Tag: ಸನೀಲ್ ಗವಾಸ್ಕರ್

  • ಅನುಷ್ಕಾ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಗವಾಸ್ಕರ್

    ಅನುಷ್ಕಾ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಲಾಗಿದೆ: ಗವಾಸ್ಕರ್

    ಮುಂಬೈ: ಅನುಷ್ಕಾ ಶರ್ಮಾ ಬಗ್ಗೆ ನಾನು ಕೆಟ್ಟದಾಗಿ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಕ್ರಿಕೆಟಿಗ ಮತ್ತು ವಿಶ್ಲೇಷಕ ಸುನಿಲ್ ಗವಾಸ್ಕರ್ ಅವರು ಹೇಳಿದ್ದಾರೆ.

    ಗುರುವಾರ ನಡೆದ ಪಂಜಾಬ್ ಮತ್ತು ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದರು. ಜೊತೆಗೆ ಎರಡು ಸುಲಭದ ಕ್ಯಾಚನ್ನು ಕೈಚೆಲ್ಲಿದ್ದರು. ಈ ವೇಳೆ ಕಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ಅವರ ಪತ್ನಿ ಅನುಷ್ಕಾಳನ್ನು ಅಲ್ಲಿಗೆ ಎಳೆದು ತಂದಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

    ಈಗ ಇದರ ಬಗ್ಗೆ ಸ್ಪಷ್ಟೀಕರಣ ನೀಡಿರುವ ಸುನಿಲ್ ಗವಾಸ್ಕರ್, ನಾನು ಅಕಾಶ್ ಚೋಪ್ರಾ ಹಿಂದಿ ಮಾಧ್ಯಮವೊಂದಕ್ಕೆ ಕಮೆಂಟರಿ ಮಾಡುತ್ತಿದ್ದೇವು. ಆಗ ಅಕಾಶ್ ಆಟಗಾರರಿಗೆ ಅಭ್ಯಾಸ ಮಾಡಲು ಕಮ್ಮಿ ಸಮಯ ಸಿಕ್ಕಿದೆ ಎಂದರು. ಅದಕ್ಕೆ ನಾನು ಹೌದು ರೋಹಿತ್ ಶರ್ಮಾ ಕೂಡ ಮೊದಲ ಪಂದ್ಯದಲ್ಲಿ ಸರಿಯಾಗಿ ಬ್ಯಾಟ್ ಬೀಸಲಿಲ್ಲ. ಧೋನಿ ಕೂಡ ಸರಿಯಾಗಿ ಆಡಲಿಲ್ಲ. ಈಗ ಕೊಹ್ಲಿ ಕೂಡ ಬ್ಯಾಟ್ ಮಾಡಲು ಕಷ್ಟ ಪಡುತ್ತಿದ್ದಾರೆ ಎಂದಿದ್ದೆ.

    ಇದರ ಮುಂದುವರಿದ ಭಾಗವಾಗಿ ನಾನು, ಕೊರೊನಾ ಲಾಕ್‍ಡೌನ್ ಸಮಯದಲ್ಲೂ ಕೂಡ ವಿರಾಟ್ ಅಭ್ಯಾಸ ಮಾಡಿರಲಿಲ್ಲ. ಅವರು ಅವರ ಪತ್ನಿ ಅನುಷ್ಕಾ ಜೊತೆ ಟಿನ್ನಿಸ್ ಬಾಲಿನಲ್ಲಿ ಅವರ ಅಪಾರ್ಟ್‍ಮೆಂಟ್ ಒಳಗೆ ಅಭ್ಯಾಸ ಮಾಡುತ್ತಿದ್ದರು ಎಂದಿದ್ದೇನೆ. ಕೊರೊನಾ ಲಾಕ್‍ಡೌನ್ ಸಮಯದಲ್ಲಿ ವಿರಾಟ್ ಮತ್ತು ಅನುಷ್ಕಾ ಕ್ರಿಕೆಟ್ ಆಡುತ್ತಿರುವ ವಿಡಿಯೋ ವೈರಲ್ ಆಗಿತ್ತು ಇದನ್ನು ಗಮನದಲ್ಲಿಟ್ಟುಕೊಂಡು ಆ ರೀತಿ ಹೇಳಿದ್ದೇನೆ ಎಂದು ಗವಾಸ್ಕರ್ ಗಾಳಿ ಸುದ್ದಿಗೆ ತೆರೆ ಎಳಿದ್ದಾರೆ.

    ನನ್ನ ಹೇಳಿಕೆಯನ್ನು ಜನರು ತಿರುಚಿದ್ದಾರೆ. ಅನುಷ್ಕಾ ಜೊತೆ ಕೊಹ್ಲಿ ಕ್ರಿಕೆಟ್ ಆಡಿದ್ದಾರೆ. ಅನುಷ್ಕಾ ಬೌಲಿಂಗ್‍ಗೆ ಕೊಹ್ಲಿ ಬ್ಯಾಟ್ ಮಾಡಿದ್ದಾರೆ ಎಂದು ಹೇಳುವುದು ತಪ್ಪಾ? ಇದರಲ್ಲಿ ಯಾವ ಪದ ಅಸಭ್ಯವಾಗಿದೆ. ಇದರಲ್ಲಿ ನಾನು ಯಾವುದನ್ನು ಸೆಕ್ಸಿಯಾಗಿ ಹೇಳಿದ್ದೇನೆ. ಕೇವಲ ನಾನು ವೈರಲ್ ಆದ ವಿಡಿಯೋವನ್ನು ಮನದಲ್ಲಿಟ್ಟುಕೊಂಡು ಮಾತನಾಡಿದ್ದೇನೆ. ಕೊರೊನಾ ಸಮಯದಲ್ಲಿ ಅವರು ಅಭ್ಯಾಸ ಮಾಡಿಲ್ಲ ಎಂಬುದನ್ನು ನಾನು ಹೇಳಿದ್ದೇನೆ. ಇದರಲ್ಲಿ ಏನೂ ತಪ್ಪಿದೆ ಎಂದು ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.

    ನಾನು ಈ ಹಿಂದೆಯಿಂದಲೂ ಕ್ರಿಕೆಟಿಗರ ಜೊತೆ ಅವರ ಹೆಂಡತಿಯರು ವಿದೇಶಕ್ಕೆ ಪ್ರವಾಸಕ್ಕೆ ಹೋಗುವುದನ್ನು ಬೆಂಬಲಿಸಿದ್ದೇನೆ. ಯಾವ ರೀತಿ ಓರ್ವ ಆಫೀಸ್‍ಗೆ ಹೋಗಿ ಮರಳಿ ತನ್ನ ಮನೆಗೆ ಬಂದು ಹೆಂಡತಿ ಜೊತೆ ಇರುತ್ತಾನೆ ಹಾಗೇ ಕ್ರಿಕೆಟ್ ಆಟಗಾರರು ಕೂಡ ಪಂದ್ಯ ಮುಗಿದ ಬಳಿಕ ಪತ್ನಿಯರ ಜೊತೆ ಕುಟುಂಬದ ಜೊತೆ ಕಾಲಕಳೆಯಬೇಕು ಎಂದು ನಾನು ಹೇಳಿದ್ದೇನೆ. ನಾನು ಎಂದು ಅನುಷ್ಕಾಳ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಆಕೆಯ ಮೇಲೆ ನಾನು ಯಾಕೆ ಆರೋಪ ಮಾಡಬೇಕು ಎಂದು ಸನ್ನಿ ಪ್ರಶ್ನಿಸಿದ್ದಾರೆ.

    ಗುರುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಆಡುತ್ತಿರುವಾಗ ಕಮೆಂಟರಿ ಮಾಡುತ್ತಿದ್ದ ಸುನೀಲ್ ಗವಾಸ್ಕರ್, ಕೊಹ್ಲಿಯ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಹಿಂದಿಯಲ್ಲಿ ಕೊಹ್ಲಿ ಲಾಕ್‍ಡೌನ್ ಸಮಯದಲ್ಲಿ ಕೇವಲ ಅನುಷ್ಕಾ ಶರ್ಮಾ ಬೌಲಿಂಗ್‍ಗೆ ಬ್ಯಾಟ್ ಮಾಡಿದ್ದಾರೆ ಎಂದು ಹೇಳಿದ್ದರು. ಇದಾದ ಬಳಿಕ ಈ ಸುದ್ದಿ ಬಹಳ ಚರ್ಚೆಗೆ ಗ್ರಾಸವಾಗಿತ್ತು. ಈಗ ಇದಕ್ಕೆ ಸನ್ನಿ ಸ್ಪಷ್ಟೀಕರಣ ನೀಡಿದ್ದಾರೆ.