರೂಪದ ಸಾಧನೆ ಮಾಡಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅವರ ಬದುಕಿನಲ್ಲಿ ನಗು ಮೂಡಿಸಿದ್ದಾರೆ.

    ಅಂದು ರಂಜಾನ್ ಹಬ್ಬ, ಮುಸ್ಲಿಮರ ಮನೆಯಲ್ಲೆಲ್ಲಾ ಸಂಭ್ರಮದ ವಾತಾವರಣ. 55 ವರ್ಷ ವಯಸ್ಸಿನ ಸಫೀನಾ ಬಾಯಿ ಅವರ ಮನೆಯಲ್ಲೂ ಹಬ್ಬದ ರಂಗು ಮೂಡಿತ್ತು. ಆದರೆ ಅವರ ಸಂಭ್ರಮ ಹೆಚ್ಚು ಸಮಯ ಉಳಿಯಲಿಲ್ಲ. ಅವರಿಗೆ ಅಂದು ಹೃದಯಾಘಾತ ಆಯಿತು. ಮನೆಯವರು ತಕ್ಷಣವೇ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದುಕೊಂಡು ಬಂದರು.

    ಸಫೀನಾ ಅವರನ್ನು ಪರೀಕ್ಷಿಸಿ ನೋಡಿದಾಗ ಅವರ ಹೃದಯ ಹರಿದು ಹೋಗಿರುವುದು ತಿಳಿದು ಬಂದಿತ್ತು. ತಕ್ಷಣವೇ ಡಾ. ತಮೀಮ್ ಮತ್ತು ಅವರ ತಂಡ ಸಫೀನಾಗೆ ಸರ್ಜರಿ ಮಾಡುವ ವ್ಯವಸ್ಥೆ ಮಾಡಿದರು.

    ಹೃದಯ ಹರಿದು ಹೋದ ರೋಗಿಗಳನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲೇ ಸಾವನ್ನಪ್ಪುತ್ತಾರೆ ಅಥವಾ ಆಸ್ಪತ್ರೆಗೆ ಬಂದರೂ ಕೂಡ ಅಪರೇಷನ್ ಥಿಯೇಟರ್‍ಗೆ ಕರೆದೊಯ್ಯುವಷ್ಟರಲ್ಲಿ ಕೊನೆಯುಸಿರೆಳೆಯುತ್ತಾರೆ. ಆದರೆ ಅದೃಷ್ಟವೆಂಬಂತೆ ಸಫೀನಾ ಸರ್ಜರಿಯಿಂದ ಚೇತರಿಸಿಕೊಂಡು ಈಗ ಅವರು ಗುಣಮುಖರಾಗಿದ್ದಾರೆ ಅಂತಾರೆ ಇಲ್ಲಿನ ವೈದ್ಯರು.

    ಮತ್ತೊಂದು ಶಸ್ತ್ರ ಚಿಕಿತ್ಸೆ ಪಶ್ಚಿಮ ಬಂಗಾಳ ಮೂಲದ ಬರ್ಮನ್‍ಗೆ ಮಾಡಲಾಗಿದೆ. ಈಗ ಅವರಿಗೆ 21 ವರ್ಷ ವಯಸ್ಸು. ಅವರ ಹೃದಯದಲ್ಲಿನ ಒಂದು ಚೇಂಬರ್ ಹುಟ್ಟಿದಾಗಿನಿಂದಲೂ ಕೆಲಸ ಮಾಡುತ್ತಿರಲಿಲ್ಲ. ಆದರೆ ಈಗ ಬರ್ಮನ್‍ಗೆ ನಾಲ್ಕು ಚೇಂಬರ್‍ಗಳೂ ಉತ್ತಮವಾಗಿ ಕೆಲಸ ನಿರ್ವಹಿಸುವಂತೆ ಸರ್ಜರಿ ಮಾಡುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಇಂತಹ ಸಮಸ್ಯೆ ಲಕ್ಷಕ್ಕೆ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತದೆ. ಒಟ್ಟಾರೆ ಯಶಸ್ವಿ ಚಿಕಿತ್ಸೆಯಿಂದ ರೋಗಿಯ ಸಂಬಂಧಿಗಳು ವೈದ್ಯರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.